ತಾಕತ್ತಿದ್ರೆ ಒಂದಿನ ಕ್ಲಾಸ್ ಮಾಡಿ ..!!!!!!!!: ನಾಗಸಿಂಹ ಜಿ ರಾವ್


ಶಾಲೆಗಳಲ್ಲಿ ದೈಹಿಕ ಶಿಕ್ಷೆ ಇಂದಾಗಿ ಇಡೀ ದೇಶದಲ್ಲಿ ಸುಮಾರು ೩೦% ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಅನ್ನೋ ಒಂದು ಕಹಿ ಸತ್ಯವನ್ನ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ ತನ್ನ ಒಂದು ವರದಿಯಲ್ಲಿ ತಿಳಿಸಿತ್ತು. ಶಾಲೆಗಳಲ್ಲಿ ದೈಹಿಕ ಶಿಕ್ಷೆ ನೀಡದೆ ಹೇಗೆ ಪಾಠ ಮಾಡಬಹುದು ಅನ್ನುವ ಕೈಪಿಡಿಯನ್ನು ಸಿದ್ದಪಡಿಸಿ ಪ್ರತಿ ರಾಜ್ಯದ ಶಾಲೆಗಳಲ್ಲಿ ತರಬೇತಿ ನೀಡಿ ಎಂದು ತಿಳಿಸಿತ್ತು. ಅದೂ ಅಲ್ಲದೆ ಕೈಪಿಡಿಯನ್ನು ಕುರಿತು ಶಿಕ್ಷಕರಿಗೆ ತರಬೇತಿ ನೀಡಲು ಹೈದರಾಬಾದ್‌ನಲ್ಲಿ ತರಬೇತುದಾರರ ತರಬೇತಿಯನ್ನು ಆಯೋಗ ಏರ್ಪಡಿಸಿತ್ತು. ಮೂರುದಿನಗಳ ಈ ತರಬೇತಿಗೆ ನಾನು ಹಾಜರಾಗಿದ್ದೆ. ತರಬೇತಿಯ ನಂತರ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ತರಬೇತಿ ನೀಡಲು ಆದೇಶವಿತ್ತು. ರಾಜ್ಯದ ಶಿಕ್ಷಣ ಇಲಾಖೆ ದಿನಾಂಕಗಳನ್ನು ನಿಗದಿಪಡಿಸಿತ್ತು.
ಹೈದರಾಬಾದ್‌ನಲ್ಲಿ ನಾನು ಪಡೆದ ತರಬೇತಿಯನ್ನು ನಮ್ಮ ಶಿಕ್ಷಣ ಹಕ್ಕು ಕಾರ್ಯಪಡೆಯ ಸದಸ್ಯರಿಗೆ ನೀಡಿ ತರಬೇತಿದಾರರ ತಂಡವನ್ನು ಸಿದ್ದಪಡಿಸಿ ರಾಜ್ಯದ ಜಿಲ್ಲೆಗಳನ್ನು ಹಂಚಿಕೊAಡು ಶಿಕ್ಷಣ ಇಲಾಖೆಯ ಸಹಕಾರದಿಂದ ಪೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ತರಬೇತಿಯನ್ನು ಪ್ರಾರಂಭಿಸಿದೆವು.

ನನ್ನ ತಂದೆ ಶಿಕ್ಷಕರು, ಅವರೆಂದೂ ದೈಹಿಕ ಶಿಕ್ಷೆ ಪರವಾಗಿ ಮಾತಾಡಿದ್ದು ನನಗೆ ನೆನಪಿಲ್ಲ. ಅವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುತ್ತಿದ್ದರು ಎಂದು ಅನಿಸಿಲ್ಲ ಏಕೆಂದರೆ ನನಗೆ ನನ್ನ ಶಾಲೆಯಲ್ಲಿ ಶಿಕ್ಷೆ ಅದಾಗೆಲ್ಲಾ ನನ್ನ ತಂದೆ ಶಾಲೆಗೆ ಬಂದು ಮಾತಾಡುತ್ತಿದ್ದರು ಮತ್ತು ಶಿಕ್ಷಕರಿಗೆ ಮಕ್ಕಳಿಗೆ ಶಿಕ್ಷೆ ನೀಡಬೇಡಿ ಎಂದು ಹೇಳುತ್ತಿದ್ದದ್ದು ಇಂದಿಗೂ ನನಗೆ ನೆನಪಿದೆ. ಆದರೂ ಕೊತ್ತನೂರಿನ ಶಾಲೆಯಲ್ಲಿ ನಾನು ಎಂಟನೇ ತರಗತಿಯಲ್ಲಿ ಶಿಕ್ಷಕರಿಂದ ಅನುಭವಿಸಿದ ನರಕವನ್ನು ನಾನಿನ್ನೂ ಮರೆತಿಲ್ಲ. ಶಾಲೆಯಲ್ಲಿ ದೈಹಿಕ ಶಿಕ್ಷೆಯನ್ನು ತಡೆಯಲು ಆಂದೋಲನ, ತರಬೇತಿಗಳನ್ನು ಮಾಡಲು ನಾನು ಪ್ರಾರಂಭಿಸಿದ್ದು ನಾನು ಅನುಭವಿಸಿದ ನರಕವನ್ನು ಇತರ ಮಕ್ಕಳು ಅನುಭವಿಸದಿರಲಿ ಎಂಬ ಉದ್ದೇಶದಿಂದಲೇ. ಉತ್ತರ ಹೇಳಲು ಯೋಚಿಸಿದರೆ ಹೊಡೆಯುವುದು, ತಪ್ಪಾಗಿ ಹೇಳಿದರೆ ಹೊಡೆಯೋದು, ತಲೆ ಎತ್ತಿದ್ರೆ ಹೊಡೆತ, ಪ್ರಶ್ನೆ ಕೇಳಿದರೆ ಹೊಡೆತ, ಪಾಠ ಕಲಿಯುವ ಬದಲು ದಿನಕ್ಕೆ ಎಷ್ಟು ಏಟು ತಿಂದೆ ಎಂದು ಲೆಕ್ಕ ಹಾಕುವ ಅಭ್ಯಾಸ ವಿದ್ಯಾರ್ಥಿಗಳಲ್ಲಿ ಬೆಳೆದುಬಿಟ್ಟಿತ್ತು.

ಶಿಕ್ಷಕರು ಮಕ್ಕಳ ಸ್ನೇಹಿಯಾಗಲಿ, ಶಾಲೆಗಳು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವ ಸ್ಥಳವಾಗಲಿ ಹಾಗೂ ಶಿಕ್ಷಕರು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ ಮತ್ತು ಮಕ್ಕಳ ನ್ಯಾಯ (ರಕ್ಷಣೆ ಮತ್ತು ಪೋಷಣೆ) ಕಾಯ್ದೆ ೨೦೧೫ ಅರಿತುಕೊಳ್ಳಲಿ ಎಂಬುದು ನಮ್ಮ ತರಬೇತಿಯ ಮುಖ್ಯ ಉದ್ದೇಶವಾಗಿತ್ತು. ಪ್ರತಿ ತರಬೇತಿಯಲ್ಲೂ ಪ್ರತಿರೋಧ ಇದ್ದೇ ಇತ್ತು. ಮಕ್ಕಳಿಗೆ ಹೊಡಯದೇ ಪಾಠ ಮಾಡಲು ಅಸಾಧ್ಯ ಎಂಬುದು ಕೆಲವು ಶಿಕ್ಷಕರ ನಂಬಿಕೆಯಾಗಿಬಿಟ್ಟಿತ್ತು. ದಂಡA ದಶ ಗುಣಂ ಭವೇತ್ ಎಂಬ ಮಾತನ್ನು ಹೇಳುತ್ತಿದ್ದರು, ಶಿಕ್ಷಣ ಹಕ್ಕು ಕಾಯಿದೆಯ ವಿಭಾಗ ೧೭ ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ಆಗಬಾರದು ಮತ್ತು ಮಾನಸಿಕ ಕ್ಷೋಭೆ ಉಂಟಾಗಬಾರದು ಎಂದು ತಿಳಿಸಿದರೆ, ಮಕ್ಕಳ ನ್ಯಾಯ ಕಾಯಿದೆಯ ವಿಭಾಗ ೭೫ ಮಕ್ಕಳ ಮೇಲಾಗುವ ದೈಹಿಕ ಶಿಕ್ಷೆಯನ್ನು ಮಕ್ಕಳ ಮೇಲಾಗುವ ಕ್ರೌರ್ಯ ಎಂದು ತಿಳಿಸಿ ಶಿಕ್ಷೆ ವಿಧಿಸಿದೆ ಎಂಬ ವಿಚಾರವನ್ನು ತಿಳಿಸಿದ ನಂತರ ಮನಸ್ಸಿಲ್ಲದೆ ಶಿಕ್ಷಕರು ಮಕ್ಕಳನ್ನು ಹೊಡೆಯಬಾರದು ಎಂಬುದನ್ನು ಒಪ್ಪಿಕೊಳ್ಳುತ್ತಿದ್ದರು.

ಚಿಕ್ಕಬಳ್ಳಾಪುರದ ಪುರಸಭೆ ಸಭಾಂಗಣದಲ್ಲಿ ಶಾಲೆಗಳಲ್ಲಿ ದೈಹಿಕ ಶಿಕ್ಷೆ ತಡೆ ಕುರಿತು ತರಬೇತಿ ಆಯೋಜನೆಯಾಗಿತ್ತು. ಜಿಲ್ಲೆಯ ವಿವಿಧ ಶಾಲೆಗಳಿಂದ ಸುಮಾರು ೩೦ ಜನ ಶಿಕ್ಷಕರು ಆಗಮಿಸಿದ್ದರು. ನಾನು ಬಹಳ ಉತ್ಸಾಹದಿಂದ ವಿಷಯವನ್ನು ಮಂಡನೆ ಮಾಡಿದೆ, ಹಲವಾರು ಉದಾಹರಣೆಗಳು, ಪ್ರಕರಣಗಳನ್ನು ವಿವರಿಸಿದೆ. ಪ್ರತಿ ತರಬೇತಿಯ ನಂತರ “ನಮ್ಮ ಶಾಲೆಯಲ್ಲಿ ಯಾವುದೇ ಕಾರಣಕ್ಕೂ ಮಕ್ಕಳಿಗೆ ದೈಹಿಕ ಶಿಕ್ಷೆ, ಮಾನಸಿಕ ನೋವು ಉಂಟಾಗದAತೆ ನೋಡಿಕೊಳ್ಳುತ್ತೇವೆ, ಮಕ್ಕಳ ಸ್ನೇಹಿಗಳಾಗಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯುತ್ತೇವೆ” ಎಂದು ಶಿಕ್ಷರಿಂದ ಪ್ರತಿಜ್ಞೆ ಮಾಡಿಸುತ್ತಿದ್ದೆವು. ನಂತರ ಹಿಮ್ಮಾಹಿತಿ. ಚಿಕ್ಕಬಳ್ಳಾಪುರದ ತರಬೇತಿ ನಾಲ್ಕು ಗಂಟೆಗೆ ಮುಗಿಯಿತು, ಪ್ರತಿಜ್ಞಾ ವಿಧಿಯ ನಂತರ ಹಿಮ್ಮಾಹಿತಿ ಪ್ರಾರಂಭವಾಯಿತು. “ಬೆಳಗ್ಗೆ ಸಹಿ ಮಾಡಿ ಹೊರಟು ಹೊರಟು ಹೋಗೋಣ ಅಂತ ಬಂದಿದ್ವಿ ಉತ್ತಮ ಮಾಹಿತಿ ಸಿಕ್ತು ಅದಕ್ಕೆ ಕೊನೆ ತನಕ ಇದ್ವಿ” ಒಬ್ಬ ಶಿಕ್ಷಕರ ಹಿಮ್ಮಾಹಿತಿ. “ನೀವು ಹೇಳದ ಮಾಹಿತಿ ಕೇಳಿದೀವಿ ಇದನ್ನ ಪ್ರಾಯೋಗಿಕವಾಗಿ ಮಾಡೋಕೆ ಸಾಧ್ಯನಾ? ಯೋಚಿಸಬೇಕು ..” ಮತ್ತೊಂದು ಹಿಮ್ಮಾಹಿತಿ, “ಹೇಳೋದು ಸುಲಭ ಸಾರ್ ನೀವು ನಮ್ಮ ಶಾಲೆಗೆ ಬಂದು ತಾಕತ್ತಿದ್ರೆ ಒಂದಿನ ಕ್ಲಾಸ್ ಮಾಡಿ ..! ಮಕ್ಕಳಿಗೆ ಹೊಡಿಬಾರದು, ಬೈಯಬಾರದು.. ಒಂದು ಸವಾಲು.

ಸವಾಲಿಗೆ ಏನು ಉತ್ತರ ಹೇಳೋದು ಅಂತ ಸ್ವಲ್ಪ ಯೋಚನೆ ಮಾಡಿ ‘ಓಕೆ ಸಾರ್ ಬರ್ತೀನಿ, ಒಂದು ದಿನ ಪಾಠಾನೂ ಮಾಡ್ತೀನಿ’ ಅಂತ ಸವಾಲನ್ನ ಸ್ವೀಕರಿಸಿಬಿಟ್ಟೆ. ಎಲ್ಲಾ ಶಿಕ್ಷಕರು ಚಪ್ಪಾಳೆ ತಟ್ಟಿದರು. ಅಂದಿನ ತರಬೇತಿ ಮುಗಿದ ನಂತರ ಸವಾಲು ಹಾಕಿದ ಶಿಕ್ಷಕರ ಶಾಲೆಯ ವಿಳಾಸ ಪಡೆದು ಮುಂದಿನ ವಾರ ಬರುತ್ತೇನೆ ಎಂದು ತಿಳಿಸಿದೆ. ಕುಹಕದ ನಗೆ ನಕ್ಕು ಆ ಶಿಕ್ಷಕರು ಬನ್ನಿ ಎಂದರು.
ಅಪರಿಚಿತ ಊರು, ಅಪರಿಚಿತ ಶಾಲೆ, ಅಪರಿಚಿತ ವಿದ್ಯಾರ್ಥಿಗಳಿಗೆ ಒಂದು ದಿನ ಪಾಠಮಾಡಲು ಸಿದ್ಧತೆ ಮಾಡಿಕೊಳ್ಳತೊಡಗಿದೆ. ಮಕ್ಕಳ ಹಕ್ಕುಗಳ ಆಯೋಗ ಸಿದ್ಧಪಡಿಸಿದ ಕೈಪಿಡಿಯನ್ನು ಮತ್ತೆ ಮತ್ತೆ ಓದಿಕೊಂಡೆ, ಮಕ್ಕಳಿಗೆ ಆಡಿಸಬಹುದಾದ ಆಟಗಳನ್ನು ಪಟ್ಟಿ ಮಾಡಿಕೊಂಡೆ. ಯುದ್ಧಕ್ಕೆ ಹೊರಟ ಸೈನಿಕನಂತೆ ಸಿದ್ಧನಾದೆ.

ಅಂದು ಶನಿವಾರ ಚಿಕ್ಕಬಳ್ಳಾಪುರದ ಪಕ್ಕದ ಗ್ರಾಮಕ್ಕೆ ಹೋದೆ. ನನಗೆ ಸವಾಲು ಹಾಕಿದ್ದ ಶಿಕ್ಷಕರೇ ಬಸ್‌ಸ್ಟಾಂಡ್‌ಗೆ ಬಂದಿದ್ದರು. ನನ್ನನ್ನು ಸ್ವಾಗತಿಸಿ ಅವರ ಬೈಕ್‌ನಲ್ಲಿ ಅವರ ಶಾಲೆಗೆ ಕರೆದುಕೊಂಡು ಹೋದರು. ನಾನು ಬರುತ್ತಿರುವ ವಿಚಾರವನ್ನು ಅವರು ಈಗಾಗಲೇ ಇತರ ಶಿಕ್ಷಕರಿಗೆ ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಶಾಲೆಯಲ್ಲಿ ಸಣ್ಣ ಸ್ವಾಗತ ಕಾರ್ಯಕ್ರಮ ಜರುಗಿತು. ”ಇವರು ನಾಗಸಿಂಹ ಅಂತ, ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಾರೆ, ಇವರು ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿ. ಇಂದು ನಿಮಗೆಲ್ಲಾ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸುತ್ತಾರೆ” ಹೀಗೆಲ್ಲಾ ಆ ಸವಾಲು ಶಿಕ್ಷಕರು ನನ್ನನ್ನು ಹೊಗಳಿದರು. ನನಗೆ ಆಶ್ಚರ್ಯ ಆಗಿತ್ತು.

ಹತ್ತನೇ ತರಗತಿಯ ಮಕ್ಕಳು ಸುಮಾರು ನಲವತ್ತು ಜನ ಇದ್ದರು, ಮುಖದಲ್ಲಿ ಮುಗ್ದತೆ ಇತ್ತು. ಈ ಮಕ್ಕಳು ಗಲಾಟೆ ಮಾಡ್ತಾರಾ? ಅನ್ನುವ ಸಂಶಯ ನನಗೆ. ನಾನು ತರಗತಿ ಪ್ರವೇಶ ಮಾಡಿದೆ, ಶಿಕ್ಷಕರು ಸಹ ಬಂದು ಕುಳಿತರು. ಎಂದಿನAತೆ ನಾನು ”ಇಂದಿನ ಮಕ್ಕಳು ಇಂದಿನದೇ ಪ್ರಜೆಗಳು” ಎಂಬ ಘೋಷಣೆಯಿಂದ ತರಗತಿ ಪ್ರಾರಂಭ ಮಾಡಿದೆ. ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳು, ನಮ್ಮ ದೇಶದಲ್ಲಿ ಮಕ್ಕಳ ಪರಿಸ್ಥಿತಿ, ಶಿಕ್ಷಣದ ಮಹತ್ವ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮೇಲಾಗುವ ಕಿರುಕುಳ ಎಲ್ಲವನ್ನೂ ವಿವರಿಸಿದೆ. ಮಕ್ಕಳನ್ನು ಮಾತಾಡಿಸಿಕೊಂಡು ಮದ್ಯ ಮದ್ಯ ನಗಿಸಿ ಮೂರು ಗಂಟೆಗಳ ತರಗತಿ ಮುಗಿಸಿದೆ. ಮಕ್ಕಳು ಚಪ್ಪಾಳೆ ಹೊಡೆದರು. ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದ ಹೇಳಿದರು.

ನಾನು ಮಕ್ಕಳನ್ನು ಬೈದಿರಲಿಲ್ಲ, ಹೊಡೆಯುವ ಬಗ್ಗೆ ಯೋಚಿಸಿರಲೇ ಇಲ್ಲ, ನಾನು ಗೆದ್ದೇ ಎಂಬ ಮುಖದಲ್ಲಿ ಸವಾಲು ಹಾಕಿದ ಶಿಕ್ಷಕರ ಕಡೆ ನೋಡಿ ನಕ್ಕೆ. ಅವರೂ ಮುಗುಳುನಗೆ ನಕ್ಕರು. ವಂದನಾರ್ಪಣೆ ಶುರು ಆಯಿತು. ಸವಾಲು ಹಾಕಿದ ಶಿಕ್ಷಕರೇ ವಂದನಾರ್ಪಣೆ ಮಾಡಿದರು “ನೋಡಿದ್ರ ಮಕ್ಕಳೇ ನಾಗಸಿಂಹರವರು ಎಷ್ಟು ಚನ್ನಾಗಿ ಮಕ್ಕಳ ಹಕ್ಕುಗಳ ಬಗ್ಗೆ ವಿವರಣೆ ನೀಡಿದರು. ಅವರು ತುಂಬಾ ಬ್ಯುಸಿ. ಬಹಳಷ್ಟು ಕಡೆ ತರಬೇತಿ ಮಾಡಲು ಹೋಗ್ತಿರುತ್ತಾರೆ. ನಮ್ಮ ಶಾಲೆಗೆ ಅವರೇ ಬಂದು ನಿಮಗೆಲ್ಲಾ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಲಿ ಅಂತ ನನ್ನಲ್ಲಿ ಅಸೆ ಇತ್ತು ಅದಕ್ಕೆ ಅವರಿಗೆ ತಾಕತ್ತಿದ್ರೆ ಒಂದಿನ ಕ್ಲಾಸ್ ಮಾಡಿ ..!!! ಅಂತ ಸವಾಲು ಹಾಕಿದ್ದೆ. ಕ್ಶಮಿಸಿ ಸಾರ್ ನಿಮ್ಮನ್ನು ನಮ್ಮ ಶಾಲೆಗೆ ಕರೆದುಕೊಂಡು ಬರಬೇಕು ಅಂತ ಆವತ್ತು ಸವಾಲು ಹಾಕಿದ್ದೆ. ಬೇಸರ ಪಟ್ಟುಕೊಳ್ಳಬೇಡಿ. ನಮ್ಮ ಶಾಲೆಯನ್ನು ಮಕ್ಕಳ ಸ್ನೇಹಿ ಶಾಲೆಯನ್ನಾಗಿ ಮಾಡುತ್ತೇವೆ”. ಎಂದರು. ಎಲ್ಲರೂ ಚಪ್ಪಾಳೆ ತಟ್ಟಿ ನನ್ನನ್ನು ಬಿಳ್ಕೊಟ್ಟರು.
ಶಿಕ್ಷಕರ ಸವಾಲು ಸ್ವೀಕರಿಸಿ ನಾನು ಮೂರ್ಖನಾದೆನಾ? ಇಲ್ಲಾ ನಾನು ಮಾಡಿದ್ದು ಸರಿನಾ ಅನ್ನೂ ಪ್ರಶ್ನೆ ನನ್ನನ್ನ ಕಾಡುತಿತ್ತು.

ನಾಗಸಿಂಹ ಜಿ ರಾವ್


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Arun Kumar N
Arun Kumar N
28 days ago

Fantastic content 👌

Uma
Uma
27 days ago

ಆ ಶಿಕ್ಷಕರು ನಿಮ್ಮನ್ನು ಸರಿಯಾಗಿ ಬೇಸ್ತು ಬೀಳಿಸಿದ್ದಾರೆ. ಆದರೂ ನೀವು ತರಗತಿ ತೆಗೆದುಕೊಂಡು ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿದ್ದನ್ನು ಓದಿ ಸಂತಸವಾಯ್ತು

2
0
Would love your thoughts, please comment.x
()
x