ಮೂಗು ಸುಂದರಿಯೂ ಕಪ್ಪು ಹುಡುಗನೂ: ಎಂ ನಾಗರಾಜ ಶೆಟ್ಟಿ

ಹಾರ ಹಾಕಿ, ಧಾರೆ ಎರೆದು ಅಕ್ಷತೆ ಕಾಳು ಹಾಕುವುದನ್ನೇ ಕಾದಿದ್ದ ಅವಸರದ ಅನೇಕ ಆಮಂತ್ರಿತರು ಶುಭಕೋರಲು ಸಭಾಂಗಣದಿಂದ ಎದ್ದು ವೇದಿಕೆಯ ಎಡಭಾಗದಲ್ಲಿ ಒತ್ತೊತ್ತಾಗಿ ನೆರೆದುದನ್ನು ಕಂಡು ʼ ಸ್ವಲ್ಪ ತಾಳಿ ʼ ಎಂದು ಸುಧಾರಿಸಿಕೊಂಡು ಬರಲು ಮದುಮಕ್ಕಳನ್ನು ವೇದಿಕೆಯ ಪಕ್ಕದ ಕೋಣೆಗಳಿಗೆ ಕಳಿಸಿ ಕೊಡಲಾಯಿತು. ಹೆಚ್ಚೆಚ್ಚು ಜನ ಸೇರುತ್ತಿದ್ದಂತೆಲ್ಲಾ ಸರತಿಯ ಮುಂದಿದ್ದ ಆತುರಗಾರರು ʼ ಬೇಗ ಬರಕ್ಕೆ ಹೇಳಿ ʼ ಎಂದು ತಾಳ್ಮೆಗೆಟ್ಟು ಕೂಗುವುದನ್ನು ಕಂಡು, ಜನ ಅವಸರ ಮಾಡುತ್ತಿದ್ದಾರೆ ಬೇಗ ಬರಬೇಕಂತೆ ಎಂದು ಮದುಮಕ್ಕಳಿಗೆ ಹೇಳಿ ಕಳಿಸಿದರು.

ಬ್ಯೂಟಿಷಿಯನ್‌ ಅಲಂಕಾರ ಸಾಮಗ್ರಿಗಳ ಸಮೇತ ಇನ್ನೊಂದು ಮದುವೆಗೆ ತೆರಳಿದ್ದರಿಂದ ಮನೆಯವರೇ ಬೆವರೊರೆಸಿ, ಸೀರೆ- ಸೆರಗು ಸರಿ ಮಾಡಿ, ಶೃಂಗಾರಕ್ಕೆ ಕುಂದಾಗದಂತೆ ಸಜ್ಜುಗೊಳಿಸಿದ್ದರಿಂದ ವಧು ಹೊತ್ತು ಮಾಡದೆ ನಸುನಗುತ್ತಾ ಅವನತ ಮುಖಿಯಾಗದೆ ಪ್ರವೇಶಿಸಿದಳು. ತಲೆಗೆ ಧರಿಸಿದ್ದ ಪೇಟಾವನ್ನು ತೆಗೆದು ಫ್ಯಾನ್‌ ಕೆಳಗೆ ಕೂತು ಬೆವರಾರಿಸಿಕೊಳ್ಳುತ್ತಿದ್ದ ವರನಿಗೆ ಮದುಮಗಳು ವೇದಿಕೆಗೆ ಬಂದಿರುವುದನ್ನು ತಿಳಿಸಿ ಲಗುಬಗೆಯಿಂದ ಸಿದ್ಧಗೊಳಿಸಿ, ಗಡ್ಡ, ಮೀಸೆ ತೀಡಿ, ಪೇಟಾ ಹಾಕಿ ಎಡಗಡೆಯ ಕೋಣೆಯಿಂದ ಕರೆದುಕೊಂಡು ಬಂದರು.

ಅವರ ಬರವನ್ನೇ ಕಾಯುತ್ತಿದ್ದವರು ಹಸಿರು ಸಿಗ್ನಲ್‌ ಕಂಡಾಗ ಧಾವಿಸುವ ವಾಹನಗಳಂತೆ ದಡಬಡ ನುಗ್ಗಿ ಕೈಕುಲುಕಿ, ಬಡಬಡ ಶುಭಾಶಯ ಹೇಳಿ ಹೊರಡುವಾಗ ʼ ಅಕ್ಷತೆ ಹಾಕಿ ʼ ಎಂದವರ ಮಾತು ಕೇಳಿಸಿಕೊಂಡು ತಲೆ ಮೇಲೆ ನಾಲ್ಕು ಕಾಳು ಉದುರಿಸುತ್ತಿದ್ದರು. ಫೋಟೋಗ್ರಾಫರ್ ಶುಭಾಶಯ ಕೋರಿ ಹೊರಟವರನ್ನು ʼ ನಿಲ್ಲಿ, ನಿಲ್ಲಿ ʼ ಎಂದು ನಿಲ್ಲಿಸಿ, ಮದುಮಗಳಿಗೆ ಸ್ಮೈಲ್‌ ಮಾಡಲು ತಿಳಿಸುವ ಸಮಯದಲ್ಲಿ ಏನೋ ಹೇಳಲು ಅವಳ ಕಿವಿಯ ಹತ್ತಿರ ಮುಖ ತಂದಿದ್ದ ಮದುಮಗನ ಬಾಯಿಗೆ ಯಾರೋ ಎಸೆದ ಅಕ್ಷತೆ ಬಿತ್ತು. ಅದನ್ನು ನುಂಗುವುದೋ ಬೇಡವೋ ಎಂದು ಚಣ ಯೋಚಿಸಿದ ಮದುಮಗ ಎಲ್ಲಿ ಉಗುಳುವುದೆಂದು ತಿಳಿಯದೆ ನುಂಗಿಯೇ ಬಿಟ್ಟ. ಅವನಿಗೆ ಶಾಂತಿಯೊಡನೆ ಮಾತನಾಡಬೇಕಿತ್ತು. ಅದಕ್ಕೆ ಅವಕಾಶ ಕೊಡದಂತೆ ಜನ ವೇದಿಕೆಗೆ ಬರುತ್ತಲೇ ಇದ್ದರು; ಅಕ್ಷತೆ ಹಾಕುತ್ತಲೇ ಇದ್ದರು; ಕೈ ಕುಲುಕುತ್ತಲೇ ಇದ್ದರು.

ಜನ ಗುಂಪು ಗುಂಪಾಗಿ ಬರುತ್ತಿದ್ದುದರಿಂದ ಫೋಟೋಗ್ರಾಫರ್ ಫೋಟೋ ತೆಗೆಯಲಾರದೆ ಒದ್ದಾಡುತ್ತಿದ್ದ. ʼ ಒಟ್ಟೊಟ್ಟಿಗೇ ಬರಬೇಡಿ. ಇಬ್ಬಿಬ್ಬರೇ ಬನ್ನಿʼ ಎನ್ನುವ ಅವನ ಮಾತಿಗೆ ಜನರು ಕ್ಯಾರೇ ಅನ್ನುತ್ತಿರಲಿಲ್ಲ. ಆದಷ್ಟು ಹೆಚ್ಚು ಸ್ನಾಫ್ಸ್‌ ತೆಗೆದು, ದೊಡ್ಡ ಬಿಲ್‌ ಮಾಡುವ ಹವಣಿಕೆಯಲ್ಲಿದ್ದ ಕ್ಯಾಮರಾ ಮಂದಿ ʼ ಯಾರಾದ್ರು ನಿಂತು ಇಬ್ಬಿಬ್ಬರನ್ನೇ ಕಳಿಸಿ ʼ ಎಂದು ಗೋಗರೆಯುತ್ತಿದ್ದುದನ್ನು ಕೇಳಿ ಇಬ್ಬರು ಬೌನ್ಸರ್‌ಗಳಂತ ಯುವಕರಿಗೆ ಅಡ್ಡವಾಗಿ ನಿಲ್ಲಲು ಯಾರೋ ಹೇಳಿದರು. ಆ ಯುವಕರು ತುಡುಗು ದನಗಳಿಗೆ ಅಡ್ಡ ಕಟ್ಟುವ ಬಿದಿರು ಗಳದಂತೆ ಕೈಕೈ ಹಿಡಿದು- ಮದುಮಕ್ಕಳ ಜೊತೆ ಫೋಟೋ/ ವಿಡಿಯೋ ತೆಗೆಸಿಕೊಂಡವರು ತೆರಳುವುದನ್ನು ಕಾಯುತ್ತಿದ್ದು ಸರತಿ ಪ್ರಕಾರ ಕಳಿಸುತ್ತಿದ್ದರು.

ಗಡಿಬಿಡಿಯಲ್ಲಿ ಶುಭಾಶಯ ಹೇಳಿ ಹೋಗುವವರ ನಡುವೆ ಕೆಲವರು ಗಟ್ಟಿಯಾಗಿ ಮಾತನಾಡಿಕೊಳ್ಳುವುದು ಕೇಳಿಸುತ್ತಿತ್ತು. ಅರ್ಜಂಟಲ್ಲಿದ್ದವರು ಅದರ ಪರಿವೆಯೇ ಇಲ್ಲದೆ ವಿಶ್‌ ಮಾಡಿ- ಪೋಟೋಗೆ ಪೋಸ್‌ ಕೊಟ್ಟು ಹೊರಡುತ್ತಿದ್ದರು. ಗದ್ದಲ ಮಾಡುತ್ತಿದ್ದ ಗುಂಪು ಹತ್ತಿರಕ್ಕೆ ಬಂತು. ಅಡ್ಡಗಟ್ಟಿ ನಿಂತಿದ್ದ ಯುವಕರಿಗೆ ʼ ಮದುಮಕ್ಕಳನ್ನು ನಿಲ್ಲಿಸಿದ್ದು ಸರಿ ಇಲ್ಲ. ಹೋಗಿ ಹೇಳಿ ʼ ಎಂದವರು ಏರು ಸ್ವರದಲ್ಲೇ ಹೇಳಿದರು.

ಹೊಸದಾಗಿ ಸೈನ್ಯಕ್ಕೆ ಸೇರಿದ್ದ ವೀರರಂತೆ ಎದೆ ಉಬ್ಬಿಸಿ ನಿಂತಿದ್ದ ಯುವಕರಿಗೆ ತಮಗೊಪ್ಪಿಸಿದ ಕೆಲಸದ ಹೊರತು ಇತರ ತಾಂತ್ರಿಕ ವಿಷಯಗಳ ಅರಿವು ಕಿಂಚಿತ್ತೂ ಇರಲಿಲ್ಲ. ಗುಂಪಿನ ಜನ ಹೇಳಿದ್ದರ ತಲೆಬುಡ ಅವರಿಗೆ ಅರ್ಥವಾಗದೆ, ಮಿಕಿಮಿಕಿ ನೋಡುತ್ತಾ ನಿಷ್ಠ ಸೈನಿಕರಂತೆ ಕೈ ಬೇಲಿ ಮತ್ತಷ್ಟು ಬಲ ಪಡಿಸಿದರು. ಅವರ ಅನಾಸಕ್ತಿಯನ್ನು ಕಂಡ ಗುಂಪು ಕುಪಿತಗೊಂಡು ನಿಯಂತ್ರಣ ರೇಖೆಯನ್ನು ದಾಟಲು ಪ್ರಯತ್ನ ಮಾಡುತ್ತಿತ್ತು.

ಈ ಗದ್ದಲದಲ್ಲಿ ಅಲ್ಪ ವಿರಾಮ ಸಿಕ್ಕಿ ಮದುಮಗ ಶಾಂತಿಯ ಕೆನ್ನೆ ಹತ್ತಿರ ಮುಖ ತಂದು, ಚುಚ್ಚುತ್ತಿರುವ ಗಡ್ಡಕ್ಕೆ ಆಕೆ ರೋಮಾಂಚನಗೊಳ್ಳುತ್ತಿರುವಂತೆ ಕಿವಿಯಲ್ಲೇನೋ ಉಸುರಿದ. ಮದುಮಗಳು ಶಾಂತಿ ಅವನ ಮಾತಿಗೆ ಪುಲಕಗೊಂಡು ಓರೆ ನೋಟವ ಬೀರಿದಳು. ಸುರೇಶ ಹೇಳಿದ್ದಿಷ್ಟೇ: ʼ ನಿನ್ನ ಮೂಗು ಮಸ್ತ್‌ ಪೊರ್ಲ್‌ ʼ. ಶಾಂತಿಯ ಇನ್ನಿತರ ಅಂಗೋಪಾಂಗಗಳೂ ಕಣ್ಸೆಳೆಯುವಂತಿದ್ದರೂ ಮೂಗಿನ ಬಗ್ಗೆ ಅವನು ಹೇಳಿದ್ದು ಸೆಂಟ್‌ ಪರ್ಸೆಂಟ್‌ ಸತ್ಯವಾಗಿತ್ತು! ಉದ್ವೇಗದಿಂದ ಸುರೇಶ ಮದುವೆಯ ವೇದಿಕೆಯ ಮೇಲೆಯೇ ಹೇಳಿದ್ದು ಶಾಂತಿಯನ್ನು ಪುಲಕಿತಗೊಳಿಸಿತ್ತು.

ಶಾಂತಿಯ ಮೂಗು ಚಂದ ಇದೆ ಎಂದು ತಾರೀಪು ಮಾಡಿದವರಲ್ಲಿ ಸುರೇಶ ಮೊದಲಿಗನೇನೂ ಅಲ್ಲ. ಹೈಸ್ಕೂಲಲ್ಲಿ ಲೆಕ್ಕದ ಗಜಾನನ ಸರ್‌ ಒಂದಕ್ಕೆರಡಕ್ಕೆಲ್ಲ ಮೂಗನ್ನೇ ಹಿಂಡುತ್ತಿದ್ದರು. ʼಯಾಕೆ ಸರ್‌, ಮೂಗು ಚಿವುಟುತ್ತೀರಿ ʼ ಎಂದೊಮ್ಮೆ ಧೈರ್ಯವಾಗಿಯೇ ಕೇಳಿದ್ದಳು. ʼ ನಿನ್ನ ಮೂಗು ಚಂದ, ಅದಕ್ಕೇ ಕೈ ಅಲ್ಲೇ ಹೋಗುತ್ತದೆ ʼ ಎಂದವರು ಕಳ್ಳ ನಗೆ ಬೀರಿದ್ದರು. ಗಜಾನನ ಸರ್ ಅನ್ನು ಮನಪೂರ್ವಕ ಕ್ಷಮಿಸಿ ಮನೆಗೆ ಬಂದು ಮೂಗನ್ನೇ ಮತ್ತೆ ಮತ್ತೆ ನೋಡಿದ ಶಾಂತಿ ತನ್ನ ಮೂಗಿಗೇ ತಾನೇ ಮರುಳಾಗಿದ್ದಳು!

ಶಾಂತಿಯ ಮೂಗು ನೀಳವಾಗಿ, ಕೇದಗೆಯ ಹಾಗೇನೂ ಇರದೆ ಚಿಕ್ಕ ಹಣೆ, ಅಗಲ ಗಲ್ಲಕ್ಕೆ ಒಪ್ಪವಾಗಿ, ಶಿಲ್ಪಿಯೊಬ್ಬ ತದೇಕಚಿತ್ತದಿಂದ ತಿದ್ದಿ, ತೀಡಿ ರೂಪಿಸಿದಂತಿತ್ತು. ಮೂಗಿನ ಬಗ್ಗೆ ಜಂಬ ಇದ್ದ ಶಾಂತಿಗೆ ʼ ಮೂಗು ಚಂದ ಇದೆ ʼ ಎಂದು ಹೇಳಿದವರ ಮೇಲೆ ಪ್ರೀತಿ ಉಕ್ಕುಕ್ಕಿ ಬರುತ್ತಿತ್ತು. ಮೂಗನ್ನು ಗಮನಿಸದೆ ಎತ್ತೆತ್ತಲೋ ನೋಡಿ ಮಾತನಾಡುವವರನ್ನು ಕಂಡರೆ ಆಗಿ ಬರುತ್ತಿರಲಿಲ್ಲ. ಎಲ್ಲರಲ್ಲೂ ಏನಾದರೊಂದು ವಿಶೇಷವಾದುದು ಇರುತ್ತದೆ; ಅವರಿಗದು ತಿಳಿದಿರುವುದಿಲ್ಲ. ತಿಳಿದರೂ ಶಾಂತಿ ತರ ಪಾರ್ಲರಿಗೆ ಆಗಾಗ್ಗೆ ಹೋಗಿ ಹೊರಳೆಯಿಂದ ಹೊರಗಿಣುಕುವ ಕೂದಲನ್ನು ಕೀಳಿಸಿ ಮೂಗನ್ನು ಉಜ್ಜಿ, ಉಜ್ಜಿ ಹೊಳಪು ಬರುವಂತೆ ಮಾಡುವುದಿಲ್ಲ!

ಶಾಂತಿಯ ವದನದಲ್ಲಿ ಚೆರ್ರಿ ಆನ್‌ ದಿ ಕೇಕ್‌ ತರ ಹೊಳೆಯುತ್ತಿದ್ದ ಮೂಗನ್ನು ಚುಚ್ಚಿ, ಮೂಗಿಗಿಂತ ಮೂಗುತಿ ಭಾರವಾಗದಂತಿರಲು ಅಪ್ಪ ತ್ಯಾಂಪಣ್ಣನೇ ಕಾರಣ. ಹೆಣ್ಣು ಮಗು ಹುಟ್ಟಿದಾಗ, ತೀರಿ ಹೋದ ಅಮ್ಮ ಮತ್ತೆ ಹುಟ್ಟಿ ಬಂದರೆಂದು ಖುಷಿ ಪಟ್ಟ ತ್ಯಾಂಪಣ್ಣ ಯಾರೆಷ್ಟು ಹೇಳಿದರೂ ಮಗುವಿನ ಮೂಗು ತೂತು ಮಾಡಲು ಒಪ್ಪಿರಲಿಲ್ಲ. ಚಂದದ ಮೂಗನ್ನು ಚುಚ್ಚಿ ನೋಯಿಸಿ, ಅಳಿಸುವುದು ಬೇಡ, ಬೇಕಾದರೆ ಮದುವೆ ಹೊತ್ತಿಗೆ ನೋಡೋಣ ಎಂದ ಅವರ ಮಾತನ್ನು ಮದುವೆ ಗೊತ್ತಾದ ನಂತರ ಅಮ್ಮ ನೆನಪಿಸಿ ಮದುವೆಗೆ ಮೂಗುತಿ ಹಾಕಲೇ ಬೇಕು, ಹುಡುಗನ ಮನೆಯವರು ಸಂಸ್ಕಾರವೇ ಇಲ್ಲ ಎಂದು ಬಿಟ್ಟಾರು ಎಂದು ಹೆದರಿಸಿದ್ದರು. ತನ್ನ ಸರ್ವಸ್ವವೂ ಮೂಗಲ್ಲಿ ಅಡಗಿದೆ ಎಂದು ತಿಳಿದಿದ್ದ ಶಾಂತಿ- ʼಮದುವೆಯಾಗದೆ ಇರುತ್ತೇನೆ, ಆದ್ರೆ ಮೂಗು ಚುಚ್ಚಿಸಿಕೊಳ್ಳಲ್ಲ ʼ ಎಂದು ಮೂಗು ಹಿಡಿದು ಕೂತಿದ್ದರಿಂದ ಮೂಗಿನ ಸೌಂದರ್ಯಕ್ಕೆ ಕುಂದು ಒದಗಲಿಲ್ಲ.

ಶಾಂತಿಯ ಅಚ್ಚ ಬಿಳಿ ಬಣ್ಣಕ್ಕೆ ಮಾರು ಹೋಗಿ, ಅವಳು ಸುರೇಶನನ್ನು ಒಪ್ಪಿಕೊಂಡಿದ್ದೇ ಹೆಚ್ಚು ಎಂದು ಭಾವಿಸಿದ್ದ ಹುಡುಗನ ಮನೆಯವರು ಮೂಗಿನ ತಂಟೆಗೆ ಹೋಗದೆ ಇದ್ದರೂ ಸುರೇಶ ಮೆಚ್ಚು ನುಡಿದಿದ್ದುದರಿಂದ ಮೈಮರೆತ ಶಾಂತಿ ಕಣ್ಣಲ್ಲೇ ನನ್ನಿ ಹೇಳಿದಳು.

ಅಡ್ಡ ನಿಂತ ಹುಡುಗರ ನಡುವೆ ನುಸುಳಿ ಆಕ್ರಮಣಕಾರರಂತೆ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದ ಗುಂಪು ಮದುಮಕ್ಕಳ ಸುತ್ತ ವೀರಾವೇಶದಿಂದ ನೆರೆಯಿತು. ಏನೇನೋ ಕಲ್ಪಿಸಿ, ರೋಮಾಂಚನಗೊಂಡು ನಗು ಸೂಸುತ್ತಿದ್ದ ನವದಂಪತಿ ಏನು, ಎತ್ತ ತಿಳಿಯದೆ ಏಕಾಏಕಿ ಆದ ಆಕ್ರಮಣಕ್ಕೆ ಬೆಚ್ಚಿ ಬಿದ್ದರು.

ಗುಂಪಿನ ವರ್ತನೆ ನೋಡಿದರೆ ಏನೋ ಆಗಬಾರದ ಅನಾಹುತ ಆದಂತಿತ್ತು. ಆ ಕ್ಷಣದಲ್ಲೇ ಮುಂಡಾಸುಧಾರಿಯೊಬ್ಬ ಸುರೇಶನ ಎದುರು ಬಂದು ಕುಸ್ತಿಗೆ ತೊಡೆ ತಟ್ಟುವ ಪಹಿಲ್ವಾನನಂತೆ ʼ ನೀನು ಸರಿಯಾಗಿ ನಿಂತಿಲ್ಲ ನೋಡು ʼ ಎಂದು ಅಬ್ಬರಿಸಿದ.

ಸುರೇಶ ಆರು ತಿಂಗಳ ಹಿಂದೆ ಯುಎಸ್‌ನಿಂದ ಬಂದು ಹುಡುಗಿಯನ್ನು ನೋಡಿ ಎಸ್‌ ಹೇಳಿ ಹೋಗಿದ್ದವನು ಮರಳಿ ಇಂಡಿಯಾಕ್ಕೆ ಬಂದಿದ್ದು ಮದುವೆಗೆ ವಾರ ಇರುವಾಗಲೇ. ತರಾತುರಿಯಲ್ಲಿ ಮದುವೆಯ ಏರ್ಪಾಡು ಮಾಡುತ್ತಿದ್ದವನಿಗೆ, ಮುಹೂರ್ತಕ್ಕೆ ಪ್ಯಾಂಟ್‌ ಹಾಕಬಾರದು, ಕಚ್ಚೆ ಹಾಕಬೇಕು ಎಂದು ಹೇಳಿ ಸಿಲ್ಕ್‌ ಪಂಚೆ, ಕುರ್ತಾ ಕೊಳ್ಳಲು ಹೇಳಿ, ರಾಮರಾಜ್‌ನಲ್ಲಿ ಬೆಲ್ಟ್‌ ಇರುವ ಪಂಚೆ ಕೊಳ್ಳಲೂ ಬಿಡದೆ ಮಾನ್ಯಾವಾರ್‌ನಲ್ಲಿ ಜರಿ ಪಂಚೆ ಕೊಡಿಸಿದ್ದರು. ಪಂಚೆ ಕಟ್ಟಲು ಬಾರದ ಸುರೇಶನಿಗೆ ಜರಿ ಎದ್ದು ಕಾಣುವಂತೆ ಬಿಗಿದು ಕಚ್ಚೆ ಕಟ್ಟಿದ್ದರೂ, ಸೊಂಟದಲ್ಲಿ ನಿಲ್ಲದೆ ಜಾರಿ ಬೀಳುತ್ತದೆಂದೇ ಅನ್ನಿಸುತ್ತಿತ್ತು. ಅದರ ನಡುವೆ ಮೂತ್ರ ಕಟ್ಟಿದಂತಾಗಿ ಮುಹೂರ್ತ ಮುಗಿಯುವುದನ್ನೇ ಕಾದು ವಾಶ್‌ ರೂಮಿಗೆ ಹೋಗಿ ಹೇಗೆ, ಹೇಗೋ ಪಂಚೆಯಿಂದ ಹೊರಗೆಳೆದು ಬಹಳ ಹೊತ್ತು ತಡೆ ಹಿಡಿದಿದ್ದನ್ನು ಖಾಲಿ ಮಾಡಿದ್ದನಾದರೂ ಸರಿಯಾಗಿ ಒಳಗೆ ಸೇರಿಸಲೂ ಆಗದೆ ಕಿರಿ ಕಿರಿ ಅನುಭವಿಸುತ್ತಿದ್ದ. ಪಂಚೆ ಜಾರಿದೆಯೇ ಅಥವಾ ಹೊರಗೆ ಕಾಣುವಂತ ಗಂಡಾಂತರ ಆಗಿದೆಯೇ ಎನ್ನುವ ಗಲಿಬಿಲಿಯಲ್ಲಿ ಸುರೇಶ ಬಗ್ಗಿ ನೋಡಲೂ ಹೆದರಿ ಬೆವರಿ ಹೋದ.

ಸುರೇಶ ಗೊಂದಲದಲ್ಲಿ ಇರುವಾಗಲೇ ಮುಂಡಾಸಿನವನ ಸಮೀಪ ಇದ್ದವನು ಆಕ್ರೋಶದಿಂದ ʼ ಈ ಕಡೆ ಬಾ ʼ ಎಂದು ರಟ್ಟೆ ಹಿಡಿದು ಎಳೆದಿದ್ದಕ್ಕೆ ಸಿಟ್ಟು ಬಂದು ಕೈ ಕೊಸರುವಾಗ ಶಾಂತಿಗೆ ʼ ನಿಂಗೆ ಬೇರೇ ಹೇಳ್ಬೇಕಾ? ʼ ಎಂದು ಗದರುವುದು ಕೇಳಿಸಿತು.

ʼ ಏನು ತಮಾಷೆ ಮಾಡುತ್ತೀರಾ? ನಾವು ಹೇಳುವುದು ಅರ್ಥ ಆಗುವುದಿಲ್ಲವಾ? ʼ
ʼ ಏನು ಮಾಡಬೇಕು ಗೊತ್ತುಂಟು ನಮಗೆ. ಮನಸ್ಸಿಗೆ ಬಂದ ಹಾಗೆ ಮಾಡುವುದಕ್ಕೆ ನಾವು ಬಿಡುವುದಿಲ್ಲ, ಆಯಿತಾ ʼ
ʼ ಎಷ್ಟು ಹಂಕಾರ ಅವರಿಗೆ. ಆಚೀಚೆ ಹೋಗ್ತಾರಾ ನೋಡಿ! ಏನು ಫೆವಿಕಾಲ್‌ ಹಾಕಿ ಅಂಟಿಸಿದ್ದಾ?ʼ
ʼ ನೀನಿಲ್ಲಿ ನಿಲ್ಲಬಾರದುʼ ಶಾಂತಿಗೆ ಒಬ್ಬ ಜೋರಾಗಿ ಹೇಳಿದ
ʼ ಯಾಕೆ ನಿಲ್ಲಬಾರದು?ʼ ಕೇಳಿದಳು
ʼ ನೋಡಿ ಎಷ್ಟು ಚರ್ಬಿ ಅವಳಿಗೆ? ಯಾಕೆ ನಿಲ್ಲಬಾರದು ಎಂದು ಕೇಳುತ್ತಾಳೆ. ನಿಲ್ಲದಿದ್ದರೆ ನಿಲ್ಲಿಸಲು ಗೊತ್ತುಂಟು ನಮ್ಗೆʼ

ಶಾಂತಿಗೆ ಏನು ತಪ್ಪಾಗಿದೆ ಎಂದೇ ತಿಳಿಸದೆ ಜಬರದಸ್ತು ಮಾಡುತ್ತಿರುವುದಕ್ಕೆ ಸಿಟ್ಟು ಬಂತು. ಅವಳು ಮೊದಲಿನಿಂದಲೂ ಇರುವುದೇ ಹಾಗೇ, ತನಗೆ ಸರಿ ಎನ್ನಿಸಿದ್ದನ್ನು ಮಾಡುತ್ತಿದ್ದಳು; ಬೇರೆಯವರ ಹೇಳಿದ್ದಕ್ಕೆಲ್ಲಾ ಬಗ್ಗುವವಳಲ್ಲ. ಅವರೆಲ್ಲ ಸುತ್ತು ಸೇರಿ ಬೊಬ್ಬೆ ಹಾಕುವಾಗ ನಿಂತ ಜಾಗ ಬಿಟ್ಟು ಕದಲಬಾರದೆಂದೇ ತೀರ್ಮಾನ ಮಾಡಿ ಸುರೇಶನ ಮುಖ ನೋಡಿದಳು. ಸಿಟ್ಟಲ್ಲಿ ಕೈ ಕೊಸರಿ, ಕಣ್ಣು ಕೆಂಪು ಮಾಡಿಕೊಂಡಿದ್ದವನ ಪಕ್ಕೆಗೆ ಮೊಣಕೈಯಿಂದ ಲಘುವಾಗಿ ತಿವಿದು ಕದಲದೇ ನಿಲ್ಲುವಂತೆ ಸನ್ನೆ ಮಾಡಿದಳು.

ಈ ಗದ್ದಲದಲ್ಲಿ ಅರ್ಜೆಂಟಲ್ಲಿ ವಿಶ್ ಮಾಡಿ ಹೋಗುವವರು- ನುಗ್ಗುವವರನ್ನು ಕಾಯುವ ಕೆಲಸಕ್ಕೆ ಹುಡುಗರು ಆಗಲೇ ತಿಲಾಂಜಲಿ ಕೊಟ್ಟಿದ್ದರಿಂದ- ಗಲಭೆಕೋರರ ನಡುವೆಯೇ ನುಸುಳಿ ಕೈಕುಲುಕಿ ಸಾಗುತ್ತಿದ್ದರು. ಇದರಿಂದ ಫಜೀತಿಯಾಗಿದ್ದು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್‌ಗೆ. ಬೆನ್ನು, ಜಘನಗಳ ಗೊಂದಲದಲ್ಲಿ ಮುಖವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾರದೆ ಬಸವಳಿದ ಅವರು ʼ ಸ್ವಲ್ಪ ಈ ಕಡೆ ಬನ್ನಿ, ಸ್ವಲ್ಪ ಆ ಕಡೆ ಹೋಗಿʼ ಎನ್ನುತ್ತಾ ಒದ್ದಾಡುತ್ತಿದ್ದರು.

ʼ ನಿಮ್ಮದೆಂತ ಸಾವು ಮಾರ್ರೇ, ನೆರೆ ನೀರಲ್ಲಿ ತೆಂಗಿನಕಾಯಿ ಹಿಡಿಯುವ ಕೆಲಸ ʼ ಗುಂಪಿನವನೊಬ್ಬ ಕ್ಯಾಮರಾದವನಿಗೆ ಗದರಿದ.
ʼ ನೀವೆಲ್ಲಾ ಆಗ ಎಲ್ಲಿ ಸತ್ತು ಹೋಗಿದ್ರೀ? ಗಂಡು ಹೆಣ್ಣನ್ನು ಸರಿಯಾಗಿ ನಿಲ್ಲಿಸುವುದಲ್ಲವಾ? ʼ ಇನ್ನೊಬ್ಬ ದನಿ ಸೇರಿಸಿದ.
ʼ ಹುಡುಗ, ಹುಡುಗಿ ಬಂದ ತಕ್ಷಣ ಎಲ್ಲಾ ನುಗ್ಗಿದ್ರೆ ನಾವು ಎಂತ ಮಾಡಾಕಾಗುತ್ತೆ? ʼ ಕ್ಯಾಮರಾದವ ಕ್ಲಿಕ್ಕಿಸುತ್ತಾ ಉತ್ತರಿಸಿದ.
ʼ ಅವರು ಹೇಗೆ ನಿಂತರೆ ನಿಮಗೆಂತ ಆಗ್ತದೆ? ಅವರೇ ಸರಿ ಮಾಡಿಕೊಳ್ತಾರೆ ಬಿಡಿ ʼ ಅವಸರದಲ್ಲಿ ಹೊರಟವರು ಹೇಳುತ್ತಿದ್ದರು.
ʼ ಯಾವಾಗ ಸರಿ ಮಾಡ್ತಾರೆ, ಮದುವೆ ಮುಗಿದ ಮೇಲಾ? ನಿಮಗೆ ಸ್ವಯ ಇಲ್ಲವಾ? ಎಲ್ಲದಕ್ಕೂ ಒಂದು ಕ್ರಮ ಉಂಟು, ಗೊತ್ತುಂಟಾ?ʼ
ʼ ಎಂತ ಕ್ರಮ ಮಾರ್ರೇ, ಗಂಡು ಹೆಣ್ಣು ನಿಲ್ಲುವುದಕ್ಕೂ, ಮಲಗುವುದಕ್ಕೂ ಶಾಸ್ತ್ರ ಉಂಟಾ? ಏನೋ ಆಯಿತಲ್ವಾ ಬಿಟ್ಟು ಬಿಡಿ ʼ ಸಮಾಧಾನಿಸುವ ಧಾಟಿಯಲ್ಲಿ ಯಾರೋ ಒಬ್ಬರು ಹೇಳಿದರು.
ʼ ಬಿಡ್ಲಿಕ್ಕೆ ಹೇಗೆ ಆಗ್ತದೆ? ಶಾಸ್ತ್ರದಲ್ಲಿ ಎಲ್ಲಾ ಉಂಟು. ಬಟ್ರು ಎಲ್ಲಿ ಕರೀರಿ ನೋಡೋಣ ʼ
ʼ ಅವ್ರು ಇನ್ನೊಂದು ಮದುವೆಗೆ ಹೋಗಿ ಆಯಿತು. ಮುಹೂರ್ತ ಮೀರಿ ಹೋಗಿದೆ ಅಂತ ಗಡಿಬಿಡಿಯಲ್ಲಿ ಹೊರಟು ಹೋದ್ರು. ಗಂಡು, ಹೆಣ್ಣು ನಿಲ್ಸು ವರ್ಗೂ ಅವ್ರಿರ್ತಾರಾ?ʼ
ʼಈ ಬಟ್ರುಗಳದೆಲ್ಲ ಆರ್ಜಂಟೇ! ಹುಡುಗನ ಅಪ್ಪ ಇಲ್ಲವಾ ? ಅವರನ್ನು ಕರೀರಿ ನೋಡುವ ʼ

ಸುರೇಶನ ಅಪ್ಪ ತೀರಿ ಹೋಗಿದ್ದರು. ಅವನು ಅಮೇರಿಕಕ್ಕೆ ಹೊರಟಾಗ ಇಂಜಿನಿಯರಿಂಗ್‌ ಓದಿಸಲು ಕಷ್ಟ ಪಟ್ಟಿದ್ದ ತಂದೆ ಬದುಕಿದ್ದರೆ ಎಷ್ಟು ಖುಷಿ ಪಡುತ್ತಿದ್ದರು ಎಂದು ನೊಂದಿದ್ದ. ಅವನಿಗಿಂತ ಎಂಟು ವರ್ಷ ದೊಡ್ಡವಳಾಗಿದ್ದ ಅಕ್ಕನಿಗೆ ಮದುವೆಯಾದಾಗ ಅಪ್ಪ ದುಡ್ಡಿಲ್ಲದೆ ಒದ್ದಾಡಿದ್ದು ಗೊತ್ತಿತ್ತು. ಅಪ್ಪ ತೀರಿದ ಮೇಲೆ ಅಮ್ಮನನ್ನು ಅಕ್ಕ, ಭಾವನೇ ನೋಡಿಕೊಳ್ಳುತ್ತಿದ್ದರು.

ಸುರೇಶ ಹಳೆಯ ಹೆಂಚಿನ ಮನೆಯನ್ನು ರಿಪೇರಿ ಮಾಡಿಸಿ, ಮುಂಭಾಗಕ್ಕೆ ತಾರಸಿ ಹಾಕಿಸಿ, ಅಮ್ಮನಿಗೆ ಕಾಲುನೋವೆಂದು ಕಮೋಡ್‌ ಹಾಕಿಸಿ ಅನುಕೂಲ ಮಾಡಿಕೊಟ್ಟಿದ್ದ. ಅವನು ತಪ್ಪದೇ ಹಣ ಕಳಿಸುತ್ತಿದ್ದುದರಿಂದ ಹಗಲು ರಾತ್ರಿ ಲಾರಿ ಓಡಿಸುತ್ತಿದ್ದ ಭಾವ ಅದನ್ನು ಬಿಟ್ಟು ಸಿಟಿ ಬಸ್ಸಲ್ಲಿ ಡ್ರೈವರ್‌ ಆಗಿ ಆರಾಮವಾಗಿದ್ದರು.

ಮದುಮಕ್ಕಳು ಒತ್ತಾಯಕ್ಕೆ ಜಗ್ಗದೇ, ಗಲಾಟೆ ಮಾಡುತ್ತಿರುವವರು ವೇದಿಕೆ ಬಿಡದೇ ಇರುವುದನ್ನು ಕಂಡು ಮಧ್ಯ ಮಾರ್ಗಿಗಳು ನಮಗೇಕೆ ಉಸಾಬರಿ ಎಂದು ಡೈನಿಂಗ್‌ಹಾಲ್‌ ಕಡೆ ಮುಖ ಮಾಡಿದ್ದರು. ಮದುವೆಗೆ ಬಂದ ಮೇಲೆ ಫೋಟೋಗೆ ನಿಲ್ಲದಿದ್ದರೆ ಆದೀತೇ? ಬಂದಿದ್ದೇವೆಂದು ಗೊತ್ತಾಗುವುದಾದರೂ ಹೇಗೆ? ಊಟ ಮುಗಿಸುವ ಹೊತ್ತಿಗೆ ಎಲ್ಲಾ ಸರಿ ಹೋಗುತ್ತದೆ ಆ ಮೇಲೆ ಫೋಟೋಗೆ ನಿಂತರಾಯಿತು ಎಂದು ಹೊಟ್ಟೆ ತುಂಬಿಸುವ ವಿಚಾರ ಮಾಡಿದ್ದರು.

ಅಮೇರಿಕದಲ್ಲಿ ಕೆಲಸ ಸಿಗಲು ಕಂಪ್ಯೂಟರ್‌ ಸೈನ್ಸ್‌ ಓದಿದ್ದರೆ ಸುಲಭ, ಹುಡುಗಿ ಬೆಳ್ಳಗಿರಬೇಕು, ಬಿ ಇ ಓದಿರಬೇಕು ಎಂದು ಸುರೇಶ ಕಂಡೀಷನ್ ಹಾಕಿದ್ದ. ಹೆಣ್ಣು ಮಕ್ಕಳಾದರೋ ನೆತ್ತಿಯ ಮೇಲೆ ಕೂದಲು ಕಡಿಮೆ ಇದ್ದ, ಕಪ್ಪು ಬಣ್ಣದ ಹುಡುಗನನ್ನು ಮದುವೆಯಾಗಲು ಒಪ್ಪುತ್ತಲೇ ಇರಲಿಲ್ಲ. ಈ ಜನ್ಮದಲ್ಲಿ ಅವನಿಗೆ ಮದುವೆಯ ಭಾಗ್ಯ ಇಲ್ಲ ಎಂದು ಅಕ್ಕ- ಭಾವ ಹತಾಶರಾಗಿ ಕೂತಿದ್ದಾಗ ಬೆಳ್ಳಗಿನ ಶಾಂತಿ ಒಪ್ಪಿದ್ದಳು; ಸುರೇಶನಿಗೂ ಮೆಚ್ಚುಗೆಯಾಗಿತ್ತು. ಸುರೇಶನ ತಂದೆ ತೀರಿಹೋಗಿದ್ದಾರೆ, ಮದುವೆಗೆ ಏರ್ಪಾಡು ಮಾಡಿದ್ದು ಅಕ್ಕನ ಗಂಡನೇ ಎಂದೊಬ್ಬರು ಹೇಳಿದರು.

ʼ ಭಾವ ಎಲ್ಲಿ? ಅವರಿಗೆ ಹೇಳೋಣ ʼ ಎಂದೊಬ್ಬರು ಸೂಚಿಸಿದರು. ʼ ಭಾವನ ಮಾತು ಹುಡುಗ ಕೇಳುತ್ತಾನಾ? ಅವನ ಖರ್ಚಿಗೇ ಇವ ಕಳಿಸ್ಬೇಕು, ಅವನ ಹತ್ರ ಹೇಳಿ ಸುಖ ಇಲ್ಲ. ಹುಡುಗಿಯ ತಂದೆ ಎಲ್ಲಿ ಇದ್ದಾರೆ ನೋಡಿ ʼ ಮುಂಡಾಸಿನವನ ಜೊತೆಗಿದ್ದವ ಹೇಳಿದ.

ತ್ಯಾಂಪಣ್ಣ ಬಿಎಂಡಬ್ಲ್ಯುನಲ್ಲಿ ಎಮ್ಮೆಲ್ಯೆಯ ತಮ್ಮ ಮತ್ತು ಅವನ ಹೆಂಡತಿ ಆಗಮಿಸಿದ್ದನ್ನು ನೋಡಿ ಪಂಚೆಯನ್ನು ಎಡ ಕೈಯಲ್ಲಿ ಎತ್ತಿಕೊಂಡು ದಡಬಡನೆ ಹೋಗಿ ಇದಿರುಗೊಂಡು ವಾಮ ದಿಕ್ಕಿನಿಂದ ವೇದಿಕೆ ಹತ್ತಿಸುತ್ತಿದ್ದರು. ಎಮ್ಮೆಲ್ಯೆಗಿಂತ ಫವರ್‌ಫುಲ್‌ ಆಗಿರುವ ಆತನ ಸಹೋದರನಿಗೆ ವಧೂವರರ ಸುತ್ತ ನೆರೆದಿದ್ದವರು ಜಾಗ ಬಿಟ್ಟು, ತ್ಯಾಂಪಣ್ಣನಿಗೂ ಅವರ ಧರ್ಮಪತ್ನಿಗೂ ಫೋಟೋಗೆ ನಿಲ್ಲಲು ಅನುವು ಮಾಡಿ ಕೊಟ್ಟರು. ಗುಂಪಿನಲ್ಲಿದ್ದ ಕೆಲವರು ಈ ಸುವರ್ಣ ಸಂಧಿಯನ್ನು ತಪ್ಪಿಸಲು ಮನಸ್ಸಾಗದೆ, ENT ಯ ಆಸುಪಾಸು ಫೋಟೋದಲ್ಲಿ ಕಾಣುವಂತೆ ನುಸುಳಿ ಮುಖ ತುಂಬಾ ನಗುವರಳಿಸುತ್ತಾ ಪೋಸ್‌ ಕೊಟ್ಟರು.

ಎಮ್ಮೆಲ್ಯೆಯ ಸಹೋದರ ತಮಗೆ ಅರ್ಜೆಂಟಾಗಿ ಇನ್ನೊಂದು ಕಾರ್ಯಕ್ರಮಕ್ಕೆ ಹೋಗಲಿಕ್ಕಿರುವುದಾಗಿ, ತ್ಯಾಂಪಣ್ಣ ಊಟ ಮಾಡಿ ಹೋಗಿ ಎಂದರೂ ಕೇಳದೆ ಅತ್ಯವಸರ ತೋರಿದಾಗ ಗುಂಪಿನ ಕೆಲವರು ನಮಗೂ ಅವರ ಹತ್ತಿರ ಸ್ವಲ್ಪ ಕೆಲಸ ಇದೆ ಎಂದು ಕಾರಿನ ಹತ್ತಿರ ಕಾಲು ಹಾಕಿದರು.

ಅಳಿದುಳಿದ ಹ್ಯಾಂಡ್‌ ಫುಲ್‌ ಜನರ ಜೊತೆ ಇದ್ದ ಮುಂಡಾಸಿನವ ʼ ತ್ಯಾಂಪಣ್ಣ ಬನ್ನಿ ಇಲ್ಲಿ ʼ ಎಂದು- ಎಮ್ಮೆಲ್ಯೆಯ ತಮ್ಮ ಬಂದ ಆನಂದದಿಂದ ಮೈಮರೆತಿದ್ದ ಅವರನ್ನು ಕರೆದು ʼ ನೋಡಿ ಎಂತಾ ಕೆಲ್ಸ ಆಗಿದೆ ! ನೀವು ನೋಡುದಲ್ಲವಾ? ʼ ಎಂದು ಒಂದೇ ಉಸಿರಲ್ಲಿ ಗಟ್ಟಿಯಾಗಿ ಹೇಳಿದ.

ತ್ಯಾಂಪಣ್ಣನಿಗೆ ಒಮ್ಮೆಲೆ ದಿಗಿಲಾಯಿತು. ನೀವು ನೋಡುವುದಲ್ಲವಾ ಎಂದು ವರನನ್ನು ತೋರಿಸಿ ಹೇಳಿದ್ದರಿಂದ ಅಪ್ಪಿ ತಪ್ಪಿ ಬೇರೆ ಹುಡುಗ ತಾಳಿ ಕಟ್ಟಿದನೇ? ಶಾಂತಿಗೊಂದು ಇಸ್ಕ್‌ ಇತ್ತು. ಜಾತಿ ಬೇರೆ ಬೇಡ ಎಂದರೂ ಒಪ್ಪದವಳು ಸುರೇಶನನ್ನು ನೋಡಿ ಒಪ್ಪಿದ್ದೇ ಆಶ್ಚರ್ಯ! ಆ ಹುಡುಗನಿಗೇನಾದರೂ ಮಾಲೆ ಹಾಕಿದಳೇ ಎಂದು ಗಾಬರಿ ಪಟ್ಟರು. ಅವರು ಸುರೇಶನನ್ನು ನೋಡಿದ್ದು ಒಂದೇ ಸಲ- ಹುಡುಗಿ ತೋರಿಸುವ ಶಾಸ್ತ್ರ ಮಾಡಿದಾಗ. ಗಡ್ಡ ಬಿಟ್ಟವರೆಲ್ಲ ಒಂದೇ ತರ ಕಾಣಿಸುತ್ತಾರೆ, ಗಡ್ಡ ತೆಗೆಯಲು ಹೇಳು ಎಂದು ಶಾಂತಿಗೆ ಮೊದಲೇ ಹೇಳಿದ್ದರೂ ಅವಳು ಒಪ್ಪದೇ, ಅದು ಅವನಿಷ್ಟ ಎಂದಿದ್ದರಿಂದ ಸರಿಯಾಗಿ ಗುರುತೂ ಸಿಗದೆ ಕನ್‌ಫ್ಯೂಸ್‌ ಆದ ತ್ಯಾಂಪಣ್ಣ- ಹೆಂಡತಿ ಮಗಳು ʼ ರಿಟೈರ್‌ ಆದ ಮೇಲೆ ನಿಮಗೆ ಏನೂ ಗೊತ್ತಾಗುವುದಿಲ್ಲ ʼ ಎಂದು ಒಂದಕ್ಕೆರಡಕ್ಕೆಲ್ಲಾ ಹೇಳುತ್ತಿದ್ದುದು ನೆನಪಿಗೆ ಬಂದು ಏನು ಮಾಡಬೇಕೆಂದು ತೋಚದೆ ಗಲಿಬಿಲಿಗೊಳಗಾದರು.

ʼ ತ್ಯಾಂಪಣ್ಣ ಏನು ಸುಮ್ಮನಾದಿರಲ್ಲ? ನಿಮಗೆ ಕಾಣುವುದಿಲ್ಲವಾ ಗಂಡು ಹೆಣ್ಣು ನಿಂತಿದ್ದು? ಹೆಣ್ಣಿನ ಎಡಭಾಗದಲ್ಲಿ ಅವನು ನಿಂತಿದ್ದಾನೆ ನೋಡಿ! ನಮ್ಮಲ್ಲಿ ಇಂತದ್ದೆಲ್ಲಾ ಉಂಟಾ?ʼ

ತ್ಯಾಂಪಣ್ಣ ಉಸ್ಸಪ್ಪಾ ಎಂದು ದೀರ್ಘ ಉಸಿರು ಬಿಟ್ಟರು. ಎಡಬದಿಯಲ್ಲಿ ನಿಂತಿದ್ದು ಮಾತ್ರವಾ! ಅವರದನ್ನು ನೋಡಿರಲೇ ಇಲ್ಲ. ನೋಡಿದ್ದರೂ ಅದಕ್ಕೆಲ್ಲಾ ಮಂಡೆ ಬಿಸಿ ಮಾಡುತ್ತಿರಲಿಲ್ಲ.

ʼ ಅದರಲ್ಲೆಂತ ಉಂಟು ಮಾರಾರ್ರೇ? ಅಗಲೇ ಅರ್ಧ ಜನ ಹೋಗಿ ಆಯಿತಲ್ಲಾ. ಇನ್ನು ಸ್ವಲ್ಪ ಹೊತ್ತಲ್ಲವಾ, ಇರ್ಲಿ ಬಿಡಿ. ನಿಮ್ಮದೆಂತ ಪಿರಿಪಿರಿ?ʼ
ʼ ಎಂತ ಮಾತಾಡುವುದು ನೀವು? ನಿಮಗೆ ಸ್ವಲ್ಪಾದ್ರು ಇದು ಇಲ್ಲವಾ? ಇವರ ಹೆಂಡ್ತಿ ಎಲ್ಲಿ? ಇವರಿಗೆಲ್ಲ ಹೆಂಗಸರ ಹತ್ರನೇ ಹೇಳಿಸ್ಬೇಕು, ಅಗ ದಾರಿಗೆ ಬರ್ತಾರೆ”

ಮಗಳ ಪಕ್ಕ ನಿಂತು ಬಂದವರೊಡನೆ ಫೋಟೋ ಹೊಡೆಸಿಕೊಳ್ಳುವುದರಲ್ಲಿ ಮಗ್ನರಾಗಿ ʼ ಇವರೊಬ್ಬರು ಎಲ್ಲಿ ಹೋದ್ರು? ಚೂರೂ ಬುದ್ದಿ ಇಲ್ಲ, ಮಗಳ ಮದುವೆಗೆ ಫೋಟೋಗೆ ನಿಲ್ಲದೇ ಪುರಾಣ ಮಾತಾಡ್ತಾ ನಿಂತಿದಾರೆ ʼ ಎಂದು ರೇಗುತ್ತಿದ್ದ ವಾರಿಜ ʼ ಸ್ವಲ್ಪ ಇಲ್ಲಿ ಬನ್ನಿಯಮ್ಮಾ ʼ ಎಂದು ಕರೆದುದು ಕೇಳಿಸಿ ಮನಸ್ಸಿಲ್ಲದ ಮನಸ್ಸಿನಿಂದಲೇ ಬಂದರು.

ʼ ನೀವೆಂತದ್ದು ಅವರ ಜತೆ ನಿಂತಿದ್ದು? ʼ ಒಮ್ಮೆಗೇ ಹೇಳಿದಾಗ ವಾರಿಜರಿಗೆ ಕಕ್ಕಾಬಿಕ್ಕಿಯಾಯಿತು. ಯಾರ ಜತೆ ನಿಂತಿದ್ದೇನೆಂದು ಅತ್ತ ಇತ್ತ ನೋಡಿದರು.
ʼ ನೀವೆಂತಕ್ಕೆ ಹಿಂದೆ ಮುಂದೆ ನೋಡುದು? ಇಲ್ಲಿ ಅಲ್ಲ! ಅಲ್ಲಿ ನೋಡಿ, ಹೆಣ್ಣಿನ ಎಡಭಾಗದಲ್ಲಿ ಗಂಡು ನಿಲ್ಲುವುದು ಲೋಕದಲ್ಲಿ ಎಲ್ಲಾದರೂ ಉಂಟಾ? ನೀವು ಹೋಗಿ ಹೋಗಿ ಅವರ ಪಕ್ಕದಲ್ಲೇ ನಿಂತಿದ್ದರಲ್ಲಾ, ಅವರಿಗೆ ಹೇಳುವುದಕ್ಕೆ ಆಗುವುದಿಲ್ಲವಾ? ʼ
ʼ ನಾನೇನು ಮಾಡ್ಲಿಕ್ಕೆ ಆಗ್ತದೆ? ಅವರು ನಿಂತು ಆಗಿತ್ತಲ್ಲವಾ, ನನಗೆಂತ ಗೊತ್ತುಂಟು? ʼ
ʼ ನಿಮಗೆಲ್ಲಾ ಪ್ರಾಯ ಆಗಿದ್ದು ದಂಡಕ್ಕೆ. ಹೋಗಿ ಅವಳಿಗೆ ಹೇಳಿ. ಗಂಡಿನ ಎಡಭಾಗದಲ್ಲಿ ನಿಲ್ಲು ಅಂತ ʼ
ʼ ನನ್ನ ಮಾತು ಕೇಳ್ತಾಳಾ ಅವಳು? ಒಬ್ಬಳೇ ಮಗಳು ಅಂತ ಅವಳನ್ನು ಈ ತರ ಬೆಳಿಸಿದ್ದು ಇವ್ರೇ! ಅವಳು ಥೇಟ್‌ ಇವರ ತೀರಿ ಹೋದ ಅಮ್ಮನ ತರ. ತನ್ನ ಮೂಗಿನ ಸಮಕ್ಕೇ ಆಗಬೇಕು. ಇವ್ರಿಗೆ ಹೇಳಿ, ಕೇಳ್ತಾಳಾ ನೋಡುವʼ
ವಾರಿಜಮ್ಮ ಗಂಡನ ಮೇಲೆ ಭೂತ, ವರ್ತಮಾನ, ಭವಿಷ್ಯದ ಸಕಲ ಹೊಣೆಯನ್ನು ಹೊರಿಸಿದರು.
ʼ ನಿಮ್ದು ಒಳ್ಳೇ ಕತೆ ಆಯ್ತಲ್ಲಾ! ಅವರು ಮದುವೆ ಮುಗ್ದು ಹೋಯಿತು ಅಂತಾರೆ. ನೀವು ಮಾತು ಕೇಳುವುದಿಲ್ಲ ಅಂತ ಹೇಳುತ್ತೀರಾ! ನಮ್ಗೆ ಗೊತ್ತುಂಟು ಏನು ಮಾಡ್ಬೇಕು ಅಂತ. ತೀರಿ ಹೋದ್ರಲ್ಲ ಹುಡುಗನ ತಂದೆಯನ್ನು ನೆನೆಸಿದರೆ ದುಃಖ ಆಗ್ತದೆ. ಎಂತಾ ಜನ ಮಾರ್ರೇ ಅವ್ರು. ಅವ್ರು ಇದ್ದಿದ್ರೆ ಹೀಗೆಲ್ಲಾ ಆಗುವುದಕ್ಕೆ ಬಿಡ್ತಿದ್ರಾ? ಒಂದು ತಿಳ್ಕೊಳ್ಳಿ, ನಿಮ್ಮ ಮುಖ ನೋಡಿ ಬಿಡುತ್ತಾ ಇಲ್ಲ. ತೀರಿ ಹೋಗಿದ್ರಲ್ಲಾ ಅವರಿಗೆ ಮರ್ಯಾದೆ ಕೊಟ್ಟು, ಮದುವೆ ನಿಲ್ಸುದು ಬೇಡ ಎಂದು ಬಿಡುತ್ತಾ ಇದ್ದೇವೆ ʼ
ʼ ಎಂತಾ ಸಾವು ಮಾರ್ರೇ, ಎಂತ ಮಾತಾಡುವುದು ನೀವು? ಹುಡುಗನ ತಂದೆ ಮಗಳ ಮದುವೆಗೆ ಬಟ್ರನ್ನೇ ಕರೆಸಿಲ್ಲ, ಹಿರಿಯರೇ ಧಾರೆ ಎರೆದಿದ್ದು ಅಲ್ಲವಾ… ಅವರು ಇದ್ದರೆ ಎಂತ ಮಾಡ್ತಿದ್ದರು? ʼ
ʼ ಅದೆಲ್ಲ ಆ ಕಾಲದಲ್ಲಿ. ಆಗ ಅವರ ಹತ್ತಿರ ದುಡ್ಡು ಇರಲಿಲ್ಲ. ಈಗ ಹಾಗೆಲ್ಲ ಆಗುವುದುಂಟಾ? ಮನಸ್ಸು ಮಾಡಿದ್ರೆ ಮದುವೆ ನಿಲ್ಸುದು ಕಷ್ಟವಾ? ʼ ಮುಂಡಾಸಿನವ ತಲೆಗೆ ಕಟ್ಟಿದ್ದನ್ನು ತೆಗೆದು ಜೋರಾಗಿ ಕೊಡವಿದ.
ʼ ಅದೆಲ್ಲ ನಡೆಯವುದಿಲ್ಲ ಅಣ್ಣಾ ʼ ಯಾರೋ ಹೇಳಿದರು.
ʼ ಯಾಕೆ ನಡೆಯುವುದಿಲ್ಲ? ʼ
ʼ ಮೂರು ದಿನದ ಹಿಂದೆನೇ ಮದುವೆ ರಿಜಿಸ್ಟರ್‌ ಆಗಿದೆ. ಹುಡುಗ ಹುಡುಗಿಯನ್ನು ಕರ್ಕೊಂಡು ಅಮೆರಿಕಕ್ಕೆ ಹೋಗುವುದು ಉಂಟಲ್ಲಾ. ಅವರು ನಮ್ಮ ಕ್ರಮ ಒಪ್ಪುದಿಲ್ಲ. ನಮ್ಮ ಶಾಸ್ತ್ರ, ಕ್ರಮ ಎಂತದ್ದಕ್ಕೂ ಅವರತ್ರ ಮರ್ಯಾದೆನೇ ಇಲ್ಲ! ʼ
ʼ ಹುಡುಗ ಅಮೇರಿಕದಲ್ಲಿ ಇರಬಹುದು. ಅವನೇನು ಡೊನಾಲ್ಡ್‌ ಟ್ರಂಪಾ? ನಿಮಗೆಲ್ಲಾ ಧೈರ್ಯ ಇಲ್ಲ ಅಷ್ಟೇ! ʼ
ʼ ಅಲ್ಲಾ, ಈಗ ಎಂತಾಯ್ತು ಅಂತ? ಹುಡುಗಿ ಬಲಕ್ಕಾದ್ರೂ ನಿಲ್ಲೀ, ಎಡಕ್ಕಾದ್ದೂ ನಿಲ್ಲೀ ಅದರಲ್ಲಿ ಎಂತಾಗ್ತದೆ?ʼ
ʼ ನೋಡಿ, ನೋಡಿ ನನಗೆ ಸಿಟ್ಟು ಬರಿಸ್ಬೇಡಿ. ಸಿಟ್ಟು ಬಂದರೆ ನಾನು ಮನುಷ್ಯನೇ ಅಲ್ಲ. ನೀವು ಏನು ಬೇಕಾದ್ರೂ ಮಾಡಿಕೊಳ್ಳಿ ನಾನು ಅಕ್ಷತೆ ಹಾಕುವುದಿಲ್ಲʼ
ಮುಂಡಾಸಿನವ ಬಿರಬಿರನೆ ಹೊರಟ. ಅವನನ್ನು ಎಳೆಂಟು ಜನ ಹಿಂಬಾಲಿಸಿದರು.
ʼ ಏನೋ ಆಯಿತು. ಬೇಜಾರು ಮಾಡ್ಬೇಡಿ. ಹುಡುಗ್ರು ಗೊತ್ತಿಲ್ಲದೆ ತಪ್ಪು ಮಾಡಿದಾರೆ. ಊಟ ಮಾಡಿಕೊಂಡು ಹೋಗಿʼ ತ್ಯಾಂಪಣ್ಣ ಅವರ ಹಿಂದೆಯೇ ಹೋಗಿ ಸಮಾಧಾನ ಮಾಡಲು ಯತ್ನಿಸಿದರು.
ಕೆಲವರಿಗೆ ಊಟ ಮಾಡುವ ಮನಸ್ಸಿತ್ತು. ʼ ಎಲ್ಲಾದರೂ ಸಿಟ್ಟಿಂಗ್‌ ಮಾಡೋಣ ಬನ್ನಿ, ಬನ್ನಿ ʼ ಎನ್ನುತ್ತಾ ಮುಂಡಾಸಿನವನು ಅರೆ ಮನಸ್ಸಿನವರನ್ನು ಎಳೆದುಕೊಂಡು ಹೋದ.


ಶಾಂತಿಗೆ ಸುರೇಶ ತನ್ನ ಎಡಬದಿಯಲ್ಲಿ ಕದಲದೇ ನಿಂತಿದ್ದು ಖುಷಿ ಕೊಟ್ಟಿತ್ತು. ಅವಳಿಗೆ ಜಾಗ ಬದಲಿಸುವಂತೆ ಬಲವಂತ ಮಾಡಿದ್ದು, ಗಂಡಿನ ಬಲಭಾಗದಲ್ಲಿ ಹೆಣ್ಣು ನಿಲ್ಲಬಾರದು ಎಂದಿದ್ದು ಸಿಟ್ಟು ತರಿಸಿತ್ತು. ಎಲ್ಲಿ ನಿಂತರೆ ಏನಂತೆ, ಆಕಾಶ ಕಳಚಿ ತಲೆ ಮೇಲೆ ಬೀಳುತ್ತದೆಯೇ? ಜೀವನಪೂರ್ತಿ ಎಡ, ಬಲ ಎಂದು ನೋಡುತ್ತಾ ಇರುವುದಕ್ಕಾಗುತ್ತದೆಯೇ? ರೈಟಲ್ಲಿ ಎಲ್ಲವನ್ನೂ ಮಾಡುವುದು ಎಷ್ಟು ಕಷ್ಟ! ಸುರೇಶ ಲೆಫ್ಟ್‌ ಹ್ಯಾಂಡರ್‌ ಬೇರೆ!

ನೂರು ಹುಡುಗರನ್ನು ಬೇಡ ಎಂದಿದ್ದ, ಒಬ್ಬನನ್ನು ಅರ್ಧ ಮನಸ್ಸಿನಿಂದ ಪ್ರೀತಿಸಿದ್ದ ಶಾಂತಿ ಕಪ್ಪಾಗಿದ್ದ, ಅಷ್ಟೇನೂ ಸುಂದರನಲ್ಲದ ಸುರೇಶನನ್ನು ಒಪ್ಪಿದ್ದೇ ಎಡಚ ಎನ್ನುವ ಕಾರಣಕ್ಕೆ! ಅವನು ಎಡಗೈಯಲ್ಲಿ ಕಾಫಿ ಕಪ್ಪನ್ನು ಎತ್ತಿಕೊಂಡಾಗ ಅನುಮಾನವಾಗಿ ಪಿಂಗ್‌ ಮಾಡಿದಾಗ ಹಾಕಿದ ರಿಷಭ್‌ ಪಂತ್‌ ಇಮೇಜ್‌ ನೋಡಿ ಇನ್ನು ಜೀವಮಾನವೆಲ್ಲಾ ಲೆಫ್ಟ್‌ ಹ್ಯಾಂಡ್‌ ಪ್ಲೇ, ಏನ್‌ ಮಜಾ ಎಂದು ಕುಣಿದು ಕುಪ್ಪಳಿಸಿ, ಕೂಡಲೇ ಮಿಡಿಯುವ ಹೃದಯದ ಇಮೋಜಿ ಕಳಿಸಿದ್ದಳು.

ಚಿಕ್ಕವಳಿದ್ದಾಗ ಎಡಬದಿಗೆ ಮಲಗಿ ಮಂಚದಿಂದ ಕೆಳಗೆ ಬಿದ್ದ ನಂತರ ಅಮ್ಮ ಬಲಬದಿಗೇ ಮಲಗಿಸಿ, ಬಲಬದಿಗೇ ಏಳಬೇಕೆಂದು ತಾಕೀತು ಮಾಡಿ, ಬಲ ಬದಿಯೇ ಅಭ್ಯಾಸವಾಗಿತ್ತು. ಹೈಸ್ಕೂಲ್‌, ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಬಲಬದಿಯೇ ಖಾಯಂ. ಸಾರಿಗೆ ಬಸ್ಸಲ್ಲೂ ಇದೇ ಕ್ರಮ! ಬಲಬದಿಯೇ ಅಭ್ಯಾಸವಾಗಿ ಬಿಟ್ಟು ಲೆಫ್ಟಿಸ್ಟ್‌ಗಳನ್ನು ಕಂಡರೆ ಅವಳಿಗೆ ಹೇಳಿಕೊಳ್ಳಲಾರದ ಪ್ರೀತಿ ಹುಟ್ಟಿತ್ತು.

ಮೊದಲ ರಾತ್ರಿಯನ್ನು ಗಡದ್ದಾಗಿ ಕಳೆಯಬೇಕೆಂದು ಸುರೇಶ ಸ್ಟಾರ್‌ ಹೋಟೆಲಲ್ಲಿ ರೂಮ್‌ ಬುಕ್‌ ಮಾಡಿದ್ದ. ಮದುವೆಯ ದಿನದ ಗದ್ದಲವೆಲ್ಲಾ ಮುಗಿದು ಅವರಿಬ್ಬರು ರೂಮು ಸೇರಿದಾಗ ರಾತ್ರಿ ಹನ್ನೆರಡರ ಮೇಲಾಗಿತ್ತು. ಎರಡು ದಿನಗಳಿಂದ ಮೆಹೆಂದಿ, ಸಂಗೀತ್‌ ಇತ್ಯಾದಿಗಳಲ್ಲಿ ನಿದ್ದೆ ಇಲ್ಲದೆ ಶಾಂತಿಗೆ ಕಣ್ಣೆಳೆಯುತ್ತಿತ್ತು.

ಅಧಿಕೃತವಾಗಿ ಮೊದಲ ರಾತ್ರಿ ಶುರುವಾಗುವ ಮೊದಲೇ ನಿದ್ರಾದೇವಿಯನ್ನು ಅಪ್ಪಿ ರಸಭಂಗ ಮಾಡಲು ಇಷ್ಟವಿಲ್ಲದೆ ಪುಷ್ಪದೆಸಳುಗಳನ್ನು ಹರಡಿದ್ದ ಮೃದು ಮಂಚದಲ್ಲಿ ಕುಳಿತು ವಾಶ್‌ ರೂಮಿಗೆ ಹೋದ ಸುರೇಶನ ಪ್ರತೀಕ್ಷೆ ಮಾಡುತ್ತಿದ್ದ ಶಾಂತಿಗೆ ಮದುವೆ ಮಂಟಪದ ಘಟನೆ ನೆನಪಿಗೆ ಬಂದು ಸುರೇಶ ಎಡ ಭಾಗದಲ್ಲಿ ಕುಳಿತುಕೊಳ್ಳುತ್ತಾನೋ , ಬಲದಲ್ಲೋ ಎನ್ನುವ ಕುತೂಹಲ ಹುಟ್ಟಿತು.

ಮದುವೆ ನಿಶ್ಚಯವಾದ ಬಳಿಕ ಇಬ್ಬರೂ ಸಾಕಷ್ಟು ಹರಟಿದ್ದರು. ಪರಸ್ಪರ ಫೋಟೋಗಳನ್ನು ಹಂಚಿಕೊಂಡು, ಬಗೆಬಗೆಯ ರೀಲ್ಸ್‌ ತೂರಿ ಬಿಟ್ಟಿದ್ದರು. ಆಗೆಲ್ಲಾ ಸುರೇಶನ ಎಡಗೈ ಬಲಗೈಯನ್ನು ಮೀರಿ ಕ್ರಿಯಾಶೀಲವಾಗುವುದು ಅವಳಲ್ಲಿ ರೋಮಾಂಚನ ಉಂಟು ಮಾಡುತ್ತಿತ್ತು.

ಸುರೇಶ ಟವೆಲ್‌ನಿಂದ ಮುಖ ಉಜ್ಜಿಕೊಳ್ಳುತ್ತಾ ಬಂದವನು ನೇರವಾಗಿ ಎಡಭಾಗದಲ್ಲೇ ಒತ್ತಿ ಕುಳಿತ. ಶಾಂತಿಯ ನರನಾಡಿಗಳಲ್ಲಿ ಮಿಂಚು ಹರಿದಂತಾಯಿತು. ಕೆನ್ನೆಯ ಹತ್ತಿರ ಮುಖ ತಂದಾಗ ಮುದ್ದುಗರೆಯುವಷ್ಟು ಉನ್ಮತ್ತಳಾದರೂ ಅವನೇ ಮುಂದುವರಿಯಲಿ ಎಂದು ಸ್ತ್ರೀ ಸಹಜ ಸಂಕೋಚದಿಂದಲೋ, ಸ್ವಾಭಿಮಾನದಿಂದಲೋ ಕಾದವಳಿಗೆ ಎಡದಿಂದಲೋ, ಬಲದಿಂದಲೋ ಎಲ್ಲಿಂದ ಶುರು ಎನ್ನುವ ಸಂಶಯ ಮೂಡಿತು. ಸುರೇಶ ಇದ್ಯಾವುದನ್ನೂ ಲೆಕ್ಕಿಸದವನಂತೆ ಮಂದಹಾಸ ಅರಳಿಸಿ ಎಡಗೈಯಲ್ಲಿ ನಾಜೂಕಾಗಿ ಮೂಗನ್ನು ಸವರಿದಾಗ ನರನಾಡಿಗಳಲ್ಲಿ ಸಂತಸದ ಹೊನಲು ಉಕ್ಕಿ ಹರಿದು ಬೆಳಿಗ್ಗೆ ಯಾವ ಕಡೆ ಏಳಬೇಕೆನ್ನುವುದೇ ಮರೆತು ಹೋಯಿತು!

-ಎಂ ನಾಗರಾಜ ಶೆಟ್ಟಿ


ಎಂ ನಾಗರಾಜ ಶೆಟ್ಟಿ ಇವರ ಹುಟ್ಟೂರು ಮಂಗಳೂರು.

ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗಳಲ್ಲಿ 2017 ರಲ್ಲಿ ʼ ಮೀಸಲುʼ ಮತ್ತು 2018 ರಲ್ಲಿ ʼ ಕೊನೆಯ ಪ್ರಶ್ನೆʼ ಕಥೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ. ಸಮಾಜಮುಖಿ ಕಥಾ ಪುರಸ್ಕಾರ 2023 ರಲ್ಲಿ ಕಥೆ ʼ ಮುಝಫರ್‌ʼ ಕಥಾ ಪುರಸ್ಕಾರ ಪಡೆದಿದೆ.

2002 ಕನ್ನಡ ಪ್ರಭ ದೀಪಾವಳಿ ಸಂಚಿಕೆಯಲ್ಲಿ ʼ ಆ ದೇವ, ಈ ದೇವ ಎನಬೇಡʼ ತೀರ್ಪುಗಾರರ ಮೆಚ್ಚುಗೆ ಪಡೆದಿತ್ತು. ʼವಿಕ್ರಾಂತ ಕರ್ನಾಟಕ ’ 2009 ರ ಗಾಂಧಿ ಜಯಂತಿ ಕಥಾ ಸ್ಪರ್ಧೆಯಲ್ಲಿ ʼ ಮಬ್ಬು ಕವಿದ ದಾರಿʼ ಕಥೆ ಬಹುಮಾನ ಗಳಿಸಿದೆ. ʼ ಸುಧಾ ʼ ವಾರಪತ್ರಿಕೆಯಲ್ಲಿ, ಪ್ರಜಾವಾಣಿಯ ʼ ಸಂಗತʼ, ʼ ಅಕ್ಷರ ಸಂಗಾತ ʼ ʼ ಹೊಸತುʼ ʼ ಸಮಾಜಮುಖಿ ʼ ʼ ಬೆವರು ಹನಿʼ ಮತ್ತು ಹಲವು ವೆಬ್‌ ಮ್ಯಾಗಜಿನ್‌ಗಳಲ್ಲೂ ಕಥೆ, ಲೇಖನಗಳು ಪ್ರಕಟವಾಗಿವೆ.

ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು ಈಗ ನಿವೃತ್ತ. ಉದ್ಯೋಗದ ಅವಧಿಯಲ್ಲಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x