ಪಂಜು ಅಂತರ್ಜಾಲ ಪತ್ರಿಕೆ ಏರ್ಪಡಿಸಿದ್ದ 2024ನೇ ಸಾಲಿನ ಕವಿತೆ ಸ್ಪರ್ಧೆಯಲ್ಲಿ ಒಟ್ಟು 188 ಕವಿಗಳು ಭಾಗವಹಿಸಿದ್ದರು. ಪ್ರಸಿದ್ಧ ಕವಿಗಳಾದ ಸವಿತಾ ನಾಗಭೂಷಣ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಪಂಜು ಕವಿತೆ ಸ್ಪರ್ಧೆಯಲ್ಲಿ ವಿಜೇತರಾದವರು:
೧. ಪ್ರಥಮ ಬಹುಮಾನ: ಗುಜರಿ ಅಂಗಡಿಯ ಪುಸ್ತಕ (ಶರಣಗೌಡ ಬಿ ಪಾಟೀಲ ತಿಳಗೂಳ)
೨. ದ್ವಿತೀಯ ಬಹುಮಾನ: ಮಾರ ನವಮಿ (ಲಿಂಗರಾಜು ಕೆ.)
೩. ತೃತೀಯ ಬಹುಮಾನ: ಅಷ್ಟಾವಂಕನ ಸ್ವಗತ (ಪ್ರಶಾಂತ್ ಬೆಳತೂರು)
ಸಮಾಧಾನಕರ ಬಹುಮಾನ ವಿಜೇತರು:
೧. ಏಸುವಿನ ಗೊಂಬೆ (ಸವಿರಾಜ್ ಆನಂದೂರು)
೨. ಕೊಳಲ ಹಿಡಿದ ಕೃಷ್ಣ.. ಅಮ್ಮ (ಸಂತೆಬೆನ್ನೂರು ಫೈಜ್ನಟ್ರಾಜ್)
೩. ಕೆಂಪು (ನಳಿನ ಬಾಲು)
೪. ದೀಪ ಹಚ್ಚಲು ಕತ್ತಲಾಗಲೇಬೇಕು (ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ)
೫. ವ್ಯಾಖ್ಯಾನ: (ಮಧು ಕಾರಗಿ)
ಬಹುಮಾನದ ವಿವರ
ಮೊದಲ ಬಹುಮಾನ: 3000 ರೂಪಾಯಿ
ಎರಡನೇ ಬಹುಮಾನ: 2000 ರೂಪಾಯಿ
ಮೂರನೇ ಬಹುಮಾನ: 1000 ರೂಪಾಯಿ
ಹಾಗು ತೀರ್ಪುಗಾರರ ಮೆಚ್ಚುಗೆ ಪಡೆದಿರುವ ಐವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.
ತೀರ್ಪುಗಾರರು: ಸವಿತಾ ನಾಗಭೂಷಣ
ಎರಡು ಮಾತು
ಕಾವ್ಯ ತೂಗಲು, ಅಳೆಯಲು ಜಡವಸ್ತು ಅಲ್ಲ. ಅದು ಸರಕಲ್ಲ, ಸಂವೇದನೆಯಾದ್ದರಿಂದ ಅದು ಹೇಗೆ ಮನುಷ್ಯನನ್ನು ಮುಟ್ಟಿತು ಎಂಬುದಷ್ಟೇ ಮುಖ್ಯ. ಅದು ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಮುಟ್ಟುವುದು ಹಾಗಾಗಿ ನನ್ನ ಆಯ್ಕೆಯೇ ಅಂತಿಮವಲ್ಲ. ೧೮೮ ಕವನಗಳನ್ನು ಎರಡೆರಡು ಬಾರಿ ಓದಿ, ಸವಿದು ಮೊದಲು ಐವತ್ತು, ನಂತರ ಹತ್ತನ್ನು ಆರಿಸಿ, ಸೋಸಿ ಮೂರು ಬಹುಮಾನ, ಐದು ಮೆಚ್ಚುಗೆ ಹೀಗೆ ವಿಂಗಡಿಸಿದೆ. ‘ಕಾವ್ಯ ಎಂದರೆ ಭಾವಸ್ಫೋಟ’ ಹೀಗೆಲ್ಲಾ ಆರಿಸುವುದು ವಿಂಗಡಿಸುವುದು ಬಲು ಕಷ್ಟ. ನಾವೆಲ್ಲ ಬರೆಯುತ್ತಿರುವುದು ಅಕ್ಷರ ರೂಪದಲ್ಲಿರುವ ರಚನೆಗಳು. ಅಕ್ಷರಗಳಿಗೆ ಜೀವ ಬಂದರೆ ಕಾವ್ಯ. ಬಹುಶಃ ಜೀವಮಾನದಲ್ಲಿ ಒಂದೋ ಎರಡೋ ಕಾವ್ಯಶಕ್ತಿ ಇರುವ ಕವನಗಳನ್ನು ಬರೆಯಲು ಸಾಧ್ಯವೇನೋ?! ರಚನೆಗಳಿಂದ ಕಾವ್ಯದತ್ತ ಸಾಗುವ ದಾರಿ ಇದೆಯಲ್ಲಾ, ದಾರಿ ನಡೆಯುವುದು… ಅದೇ ರೋಮಾಂಚನ. ಎಲ್ಲೋ ಹೇಗೋ ಒಂದು ಕವಿತೆ ಜೀವ ತಳೆದು ಸಹೃದಯರ ಮನಸ್ಸನ್ನ ಅಪಹರಿಸುವುದು, ಉಳಿವುದು. ಅಂತಹ ಕಾವ್ಯ ರಚನೆ ಸಾಧ್ಯವಾಗಲಿ ಎಂದು ಹಾರೈಸುವೆ. ಕವಿ ಬಳಗಕ್ಕೆ ಶುಭಾಶಯಗಳು…
-ಸವಿತಾ ನಾಗಭೂಷಣ
ಪ್ರಶಸ್ತಿ ವಿಜೇತರ ಪರಿಚಯ
ಶರಣಗೌಡ ಬಿ ಪಾಟೀಲ ಮೂಲತಃ ಕಲ್ಬುರ್ಗಿ ಜಿಲ್ಲೆಯ ತಿಳಗೂಳದವರು ಸ್ನಾತಕೋತ್ತರ ಪದವಿಧರರು ಪ್ರಸ್ತುತ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದಾರೆ. ಕಥೆ, ಕಾದಂಬರಿ, ಲಲಿತ ಪ್ರಬಂಧ ಸೇರಿ ಹಲವು ಕೃತಿ ರಚಿಸಿದ್ದಾರೆ. ಇವರ ಹಿಟ್ಟಿನ ಗಿರಣಿ ಕಿಟ್ಟಪ್ಪ ಲಲಿತ ಪ್ರಬಂಧ ಸಂಕಲನಕ್ಕೆ ಕ,ಸಾ,ಪ, ಮಾಡಿಕರಾವ ಸಾಹಿತ್ಯ ದತ್ತಿ ಪ್ರಶಸ್ತಿ ದೊರೆತಿದೆ, ಕನ್ನಡ ನಾಡು ಲೇಖಕ ಓದುಗರ ಸಂಘದಿಂದ ಕಾದಂಬರಿ ಪ್ರಶಸ್ತಿ, ಗುರುಕುಲ ಟ್ರಸ್ಟಿನಿಂದ ಸಾಹಿತ್ಯ ಶರಭ ಪ್ರಶಸ್ತಿ , ಸಾಹಿತ್ಯ ಸೇವಾ ರತ್ನ ಪ್ರಶಸ್ತಿ , ಕಥಾ ಪುರಸ್ಕಾರ, ಉತ್ತಮ ಶಿಕ್ಷಕ ಪ್ರಶಸ್ತಿ. ಸುಭಾಷಚಂದ್ರ ಪಾಟೀಲ ಜನ ಕಲ್ಯಾಣ ಟ್ರಸ್ಟಿನ ಬಸವ ಪುರಸ್ಕಾರ ಪಡೆದುಕೊಂಡಿದ್ದಾರೆ.
ಲಿಂಗರಾಜು ಕೆ. ಮಧುಗಿರಿ ತಾಲ್ಲೂಕಿನ ಜಡೇಗೊಂಡನಹಳ್ಳಿ ಗ್ರಾಮದ ನಿವಾಸಿ. ವೃತ್ತಿಯಲ್ಲಿ ಶಿಕ್ಷಕರಾಗಿ, ಆಂಧ್ರ-ಕರ್ನಾಟಕ ಗಡಿಭಾಗದ ಜನಕಲೋಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಶಸ್ವಿ ಶಿಕ್ಷಕರಾಗಿ, ಅನುವಾದ, ಲೇಖನ, ಕಥೆ, ಕವನ ಬರಹಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಪ್ರಶಾಂತ್ ಬೆಳತೂರು ಮೂಲತಃ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಕೆ.ಬೆಳತೂರು ಗ್ರಾಮದವರು. ಪ್ರಸ್ತುತ ಶ್ರೀ ಟಿ ಎನ್ ಎನ್ ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇವರ ಹಲವು ಕವಿತೆಗಳು ಮತ್ತು ಸಣ್ಣ ಕತೆಗಳು ವಿವಿಧ ಜಾಲತಾಣ ಪತ್ರಿಕೆಗಳಲ್ಲಿ ಪ್ರಕಟಗೊಂಡು ಮೆಚ್ಚುಗೆ ಪಡೆದಿವೆ..!
ಸವಿರಾಜ್ ಆನಂದೂರು, ಹುಟ್ಟಿದ್ದು ಆಗುಂಬೆ ಸಮೀಪದ ಆನಂದೂರಿನಲ್ಲಿ. ಓದಿದ್ದು ಶೃಂಗೇರಿ, ಶಿವಮೊಗ್ಗ, ಬೆಂಗಳೂರುಗಳಲ್ಲಿ. ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರ, ಹವ್ಯಾಸಿ ತಾಳಮದ್ದಳೆ ಅರ್ಥಧಾರಿ, ರಂಗಭೂಮಿ ಕಲಾವಿದ. ಪ್ರಸ್ತುತ ಬೆಂಗಳೂರಿನ ಗೋಪಾಲನ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ವೃತ್ತಿ. “ಬ್ಲೂಬುಕ್” ಮತ್ತು “ಗಂಡಸರನ್ನು ಕೊಲ್ಲಿರಿ” ಪ್ರಕಟಿತ ಕೃತಿಗಳು. “ಗಂಡಸರನ್ನು ಕೊಲ್ಲಿರಿ” ಕೃತಿಗೆ ೨೦೨೩ರ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಸಂದಿದೆ.
ಸೈಯದ್ ಫೈಜುಲ್ಲಾ ಇವರ ಕಾವ್ಯನಾಮ ಸಂತೆಬೆನ್ನೂರು ಫೈಜ್ನಟ್ರಾಜ್. ಇವರ ಊರು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು. ವೃತ್ತಿಯಲಿ ಕನ್ನಡ ಅಧ್ಯಾಪಕರು. ’ಎದೆಯೊಳಗಣ ತಲ್ಲಣ’, ’ಬುದ್ಧನಾಗ ಹೊರಟು’ ಕವನ ಸಂಕಲನ, ’ಮಂತ್ರದಂಡ, ಸ್ನೇಹದ ಕಡಲಲ್ಲ’ ಮಕ್ಕಳ ಕೃತಿಗಳು ಸೇರಿದಂತೆ ಹನ್ನೊಂದು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಸಂಚಯ ಕಾವ್ಯ ಪುರಸ್ಕಾರ, ಹಾಮಾನಾ ಕಥಾ ಪುರಸ್ಕಾರ, ಸ್ನೇಹಶ್ರೀ ಪ್ರಶಸ್ತಿ, ಸಂಕ್ರಮಣ ಪ್ರಶಸ್ತಿ, ಗವಿಸಿದ್ದ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ, ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಹಾಗು ಎರಡು ಬಾರಿ ಕಾವ್ಯಕ್ಕೆ ಹಾಸನ ರಾಜ್ಯ ಪ್ರಶಸ್ತಿ ಸಂದಿವೆ.
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹುಬ್ಬಳ್ಳಿಯವರಾಗಿದ್ದು, ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದ ಸ್ನಾತಕೋತ್ತರ ವಿಭಾಗದ ನಿರ್ದೇಶಕಿಯಾಗಿ, ಮೂರುಸಾವಿರ ಮಠದ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕಿಯಾಗಿ ಕಳೆದ ೨೫ ವರ್ಷಗಳಿಂದ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಧ್ಯಯನ, ಅಧ್ಯಾಪನ, ಬೋಧನೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಚನ ಅಧ್ಯಯನ, ಹಳಗನ್ನಡ, ಜಾನಪದ, ಮಹಿಳಾಸಾಹಿತ್ಯ, ಭಾಷಾಶಾಸ್ತ್ರ ಅಧ್ಯಯನ ಮುಂತಾದ ಕ್ಷೇತ್ರಗಳಲ್ಲಿ ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. “ಶ್ರೀ ಎಂ.ಡಿ.ಗೋಗೇರಿ ಸಮಗ್ರ ಸಾಹಿತ್ಯ”, “ಗರಿಕೆ ಅಲಗಿನ ಇಬ್ಬನಿ,” “ನುಂಗಿದಷ್ಟು ನಂಜು,” “ನೀರು ಕಚ್ಚಿದ ಕೆಂಡ,” ನಮ್ಮ ಮಹಿಳೆ ನಮ್ಮ ಹೆಮ್ಮೆ, ನಾವೇನು ಕಮ್ಮಿ, ಕಾವ್ಯದರಮನೆಯೊಳಗೆ, ಸಿರಿಗಂಧ, ಜೀವನ್ಮುಖಿ, ಉರಿಯೊಡಲು, ಧರೆಗಿಳಿದ ಶರಣೆಯರು, ದಿವ್ಯಾತ್ಮ , ಪ್ರಕೃತಿ , ಕನ್ನಡ ಸಾಹಿತ್ಯ ಅಧ್ಯಯನ : ಭಿನ್ನ ಆಯಾಮಗಳು. ಇವರ ಪ್ರಕಟಿತ ಕೃತಿಗಳಾಗಿವೆ. ಶಿಕ್ಷಣ ಇಲಾಖೆಗಳಿಂದ, ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಹಾಗೂ ಸನ್ಮಾನಗಳಿಗೆ ಭಾಜನರಾಗಿದ್ದಾರೆ. “ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಲಗಾ, ಉತ್ತಮ ಮಹಿಳಾ ಪುರಸ್ಕಾರ”, “ಕಿತ್ತೂರು ವೀರರಾಣಿ ಚನ್ನಮ್ಮ ರಾಜ್ಯಮಟ್ಟದ ಪ್ರಶಸ್ತಿ” “ ಬೇಂದ್ರೆ ನುಡಿ ಸಿರಿ ಪ್ರಶಸ್ತಿ” ಹೀಗೆ ಅನೇಕ ಗೌರವ ಸನ್ಮಾನ , ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ನಳಿನ ಬಾಲಸುಬ್ರಹ್ಮಣ್ಯ, ಶಿವಮೊಗ್ಗದವರು. ಗೃಹಿಣಿಯಾಗಿ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದಾರೆ ಸಿರಿಗನ್ನಡ ವೇದಿಕೆ ಶಿವಮೊಗ್ಗದ ನಗರಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಬೆಳದಿಂಗಳು”. ಕವನ ಸಂಕಲನ, “ಕಾರ್ಮೋಡ ಸರಿದಾಗ” ನೀಳ್ಗತಾಸಂಕಲನ, “ಕಾಲಾಯ ತಸ್ಮೈ ನಮಃ” ಸಣ್ಣ ಕಥೆಗಳ ಸಂಕಲನ ಇವರ ಪ್ರಕಟಿತ ಕೃತಿಗಳು. “ಆಶಾ ಕಿರಣ” ಕಥಾಸಂಕಲನ, “ಮನೋಶರಧಿ” ಕವನಸಂಕಲನ ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು.
ಮಧು ಹಾರಗಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದವರು. ಎಂ ಎ ಕನ್ನಡ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾವ್ಯದ ಬಗ್ಗೆ ಒಲವನ್ನು ಬೆಳೆಸಿಕೊಂಡು, ತಮ್ಮ ಶ್ರವಣ ದೋಷವನ್ನು ಮೀರಿ ಕಾವ್ಯ ಸೃಷ್ಟಿಯಲ್ಲಿ ತೊಡಗಿರುವುದು ಕವಯತ್ರಿಯ ಹೆಗ್ಗಳಿಕೆ. ‘ಕನಸುಗಳ ಚೀಲ’ ಕವನ ಸಂಕಲನ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ. ಇವರ ಸಾಹಿತ್ಯ ಕೃಷಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಜ್ಯೋತಿ ಕೇಂದ್ರೀಯ ವಿದ್ಯಾಲಯದ 2021 ನೇ ಸಾಲಿನ ‘ಜ್ಯೋತಿ ಪುರಸ್ಕಾರ’ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕವಯಿತ್ರಿ ಮಧು ಅವರ ದ್ವಿತೀಯ ಕವನ ಸಂಕಲನ “ತೆರೆಯದ ಬಾಗಿಲು ” ನಿರಂತರ ಪ್ರಕಾಶನದ ಹೆಮ್ಮೆಯ ಪ್ರಕಟಣೆ. 2024 ರಲ್ಲಿ ಡಾ ಶಶಿಕಾಂತ ರಾವ್ ಅವರು ಕೊಡಮಾಡುವ ಡಾ ಪುನೀತ್ ರಾಜ್ ಕುಮಾರ್ ಸಾಹಿತ್ಯ ದತ್ತಿ ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಲೇಖನ, ಗಜಲ್, ಚಿತ್ರಕಲೆ, ಅಕ್ಷರ ವಿನ್ಯಾಸ, ಓದು ಅವರ ಇನ್ನಿತರ ನೆಚ್ಚಿನ ಹವ್ಯಾಸಗಳು.
ಪಂಜು ಬಳಗದ ಟಿಪ್ಪಣಿ
ಕತೆ, ಕವಿತೆ, ಕಾದಂಬರಿ, ಪ್ರೇಮ ಪತ್ರ, ವಿಮರ್ಶೆ, ಹಸ್ತಪ್ರತಿ, ಚುಟುಕ, ಸೃಜನಶೀಲ ಬರವಣಿಗೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳ ಸ್ಪರ್ಧೆಗಳನ್ನು ಕನ್ನಡದ ಲೇಖಕರಿಗೆ ಅನೇಕ ಪತ್ರಿಕೆಗಳು, ಪ್ರಕಾಶನ ಸಂಸ್ಥೆಗಳು, ಸಂಘ ಸಂಸ್ಥೆಗಳು ಕಾಲಕಾಲಕ್ಕೆ ನಡೆಸುತ್ತಾ ಬಂದಿವೆ. ಅಂತಹ ಸ್ಪರ್ಧೆಗಳಿಂದ ಅನೇಕ ಅಧ್ಬುತವಾದ ಲೇಖಕರು ಕನ್ನಡ ಸಾರಸ್ವತ ಲೋಕಕ್ಕೆ ದಕ್ಕಿದ್ದಾರೆ. ಸ್ಪರ್ಧೆಗಳೆಂದರೆ ಹಣ, ಹಣವೆಂದರೆ ಪ್ರತಿಷ್ಠೆ, ಖ್ಯಾತಿ ಎನ್ನುವಂತಹ ವಾತಾವರಣ ಇತ್ತೀಚೆಗೆ ದಿಡೀರನೆ ಕನ್ನಡ ಸಾಹಿತ್ಯ ಪಾಳಯದಲ್ಲಿ ಕಾಣಿಸಿಕೊಂಡಿದೆ. ಈ ಬೆಳವಣಿಗೆ ಲೇಖಕರ ಸೃಜನಶೀಲತೆಗೆ ಬಹು ದೊಡ್ಡ ಪೆಟ್ಟನ್ನು ನೀಡುವ ಗುಣ ಹೊಂದಿದೆ. ಅದರಲ್ಲೂ ಸ್ಪರ್ಧೆಯಲ್ಲಿ ಸೋತ ಲೇಖಕರು ಬರೆಯುವುದನ್ನೇ ಬಿಟ್ಟುಬಿಡುವ ಹಂತವನ್ನು ತಲುಪಿರುವ ಅನೇಕ ನಿದರ್ಶನಗಳು ನಮಗೆ ಕಾಣ ಸಿಗುತ್ತವೆ. ಆದರೂ ಈ ಹಣ, ಖ್ಯಾತಿಗಳಾಚೆಗೂ ಆತ್ಮತೃಪ್ತಿಗಾಗಿಯೇ ಬರವಣಿಗೆಯಲ್ಲಿ ತೊಡಗಿರುವ ಲೇಖಕರ ಬಹು ದೊಡ್ಡ ದಂಡು ತೆರೆಮರೆಯಲ್ಲೇ ಕನ್ನಡದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಬರೆಯುವ ವೇದಿಕೆಯನ್ನು ಬರಹಗಾರರಿಗೆ ಒದಗಿಸುವ ಜೊತೆಗೆ ಪಂಜು ಪುಟ್ಟ ಪುಟ್ಟ ಸ್ಪರ್ಧೆಗಳನ್ನು ಆಗಾಗ ನಡೆಸುತ್ತಾ ಬಂದಿದೆ. ಪಂಜುವಿನ ಸ್ಪರ್ಧೆಗಳಲ್ಲಿ ಹೆಚ್ಚೇನು ಹಣವಿರುವುದಿಲ್ಲ ಆದರೆ ಲೇಖಕರುಗಳ ಭಾಗವಹಿಸುವಿಕೆ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ.
೨೦೨೪ ರ “ಪಂಜು ಕವಿತೆ ಸ್ಪರ್ಧೆ”ಯಲ್ಲಿ ೧೮೮ ಕವಿಗಳು ಭಾಗವಹಿಸಿದ್ದರು. ಅವರುಗಳ regional representation ಗಮನಿಸಿದಾಗ ಕರ್ನಾಟಕದ ಪ್ರತಿ ಜಿಲ್ಲೆಗಳೂ ಸೇರಿದಂತೆ ಹೊರ ರಾಜ್ಯಗಳಲ್ಲಿ ವಾಸಿಸುವ ಕವಿಗಳೂ ಸಹ ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ವಿಶೇಷ. ಇಂತಹುದೊಂದು ಸ್ಪರ್ಧೆಗೆ ತಮ್ಮ ಅಮೂಲ್ಯ ಸಮಯ ವ್ಯಯಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಅಷ್ಟೂ ಕವಿಗಳಿಗೆ ಅನಂತ ವಂದನೆಗಳು. ನಮ್ಮ ನಡುವಿನ ಮಾತೃ ಹೃದಯದ ಕವಿ ಶ್ರೀಮತಿ ಸವಿತಾ ನಾಗಭೂಷಣರವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ನಾವು ಕಳುಹಿಸಿಕೊಟ್ಟ ಅಷ್ಟೂ ಕವಿತೆಗಳನ್ನು ಅವರು ಓದಿ, ಸವಿದು ತೀರ್ಪು ನೀಡಿರುವುದು ತುಂಬಾ ಖುಷಿಯ ವಿಚಾರ. ಒಬ್ಬ ಹಿರಿಯರಾಗಿ ಕಿರಿಯರಿಗೆ ಈ ರೀತಿ ಸಪೋರ್ಟ್ ಆಗಿ ಅವರು ನಿಂತದ್ದನ್ನು ಪಂಜು ಬಳಗ ಯಾವತ್ತಿಗೂ ನೆನಪಿನಲ್ಲಿಡುತ್ತದೆ. ಈ ಕವಿತೆ ಸ್ಪರ್ಧೆಗೆ ತೀರ್ಪುಗಾರರಾಗಿ ಒಪ್ಪಿ ತಮ್ಮ ತೀರ್ಪನ್ನು ನೀಡಿದ ಸವಿತಾ ಮೇಡಂ ಅವರಿಗೆ ಪಂಜು ಬಳಗದ ಪರವಾಗಿ ಅನೇಕ ವಂದನೆಗಳು. ಹಾಗೆಯೇ ಅವರ ಹೆಸರನ್ನು ನಮಗೆ ಸೂಚಿಸಿದ ಕವಯತ್ರಿ ಶ್ರೀಮತಿ ಭಗವತಿ ಎಂ ಆರ್ ಅವರಿಗೂ ಸಹ ವಂದನೆಗಳು. ಕೊನೆಯದಾಗಿ, ಈ ಸ್ಪರ್ಧೆಯ ಕೇಂದ್ರ ಬಿಂದುಗಳಾಗಿರುವ ಈ ಸ್ಪರ್ಧೆಯಲ್ಲಿ ವಿಜೇತರಾಗಿರುವ ಎಲ್ಲಾ ಕವಿಗಳಿಗೂ ಪಂಜು ಬಳಗದ ವತಿಯಿಂದ ಅನೇಕ ಶುಭಾಶಯಗಳು.. ಈ ಸ್ಪರ್ಧೆಯಲ್ಲಿ ಗೆದ್ದಿರುವ ಗೆದ್ದಿರದ ಎಲ್ಲ ಕವಿಗಳ ಸಾಹಿತ್ಯ ಕೃಷಿ ಯಾವತ್ತಿಗೂ ಸಮೃದ್ಧವಾಗಿ ಮುಂದುವರೆಯಲಿ ಎಂದು ಹಾರೈಸುವೆ…
ಧನ್ಯವಾದಗಳೊಂದಿಗೆ
ಡಾ. ನಟರಾಜು ಎಸ್ ಎಂ
(ಪಂಜು ಬಳಗದ ಪರವಾಗಿ)
ವಿಜೇತರೆಲ್ಲರಿಗು ಅಭಿನಂದನೆಗಳು. ಪಂಜು ಬಳಗಕ್ಕೆ ಧನ್ಯವಾದಗಳು. ಸವಿತಾ ನಾಗಭೂಷಣ ಅವರ ಮಾತು ಅರ್ಥ ಪೂರ್ಣವಾಗಿವೆ. ವಿಜೇತ ಕವಿತೆಗಳನ್ನು ಓದಲು ಒದಗಿಸಿದರೆ ಖುಷಿಯಾಗುತ್ತದೆ.
ಇದು ಒಂದು ಅಮೂಲ್ಯ ಕೆಲಸ.
ಆರೋಗ್ಯಕರ ಸ್ಪರ್ಧೆ. ತೀರ್ಪುಗಾರರಾಗಿ ಸವಿತಾ ನಾಗಭೂಷಣರನ್ನು ಆಯ್ಕೆ ಮಾಡಿದ್ದು ಸೂಕ್ತ. ಎಲ್ಲ ಸ್ಪರ್ಧಿಗಳಿಗೆ ಹಾಗು ಬಹುಮಾನಿತ ಕವಿಗಳಿಗೆ, ಪಡೆದ ಮತ್ತು ಅದರಾಚೆಗಿನ ಎಲ್ಲ ತಾಯಿ ಹೃದಯದ ಕವಿಗಳಿಗೆ ಅಭಿನಂದನೆ.
ಎಂ.ಜವರಾಜ್
ವಿಜೇತರಿ್ಎ ಅಭಿನಂದನೆಗಳು🌹. ಫೈನಲ್‌ಪಟ್ಟಿಗೆ ಆಯ್ಕೆಯಾದ ಕವಿತೆಯ ಕವಿಗಳಿಗೂ ಶುಭಹಾರೈಕೆಗಳು💐
ಸರ್ವರಿಗೂ ಅಭಿನಂದನೆಗಳು
ಎಲ್ಲರಿಗೂ ಅಭಿನಂದನೆಗಳು.ಶುಭವಾಗಲಿ.