ಪಂಜು ಕವಿತೆ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಪ್ರಶಾಂತ್ ಬೆಳತೂರು ಅವರ ಕವಿತೆ

ಅಷ್ಟಾವಂಕನ ಸ್ವಗತ

ಒಮ್ಮೊಮ್ಮೆ
ಸಮುದ್ರವು ಮೇರೆ ಮೀರುತ್ತದೆ
ತಪ್ಪೇನಿಲ್ಲ.. !
ಒಳಗಿನ ಕುದಿ ಹೆಚ್ಚಾದಾಗ
ಹಿಟ್ಟಿನಿಂದ ಮಾಡಿದ
ಕೋಳಿ ಕೂಡ
ಬೆಂತರದಂತೆ ಅರುಚುತ್ತದೆ.. !
ನಾನೋ
ಕುರೂಪಿ ಅಷ್ಟಾವಂಕ
ಮೈಯ ಗಾಯಗಳು
ಕೀವು ತುಂಬಿ ಸೋರುವಾಗ
ಬಾಧೆ ತಾಳಲಾರದೆ
ನಡು ಹಗಲಿಗೆ ನಗ್ನಗೊಂಡವನು.. !

ದಾಟಲಾರೆನು
ಅರಸು ಮಹಾಶಯರಂತೆ
ಗೊಡ್ಡು ಇತಿಹಾಸದ ಹೆಗಲೇರಿ
ಗೊತ್ತು ಗುರಿಯಿಲ್ಲದೆ
ನಿರ್ಜೀವ ಸರಕಿನಂತೆ
ವಿನಾಕಾರಣ ಸಾಗಲಾರೆ
ಪ್ರೇಮಕಾಮವಿರದ
ಸತ್ವಹೀನ ಮುಂದಿನ
ಒಣ ಜನ್ಮಾಂತರಗಳಿಗೆ.. !

ಆಗಾಗಿಯೇ
ಒಳ ಹೊರಗಿನ ಹಂಗಿಲ್ಲದೆ
ನೋವು ಕಾವುಗಳ ನುಡಿಸುತ್ತೇನೆ
ಅವಳಿಗಾಗಿ ಹಾಡುತ್ತೇನೆ
ಸಿಗಲಾರಳು ಅಷ್ಟು ಸುಲಭಕೆ
ಮೈಮನಗಳ ಮರೆಸುವ ವಿಷಕನ್ಯೆ
ಆದರೂ ಮಾವಟಿಗ ನಾನು
ಪಳಗಿಸುವುದರಲ್ಲಿ ನಿಸ್ಸೀಮ.. !

ಅವಳರಮನೆಯ ಅಂತಃಪುರದಲ್ಲಿ
ಬಣ್ಣಹೀನವಾದ
ನಟ್ಟಿರುಳಗಳ ಏಕಾಂತಕ್ಕೆ
ಪ್ರೇಮರಾಗವಿಡಿದು ಮೀಟುತ್ತೇನೆ
ಹೃದಯದ ಕದ ತಟ್ಟುವ
ರಮ್ಯತೆಯ ಸಂಗೀತ ಸ್ಪರ್ಶಗಳಲ್ಲಿ
ಸಪ್ತಸ್ವರಗಳೆದ್ದು ನರ್ತಿಸಿ
ಅವಳ ತುಂಬು ಅಂಗಾಂಗಳನ್ನು
ಬಾಧಿಸುವಾಗ
ವೇದನೆಯ ಹುತ್ತದಿಂದ
ಪೊರೆ ಕಳಚಿದ ಹಾವಿನಂತಾಗುವ
ಅವಳು
ನನ್ನಯ ಜಾಡು ಹಿಡಿದು
ಬರುತ್ತಾಳೆ… !

ನಾನೋ
ಬಂದವಳ ತಬ್ಬಿ ಸಂತೈಸದೆ
ಮುದ್ದಿಸಿ ಆಲಂಗಿಸದೆ
ವಿರಹದುರಿಯಲಿ ನಲುಗುತ್ತಾ
ಹಸಿದ ಮದ್ದಾನೆಯೊಂದು
ಕದಳಿವನಕ್ಕೆ ನುಗ್ಗಿ ನೀರು ಕುಡಿದಂತೆ
ಅವಳ ಮೇಲೆ ಎರಗುತ್ತೇನೆ
ತಡವಾಗಿ ಬಂದಿದ್ದಕ್ಕೆ
ಕಂಗಳ ಕೆಂಪಾಗಿಸಿ
ಅಂಗಾತ ಕೆಡವುತ್ತೇನೆ
ನೋವಿನಲ್ಲಿ ಹೊರಳಾಡುತ್ತೇನೆ
ತಣಿಯದಿದ್ದಾಗ
ನುಣುಪಾಗಿ ಹೊಳೆವ ಬೆನ್ನಿಗೆ
ಬಾಸುಂಡೆಗಳು ಏಳುವಂತೆ
ಚಾಟಿ ಬೀಸುತ್ತೇನೆ.. !

ಬಿಡಲೊಲ್ಲಳು
ಪರಪುರುಷನ ತೋಳ ತೆಕ್ಕೆಯಲ್ಲಿ
ಬಂಧಿಯಾದ ತ್ರಿಭುವನ ಸುಂದರಿ.. !
ಹೆಪ್ಪುಗಟ್ಟಿ ಸೋರುತ್ತಿರುವ
ಎದೆಯಗಾಯದ
ಯುಗಾಂತರದ ಕೀವುಗಳನ್ನೆಲ್ಲಾ
ಒಂದೇ ಗುಕ್ಕಿಗೆ
ತನ್ನ ಸೆರಗಿನಲ್ಲಿ ಸವರಿ
ತುಟಿಗಳಿಂದ ಮುತ್ತಿಕ್ಕುತ್ತಾಳೆ… !

ತೆಂಕಣದ ಗಾಳಿ ಬೀಸುತ್ತದೆ
ಕಡಲು ಉಕ್ಕುತ್ತದೆ
ಸಂಜೆಯ ಬಿಸಿಲ್ಮಳೆ
ಹನಿಹನಿಯಾಗಿ ತೊಯ್ದು
ಪ್ರೇಮದ ಮೋಹಕತೆಯಲ್ಲಿ
ಮೂಡುತ್ತದೆ
ಅರಮನೆಗಳಾಚೆಗೆ
ಅಮೃತಮತಿಯೆಂಬ ಕಾಮನಬಿಲ್ಲು
ಮತ್ತೆ ಮತ್ತೆ…
ಅಷ್ಟಾವಂಕನ ಕೈ ಬೀಸುತ್ತಾ ಕರೆಯಲು.. !

ಪ್ರಶಾಂತ್ ಬೆಳತೂರು


ಪ್ರಶಾಂತ್ ಬೆಳತೂರು ಮೂಲತಃ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಕೆ.ಬೆಳತೂರು ಗ್ರಾಮದವರು. ಪ್ರಸ್ತುತ ಶ್ರೀ ಟಿ ಎನ್ ಎನ್ ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇವರ ಹಲವು ಕವಿತೆಗಳು ಮತ್ತು ಸಣ್ಣ ಕತೆಗಳು ವಿವಿಧ ಜಾಲತಾಣ ಪತ್ರಿಕೆಗಳಲ್ಲಿ ಪ್ರಕಟಗೊಂಡು ಮೆಚ್ಚುಗೆ ಪಡೆದಿವೆ..!


ಕನ್ನಡದ ಬರಹಗಳನ್ನು ಹಂಚಿ ಹರಡಿ
3.8 4 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x