ವ್ಯಾಖ್ಯಾನ!
ಹಬೆಯೇಳುವ ಕಾಫಿಯನ್ನು
ಸುರಿದುಕೊಂಡು ಬಟ್ಟಲಿಗೆ ಮುತ್ತಿಡುತ್ತಾರೆ
ದೃಷ್ಟಿಯನ್ನು ಕಣ್ಣಿಂದ ಕಣ್ಣಿಗೆ ನೆಟ್ಟು
ಈ ಏಕಾಂತದ ಸಂಜೆಗಳು
ಮತ್ತಷ್ಟು ಸುಂದರಗೊಳ್ಳುವುದೇ ಆಗ !
ಮಾತುಗಳು ಬೇಕಾಗಿಲ್ಲ ಅವರಿಗೆ
ಬೇಕಂತಲೇ ಬಿಟ್ಟಿರುವಾಗ
ಮತ್ತು
ಕಣ್ಣ ಸನ್ನೆಗಳೊಂದಿಗೆ ಶಬುಧಗಳಾಗುವ
ಅಸಂಖ್ಯಾತ ಮಾತುಗಳನ್ನು
ಪ್ರೇಮಿಯಲ್ಲದೆ
ಜಗದ ಯಾವ ಗೋಡೆಯೂ
ಕೇಳಿಸಿಕೊಳ್ಳಲಾಗುವುದಿಲ್ಲ!
ಒಂದು ಹಿತವಾದ ಸ್ಪರ್ಶ
ಸರ್ವಕಾಲಕ್ಕೂ ಮಡಿಲಾಗುವ ಹೆಗಲು
ಎದೆಯ ಮೇಲೆ ಕಿವಿಯಿಟ್ಟರೆ
ತನ್ನದೇ ಹೆಸರನ್ನು ಪಿಸುಗುಡುವ
ಪ್ರಾಮಾಣಿಕ ಹೃದಯ
ಜೀವನವನ್ನು ನಿಶ್ಚಿಂತೆಯಿಂದ ಜೀವಿಸಲು
ನನಗಿಷ್ಟು ಸಾಕೆಂದು
ಪ್ರೇಮಿಯೊಬ್ಬ ನಿರ್ಧರಿಸಿದ ಆ ಘಳಿಗೆಗೆ
ದೇವಾನುದೇವತೆಗಳು ಅನುಗ್ರಹಿಸುತ್ತಾರೋ ಇಲ್ಲವೋ ಗೊತ್ತಿಲ್ಲ !
ಆದರೆ,
ಅರ್ಧಕುಡಿದು ಬದಲಾಯಿಸಿಕೊಂಡ
ಕಾಪಿ ಬಟ್ಟಲುಗಳು…
ಅವಳು ಹಚ್ಚಲೆಂದೇ ಮೈಮೇಲಿನ
ಶರಟಿನಿಂದ ಕಿತ್ತುಕೊಂಡ ಗುಂಡಿಗಳು..
ಕಣ್ಣಿಗೆ ಕಸ ಬಿದ್ದ ಸುಂದರ ಸುಳ್ಳು
ಉಫ್ ಎಂದು ಊದುವ ಗಾಳಿ…
ಇವುಗಳು,
ಖಂಡಿತ ಮುಗುಳುನಗುತ್ತವೆ !
ಎರಡು ಗಂಡು ತೋಳಿನ ಗೂಡಿನಲ್ಲಿ
ಎರಡು ಹೆಣ್ಣು ತೋಳು ನೆಲೆ ಕಂಡುಕೊಳ್ಳುವುದು ಇದೆಯಲ್ಲ ಅದುವೇ ಪ್ರೇಮವೆಂದು
ತಮ್ಮ ತಮ್ಮಲ್ಲೇ
ವ್ಯಾಖ್ಯಾನಿಸಿಕೊಳ್ಳುತ್ತವೆ !
–ಮಧು ಕಾರಗಿ
ಮಧು ಹಾರಗಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದವರು. ಎಂ ಎ ಕನ್ನಡ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾವ್ಯದ ಬಗ್ಗೆ ಒಲವನ್ನು ಬೆಳೆಸಿಕೊಂಡು, ತಮ್ಮ ಶ್ರವಣ ದೋಷವನ್ನು ಮೀರಿ ಕಾವ್ಯ ಸೃಷ್ಟಿಯಲ್ಲಿ ತೊಡಗಿರುವುದು ಕವಯತ್ರಿಯ ಹೆಗ್ಗಳಿಕೆ. ‘ಕನಸುಗಳ ಚೀಲ’ ಕವನ ಸಂಕಲನ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ. ಇವರ ಸಾಹಿತ್ಯ ಕೃಷಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಜ್ಯೋತಿ ಕೇಂದ್ರೀಯ ವಿದ್ಯಾಲಯದ 2021 ನೇ ಸಾಲಿನ ‘ಜ್ಯೋತಿ ಪುರಸ್ಕಾರ’ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕವಯಿತ್ರಿ ಮಧು ಅವರ ದ್ವಿತೀಯ ಕವನ ಸಂಕಲನ “ತೆರೆಯದ ಬಾಗಿಲು ” ನಿರಂತರ ಪ್ರಕಾಶನದ ಹೆಮ್ಮೆಯ ಪ್ರಕಟಣೆ. 2024 ರಲ್ಲಿ ಡಾ ಶಶಿಕಾಂತ ರಾವ್ ಅವರು ಕೊಡಮಾಡುವ ಡಾ ಪುನೀತ್ ರಾಜ್ ಕುಮಾರ್ ಸಾಹಿತ್ಯ ದತ್ತಿ ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಲೇಖನ, ಗಜಲ್, ಚಿತ್ರಕಲೆ, ಅಕ್ಷರ ವಿನ್ಯಾಸ, ಓದು ಅವರ ಇನ್ನಿತರ ನೆಚ್ಚಿನ ಹವ್ಯಾಸಗಳು.
ಜಗತ್ತಿನ ಯಾವ ಗೋಡೆಯು ಕೇಳಿದ್ರೆ ಎಷ್ಟು ಬಿಟ್ರೆ ಎಷ್ಟು
ನಾನು ಮಾತ್ರ ಸದ್ದಿಲ್ಲದೆ ಕದ್ದಾಲಿಸಿದೇ
ಇದ್ದಿದ್ದನ್ನು ಇದ್ದ ಹಾಗೆ ಹೇಳೋದು ನನ್ನ ಸ್ವಭಾವ
ಕವಿತೆ ಸ್ವಲ್ಪ ಉದ್ದ ಉದ್ದವಾಗಿದ್ದರು ಮುದ್ದು ಮುದ್ದಾಗಿದೆ….
Thank you