ಮಾರ ನವಮಿ
ಬನ್ನಿ ಬನ್ನಿ
ಹೀಗಿದ್ದರೂ ಎಂಬ ಕಲ್ಪನೆಗೂ
ಸಿಗದ
ತಾತ, ಮುತ್ತಾತ, ಅಜ್ಜಿ, ಮುತ್ತಜ್ಜಿ
ಮಾರನವಮಿಯಂದು ಮೂಡಿ
ಕೈಗೇ ಸಿಗುವವರಿದ್ದಾರೆ
ಎಡೆಗಿಟ್ಟ ಚಕ್ಕುಲಿ, ನಿಪ್ಪಟ್ಟು,
ಪುರಿ, ಸ್ವೀಟು ಮೆಲ್ಲಿ
ಟವಲ್ಲು, ಸೀರೆ, ರವಿಕೆ ಪೀಸುಗಳ
ಹೊದ್ದಿ
ಲೋಟದೊಳಗಿನ ಸರಾಪು ಕುಡಿದು
ಹದವಾಗಿ ಬೆಂದ ಬಾಡ
ಬಾರಿಸಲು
ಆ ‘ಹೆಂಡಗಂಡ’ರು
ಮಾರ ನವಮಿ ದಿನ
ಮೂಡಿ ಬಂದೇ ಬರುತ್ತಾರೆ
ಬನ್ನಿ ಬನ್ನಿ ಬೇಗ ಬನ್ನಿ…
ಎಡೆಗಿಟ್ಟ ಎಣ್ಣೆ ಅರ್ಧ
ಕುಡಿದು ಮಾಯವಾಗುವ ಮುನ್ನ
ರಕ್ತ ಮಾಂಸಗಳ ಕಿತ್ತು
ಬರೀ ಮೂಳೆಗಳನೇ ಬಿಟ್ಟ್ಹೋಡುವ ಮುನ್ನ,
ಊರ
ಗುಡಿಯೊಳಗೋಗದೆಯೂ
ಸ್ವರ್ಗವನ್ನೇ ಪಡೆದ ಕಾರಣ,
ಊರಿಂದಿನ ಗುಟ್ಟೆಯಿಂದಿಡಿದು
ಪಟೇಲರ ತೋಟದವರೆಗಿನ
ಹೊಲವನ್ನು ‘ಹಟ್ಟೆರಸಿಗೆ’
ಎಂದು ಈಗಲೂ
ಕರೆಯುವ ಕಾರಣಗಳನು
ಅವರ ಬಾಯಿಂದಲೇ
ಕೇಳೋಣ ಬನ್ನಿ…
ಬನ್ನಿ ಬನ್ನಿ ಬೇಗ ಬನ್ನಿ
ಹೆಬ್ಬೆಟ್ಟೊತ್ತಿ, ಆಣೆ ಮಾಡಿ
ತನ್ನದನೆಲ್ಲಾ ದೇಣಿಗೆ ನೀಡಿ
ದನವಾಗಿ ಧಣಿಯ ಕೊಟ್ಟಿಗೆಯೊಳಗೆ
ದಾಳವಾಗೇ ‘ದೊರೆಯಂತಹ ದೇಹ’
ಕಳೆದ ಆ ಶುದ್ಧ ಬುದ್ಧರು
ಅದ್ಹೇಗೆ ಹೆಣ ಹೂಳಲೂ
ನೆಲವಿರದೆ ಹುಳವಾಗಿ
ಕಿತ್ತುತಿಂದವರ ಬೆಳೆಗೆ
ಕಸುವಾದರೆಂದು
ಬೇಗ ಕೇಳೋಣ ಬನ್ನಿ
ಸಾಮ್ರಾಣಿ, ಧೂಪದ ದೂಳಿನ
ಮಾರನವಮಿಯ ಗೌಲು
ಮರೆಯಾಗುವ ಮುನ್ನ…
ಕೇಳುವ, ಕೇಳಿಸಿಕೊಳ್ಳುವ ಹೃದಯವಂತಿಕೆಯ ಧೈರ್ಯವಿದ್ದರೆ
ಕೇಳೋಣ ಬನ್ನಿ…
ಮಾರನವಮಿಯ ದಿಬ್ಬದೊಳಗೆ
ಮರೆಯಾದ ಮೂಲ ಮನುಜರ ಕಥೆಯ…
–ಲಿಂಗರಾಜು ಕೆ.
ಲಿಂಗರಾಜು ಕೆ. ಮಧುಗಿರಿ ತಾಲ್ಲೂಕಿನ ಜಡೇಗೊಂಡನಹಳ್ಳಿ ಗ್ರಾಮದ ನಿವಾಸಿ. ವೃತ್ತಿಯಲ್ಲಿ ಶಿಕ್ಷಕರಾಗಿ, ಆಂಧ್ರ-ಕರ್ನಾಟಕ ಗಡಿಭಾಗದ ಜನಕಲೋಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಶಸ್ವಿ ಶಿಕ್ಷಕರಾಗಿ, ಅನುವಾದ, ಲೇಖನ, ಕಥೆ, ಕವನ ಬರಹಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.