ಚಿಂಕ್ರ: ಶಿವಕುಮಾರ ಸರಗೂರು

ಚಿಂಕ್ರ

ಎಲ್ಲೊದ್ನಡ ನನ್ನ ಕೂಸು ಅಂತಿದ್ದ
ಅವ್ವನ ಬೋ ಪ್ರೀತಿ ಮಗ್ನ ಮೇಲಿತ್ತು
ಒಂದ್ಗಳ್ಗಾದ್ರು ಎಡ್ಬಿಡದ ಜೀವ ಅದು
ಅವಳ್ಗ ಇವ್ನ್ಬಿಟ್ರಾ ಇನ್ಯಾರಿದ್ದರು?
ಒಂದ್ಪ್ರಾಣವಾಗಿ ಜೋಕಾಗಿದ್ರು.

ಬೆಳಿ ಬೆಳಿತ ಚೂರಾದ್ರು ಕಲ್ತೊಳ್ಳಿ ಅಂತ
ಸ್ಕೂಲ್ಗ ಸೇರುಸ್ಬುಟ್ರಾ ಸರೋಯ್ತದ
ಇಂಕ್ರ ಬುದ್ದಿ ತಲ್ಯಾಗ ಒಕ್ಬುಟ್ಟಂದ್ರ
ನನ್ಮಗ ಪರಪಂಚ ಗ್ಯಾನ ತಿಳ್ಕಂಡು
ಪಸಂದಾಗಿ ಬೆಳ್ದ್ಬುಡ್ತಾನ ಅನ್ಕೊಂಡ್ಳು.

ಗೌರ್ಮೆಂಟೌವ್ರು ಏನೇಳ್ಕೊಟ್ಟಾರು?
ಪ್ರವೀಟ್ಗಾದ್ರು ಹಾಕ್ಬಾರ್ದ ಮಂಕೆ
ಅಂತೇಳ್ದ ನೆರ್ಮನೆ ಗೌರಿ ಮಾತು
ಬಾಳ ಹಿಡಿಸ್ಬುಡ್ತು ತಲೆಚಿಟ್ಟಿಡಿತು
ಸಾಲಸೋಲ ಮಾಡಿ ಸೇರ್ಸ್ಬುಡದ.!

ಅವ್ನ್ಗೇನೊ ಅವರ್ರಿಂಗ್ಲೀಸು ಹಿಡೀಸ್ದು.
ಗೀಚಿ ಪಾಚಿ ಕಲಿಯಾಕ್ ಸುರ್ಮಾಡ್ದ.
ಯಾರೊಂದ್ಗು ಮಾತಾಡ್ನಾರ. ಸಂಕೋಚ
ಕಲ್ತ್ರುವ ಹೇಳೋಕು ಮುಜ್ಗರ ತಪ್ಪಾದ್ದು ಅಂತ.
ಆದ್ರೂ ಅವ್ರವ್ವನ ಮೆಚ್ಸಕ ಟುಸ್ಸು ಪಸ್ಸು ಅಂತಿದ್ದ.

ಅಂಗು ಇಂಗು ಮಾಡಿ ಪ್ರೈಮರಿ ಹೈಸ್ಕೂಲು
ಮುಗ್ಸೊ ಅಷ್ಟುಕ್ಕ ಇಬ್ರುರ್ಗುವ ಸಾಕಾಗೋಯ್ತು.
ಅಕ್ಪಕ್ಕದ ಜನ್ಗಳ ಕಣ್ಣೆದುರ್ಗ ಇವ್ರಿಬ್ರಾಟ
ಮೋಜುತರ್ತಿತ್ತು. ಆದ್ರೂ ನೋಡಮು
ಅಂತಿದ್ರು, ಏನಾದ್ದು ಇವ್ನ ಕೈಲಿ ಅಂತ ಕಾಯ್ತಿದ್ರು.

ಸ್ಕೂಲು ಅಂತಕ್ಷಣ ಬರಿ ಸಬ್ಜೆಟ್ಕ್ ನೆ ಕಲ್ತ ನಾ ಅದೇಕ
ಅದ್ರಾಚೆಗುವ ಓದ್ಕಳುದ್ನ ಬರ್ಕಳುದ್ನ ತಿಳ್ಕಬುಟ್ಟ.
ದೇವ್ರು ದಿಂಡ್ರು ಅದೃಷ್ಟ ಗಿದ್ರುಷ್ಟು ಎಲ್ಲನುವೆ ಬುಟ್ಬುಟ್ಟ
ಇಚಾರ ಮಾಡ್ರೋ ಇಚಾರ ಮಾಡಿ ಅನ್ನಕ್ಸುರುಮಾಡ್ದ
ಯಾವ್ದುವೆ ಖೊಶನ್ಮಾಡ್ದೆ ಒಪ್ಕಬಾರ್ದು ಅನ್ಬುಟ್ಟ.

ಎಂಗ್ಬತ್ತಪ್ಪ ಇವ್ನ್ಗ ಈ ತರಾವರಿ ಬುದ್ದಿ ಮಾದೇವ್ನೆ
ಇದು ಒಳ್ಳೇದ್ಕೆ ಇಲ್ಲ ಕೆಟ್ಟದ್ಕ್ಯಾ ಅನ್ನೋ ಯೋಚ್ನೆ ಅವ್ಳ್ಗ
ಊರ್ನಾಗ ಎಷ್ಟ್ಮಂದಿ ಓದಿಲ್ಲ ಬರ್ದಿಲ್ಲ ಎಲ್ರೂವೆ
ಇವ್ನಂಗೆ ಆಡ್ದರ? ಓದಿ ಸಂಬ್ಳ ತಕಬಾ ಅಂದ್ರ
ಏನ್ ಗಾಚಾರ ಬಂತಪ್ನ ಸಿವ್ನೆ ಯೊಚ್ನ ಬಂತವ್ಳ್ಗ.

ಸುಮ್ಕಿರವ್ವ ನಾ ಓದಿರದು ಲಿಟ್ರೇಚರ್ರು ಕಣಾ
ಬದ್ಕು ಯಂಗಿರ್ತದ ಹಂಗೆ ಬರ್ದರ್ವೆ ಕಣಾ
ನಾನೂ ಜೇವ್ನ ರೂಪುಸ್ಕಳ್ತಿನಿ ಯೋಚ್ನೆ ಮಾಡ್ಬೇಡ
ನಿಚ್ಚುವ ಧೈರ್ಯ ಕೊಡವ. ಆದ್ರೂ ಕೆಲ್ಸ ಇಲ್ದಿದ್ರ
ಬದ್ಕೊದೆಂಗೆಡ? ನನ್ಕೈಲಾದ್ದ ಇನ್ನೂವ? ಅನ್ನೋವ್ಳು.

ಹಿಂಗಿರ್ಬೇಕಾದ್ರ ದೊಡ್ಡವ್ರ್ಯಾರೋ ಬೇಕಾದವ್ರು
ಇವ್ನ ಕರ್ಕೋಂಡೋಗಿ ಸೂಪ್ಪರ್ರಾಗಿ ಭಾಷ್ಣ ಮಾಡ್ಸಿ
ಎಲ್ರಿಂದ ಜೈಕಾರ ಹಾಕ್ಸಿ, ಎಲೆಕ್ಷನ್ಗ ರಿಜರ್ಶೇಶನ್ ಅಡಿಲಿ
ನಿಲ್ಸೇ ಬಿಟ್ರು. ಗೆಲ್ಲೋ ಕುದ್ರಗಳೆಲ್ಲ ಇವ್ದಿಕ್ಕೆ ಸಪೋಟ್
ಮಾಡಕ್ಸುರುಮಾಡುದ್ರು. ಗೆದ್ಮ್ಯಾಲ ನಾವ್ನೋಡ್ಕಳಣ ಅಂತ.

ಹಂಗ ಹಿಂಗ ಮಾಡಿ ದುಡ್ಡು ಪಡ್ಡು ಕೊಟ್ಟು ಗೆಲ್ಸುದ್ರು
ಗೆದ್ಮ್ಯಾಲ ಇವ್ನ್ದೇನ್ ನಡುದ್ದು? ಗೆಲ್ಲುಸ್ದರ್ವ್ತಾನೆ ಅವ್ರು
ಅವ್ರ್ಮಾತ ಕೇಳ್ಕಂಡ ಬಿದ್ದಿರ್ಬೇಕಾದ್ಸ್ಥಿತಿ ಬಂತು ಇವ್ನ್ಗ
ಯೋಳಾಗಾಗ್ದು ಬುಡಕಾಗ್ದು ಇವ್ನ ಪಜೀತ್ಯಾ
ಯಾತೀಕ್ ಬೇಕಿತ್ತಪ್ಪ ಎಲೆಕ್ಷನ್ನು ಕಿವ್ಲ್ಗ ಎಟ್ದ ಅವ್ವ.

ಗೆದ್ದವ್ರು ಬಡುರ್ಬಗ್ಗುರ್ನ ನೋಡ್ಕಂಡರ? ಅನ್ಕೂಲ ಮಾಡ್ದರ
ನಮ್ಮೆದೆಮ್ಯಾಲ ಗೋರಿ ಕಟ್ತಾರ! ಅದು ಅಂತಿಂತ
ಗೋರಿನಲ್ಲಕಪ, ಭೂಮ್ಯಾಗ ತುಳ್ದು ನಮ್ ಚರಿತ್ರೆನಾ
ಹರ್ದಾಕಿ ನಮ್ಮ್ಯಾಲ ಕಟ್ಟೋ ಗೋರಿ ಅದು
ಕೆಳ್ಗ ನಾವಿರ್ತಿವಲ್ವ ಅದುಕ್ಕ ಅವ್ರ್ಕಟ್ಟೋ ಗೋರಿ ಪಸಂದಗಿರ್ತದ.

ಹಿಂದು ಇಂಗೇ ಕಟ್ಕಂಡು ಆಳ್ಕ ಬಂದವ್ರ
ಅದುರ್ಮ್ಯಾಗೆ ಇವತ್ತು ಸಕ್ಟ ಆಳ್ತನು ಅವ್ರ
ನಾಮೇನಾದ್ರೂ ಬೆಳಿತೀವಂತ ಗೊತ್ತಾದ್ರ
ಅದ್ರ್ಳೊಳ್ಗ ನಮ್ನು ಮುಚ್ಚಾಕಾಕ ನೋಡ್ತಾನೆ ಕುಂತವ್ರ
ಇದಕಪ್ಪಾ ಲೋಕ, ಇದು ನಿಜ್ವಾದ್ ಪರಪಂಚ.

ಇಲ್ಲಿ ಸಿಕ್ಕಾಕೊಂಡಿರೋ ಇದ್ಯಾವಂತ್ರು ಅವ್ರಕೈಕೆಳ್ಗ
ಅವ್ರ ಜೀತಮಾಡಕ ಯಾಕ್ ಓದ್ಬೇಕಪ್ಪಾ?
ನೋಡು ಕೂಸೆ, ಓದದು ಇದ್ಯೆಗ ಮಾತ್ರನಲ್ಲ
ಇದ್ಯೆಯಿಂದ ಏನ್ ದಬ್ಬಾಗ್ದಿ ಅನ್ನೋದ್ಮುಖ್ಯ.
ಫಲ ನೀಡ್ಬೇಕು ಅಂದ್ರ ಓದು ತಲೆಗಲ್ಲ ಎದೆಗ್ತಟ್ಬೇಕು.

ಇಂಕ್ರ ಕಲ್ತು ಜೀವ್ನ ರೂಪುಸ್ಕೊಳ್ಳಿ ಅಂತಿರೋ
ಎಲ್ರೂಲ್ಗುವ ಒಂದ್ಮಾತು ಕಣಪ್ಪಾ. ಓದಿ, ಓದಿ
ಓದಾದ್ಮ್ಯಾಲ ಅವ್ರಿವ್ರ್ಮಾತ ಕೇಳ್ಕಂಡು ದಿಕ್ಕೆಟ್ಟೋಗ್ಬೇಡಿ
ಊತಾಕ್ಬುಡ್ತರ. ನಮ್ ಸಮಾದಿ ಮ್ಯಾಲ
ಆಳ್ತಾರಪ್ಪೋ! ಬುಡ್ಬ್ಯಾಡ್ರಪ್ಪೋ ಅವರ್ನ.

ಶಿವಕುಮಾರ ಸರಗೂರು


ಶಿವಕುಮಾರ ಸರಗೂರು ಇವರು ಚಾಮರಾಜನಗರ ಜಿಲ್ಲೆಯ‌ ಸರಗೂರಿನವರು. ಬಿ ಎ., ಬಿ.ಇಡಿ ಮತ್ತು ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಮೂರೂ ವರ್ಷ ಕೆ.ಆರ್. ನಗರದ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 2017 ರಲ್ಲಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿ ಈಗ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.. ಕವಿತೆ, ಕಥೆ ಓದು ಮತ್ತು ಬರೆವಣಿಗೆ ಇವರ ಹವ್ಯಾಸ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x