( ಗೌಪ್ಯತೆಯ ಉದ್ದೇಶದಿಂದ ವ್ಯಕ್ತಿಗಳು ಮತ್ತು ಸ್ಥಳದ ಹೆಸರನ್ನು ಬದಲಿಸಲಾಗಿದೆ )
ನಾನಿರೋದು ಪುಟ್ಟ ಹಳ್ಳಿ. ಬೆಂಗಳೂರಿಗೆ ಸುಮಾರು ಮೂವತ್ತು ಕಿಲೋಮೀಟರ್ ದೊರವಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸ್ವಲ್ಪ ಹತ್ತಿರ. ವಿಮಾನ ನಿಲ್ದಾಣದ ಮುಖ್ಯರಸ್ಥೆ ಪಕ್ಕದಲ್ಲೀಯೇ ಇರುವ ಹಳ್ಳಿಯಾದ್ದರಿಂದ ಪಂಚಾಯತಿ, ಕಾರ್ಪೊರೇಷನ್ ಎರಡರಿಂದಲೂ ಅಂತಹ ಪ್ರಾಮುಖ್ಯತೆ ಪಡೆಯದ ಹಳ್ಳಿ. ಪ್ರಾಥಮಿಕ ಶಿಕ್ಷಣದ ನಂತರ ಮುಂದಿನ ಶಿಕ್ಷಣಕ್ಕಾಗಿ ನನ್ನ ಹಳ್ಳಿ ಮಕ್ಕಳು ಈಗಲೂ ಪಕ್ಕದ ಬಾಗಲೂರು, ಯಲಹಂಕ, ಬೆಂಗಳೂರನ್ನು ಅವಲಂಬಿಸ ಬೇಕು. ಪಠ್ಯದಲ್ಲಿ ಸಮಸ್ಯೆ ಬಂದರೆ, ಹೋಂ ವರ್ಕ್ ಮಾಡಲು ಸಹಾಯ ಬೇಕೆಂದರೆ ಹಳ್ಳಿಯಲ್ಲಿ ಯಾರನ್ನು ಕೇಳಬೇಕು ? ಕೆಲವು ಮಕ್ಕಳು ನನ್ನಲ್ಲಿಗೆ ಬಂದು ಸಹಾಯ ಕೇಳುತ್ತಿದ್ದರು ಸಹಾಯ ಮಾಡುತ್ತ್ತಿದ್ದೆ. ಮೊದಲು ಎರಡು ಮೂರೂ ಮಕ್ಕಳು ಬರುತ್ತಿದ್ದರು, ನಂತರದ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಯಿತು. ‘ಸಿಂಹ ಶಾಲೆ ‘ ಅಂತ ಹೆಸರಿಟ್ಟು ನಮ್ಮ ಮನೆಯ ಪುಟ್ಟ ಕೋಣೆಯಲ್ಲಿ ನನ್ನ ಹಳ್ಳಿ ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡುತ್ತಿದ್ದೆ.
ಒಂದು ದಿನ ಸಿಂಹ ಶಾಲೆಯಲ್ಲಿ ಮಕ್ಕಳಿಗೆ ಕಥೆ ಹೇಳುತಿದ್ದೆ ಆಗ ಯಾರೋ ತಾಯಿ ಮಗಳು ಪ್ರವೇಶ ಮಾಡಿದ್ರು, ನಾನು ಅವರನ್ನ ನೋಡಿರಲಿಲ್ಲ ಯಾರು ಅನ್ನುವಷ್ಟರಲ್ಲಿ ಆ ತಾಯಿಯೇ ಮಾತಾಡಿದರು..
” ನಮಸ್ಕಾರ ಮೇಷ್ಟ್ರೇ ನನ್ನ ಹೆಸರು ಕಮಲ, ಇವಳು ನನ್ನ ಮಗಳು ಹಂಸ ಆರನೇ ಕ್ಲಾಸ್ ಇವಳಿಗೂ ನೀವು ಪಾಠ ಹೇಳಿಕೊಡಿ, ನಮ್ಮ ಮನೆ ಆ ಶನಿ ದೇವರ ದೇವಸ್ಥಾನದ ಪಕ್ಕ ಇದೆ. ನಾವು ಇಲ್ಲಿಗೆ ಬಂದು ಒಂದು ವಾರ ಆಯಿತು. ನಮ್ಮ ಊರು ಬೆಳಗಾಂ ”
ಹಂಸ ಆಗಲೇ ದೊಡ್ಡ ಹುಡುಗಿಯಂತೆ ಕಾಣುತ್ತಿದ್ದಳು, ವಯಸ್ಸಿಗೆ ಮೀರಿದ ದೇಹ ಬಳವಣಿಗೆ. ಕೊಠಡಿಯ ಒಳಗೆ ಬಂದು ಮಕ್ಕಳ ಜೊತೆ ಕುಳಿತು ಕೊಳ್ಳುವಂತೆ ಸೂಚಿಸಿದೆ. ಕಮಲ ರವರು ಎಷ್ಟು ಫೀ ಕೊಡಬೇಕು, ಯಾವ ಸಮಯಕ್ಕೆ ಬರಬೇಕು,ಯಾವತ್ತು ರಜ ಎಂಬ ಮಾಹಿತಿ ಪಡೆದುಕೊಂಡು ಮನೆಗೆ ಹೊರಟರು. ಸಿಂಹ ಶಾಲೆಯ ವಿದ್ಯಾರ್ಥಿಗಳಿಗೆ ಅಕ್ಕನಂತೆ ಕಾಣುತಿದ್ದ ಹಂಸಳನ್ನು ಎಲ್ಲಾ ಮಕ್ಕಳು ಬಾ ಅಕ್ಕ ಎಂದು ಸ್ವಾಗತಿಸಿದರು. ಎಲ್ಲರೊಂದಿಗೆ ಹೊಂದಿಕೊಳ್ಳುವ ಗುಣ ಇದ್ದ ಹಂಸ ಎಲ್ಲಾ ಮಕ್ಕಳಿಗೆ ಬೇಗ ಹೊಂದಿಕೊಂಡಳು.
ಪ್ರತಿದಿನ ಸಂಜೆ ೫ ರಿಂದ ೬ ಗಂಟೆ ತರಗತಿ ಇರುತಿತ್ತು, ಹಂಸ ಅಮ್ಮ ಕಮಲ ಮಗಳನ್ನು ಕರೆದುಕೊಂಡು ಹೋಗಲು ಬರುತ್ತಿದ್ದರು, ಸುಮ್ಮನೆ ಹೋಗುತ್ತಿರಲಿಲ್ಲ ಹಂಸ ಬಗ್ಗೆ ದೂರಿನ ಸುರಿಮಳೆ ಮಾಡುತ್ತಿದ್ದರು, ಬೇಗ ಎಳೋದಿಲ್ಲ, ನೀರು ತರೋದಿಲ್ಲ, ಸಹಾಯ ಮಾಡಲ್ಲ, ಓದಲ್ಲ ಹಾಗೆ ಹೀಗೆ ಅನ್ನೋ ದೂರುಗಳು,ಅದಲ್ಲದೆ ಬುದ್ದಿ ಹೇಳಿ ಮೇಷ್ಟ್ರೇ ಅನ್ನೋ ಸಲಹೆ ಹಾಗೂ ಬೇಡಿಕೆ. ಕಮಲಾ ನಮ್ಮ ಹಳ್ಳಿಗೆ ಹತ್ತಿರದ ಯಾವುದೊ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು, ಅವರ ಪತಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಒಬ್ಬಳೇ ಮಗಳು. ದುಬೈಗೆ ಹೋಗಿ ಕೆಲಸ ಮಾಡಬೇಕು ಅನ್ನುವ ಹೆಬ್ಬಯಕೆ ಕಮಲಾ ರವರದ್ದು ಸ್ವಲ್ಪ ಹೆಚ್ಚಗಿಯೇ ಹಂಸಳನ್ನು ನಿಂದನೆ ಮಾಡೋದು, ದಡ್ಡಿ ಅಂತ ಇತರ ಮಕ್ಕಳಿಗೆ ಹೋಲಿಸೋದು ಕೂಡಾ ಮಾಡುತ್ತಿದ್ದರು, ಹಾಗೆ ಮಾಡಬೇಡಿ ಅಂತ ನಾನು ಹಲವು ಬಾರಿ ತಿಳಿಸಿದ್ದೆ. ಇದು ಸುಮಾರು ನಾಲ್ಕು ವರುಷ ನಡೆಯಿತು. ಹಂಸ ಹತ್ತನೇ ತರಗತಿಯನ್ನೂ ಪ್ರವೇಶ ಮಾಡಿದಳು.
ಒಂದು ದಿನ ಬೆಳಗ್ಗೆ ೮ ಗಂಟೆಗೆ ಕಮಲಾ ನಮ್ಮ ಮನೆಗೆ ಬಂದರು ” ನೋಡಿ ಮೇಷ್ಟ್ರೇ ಇದನ್ನ ”ಅಂತ ಒಂದು ಹಾಳೆ ಕೊಟ್ರು ಅದು ಅವರ ಮನೆ ಟೆಲಿಫೋನ್ ಬಿಲ್ ಸುಮಾರು ಮೂರೂ ಸಾವಿರ ರೂಪಾಯಿ.. !!! ”ನೋಡಿ ಮೇಷ್ಟ್ರೇ ನಾನು ಮನೆನಲ್ಲಿ ಇರೋಲ್ಲ, ಹಂಸ ಅಪ್ಪ ಫೋನ್ ಉಪಯೋಗಿಸೋದೇ ಇಲ್ಲ, ನಿಮ್ಮ ಶಿಷ್ಯೆ ಮಾಡಿರೋ ಕೆಲಸ ನೋಡಿ.. ಅವಳ ಫ್ರೆಂಡ್ಸ್ ಗೆ ಫೋನ್ ಮಾಡಿ ಮಾಡಿ ಬಿಲ್ ಮೂರೂ ಸಾವಿರ ಮಾಡಿದಳೇ.. ನಾನೆಲ್ಲಿ ಕೊಡಲಿ.. ನೀವೇ ಬುದ್ದಿ ಹೇಳಿ ಅವಳಿಗೆ.. ಯಾರತ್ರ ಇಷ್ಟೊಂದು ಮಾತಾಡ್ತಾಳೆ ಅಂತ ಕೇಳಿ ಮೇಷ್ಟ್ರೇ, ನಾನು ಕೇಳಿದರೆ ಮಾತಾಡಲ್ಲ.. ಜಗಳಕ್ಕೆ ಬರ್ತಾಳೆ ” ಇದೊಂತರ ಪಜೀತಿ ನನಗೆ. ಬೇಡಾ ಅಂದ್ರು ಕೆಲವರ ಸಂಸಾರದ ಸಮಸ್ಯೆ ನನ್ನ ಸಮಸ್ಯೆ ಆಗಿಬಿಡುತ್ತೆ.
ಹಂಸ ಸಹ ತನ್ನ ಪೋಷಕರ ಬಗ್ಗೆ ಹಲವಾರು ವಿಚಾರಗಳನ್ನ ಹೇಳಿದ್ದಳು. ತಂದೆ ತಾಯಿಯಲ್ಲಿ ಹೊಂದಾಣಿಕೆ ಇಲ್ಲ, ಯಾವಾಗಲು ಜಗಳ, ಅಪ್ಪ ಸರಿಯಾಗಿ ಮನೆಗೆ ಬರೋದಿಲ್ಲ, ಅಮ್ಮನಿಗೆ ಯಾವಾಗಲು ದುಬೈ ಕನಸು, ಅಪ್ಪ ಅಮ್ಮ ಇಬ್ಬರೂ ಹೊರಗೆ ಹೋಗಿ ಕೆಲಸ ಮಾಡೋದರಿಂದ ಮನೆ ಕೆಲಸ ಎಲ್ಲಾ ಹಂಸ ಮಾಡಬೇಕು, ಮಾಡದೇ ಇದ್ದರೆ ಕುಹಕ, ಬೈಗುಳ. ಹಂಸಗೆ ಮನೆ ಎಂದರೆ ಬೇಸರ.
ಅಂದು ಸಂಜೆ ಪಾಠಕ್ಕೆ ಬಂದ ಹಂಸಳನ್ನು ನಿನಗೆ ಯಾರಾದರೂ ಹೊಸದಾಗಿ ಫ್ರೆಂಡ್ ಆಗಿದಾರ ? ಅವರ ಜೊತೆ ತುಂಬಾ ಮಾತಾಡ್ತೀಯಾ ? ಅಂತ ಪ್ರಶ್ನೆ ಕೇಳಿದೆ.ನನ್ನ ನೇರ ಪ್ರಶ್ನೆಗೆ ಅವಳು ಉತ್ತರ ಕೊಡೋದಿಲ್ಲ ಅಂದುಕೊಂಡಿದ್ದೆ ಆದರೆ ಹಂಸ ನನ್ನ ಅನಿಸಿಕೆಯನ್ನು ಸುಳ್ಳು ಮಾಡಿದಳು.
”ನನಗೆ ಸಮೀರ್ ಅನ್ನೋ ಫ್ರೆಂಡ್ ಇದಾನೆ, ಸುಮಾರು ಆರು ತಿಂಗಳ ಹಿಂದೆ ಬಸ್ ನಲ್ಲಿ ಪರಿಚಯ ಆಗಿದ್ದು, ಫೋನ್ ನಂಬರ್ ಕೊಟ್ಟ, ಅವನ ಜೊತೆ ದಿನಾ ಮಾತಾಡ್ತೀನಿ. ನನ್ನ ಕಷ್ಟ ಕೇಳಿ ಸಮಾಧಾನ ಹೇಳ್ತಾನೆ. ಅದಕ್ಕೆ ದಿನ ಫೋನ್ ಮಾಡ್ತೀನಿ. ಆದ್ರೆ ಮತ್ತೆ ಮೀಟ್ ಮಾಡೋಕೆ ಆಗಿಲ್ಲ ಒಂದೇ ಸಾರಿ ಬಸ್ ನಲ್ಲಿ ಮೀಟ್ ಮಾಡಿದ್ದು. ಅವನು ಯಾವುದೊ ಕಂಪನಿನಲ್ಲಿ ಕೆಲಸ ಮಾಡ್ತಾನೆ. ನಮ್ಮ ಅಮ್ಮನಿಗೆ ಹೇಳಬೇಡಿ ”
ಹದಿಹರೆಯದ ಗೆಳೆತನ, ಯಾರೋ ಅಪರಿಚಿತ ಬಸ್ ನಲ್ಲಿ ಸಿಕ್ಕಿದವನೊಂದಿಗೆ ಪ್ರತಿದಿನ ದೀರ್ಘ ಮಾತುಕತೆ. ಮಾತಾಡಬೇಡ ಅಂದರೆ ಅದನ್ನು ಕೇಳುವ ಸ್ಥಿತಿಯಲ್ಲಿ ಹಂಸ ಇರಲಿಲ್ಲ. ಜೋಪಾನ, ಜಾಸ್ತಿ ಹಚ್ಚಿಕೋ ಬೇಡ ಅಂತ ಬುದ್ದಿ ಹೇಳಿದೆ. ಅವರಮ್ಮನಿಗೆ ನಿಮ್ಮ ಮಗಳು ಯಾರೋ ಅಪರಿಚಿತನೊಂದಿಗೆ ಪ್ರತಿದಿನ ಮಾತಾಡುತ್ತಿದ್ದಾಳೆ ಅಂತ ಹೇಳಿದರೆ ಅವರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇದ್ದಾರೆಯೇ ? ಕೋಪದಲ್ಲಿ ಹಂಸಗೆ ಹೊಡೆದು ಬಡೆದು ಮಾಡಿದರೆ ಏನು ಮಾಡುದು ಅಂತೆಲ್ಲಾ ಯೋಚಿಸಿದೆ. ನಂತರದ ಎರಡು ದಿನಗಳಲ್ಲಿ ನಂಗೊಂದು ವಿಚಾರ ತಿಳಿಯಿತು. ಹಂಸಗೆ ಬಾಯ್ ಫ್ರೆಂಡ್ ಇರೋದು ಎಲ್ಲಾ ಮಕ್ಕಳಿಗೆಗೂ ತಿಳಿದಿತ್ತು. ಅವಳು ಅದನ್ನು ತಾನೇ ಎಲ್ಲರಿಗೂ ಹೆಮ್ಮೆಯಿಂದ ಹೇಳಿಕೊಂಡಿದ್ದಳು ಹದಿ ಹರೆಯದ ಮನಶಾಸ್ತ್ರ ನಿಮಗಿಲ್ಲ ನನಗಿದೆ ಎಂದು ಹೇಳಿಕೊಳ್ಳುವ ಹೆಮ್ಮೆ. ಪರಿಸ್ಥಿತಿ ಸೂಕ್ಷ್ಮವಾಗಿತ್ತು..
ಮುಂದಿನ ದಿನಗಳಲ್ಲಿ ಸಮಯ ಸಿಕ್ಕಿದಾಗಲೆಲ್ಲಾ ಹಂಸಗೆ ಜೋಪಾನವಾಗಿರು, ನಿನಗೆ ಶಿಕ್ಷಣ ಈಗ ಮುಖ್ಯ ಅದರ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸು ಅನ್ನುವ ಬುದ್ಧಿವಾದದ ಮಾತುಗಳನ್ನು ಆಡುತ್ತಿದ್ದೆ. ಅವಳೂ ಸಹ ಎದುರಾಡದೆ ಆಯಿತು ಅನ್ನುತ್ತಿದ್ದಳು. ಇದೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇದ್ದ ನನ್ನ ಗೆಳಯ ”ಮಕ್ಕಳ ಸ್ನೇಹಿ ಶಾಲೆಗಳು ” ಅನ್ನುವ ಒಂದು ಉಪಯುಕ್ತ ಪುಸ್ತಕವನ್ನು ತುರ್ತಾಗಿ ಅನುವಾದ ಮಾಡಬೇಕು, ಮೂರೂ ದಿನ ನಮ್ಮ ಮನೆಯಲ್ಲೇ ನೀನು ಇರಬೇಕು ಕೆಲಸ ಮುಗಿದ ನಂತರ ನೀನು ಊರಿಗೆ ಹೋಗು ಎಂದು ಅಹ್ವಾನ ಕೊಟ್ಟ. ಮಕ್ಕಳ ಸ್ನೇಹಿ ಶಾಲೆ ತರಗತಿ ನಾನೂ ಮಾಡಬೇಕು ಎಂಬ ಹಂಬಲ ನನ್ನಲ್ಲಿ ಇದ್ದರಿಂದ ಆಹ್ವಾನಕ್ಕೆ ಇಲ್ಲಾ ಎನ್ನದೆ. ಬೆಂಗಳೂರಿಗೆ ಹೊರಟೆ.
ಮೂರೂ ದಿನಗಳ ಕಾಲ ಮಕ್ಕಳ ಹಕ್ಕುಗಳು, ಶಾಲೆ,ಶಿಕ್ಷಣ, ಮಕ್ಕಳ ರಕ್ಷಣಾ ನೀತಿ, ಅಂಗವಿಕಲ ಮಕ್ಕಳ ಹಕ್ಕುಗಳು ಇನ್ನು ಮುಂತಾದ ವಿಚಾರಗಳ ಬಗ್ಗೆ ಚರ್ಚೆ ಬರವಣಿಕೆ, ಓದುವಿಕೆಯಲ್ಲಿ ಮುಳುಗಿ ಹೋಗಿದ್ದೆ. ಹಳ್ಳಿ,ಸಿಂಹ ಶಾಲೆ ನೆನಪಿಗೇ ಬರಲಿಲ್ಲ. ಮೂರುದಿನಗಳ ನಂತರ ನಾಲ್ಕನೇ ದಿನ ಬೆಳಗ್ಗೆ ಸುಮಾರು ಹತ್ತು ಗಂಟೆಗೆ ಬೆಂಗಳೂರು ಬಿಟ್ಟು ಹನ್ನೆರಡರ ವೇಳೆಗೆ ಊರು ತಲುಪಿದೆ. ಬಸ್ ಇಳಿದು ಮನೆಕಡೆ ಹೋಗುತ್ತಿದ್ದ ನನಗೆ ಮಾರ್ಗದಲ್ಲೀಯೇ ಹಂಸ ಸಿಕ್ಕಳು, ಹಾಯ್ ಹಂಸ ಅಂದೇ,, ಅವಳಿಂದ ಉತ್ತರ ಬರಲಿಲ್ಲ, ಮುಖ ನೋಡಿದೆ ಅವಳ ಕಣ್ಣಲ್ಲಿ ನೀರಿತ್ತು,
ಯಾಕೆ ? ಯಾಕೆ ಅಳುತಿದ್ದೀಯಾ ಏನಾಯಿತು ? ಎಂದು ಮತ್ತೆ ಕೇಳಿದೆ.
ಬಿಕ್ಕುತ್ತಾ ಹಂಸ ಮಾತಾಡಿದಳು ”ಈಗ ಸಮೀರನ ಜೊತೆ ಮಾತಾಡ್ತಿದ್ದೆ, ಇನ್ನು ಮೇಲೆ ಫೋನ್ ಮಾಡಬೇಡ ಅಂತ ಬೈದು ಫೋನ್ ಕಟ್ ಮಾಡಿದ. ಮತ್ತೆ ಫೋನ್ ಮಾಡಿದರೆ ತೆಗಿಲಿಲ್ಲ.. ಫಿಲಂ ಗೆ ಹೋಗೋಣ ಅಂತ ಬಲವಂತ ಮಾಡಿದ್ದ, ಇಲ್ಲ ಅಂದದಕ್ಕೆ ಕೋಪ ಮಾಡಿಕೊಂಡ ”
”ಅಯ್ಯೋ ಹೋಗಲಿ ಬಿಡು ಹಂಸ, ಇಷ್ಟಕೆಲ್ಲಾ ಕೋಪ ಮಾಡಿಕೊಳ್ಳೋರು ನಿಜವಾದ ಗೆಳೆಯರೇ ಅಲ್ಲ.. ಅವರ ಸ್ನೇಹ ಬೇಡವೇ ಬೇಡ.. ನೀನು ಅಳಬೇಡ ” ಅಂದೆ.
”ಅವನು ಬೈದಿದ್ದಕ್ಕೆ ತುಂಬಾ ಬೇಜಾರಾಯಿತು.. ಫೋನ್ ತೆಗಿಲಿಲ್ಲ.. ದುಃಖ ಆಯಿತು. ಅದಕ್ಕೆ.. ”
‘ಏನು ಅದಕ್ಕೆ.. ? ” ನನಗೆ ಆತಂಕವಾಯ್ತು..
”ಅದಕ್ಕೆ ಅಲ್ಲೇ ಇದ್ದ ಪೇಸ್ಟಿಸೈಡ್ ಕುಡಿದು ಬಿಟ್ಟೆ ”
ನನ್ನ ಜಂಘಾಬಲವೇ ಉಡುಗಿ ಹೊಯ್ತು.. ಅಯ್ಯೋ ದೇವರೇ ಈ ಹುಚ್ಚುಹುಡುಗಿ ಯಾರೋ ಕಾಣದವನು ಮಾತಾಡ ಬೇಡಾ ಅಂದ್ರೆ ಕೋಪದಲ್ಲಿ ಕ್ರಿಮಿ ನಾಶಕ ಕುಡಿದೆ ಅಂತಾಳಲ್ಲ.. ತಕ್ಶಣ ಅವಳನ್ನ ನಮ್ಮ ಮನೆಗೆ ಕರೆದುಕೊಂಡು ಬಂದೆ. ಕೆಲವು ವಿದ್ಯಾರ್ಥಿಗಳು ಹಾಗೂ ನನ್ನ ತಮ್ಮ ಅಲ್ಲೇ ಇದ್ದರು. ಹಂಸ ವಾಂತಿ ಮಾಡಿಕೊಳ್ಳಲು ಪ್ರಾರಂಭ ಮಾಡಿದಳು. ಅವಳು ಕ್ರಿಮಿನಾಶಕ ಕುಡಿದಿರುವ ವಿಚಾರ ತಿಳಿದ ನನ್ನ ತಮ್ಮ ಇನ್ನು ಕಾಯುವುದು ಸರಿ ಇಲ್ಲ ಎಂದು ಆಕೆಯನ್ನು ಇತರ ಹೆಣ್ಣು ಮಕ್ಕಳ ಸಹಾಯದಿಂದ ಹಂಸ ಮನೆಗೇ ಕರೆದುಕೊಂಡು ಹೋದ. ತಮ್ಮ ಮಗಳು ಹಾಗೆಲ್ಲ ಮಾಡೋಳು ಅಲ್ಲ, ಅವಳಿಗೆ ರಾಹು ಹಿಡಿದಿದೆ ಎಂದು ಕಮಲಾ ದೇವರಿಗೆ ದೀಪ ಹಚ್ಚಿದರಂತೆ. ಆದರೆ ಅವಳು ವಾಂತಿ ಮಾಡಿಕೊಳ್ಳುವುದು ಜಾಸ್ತಿಯಾಗಿ ವಿಧಿಯಿಲ್ಲದೆ ಪಕ್ಕದೂರಿನ ಆಸ್ಪತ್ರೆ ಕರೆದು ಕೊಂಡು ಹೋದರು. ಅಷ್ಟರಲ್ಲಿ ಹಂಸ ತಂದೆ ಸಹ ಬಂದಿದ್ದರು ನನ್ನ ತಮ್ಮ ಸಹ ಅವರೊಂದಿಗೆ ಹೋದ. ಪಕ್ಕದೂರಿನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕದೆ ಬೆಂಗಳೂರಿನ ಆಸ್ಪತೆಗೆ ಕರೆದು ಕೊಂಡು ಹೋದರು. ಅಲ್ಲಿ ಚಿಕಿತ್ಸೆ ಫಲಿಸದೆ ರಾತ್ರಿ ಸುಮಾರು ಒಂದು ಗಂಟೆವೇಳೆಗೆ ಹಂಸಳ ಪ್ರಾಣಪಕ್ಷಿ ಹಾರಿ ಹೋಯಿತು.
ಪುಟ್ಟ ಹುಡುಗಿ ಹಂಸ ಆತ್ಮಹತ್ಯೆ ನನ್ನ ಹಳ್ಳಿಯಲ್ಲಿ ಎಲ್ಲರಿಗೂ ಆಘಾತವನ್ನು ಉಂಟುಮಾಡಿತ್ತು. ಸಿಂಹ ಶಾಲೆಗೆ ರಜ ನೀಡಿದ್ದೆ. ಮಕ್ಕಳು ನೋವಲ್ಲಿ ಇದ್ದರು. ಹಂಸ ಶವ ಸಂಸ್ಕಾರವನ್ನು ತಮ್ಮ ಊರಿನಲ್ಲೀಯೇ ಮಾಡುವುದಾಗಿ ಹೇಳಿದ ಪೋಷಕರು ಆಕೆಯ ಶವದೊಂದಿಗೆ ಬೆಳಗಾಂಗೆ ಹೊರಟು ಹೋಗಿದ್ದರು. ಒಂದು ರೀತಿಯ ಶೋಕ ಮೌನ ನನ್ನ ಹಳ್ಳಿಯನ್ನು ಆವರಿಸಿತ್ತು. ವಾರದ ನಂತರ ಪಾಠಕ್ಕೆಂದು ಬಂದ ಮಕ್ಕಳಲ್ಲಿ ಲವಲವಿಕೆ ಇರಲಿಲ್ಲ. ಹಂಸ ಬಗ್ಗೆ ಮಾತು ಮುಂದುವರೆದಿತ್ತು. ಸುಮಾರು ಎರಡು ವಾರದ ನಂತರ ಅಕಯ ಪೋಷಕರು ಹಿಂದಿರುಗಿ ಬಂದರು ಎಂದು ಮಾಹಿತಿ ತಿಳಿಯಿತು ಆದರೆ ಕಮಲಾ ಆಗಲಿ ಅವರ ಪತಿಯಾಗಲಿ ನನ್ನನ್ನು ಮಾತಾಡಿಸಲು ಬರಲೇ ಇಲ್ಲ. ಅವರ ಮನೆಗೆ ಸಮಾಧಾನ ಮಾಡಲು ಹೋದ ಮಹಿಳೆಯರಿಗೆ ”ನನ್ನ ಮಗಳು ಚನ್ನಾಗಿ ನಮ್ಮ ಮಾತುಕೇಳಿಕೊಂಡು ಇದ್ದಳು, ಮೇಸ್ಟ್ರ ಹತ್ತರ ಪಾಠ ಕಲಿಯೋಕೆ ಹೋದಮೇಲೆ ಬದಲಾಗಿ ಬಿಟ್ಟಳು. ಅವರು ಏನೇನೋ ವಿಚಾರಗಳನ್ನ ಅವಳ ತಲೆಗೆ ತುಂಬಿ ಅವಳು ಸಾಯೋ ಹಾಗೆ ಮಾಡಿಬಿಟ್ರು, ನನ್ನ ಮಗಳನ್ನ ಸಾಯಿಸಿ ಬಿಟ್ರು ” ಅಂದರಂತೆ. ಹಳ್ಳಿಯ ಪ್ರತಿಯೊಬ್ಬರಿಗೂ ಹಂಸ ವಿಚಾರ ತಿಳಿದಿತ್ತು ಹಾಗೂ ನಾನು ಆಕೆಗೆ ಬುದ್ದಿ ಹೇಳುತಿದ್ದ ವಿಚಾರವೂ ತಿಳಿದಿತ್ತು,ಅದನ್ನು ಕಮಲಾಗೆ ಹೇಳಿದರಂತೆ. ಕಮಲಾ ಮತ್ತೆಂದಿಗೂ ನನ್ನನ್ನು ಮಾತಾಡಿಸಲಿಲ್ಲ. ಎದುರಿಗೆ ಸಿಕ್ಕರೂ ನೋಡದಂತೆ ಹೊರಟು ಹೋಗುತ್ತಿದ್ದರು.
ಈ ಘಟನೆ ನೆನಪಾದಾಗೆಲ್ಲಾ ಹದಿಹರೆದ ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮ, ಹದಿಹರೆಯದ ಸಮಸ್ಯಗಳನ್ನ ಪರಿಹಾರ ಮಾಡೋದಕ್ಕೆ ಪೋಷಕರು ಪಡುವ ಕಷ್ಟ ಎಲ್ಲವೂ ನೆನಪಾಗುತ್ತದೆ. ಇಂದಿಗೂ ಹದಿಹರೆಯದ ಮಕ್ಕಳಿಗೆ ಆಪ್ತಸಮಾಲೋಚನೆ ಮಾಡುವುದು ದೊಡ್ಡ ಸವಾಲು. ನನ್ನ ಮಗಳಿಗೆ, ಮಗನಿಗೆ ಬುದ್ದಿ ಹೇಳಿ ಎಂದು ಯಾರಾದರೂ ಹೇಳಿದರೆ ನಿಮ್ಮ ಮಕ್ಕಳು ನಿಮ್ಮ ಹೊಣೆ ಎಂದು ಹೇಳುವುದು ಒಳ್ಳೆಯದು ಇಲ್ಲದಿದ್ದರೆ ”ನನ್ನ ಮಗಳನ್ನ ಸಾಯಿಸಿ ಬಿಟ್ರು” ಎಂಬ ಮಾತನ್ನು ಕೇಳಬೇಕಾಗುತ್ತದೆ.
–ನಾಗಸಿಂಹ ಜಿ ರಾವ್
ನಿಮ್ಮ ಬರೆಹದ ದುಗುಡ ಅರ್ಥವಾಗುವಂಥದು. ಮನ ನೋಯುವಂಥದು.
ಸಾರ್ವಜನಿಕ ಜೀವನದಲ್ಲಿ ಇದ್ದ ಯಾರೊಬ್ಬರೂ (ಶಿಕ್ಷಕತನ, ವೈದ್ಯತನ,
ವಕೀಲಿತನ ಹೀಗೆ) ಮಾತು ಕೇಳಬೇಕಾಗುತ್ತದೆ. ಸತ್ಯಾಸತ್ಯತೆಯನ್ನು
ತೀರ್ಮಾನಿಸುವ ವಿವೇಕ ಇಂದು ಜನರಲ್ಲಿ ಕಡಮೆ. ಇನ್ನು ಮೀಡಿಯಾ
ಗಳಂತೂ (ಎಲ್ಲವೂ ಅಲ್ಲ) ಸೆನ್ಸೆಷನಲ್ ಸುದ್ದಿಗೋಸ್ಕರ ಪ್ರಸಾರಿಸುವ
ಪರಿ ದೇವರಿಗೇ ದಿಗ್ಭ್ರಮೆ.
ನನಗೆ ನಿಮ್ಮ ಬರೆಹದ ಕೊನೆಯ ಸಾಲುಗಳು ಎದೆಗುಂದಿದವು. ಅಂದರೇನಾಯಿತು?
ಸಂವೇದನಾಶೀಲರೆಲ್ಲರೂ ಇಂಥದೊಂದು ವೇದನೆ ಪಡುವಾಗ
ಟೋಟಲಿ ಸಮಾಜ ದಿಕ್ಕಾಪಾಲಾಗುತ್ತದೆ. ನಮಗೇಕೆ? ಎಂಬ
ನೊಂದ ನೋವಿನ ಪಾಠದಿಂದಾಗಿ ಬುದ್ಧಿ ಹೇಳುವವರೇ ಇಲ್ಲವಾಗಿ
ಈಗ ಗೂಗಲೇ ಗುರುವಾಗಿದೆ. ಗುರುಗಳು ಮೌನವಾಗಿದ್ದಾರೆ.
ಶಿಕ್ಷಕರು ಸರಿಯಿಲ್ಲ ಎನುವವರಿಗೆ ಇದೆಲ್ಲ ಅರ್ಥವಾಗುವುದಿಲ್ಲ.
ಬಾಳು ಕರುಣೆಯ ಕೊಯಿಲು ಎಂದು ಮುದ್ದುರಾಮನ ಚೌಪದಿಯನ್ನು
ಓದುತಿದ್ದ ನನಗೆ ನೀವು ಚಿಂತಿಸುವಂತೆ ಮಾಡಿದಿರಿ.
ನಿಮ್ಮೊಂದಿಗೆ ನಾನೂ ಆ ನೋವನ್ನು ಅನುಭವಿಸಿದೆ. ಇಲ್ಲದಿದ್ದರೆ
ಇಷ್ಟುದ್ದ ಬರೆಯಬೇಕಾದ ಅಗತ್ಯ ಇರಲಿಲ್ಲ. ಇಂಥದೊಂದು ಮಂಥನ
ವನು ಕತೆಯಾಗಿಸಿದ ನಿಮಗೆ ಧನ್ಯವಾದಗಳು ಗುರುಗಳೇ.