ರಾಗಂ ಅವರ ‘ಸಂತೆಯಿಂದ ಸಂತನೆಡೆಗೆ’ ಕೃತಿಯ ಓದು
ನಮ್ಮೆಲ್ಲರ ಪ್ರೀತಿಯ ಗೆಳೆಯ ವಿಜಯ್ ಹನೂರು ಇದೀಗ ಯಳಂದೂರಿನ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ನನ್ನ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಮತ್ತು ಗೌರವಾದರಗಳನ್ನು ಹೊಂದಿರುವ ಸಾಹಿತ್ಯ ಸಹೃದಯಿ; ಜೊತೆಗೆ ಗಂಭೀರ ಸಾಹಿತ್ಯ ವಿದ್ಯಾರ್ಥಿ. ಕಳೆದೊಂದು ವಾರದ ಹಿಂದೆ ಫೋನು ಮಾಡಿ, ‘ಗುರುಗಳೇ, ಸಿದ್ಧೇಶ್ವರ ಸ್ವಾಮಿಗಳನ್ನು ಕುರಿತ ಹೊಸದೊಂದು ಪುಸ್ತಕವನ್ನು ನಿಮಗೆ ಅಂಚೆಯಲ್ಲಿ ಕಳಿಸುತ್ತಿರುವೆ. ರಾಗಂ ಅವರ ‘ಯೋಗಸ್ಥಃ’ ಅಂತ ಹೆಸರು. ನೀವು ಓದಿ, ಬರೆದು ಕೊಡಬೇಕು’ ಎಂದರು. ಏನಾದರೊಂದನ್ನು ಬರೆಯಲು ನಾನು ವಿಷಯಗಳಿಗೆ ಮನಸನಿಡುವ ದಿನಮಾನವಿದು. ಹಾಗಾಗಿ ತಕ್ಷಣ ಒಪ್ಪಿಕೊಂಡೆ.
ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರನ್ನು ಕುರಿತು ಬರೆಯುವುದೆಂದರೆ ಮಹಾಸಾಗರದ ದಡದಲ್ಲಿ ನಿಂತು ನೋಡುತ್ತಾ ಬೆರಗಾಗುವುದಷ್ಟೇ. ಬಾಳಿನ ಎಷ್ಟೊಂದು ಕದಗಳನ್ನು ತೆರೆಯಲು ನೂರಾರು ಕೀಲಿಕೈಗಳನ್ನು ಕೈಗಿತ್ತು ಅಂತರ್ಧಾನರಾದ ದೇವರು ಅವರು. ಅವರೆಂದರೆ ಹರಿವ ನೀರಂತೆ ಸರಳ ಮತ್ತು ಸ್ವಚ್ಛ ಜೀವಾಮೃತ. ನಮ್ಮ ಕಾಲದ ನಿಜಶರಣರು; ಮಹಾಮಹಿಮರು. ನಿತ್ಯಸತ್ಯನಿಗರ್ವಿ ಸಂತರು. ಎಲ್ಲವೂ ಇದ್ದು ಏನೊಂದಕೂ ಆಸೆ ಪಡದ ವಿರಾಗಿ; ನುಡಿಯೊಳಗಾಗಿ ನಡೆದ ಮಹಾತ್ಯಾಗಿ. ಲೌಕಿಕದೊಳಗಿದ್ದೂ ಅಲೌಕಿಕರಾದ ಚಡಚಣದ ನಿಸ್ಸಂಗಿ. ಹಾಗಾಗಿ ಇದೊಂದು ಸುಕೃತವೆಂದೇ ನಾನು ಭಾವಿಸಿ, ಆ ಮಹಾನ್ ಆದರ್ಶನೀಯ ಚೇತನದ ಚರಣಾರವಿಂದಕ್ಕೆ ಈ ನುಡಿನಮನ ಪುಷ್ಪ ಅರ್ಪಿತ.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ನನ್ನ ಸಹಪಾಠಿ ಗೆಳೆಯ ಡಾ. ಜಿ ಪ್ರಶಾಂತ ನಾಯಕ್ ಮೂಲಕ ರಾಗಂ ಎಂದೇ ಹೆಸರಾದ ಡಾ. ರಾಜಶೇಖರ ಮಠಪತಿಯವರು ನನಗೆ ಪರಿಚಿತರು. ಮೂಲತಃ ಇಂಗ್ಲಿಷ್ ಭಾಷಾ ಸಾಹಿತ್ಯಗಳ ಅಧ್ಯಾಪಕರಾದರೂ ಕನ್ನಡದ ಬರೆಹಗಾರರು. ಸಾಹಿತ್ಯ, ಸಂಗೀತ, ಸಿನಿಮಾ ಎಂಬಿತ್ಯಾದಿ ಲಲಿತಕಲೆಗಳಲ್ಲಿ ಸದಾ ಆಸಕ್ತರು ಮಾತ್ರವಲ್ಲ, ಅಹರ್ನಿಶಿ ದುಡಿಮೆಗಾರರು! ಈಗಾಗಲೇ ನೂರಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿ, ಪಂಡಿತ ಪಾಮರರಿಬ್ಬರಿಗೂ ಚಿರಪರಿಚಿತರಾದವರು. ಅಂದಿನ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ಗಡಿನಾಡಿನ ಹೆಮ್ಮೆಯ ಪುತ್ರರು. ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸಾಹಿತ್ಯದ ಸಮರ್ಥ ಪ್ರತಿನಿಧಿಯಾಗಿ ಸಹೃದಯರಿಗೆ ಸೇತುವೆಯಾದವರು. ರಾಗಂ ಅವರ ಜಾನ್ ಕೀಟ್ಸ್: ನೀರ ಮೇಲೆ ನೆನಪ ಬರೆದವನು, ಜಗದ್ವಂದ್ಯ ಭಾರತಂ, ದಿಗಂಬರವೇ ದಿವ್ಯಾಂಬರ, ಓಶೋ ಕಿರಣ, ಗಾಂಧಿ, ದಂಡಿ, ಅನಾದ ಮುಂತಾದ ಕೃತಿಗಳನ್ನು ಕೊಂಡು ಓದಿ, ಮೆಚ್ಚಿದವನು ನಾನು. ಇದೀಗ ಮಿತ್ರ ವಿಜಯ್ ಹನೂರು ಅವರಿಂದಾಗಿ ‘ಯೋಗಸ್ಥಃ’ ಕೃತಿಯನ್ನು ಪರಾಂಬರಿಸುವಂತಾಯಿತು. ‘ರಾಗಂ’ ಎಂಬ ಲೇಖನನಾಮವನ್ನಿಟ್ಟುಕೊಂಡು ಬರೆಯುತ್ತಿರುವ ಡಾ. ರಾಜಶೇಖರಯ್ಯ ಹಿರೇಮಠ ಅವರದು ಬಹುಮುಖ ಪ್ರತಿಭೆ; ಬಹುಶ್ರುತ ವಿದ್ವತ್ತು. ಕರ್ನಾಟಕ ವಿವಿಯ ಹೆಮ್ಮೆಯ ವಿದ್ಯಾರ್ಥಿಯಾಗಿದ್ದವರು. ಇಂಗ್ಲಿಷ್ ಮೂಲಕ ಕನ್ನಡಮ್ಮನ ಸೇವೆಯಲ್ಲಿ ನಿರತರಾದ ಕಾಯಕಯೋಗಿ. ಇಂಗ್ಲಿಷ್ ಸಾಹಿತಿ, ಪತ್ರಕರ್ತ ಮತ್ತು ಸಿನಿಮಾ ನಿರ್ದೇಶಕ ಶ್ರೀ ಕೆ ಎ ಅಬ್ಬಾಸ್ ಅವರ ಸಾಧನೆ ಮತ್ತು ಕೊಡುಗೆಗಳನ್ನು ಕುರಿತಂತೆ, ಪಿಹೆಚ್‌ಡಿ ಸಂಶೋಧನೆ ನಡೆಸಿದವರು. ಇವರು ಮಾನ್ಯ ಸಿದ್ಧೇಶ್ವರರ ನೇರ ಶಿಷ್ಯ ಎಂಬುದು ಮಾತ್ರ ಗೊತ್ತಿರಲಿಲ್ಲ. ಇದೀಗ ಗೊತ್ತಾಗುವಂತಾಯಿತು. ಅಷ್ಟೇ ಅಲ್ಲ, ‘ಸಂತೆಯಿಂದ ಸಂತನೆಡೆಗೆ’ ಎಂಬ ಉಪಶೀರ್ಷಿಕೆ ಹೊಂದಿರುವ ಯೋಗಸ್ಥಃ ಕೃತಿಯು ಪ್ರಕಟವಾದ ಕೇವಲ ಆರೇ ತಿಂಗಳಿಗೆ ಯಶಸ್ವೀ ಐದನೆಯ ಮುದ್ರಣ ಕಂಡಿರುವುದು ಇವರ ಬರೆವಣಿಗೆಯ ಜನಪ್ರೀತಿಯನ್ನು ವಿಶದೀಕರಿಸಿದೆ.
ಹೂವಿನಿಂದ ನಾರು ಎಂಬಂತೆ, ರಾಗಂ ಅವರು ಪೂಜ್ಯರ ಪಾದಗಳಿಗೆ ಅರ್ಪಿಸಿದ ಧನ್ಯ ಕುಸುಮಗಂಧವೇ ಸರಿ. ಇವರ ಈ ಗದ್ಯಗಂಧದ ಪರಿಮಳವು ಸಾರ್ಥಕ ಪಯಣವಾಗಿದೆ. ತಮ್ಮ ಜೀವನದಲ್ಲಿ ಪೂಜ್ಯರ ಪ್ರಭಾವ ಮತ್ತು ಪ್ರೇರಣೆ ಎಷ್ಟಿದೆ? ಎಂಬುದನಲ್ಲದೇ ಪೂಜ್ಯರ ಬದುಕಿನ ಹಲವು ಅಂತಸ್ಥ ಎಳೆಗಳು ನಮಗೆ ವೇದ್ಯವಾಗುವಂತಾಗಿದೆ. ಇದು ಕೇವಲ ಅಂತಸ್ಥ ಮಾತ್ರವಲ್ಲ, ಪರಸ್ಥ ಕೂಡ ಎಂಬುದು ಓದಿದಾಗಲೇ ಮನವರಿತ. ಪುಸ್ತಕ ಮಾರುಕಟ್ಟೆಯ ಮಂತ್ರ ತಂತ್ರಗಳನ್ನು ಬಲ್ಲ ರಾಗಂ ಅವರು ಮಾನ್ಯ ಸಿದ್ಧೇಶ್ವರರ ಅಭಿಮಾನೀ ಓದುಗ ಪಡೆಯನ್ನು ಕಣ್ಣಂಚಿನಲ್ಲೇ ಇರಿಸಿಕೊಂಡು ಬರೆದ ಈ ಗದ್ಯಪ್ರಬಂಧವು ಏಕಕಾಲಕ್ಕೆ ರಾಗಂ ಅವರ ಆತ್ಮಮಥನವೂ ಹೌದು; ಪೂಜ್ಯರ ಜೀವನಕಥನವೂ ಹೌದು. ಪ್ರಜ್ಞಾಪ್ರವಾಹ ಶೈಲಿ ಇಲ್ಲಿಯ ಬರೆಹದ ವಿಶೇಷ. ‘ರಾಗಂ ಕಂಡಂತೆ ಪೂಜ್ಯರು’ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ: ‘ಪೂಜ್ಯರು ಕಂಡಂತೆ ರಾಜಶೇಖರರು.’ ಇಂಥ ಮಹನೀಯರೊಂದಿಗೆ ತಮ್ಮ ಜೀವನದ ಅಮೂಲ್ಯ ದಿನಗಳನ್ನು ಕಳೆದ ಮತ್ತು ಬಾಳಿನಲ್ಲಿ ಕೂಡಿದ ಅನುಭವ ಸಂಪತ್ತೇ ಬಹುಶಃ ರಾಗಂ ಅವರ ಜೀವ-ಜೀವನದ ಸಿರಿವಂತಿಕೆಗೆ ಮೂಲ. ‘ಇರುವುದೊಂದು ಜೀವನ; ಮಾಡಿಕೊಂಡು ಪಾವನ’ ಎಂಬ ಸೂಕ್ತಿಗೆ ರಾಗಂ ಲಕ್ಷ್ಯವೂ; ಲಕ್ಷಣವೂ ಹೌದು.
ಈ ಕೃತಿಯ ಇನ್ನೊಂದು ವಿಶೇಷವೆಂದರೆ ಅಧಿಕೃತತೆ; ಸತ್ಯವೂ ಸತ್ತ್ವವೂ ಆದ ಪರಿ ಪರಿ ಪ್ರಸಂಗಗಳ ನಿರೂಪಣೆ. ಶರಣರಲ್ಲೇ ಮಹಾಶರಣರಾಗಿ ಬಾಳಿ ಬದುಕಿದ ಅಪೂರ್ವ ಸಿದ್ಧಿಯೇ ಸಿದ್ಧೇಶ್ವರರ ಸಾರ್ಥಕ್ಯ; ನಮ್ಮೆಲ್ಲರ ಆದರ್ಶ. ಇವರ ಜ್ಞಾನಯೋಗಾಶ್ರಮದ ಅರ್ಥವಂತಿಕೆಗೆ ರಾಗಂ ಅವರಂಥ ಸಾಧಕರೇ ಜ್ವಲಂತ ದರ್ಶನ ಮತ್ತು ನಿದರ್ಶನ. ಪೂಜ್ಯರಿಗೇ ಗುರುಗಳಾಗಿದ್ದವರ ಪ್ರೀತಿಯನ್ನೂ ಉಂಡು, ಅವರ ಮಾರ್ಗದರ್ಶನದಲ್ಲಿ ಅರಳಿದವರು ರಾಗಂ. ಹಾಗಾಗಿ ರಾಗಂ ಅವರ ಜೀವನಸಂಗೀತದಲ್ಲಿ ಪೂಜ್ಯರೇ ಒಂದು ಅನಾಹತನಾದ; ಆಹ್ಲಾದ ಮತ್ತು ಧನ್ಯವಾದ!
**
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಸಿದ್ಧಗೊಂಡಪ್ಪನವರು ಅಂದಿನ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಮೂಲಕ ಆಧ್ಯಾತ್ಮಿಕ ಸಾಧನೆಗೈದು ಸಿದ್ಧೇಶ್ವರ ಸ್ವಾಮೀಜಿಗಳಾಗಿ ಲೋಕಪೂಜ್ಯರಾದರು. ಇವರ ನಿಜ ನಾಮಧೇಯ ಸಿದ್ಧಗೊಂಡ ಓಗಪ್ಪ ಬಿರಾದಾರ್ (05-09-1940 ರಿಂದ 01-02-2023) ಇವರ ಪ್ರವಚನಗಳು ಮತ್ತು ಕೈಗೊಂಡ ರಚನಾತ್ಮಕ ಕೆಲಸಕಾರ್ಯಗಳು ಒಂದು ಜನಾಂಗದ ಕಣ್ಣು ತೆರೆಸಿವೆ. ಸಾವಿರಾರು ಭಕ್ತರು ಮತ್ತು ಶಿಷ್ಯರು ಇವರನ್ನು ಅಪಾರವಾಗಿ ಗೌರವಿಸುತ್ತಾರೆ. ಇವರ ಮಾತು ಕೇಳಲು ಕಾತರರಾಗಿದ್ದರು. ಏಕೆಂದರೆ ಇವರದು ನಿಸ್ವಾರ್ಥ ಸೇವೆ ಮತ್ತು ನಿರಹಂಕಾರದ ಋಷಿ ಜೀವನ. ‘ಸಂನ್ಯಾಸಿಯಾದ ನನಗೆ ಯಾವ ಪ್ರಶಸ್ತಿಯೂ ಬೇಡ’ವೆಂದು ಎಲ್ಲ ಪ್ರಶಸ್ತಿ, ಪದವಿ ಮತ್ತು ಪುರಸ್ಕಾರಗಳನ್ನೂ ವಿನಯಪೂರ್ವಕ ನಿರಾಕರಿಸಿದ ಸ್ವಾಮೀಜಿಯವರು ತಮ್ಮ ಆಶ್ರಮಕ್ಕೆ ಸರಕಾರದ ಯಾವುದೇ ಅನುದಾನವನ್ನೂ ನಿರೀಕ್ಷಿಸಲಿಲ್ಲ ಮತ್ತು ಮಂಜೂರಾದರೂ ಸ್ವೀಕರಿಸಲಿಲ್ಲ. ಮಠಕ್ಕೆ ಅದರ ಅಗತ್ಯವಿಲ್ಲ ಎಂದರು. ಇಂಥ ಆತ್ಮಗೌರವವು ಈ ಕಾಲದಲ್ಲಿ ಯಾರಿಗಿದೆ? ಒಮ್ಮೆ ನಾವೆಲ್ಲರೂ ಕೇಳಿಕೊಳ್ಳಬೇಕು. ಅಷ್ಟೇ ಅಲ್ಲ, ತಮ್ಮ ಮರಣಾನಂತರ ಯಾವುದೇ ವಿಧಿ ವಿಧಾನಗಳಿಲ್ಲದೇ ದಹನ ಮಾಡಬೇಕೆಂದೂ ಸ್ಮಾರಕ ಇತ್ಯಾದಿಗಳನ್ನು ನಿರ್ಮಿಸಬಾರದೆಂದೂ ಮನವಿಸಿದ್ದರು. ಇಂಥ ಸರಳತೆ ಅಪರೂಪ; ಪೂಜ್ಯರೇ ಅದರ ನಿಜರೂಪ. ಇಂಥ ನಿಜಶರಣರು ಲಿಂಗೈಕ್ಯರಾದ ಸಮಯದಲ್ಲಿ ಏನಾಯಿತು? ಎಂಬುದನ್ನು ಈ ಕೃತಿಯ ಮುನ್ನುಡಿಕಾರರು ಬಲು ಮಾರ್ಮಿಕವಾಗಿ ತೆರೆದಿಟ್ಟಿದ್ದಾರೆ. ಇದನ್ನು ಓದಿಯೇ ಅರಿಯಬೇಕು.
ವಿಜಯಪುರದ ಜ್ಞಾನಯೋಗಾಶ್ರಮವು ಹೆಸರೇ ಹೇಳುವಂತೆ ಜ್ಞಾನಯೋಗವನ್ನು ಹಲವು ರೀತಿಯಲ್ಲಿ ಬಿತ್ತಿ ಬೆಳೆದ ಮಧುಬನದ ಬನಿ. ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ನೂರಾರು ವಿದ್ಯಾಸಂಸ್ಥೆಗಳನ್ನು ಸ್ವಾಮಿ ಸಿದ್ದೇಶ್ವರರು ಮುಂದುವರಿಸಿಕೊಂಡು ಬಂದರು. ಜೊತೆಗೆ ಹಲವು ನೂರು ಸಾವಿರ ಪ್ರವಚನ ಮತ್ತು ವಿಶೇಷೋಪನ್ಯಾಸಗಳ ಮೂಲಕ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಮಾಜವನ್ನು ನಿರ್ಮಾಣ ಮಾಡಿದರು. ಈ ಆಶ್ರಮವು ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ನಡೆದುಕೊಂಡು ಬಂತು. ಕರ್ನಾಟಕದ ಉತ್ತರ ಭಾಗದ ಜನಮಾನಸದಲ್ಲಿ ಅಚ್ಚಳಿಯದ ಪ್ರಭಾವ ಬೀರಿತು. ಗ್ರಾಮೀಣ ಭಾಗದ ಸಾವಿರಾರು ಮಕ್ಕಳಿಗೆ ಮಲ್ಲಿಕಾರ್ಜುನ ಸ್ವಾಮಿಗಳು ಶಾಲೆ ಪ್ರಾರಂಭಿಸಿ, ಊಟ ಮತ್ತು ವಸತಿಗಳ ಏರ್ಪಾಡು ಮಾಡಿದರು. ಹಾಗೆ ಕಲಿಯಲು ಬಂದವರಲ್ಲಿ ಸಿದ್ದೇಶ್ವರರೂ ಒಬ್ಬರು. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬುದೊಂದು ಬಹು ಪ್ರಾಚೀನೋಕ್ತಿ. ಇದು ಅಕ್ಷರಶಃ ಜ್ಞಾನಯೋಗಾಶ್ರಮವು ಸಹಜವಾಗಿಯೇ ಸಿದ್ಧಿಸಿಕೊಂಡಿದೆ.
ಶ್ರೀಗಳು ತತ್ತ್ವಶಾಸ್ತ್ರದಲ್ಲಿ ಎಂಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದವರು. ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲೇ ಗುರುಗಳ ಪ್ರವಚನಗಳನ್ನು ಸಂಕಲಿಸಿ, ‘ಸಿದ್ಧಾಂತ ಶಿಖಾಮಣಿʼ ಎಂಬ ಕೃತಿಯನ್ನು ಸಿದ್ಧಪಡಿಸಿ ತಮ್ಮ ಗುರುಗಳ ಹೆಸರಿನಲ್ಲೇ ಪ್ರಕಟಿಸಿದರು. ಮುಂದೆ ಸಿದ್ಧೇಶ್ವರರು ಭಗವದ್ಗೀತೆ, ಉಪನಿಷತ್ತು, ಯೋಗವಿಜ್ಞಾನ, ವಚನ ನಿರ್ವಚನ ಮತ್ತು ವೇದಾಂತ ತತ್ತ್ವಗಳನ್ನು ಕುರಿತು ಪ್ರವಚನಗಳನ್ನೂ ವ್ಯಾಖ್ಯಾನಗಳನ್ನೂ ನೀಡಿದರು. ‘ನಾವು ವಿಶ್ವದ ಒಂದಂಶ’ ಎಂಬುದನ್ನು ತಮ್ಮ ಮಾತುಗಳಲ್ಲಿ ಮನಗಾಣಿಸಿದರು. ನಿಧಾನವಾಗಿ ಪ್ರತಿಯೊಂದು ಪದವನ್ನೂ ಸ್ಪಷ್ಟವಾಗಿ ಮತ್ತು ತದೇಕ ವಿಶ್ವಾಸದಲ್ಲಿ ಉಚ್ಚರಿಸುತ್ತಾ ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತಿದ್ದರು. ಎಂಥ ಕ್ಲಿಷ್ಟಕರ ಸಂಗತಿಯನ್ನೂ ಜನಸಾಮಾನ್ಯರು ಅರಿತುಕೊಳ್ಳುವಂಥ ಉಪಮೆ ಮತ್ತು ರೂಪಕಗಳ ಮೂಲಕ ಸರಳಗೊಳಿಸಿ ತಿಳಿಸುವ ಸಾಮರ್ಥ್ಯ ಇವರದಾಗಿತ್ತು. ಅವರು ಬಳಸುವ ಉತ್ತರ ಕರ್ನಾಟಕದ ಅಪೂರ್ವ ಕ್ರಿಯಾಪದಗಳಿಂದಲೇ ಅವರ ಮಾತು ಮತ್ತು ಭಾಷಣ ಕಳೆಗಟ್ಟುತ್ತಿತ್ತು; ಕನ್ನಡದ ಅಸ್ಮಿತೆಯೊಂದನ್ನು ಛಾಪಿಸುತ್ತಿತ್ತು. ಶರಣರಾದ ವಚನಕಾರರಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಸ್ವತಃ ಶರಣರಾಗಿ, ನಮ್ಮ ಪಾಲಿನ ಅನುಭವ ಮಂಟಪವೇ ಆದರು. ಹಾಗಾಗಿ ಸಿದ್ಧೇಶ್ವರರು ನಮ್ಮ ಪಾಲಿನ ಅಲ್ಲಮರೂ ಹೌದು; ಬಸವಣ್ಣನವರೂ ಹೌದು; ಸಿದ್ಧರಾಮರೂ ಹೌದು. ಅಲ್ಲಮರ ಅಗಾಧ ಬುದ್ಧಿಮತ್ತೆ, ಬಸವರ ಅಪಾರ ಕರುಣೆ ಮತ್ತು ಸಿದ್ಧರಾಮರ ಅಪ್ರತಿಮ ಕಾಯಕನಿಷ್ಠೆ – ಈ ಮೂರರ ಮಹಾಸಂಗಮ ಪೂಜ್ಯ ಸಿದ್ಧೇಶ್ವರರು.
ಹುಡುಕಿದರೂ ಅಹಮಿನ ಒಂದಂಶವೂ ಇವರಲ್ಲಿ ಇಲ್ಲದೇ ಇರುವುದರಿಂದ ಇವರ ಮಾತು ಮಂತ್ರವಾಯಿತು; ನೇರವಾಗಿ ಹೃದಯವನ್ನು ಮುಟ್ಟಿತು. ಎಂಥವರೂ ಇವರ ಮಾತುಗಳನ್ನು ಕೇಳಿದಾಗ ಮೃದು ಹೃದಯಿಗಳಾಗಿ ಬಿಡುವ ಪವಾಡ ಸದ್ದಿಲ್ಲದ ಸುದ್ದಿ. ಮಾನವೀಯ ಮೌಲ್ಯಗಳೇ ಧಾರ್ಮಿಕ ಜೀವನ ಎಂಬುದನ್ನು ಇವರ ಎಲ್ಲ ಉಪನ್ಯಾಸಗಳು ಸ್ಥಿರೀಕರಿಸಿದವು. ‘ತಗ್ಗಿ ಬಗ್ಗಿ ಬಾಗಿ ನಡೆದರೆ ಜೀವನದ ಆನಂದ ಕ್ಷಣಕ್ಷಣಕೂ ಲಭ್ಯ’ ಎಂಬುದನ್ನು ಇವರ ಪ್ರವಚನಗಳು ಪ್ರತಿಪಾದಿಸುತ್ತವೆ. ಜನರ ತತ್ತ್ವಜ್ಞಾನಿಯಾಗುವುದು ಅಷ್ಟು ಸುಲಭದ ವಿಚಾರವಲ್ಲ. ತಿಳಿದವರು ತಿಳಿದವರೊಂದಿಗೆ ಮಾತಾಡುವುದು ಸುಲಭ; ಆದರೆ ಶ್ರೀಸಾಮಾನ್ಯರಿಗೆ ತಿಳಿ ಹೇಳುವುದು ಸವಾಲಿನ ಸಂಗತಿ. ಅದರಲ್ಲೂ ತಾತ್ತ್ವಿಕ ವಿಚಾರಗಳನ್ನು ಮನ ಮಟ್ಟುವಂತೆ ಎಲ್ಲಿಯೂ ನೀರಸವಾಗದಂತೆ ಅಭಿವ್ಯಕ್ತಿಸುವುದೊಂದು ಕಲೆ. ಇದು ಎಲ್ಲರಿಗೂ ಬರುವುದಿಲ್ಲ.
ಶ್ರೀಯವರು ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್ ಮತ್ತು ಮರಾಠಿ- ಪಂಚಭಾಷೆಗಳಲ್ಲಿ ಅತ್ಯಂತ ಸುಲಲಿತವಾಗಿಯೂ ಸುಭಗವಾಗಿಯೂ ಪ್ರವಚನ ನೀಡುವ ಶಕ್ತಿ ಹೊಂದಿದ್ದರು. ಇದು ಅವರ ವಿದ್ವತ್ತಿನ ಅಗಾಧತೆ. ಭಾರತದ ಸಂತರುಗಳು ಮತ್ತು ದಾರ್ಶನಿಕರನ್ನು ಕುರಿತು ಪುಸ್ತಕಗಳನ್ನು ರಚಿಸಿದ್ದಾರೆ. ಎಲ್ಲವೂ ಭಗವಂತನದೇ; ಎಲ್ಲ ಮನುಷ್ಯರಲ್ಲೂ ದೇವರಿದ್ದಾನೆ. ಎಲ್ಲಡೆಯಲ್ಲೂ ಒಳಿತನ್ನು ಕಾಣಬೇಕು. ಎಲ್ಲರೊಳಗಿರುವ ದೈವತ್ವವನ್ನು ಮನಗಾಣಬೇಕು ಎಂಬುದೇ ಇವರ ದರ್ಶನ. ನಮ್ಮ ಹೆಮ್ಮೆಯ ಭರತಖಂಡದ ಮೌಲಿಕ ವಿಚಾರಗಳು ಮತ್ತು ತತ್ತ್ವ ಸಿದ್ಧಾಂತಗಳು ಇವರನ್ನು ಪ್ರಭಾವಿಸಿವೆ. ಸನಾತನ ಋಷಿ ಪರಂಪರೆಯ ಪ್ರತಿನಿಧಿಯಾಗಿ ಗೌತಮ ಬುದ್ಧ, ಬಸವಣ್ಣ, ಅಲ್ಲಮ, ಸರ್ವಜ್ಞರೇ ಮೊದಲಾದವರನ್ನು ಒಟ್ಟುಗೂಡಿಸಿ ಹರಳುಗಟ್ಟಿದ ರೂಪ ಇವರೇ ಆಗಿದ್ದವರು.
ʼನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ ಕೂಡಲಸಂಗಮದೇವಾʼ ಎನ್ನುವಂತೆ ಶ್ರೀಗಳು ನುಡಿದಂತೆ ನಡೆದಿರುವವರು; ನಡೆದಂತೆ ನುಡಿದವರು. ಇವರ ಬದುಕು ತೆರೆದ ಪುಸ್ತಕ. ತೆರೆದ ಪುಸ್ತಕದಲ್ಲಾದರೋ ಒಂದೆರಡು ಹಾಳೆಗಳಷ್ಟೇ ಕಣ್ಣಿಗೆ ಬೀಳುತ್ತವೆ. ಆದರೆ ಇವರದು ಹಾಗಲ್ಲ. ಪ್ರತಿಹಾಳೆಯೂ ಸ್ವಚ್ಛ ಶುದ್ಧ ನಿರ್ಮಲ ಪ್ರಸನ್ನಚಿತ್ತಪೂರ್ಣ ಧೀಮಂತ ಯೋಗವ್ಯಕ್ತಿತ್ವದ ಪ್ರತಿಬಿಂಬ. ತಾವು ಧರಿಸುವ ಬಿಳಿಯ ಬಣ್ಣದ ಬಟ್ಟೆಗಳಂತೆಯೇ ಬಾಳುವೆ ಕೂಡ. ಭಕ್ತಿ, ಪ್ರೀತಿ ಮತ್ತು ಗೌರವಗಳು ಆಯಾಚಿತವಾಗಿ ಬರುತ್ತವೆ. ಇವರನ್ನು ನೋಡುತಿದ್ದಾಗ ಮತ್ತು ಇವರ ಮಾತುಗಳನ್ನು ಕೇಳುತಿದ್ದಾಗ ಜನುಮ ಸಾರ್ಥಕ ಎನುವ ಸುಕೃತ. ತಮ್ಮ ಬದುಕನ್ನೇ ಸೇವೆಗೆ ಮತ್ತು ಜ್ಞಾನದಿಗಂತದ ವಿಸ್ತಾರಕ್ಕೆ ಮುಡಿಪಿಟ್ಟ ಅನನ್ಯ ಬಾಳುವೆ. ಸರಳವೂ ಸಹಜವೂ ಆದುದು ಪ್ರಾಮಾಣಿಕವೂ ಆಗಿದ್ದರೆ ಅದನ್ನೇ ದೈವತ್ವ ಎನ್ನುವುದು. ಇಂಥ ಶ್ರೀಗಳು ನಡೆದಾಡುವ ದೇವರೇ ಸರಿ. ಭಗವಂತನು ಇಂಥವರ ರೂಪದಲ್ಲಿ ಬಂದು ನಮ್ಮ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುವ ಬೆಳಕಾಗುವನು. ಇಂಥವರು ನಮ್ಮವರು ಮತ್ತು ನಮ್ಮ ಕನ್ನಡ ನೆಲದವರು ಎಂಬುದೇ ಸದಭಿಮಾನದ ಸಂಗತಿ.
ತಮ್ಮ ಯಾವುದೇ ವಿದ್ಯಾಸಂಸ್ಥೆಗೆ ಆಶ್ರಮದ ಹೆಸರನ್ನಾಗಲೀ ತಮ್ಮ ಹೆಸರನ್ನಾಗಲೀ ಇಟ್ಟವರಲ್ಲ! ಅಷ್ಟೇಕೆ, ಭಾರತ ಸರಕಾರ ಕೊಡ ಮಾಡುವ ಪದ್ಮಶ್ರೀ ಪ್ರಶಸ್ತಿಯನ್ನೂ ಕರ್ನಾಟಕ ವಿಶ್ವವಿದ್ಯಾಲಯವು ನೀಡಬೇಕೆಂದಿದ್ದ ಗೌರವ ಡಾಕ್ಟರೇಟ್ ಪದವಿಯನ್ನೂ ಶ್ರೀಗಳು ಅತ್ಯಂತ ವಿನಯಪೂರ್ವಕವಾಗಿ ನಿರಾಕರಿಸಿದರು; ಸ್ವೀಕರಿಸಲಿಲ್ಲ. ‘ನಾನೊಬ್ಬ ಸರಳ ಮನುಷ್ಯ, ಸಾಮಾನ್ಯ ಜೀವನ ಸಾಗಿಸುತ್ತಾ ಆಧ್ಯಾತ್ಮಿಕ ಬೋಧನೆಗಳ ಮೂಲಕ ಜನರನ್ನು ಉದಾತ್ತಗೊಳಿಸುವುದು ನನ್ನ ಆಶಯ. ಹಾಗಾಗಿ ಪ್ರಶಸ್ತಿಗಳ ಅಗತ್ಯ ನನಗಿಲ್ಲ’ ಎಂದರು. ಇಂಥವರೂ ಈ ಲೋಕದಲ್ಲಿ ಇನ್ನೂ ಇದ್ದಾರೆಂಬುದೇ ಸಖೇದಾಶ್ಚರ್ಯ.
ಕಳೆದ ಎರಡು ವರುಷಗಳ ಹಿಂದೆ, ಅಂತಾರಾಷ್ಟ್ರೀಯ ಯೋಗ ದಿನದಂದು ಮಾನ್ಯ ಪ್ರಧಾನಿಯವರು ಮೈಸೂರಿಗೆ ಬಂದಾಗ ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ನಿರ್ಮಾಣವಾದ ಕೆಎಸ್‌ಎಸ್ (ಕ್ಯಾತನಹಳ್ಳಿ ಸಾಹುಕಾರ್ ಸಿದ್ಧಲಿಂಗಯ್ಯ) ಸಂಸ್ಕೃತ ಪಾಠಶಾಲೆ ಮತ್ತು ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಯೋಗವನ್ನು ಕುರಿತ ಮೂರು ಪುಸ್ತಕಗಳ ಬಿಡುಗಡೆ ಕರ‍್ಯಕ್ರಮದಲ್ಲಿ ಸಿದ್ಧೇಶ್ವರ ಸ್ವಾಮೀಜಿಯವರು ಭಾಗಿಯಾಗಿದ್ದರು.
*
ಮನುಷ್ಯರಂತೆ ಮಾತಾಡುವ ದೇವರನ್ನು ಹುಡುಕಿಕೊಂಡು ಅಕ್ಷರಶಃ ಅಲೆದ ರಾಗಂ ಅವರಿಗೆ ದೇವರು, ಗುರುಗಳು, ಸಂತರು, ಶರಣರು ಎಲ್ಲರೂ ಒಬ್ಬರಲ್ಲೇ ಇದ್ದ ಸಿದ್ಧೇಶ್ವರರು ದೊರಕುತ್ತಾರೆ. ನೂರು ತಪ್ಪುಗಳಾಚೆಗೆ ಪ್ರೀತಿಯ ನೆರಳಾಗುವ ದೇವರು ದೊರಕುತ್ತಾರೆ. ಇದು ರಾಗಂ ಅವರ ಪುಣ್ಯವಿಶೇಷ. ತಮ್ಮ ಬದುಕನ್ನು ದಿವ್ಯವೂ ಭವ್ಯವೂ ಆಗುವಂತೆ ಮಾಡುವಲ್ಲಿ ಪೂಜ್ಯರ ಕೃಪಾಕಟಾಕ್ಷವಿದೆ ಎಂದು ಈ ಕೃತಿಯಲ್ಲಿ ವಿನಮ್ರವಾಗಿ ವಿವರಿಸಿದ್ದಾರೆ.
ಬೆಂಗಳೂರಿನ ಪಿ ಆರ್ ಪಬ್ಲಿಕೇಷನ್ಸ್ ಪ್ರಕಟಿಸಿರುವ ಯೋಗಸ್ಥಃ ಕೃತಿಯು ಸುಂದರವಾಗಿಯೂ ಅಚ್ಚುಕಟ್ಟಾಗಿಯೂ ಮುದ್ರಣಗೊಂಡಿದೆ. ಇನ್ನೂರೈವತ್ತಕ್ಕೂ ಹೆಚ್ಚಿನ ಪುಟಗಳಿರುವ ಈ ಪುಸ್ತಕದಲ್ಲಿ ಶ್ವೇತ ಸುಂದರ ಸೆವೆಂಟಿ ಜಿಎಸ್‌ಎಂ ಮ್ಯಾಪ್ ಲಿಥೋ ಕಾಗದವನ್ನು ಬಳಸಲಾಗಿದೆ. ಮುಖಪುಟದಲ್ಲಿ ಅರ್ಥಪೂರ್ಣವಾದ ಮೂವರು ಯೋಗಿಗಳ ಚಿತ್ರಗಳಿವೆ. ಭಗವಾನ್ ಈಶ್ವರ, ಗೌತಮಬುದ್ಧರ ಚಿತ್ರಗಳು ನೇಪಥ್ಯದಲ್ಲಿದ್ದು, ಮಾನ್ಯ ಸಿದ್ಧೇಶ್ವರರ ಭಾವಚಿತ್ರವು ಪುಸ್ತಕದ ಕೆಳತುದಿಯಲ್ಲಿದೆ. ಪುಸ್ತಕದ ಹಿಂಬದಿಯಲ್ಲಿ ಸಿದ್ಧೇಶ್ವರರ ಜೊತೆಗಿರುವ ರಾಗಂ ಅವರ ಭಾವಚಿತ್ರವಿದೆ. ಕೃತಿಯ ಶೀರ್ಷಿಕೆಯನ್ನು ಸಂಸ್ಕೃತದಲ್ಲೂ ಕೊಡಲಾಗಿದೆ. ಇದರಿಂದ ಈ ಕೃತಿಯ ಗೌರವ ಹೆಚ್ಚಾಗಿದೆ. ಪುಸ್ತಕದ ಎರಡೂ ಕಡೆಯ ಕವರ್ ಪೇಜ್ ವಿಸ್ತರಿಸಿಕೊಂಡು, ಒಳಚಾಚಿದ್ದು, ಅದರಲ್ಲಿ ಪೂಜ್ಯ ಸಿದ್ಧೇಶ್ವರರ ಬೆಳಕಿನಂಥ ಮಾತುಗಳ ಟಿಪ್ಪಣಿಗಳು ಅಚ್ಚಾಗಿವೆ. ಇದು ಲೇಖಕರ ಸದಭಿರುಚಿಯನ್ನೂ ಕೃತಿಯ ಮಹೋನ್ನತತೆಯನ್ನೂ ಸಂಕೇತಿಸುತ್ತದೆ.
ಯೋಗಸ್ಥಃ ಇದು ಬರೀ ಕೃತಿಯಲ್ಲ; ಇದೊಂದು ಶ್ರುತಿ ಎಂದು ಮನಂಬುಗುವ ಮುನ್ನುಡಿಯನ್ನು ದಯಪಾಲಿಸಿದ ತುಮಕೂರಿನ ಹಿರೇಮಠದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಪ್ರತಿ ಸಾಲಿನ ಮಾತು ಏಕಕಾಲಕ್ಕೆ ಮಾನ್ಯ ಸಿದ್ಧೇಶ್ವರರ ಅನನ್ಯತೆಯನ್ನೂ ಕೃತಿಯ ವಿಭಿನ್ನತೆಯನ್ನೂ ಸಾರಿದೆ. ‘ಸಿದ್ಧೇಶ್ವರ ಶ್ರೀ: ಗಗನಂ ಗಗನಾಕಾರಂ’ ಎಂಬುದೀ ಮುನ್-ನುಡಿಯ ಶೀರ್ಷಿಕೆ. ಎಷ್ಟು ಅರ್ಥಪೂರ್ಣ ಪುಸ್ತಕಕ್ಕೆ ಎಷ್ಟೊಂದು ಅರ್ಥಗರ್ಭಿತ ಮುನ್ನುಡಿ! ಎಂದು ನಾನು ಓದಿ ಸೋಜಿಗನಾದೆ. ಬದುಕಿರುವಾಗ ಎಲ್ಲವನ್ನೂ ತ್ಯಜಿಸಿ, ನಿಜದ ಬದುಕೆಂದರೇನೆಂದು ವಿವರಿಸಿ, ಬೆಳಕನುಟ್ಟು, ಬೆಳಕಾಗಿ ಹೋದವರನ್ನು ಕುರಿತು ಬರೆದ ಹೊತ್ತಗೆಗೆ ಇದರಿಂದ ಎಷ್ಟೊಂದು ಪ್ರಸನ್ನತೆ ಮತ್ತು ಪ್ರಚ್ಛನ್ನತೆ ಲಭಿಸಿದೆಯೆಂದರೆ ಪವಿತ್ರ ಗಂಗಾಜಲದಲ್ಲಿ ಮಿಂದು ಮಡಿಯಾಗುವಷ್ಟು; ಅಹಮನ್ನು ಕಳೆದು ಹಿಡಿಯಾಗುವಷ್ಟು!!
ಯೋಗವೇ ಆಗಿ ಹೋದ ಯೋಗಿಗಳ ಅಂತಸ್ಥ ಮತ್ತು ಪರಸ್ಥ ಎರಡೂ ಈ ಕೃತಿಯಲ್ಲಿ ಧಾರಾಳವಾಗಿ ಬಂದಿವೆ. ಧಾರಾಕಾರ ಸುರಿವ ಮಳೆಯಂತೆ ಸಹೃದಯರ ತಣಿಸಿವೆ; ಬದುಕಿ ಸಾರ್ಥಕವಾದವರ ಜೀವನಗಾಥೆಯನ್ನು ಓದಿದ ಸಂತೃಪ್ತಿ ನೆಲೆಸಿದೆ. ಮೂವತ್ತು ಅಧ್ಯಾಯಗಳಲ್ಲಿ ಹರಡಿದ ಸಂತರ ಜೀವನ ಚರಿತ್ರೆಯಲ್ಲಿ ಲೇಖಕರ ಆತ್ಮ ಚರಿತ್ರೆಯೂ ಸೇರಿದೆ. ಅತ್ಯುತ್ತಮ ಸಾಹಿತ್ಯವನ್ನು ಸಂಗೀತವಾಗಿಸಿ, ಹಾಡಿಸಿದ ತೃಪ್ತಿಯ ಸಂಭ್ರಮವೊಂದು ಸಂಗೀತ ನಿರ್ದೇಶಕರಲ್ಲಿ ಇರುವ ತೆರದಿ, ಇಲ್ಲಿ, ಈ ಕೃತಿಯಲ್ಲಿ ರಾಗಂ ಅವರು ಪೂಜ್ಯರ ಮೂಲಕ ತಮ್ಮ ಬದುಕು ಬರೆಹಗಳನ್ನೂ ಇಲ್ಲಿನ ಅಧ್ಯಾಯಗಳಲ್ಲಿ ಹುದುಗಿಸಿಟ್ಟಿದ್ದಾರೆ. ‘ರಾಗಂ ಕಂಡ ಸಿದ್ಧೇಶ್ವರರು ಮತ್ತು ಸಿದ್ಧೇಶ್ವರರು ಕಂಡ ರಾಗಂ’ – ಇಬ್ಬರೂ ಇಲ್ಲಿ ಮುಖಾಮುಖಿಯಾಗದೇ ಅಭಿಮುಖಿಗಳಾಗಿದ್ದಾರೆ.
ಪ್ರಾರಂಭದಲ್ಲಿ ಸ್ವಾಮಿಗಳ ಮಾತು, ಪ್ರವಚನಗಳನ್ನು ಅವರೇ ಬೆರಗಾಗುವಂತೆ ಅನುಕರಿಸಲು ಹೋದ ರಾಜಶೇಖರರು ಕ್ರಮೇಣ ಅವರ ಗುರುಗಳಾದ ಎಂಆರ್‌ಜಿಯವರ ಮೂಲಕ ಅವರನ್ನು ಅರಿಯುತ್ತಾರೆ; ಅವರೊಂದಿಗೆ ಬೆರೆಯುತ್ತಾರೆ. ತಮ್ಮ ಜೀವನದ ಪ್ರಮುಖ ತೀರ್ಮಾನಗಳ ವಿಚಾರದಲ್ಲಿ ಅವರನ್ನು ಆಶ್ರಯಿಸುತ್ತಾರೆ. ತಮ್ಮ ತಂದೆಯವರ ಮೂಲಕ ಪೂಜ್ಯರನ್ನೇ ತಮ್ಮಲ್ಲಿ ಆವಾಹಿಸಿಕೊಳ್ಳುತ್ತಾರೆ. ಅವರ ಮಾತು ಮತ್ತು ಮಂಥನಗಳು ತಮ್ಮ ಬದುಕನ್ನು ಹೇಗೆ ಪ್ರಭಾವಿಸಿ, ಪರಿಶುದ್ಧಗೊಳಿಸಿತೆಂಬುದನ್ನು ಪರಿಪರಿಯಾಗಿ ಬಣ್ಣಿಸಿದ್ದಾರೆ. ತಾವು ಓದಿದ ಮತ್ತು ಓದುತ್ತಿದ್ದ ಇಂಗ್ಲಿಷ್ ಕವಿ ಕಾವ್ಯ ಮತ್ತದರ ತಾತ್ತ್ವಿಕತೆಯು ಪೂಜ್ಯರ ಬದುಕನ್ನು ವಿವರಿಸಲು ಸಹಾಯವಾಯಿತೆಂಬ ಅಂಶವನ್ನು ಮನಗಾಣಿಸಿದ್ದಾರೆ. ಹಲವು ಸಂದರ್ಭಗಳಲ್ಲಿ ತಮ್ಮ ಆಲೋಚನೆ, ಬರೆವಣಿಗೆ ಮತ್ತು ಪುಸ್ತಕ ಪ್ರಕಟಣೆಗಳಲ್ಲಿ ಸ್ವಾಮೀಜಿಯವರ ದಿಗ್ದರ್ಶನ ಪ್ರಾಪ್ತವಾಯಿತೆಂಬುದನ್ನು ಕಡು ಅಕ್ಕರೆಯಿಂದ ನೆನೆಯುತ್ತಾರೆ.
ಪೂಜ್ಯರೊಂದಿಗೆ ಒಡನಾಡಿದ ದಿನಗಳ, ಆ ಕ್ಷಣಗಳ ಮಾತಿನ ಪ್ರತಿ ಸಾಲು ಈ ಕೃತಿಯಲ್ಲಿ ಲೇಖಕರ ಅದ್ಭುತ ನೆನಪಿನ ಕೋಶದಿಂದ ಅಂತಸ್ಥವಾಗಿದೆ. ಹಲವು ನೂರು ಪ್ರಸಂಗಗಳು ಮತ್ತವುಗಳ ಮಾರ್ಮಿಕತೆಯು ಪ್ರತಿ ಅಧ್ಯಾಯದ ಕತೆಯಾಗಿ ಸ್ವಾರಸ್ಯವಾಗಿ ಓದಿಸಿಕೊಂಡು ಹೋಗುತ್ತದೆ. ಈ ಪುಸ್ತಕದ ಇನ್ನೊಂದು ವಿಶೇಷಾಂಶವೆಂದರೆ, ಬಹಳಷ್ಟು ಅಧ್ಯಾಯಗಳಲ್ಲಿ ಪೂಜ್ಯರ ನಡೆನುಡಿಯು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿರುವುದು. ಪೂಜ್ಯರ ಮಾತುಗಳು ಅವರ ಶೈಲಿಯಲ್ಲೇ ದಾಖಲಾಗಿರುವುದು. ಸರಳವಾದ ಪದಗಳಲ್ಲೇ ಎಲ್ಲ ಸಂಕೀರ್ಣ ಭಾವವಿಭಾವಗಳನ್ನು ವಿವರಿಸಿ, ವಿಶ್ಲೇಷಿಸಿ, ವ್ಯಾಖ್ಯಾನಿಸಿ ಕೊಡುತಿದ್ದ ಶ್ರೀಗಳು ತಮ್ಮ ಎಂದಿನ ಸರಾಗವಾದ ನಿರಾಡಂಬರ ಶೈಲಿಗೆ ಮನೆ ಮಾತಾಗಿದ್ದವರು. ತಾತ್ತ್ವಿಕವಾದವುಗಳನ್ನು ಸಾಮಾನ್ಯ ಜೀವನಕ್ಕೆ ಅನ್ವಯಿಸಿ, ವಿವರಿಸುವ ಶ್ರೀಗಳ ಮಾತಿನಾಳ ಅಗಲಗಳ ದೃಷ್ಟಿ ಜನಸಾಮಾನ್ಯರನ್ನು ಕುರಿತದ್ದಾಗಿತ್ತೇ ವಿನಾ ಪಂಡಿತರೂ ವಿವಿಧ ಕಲಾ ಮಂಡಿತರೂ ಆದ ಬುದ್ಧಿಜೀವಿಗಳನ್ನು ಮೆಚ್ಚಿಸುವುದಾಗಿರಲಿಲ್ಲ. ನಮ್ಮ ದೇಶದ ಸನಾತನ ಪರಂಪರೆಯಲ್ಲಿ ಹುದುಗಿರುವ ಎಲ್ಲ ಉತ್ತಮಾಂಶಗಳೂ ಮಹೋನ್ನತ ಜೀವನ ವಿಧಾನಗಳೂ ಹೇಗೆ ಇಂದಿಗೂ ಸಲ್ಲತಕ್ಕ ಸುಸಂಸ್ಕೃತ ಮೌಲ್ಯಗಳಾಗಿವೆ; ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಧನ್ಯರಾಗೋಣ ಎಂಬುದೇ ಅವರ ಅಭಿಮತವಾಗಿತ್ತು ಎಂಬುದನ್ನು ಕೃತಿಯು ಮನೋಹರವಾಗಿ ದಾಖಲಿಸಿದೆ. ಹಲವು ನೂರು ಸಾವಿರ ದೃಷ್ಟಾಂತಗಳ, ಕತೆಗಳ, ಪ್ರಸಂಗಗಳ ಮೂಲಕ ಅವರ ಪ್ರವಚನವು ಸಾಮಾನ್ಯ ಕೇಳುಗರ ಹೃದಯಕ್ಕೆ ನೇರ ನಾಟುತಿತ್ತು. ಅವನ್ನು ಮತ್ತೊಮ್ಮೆ ಈ ಪುಸ್ತಕದ ಮೂಲಕ ಯಾವಾಗ ಬೇಕೆಂದರೆ ಆಗ ಓದುವ ಅನುಕೂಲ! ಸಾಕ್ಷಾತ್ ಸಿದ್ಧೇಶ್ವರರೇ ಈ ಕೃತಿಯಲ್ಲಿ ಜೀವಂತವಾಗಿ, ನಮ್ಮೊಂದಿಗೆ ಸಂವಾದ ಮಾಡುವಂಥ ಪವಾಡ. ನಾನು ಓದುತ್ತಾ ಓದುತ್ತಾ ಪೂಜ್ಯರನ್ನು ಅರಿಯುತ್ತಾ ಹೋದೆ; ರಾಗಂ ಅವರನ್ನು ಮೆಚ್ಚುತ್ತಾ ಹೋದೆ. ಆ ಮೂಲಕ ನನ್ನನ್ನು ನಾನು ಬಗೆಯುತ್ತಾ ಹೋದೆ. ಹೀಗೆ ಒಂದು ಸದ್ದಿಲ್ಲದ ಆತ್ಮಾವಲೋಕನವು ಈ ಪುಸ್ತಕದಿಂದ ಸಂಭವಿಸಿದ ಮ್ಯಾಜಿಕ್ಕು. ಇದನ್ನು ಓದುವ ಎಲ್ಲರಲ್ಲೂ ಇಂತಹುದೇ ಮಂಥನ ನಡೆಯುವುದು ಖಂಡಿತ. ಆ ಮಟ್ಟಿಗೆ ಈ ಕೃತಿ ನಮ್ಮೆಲ್ಲರ ಮನೆ ಮತ್ತು ಮನ ಬೆಳಗುವ ನಂದಾದೀಪ. ಆ ಮೂಲಕ ರಾಗಂ ಅವರು ತಮ್ಮ ಗುರುಕಾಣಿಕೆಯನ್ನು ಈ ರೀತಿಯಾಗಿ ಪೂಜ್ಯರ ಪಾದಾರವಿಂದಕ್ಕೆ ಅರ್ಪಿಸಿ ಧನ್ಯರಾಗಿದ್ದಾರೆ; ನಾವೂ ಅವರೊಂದಿಗೆ ಧನ್ಯರಾಗಲು ನೆರವಾಗಿದ್ದಾರೆ. ಅಲ್ಲಲ್ಲಿ, ಈ ಪುಸ್ತಕದಲ್ಲಿ ರಾಗಂ ಅವರು ತಮ್ಮ ಸಾಹಿತ್ಯ ರಚನೆಯ ಹಲವು ಥೀಮುಗಳನ್ನೂ ತುಣುಕುಗಳನ್ನೂ ಸಾಂದರ್ಭಿಕವಾಗಿ ಸೇರಿಸಿದ್ದಾರೆ. ಹಾಗಾಗಿಯೇ ಈ ಕೃತಿಯು ರಾಗಂ ಅವರ ಸಾಹಿತ್ಯ ರಚನಾಯಾತ್ರೆಯ ಪಯಣವನ್ನೂ ದರ್ಶಿಸಿದೆ.
ಪೂಜ್ಯರ ಸಾಮೀಪ್ಯ ಮತ್ತು ಸಾನ್ನಿಧ್ಯಗಳಿಂದ ಪುನೀತರಾಗಿ ತಮ್ಮ ಬದುಕು ಮತ್ತು ಬರೆಹಗಳನ್ನು ಪ್ರಭಾವಿಸಿಕೊಂಡ ಇನ್ನೋರ್ವ ಕವಿ ಸಂತ ಕೆ ಸಿ ಶಿವಪ್ಪನವರ ಮುದ್ದುರಾಮನ ಚೌಪದಿಗಳನ್ನು ಕುರಿತು ಬರೆಯುತ್ತಿದ್ದ ನನಗೆ ಈ ಯೋಗಸ್ಥಃ ಕೃತಿಯು ಆಯಾಚಿತವಾಗಿ ಅಷ್ಟೇ ಆಕಸ್ಮಿಕವಾಗಿ ದೊರೆತದ್ದು ನನ್ನ ಈ ದಿವಸಗಳ ಅದೃಷ್ಟ. ಗೆಳೆಯರಾದ ವಿಜಯ್ ಅವರು ಕೊರಿಯರ್‌ನಲ್ಲಿ ಕಳಿಸಿಕೊಟ್ಟ ತಕ್ಷಣ ಓದಿ ಹಗುರಾದೆ; ರಾಗಂ ಕುರಿತು ಬೆರಗಾದೆ; ಹೀಗೆ ಬರೆದು ಬರಿದಾದೆ. ಇಷ್ಟೇ ಬದುಕು. ಆತ್ಮವನ್ನು ತಟ್ಟಿದ ಅಲೆಗಳಲ್ಲಿ ತೋಯುವುದು ಮತ್ತು ಅವನ್ನು ಅಭಿವ್ಯಕ್ತಿಸುತ್ತಾ ಮತ್ತೊಮ್ಮೆ ಆನಂದವಾಗುವುದು ಅಷ್ಟೇ. ರಾಗಂ ಅವರದೂ ಇದೇ ಹಾದಿ. ನಾನೂ ಇದೇ ದಾರಿಯ ಪಯಣಿಗನೇ. ಸುಡು ಲೌಕಿಕ ಉಪಾಧಿಗಳಿಂದ ದೂರವಿದ್ದು, ನನ್ನ ಪಾಡಿಗೆ ನಾನು ಬದುಕುತ್ತಾ ಹಾಯಾಗಿರುವ ನನಗೆ ಪೂಜ್ಯ ಸಿದ್ಧೇಶ್ವರರು ಈ ಕೃತಿಯ ಮೂಲಕ ಇನ್ನಷ್ಟು ಹತ್ತಿರಾದರು. ನಾನು ಆಲಿಸುವ ದಾರ್ಶನಿಕರ ಡಿಸ್‌ಕೋರ್ಸುಗಳಲ್ಲಿ ಪೂಜ್ಯರ ಪ್ರವಚನಗಳೂ ಸೇರಿರುತ್ತವೆ. ಹಾಗೆ ಕೇಳುವಾಗಲೆಲ್ಲಾ ಖಂಡಿತ ಯೋಗಸ್ಥಃ ನೆನಪಾಗಿ, ಅನಿರ್ವಚನೀಯ ಅನುಭವವವೊಂದು ಉಂಟಾಗಿ ಜನ್ಮ ಸಾರ್ಥಕ ಎನಿಸುತ್ತದೆ. ಹೀಗೆ ಮತ್ತೆ ಮತ್ತೆ ಪೂಜ್ಯರನ್ನು ಸಾದ್ಯಂತ ಪರಿಚಯಿಸಿದ್ದಕ್ಕೆ ಮತ್ತು ಅವರ ಬೆಳಕಿನ ಕಿರಣವೊಂದನ್ನು ಹಾಯಿಸಿದ್ದಕ್ಕೆ ರಾಗಂ ಮತ್ತು ವಿಜಯ್ ಇವರೀರ್ವರಿಗೂ ನನ್ನ ಪ್ರಣಾಮಗಳು. ಮಾ ವಿದ್ವಿಷಾವಹೈ; ಓಂ ಶಾಂತಿ: ಶಾಂತಿ: ಶಾಂತಿ: ಶಿವಾರ್ಪಣಮಸ್ತು. ಭಗವದ್ಗೀತೆಯ ಎರಡನೇ ಅಧ್ಯಾಯದ ನಲವತ್ತೆಂಟನೇ ಶ್ಲೋಕವಿದು: ‘ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತಾ ಧನಂಜಯ: ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ.’ ಅಂದರೆ, ಎಲೈ ಧನಂಜಯನೇ! ಯೋಗದಲ್ಲಿ ನೆಲೆಗೊಂಡು, ಕರ್ಮಗಳನ್ನು ಮಾಡು. ಫಲದ ನಂಟನ್ನು ತೊರೆದು, ಕೆಲಸ ಕೈಗೂಡಿದರೂ ಕೈಗೂಡದಿದ್ದರೂ ಸಮಭಾವದಿಂದಿರು. ಇಂತಹ ಸಮಭಾವವೇ ಯೋಗ. ಇದು ಭಗವಾನ್ ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳಿದ್ದು, ಆ ಮೂಲಕ ಮಾನ್ಯ ಸಿದ್ಧೇಶ್ವರರು ರಾಗಂ ಅವರಿಗೂ ಹೇಳಿದ್ದು ಮತ್ತು ರಾಗಂ ಅವರು ಈ ಪುಸ್ತಕದ ಮೂಲಕ ನಮಗೂ ಹೇಳಿದ್ದು. ಇದೇ ಗುರುಶಿಷ್ಯ ಪರಂಪರೆ; ಭಾರತೀಯ ಸನಾತನ ಸಂಸ್ಕೃತಿಯ ಪರಮೋಚ್ಛ ಧಾರೆ. ನೀರು ತುಂಬಿಟ್ಟ ನೂರಾರು ಬಿಂದಿಗೆಗಳಲ್ಲಿ ಭಾಸ್ಕರನ ಪ್ರತಿಬಿಂಬ ಪ್ರಜ್ವಲಿಸುತಿದೆ! ಹಾಗೆ ಬೆಳಗುವ ಮತ್ತು ಬೆಳಗಿಸುವ ನಿಜದ ನೇಸರರೇ ಇಂಥ ಪೂಜ್ಯರು; ನಾವೆಲ್ಲ ಕೇವಲ ಬಿಂದಿಗೆಗಳು. ತುಂಬಿಟ್ಟುಕೊಳ್ಳುವುದೋ, ಹಾಗೇ ಇರುವುದೋ ನಮಗೆ ಬಿಟ್ಟಿದ್ದು. ತುಂಬಿಟ್ಟುಕೊಳ್ಳುವುದಾದರೆ ಬಿಂದಿಗೆಯಲಿ ನೀರು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಇದೇ ಈ ಪುಸ್ತಕದ ಸದಾಶಯ; ಸತ್-ಚಿತ್-ಆನಂದಾಶ್ರಯ ಕೂಡ.
–ಡಾ. ಹೆಚ್ ಎನ್ ಮಂಜುರಾಜ್