ಕೊಳಲ ಹಿಡಿದ ಕೃಷ್ಣ…. ಅಮ್ಮ
ಮೆಕ್ಕೆಜೋಳದ ಸೆಪ್ಪೆ
ತೊಗರಿ ಕುಳೆ
ಎಳ್ಳು ಕಡ್ಡಿ ಆರಿಸಿ ಸಿಂಬೆ ಇಲ್ಲದ ತಲೆ ಮೇಲೆ
ಹೊತ್ತು ತರುವಾಗೆಲ್ಲಾ
ಅಮ್ಮ ಮತ್ತು ರೊಟ್ಟಿ ಕಣ್ಣೆದುರಿನ ಸೂರ್ಯ
ರೊಟ್ಟಿ ಕೊಟ್ರೆ ಕುದಿಗೆ
ಸಿಲವಾರದ ಪಾತ್ರೆಯಿಟ್ಟು
ನಾ ತಂದ ಬೀಳು ಹೊಲದ
ಸಂಜೀವಿನಿ ಕಡ್ಡಿಗಳು ಒಲೆಗಿಕ್ಕಿ ಅಮ್ಮ
ಊದುವಾಗ ಮರೆತ ಮಗ್ಗಿ ಬಾಯಿಗೆ ಬಂದಷ್ಟೇ ಖುಷಿ
ತೆಳು ಕಬ್ಬಿಣದ ಕೊಳವೆ ಅದು,
ಅಮ್ಮನ ತುಟಿ ತಾಗಿ
ಎದೆಯ ಒಲವೆಲ್ಲಾ ಒಟ್ಟು ಹಾಕಿ ಊದುತ್ತಿದ್ದರೆ
ಒಲೆ ತುಂಬಾ ಬೆಳಕು ; ಅಮ್ಮ ಥೇಟ್ ಕೊಳಲ ಹಿಡಿದ ಕೃಷ್ಣ
ಅಮ್ಮನ ಮನಸ ಬಿಳಿ
ಜ್ವಾಳದ ಹಿಟ್ಟಿಗೆ ಕೊಟ್ರೆ ಸುರಿದು
ಹಬೆ ಮಡಸಿ ಎರಡೂ ಕೈಯಿಂದ ನಾದುತ್ತಾ ಒಲೆ ಮೇಲೆ
ಹೆಂಚಿಟ್ಟು ರೊಟ್ಟಿ ತಟ್ಟುತ್ತಿದ್ದರೆ ಕೇರಿಗೆಲ್ಲಾ ನಾದ
ಕೂಳೆ, ಕಡ್ಡಿಗಳು ಒಲೆಯಲ್ಲಿ ಮೈ ಸುಟ್ಟುಕೊಳ್ಳುತ್ತಲೇ
ಅಮ್ಮನ ಹಣೆ ಬೆವರಲಿ ಲೀನ
ಕೊಣಗಿಯ ಹಿಟ್ಟಲ್ಲಿ
ನನ್ನ ಬೆರಳು ಅ. ಆ ಇ ಈ ಗೀಚುತ್ತಿದ್ದರೆ
ಅವ್ವನ ಅಷ್ಟೂ ಬೆರಳು ಮೈ ಸುಟ್ಟುಕೊಳ್ಳುತ್ತಿದ್ದ ರೊಟ್ಟಿ ಮೇಲೆ ಕಣ್ಣೀರ ಬಟ್ಟೆಯಿಂದ ನಚ್ಚಗೆ
ಒಲೆ ಚಾಚುತ್ತಲೇ ಉಣ್ಣಕಿಕ್ಕುವ
ಅಮ್ಮನ ಒಲವಿಗೆ
ಒಲೆಯೂ ಧಗ ಧಗ
ನಾಲ್ಕು ತಿಂದರೂ
‘ಎಲ್ಡೇ ತಿಂದಿರದು, ತಿನ್ನು’ ಅನ್ನುವ ಅಮ್ಮನ ಗಣಿತ
ಈಗೀಗ ನೀರು ಹೊಳ್ಳೋ ಹಾದಿ
ಒಲೆ
ಕೊಣಗೆ
ಆಹುತಿಯಾಗುವ ಕಡ್ಡಿಗಳು
ಮತ್ತು ಅಮ್ಮ…. ಈಗಿಲ್ಲ
ಗ್ಯಾಸ್ ಸ್ಟೌ ಮೇಲೆ ನಾನ್ ಸ್ಟಿಕ್ ತವ
ಕುಕ್ಕರಿಸಿದೆ
ಇವಳು ಉದ್ದಿದ ಚಪಾತಿಯಂಥ ರೊಟ್ಟಿ
ಬರ್ನಲ್ ಏರಿಳತಕ್ಕೆ ಕಪ್ಪು ಬಿಳುಪು ಸಿನೆಮಾ ;
ಅರ್ಧ ಹಂಗೆ, ಅರ್ದ ಹಿಂಗೆ
ಇವಳು
ಅಮ್ಮನ ಹಾದಿಯ ದಿಕ್ಕು ;
ಇಲ್ಲದ ಒಲೆಗಾಗಿ
ಕಣ್ಣು ಮಂಜು ; ರೊಟ್ಟಿಗೆ ಮಗ್ಗಿ ಈಗ ಬಾಯಿಪಾಠ
ರೊಟ್ಟಿ ಸದ್ದಿಲ್ಲದ ಮನೆಯಲ್ಲಿ
ಹಸಿವು
ಕಡಲಾಗಿದೆ… ಮಕ್ಕಳು ತರೇವಾರಿ ಅನ್ನದ ಲೋಕದಲ್ಲಿ
ತಲ್ಲೀನ.. ಅಷ್ಟೇ!
–ಸಂತೆಬೆನ್ನೂರು ಫೈಜ್ನಟ್ರಾಜ್
ಸೈಯದ್ ಫೈಜುಲ್ಲಾ ಇವರ ಕಾವ್ಯನಾಮ ಸಂತೆಬೆನ್ನೂರು ಫೈಜ್ನಟ್ರಾಜ್. ಇವರ ಊರು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು. ವೃತ್ತಿಯಲಿ ಕನ್ನಡ ಅಧ್ಯಾಪಕರು. ’ಎದೆಯೊಳಗಣ ತಲ್ಲಣ’, ’ಬುದ್ಧನಾಗ ಹೊರಟು’ ಕವನ ಸಂಕಲನ, ’ಮಂತ್ರದಂಡ, ಸ್ನೇಹದ ಕಡಲಲ್ಲ’ ಮಕ್ಕಳ ಕೃತಿಗಳು ಸೇರಿದಂತೆ ಹನ್ನೊಂದು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಸಂಚಯ ಕಾವ್ಯ ಪುರಸ್ಕಾರ, ಹಾಮಾನಾ ಕಥಾ ಪುರಸ್ಕಾರ, ಸ್ನೇಹಶ್ರೀ ಪ್ರಶಸ್ತಿ, ಸಂಕ್ರಮಣ ಪ್ರಶಸ್ತಿ, ಗವಿಸಿದ್ದ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ, ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಹಾಗು ಎರಡು ಬಾರಿ ಕಾವ್ಯಕ್ಕೆ ಹಾಸನ ರಾಜ್ಯ ಪ್ರಶಸ್ತಿ ಸಂದಿವೆ.