ಹುಟ್ಟಿದ ಕೂಡಲೇ ಬಿಳಿಯ ಜಗತ್ತು ಕಂಡಿದ್ದರೇ ಹೀಗಾಗುತ್ತಿರಲಿಲ್ಲವೇನೋ! ಆದರೆ ಕಂಡದ್ದು ಗಡಸು ಬ್ರೌನ್. ನಾವು ಹುಟ್ಟಿದಾಗಿನಿಂದ ಜನರು ನಮ್ಮ ಕಲರ್ಗಳ ನಡುವೆ ನಾವು ಎಷ್ಟು ಬಿಳಿ ಎಂದದ್ದೇ ಹೆಚ್ಚು ಕೇಳಿದ್ದು. ಆದರೆ ದೇಶ ಬಿಟ್ಟು ದೇಶಕ್ಕೆ ಬಂದ ನಂತರ ಆ ವೈಭವೀಕೃತ ಜಗತ್ತು ಹರಿದು ಬಹಳ ತಿಂಗಳುಗಳೇ ಆಗಿಹೋಗಿವೆ.
ಅಂದು ನಾನು ಆಫೀಸಿನಲ್ಲಿದ್ದೆ. ಮಧ್ಯಾಹ್ನ ಊಟ ಮುಗಿಸಿ ಕುಳಿತಿದ್ದೆ. ದಿಢೀರನೆ ಮಗಳ ಸ್ಕೂಲಿನಿಂದ ಒಂದು ಕರೆ ಬಂತು.
“ಹಲೋ!” ಎಂದ ಕೂಡಲೆ ಆ ಬದಿಯಿಂದ ಶಾಲೆಯ ಪ್ರಾಂಶುಪಾಲರು. ವಿಷಯ ಏನೆಂದು ನೇರವಾಗಿ ಹೇಳದೆ, ಸುತ್ತಿ ಬಳಸಿ, “ಸಾರಿ, ನಿಮ್ಮ ಮಗಳು ಈ ರೀತಿ ಅನುಭವಿಸಬೇಕಾಯಿತು” ಅಂತೆಲ್ಲಾ ಏನೇನೋ ಹೇಳುತ್ತಿದ್ದಾರೆ. ಗಾಬರಿಯಾಯಿತು. “ನಿಮ್ಮ ಮಗಳಿಗೆ ರೇಷಿಯಲ್ ಡಿಸ್ಕ್ರಿಮಿನೇಷನ್ (ವರ್ಣಭೇದ) ಆಗಿದೆ. ಅವಳಿಗೆ ಹೀಗಾಗಿರುವುದು ವಿಷಾಧನೀಯ, ನೀವು ಬೇಕಾದರೆ ಇದನ್ನು ಎಸ್ಕಲೇಟ್ ಮಾಡಬಹುದು”, ಹಾಗೆ ಹೀಗೆ, ಅಂತೆಲ್ಲಾ. ನಾನು ತಕ್ಷಣ, ಬೇಡ ಬೇಡ ನೋಡೋಣ ಎಂದು ಫೋನ್ ಕರೆಯನ್ನು ಮೊಟಕುಗೊಳಿಸಿ, ಕೂಡಲೆ ನನ್ನ ಮ್ಯಾನೇಜರ್ ಬಳಿ ಓಡಿದೆ. ಹೋಗಿ ಆ ಪದ ಹೇಳಿ, ನಾನೀಗಲೇ ಶಾಲೆಗೆ ಹೋಗಬೇಕು, ಹೀಗಾಗಿದೆ ಎಂದ ಕೂಡಲೆ, ನನ್ನ ಮ್ಯಾನೇಜರ್, ಮೊದಲು ಓಡು. “ದಿಸ್ ಇಸ್ ಸೊ ಇಂಪಾರ್ಟೆಂಟ್”, ಎಂದು ಕಳುಹಿಸಿಕೊಟ್ಟರು. ಬರುತ್ತಾ ಎಲ್ಲರೂ ನನ್ನ ಬಳಿ, “ಐ ಆಮ್ ಸಾರಿ, ಯುವರ್ ಡಾಟರ್ ಹ್ಯಾಸ್ ಟು ಫೇಸ್ ದಿಸ್” ಎನ್ನಲು ಶುರು ಮಾಡಿದರು. ವಿಷಯ ಹೊಗೆಯಂತೆ ಆಫೀಸಿನಲ್ಲೆಲ್ಲಾ ಹಬ್ಬಿತು. ವಿವರಿಸಲು ಏನಾಗಿದೆ ಎಂದು ನನಗೇ ಗೊತ್ತಿರಲಿಲ್ಲ. ನನ್ನ ಗಂಡನಿಗೆ ಫೋನ್ ಮಾಡಿ, ಅವರನ್ನು ಆಫೀಸಿನಿಂದ ಬರುವಂತೆ ಮಾಡಿ, ಓಡಿದೆ.
ಕಾರಿನಲ್ಲಿ ಕುಳಿತಾಗ-“ಥೂ! ಇದ್ಯಾವ ದೇಶಕ್ಕೆ ಬಂದು ಸಿಕ್ಕಿಹಾಕೊಂಡ್ವಿ. ಪಾಪ ೬ ವರ್ಷದ ಹೆಣ್ಮಗು ಅದು. ಏನಾಗಿದೆಯೋ?”, ಎನಿಸುತ್ತಿತ್ತು. ಅಳುತ್ತಾ ಅವಳು ಕೂತಿರುವುದೇ ಕಣ್ಣ ಮುಂದೆ. ಪ್ರತಿ ಉಸಿರಾಟವೂ ಏಳು ಜನ್ಮ ಸುತ್ತಿಬಂದು ಉಸಿರಾಡುತ್ತಿರುವಷ್ಟು ಕಷ್ಟ.
ನಾನು ಹೋಗಿ ಕಾರ್ ಪಾರ್ಕು ಮಾಡುವಷ್ಟರಲ್ಲಿ ನನ್ನ ಗಂಡ ಸಹ ಬಂದಿದ್ದರು.
ಅದಾಗಲೇ ಮಕ್ಕಳನ್ನು ಕರೆದೊಯ್ಯಲು ಸ್ಕೂಲ್ ಬಸ್ಸುಗಳು ಸಾಲಾಗಿ ನಿಂತಿದ್ದವು. ಇನ್ನೇನು ಅಲ್ಲಿ ಪ್ರಾಂಶುಪಾಲರು ನಿಂತಿದ್ದರು, ಅವರತ್ತ ಹೋಗುವಷ್ಟರಲ್ಲಿ, ಮಗಳು ಅನ್ನದಾ ತನ್ನ ಸಾಲಿನಲ್ಲಿ ಆಚೆ ಬರುತ್ತಿರುವುದು ಕಾಣಿಸಿತು. ಅವಳು ಆರಾಮಾಗಿ ಬರುತ್ತಿರುವುದು ಕಂಡರೂ ಒಂಥರಾ ಭಯ. ಅವಳತ್ತ ಓಡಿ ಹೋದೆವು.
ಅವಳಾದರೋ-“ನೀನೇನೆ ಇಲ್ಲಿ? ಏನಾಯಿತು?” ಎಂದು ಕೇಳಿ ಬಿಡೋದ.
ಅರೇ? ನಾವು ಯಾರು ಏನಂದರು? ಪ್ರಿನ್ಸಿಪಾಲರ ಕರೆ ಎಲ್ಲಾ ಹೇಳಿ, ಏನಾಯಿತೆಂದು ವಿಚಾರಿಸಿದೆವು. ಅವಳು ನಗುತ್ತಾ-“ಅಯ್ಯೋ, ಲಿಯಾನ್ ಅನ್ನುವ ಹುಡುಗ ಅವಳನ್ನು “ಬ್ಲಾಕ್ ಮಂಕಿ” ಎಂದು ಕರೆದ ವಿಷಯ ಹೇಳಿದಳು.
ನಾನು ಪ್ರತಿ ಭಾರತೀಯ ನಾರಿಯಂತೆ-“ನೀನೇನು ಹೇಳಿದ್ದೆ ಮೊದಲು?” ಎಂದು ಕೇಳಿದೆ.
ಅವಳು-“ಅದು ನಾನು, ಡಿಲೈಲಾ, ಎಲ್ಲಿ, ಮ್ಯಾಲೈನ್ ಆಟ ಆಡುತ್ತಿದ್ದೆವು. ಎಲ್ಲಿ ಮಂಕಿ ಬಗ್ಗೆ ಹೇಳುತ್ತಿದ್ದಳು. ವೈಟ್ ಮಂಕಿ ಬ್ರೌನ್ ಮಂಕಿ ಅಂತೆಲ್ಲಾ. ಲಿಯಾನ್ ಬಂದು ನನ್ನನ್ನು ನೋಡಿ ಬ್ಲಾಕ್ ಮಂಕಿ ಎಂದ. ಅದೇ ಸಮಯಕ್ಕೆ ಎಡ್ಯುಕೇಶನ್ ಅಸಿಸ್ಟೆಂಟ್ ಒಬ್ಬರು ಕೇಳಿಸಿಕೊಂಡು, ನನ್ನನ್ನ ಮತ್ತೆ ಲಿಯಾನ್ ಮತ್ತೆ ಅವನ ಇಬ್ಬರು ಸ್ನೇಹಿತರನ್ನು ಪ್ರಾಂಶುಪಾಲರ ಕೊಠಡಿಗೆ ಕರೆದೊಯ್ದು “ರೇಸಿಸಮ್” ಅಂತ ಹೇಳಿ, ಅವರಪ್ಪ ಅಮ್ಮನಿಗೆ ಫೋನ್ ಮಾಡಿ ಇದೆಲ್ಲಾಹೇಳಿ, ಅವರೆಲ್ಲ ನನ್ನತ್ರ ಸಾರಿ ಕೇಳಿ, ಆ ಬಾಯ್ಸ್ ಕೈಯಲ್ಲಿ ಸಾರಿ ಕಾರ್ಡ್ ಮಾಡಿಸಿ, ನಿಮಗೂ ಫೋನ್ ಮಾಡಿ” ಇಷ್ಟೆಲ್ಲಾ ಆಯಿತು. ಎಂದಳು.
ನೆತ್ತಿಗೇರಿದ್ದ ದುಃಖ ಒಮ್ಮೆಲೆ ಜಾರಿ ನಗು ಬೊಳ್ ಎಂದು ಬಂದಿತು. ಆ ಹುಡುಗರ ಬಗ್ಗೆ ಅಯ್ಯೋ ಎನಿಸಿತು. ನನ್ನ ಮಗಳನ್ನು ಕೇಳಿದೆವು-“ನಿನಗೆ ಬೇಜಾರಾಯಿತಾ?” ಅಂತಾ.
ಆಗ ಅವಳು-“ಮೊದಲು ನನಗೇನು ಅನ್ನಿಸಲಿಲ್ಲ. ಅವರು ಕಾರ್ಡ್ ಕೊಟ್ಟು ಸಾ ರಿ ಕೇಳಿದಾಗ ಬೇಜಾರಾಯಿತು. ಎಂದಳು.
ನಾನು ವಿಜೇತ್ ಮುಖ ಮುಖ ನೋಡಿ ನಗು ತಡೆಯಲಾಗಲಿಲ್ಲ. ಒಂದು ಬಾರಿ ನಮ್ಮ ಬಾಲ್ಯ ನೆನಪಾಯಿತು. ಏನೆಲ್ಲಾ ಅಂದು ಆಡಿಲ್ಲ. ಒಂದು “ಬ್ಲಾಕ್ ಮಂಕಿ” ಗೆ ಎಷ್ಟೆಲ್ಲಾ? ಎಂದು.
ಅನ್ನದಾ- “ಆದರೂ ಅಮ್ಮ ಇದನ್ನ್ಯಾರದ್ರೂ ಇಷ್ಟೊಂದು ದೊಡ್ಡ ಮಾಡ್ತಾರ?” ಎಂದು ಕೇಳಿದಾಗ, ನನಗನ್ನಿಸಿತು-“ಇದೆಲ್ಲಾ ಎಲ್ಲಿ ಬೇಕೋ ಅಲ್ಲಿದ್ದರೆ ಒಳ್ಳೆಯದೆ”. ಆದರೆ ನಾವು ಭಾರತೀಯರು. ಅಂದು ಆಡುವುದಕ್ಕೆ ಮನಸ್ಸು ಒಗ್ಗಿ ಹೋಗಿದೆ. ನನ್ನ ಮಗಳಿಗೂ ಅಷ್ಟೆ. ಇದೆಲ್ಲಾ ಒಂದು ವಿಷಯವೇ ಅಲ್ಲ. ಅಂದು ಅನ್ನದಾ ಹೇಳಿದಳು-” ನೀವ್ ಹೇಳ್ತಿರಲಾ, ನಮ್ಮ ಹ್ಯಾಪಿನೆಸ್ ಯಾರೂ ಕಿತ್ಕೊಬಾರದು ಅಂತ, ಹಂಗೆ ನಾನು ಅವರಿಗೆ ಇಟ್ಸ್ ಓಕೆ ಐ ನೋ ಐ ಆಮ್ ಬ್ಯೂಟಿಫುಲ್, ಅಂದು ಫ್ರೆಂಡ್ಸ್ ಆದೆ.” ಅಂದಳು.
ನಾವೂ ಪ್ರಾಂಶುಪಾಲರನ್ನು ಕಂಡು- “ಈ ವಿಷಯವಾಗಿ ನಾವೇನೂ ಕ್ರಮ ತಗೊಳ್ಳೋದಿಲ್ಲ ಆ ಹುಡುಗರಿಗೆ ಏನೂ ಮಾಡುವುದು ಬೇಡ” ಎಂದು ವಾಪಸ್ಸು ಬಂದೆವು.
ಬರುತ್ತಾ ನಮ್ಮ ಮೂವರಿಗೂ ಆದದ್ದರ ಬಗ್ಗೆ ನಗು. ಪಾಪ ಇವರ ಆಟದಲ್ಲಿ ಆ ಆರು ವರ್ಷದ ಮಗು ಒಂದು ಬಣ್ಣವನ್ನು ಹೇಳಿದೆ. ಅವನು ಎಂದೂ ಇವಳೊಂದಗೆ ಕೆಟ್ಟದಾಗಿ ನಡೆದುಕೊಂಡಿಲ್ಲ. ಎಲ್ಲವೂ ಕೊ-ಇನ್ಸಿಡೆನ್ಸಾಗಿದೆ. ಜೊತೆಯಲ್ಲಿ ನಾವು ಚಿಕ್ಕ ವಯಸ್ಸಲ್ಲಿ ಕರಿಯಾ, ಡುಮ್ಮ, ಕುಳ್ಳ ಏನೆಲ್ಲಾ ಮಾತನಾಡಿಲ್ಲ. ನಮಗೆ ಏನೇನೊ ಅನಿಸಿಕೊಂಡು ಅಭ್ಯಾಸವಿರುವುದಿಂದಲೋ ಏನೋ, ಈ ವಿಷಯ ಆಫ್ಟರಾಲ್ ಅನಿಸಿ “ಟೆನ್ಷನ್ ಕೊಟ್ಬಿಟ್ಟರು …..” ಅನ್ಕೊಂಡ್ವಿ.
ಮನೆಗೆ ಬರುತ್ತಿದಂತೆ ನನ್ನ ಮಗಳು- “ನೀನೆಲ್ಲಿಗೆ ಬರ್ತಿದ್ಯಾ? ಆಫೀಸಿಗೆ ಹೋಗು” ಎಂದಳು. ನನ್ನದು ಬಿಟ್ಟು ಬರುವಂತಾ ಕೆಲಸವಲ್ಲ ಎಂದು ಅವಳಿಗೂ ಗೊತ್ತು.
ಎಲ್ಲಾ ಮುಗಿಸಿ ವಾಪಸ್ಸು ಆಫೀಸಿಗೆ ಹೋಗಿ, ನನಗೆ ನಗು ಬರುತ್ತಿದ್ದ ವಿಷಯವನ್ನು ನಾನು ಈಗ ಸೀರಿಯಸ್ಸಾಗಿ ಹೇಳಬೇಕು. ಇಲ್ಲವಾದರೆ ಏನೆಂದುಕೊಳ್ಳುತ್ತಾರೋ ಎಂದುಕೊಂಡು. ನಡೆದದ್ದನ್ನೇ ಮುಖ ಕೊಂಕಿಟ್ಟವಳಂತೆ ಹೇಳಿದೆ. “ಬಾಯ್ಸ್ ಆರ್ ಮೀನ್”, “ನಿಮ್ಮ ಮಗಳನ್ನು ತುಂಬಾ ಚೆನ್ನಾಗಿ ಬೆಳೆಸುತ್ತಿದ್ದೀಯ” ಹೀಗೆ ಏನೇನೋ ಹೊಗಳಿಕೆಗಳು.
ಆದರೆ ನಾವೆಲ್ಲಾ ಬೆಳದದ್ದೇ ಹೀಗಲ್ವಾ? ಸಾವಿರ ಅಂಕು ಡೊಂಕುಗಳು, ಆದರೆ ಎಲ್ಲದನ್ನೂ ವರೆಸಿಕೊಂಡು ಹೋಗುವ ನಮ್ಮ ಮನಃಸ್ಥಿತಿ. ನಾವು ಹೀಗೆ ಬೆಳೆದದ್ದೇ ಒಳ್ಳೆಯದೆನೋ. ನಮ್ಮ ಮಕ್ಕಳೂ ಅಷ್ಟೇ.
ನಮಗೆ ಅವರ ನಡೆ ಕೊಂಚ ಅತಿ ಎನಿಸಿದರೂ, ಪೋಷಕರಾಗಿ, ನಾವು ಹೋಗಿ ನಮ್ಮ ಮಗಳ ಜೊತೆ ನಿಂತಿದ್ದು ಒಳ್ಳಿಯದೇ ಆಯಿತು, ಎಂದು ಇಂದಿಗೂ ನನಗೆ ಅನಿಸುತ್ತದೆ. ಅದು ನಾವೀದ್ದೇವೆ ಎಂದು ಅವಳಿಗೊಂದು ಭರವಸೆ.
ಆ ರಾತ್ರಿ ನಡೆದ ವಿಷಯವನ್ನು ನಮ್ಮ ಕಿರಿಮಗ ತತ್ತ್ವನಿಗೆ ಆಮೇಲೆ ಹೇಳಿದರೆ, ಅವನು ಮಗಳಿಗೆ- “ಬ್ಲಾಕ್ ಮಂಕಿ” ಎಂದು ನಕ್ಕಿಬಿಡೋದ? ಅವಳಾದರೋ -:”ನೀನು ಬ್ಲಾಕ್ ಗೊರಿಲ್ಲಾ” ಎಂದಳು. ಎಂದಿನಂತೆ ಅವರ ಜಗಳದಲ್ಲಿ ನಾವಿಲ್ಲ ಎಂದು ಟಿವಿ ಹಾಕಿದೆವು. ನಮ್ಮ ನೆಚ್ಚಿನ ಚ್ಯಾನೆಲ್ ಹಾಕಿದಂತೆ, ಇಬ್ಬರು ಓಡಿ ಬಂದರು. “ಆಕರ್ಷ ಕಮಲ ಹಾಕು” ಅಂತಾ. ಅಲ್ಲಿಗೆ ಎಲ್ಲರೂ ಅಂದು ನಕ್ಕು ಊಟ ಮುಗಿಸಿದೆವು.
ಇಂದಿಗೂ ಅದು ನಗೆಯ ಚಿಟಾಕು ನಮ್ಮ ಮನೆಯಲ್ಲಿ.
–ಡಾ. ಅಮೂಲ್ಯ ಭಾರದ್ವಾಜ್
ಡಾ. ಅಮೂಲ್ಯ ಭಾರದ್ವಾಜ್ ಮೈಸೂರಿನವರು. ಅವರು ಪ್ರಸ್ತುತ ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಸದಾ ಕಲಿಯಲು ಇಚ್ಛಿಸುವ ಅವರು ಸಾಹಿತ್ಯ ಮತ್ತು ಸಂಸ್ಕೃತಿಯ ಆಸಕ್ತರು. ತಮ್ಮ ಬರಹಗಳ ಮೂಲಕ ಕಲಿಕೆ ಮತ್ತು ಚಿಂತನೆಗಳನ್ನು ಹಂಚಿಕೊಳ್ಳುತ್ತಾರೆ.
ವಿದೇಶದ, ಅದರಲ್ಲಿಯೂ ಪಾಶ್ಚಿಮಾತ್ಯ ದೇಶಗಳಲ್ಲಿ ಇದೊಂದು ಸಾಮಾನ್ಯ ವಿಷಯವೇ ಆಗಿದೆ. ಎಲ್ಲದಕ್ಕೂ ಔಪಚಾರಿಕ ಲೇಪನ ಹಚ್ಚಿ ಬದುಕುವ ಮಂದಿ ಅವರು. ನಮ್ಮಂತೆ ಸೀದಾ ಸಾದಾ ಬದುಕು ಒಗ್ಗದ ಜನ. ಸಣ್ಣ ವಿಷಯಗಳಿಗೆ ಹೆಚ್ಚಿನ ಮಹತ್ವ ಕೊಡುವ ಬದುಕು ಅವರದು. ನಿಮ್ಮ ಲೇಖನದಲ್ಲಿ ಬರುವಂತೆ ನನಗೂ ಅಂಥಹ ಅನುಭವಗಳು ನನ್ನ ಮೊಮ್ಮಗನ ಮುಖಾಂತರ ಆಗಿದೆ. ವಿದೇಶದ ಪ್ರವಾಸ ಮತ್ತು ವಾಸ್ತವ್ಯ ಇಂತಹ ಅನುಭವಗಳನ್ನು ಕೊಟ್ಟಿದೆ. ಒಳ್ಳೆಯ ಲೇಖನ. ನಿಮ್ಮ ಲೇಖನ ಸುಲಲಿತವಾಗಿ ಓದಿಸಿ ಕೊಳ್ಳುತ್ತದೆ. ಇನ್ನೂ ಹೆಚ್ಚು ಅನುಭವಗಳನ್ನು ನೀವು ಬರೆಯುವಂತಾಗಲಿ.