ಪ್ರೇಮದ ಪರಿಭಾಷೆ
ಪ್ರೇಮದ ಪರಿಭಾಷೆ ಏನು
ಇಮ್ರೋಜ್ ಹೇಳಿಲ್ಲಿ….
ಇನ್ನೇನಿದೆ…
ಕಂಬನಿಗೆ ತಂಗಾಳಿ ಸೋಕಿ
ಮೋಡವಾಗಿ ಸುರಿವ ಮಳೆಯಂತೆ….. ಅಷ್ಟೇ ಅಂದನಂತೆ.. ಇಮ್ರೋಜ್
ಅಷ್ಟೇ ನಾ ಅಂದ್ರೇ….
ಇಲ್ಲಾ ಕೇಳಿಲ್ಲಿ..
ಭೂಮಿ ಭಾರ ವಿರಹದ
ಉರಿಯ ಹೊತ್ತು..
ಕ್ಷಣ ಕ್ಷಣವು ಯುಗದಂತೆ ಕಳೆದು ಭೂಮಿಗೆ ಬಿದ್ದ ಮೇಲೂ..
ಅವಳು ತಿರಸ್ಕರಿಸಿದರೆ
ಕಂಬನಿ ಮಿಡಿಯದೆ..
ಎದೆ ಭಾರ ಮಾಡಿಕೊಳ್ಳದೆ
ನಗು ಮುಖವ ತೋರಿ
ತುಟಿಯಲ್ಲಿ ಬಿಕ್ಕಳಿಕೆ ಕುಡಿದು…
ಕಣ್ಣಲ್ಲಿ ಹುಸಿ ಹೊಳಪು..
ಮುಡಿದು…
ಕಣ್ಣ ಕಾಡಿಗೆಯಲ್ಲಿ ಮುಚ್ಚಿ
ನಗುವ ಬಡಪಾಯಿ ಪ್ರೇಮಿಯಂತೆ
ಅಷ್ಟೇ ಅಂದ ಅವ್ಹ ಇಮ್ರೋಜ್
ಮತ್ತೆ….
ಹೆಚ್ಚೇನಿಲ್ಲ..
ಭೂಮಿ ಆಗಸ ಚುಂಬಿಸುವುದ
ಕಂಡು..
ಮುಖದ ತುಂಬ ಹಾಲ್ ಬೆಳಕ ಚೆಲ್ಲಿ..
ಶರಧಿಯ ಉಕ್ಕೆರಿಸುವ ಚಂದ್ರ ನಾಗುವುದು…
ಮತ್ತೆ ಇನ್ನೂ ಎಂದಾದರೆ..
ಮಂಜಿನಂತ ಎದೆಯೊಳಗೆ
ಉರಿವ ಕೆಂಡವನ್ನೇ ಹೊತ್ತು
ನಡೆದಿದ್ದೆ ಅಂತಾ ಯಾರಿಗೂ ತಿಳಿಯದೆ ಇರುವುದು… ಮೆತ್ತಗೆ ಇಮ್ರೋಜ್
–ದೇವರಾಜ್ ಹುಣಸಿಕಟ್ಟಿ
ದೇವರಾಜು ಹುಣಸಿಕಟ್ಟಿ, ಬುಡಕಟ್ಟು ಸಂಸ್ಕೃತಿಯ ಕುಟುಂಬದಲ್ಲಿ 10-07-1985 ರಲ್ಲಿ ಜನನ. ಇವರ ಹುಟ್ಟೂರು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಹುಣಸಿಕಟ್ಟಿ, ತಂದೆ ಶ್ರೀಯುತ ದಾನಪ್ಪ ಹುಣಸಿಕಟ್ಟಿ, ತಾಯಿ ಶ್ರೀಮತಿ ಲಕ್ಷ್ಮಿಬಾಯಿ.
ವೃತ್ತಿಯಿಂದ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತರ ಮೊದಲ ಕವನ ಸಂಕಲನ “ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು 2011-2012 ರಲ್ಲಿ ಕರ್ನಾಟಕ ಸರ್ಕಾರದ ಯುವ ಬರಹಗಾರರ ಪ್ರೋತ್ಸಾಹಧನ ಪಡೆದು ಪ್ರಕಟಣೆಯಾಗಿದೆ.
ಇವರ ಕವಿತೆ, ಬರಹ, ಲೇಖನಗಳು ಹಲವು ಪತ್ರಿಕೆ ಹಾಗೂ ಅಂತರ್ಜಾಲ ಸುದ್ದಿ ವಾಹಿನಿಗಳಲ್ಲಿ ಪ್ರಕಟವಾಗಿವೆ. ಜನಪರ ಜೀವಪರ ಹೋರಾಟಗಳಲ್ಲಿ ಸದಾ ಭಾಗಿಯಾಗುವ ತುಡಿತದ ಕವಿ. ಕವಿತೆ ಕೂಡ ಆತ್ಮ ಸಂಗಾತಿ ಎಂದು ನಂಬುವ ಕವಿ.
ಪ್ರೇಮ ಸಾಂಗತ್ಯ ದ ಕವಿತೆ