ಏಸುವಿನ ಬೊಂಬೆ
ಕಳೆದ ವರ್ಷದ ಜಾತ್ರೆಯಲ್ಲಿ ಮಗಳಿಗೊಂದು ಕ್ರಿಸ್ತನ ಬೊಂಬೆ ಕೊಡಿಸಿದ್ದೆ
ಮಕ್ಕಳ ಮುತುವರ್ಜಿ ನಿಮಗೇ ಗೊತ್ತಲ್ಲ
ತಿಂಗಳು ಕಳೆಯಲಿಲ್ಲ, ಕ್ರಿಸ್ತನ ಶಿಲುಬೆ ಮುರಿಯಿತು
ಅರ್ಧ ದಿನ ಅತ್ತಳು, ಮತ್ತೆ
ಬುದ್ಧನ ಬೊಂಬೆಯ ಬೋಧಿಮರ ಮುರಿದು
ಏಸುವಿನ ಬೆನ್ನಿಗೆ ಮೆತ್ತಿದಳು.
ಮರುವಾರ ಕ್ರಿಸ್ತನ ಕಾಲಿಗೆ ಜಡಿದಿದ್ದ ಮೊಳೆಗಳು ಸಡಿಲವಾದವು
ಮಾಡ್ತೀನಿ ಇದ್ಕೆ ಅಂದವಳೇ ವಿವೇಕಾನಂದರ ಕ್ಯಾಲೆಂಡರಿನ
ಮೊಳೆ ಕಿತ್ತು ಕ್ರಿಸ್ತನ ಕಾಲಿಗೆ ಕೂಡಿಸಿದಳು.
ಇನ್ನೊಮ್ಮೆ ಬೊಂಬೆಯ ತುಂಡುಬಟ್ಟೆ ಹರಿಯಿತು
ಅರೆರೇ! ಗಾಂಧಿತಾತನ ಲಂಗೋಟಿ ಹರಿದು
ಏಸುವಿನ ಮಾನ ಮುಚ್ಚಿದಳು.
ಈಗ ಷೋಕೇಸಿನ ಒಂದೊಂದು ಬೊಂಬೆಯ
ಒಂದೊಂದು ಅಂಗ ಮುರಿದಿದ್ದಾಳೆ
ಎಲ್ಲವೂ ಏಸುವಿನ ಬೊಂಬೆಗೆ ಜೋಡಿಸುವ ಸಿಂಗಾರಕ್ಕಾಗಿ!
ನಾ ಕೊಡಿಸಿದ ಬೊಂಬೆ ಇದಲ್ಲ ನನ್ನ ವಾದ
ಇಲ್ಲ ಅಪ್ಪಯ್ಯ, ಅದೇ ಬೊಂಬೆ ಇದು
ಅವಳು ಖಾತ್ರಿ ನೀಡುತ್ತಾಳೆ.
–ಸವಿರಾಜ್ ಆನಂದೂರು
ಸವಿರಾಜ್ ಆನಂದೂರು, ಹುಟ್ಟಿದ್ದು ಆಗುಂಬೆ ಸಮೀಪದ ಆನಂದೂರಿನಲ್ಲಿ. ಓದಿದ್ದು ಶೃಂಗೇರಿ, ಶಿವಮೊಗ್ಗ, ಬೆಂಗಳೂರುಗಳಲ್ಲಿ. ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರ, ಹವ್ಯಾಸಿ ತಾಳಮದ್ದಳೆ ಅರ್ಥಧಾರಿ, ರಂಗಭೂಮಿ ಕಲಾವಿದ. ಪ್ರಸ್ತುತ ಬೆಂಗಳೂರಿನ ಗೋಪಾಲನ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ವೃತ್ತಿ. “ಬ್ಲೂಬುಕ್” ಮತ್ತು “ಗಂಡಸರನ್ನು ಕೊಲ್ಲಿರಿ” ಪ್ರಕಟಿತ ಕೃತಿಗಳು. “ಗಂಡಸರನ್ನು ಕೊಲ್ಲಿರಿ” ಕೃತಿಗೆ ೨೦೨೩ರ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಸಂದಿದೆ.
ಸವಿರಾಜ್, ನಿಮ್ಮ ಕವಿತೆ ಓದಿ ಖುಷಿಯಾಯ್ತು.