ಕೆಂಪು
ಕೆಂಪಾದ ಆ ದಿನ ಮರೆಯಲಾರೆನು ಇನ್ನೂ
ಹಚ್ಚ ಹಸಿರಾಗಿದೆ ಅದರ ನೆನಪು.
ಅಯ್ಯೋ ಮನೆಯೆಲ್ಲ ಮೈಲಿಗೆಯಾಯಿತು,
ಶಾಲೆಯಿಂದ ಬಂದವಳಿಗೆ ಹಿರಿಯರ ವಟವಟ.
ಅರ್ಥವಾಗದೆ ನೋಡಿದೆ ಅಮ್ಮನ ಮುಖವ,
ಓಡಿ ಬಂದು ತಬ್ಬಿದಳು ಅರಿವು ಮೂಡಿಸುತ.
ಮುಂಜಾನೆಯ ಮೂಡಣದ ದಿನಕರ ಕೆಂಪಾಗುವನಲ್ಲ ಅವನಿಗೂ ಉಂಟೆ ಮೈಲಿಗೆಯ ತಟವಟ?
ಅಯ್ಯೋ ಅದನ್ನು ಯಾಕೆ ಮುಟ್ಟಿಸಿಕೊಂಡ್ಯೇ..
ದೊಡ್ಡವಳವಳು ನಿಭಾಯಿಸಲಿ ಬಿಡು,
ಅಜ್ಜಿಯ ಆಜ್ಞೆಯಂತಹ ಸಲಹೆ,
ಅಮ್ಮನ ಕಣ್ಣಲ್ಲಿ ಕಂಡೂ ಕಾಣದಂತಹ ಹತಾಶೆ.
ನನ್ನಣ್ಣ ಒಂದು ವರ್ಷ ಹಿರಿಯ,
ಅವ ಚಿಕ್ಕವನಂತೆ, ಅದು ಹೇಗೆ
ನಾನು ಮಾತ್ರ ದೊಡ್ಡವಳಾದೆ? ಯಾರನ್ನು ಪ್ರಶ್ನಿಸಲಿ?
ಅಮ್ಮನ ತುಂಬಿದ ಕಂಗಳ ಕಂಡು ಸುಮ್ಮನಾದೆ.
ಕೆಂಪಾದ ನನ್ನ ಸ್ಪರ್ಶದಿಂದ ಮೈಲಿಗೆಯಾದ
ಅಮ್ಮನಿಗೆ ಮತ್ತೊಮ್ಮೆ ಸ್ನಾನ ತಣ್ಣೀರಿನಿಂದ.
ಸ್ನಾನದ ನಂತರ ಮೈಲಿಗೆ ಕಳೆಯುವುದಂತೆ.
ನಾನು ಎರಡೆರಡು ಬಾರಿ ಮಾಡಿದರೂ ಸ್ನಾನ ಮಡಿಯಲ್ಲವಂತೆ.
ಮೂರು ದಿನ ಕತ್ತಲ ಕೋಣೆಯ ವಾಸ, ಅಮ್ಮನ ಬಿಟ್ಟು ಬೇರಾರದೂ ಮಿಡಿಯುವುದಿಲ್ಲ ನನಗಾಗಿ ಶ್ವಾಸ.
ಮಡಿಮಡಿ ಎಂದು ಅಡಿಗಡಿಗೆ ಹಾರುವ
ಹಿರಿಯರೇನು ಬಲ್ಲರು ನನ್ನೊಳಗಿನ ನೋವ.
ಹೊಟ್ಟೆ ಹಿಡಿದು ಹೊರಳಾಡಿದರೂ
ಶಮನವಾಗದು ಈ ನೋವು.
ಸಂತೈಸುವ ಜೀವವೇ ಅಸಹಾಯಕತೆಯಲಿ
ದೂರ ನಿಂತಿರೆ, ಅವುಡುಗಚ್ಚಿ ಸಹಿಸಿದೆ ಅದೇ ಕೋಣೆಯಲಿ.
ಅಯ್ಯೋ ಅನಿಷ್ಟದ ಮುಖದರ್ಶನ ಛೀ..
ದಿನವೆಲ್ಲಾ ಹಾಳು, ದೊಡ್ಡವರ ದಡಬಡಾಯಿಸುವಿಕೆ.
ಬಯಸಿ ಪಡೆದದ್ದಲ್ಲವಿದು, ಋತುಮತಿಯಾಗದಿರೆ
ಮೂದಲಿಕೆ, ಆದಾಗ ಇಂತಹ ಹೇವರಿಕೆ.
ಕೆಂಪು ಗುಲಾಬಿ ಪ್ರೀತಿಯ ಸಂಕೇತವಾದರೆ
ಆಂತರಿಕ ಕೆಂಪಿಗೇಕೆ ಈ ನಿಕೃಷ್ಟತೆ ?
ತಾಯಾಗಲು ಸಜ್ಜಾದ ಸ್ತ್ರೀಯ ಈ ಶಕ್ತಿಯ, ಸ್ತ್ರೀಯಾಗಿ
ಅರಿತರೂ ಅದರ ಉತ್ಕೃಷ್ಟತೆ !.
ನಾಯಿಗೆ ಹಾಕುವಂತೆ ಊಟ ತಿಂಡಿ ದೂಡುವಿಕೆ
ಆ ದೇವನಿಗೂ ಕೇಳಿಸದೆ ನನ್ನೀ ಬಿಕ್ಕಳಿಕೆ ?
ಅವರ ಹೆಂಡತಿಯರೂ ಕೆಂಪಾಗಲಿಲ್ಲವೇ? ಅವರಿಗಿಲ್ಲದ
ಮಡಿಯ ಹಡಾಹುಡಿ ನಮಗೆ ಮಾತ್ರವೇಕೆ?
ಮೆತ್ತನೆಯ ಹಾಸಿಗೆಯಲ್ಲಿ ಮೈ ಚೆಲ್ಲುತ್ತಿದ್ದವಳು
ಗೋಣಿಚೀಲದ ಮೇಲೆ ಮಲಗಿದರೆ ಹೇಗೆ ಬಂದೀತು ನಿದ್ದೆ?
ಕನಸುಗಳ ಹೆಣೆಯಬೇಕಾದ ವಯೋಮಾನದಲ್ಲಿ ಮುನಿಸುಗಳ ದರ್ಶನ. ನನಗಿದು ಭೂತ ನರ್ತನ.
ಸ್ನಾನ ಬೇಡವೆಂಬ ತಾಕೀತು, ಮೈಯೆಲ್ಲಾ ಅಂಟಂಟು.
ಗೋಗರೆದರೂ ಆಸ್ಪದವಿಲ್ಲ. ಬೆವರಿನ ವಾಸನೆಯೊಂದಿಗೆ ಕಮಟು. ಚಿಗಳಿಯ ತಿಂದು ಹೆಚ್ಚಾದ ಕೆಂಪಿಗೊಂದು ಸುಂದರ ಸಲಹೆ,
ಹೋಗಲಿ ಬಿಡು ಕೆಟ್ಟ ರಕ್ತ. ಕೆಟ್ಟದು ರಕ್ತವೋ, ಇವರ ಮನವೋ
ಸ್ವಚ್ಛತೆಯ ಅರಿವಿಲ್ಲ ತಮ್ಮ ತಮ್ಮ ಬೇಳೆ
ಬೇಯಿಸಿಕೊಳ್ಳುವ ಹುನ್ನಾರ, ಜಡೆ ಹಾಕುವ ನೀರೆರೆಯುವ ತಾಪತ್ರಯ ತಪ್ಪಿತೆನ್ನುವ ನಿರಾಳ ಭಾವ.
ಕೆಂಪಾದುದು ಸರಿಯೋ ತಪ್ಪೋ ಜಿಜ್ಞಾಸೆ.
–ನಳಿನ ಬಾಲು
ನಳಿನ ಬಾಲಸುಬ್ರಹ್ಮಣ್ಯ, ಶಿವಮೊಗ್ಗದವರು. ಗೃಹಿಣಿಯಾಗಿ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದಾರೆ ಸಿರಿಗನ್ನಡ ವೇದಿಕೆ ಶಿವಮೊಗ್ಗದ ನಗರಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಬೆಳದಿಂಗಳು”. ಕವನ ಸಂಕಲನ, “ಕಾರ್ಮೋಡ ಸರಿದಾಗ” ನೀಳ್ಗತಾಸಂಕಲನ, “ಕಾಲಾಯ ತಸ್ಮೈ ನಮಃ” ಸಣ್ಣ ಕಥೆಗಳ ಸಂಕಲನ ಇವರ ಪ್ರಕಟಿತ ಕೃತಿಗಳು. “ಆಶಾ ಕಿರಣ” ಕಥಾಸಂಕಲನ, “ಮನೋಶರಧಿ” ಕವನಸಂಕಲನ ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು.