ಗುಜರಿ ಅಂಗಡಿಯ ಪುಸ್ತಕ!
ಫುಟಪಾತ ಬದಿಯ
ಗುಜರಿ ಅಂಗಡಿಯ
ತುಕ್ಕು ಹಿಡಿದ ತಗಡು,
ಗಾಳಿ ಸೋಕಿ
ಟಪಟಪ, ಚಿರ್ ಚಿರ್
ಸದ್ದು ಮಾಡಿದಾಗ
ಮೂಲೆಯಲ್ಲಿ ಬಿದ್ದ
ಪುಸ್ತಕವೊಂದು
ತಲೆ ಎತ್ತಿ ನೋಡಿತು!
ಅಂಗಡಿ ಮಾಲಿಕ
ಲೈಟಿಲ್ಲದ ಅಂಗಡಿ ತೆರೆದು
ಕಸಕಡ್ಡಿ ಗುಡಿಸಿ ನೀರು
ಸಿಂಪಡಿಸಿದನು !
ಗುಜರಿಗೆ ಬಂದ
ಕಬ್ಬಿಣದ ಡಬ್ಬಿಯನ್ನೇ
ಕುರ್ಚಿ ಮಾಡಿಕೊಂಡು
ಸುಗಂಧಿತ ವಾಸನೆಯ
ಅಗರಬತ್ತಿ ಹಚ್ಚಿ
ವ್ಯಾಪಾರ ಶುರುಮಾಡಿದ !
ತೂಗುವ ತಕ್ಕಡಿಗಿಲ್ಲ ಬಿಡುವು
ಕಬ್ಬಿಣ, ಪ್ಲಾಸ್ಟಿಕ್, ರಟ್ಟು
ಪುಟ್ಟಗಳದೇ ಕಾರುಬಾರು !
ರಾಶಿ ರಾಶಿ ಸಾಮಾನು
ತೂಕ ದರಕ್ಕಾಗಿ ಚೌಕಾಶಿ!
ಎಲ್ಲವೂ ಗಮನಿಸಿ
ಪುಸ್ತಕ ನಕ್ಕು ಹೇಳಿತು
ಎಲ್ಲರೊಂದಿಗೆ ತೂಗಬೇಡಿ
ನಮ್ಮ ಮೌಲ್ಯ ಅರಿತುಕೊಳ್ಳಿ. !!
–ಶರಣಗೌಡ ಬಿ ಪಾಟೀಲ ತಿಳಗೂಳ
ಶರಣಗೌಡ ಬಿ ಪಾಟೀಲ ಮೂಲತಃ ಕಲ್ಬುರ್ಗಿ ಜಿಲ್ಲೆಯ ತಿಳಗೂಳದವರು ಸ್ನಾತಕೋತ್ತರ ಪದವಿಧರರು ಪ್ರಸ್ತುತ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದಾರೆ. ಕಥೆ, ಕಾದಂಬರಿ, ಲಲಿತ ಪ್ರಬಂಧ ಸೇರಿ ಹಲವು ಕೃತಿ ರಚಿಸಿದ್ದಾರೆ. ಇವರ ಹಿಟ್ಟಿನ ಗಿರಣಿ ಕಿಟ್ಟಪ್ಪ ಲಲಿತ ಪ್ರಬಂಧ ಸಂಕಲನಕ್ಕೆ ಕ,ಸಾ,ಪ, ಮಾಡಿಕರಾವ ಸಾಹಿತ್ಯ ದತ್ತಿ ಪ್ರಶಸ್ತಿ ದೊರೆತಿದೆ, ಕನ್ನಡ ನಾಡು ಲೇಖಕ ಓದುಗರ ಸಂಘದಿಂದ ಕಾದಂಬರಿ ಪ್ರಶಸ್ತಿ, ಗುರುಕುಲ ಟ್ರಸ್ಟಿನಿಂದ ಸಾಹಿತ್ಯ ಶರಭ ಪ್ರಶಸ್ತಿ , ಸಾಹಿತ್ಯ ಸೇವಾ ರತ್ನ ಪ್ರಶಸ್ತಿ , ಕಥಾ ಪುರಸ್ಕಾರ, ಉತ್ತಮ ಶಿಕ್ಷಕ ಪ್ರಶಸ್ತಿ. ಸುಭಾಷಚಂದ್ರ ಪಾಟೀಲ ಜನ ಕಲ್ಯಾಣ ಟ್ರಸ್ಟಿನ ಬಸವ ಪುರಸ್ಕಾರ ಪಡೆದುಕೊಂಡಿದ್ದಾರೆ.
ಅಭಿನಂದನೆಗಳು ಸರ್, ಚಂದದ ಕವಿತೆ, ಪುಸ್ತಕ ಮೌಲ್ಯದ ಬಗ್ಗೆ 👌👌👏