ಕೆನಡಾದಲ್ಲಿ ಇರುವ ಮಗನ ಮನೆಯಲ್ಲಿ ಆ ಸಂಜೆ ಅದಾಗ ತಾನೇ ಬರುತ್ತಿದ್ದ ತುಂತುರು ಮಳೆ ನಿಂತಿತ್ತು. ಆದರೆ ಬೆಳಗಿನಿಂದ ರಸ್ತೆ ಪೂರಾ ಚೆಲ್ಲಿದ್ದ ಮಂಜು ಮತ್ತಷ್ಟು ಗಟ್ಟಿಯಾಗಿ ಕಾಲಿಟ್ಟರೆ ಜಾರುವ ಸ್ಥಿತಿಯನ್ನು ತಲುಪಿತ್ತು. ರಸ್ತೆಯಲ್ಲಿ ವಿರಳವಾಗಿ ಅಲ್ಲೊಂದು ಇಲ್ಲೊಂದು ವಾಹನಗಳು ಚಲಿಸುತ್ತಿದ್ದವು. ಗಟ್ಟಿಯಾದ ಮಂಜನ್ನು ಸರಿಸಲು ಟ್ರಕ್ಕುಗಳಲ್ಲಿ ‘ ರಾಕ್ ಸಾಲ್ಟ್ ‘ ಲವಣವನ್ನು ರಸ್ತೆ ತುಂಬಾ ಸುರಿಯುತ್ತಿದ್ದರು. ರಾಕ್ ಸಾಲ್ಟ್ ನಮ್ಮಲ್ಲಿ ಸಿಗುವ ಉಪ್ಪಿನಂತೆ ಲವಣದ ರೂಪದಲ್ಲಿ ಇದ್ದು ಗಾತ್ರದಲ್ಲಿ ದೊಡ್ಡ ಸ್ಪಟಿಕಾಗಳಾಗಿ ದೊರೆಯುತ್ತದೆ. ನೇರಳೆ ಬಣ್ಣದ ಆ ಉಪ್ಪನ್ನು ಮಂಜಿನ ಮೇಲೆ ಉದುರಿಸಿದರೆ ಗಾಜಿನಂತಹ ಮಂಜು ಕರಗಿ ನೀರಾಗಿ ಹರಿಯುತ್ತದೆ. ಜನರು ಮತ್ತು ವಾಹನಗಳು ಜಾರುವುದನ್ನು ತಪ್ಪಿಸಬಹುದಾಗಿದೆ. ಅದನ್ನು ಅಂಗಡಿಯಿಂದ ತಂದು ನಮ್ಮ ಮನೆಯ ಮುಂದೆ ಸಿಂಪಡಿಸಿದ್ದರಿಂದ ಮನೆಯ ದ್ವಾರದಲ್ಲಿ ಹೆಪ್ಪು ಗಟ್ಟಿದ್ದ ಮಂಜು ನಿಧಾನವಾಗಿ ಕರಗುತ್ತಿತ್ತು.
ಅತಿಯಾದ ಹಿಮ ಸುರಿತದಿಂದ ಸೂರ್ಯ ಮಾಯವಾಗಿ ಇಡೀ ದಿನ ಮೋಡದ ವಾತಾವರಣ ಇದ್ದು ಮಂಜು ಹನಿಗಳಾಗಿ ಸುರಿಯುತ್ತದೆ. ಸುರಿಯುವ ಮಂಜು ಹತ್ತಿಯ ಅರಳೆಯಂತೆ ಕಂಡರೂ ಅದಕ್ಕೆ ತಲೆ ಕೊಡುವಷ್ಟು ಶಕ್ತಿ ಮನುಷ್ಯನಲ್ಲಿ ಇರುವುದಿಲ್ಲ. ಮೇಲಿನಿಂದ ಬೀಳುವ ಮಂಜು ನಮ್ಮ ಪ್ರಿಜ್ಗಳ ಒಳಗೆ ತಲೆ ಇಟ್ಟರೆ ಕೊಡುವ ಶ್ಯೈತ್ಯಾಂಶವನ್ನು ಹೊಂದಿರುತ್ತದೆ. ಕೈ ,ಕಾಲುಗಳು ಚಳಿಯಿಂದ ಮರಗಟ್ಟುತ್ತವೆ. ಕೈಗೆ , ಕೈಗವಸು ಮತ್ತು ಕಾಲಿಗೆ ಹಿಮ ಬೂಟ್ಸ್ ಧರಿಸದೆ ಇಲ್ಲಿನ ಜನ ಹೊರ ಬರುವುದೇ ಇಲ್ಲ. ಅಂತಹ ದಿನಗಳಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು ಮುಂಚಿತವಾಗಿ ಮನೆಯಲ್ಲಿ ಪೇರಿಸಿ ಇಡುವುದು ಎಲ್ಲರೂ ಪಾಲಿಸುವ ಶಿಸ್ತು ಈ ದೇಶದಲ್ಲಿ. ಕಾರಣ, ಗಾಜು ಮಂಜಿನ ಮೇಲೆ ಕಾರನ್ನು ಚಲಾಯಿಸುವುದು ಅತಿ ಕಷ್ಟದ ಕೆಲಸ. ಕಾರಿನ ಬ್ರೇಕು ಹಿಡಿಯದಿರುವುದು ಒಂದು ಸಮಸ್ಯೆಯಾದರೆ ಕಾರಿನ ಚಕ್ರಗಳು ರಸ್ತೆಯಲ್ಲಿ ಜಾರ ತೊಡಗುವುದು ಮತ್ತೊಂದು ಸಮಸ್ಯೆ. ಆದರೂ ಹಲವಾರು ತುರ್ತು ಪರಿಸ್ಥಿತಿಗಳು ಹೊರಗೆ ಹೋಗುವ ಅನಿವಾರ್ಯ ತಂದೊಡ್ಡುತ್ತವೆ.
ಅಂದು ನಾವೆಲ್ಲರೂ ಅಂದರೆ ನಾನು,ನನ್ನವಳು,ನನ್ನ ಮಗ,ಸೊಸೆ ಮತ್ತು ಮೊಮ್ಮೊಗ ಆರಾಮವಾಗಿ ಮನೆಯಲ್ಲಿ ಬೆಚ್ಚಗೆ ಕುಳಿತು ಹೊರಗೆ ಸುರಿಯುತ್ತಿದ್ದ ಹಿಮವನ್ನು ನೋಡುತ್ತಿದ್ದೆವು.
ಮಗುವಿಗೆ ಸಂಜೆಯ ಹಾಲನ್ನು ಬಾಟಲಿಯಲ್ಲಿ ತುಂಬಿ ಕೊಡಲು ಸಿಗದ ಹಾಲಿನ ಬಾಟಲಿಗೆ ಮನೆಯಲ್ಲಿ ಎಲ್ಲಿಯೂ ಹುಡುಕಿದರೂ ಅದು ಸಿಗಲೇ ಇಲ್ಲ. ಮೊಮ್ಮಗ ಹಾಲನ್ನು ಬಾಟಲಿಗೆ ಹಾಕಿದರೆ ಮಾತ್ರ ಹಾಲು ಕುಡಿಯುವುದನ್ನು ರೂಢಿ ಮಾಡಿಕೊಂಡಿದ್ದ. ಅವನಿಗೆ ಹಾಲು ಉಣಿಸಲು ಆ ಬಾಟಲಿನ ಅವಶ್ಯಕತೆ ಅನಿವಾರ್ಯವಾಗಿತ್ತು. ಹಳೆಯ ಬಾಟಲಿಯನ್ನು ಆಟದ ಸಾಮಾನಿನಂತೆ ಯಾವುದೋ ಮೂಲೆಯಲ್ಲಿ ಬಿಸುಟಿದ್ದ
. ಇನ್ನೂ ಮಾತು ಬಾರದ ಆತನಿಂದ ಬಾಟಲಿಯ ಇರುವನ್ನು ಅರಿಯುವುದು ದುಸ್ಸಾಧ್ಯದ ಮಾತೇ ಆಗಿತ್ತು. ಹೊಸ ಬಾಟಲಿಯನ್ನು ಕೊಳ್ಳುವುದು ಅನಿವಾರ್ಯ ಆಗಿತ್ತು.
ನಾನು ಮತ್ತು ನನ್ನ ಮಗ ಆ ಬಾಟಲಿಯನ್ನು ಖರೀದಿಸಲು ಪಕ್ಕದ ಅಂಗಡಿಗೆ ಹೊರಟೆವು. ಹೊರಗೆ ಹೋಗಲು ಹಿಮ ಕೋಟು, ಕೈಗವಸು ಮತ್ತು ಹಿಮ ಬೂಟನ್ನು ಹಾಕಿ ಸಜ್ಜಾಗಿ ಹೊರಟೆವು. ಮನೆಯ ಒಳಗಡೆಯಿಂದ ಕಾರಿನ ಗ್ಯಾರೇಜು ತಲುಪಿ ಕಾರನ್ನು ಏರಿ ಪಕ್ಕದ ಅಂಗಡಿಗೆ ಹೊರಟೆವು. ಸುಮಾರು ಮೂರು ಕಿ. ಮೀ ದೂರದ ಅಂಗಡಿಯ ಸಮುಚ್ಚಯ ತಲುಪಲು ನಾವು ಸುಮಾರು ಅರ್ಧ ಗಂಟೆಯ ನ್ನೇ ತೆಗೆದುಕೊಂಡೆವು. ಮಾಮೂಲಿಯಾಗಿ ಕೇವಲ ಎಂಟು ನಿಮಿಷದ ರಸ್ತೆ ಅದು. ಜಾರುವ ರಸ್ತೆಯಲ್ಲಿ ಕಾರನ್ನು ನಿಧಾನವಾಗಿ ಚಲಾಯಿಸುತ್ತಾ ಅಂಗಡಿ ತಲುಪಿದ್ದೆವು. ಆಗ ಸಂಜೆ ಏಳರ ಸಮಯವಾಗಿತ್ತು. ಕಾರನ್ನು ಪಾರ್ಕಿಂಗ್ ಜಾಗದಲ್ಲಿ ಇರಿಸಿ ಜೋಪಾನವಾಗಿ ಹೆಜ್ಜೆ ಇರಿಸುತ್ತಾ ಅಂಗಡಿಯ ಒಳಗೆ ಹೊಕ್ಕೆವು. ಬಾಟಲಿಯನ್ನು ಖರೀದಿಸಿ ಜೊತೆಗೊಂದಿಷ್ಟು ಮನೆಗೆ ಬೇಕಾದ ಸಾಮಗ್ರಿಗಳನ್ನು ತಳ್ಳುವ ಗಾಡಿಗೆ ತುಂಬಿಸಿ ಬಿಲ್ಲು ಪಾವತಿಸಿ ಹೊರ ಬಂದೆವು. ಹೊರಗೆ ಮತ್ತೆ ಮಂಜಿನ ಮಳೆ ಆರಂಭವಾಗಿತ್ತು. ನಿಧಾನವಾಗಿ ತಳ್ಳುವ ಗಾಡಿಯನ್ನು ತಳ್ಳುತ್ತಾ ನಮ್ಮ ಕಾರಿನ ಬಳಿ ಬಂದೆವು. ಕಾರಿನಲ್ಲಿ ಎಲ್ಲ ಸಾಮಾನುಗಳನ್ನು ಜೋಡಿಸಿ ಆ ತಳ್ಳುವ ಬಂಡಿಯನ್ನು ಅದರ ಸ್ಥಳದಲ್ಲಿ ಇರಿಸಿ ಬರಲು ನಾನು ಅದನ್ನು ತಳ್ಳುತ್ತಾ ಹೊರಟೆ. ನಾನು ಆ ಬಂಡಿಯನ್ನು ತಳ್ಳುತ್ತಾ ಅದರ ಜಾಗವನ್ನು ತಲುಪಿ ಅದನ್ನು ಇರಿಸಿ ತಿರುಗಿ ಹೋಗಲು ಹೆಜ್ಜೆ ಇಟ್ಟೆ.
ಅಯ್ಯೋ…ಆ ತಳ್ಳುವ ಬಂಡಿ ಚಲಿಸತೊಡಗಿತ್ತು! ಅದು ತನ್ನ ಜಾಗದಿಂದ ಹೊರಳಿ ರಸ್ತೆಗೆ ಇಳಿದಿತ್ತು. ಅದು ಮಂಜಿನ ರಸ್ತೆಯಲ್ಲಿ ಜಾರತೊಡಗಿತ್ತು. ಅನತಿ ದೂರದಲ್ಲಿ ದೊಡ್ಡ ಕಾರೊಂದು ಇತ್ತಲೇ ಬರುತ್ತಿತ್ತು. ನಾನು ಆ ಜಾರುತ್ತಿದ್ದ ಬಂಡಿಯನ್ನು ಹಿಡಿಯಲು ಮುನ್ನುಗ್ಗಿದೆ. ನನ್ನ ಕಾಲು ಜಾರಿತು. ನಾನು ದೊಪ್ಪನೆ ಕೆಳಗೆ ಬಿದ್ದೆ. ಬಂಡಿ ಚಲಿಸುತ್ತಿದ್ದ ರಸ್ತೆ ಇಳಿಜಾರಿನ ರಸ್ತೆಯಾಗಿತ್ತು. ಅದು ವೇಗವಾಗಿ ಜಾರುತ್ತಾ ಎದುರಿಗೆ ಬರುತ್ತಿದ್ದ ಕಾರಿನ ಕಡೆಗೆ ನುಗ್ಗಿತ್ತು. ಪಾರ್ಕಿಂಗ್ ಲಾಟಿನಲ್ಲಿ ಕಾರಿನಲ್ಲಿ ಕುಳಿತಿದ್ದ ನನ್ನ ಮಗ ಅದನ್ನು ಕಂಡು ಕಾರಿನಿಂದ ಇಳಿದು ವೇಗವಾಗಿ ಹೆಜ್ಜೆ ಹಾಕುತ್ತಾ ಆ ಚಲಿಸುತ್ತಿದ್ದ ಬಂಡಿಯನ್ನು ಹಿಡಿಯಲು ದಾಪುಗಾಲು ಹಾಕುತ್ತಾ ಜಾರುವ ಮಂಜಿನ ರಸ್ತೆಯಲ್ಲಿ ನಡೆಯತೊಡಗಿದ. ಸಂಜೆಗತ್ತಲು ಆವರಿಸಿ ಮಂಜಿನ ಮಳೆಯ ಸುರಿಯುವಿಕೆಯಿಂದ ಜಾರುತ್ತಿದ್ದ ಬಂಡಿಯನ್ನು ಅವನಿಂದ ಹಿಡಿಯಲಾಗಲೇ ಇಲ್ಲ. ಅದು ಎದುರಿಗೆ ಬರುತ್ತಿದ್ದ ಕಾರಿಗೆ ಹೋಗಿ ಬಡಿದಿತ್ತು. ಕಾರಿನ ಚಾಲಕ ದಿಗ್ಬ್ರಾಂತನಾದ. ನಾನು ಹೇಗೋ ಸಾವರಿಸಿಕೊಂಡು ಮೇಲೆದ್ದು ಬಂಡಿಯ ಬಳಿ ಬಂದು ಸೇರಿದ್ದೆ. ನಮ್ಮ ಕೈ ಮೀರಿ ಆ ಅವಘಡ ನಡೆದಿತ್ತು. ಬಂಡಿ ಹೋಗಿ ಡಿಕ್ಕಿಯಾದ ಕಾರಿನ ಚಾಲಕ ಹೊರಗೆ ದುಮುಕಿ, ಬಂಡಿ ಹೇಗೆ ಬಂದು ತನ್ನ ಕಾರಿಗೆ ಬಡಿದಿತ್ತು ಎಂದು ಯೋಚಿಸುತ್ತಿದ್ದ. ಅವನ ಕಾರಿನ ಮುಂದಿನ ಭಾಗ ಒಡೆದಿತ್ತು. ಅಷ್ಟರಲ್ಲಿ ನಾನು ಅಲ್ಲಿಗೆ ತಲುಪಿದ್ದೆ. ನನ್ನ ಮಗ ಆ ಕಾರಿನ ಚಾಲಕನಿಗೆ ನಡೆದ ವಿಷಯ ತಿಳಿಸಿದ್ದ. ಆ ಕಾರಿನ ಚಾಲಕ ನನ್ನ ಸ್ಥಿತಿಯನ್ನು ಕಂಡು ಮರುಗಿದ. ಅವನ ಕಾರಿಗೆ ಬಂಡಿ ಬಡಿದು ಕಾರು ಜಖಂ ಆಗಿದ್ದಕ್ಕೆ ನಾವು ಅವನಲ್ಲಿ ಕ್ಷಮೆ ಕೇಳಿದ್ದೆವು. ತನ್ನ ಕಾರು ಜಖಂ ಆಗಿದ್ದುದಕ್ಕೆ ಅವನು ಚಿಂತೆ ಮಾಡದೆ ನನ್ನ ಇಳಿ ವಯಸ್ಸಿನ ಸಾಹಸವನ್ನು ಕೇಳಿ ಆನಂದಿಸಿದ! ನಾನು ಆ ತಳ್ಳು ಬಂಡಿಯನ್ನು ಹಿಡಿಯಲು ಪಟ್ಟ ಪಾಡು ಮತ್ತು ಅದನ್ನು ಹಿಡಿಯಲು ತವಕಿಸಿ ಬಿದ್ದು ನೋವು ಮಾಡಿಕೊಂಡಿದ್ದನು ಕೇಳಿ ಅವನು ಸಂತಾಪ ಸೂಚಿಸಿದ. ನಾನು, ಅವನು ಹೇಗೆ ವರ್ತಿಸುವನೋ ಎಂದು ಚಿಂತಾಕ್ರಾಂತನಾಗಿದ್ದೆ. ಅವನ ಕಾರಿನ ಜಖಂಗೆ ನಮ್ಮಿಂದ ಭಾರೀ ಹಣವನ್ನು ವಸೂಲಿ ಮಾಡುವನೆಂದು ನಾನು ಭಾವಿಸಿದ್ದೆ. ಆದರೆ ಆತ ಆ ಬಂಡಿಯನ್ನು ಅದರ ಜಾಗದಲ್ಲಿ ಇರಿಸಿ ಲಾಕ್ ಮಾಡಿ ಮತ್ತೆ ತಿರುಗಿ ಬಂದು ನಮ್ಮನ್ನು ಬೀಳ್ಕೊಟ್ಟ. ‘ ನೀನು ನನ್ನ ತಂದೆಯ ಹಾಗೇ ‘ ಎಂದು ನನ್ನ ಮೈ ದಡವಿ ತನ್ನ ಕಾರನ್ನು ಚಲಾಯಿಸಿದ. ಅದನ್ನು ಕೇಳಿ; ದೇಶ, ಜನ ಯಾವುದಾದರೇನು? ಮನುಷ್ಯನ ಭಾವನೆ ಒಂದೇ ಎನಿಸಿತು.
ನಾವು ಮನೆಗೆ ಮರಳಿ ಬರುವಾಗ ನನ್ನ ಮಗ ಹೇಳಿದ್ದ. ಕೆನಡಾ, ಅಮೆರಿಕಾ ದೇಶಗಳಲ್ಲಿ ಎಲ್ಲ ವಸ್ತುಗಳು, ಮನೆಗಳು ಮತ್ತು ಎಲ್ಲಾ ವಾಹನಗಳನ್ನು ವಿಮೆಯಿಂದ ಸಂರಕ್ಷಿಸುತ್ತಾರೆ. ಹಾಗಾಗಿ ಅದೇನೇ ಜಖಂ ಆದರೂ ಅಥವಾ ಅದು ಕಳೆದು ಹೋದರೆ ವಿಮೆ ಕಂಪನಿಗಳು ಆ ನಷ್ಟವನ್ನು ತುಂಬಿ ಕೊಡುತ್ತವೆ. ನಾನು ನಮ್ಮ ದೇಶದಲ್ಲಿ ಅಂತಹ ಅವಘಡ ಸಂಭವಿಸಿದರೆ ನಮ್ಮ ಜನ ಹೇಗೆ ವರ್ತಿಸುತ್ತಿದ್ದರು ಎಂಬುದನ್ನು ಕಲ್ಪನೆ ಮಾಡಿಕೊಳ್ಳುತ್ತಾ ಮನೆ ಸೇರಿದೆ.
ನಾನು ಆ ತಳ್ಳುವ ಬಂಡಿಯನ್ನು ಅದರ ಜಾಗದಲ್ಲಿ ಇರಿಸಿ ಲಾಕ್ ಮಾಡದೇ ಹಿಂದಿರುಗಿ ಬಂದಿದ್ದು ದೊಡ್ಡ ತಪ್ಪಾಗಿ ಪರಿಣಮಿಸಿತ್ತು.
ಏನೇ ಕೆಲಸ ಮಾಡಿದರೂ ಅದನ್ನು ಒಂದು ಶಿಸ್ತಿನಿಂದ ಮಾಡುವುದು ಒಳಿತು ಎಂಬ ಸತ್ಯ, ಆ ಘಟನೆಯಿಂದ ಅರಿವಿಗೆ ಬಂತು.
–ಶ್ರೀಕೊಯ