ದೀಪ ಹಚ್ಚಲು ಕತ್ತಲಾಗಲೇ ಬೇಕು
ವಸಂತ ಋತುವಿನ ವಿಷುವತ್ ಸಂಕ್ರಾಂತಿ
ಇದುವೇ ಬೆಳಕಿನ ಹಬ್ಬ ಈಸ್ಟರ್
ಸಂತ ಯೇಸುವಿನ ಪುನರುತ್ಥಾನದ ಸಂಭ್ರಮ.
ದಾಸ್ಯತ್ವದ ಸಂಕೋಲೆಯಿಂದ
ದೀನದಲಿತ ದುರ್ಬಲರನ್ನು
ಮುಕ್ತಗೊಳಿಸಲು ಓ ಮಹಾಸಂತನೆ
ನೀನು ಏರಿದ್ದು ಅಧಿಕದ ಸಾವಿನ ಶೂಲ.
ಅಂದು ಸಾವಿನ ಸೋಲಿನ ದಿನ
ಕೆಂಡದ ಪಾತ್ರೆಯ ಜ್ವಾಲೆಯಲಿ
ಹಚ್ಚಿಟ್ಟ ದೀಪ ನಿನ್ನ ಪ್ರೀತಿ, ದಯೆ,
ಕರುಣೆಯಾಗಿ ಸದಾ ಬೆಳಗುತ್ತಿದೆ.
ಕೇವಲ 30 ಬೆಳ್ಳಿ ನಾಣ್ಯಗಳ ಆಶೆಯಿಂದ
ನಿನ್ನ ಪರಮ ಶಿಷ್ಯ ಯೂದನು ಮಾಡಿದ
ಗುರು ದ್ರೋಹಕ್ಕೆ ಕೋಡಿಯಾಗಿ
ಹರಿದುದು ರಕ್ತ ಕಣ್ಣೀರು.
ನಿನ್ನ ಕೊನೆಯ ಔತಣಕೂಟದ
ವಿಷದ ಬಟ್ಟಲವು ಕೂಡ ತುಂಬಿದ್ದು
ಪವಿತ್ರ ದೇಹದ ರಕ್ತ, ಬಿಸಿ ರೊಟ್ಟಿ, ದ್ರಾಕ್ಷಾರಸ
ಇವುಗಳೇ ಇಂದು ಬಲಿ ರೂಪದ ಪ್ರಸಾದ.
ಶಿಲುಬೆಗೇರಿಸುವ ಪಿಲಾಥನ ಹೃದಯದಲ್ಲೂ
ಬುಗಿಲೆದ್ದ ಜ್ವಾಮಾಮುಖಿ
ನೀ ಹೆಗಲ ಮೇಲೆ ಹೊತ್ತ ಶಿಲುಬೆ
ಜೆರುಸೆಲೇಮ ದೇಗುಲದಿ ಇಂದಿಗೂ
ಅರಳಿ ನಿಂತ ಮಹೋನ್ನತ ಮೌನದ ಧ್ಯಾನ
ಅಂದು ದಯೆಯ ಪುಣ್ಯ ಮುಗಿದ ದಿನ
ಮಾನವೀಯತೆಯ ನೆತ್ತರು ಬಸಿದ ಕರಾಳ ಸಂಜೆ
ಅಂಬರದಡಿಯ ಗಿರಿ ಕಂದರಗಳ ನಡುವೆ ನಿಟ್ಟಿಸಿರು ಬಿಟ್ಟುನಿಂತ ಗೋಲ್ಗಾಥಾ ಬೆಟ್ಟಕ್ಕೂ ಕಾಡಿದ್ದು ಪಾಪಪ್ರಜ್ಞೆ
ಅರೆ ಬೆತ್ತಲೆ ಸಂತನೆ, ಶಿಲುಬೆಮರದ ಮೇಲೆ
ಮಲಗಿದ ನಿನ್ನ ಕೈಕಾಲುಗಳಿಗೆ ಜಡಿದ ಮೊಳೆ,
ಒತ್ತಿ ಹಿಡಿದ ಮುಳ್ಳಿನ ಕಿರೀಟ,
ಕೊರಡೆಯ ಚಾಟಿ ಏಟು’
ನೆತ್ತಿಯಿಂದ ತೊಟ್ಟಿಕ್ಕುತ್ತಿದ್ದ ಪವಿತ್ರ ರಕ್ತವೆಲ್ಲ
ನಿನ್ನದೇ ಪಾದವನ್ನು ತೊಳೆದು ಪಶ್ಚಾತ್ತಾಪ ಪಟ್ಟಂತೆ,
ನಿನ್ನ ಕಣ್ಣೀರ ಮಂತ್ರ ಜಲ,
ನಗುನಗುತ ಧಾರೆಯಾಗಿ ಹರಿದು
ಪಾಪ ತೊಳೆದುದು
ನಿನ್ನ ಮಾತೃಹೃದಯದ ಸಂವೇದನೆಗೆ ಸಾಕ್ಷಿ.
ಶಾಂತಿಗಾಗಿ ಇಂದಿಗೂ ಭೂಮಿ ತಪಿಸುತ್ತಿದೆ.
ಮತ್ತೆ ನಿನ್ನ ನೆಲದಲ್ಲಿ ರಕ್ತದೊಕುಳಿಯ ರಂಗಮಂಚಮಿ
ಸಹಸ್ರಮಾನಗಳಿಂದ ಹರಿದ ರಕ್ತದ ಕಲೆಗಳು
ಈಗಲೂ ಯುದ್ಧದ ಕಾರ್ಮೋಡಕ್ಕೆ ಬಣ್ಣ ತುಂಬುತ್ತಿವೆ.
ಒಣಗಿದ ದಯೆ, ಬಸಿದ ನೆತ್ತರು
ಭೂಮಿಯೇ ಬಾಯ್ಬಿರಿದು ಶಾಂತಿಗಾಗಿ ಅಂಗಲಾಚುತ್ತಿದೆ.
ಮನುಕುಲದ ರಕ್ಷಣೆಯ ಸ್ಮರಣಿಯ
ಈ ಧ್ಯಾನ ದಿನದಂದು
ಬೆಳಕಿನ ಮೇಣ ಉರಿದರೆ ಸಾಲದು
ಶಾಂತಿಧೂತ ಸಂತನೇ ನಿನ್ನ ತ್ಯಾಗ ಬಲಿದಾನ ಅಂತ:ಕರಣದ ಮಾನವೀಯತೆ ಇಂದಿಗೂ
ನಿರ್ದಯಿ ಪಾಪಿಗಳ ಪಾದ
ತೊಳೆದ ಪವಿತ್ರ ಪಾದೋದಕ.
ದೀಪ ಹಚ್ಚಲು ಕತ್ತಲಾಗಲೇ ಬೇಕು
ಸಾವು ಗೆದ್ದ ದಿವ್ಯಾತ್ಮನೆ ನಿನಗಿದೊ
ಬೆಳಕಿನ ಸ್ವಾಗತ.
ದೇವ ಪ್ರೀತಿ, ಮಾನವ ಪ್ರೇಮ,
ಮನುಷ್ಯತ್ವದ ಕಕ್ಕುಲಾತಿಗೆ ಮಿಡಿದ ನಿನ್ನ ಒಳದನಿ
ಮಾನವ ಕಲ್ಯಾಣ, ವಿಶ್ವಶಾಂತಿ ಬಯಸಿದ ನಿನ್ನಂತರಾತ್ಮದ ಪ್ರಭೆಗೆ ಸಾವಿರದ ನಮನ.
–ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹುಬ್ಬಳ್ಳಿಯವರಾಗಿದ್ದು, ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದ ಸ್ನಾತಕೋತ್ತರ ವಿಭಾಗದ ನಿರ್ದೇಶಕಿಯಾಗಿ, ಮೂರುಸಾವಿರ ಮಠದ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕಿಯಾಗಿ ಕಳೆದ ೨೫ ವರ್ಷಗಳಿಂದ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಧ್ಯಯನ, ಅಧ್ಯಾಪನ, ಬೋಧನೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಚನ ಅಧ್ಯಯನ, ಹಳಗನ್ನಡ, ಜಾನಪದ, ಮಹಿಳಾಸಾಹಿತ್ಯ, ಭಾಷಾಶಾಸ್ತ್ರ ಅಧ್ಯಯನ ಮುಂತಾದ ಕ್ಷೇತ್ರಗಳಲ್ಲಿ ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. “ಶ್ರೀ ಎಂ.ಡಿ.ಗೋಗೇರಿ ಸಮಗ್ರ ಸಾಹಿತ್ಯ”, “ಗರಿಕೆ ಅಲಗಿನ ಇಬ್ಬನಿ,” “ನುಂಗಿದಷ್ಟು ನಂಜು,” “ನೀರು ಕಚ್ಚಿದ ಕೆಂಡ,” ನಮ್ಮ ಮಹಿಳೆ ನಮ್ಮ ಹೆಮ್ಮೆ, ನಾವೇನು ಕಮ್ಮಿ, ಕಾವ್ಯದರಮನೆಯೊಳಗೆ, ಸಿರಿಗಂಧ, ಜೀವನ್ಮುಖಿ, ಉರಿಯೊಡಲು, ಧರೆಗಿಳಿದ ಶರಣೆಯರು, ದಿವ್ಯಾತ್ಮ , ಪ್ರಕೃತಿ , ಕನ್ನಡ ಸಾಹಿತ್ಯ ಅಧ್ಯಯನ : ಭಿನ್ನ ಆಯಾಮಗಳು. ಇವರ ಪ್ರಕಟಿತ ಕೃತಿಗಳಾಗಿವೆ. ಶಿಕ್ಷಣ ಇಲಾಖೆಗಳಿಂದ, ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಹಾಗೂ ಸನ್ಮಾನಗಳಿಗೆ ಭಾಜನರಾಗಿದ್ದಾರೆ. “ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಲಗಾ, ಉತ್ತಮ ಮಹಿಳಾ ಪುರಸ್ಕಾರ”, “ಕಿತ್ತೂರು ವೀರರಾಣಿ ಚನ್ನಮ್ಮ ರಾಜ್ಯಮಟ್ಟದ ಪ್ರಶಸ್ತಿ” “ ಬೇಂದ್ರೆ ನುಡಿ ಸಿರಿ ಪ್ರಶಸ್ತಿ” ಹೀಗೆ ಅನೇಕ ಗೌರವ ಸನ್ಮಾನ , ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.