1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಡಾ. ಚಂದ್ರಶೇಖರ ಕಂಬಾರರು ಹಲವು ಕ್ಷೇತ್ರಗಳಲ್ಲಿ ಪರಿಣತರು. ಅಸಂಖ್ಯಾತ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು. ಸಾಹಿತ್ಯ, ಸಂಗೀತ, ರಂಗಭೂಮಿ,ಸಿನಿಮಾ ಎಲ್ಲವೂ ಅವರ ತೆಕ್ಕೆಗೆ ಸಿಕ್ಕಿ ಹೆಜ್ಜೆ ಗುರುತನ್ನು ಮೂಡಿಸಿಕೊಂಡವು. ಧಾರವಾಡದಲ್ಲಿ ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದು ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-91) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊಟ್ಟ ಮೊದಲ ಕುಲಪತಿಗಳಾಗಿ (1992-1998) ಕಾರ್ಯ ನಿರ್ವಹಿಸಿದರು.
ಕೃತಿಗಳು : ಹೇಳತೆನೆ ಕೇಳ, ತಕರಾರಿನವರು, ಬೆಳ್ಳಿಮೀನು,ಅಕ್ಕಕ್ಕು ಹಾಡುಗಳೇ, ಎಲ್ಲಿದೆ ಶಿವಾಪುರ, ಮತ್ತೆ ಮತ್ತೆ ಶಿವಾಪುರ(ಕವನ ಸಂಗ್ರಹಗಳು), ಋಷ್ಯಶೃಂಗ, ಜೋಕುಮಾರ ಸ್ವಾಮಿ, ಜೈಸಿದ್ದನಾಯಕ, ಕಾಡುಕುದುರೆ, ಸಿರಿಸಂಪಿಗೆ, ತುಕ್ರನ ಕನಸು, ಮಹಾಮಾಯಿ,ಶಿವರಾತ್ರಿ, ಮಹಮೂದ್ ಗವಾನ್ (ನಾಟಕಗಳು), ಕರಿಮಾಯಿ, ಸಿಂಗಾರೆವ್ವ ಮತ್ತು ಅರಮನೆ, ಶಿಖರ ಸೂರ್ಯ, ಶಿವನ ಡಂಗುರ, ಚಾಂದಬೀ ಸರಕಾರ (ಕಾದಂಬರಿಗಳು).
ಚಂದ್ರಶೇಖರ ಕಂಬಾರರ ಮೊದಲ ಕಾದಂಬರಿ ಕರಿಮಾಯಿ. ಇದೊಂದು ಸೊಗಸಾದ ಓದಿಗೆ ಅನುವು ಮಾಡಿಕೊಡುವ ಕಾದಂಬರಿ. ಗ್ರಾಮೀಣದ ಬದುಕಿನಲ್ಲಿ ಸಂಭವಿಸುವ ಘಟನೆಗಳನ್ನು ಕಂಬಾರರು ಚಿತ್ರವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಕಂಬಾರರ ಕಲ್ಪನೆಯಲ್ಲಿ ಅರಳಿ ಶಿವಾಪುರ ನಕಾಶೆಯಲ್ಲಿ ಇರುವ ಊರಲ್ಲ. ಇದೊಂದು ಕಾಲ್ಪನಿಕ ಗ್ರಾಮ.
’ಕರಿಮಾಯಿ’ ಕೇವಲ ತನ್ನ ಕಥನ ಸ್ವರೂಪದಲ್ಲಿ ಆಧುನಿಕ ಓದುಗರನ್ನು ಮೆಚ್ಚಿಸಬಯಸುವ ಕೃತಿಯಲ್ಲ. ಅದು ಅನೇಕ ಮುಖ್ಯ ಸಂಗತಿಗಳನ್ನು ತನ್ನ ಮೈಮೇಲೆ ಹಾಕಿಕೊಂಡಿರುವ ಮಹತ್ವಾ ಕಾಂಕ್ಷಿ ರಚನೆ. ಹೊಸ ಮೌಲ್ಯಗಳ ಪ್ರವೇಶದಿಂದ ಒಂದು ನಂಬಿಕೆಗಳ ಲೋಕ ಕಂಪಿಸುವ, ಸಮುದಾಯ ಪ್ರಜ್ಞೆ ಆಘಾತಕ್ಕೆ ಒಳಗಾಗುವ, ಹೊಸದೊಂದು ಆರ್ಥಿಕ ಸಾಮಾಜಿಕ ಜೀವನ ಕ್ರಮದ ಮುನ್ಸೂಚನೆ ಕಾಣಿಸುವ ಚಿತ್ರಗಳನ್ನು ಅದು ದಟ್ಟವಾಗಿ ಆದರೆ ತನಗೇ ಅನನ್ಯವೆನ್ನಿಸುವ ಕಾಮಿಕ್ ಧಾಟಿಯಲ್ಲಿ ಕಟ್ಟಿಕೊಡುತ್ತದೆ. ‘ಕರಿಮಾಯಿ’ಯ ಮಿಥ್ ಒಡೆಯುವುದಕ್ಕೂ, ಶಿವಾಪುರದ ಜನರ ಸಮುದಾಯ ಪ್ರಜ್ಞೆ ಅಳ್ಳಕಗೊಳ್ಳುವುದಕ್ಕೂ ಸಂಬಂಧ ಇದ್ದೇ ಇದೆ.
ಹೊಸ ಮೌಲ್ಯಗಳು ಕೇವಲ ಗ್ರಾಮಪಂಚಾಯಿತಿ ಮೂಲಕ ಬರುವುದಿಲ್ಲ. ಅವು ಬೆಳಗಾವಿ ಸೃಷ್ಟಿಸುವ ಹೊಸ ಕನಸುಗಳ ರೂಪದಲ್ಲಿಯೂ ಬರುತ್ತವೆ. ಗುಡಸೀಕರ ಶಿವಾಪುರಕ್ಕೆ ತರುವ ವಿದೇಶೀ ಬ್ರಾಂದಿ, ಸಿಗರೇಟು ಮುಂತಾದ ಅನೇಕ ಭೌತಿಕ ವಸ್ತುಗಳ ರೂಪದಲ್ಲಿ ಕಾಣಿಸಿಕೊಳ್ಳುವಂತೆ, ಪೊಲೀಸ್ ಸ್ಟೇಷನ್, ಕೋರ್ಟ್ ಮುಂತಾದ ವಸಾಹತುಶಾಹಿ ಸಂಸ್ಥೆಗಳ ರೂಪದಲ್ಲಿಯೂ ವ್ಯಕ್ತವಾಗುತ್ತವೆ. ಒಂದು ಕಡೆ ಬ್ರಿಟಿಷ್ ಸರಕಾರ; ಇನ್ನೊಂದು ಕಡೆ ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳುವಳಿ. ಒಂದು ಪರಂಪರಾಗತ ಜಮೀನ್ದಾರಿ ವ್ಯವಸ್ಥೆಗೆ ಒಗ್ಗಿಹೋದ ಜನಪದಕ್ಕೆ ಈ ಎರಡೂ ಹೊಸವು; ಅನ್ಯ ಸ್ವಾರಸ್ಯದ ಸಂಗತಿ ಎಂದರೆ ಹಳೆಯ ವ್ಯವಸ್ಥೆಯ ಪ್ರತಿನಿಧಿಯಾದ ಗೌಡ, ಹೊಸ ವ್ಯವಸ್ಥೆಯ ಪ್ರತಿನಿಧಿಯಾದ ಗುಡಸೀಕರ ಇಬ್ಬರೂ ಗಾಂಧಿಯನ್ನು ನೆನಸುತ್ತಾರೆ! ಕಾದಂಬರಿಯು ವಸಾಹತುಶಾಹಿ ಕೌರವನ್ನೂ, ಸ್ವರಾಜ್ಯದ ಹಂಬಲಿಕೆಯನ್ನೂ ಸೂಕ್ಷ್ಮವಾಗಿ ಧ್ವನಿಸುತ್ತದೆ. ಹಳೆಯ ವ್ಯವಸ್ಥೆ ಅದೆಷ್ಟೇ ಸುಂದರವಾಗಿ ತೋರುತ್ತಿರಲಿ, ಹೊಸ ವ್ಯವಸ್ಥೆ ಎಷ್ಟೇ ಭಯಾನಕವಾಗಿ ಕಾಣಿಸುತ್ತಿರಲಿ ಅಥವಾ ಅದರ ಬಗ್ಗೆ ವಿರೋಧವಿರಲಿ, ಚಲನೆ ಅನಿವಾರ್‍ಯವೆಂಬ ಸತ್ಯವನ್ನು ಒಂದು ನಿರ್ಣಾಯಕ ಐತಿಹಾಸಿಕ ಸಂದರ್ಭದ ಹಿನ್ನೆಲೆಯಲ್ಲಿ ಕಾದಂಬರಿ ಧ್ವನಿಸುತ್ತದೆ ಎಂದು ಕಾದಂಬರಿಯ ಬಗ್ಗೆ ವಿಮರ್ಶಕ ಟಿ.ಪಿ. ಅಶೋಕ್ ಅವರ ಅಭಿಪ್ರಾಯ ಪಟ್ಟಿದ್ದಾರೆ.
ಕಥಾ ವಸ್ತು ಸ್ವಾತಂತ್ರ್ಯ ನಂತರ ಗ್ರಾಮೀಣ ಸಮುದಾಯದ ಮನೋಭಾವನೆ ಹಾಗೂ ಸಂಸ್ಕೃತಿ ಗಳಲ್ಲಿ ಆಗುವ ಪಲ್ಲಟದ ಬಗ್ಗೆ ಗ್ರಾಮೀಣ ಭಾಷೆಯಲ್ಲಿಯೇ ನಿರೂಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಒಂದು ಪುಟ್ಟ ಗ್ರಾಮ ಶಿವಪುರ ಆ ಗ್ರಾಮದ ಗ್ರಾಮ ದೇವತೆಯೇ ಕರಿಮಾಯಿ. ಕಾದಂಬರಿಯಲ್ಲಿ ಬರುವ ಪ್ರಮುಖ ಪಾತ್ರಗಳು ಊರಿನ ಗೌಡರು, ದತ್ತಪ್ಪ, ಲಗುಮವ್ವ( ಮಂಗಳಮುಖಿ) ಗುಡಿಸಿಕರ್ (ವಕೀಲ), ಗ್ರಾಮೀಣ ಭಾಗದ ಜನಸಮುದಾಯದ ಪೂರ್ವನಂಬಿಕೆಗಳು ಹಾಗೂ ಹೊಸದನ್ನು ಒಪ್ಪಿಕೊಳ್ಳುವಂತ ಸಂದರ್ಭದಲ್ಲಿ ಜನರ ಮನಸ್ಥಿತಿ ಹಾಗೂ ಅದನ್ನು ಉಪಯೋಗಿಸುವ ರಾಜಕೀಯ ವ್ಯಕ್ತಿಗಳ ಮನಸ್ಥಿತಿಯು ಇಲ್ಲಿ ಚಿತ್ರತವಾಗಿದೆ. ಹೊಸ ಮೌಲ್ಯಗಳು ಆಚರಣೆಗಳು ಸಮುದಾಯದಲ್ಲಿ ಪ್ರವೇಶವಾಗುವುದರಿಂದ ಈ ಮೊದಲೇ ರೂಢಿ ಇರುವ ನಂಬಿಕೆಗಳ ಮೇಲಾಗುವ ಬದಲಾವಣೆಗಳನ್ನು ಈ ಕಾದಂಬರಿಯಲ್ಲಿ ದಟ್ಟವಾಗಿ ಕಾಣಬಹುದು.
ಚಂದ್ರಶೇಖರ ಕಂಬಾರರ ಕಿರುಕಾದಂಬರಿ ’ಜೀಕೆ ಮಾಸ್ತರರ ಪ್ರಣಯ ಪ್ರಸಂಗ’. ಪ್ರೀತಿ-ಪ್ರೇಮ-ಪ್ರಣಯ ಪ್ರಸಂಗವನ್ನು ನವಿರಾದ ಭಾಷೆಯಲ್ಲಿ ಚಿತ್ರಿತವಾಗಿದೆ. ವಿದ್ಯಾರ್ಥಿಗಳಿಗೆ ಪ್ರಿಯರಾಗಿದ್ದ ಜೀಕೆ ಮಾಸ್ತರರು ಪ್ರೀತಿಯ ಸುಳಿಗೆ ಸಿಲುಕಿದ ಪ್ರಸಂಗ ಕಥಾಹಂದರದಲ್ಲಿದೆ. ಕಾದಂಬರಿಯ ಒಂದು ಭಾಗ ಅದರ ಸ್ವರೂಪವನ್ನು ನೀಡುತ್ತದೆ.
’ಪ್ರೇಮಕ್ಕೆ ದಿವ್ಯಶಕ್ತಿಯನ್ನಿತ್ತು ಅದನ್ನು ಮಾನವ ಹೃದಯದಲ್ಲಿಟ್ಟ ಶಿವಲಿಂಗ ದೇವರ ಮಹಿಮೆಗೆ ಶರಣು ಹೇಳೋಣ. ಒಣ ನೆಲದಲ್ಲಿ ನೀರು ಚಿಮ್ಮೋದನ್ನು, ಉಸುಕಿನಲ್ಲಿ ಹಸಿರಾಡೋದನ್ನು, ಕಲ್ಲು ಕರಗುವುದನ್ನು ನಾವು ಪವಾಡ ಎನ್ನುತ್ತೇವೆ. ಜೀಕೆ ಮಾಸ್ತರರ ಹೃದಯದಲ್ಲಿ, ಅದು ಅಂಥ ವಯಸ್ಸಾದ ಹೃದಯದಲ್ಲಿ, ಪ್ರೇಮ ಪಲ್ಲವಿಸಿದ್ದನ್ನ, ಅದು ಹಾಹಾ ಅನ್ನುವುದರೊಳಗೆ ಹಬ್ಬಿ ಹೂ ಬಿಟ್ಟದ್ದನ್ನ ಪವಾಡವೇ ಎಂದು ನಾವು ಹೇಳಬಯಸುತ್ತೇವೆ..’
‘ಸಿಂಗಾರೆವ್ವ ಮತ್ತು ಅರಮನೆ’ ಚಂದ್ರಶೇಖರ ಕಂಬಾರ ಅವರ ಜನಪ್ರಿಯ ಕಾದಂಬರಿ. ಗ್ರಾಮೀಣ ಪ್ರದೇಶದ ದೇಸಗತಿ ಮನೆತನದಲ್ಲಿ ನಡೆಯುವ ಘಟನೆಗಳನ್ನು ಈ ಕಾದಂಬರಿ ಚಿತ್ರಿಸುತ್ತದೆ. ಕಾದಂಬರಿಯ ನಿರೂಪಕ ಸಿಂಗಾರೆವ್ವನಿಗೆ ಜೊತೆಗಾತಿಯಾಗಿದ್ದ ಶೀನಿಂಗವ್ವಳಿಂದ ಮಾಹಿತಿ ಪಡೆಯುವ ಮೂಲಕ ಆರಂಭವಾಗುವ ಕಾದಂಬರಿಯು ಕುತೂಹಲ ಕೆರಳಿಸುತ್ತ ಹೋಗುತ್ತದೆ. ಮನುಷ್ಯನ ಸಣ್ಣತನ, ಸ್ವಾರ್ಥದ ಅನಾವರಣ ಆಗುವುದರ ಜೊತೆಗೆ ಸಿಂಗಾರೆವ್ವನ ಜೀವನ ಪ್ರೀತಿ ಮತ್ತು ಬದುಕು ಕಟ್ಟಿಕೊಳ್ಳುವ ರೀತಿ ಅನನ್ಯ ಪಾತ್ರ ಸೃಷ್ಟಿಗೆ ಕಾರಣವಾಗಿದೆ. ಕೆಲಸದ ಆಳು ಮರ್‍ಯಾ, ನಾಟಕದ ಹುಚ್ಚಿನ ದೇಸಾಯಿ ಪಾತ್ರಗಳು ಗಮನ ಸೆಳೆಯುತ್ತವೆ. ಘಟನೆಗಳು ಒಂದಾದರಂತೆ ಬಿಚ್ಚಿಡುತ್ತ ಹೋಗುವ ಕಂಬಾರರು ಸೊಗಸಾದ ಕಾದಂಬರಿಯ ಓದಿಗೆ ಅನುವು ಮಾಡಿಕೊಡುತ್ತಾರೆ. ಚಿತ್ರವತ್ತಾಗಿ ಕಟ್ಟುವ ಕ್ರಮ ಪ್ರಿಯವಾಗದೇ ಇರದು. ಮಲೆಯಾಳಂ ಭಾಷೆಗೆ ಅನುವಾದಗೊಂಡು ಪ್ರಕಟಗೊಂಡಿದ್ದ ಸಿಂಗಾರೆವ್ವ ಅಲ್ಲಿಯೂ ಚರ್ಚೆಗೆ ಅನುವು ಮಾಡಿಕೊಟ್ಟಿತ್ತು. ಸಿಂಗರವ್ವ ಮತ್ತು ಅರಮನೆ ಕಾದಂಬರಿಯು ಓದುಗರಿಗೆ ಒಂದು ವಿಶಿಷ್ಟಪೂರ್ಣವಾದ ಅನುಭವವನ್ನು ನೀಡುತ್ತದೆ. ಲೇಖಕರು ಈ ಕಾದಂಬರಿಯಲ್ಲಿ ಶೀನಿಂಗ್ಯವ್ವ ಎನ್ನುವ ಮುದುಕಿಯ ಪಾತ್ರದ ಮೂಲಕ ಕತೆಯನ್ನು ಹೇಳಿಸಿಕೊಂಡು ಅದರ ನಿರೂಪಣೆಯ ಮೂಲಕ ಕಥೆ ರಚಿಸಿದ್ದಾರೆ.
“ಸಿಂಗಾರೆವ್ವ ಅತ್ಯಂತ ದೊಡ್ಡ ಫೆಮಿನಿಸ್ಟ್ ಅಲ್ಲವೆ?” ಎಂಬ ಅಪ್ಪುಕುಟ್ಟನ್ ಪ್ರಶ್ನೆಗೆ ಯಾರಾದರೂ ತಲೆದೂಗಲೇಬೇಕು. ತಾರಾಶಂಕರ ಬ್ಯಾನರ್ಜಿಯವರ ‘ಆರೋಗ್ಯ ನಿಕೇತನ’ ದಂತೆ, ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ಯಂತೆ, ವಿಕ್ಟರ್ ಹೊಗೋವಿನ ‘ಬಡವರು’, ಟಾಲ್ ಸ್ಟಾಯ್ ಅವರ ‘ಯುದ್ಧ ಮತ್ತು ಶಾಂತಿ’ ಯಂತೆ ಅನುವಾದಗಳ ಮೂಲಕ ಮಲೆಯಾಳಂಗೆ ಬಂದ ಕಾದಂಬರಿ ರತ್ನಗಳೊಂದಿಗೆ ‘ಸಿಂಗಾರವ್ವ ಮತ್ತು ಅರಮನೆ’ ಯೂ ಸೇರುತ್ತದೆ. ಕಾದಂಬರಿಕಾರರ ರಚನಾಕೌಶಲದೊಂದಿಗೆ ಕವಿಯ ಒಳನೋಟಗಳೂ ಸಮಾಜಶಾಸ್ತ್ರಜ್ಞನ ಸೂಕ್ಷ್ಮತೆಯೂ ಈ ಕಾದಂಬರಿಯಲ್ಲಿ ಮೇಲೈಸಿವೆ. ಯಾರೂ ಪ್ರವೇಶಿಸದ ಒಂದು ಲೋಕಕ್ಕೆ ಓದುಗರನ್ನು ಕರೆದೊಯ್ಯುವುದೇ ಅಲ್ಲದೆ ಅಲ್ಲಿ ಅಪರಿಚಿತವಾದ ಒಂದು ಬದುಕಿನ ಅದ್ಭುತ ದರ್ಶನವನ್ನೂ ಮಾಡಿಸುತ್ತದೆ’ ಎಂದು ಕೆ.ಎಂ. ಅಹಮ್ಮದ್ ವಿವರಿಸಿದ್ದಾರೆ.
ಎಂ.ಕೆ. ಪ್ರೇಮಾನಂದ ಅವರು ’ದುರಂತಗಳು ಬೇಟೆಯಾಡಿ ಹೊಮ್ಮಿಸಿದ ಕಣ್ಣೀರಲ್ಲಿ ಮುಳುಗಿದ ಆ ನಿಷ್ಕಳಂಕ ಸ್ತ್ರೀಜನ್ಮವನ್ನು ಕುರಿತು ಪ್ರೀತಿಯ ಶೀನಿಂಗವ್ವ ಹೇಳುವುದನ್ನು ಕೇಳಿಸಿಕೊಳ್ಳಲು ಕುತೂಹಲವಿತ್ತು, ರಹಸ್ಯಗಳು ತುಂಬಿದ ಅರಮನೆ, ಹುಣಿಸೆ ಮರಗಳ ಕಾಡು, ವಿಚಿತ್ರವಾದ ಆಚರಣೆಗಳೆಲ್ಲ ಸೇರಿ ಮನಸ್ಸನ್ನು ತುಂಬಿ ನಿಂತಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ನಾಗಾಭರಣರ ನಿರ್ದೇಶನದಲ್ಲಿ, ಪ್ರೇಮಾ, ಅಖಿಲಾ, ಅವಿನಾಶ್, ಶಿವ ಧ್ವಜ, ನಟರಾಜ ಏಣಗಿ, ಶರತ್ ಲೋಹಿತಾಶ್ವ ಇತ್ಯಾದಿ ನಟರು ಅಭಿನಯಿಸಿದ ‘ಸಿಂಗಾರೆವ್ವ’ ಸಿನಿಮಾ ನೋಡಿದ ಮೇಲೆಯೇ, ಹದಿನಾರಕ್ಕೂ ಹೆಚ್ಚು ಮುದ್ರಣಗಳನ್ನು ಕಂಡ ಕಂಬಾರರು ಬರೆದ ಎರಡನೇ ಕಾದಂಬರಿ, ಇಪ್ಪತ್ಮೂರು ಅಧ್ಯಾಯಗಳ ‘ಸಿಂಗಾರೆವ್ವ ಮತ್ತು ಅರಮನೆ’ ಯನ್ನು ಓದುವ ತೀವ್ರ ತುಡಿತಕ್ಕೆ ನಾನು ಒಳಗಾಗಿದ್ದು! ಮೂಲ ಕಾದಂಬರಿಗಿಂತ ಸಿನಿಮಾ ಸಾಕಷ್ಟು ಭಿನ್ನವಾಗಿದೆ! ಸಾಮಾಜಿಕ ಮತ್ತು ಮಹಿಳೆಯರ ಭಾವನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೃತಿ ಇದಾಗಿದೆ.
ಚಂದ್ರಶೇಖರ ಕಂಬಾರ ಅವರ ಮತ್ತೊಂದು ಮಹತ್ವದ ಕಾದಂಬರಿ “ಶಿಖರಸೂರ್ಯ”. ಕಂಬಾರರ ಚಕೋರಿ ಮಹಾಕಾವ್ಯದ ಮುಂದುವರೆದ ಭಾಗ ಎಂದು ಕೂಡ ಓದಬಹುದಾದ ಈ ಕಾದಂಬರಿಯು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ. ಜಾಗತೀಕರಣದ ಕಾಲಘಟ್ಟದಲ್ಲಿ ರಚಿತವಾದ ಈ ಕಾದಂಬರಿಯು ಪಂಡಿತ-ಪಾಮರರಿಬ್ಬರಿಗೂ ಪ್ರಿಯವಾಗಿದೆ. ಈ ಕಾದಂಬರಿಗೆ ಟ್ಯಾಗೋರ್ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಕವಿ ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಅವರು ಶಿಖರಸೂರ್ಯದ ಬಗ್ಗೆ ’ಇಂದಿನ ಗೋಳೀಕೃತ (ಗ್ಲೋಬಲೈಸ್) ಜಗತ್ತಿನ ಒಣ ಗತ್ತುಗಳನ್ನು, ತಂತ್ರಜ್ಞಾನದ ಠೇಂಕಾರಗಳನ್ನು, ಈ ಮೃತ್ಯುವಿನ ಸ್ಥಿತಿಯಲ್ಲಡಗಿರುವ ಮರುಹುಟ್ಟಿನ ಅಸೀಮ ಸಾಧ್ಯತೆಗಳನ್ನು ಇಷ್ಟು ಸಮಗ್ರವಾಗಿ ಹಿಡಿದಿಡುವ ಕೃತಿಗಳು ನನಗೆ ಗೊತ್ತಿದ್ದ ಮಟ್ಟಿಗೆ ಇವತ್ತಿನ ಸಾಹಿತ್ಯದಲ್ಲಿ ವಿರಳ’ ಎಂದು ಅಭಿಪ್ರಾಯ ಪಟ್ಟರೆ, ಲೇಖಕ-ಚಿತ್ರ ನಿರ್ದೇಶಕ ಎನ್.ಎಸ್. ಶಂಕರ್ ಅವರು ’ ಕನ್ನಡದಲ್ಲಿ ‘ಮಲೆಗಳಲ್ಲಿ ಮದುಮಗಳು’ ಆದಮೇಲೆ ಮನಸ್ಸಿನಲ್ಲಿ ಊರಿ ನಿಲ್ಲುವ ಕೃತಿ ಶಿಖರಸೂರ್ಯವೇ. ಹಾಗೆ ಇದು ಕನ್ನಡವಷ್ಟೇ ಅಲ್ಲ, ಭಾರತೀಯ ಕಾದಂಬರಿ ಪರಂಪರೆ ಯಲ್ಲೇ ಗಣ್ಯಸ್ಥಾನ ಪಡೆದು ನಿಲ್ಲುವ ಕೃತಿ ’ಎಂದು ಮೆಚ್ಚಿಗೆ ಸೂಚಿಸಿದ್ದಾರೆ.
ವಿಮರ್ಶಕ ಮಾಧವ ಕುಲಕರ್ಣಿ ಅವರು ’ಸಾಹಿತ್ಯದಲ್ಲಿ ಒಮ್ಮೊಮ್ಮೆ ಹೊಸ ದಾರಿಯನ್ನು ತೆರೆದು ತೋರುವ ಕೃತಿಗಳು ಸಂಭವಿಸುತ್ತವೆ. ಅಂಥ ಒಂದು ಘಟನೆ “ಶಿಖರಸೂರ್ಯ’ ಕಾದಂಬರಿ, ದಾರ್ಶನಿಕ ನಿಲುವೆಂದರೇನೆಂಬುದನ್ನು ಅರಿಯಲು ಉತ್ಸುಕರಾಗಿರುವವರು ಈ ಕಾದಂಬರಿಯನ್ನು ಒಮ್ಮೆ ಓದಬೇಕು’ ಎಂದು ಅಭಿಪ್ರಾಯಪಟ್ಟರೆ ಲೇಖಕ ಮಾಧವ ಪೆರಾಜೆ ಅವರು ’ಭುವನದ ಭಾಗ್ಯವೆನ್ನುವಂತೆ ‘ಶಿಖರಸೂರ್ಯ’ ಈಗ ಉದಯವಾಗಿದೆ. ಕುಮಾರವ್ಯಾಸ ತಾನು ‘ಕಾವ್ಯಕ್ಕೆ ಗುರುವೆನಲು’ ಕರ್ಣಾಟ ಭಾರತ ಕಥಾಮಂಜರಿಯನ್ನು ರಚಿಸಿದಾಗ ಹೇಳುತ್ತಾನೆ. ಚಂದ್ರಶೇಖರ ಕಂಬಾರರು ಹಾಗೆ ಹೇಳಿಕೊಂಡಿಲ್ಲ. ಆದುದರಿಂದಲೇ ಅದು ಕಾವ್ಯಕ್ಕೆ ಗುರುವೆನೆಲು ರಚಿಸಿದ ಕಾವ್ಯ/ಕಾದಂಬರಿ’ ಎಂದು ಹಾಡಿ ಹೊಗಳಿದ್ದಾರೆ.
ಒಂದು ಕಥೆ ಇತಿಹಾಸದ ಸ್ವರೂಪವನ್ನು ಪಡೆಯುವುದು ಯಾವಾಗ ಎಂದು ಯೋಚಿಸಿದರೆ ಒಂದು ವಿಷಯವು ಬಾಯಿಂದ ಕಿವಿಗೆ… ಕಿವಿಯಿಂದ ಬಾಯಿಗೆ ರವಾನೆಯಾದಾಗ ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದು ಚರಿತ್ರೆಯ ಭಾಗವಾಗುತ್ತದೆ. ಆದರೆ ಅದೆಲ್ಲ ಲಿಖಿತ ರೂಪದಲ್ಲಿದ್ದಾಗ ಮಾತ್ರ ಇತಿಹಾಸವೆನಿಸಿದರೂ ಅಲಿಖಿತವಾದ ವಿಷಯಗಳು ಜನಪದವಾಗಿ ತನ್ನದೇ ವಿಶಿಷ್ಟವಾದ ಲೋಕದಲ್ಲಿ ತೆರೆದುಕೊಳ್ಳುತ್ತದೆ. ಈ ಶಿಖರಸೂರ್ಯ ಕಾದಂಬರಿ ಇತಿಹಾಸದೆಳೆಯಲ್ಲಿ ಮುಡಿಹೊಂದಿದ್ದರೂ ಇಲ್ಲಿನ ಭಾಷಾನೈಪುಣ್ಯ ಮತ್ತು ನುಡಿಗಟ್ಟುಗಳಿಂದ ಜಾನಪದ ತಳಹದಿ ಎಂದು ಹೇಳುತ್ತಿರುವುದು ಕೇವಲ ನನ್ನ ವೈಯುಕ್ತಿಕ ಹಾಗೂ ಅಲ್ಪಜ್ಞಾನದ ಮಾತು ಅಂಬೋಣ. ಚರಿತ್ರೆಯ ಒಂದು ತುಣುಕೋ ಕಾಲ್ಪನಿಕ ಎಳೆಯೋ ಒಟ್ಟಾರೆ ಎಲ್ಲಿಂದೆಲ್ಲಿಗೋ ಹರಿದು ಕಡೆಗೊಂದು ಅಂತ್ಯ ಮುಟ್ಟುವ ವೇಳೆಗೆ “ಶಿಖರಸೂರ್ಯ” ಅಧೋಃಸ್ಥಿತಿ ಪಡೆದಿದ್ದ ಎಂಬುದಂತೂ ನಿಜ… ಈ ಕಾದಂಬರಿಯು ಅತ್ಯಂತ ರೋಮಾಂಚನಕಾರಿಯಾಗಿ ಹಲವು ತಿರುವುಗಳನ್ನು ಪಡೆಯುತ್ತ ಓದುಗರಿಗೆ ಹೊಸ ಲೋಕವೊಂದನ್ನು ತೋರಿಸುತ್ತ, ಕ್ಷಣ ಕ್ಷಣಕ್ಕೂ ವಿಸ್ಮಯವನ್ನು ಮೂಡಿಸುವ ಅದ್ಭುತವಾದ ಕಲಾಕೃತಿಯಾಗಿದೆ.
ಕಾದಂಬರಿ ಮಾನವನ ಅತಿಯಾದ ದುರಾಸೆ, ಸ್ವಾರ್ಥಗಳಿಂದ ಹಲವು ತಿರುವುಗಳನ್ನು ಪಡೆಯುತ್ತಾ ಕೊನೆಗೆ ದುರಂತ ಹೊಂದುವುದನ್ನು ಈ ಕಾದಂಬರಿ ತಿಳಿಸುತ್ತದೆ. ವಾಮಾಚಾರ ವಿದ್ಯೆಯ ಅಹಂಕಾರದಿಂದಾಗಿ ದಾರುಣ ದುರಂತವಾಗುವುದೇ ಈ ಕಾದಂಬರಿಯ ತಿರುಳಾಗಿದೆ.
ಚಂದ್ರಶೇಖರ ಕಂಬಾರ ಅವರ ಇನ್ನೊಂದು ಕಾದಂಬರಿ ’ಶಿವನ ಡಂಗುರ’. ಕಾದಂಬರಿ ಕುರಿತು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ’ಸಮಕಾಲೀನ ಬದುಕಿನ ತಲ್ಲಣಗಳನ್ನು ಹೀಗೆ ಮುಖಾಮುಖಿಯಾಗಿಸಿ ರಚನೆಯಾದ ಮತ್ತೊಂದು ಕೃತಿಯನ್ನು ನಾನು ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಇತರ ಭಾಷೆಗಳಲ್ಲೂ ಕಂಡಿಲ್ಲ. ಕಂಬಾರರನ್ನು ಓದುವಾಗ ಇಳಂಗೋಅಡಿ, ಅಚಿಬೆ, ಪೋಯೆಂಕಾ, ಮಾರ್‌ಕೆಸ್ ಮೊದಲಾದವರ ಜೊತೆ ಹೋಲಿಸುವ ಉತ್ಸಾಹ ಮೂಡುತ್ತದೆ. ಆದರೆ ಇವರೆಲ್ಲರಿಗಿಂತ ಭಿನ್ನರಾದ ಕಂಬಾರರಿಗೆ ನಮ್ಮ ಜಾನಪದ ಜಗತ್ತು ಮೂಲ ಪ್ರೇರಣೆ. ಜನಪದರ ಸೃಜನಶೀಲತೆಯ ಬಗ್ಗೆ ಕಂಬಾರರಿಗೆ ಅಪಾರ ವಿಶ್ವಾಸ. ಈ ದೃಷ್ಟಿಯಿಂದ ‘ಶಿವನ ಡಂಗುರ’ ಒಂದು ವಿಶಿಷ್ಟ ಕೃತಿ, ಮಾತ್ರವಲ್ಲ, ಹೊಸ ದರ್ಶನ ನೀಡುವ ಮಹತ್ವದ ಕಾದಂಬರಿ’ ಎಂದು ವಿಶ್ಲೇಷಿಸಿದ್ದಾರೆ.
ಕೃಷ್ಣ ಮನವಳ್ಳಿ ಅವರು ’ಈ ಕಾದಂಬರಿಯ ಕಥನ ವಾಸ್ತವಿಕತೆಯಿಂದ ಮಿಥ್ ಶೈಲಿಗೆ, ಮಿಥ್‌ನಿಂದ ವಾಸ್ತವಿಕತೆಯತ್ತ ಬದಲಾಗುತ್ತಾ ಹೋಗುತ್ತದೆ. ಮತ್ತು ಇತಿಹಾಸದ ನೇರ ನಡೆ, “ಪ್ರಗತಿಶೀಲ ಗಮನ” ಇತ್ಯಾದಿ ಮಾತುಗಾರಿಕೆಯ ಮಾಯೆಯನ್ನು ಅಲ್ಲಗೆಳೆದು, ನಮ್ಮ ಈ ಮೂರನೇ ಜಗತ್ತಿನ ಸಣ್ಣ ಪುಟ್ಟ ಊರು ಹಳ್ಳಿಗಳಲ್ಲೂ ಹೇಗೆ ಜಾಗತಿಕ ಹಾಗೂ ಹೊಸ-ವಸಾಹತುಶಾಹಿ ಸಾಮ್ರಾಜ್ಯ ಹರಡುತ್ತಾ ಹೊರಟಿದೆ ಅನ್ನುವ ಕಹಿನಿಜವನ್ನು ಎತ್ತಿ ತೋರಿಸುತ್ತದೆ’ ಎಂದು ವಿವರಿಸುತ್ತಾರೆ.
ಶಿವಾಪುರ ಎಂಬ ಹಳ್ಳಿಯ ಸುತ್ತ ಹೆಣೆದ ವಿಶಿಷ್ಟ ಕಾದಂಬರಿಯಿದು. ಅಭಿವೃದ್ಧಿಯ ಹೆಸರಿನಲ್ಲಿ ಹಳ್ಳಿಯ ಸಹಜ ಸೌಂದರ್ಯವನ್ನು ಹಾಳುಗೆಡವಿ ದುರಂತವನ್ನಾಗಿಸಿದ ಕಥೆಯಿದು. ಬರಮೇಗೌಡನ ಗೌಡಾಳ್ವಿಕೆಯ ಗತ್ತು, ವಿಲಾಸಿ ಜೀವನ, ಕುಂಟೀರಪನೆಂಬ ವಿಕೃತ ರಾಜಕಾರಣಿಯ ಕುತಂತ್ರ, ಬಿಗ್ ಬಾಸ್ ಮತ್ತು ತಾರಾಳ ಸಮಯ ಸಾಧಕತನ, ಸಮಾಜದಲ್ಲಿನ ಅನಿಷ್ಟ ದೇವದಾಸೀ ಪದ್ಧತಿ, ಚಂಬಸವನ ಹೋರಾಟ, ಶಾರಿ, ಭಾಗಿರ್ತಿಯರ ಭಾವನೆಗಳ ತಾಕಲಾಟ, ದೇವದಾಸಿ ತುಂಗವ್ವನ ಪ್ರಬುದ್ಧತೆ, ಇತ್ಯಾದಿ ಅಂಶಗಳನ್ನು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಬ್ರಿಟಿಷರು “ಬಿಟ್ಟು ಹೋದ” ಭಾರತದ “ಸ್ಥಿತಿ-ಗತಿ”ಗಳನ್ನು ಗ್ರಾಮೀಣ ಮಟ್ಟದಲ್ಲಿ ಆದ “ಬೆಳವಣಿಗೆ”ಗಳನ್ನು ಕಂಬಾರರು ಈ ಕೃತಿಯಲ್ಲಿ ಮೂಡಿಸಿದ್ದಾರೆ. ಹಳ್ಳಿಗಳಲ್ಲಿನ ಸಮಕಾಲೀನ ಕ್ಷುದ್ರ ರಾಜಕೀಯ, ಕ್ಷುಲ್ಲಕ ಜಾತೀಯತೆ ಅಸ್ಪ್ರಶ್ಯತೆ, ಅಸಮಾನತೆಗಳನ್ನು ಅಪ್ಪಟ ಗ್ರಾಮ್ಯ ಸ್ವರೂಪದಲ್ಲಿ ಹೇಳಿದ್ದಾರೆ. ಅಪ್ಪಟ ಗ್ರಾಮಿಣ ಶೈಲಿಯ ಅವರ ಬರವಣಿಗೆ, ಅವರದೇ ಆದ ಸಾಹಿತ್ಯ ಕೃಷಿಯ ಫಸಲು ಇಲ್ಲಿ ಹಾಸುಹೊಕ್ಕಾಗಿದೆ…. ಸೊಗಸಾದ ಭಾಷೆಯಿಂದಲೇ ತಮ್ಮ ಈ ಸುಧೀರ್ಘವಾದ ಕೃತಿಯನ್ನು ಅಲ್ಪಾವಧಿಯಲ್ಲೇ ಓದಿ ಮುಗಿಸುವಂತೆ ಬರೆಯುತ್ತಾರೆ ಕಂಬಾರರು.
“ಚಾಂದಬೀ ಸರಕಾರ” ಕಂಬಾರರ ಇತ್ತೀಚಿನ ಕಾದಂಬರಿ. ಈ ಕಾದಂಬರಿಯು ಸಮಕಾಲೀನತೆಯ ಸವಾಲುಗಳನ್ನು ಬದಲಾಗುವ ಚರಿತ್ರೆಯ ಸಂಕ್ರಮಣ ಸ್ಥಿತಿಯಲ್ಲಿ ಶೋಧಿಸುತ್ತದೆ. ಬಲದೇವ ನಾಯಕನ ವೈಯಕ್ತಿಕ ಬದುಕಿನಲ್ಲಿ ಮತ್ತು ಭೂ ಮಸೂದೆ ಮೂಲಕ ಸಮಾಜದಲ್ಲಿ ಒಳ್ಳೆಯದಾಗುವುದನ್ನು ತಡೆಯಲು ಹಳೆ ಜಮೀನ್ದಾರೀ ಪದ್ಧತಿಯ ಪ್ರತಿನಿಧಿಯಾದ ಅಯ್ಯಾ ಸರಕಾರ ಮತ್ತು ಅವನ ಕೆಟ್ಟ ಕಾರ್ಯಗಳಿಗೆ ಬೆಂಗಾವಲಾಗಿರುವ ಬಡ್ಡಿ ಬಂಗಾರಮ್ಮನಂತಹ ಶಕ್ತಿಗಳು ಒಂದಾದಾಗ, ಊರಿನ ಪ್ರಾಚೀನ ಸಂಪಿಗೆ ಮರ ಮತ್ತು ಅಲ್ಲಿರುವ ಜನರ ನಂಬಿಕೆಯ ಕಾಡಮಾಯಿ ಶಿಷ್ಟ ಶಕ್ತಿಯ ಪರವಾಗಿ ಇದ್ದು, ಕೊನೆಗೂ ಒಳ್ಳೆಯದು ಕೆಡುಕಿನ ವಿರುದ್ಧ ಗೆಲ್ಲುತ್ತದೆ ಎಂದಿದ್ದಾರೆ.
ಕೃತಿಗೆ ಬೆನ್ನುಡಿ ಬರೆದಿರುವ ಎಸ್. ಆರ್. ವಿಜಯಶಂಕರ ಅವರು, ‘ಡಾ. ಚಂದ್ರಶೇಖರ ಕಂಬಾರರು ನಂಬಿಕೆಯಲ್ಲಿ ಆಸ್ತಿಕರು. ಕೊನೆಗೂ ಈ ಲೋಕದಲ್ಲಿ ಕೇಡಿನ, ದುಷ್ಟಶಕ್ತಿಗಳ ವಿರುದ್ಧ ಸಾತ್ವಿಕ ಶಕ್ತಿ ಗೆಲ್ಲುತ್ತದೆ ಎಂಬುದು ಅವರ ಪೂರ್ಣ ವಿಶ್ವಾಸ. ಆದರೆ, ಈ ವಿಶ್ವಾಸ ಆಧುನಿಕ ಬದುಕಿನ ಸಂಕೀರ್ಣ ಅನುಭವ. ಕೆಡುಕಿನ ಅಪರಿಮಿತ ಸಾಧ್ಯತೆಗಳಿಗೆ ಕುರುಡಾಗುವುದಿಲ್ಲ. ಸಾತ್ವಿಕ ಶಕ್ತಿಗಳ ಕೊನೆಯ ವಿಜಯದ ಮೆಟ್ಟಿಲೇರುವ ಮೊದಲು ಅನುಭವಿಸಬೇಕಾದ ಸೋಲುಗಳನ್ನು ಕಡೆಗಣಿಸುವುದಿಲ್ಲ. ಚರಿತ್ರೆ ಮತ್ತು ವರ್ತಮಾನದ ಮೌಲ್ಯಗಳ ಪರಸ್ಪರ ಸಂಘರ್ಷವನ್ನು ನಿರೂಪಿಸಲು ಡಾ. ಕಂಬಾರರು ‘ಚಾಂದಬೀ ಸರಕಾರ’ದ ಕಥೆಯಾಗಿ, ಮುಖ್ಯಮಂತ್ರಿಗಳಾಗಿದ್ದಾಗ ದೇವರಾಜ ಅರಸು ಅವರು ಭೂ ಮಸೂದೆ ಕಾಯಿದೆಯನ್ನು ಜಾರಿಗೆ ತಂದಾಗ ಉಂಟಾದ ಸಾಮಾಜಿಕ ಸ್ಥಿತ್ಯಂತರವನ್ನು ಬಳಸುತ್ತಾರೆ. ಬಲದೇವ ನಾಯಕ ಆ ತನಕ ಬೆಳೆದು ಬಂದ ಜಮೀನ್ದಾರೀ ಪದ್ಧತಿಯ ಕೊನೆಯ ಕೊಂಡಿ, ಪ್ರೇಯಸಿಯಂತೆ ಆತನ ಮನಗೆದ್ದು ಪತ್ನಿಯಾದವಳು ಚಾಂದಬೀ ಎನ್ನುವುದನ್ನು ಇಲ್ಲಿ ವಿವರಿಸುತ್ತಾರೆ. ”ನಾಚ್ ಗಾನಾ ಮಾಡುವುದಕ್ಕೆ ಹೆಸರುವಾಸಿಯಾದ ಚಾಂದಬೀ ಊರಿಗೆ ಉಪಕಾರಿಯಾಗಿ, ಕುಡಿತವನ್ನು ಹತೋಟಿಗೆ ತಂದು, ಹೆಣ್ಣುಮಕ್ಕಳನ್ನು ಉದ್ಧರಿಸಲು ಶಾಲೆ ಪ್ರಾರಂಭಿಸುವ ಕ್ರಾಂತಿಕಾರಿ ಕಥನ ಕಂಬಾರರ ಜನಪದೀಯ ವಿಶ್ಲೇಷಣೆಯಿಂದ ಹೊಸ ಮೆರುಗನ್ನು ಪಡೆದಿದೆ,” ಎನ್ನುತ್ತಾರೆ ಲೇಖಕ ಮಹೇಶ ಅರಬಳ್ಳಿ.
–ರಾಘವೇಂದ್ರ ಅಡಿಗ ಎಚ್ಚೆನ್