
ಎಲ್ಲರೂ ತಿಳಿದಂತೆ ಶಿಕ್ಷಣ ಮತ್ತು ಉದ್ಯೋಗ ಒಂದಕ್ಕೊಂದು ಸಂಬಂಧಪಟ್ಟ ವಿಷಯಗಳು. ಉತ್ತಮ ಶಿಕ್ಷಣ ಉತ್ತಮ ಉದ್ಯೋಗಕ್ಕೆ, ಉತ್ತಮ ಉದ್ಯೋಗವು ಉತ್ತಮ ಜೀವನ ಮಟ್ಟಕ್ಕೆ ಕಾರಣವಾಗುತ್ತದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಜೀವನ ಒದಗಿಸಿಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುತ್ತಾರೆ. ಆದರೆ ಹಾಗೆ ಮಾಡುವಾಗ ಜೀವನಕ್ಕೆ ಅತೀ ಅಗತ್ಯವಾದ ನೈತಿಕತೆಯ ಬಗ್ಗೆ ಗಮನ ಹರಿಸುವುದಿಲ್ಲ. ಹಾಗೆಂದು ಅವರು ವಾಮಮಾರ್ಗ ಅನುಸರಿಸುತ್ತಾರೆ ಅಂತ ಅರ್ಥವಲ್ಲ. ಅವರ ಗಮನ ಮಕ್ಕಳು ಗಳಿಸುವ ಅಂಕಗಳಿಗೆ. . ಯಾಕೆಂದರೆ ಅಂಕಗಳೇ ಬುದ್ಧಿವಂತಿಕೆಯ ಅಳತೆಗೋಲು ಅಂತ ಇಲ್ಲಿಯವರೆಗೆ ಜನರು ತಿಳಿದುಕೊಂಡಿದ್ದಾರೆ. ಆದರೆ ಕೇವಲ ಅಂಕ ಗಳಿಸಿ, ಒಳ್ಳೆಯ ಕಾಲೇಜಿನಲ್ಲಿ ಓದಿದ ಮಾತ್ರಕ್ಕೆ ಹಣ ಗಳಿಸಬಹುದು ಎಂಬುದು ಸತ್ಯವಲ್ಲ. ಈಗಿನ ಕಾಲದಲ್ಲಿ ಹೆಚ್ಚು ಓದದವರೂ ಕೋಟ್ಯಾಧೀಶರಾಗುತ್ತಿದ್ದಾರೆ.
ಓದಿದವರಿಗೆಲ್ಲಾ ಒಳ್ಳೆಯ ಉದ್ಯೋಗ ಸಿಗಬೇಕು. ಇಲ್ಲವೇ ಅವರು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಆಗಬೇಕು.
ಅದಕ್ಕೆ ಹಳೆಯ ಕಾಲದ ಶಿಕ್ಷಣ ಪದ್ಧತಿ ಆಗದು. ಹಿಂದಿನಂತೆ ಶಿಕ್ಷಣ ಎಂದರೆ ಕೇವಲ ಓದುವುದು, ಬರೆಯುವುದು ಮತ್ತು ಲೆಕ್ಕ ಮಾಡುವುದು ಎಂಬ ಕಾಲ ಹೋಯ್ತು. ಕಾಲ ಮುಂದೋಡುತ್ತಿದ್ದಂತೆ ಶಿಕ್ಷಣ ಪದ್ಧತಿಯಲ್ಲೂ ಬದಲಾವಣೆಗಳಾಗಿವೆ ಮತ್ತು ಅದರ ಅವಶ್ಯಕತೆಯೂ ತುಂಬಾ ಇದೆ. ಶಿಕ್ಷಣ ಎಂದರೆ ವ್ಯಕ್ತಿತ್ವದ ಬೆಳವಣಿಗೆಯೊಂದಿಗೆ ಜ್ಞಾನ ಸಂಪಾದಿಸಿ ಆ ಮೂಲಕ ಬದುಕಿನ ದಾರಿ ಕಂಡುಕೊಳ್ಳುವುದು. ಮಗುವಿನಲ್ಲಿರುವ ಪ್ರತಿಭೆಯನ್ನು ಹೊರತಂದು ಸುಂದರ ವ್ಯಕ್ತಿತ್ವವನ್ನು ಬೆಳೆಸುವುದಾಗಿದೆ. ಮಗುವಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವುದಾಗಿದೆ.
ಮಗುವಿನಲ್ಲಿ ಬದಲಾವಣೆ ತರುವುದೆಂದರೇನು? ಅವನ ಚಿಂತನೆಗಳಲ್ಲಿ ಬದಲಾವಣೆ ತರುವುದು, ಯೋಚಿಸಿ ನಿರ್ಧಾರ ತರುವಂತೆ ವ್ಯಕ್ತಿತ್ವವನ್ನು ರೂಪಿಸುವುದು, ಅಷ್ಟೇ ಅಲ್ಲ ನೈತಿಕತೆ ಅಥವಾ ಒಳ್ಳೆಯ ಗುಣನಡತೆಗಳನ್ನು ಮೈಗೂಡಿಸಿಕೊಳ್ಳುವುದು. ಹಿಂದಿನ ಕಾಲದ ಗುರುಕುಲ ಪದ್ಧತಿಯಾಗಲೀ, ಬಾಯಿಪಾಠ ಕಲಿಯುವ ಕ್ರಮವಾಗಲೀ ಈಗ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಬದಲಾವಣೆಗಳಾಗುತ್ತಿವೆ.
ಭಾರತದಲ್ಲಿ ಶಿಕ್ಷಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಬಾಧ್ಯವಾಗಿವೆ. ಕೇಂದ್ರ ಸರಕಾರದ ಪಠ್ಯ ಕ್ರಮವನ್ನು ತಮ್ಮ ಪ್ರದೇಶಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡು ಮಕ್ಕಳಿಗೆ ಕಲಿಸಲು ರಾಜ್ಯ ಸರಕಾರ ಸ್ವತಂತ್ರವಾಗಿದೆ. . ಪಾಠಗಳಲ್ಲಿ ವ್ಯತ್ಯಾಸ ವಿದ್ದರೂ ವಿಷಯಗಳು ಕೇಂದ್ರ ಸರಕಾರದ ಅಂಕೆಯಲ್ಲಿರುವ ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಪರಿಷತ್ತಿನದು. ( NCERT)
ತಂತ್ರಜ್ಞಾನ ನಾಗಾಲೋಟದಲ್ಲಿ ಮುಂದುವರಿಯುತ್ತಿರುವಾಗ ಶಿಕ್ಷಣದಲ್ಲೂ ಅದೇ ವೇಗದಲ್ಲಿ ಬದಲಾವಣೆಯಾಗಬೇಕು. ಬದಲಾವಣೆಯು ಪಠ್ಯಕ್ರಮದಲ್ಲಿ, ಅದಕ್ಕೆ ತಕ್ಕಂತೆ ಶಿಕ್ಷಕರ ತರಬೇತಿ, ತಂತ್ರಜ್ಞಾನದ ಅಳವಡಿಕೆಗಳಲ್ಲಿ ಆಗಬೇಕು. ಯಾಕೆಂದರೆ ಭಾರತವು ದೈನಂದಿನ ವ್ಯವಹಾರಗಳ ತಂತ್ರಜ್ಞಾನದಲ್ಲಿ ಅಮೆರಿಕಕ್ಕಿಂತಲೂ ಮುಂದುವರಿದಿದೆ ಎನ್ನಲು ಹೆಮ್ಮೆ ಪಡುತ್ತೇನೆ.
ಉದಾಹರಣೆಗೆ ಹೂಮಾರುವವಳಲ್ಲೂ ನಮ್ಮಲ್ಲಿ ಕ್ಯು ಆರ್ ಕೋಡ್ ಇದೆ. ಮೊಬೈಲಿನಿಂದಲೇ ವ್ಯವಹಾರ ಮಾಡಬಹುದು. ಅಮೆರಿಕದಲ್ಲಿ ಇನ್ನೂ ಕ್ಯಾಶ್, ಕಾರ್ಡ್ ಗಳ ಬಳಕೆ ಜಾಸ್ತಿ. ನಮ್ಮಲ್ಲಿ ಡಿಜಿಟಲೈಸೇಶನ್ ಬಳಕೆಗೆ ಬಂದುದರಿಂದ ಶಿಕ್ಷಣಕ್ಷೇತ್ರದಲ್ಲೂ ಅದರ ಬಳಕೆ ಅಗತ್ಯ.
ಇಂಗ್ಲಿಷ್ ಭಾಷೆಯೂ, ಆಧುನಿಕ ಶಿಕ್ಷಣವೂ.
ಶಿಕ್ಷಣ ಎಂದಾಗ ಶಿಕ್ಷಣದ ಗುಣಮಟ್ಟವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಮಾತ್ರ ಶಿಕ್ಷಣ ಎಂಬ ಅಭಿಪ್ರಾಯ ಸಮಾಜದಲ್ಲಿ ಹಾಸು ಹೊಕ್ಕಾಗಿದೆ. ಹಾಗಾಗಿ ನಾಯಿಕೊಡೆಗಳಂತೆ ಇಂಗ್ಲಿಷ್ ಮಾಧ್ಯಮದ ಶಾಲೆಗಳು ತಲೆಯೆತ್ತಿವೆ. ಸರಕಾರಿ ಶಾಲೆ ಬಿಟ್ಟು ದುಬಾರಿ ಶುಲ್ಕ ವಸೂಲು ಮಾಡುವ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ. ಆದರೆ ಮಕ್ಕಳು ಐದನೆ ತರಗತಿಯ ವರೆಗಾದರೂ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು. (ಇಂಗ್ಲಿಷ್ ಭಾಷೆಯ ಅಗತ್ಯವನ್ನು ಮನಗಂಡು ಸರ್ಕಾರವು ಕೆಲವು ಮಾದರಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಡೆಸುತ್ತಿದೆ.
ಆದರೆ
ಕನ್ನಡ ಮಾಧ್ಯದವರಿಗೆ ಸರಿಯಾದ ರೀತಿಯಲ್ಲಿ ಇಂಗ್ಲಿಷ್ ಕಲಿಸಬೇಕೆಂದು ಸರಕಾರದ ಆಶಯ. ಆದರೆ
ಮಗುವಿನ ಸರ್ವತೋಮುಖ ಬೆಳವಣಿಗೆಗೆ ತನ್ನ ಪರಿಚಿತ ಭಾಷೆಯಲ್ಲಿ ಶಿಕ್ಷಣ ಪಡೆದರೆ ಉತ್ತಮ. ಆಗ ಮಗುವಿನಲ್ಲಿ ಭಯವಿರದೆ ತಾನು ಸುರಕ್ಷಿತ ಭಾವನೆ ಮೂಡುತ್ತದೆ.
ಅನಾವಶ್ಯಕ ಗೊಂದಲ, ಹೆದರಿಕೆ ಕೊನೆಗಾಣುತ್ತದೆ.
ಆದರೆ. .
ಇಂಗ್ಲಿಷ್ ಭಾಷೆ ಉದ್ಯೋಗ ದೊರಕಿಸಲು ಅತೀ ಅಗತ್ಯ. ಹಾಗಾಗಿ ಮನಸಿಲ್ಲದಿದ್ದರೂ ತಮ್ಮ ಮಕ್ಕಳು ಹಿಂದೆ ಬೀಳಬಾರದು ಎಂದು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುತ್ತಾರೆ. ತಪ್ಪಿಲ್ಲ. ಆದರೆ ಅಲ್ಲಿ ಒಂದು ಸುಭದ್ರವಾದ ಮಾತೃಭಾಷೆ ಯನ್ನು ಕಲಿಸಲೇಬೇಕು.
ಅಂಕಗಳ ವ್ಯಾಮೋಹ
ಅಂಕಗಳಿಗೆ ಜನರು ಕೊಡುವ ಮಹತ್ವದ ಬಗ್ಗೆ ಹೆಚ್ಚು ವಿವರಿಸಬೇಕಾಗಿಲ್ಲ. ಯಾಕೆಂದರೆ ಎಲ್ಲರೂ ಪ್ರಿಸ್ಕೂಲಿನಿಂದಲೇ ಅಂಕಗಳಿಗೆ ಮಹತ್ವವನ್ನು ಕೊಡುತ್ತಾರೆ. ಅಂಕ ಹೆಚ್ಚು ಗಳಿಸಲು ಮನೆಪಾಠಕ್ಕೂ ಕಳುಹಿಸುತ್ತಾರೆ. ಹಲವಾರು ಟ್ಯುಟೋರಿಯಲ್ಗಳು ತಲೆಯೆತ್ತಿರುವುದೇ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವ ಉದ್ದೇಶದಿಂದ. . ಅಂದರೆ ಹೆಚ್ಚು ಅಂಕ ಗಳಿಸುವಂತೆ ಮಕ್ಕಳಿಗೆ ತರಬೇತು ಕೊಡುವುದು.
ಡಾಕ್ಟರ್ ಅಥವಾ ಇಂಜಿನಿಯರಿಂಗ್ ಶಿಕ್ಷಣದ ವ್ಯಾಮೋಹದಿಂದಾಗಿ ಮೂಲ ವಿಜ್ಞಾನ ಕಲಿಯಲು ಹೋಗುವವರಿಲ್ಲವಾಗಿದೆ. ಕಾಲೇಜಿನಲ್ಲಿ ಕೆಲವು ವಿಭಾಗಗಳನ್ನು ಮಕ್ಕಳಿಲ್ಲದ ಕಾರಣಕ್ಕೆ ಮುಚ್ಚಬೇಕಾಗಿ ಬಂತು.
ಈ ಇಂಜಿನಿಯರಿಂಗ್ ಶಿಕ್ಷಣವು ಫಲಪ್ರದವಾದುದೇ? ಖಂಡಿತಾ ಇಲ್ಲ. ಮಕ್ಕಳು ಕಾಲೇಜಿನಲ್ಲಿ ಕಲಿಯುವುದು ಒಂದು ಆದರೆ ಉದ್ಯೋಗಕ್ಕೆ ಕಲಿಯಬೇಕಾದುದು ಇನ್ನೊಂದು. ಹಾಗಾಗಿಯೇ ಇಂದು ಶೇಕಡಾ ಎಪ್ಪತೈದರಷ್ಟು ಇಂಜಿನಿಯರಿಂಗ್ ಪದವೀಧರು ಉದ್ಯೋಗ ಮಾಡಲು ಯೋಗ್ಯರಲ್ಲ ಅಂತ ಹೇಳುತ್ತಾರೆ.
ಕೈಯಲ್ಲಿ ಕಲಿತುದು ತಲೆಗೆ ಹೋಗಿ ತಲುಪಬೇಕು. ಏಕೆಂದರೆ ಕೈಯನ್ನು ಉಪಯೋಗಿಸಿ ಮಾಡಿದ ಕೆಲಸ ಮೆದುಳಿಗೆ ಬೇಗನೆ ಅರ್ಥವಾಗುತ್ತದೆ. ಅರ್ಥವಾದಾಗ ಅದನ್ನು ಕಾರ್ಯರೂಪಕ್ಕೆ ತರಲು ಸುಲಭ. (Hand to head)
ಹಿಂದಿನ ಕಾಲದಂತೆ ” ಚಾಕ್ ಟಾಕ್ ‘ ಪದ್ಧತಿ ಖಂಡಿತಾ ಈಗ ಹೊಂದಿಕೊಳ್ಳುವುದಿಲ್ಲ. ಹಳೆ ಶಿಕ್ಷಕರೂ ಹೊಸತನ್ನು ಕಲಿಯಲೇಬೇಕು. ಈಗ ಸ್ಮಾರ್ಟ್ ಕ್ಲಾಸ್ ಗಳಿವೆ, ಮಲ್ಟಿಮೀಡಿಯಗಳನ್ನು ಉಪಯೋಗಿಸಬೇಕು.
ಕೇವಲ ಕೇಳಿದರೆ ಸಾಲದು ಕೈಯಿಂದ ಮಾಡಿ ನೋಡುವ ಅವಕಾಶ ಬೇಕು. ಇಲ್ಲವೇ ವರ್ಚುವಲ್ ಆಗಿ ಮಾಡುವುದನ್ನು ನೋಡಿ ಕಲಿಯಬೇಕು.
ಆದರೆ ಮುಖ್ಯವಾದ ಪ್ರಶ್ನೆಯೊಂದಿದೆ. ಅದೇನೆಂದರೆ
ಇವೆಲ್ಲಾ ಪರಿಕರಗಳನ್ನು ಉಪಯೋಗಿಸಿ ಕಲಿತು ಹೆಚ್ಚು ಅಂಕ ಗಳಿಸಿದವನು ಸ್ವತಂತ್ರವಾಗಿ ಬದುಕಬಲ್ಲನೇ ಎಂಬುದು. ಇದಕ್ಕೆ ಉತ್ತರ ನಿರುದ್ಯೋಗಿಗಳು. ಇದಕ್ಕೇನು ಕಾರಣ? ಪಠ್ಯಕ್ರಮವೇ ಕಾರಣ. ಸ್ವಲ್ಪ ಮಟ್ಟಿಗೆ ಹೆತ್ತವರ ಮಹತ್ವಾಕಾಂಕ್ಷೆಯೂ ಕಾರಣ.
೨೦೦೯ ರ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಬಂದಿದೆ. ಅದರ ಧ್ಯೇಯ ಯೋಚಿಸುವಂತಹ ಮಕ್ಕಳನ್ನು ( thinking child) ತಯಾರುಮಾಡುವುದು. ಉರು ಹೊಡೆದು ಕಲಿಯುವುದಕ್ಕಿಂತ ಅರ್ಥಮಾಡಿಕೊಂಡು ಕಲಿಯುವ ಕಲಿಕೆಗೆ ಒತ್ತು ಕೊಡುವುದು. ಹಾಗಾಗಿ ಅಂಕಗಳಿಗೆ ಮಹತ್ವಕೊಡದೆ ಗ್ರೇಡ್ ಕೊಡುವ ಕ್ರಮವನ್ನು ಜಾರಿಗೆ ತಂದಾಯಿತು. ಆ ಕ್ರಮದಲ್ಲೂ ಅದರಲ್ಲೂ ಕೆಲವು ಬಾಧಕಗಳಿವೆ.
ಈಗಿನ ಸರಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ನ್ನು ಜಾರಿಗೊಳಿಸಿದೆ. ಇದರ ಪ್ರಕಾರ ಮಕ್ಕಳಿಗೆ ತಮ್ಮ ಇಷ್ಟದ ವಿಷಯವನ್ನು ಕಲಿಯಬಹುದು. ಉದಾಹರಣೆಗೆ ಒಂದು ಮಗುವಿಗೆ ಗಣಿತ ಇಷ್ಟ ಇಲ್ಲ ಅಂತ ಊಹಿಸೋಣ. ಆತ ಕಷ್ಟ ಪಟ್ಟು ಅರ್ಥವಾಗದ ಥಿಯರಮ್ಗಳನ್ನು ಕಲಿಯಲು ಸಮಯ, ಶಕ್ತಿ ಗಳನ್ನು ಯಾಕೆ ವ್ಯಯ ಮಾಡಬೇಕು? ಗಣಿತವನ್ನು ವ್ಯವಹಾರಕ್ಕೆ ಬೇಕಾದಷ್ಟು ಮಾತ್ರ ಕಲಿತುಕೊಂಡು ಉಳಿದ ಸಮಯದಲ್ಲಿ ತನ್ನ ಇಷ್ಟದ ವಿಷಯವನ್ನು ಕಲಿಯಬಹುದು. ಹಾಗೆ ಮಾಡಿದರೆ ತಾನು ಕಲಿತ ವಿದ್ಯೆಯನ್ನು ಜೀವನಾಧಾರಕ್ಕೆ ಇಟ್ಟುಕೊಳ್ಳಬಹುದು. ತನ್ನ ಕಾಲ ಮೇಲೆ ತಾನು ನಿಲ್ಲಬಹುದು. ಆಗ ಕಲಿತ ವಿದ್ಯೆ ಉಪಯೋಗಕ್ಕೆ ಬರುತ್ತದೆ.
ಇವೆಲ್ಲಕ್ಕಿಂತ ಹೊರತಾಗಿ ಈಗಿನ ಶಿಕ್ಷಣದಲ್ಲಿ ನೀತಿಗೆ ಅಥವಾ ಒಳ್ಳೆಯ ನಡವಳಿಕೆಗೆ ಒತ್ತು ಕೊಟ್ಟಿಲ್ಲ. ತನ್ನ ಮಗುವಿಗೆ ಅಂಕ ಎಷ್ಟು ಬಂದಿದೆ ಕಡಿಮೆ ಯಾಕೆ ಬಂದಿದೆ ಅಂತ ಕೇಳುವ ತಂದೆ ತಾಯಿ ತಮ್ಮ ಮಗುವಿನ ನಡತೆ ಹೇಗಿದೆ ಅಂತ ಕೇಳುವುದಿಲ್ಲ. ಅಕಸ್ಮಾತ್ ಮಗುವಿನ ನಡತೆ ಸರಿಯಿಲ್ಲ ಅಂತ ಹೆತ್ತವರಿಗೆ ತಿಳಿಸಿದರೂ ತಮ್ಮ ಮಕ್ಕಳನ್ನು ಸಮರ್ಥಿಸಿಕೊಳ್ಳುತ್ತಾರೆ ಬಹಳಷ್ಟು ಹೆತ್ತವರು.
ಆಧುನಿಕ ಶಿಕ್ಷಣ ಪದ್ಧತಿಯು inclusive education ಪದ್ಧತಿ. ಅಂದರೆ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ. ಅಂಧರಾಗಲಿ, ವಿಶೇಷ ಚೇತನರಾಗಲೀ ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಕುಳಿತು ಓದಬಹುದು. ಅವರಿಗೆ ಬೇಕಾದ ಸವಲತ್ತುಗಳನ್ನು ಶಾಲೆ ಒದಗಿಸಬೇಕು. ಇದರಲ್ಲೂ ಸಾಧಕ ಬಾಧಕ ಎರಡೂ ಇದೆ. ಯಾಕೆಂದರೆ ಮಕ್ಕಳ ಸಂಖ್ಯೆ ಅಧಿಕವಿದ್ದಾಗ ವಿಶೇಷ ಚೇತನರಿಗೆ ಪ್ರತ್ಯೇಕ ಗಮನ ಕೊಡಲು ಕಷ್ಟ. ಕೆಲವು ಸಲ ಸಹಪಾಠಿಗಳು ಅನುಕಂಪ ತೋರಿಸಿದರೂ ಮತ್ತೆ ಕೆಲವರು ಅವಹೇಳನವನ್ನೂ ಮಾಡಬಹುದು. ಅನುಕಂಪ ತೋರಿಸಿ ಜೊತೆಗೆ ಕರಕೊಂಡು ಹೋಗಬೇಕೆಂಬುದು inclusive educationನ ಉದ್ದೇಶ. ಇದನ್ನು ಎಲ್ಲಾ ಸಂದರ್ಭಗಳಲ್ಲಿ ಅನುಸರಿಸಲು ಕೆಲವು ತೊಡಕುಗಳಿವೆ.
ಫಿನ್ಲೆಂಡ್ ದೇಶವು ಆಧುನಿಕ ಶಿಕ್ಷಣಕ್ಕೆ ಮಾದರಿಯಾಗಿದೆ. ಜಗತ್ತಿನ ಇತರ ದೇಶಗಳಿಂದ ಶಿಕ್ಷಣ ತಜ್ಞರು ಅಲ್ಲಿನ ಪದ್ಧತಿಯನ್ನು ತಿಳಿದುಕೊಳ್ಳಲು ತರಬೇತಿಗಾಗಿ ಹೋಗುತ್ತಾರೆ. ಭಾರತದಿಂದಲೂ ಶಿಕ್ಷಕರನ್ನು ಅಲ್ಲಿಗೆ ತರಬೇತಿಗಾಗಿ ಕಳುಹಿಸುತ್ತಿದ್ದಾರೆ. ಕಾಲಕಾಲಕ್ಕೆ ಭಾರತದಲ್ಲೂ ಪಠ್ಯಕ್ರಮವನ್ನು ಸಂಸ್ಕರಿಸಲಾಗುತ್ತಿದೆ. ಆದರೆ ಅದು ಮಕ್ಕಳಿಗೆ ಸ್ವತಂತ್ರ ಜೀವನ ನಡೆಸಲು ಎಷ್ಟು ಉಪಯುಕ್ತವಾಗಿದೆ ಎಂಬುದು ಯೋಚಿಸಬೇಕಾದ ವಿಷಯ.
ಈಗ ಶಿಕ್ಷಣ ಕೇತ್ರದಲ್ಲಿ ಬದಲಾವಣೆಯ ಕಾಲ. ಕೋವಿಡ್ _೧೯ ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನವು ಹಳ್ಳಿಗಳಿಗೂ ತಲುಪಲು ಕಾರಣವಾಯಿತು. ಆ ಸಂದರ್ಭದಲ್ಲಿ ಅದೊಂದು ಶಿಕ್ಷೆ ಯಂತೆ ಕಂಡರೂ ತಂತ್ರಜ್ಞಾನದ ಉಪಯೋಗ ಹೆಚ್ಚಲು ಅದುವೇ ಕಾರಣವಾಯಿತು. ಆದರೂ ಶಿಕ್ಷಕರ ಸ್ಥಾನವನ್ನು ತಂತ್ರಜ್ಞಾನ ತುಂಬಲಾರದು.
ಶಿಕ್ಷಣ ಮತ್ತು ನೈತಿಕತೆ
ಮಕ್ಕಳ ಬದುಕು ಕಟ್ಟಿಕೊಡುವ ಶಿಕ್ಷಣ ಈಗ ಬೇಕಾಗಿದೆ. ಅದರ ಜೊತೆಗೆ ಸತ್ಯ, ಪ್ರಾಮಾಣಿಕತೆ, ನಿಷ್ಠೆ ಮುಂತಾದ ನೀತಿಗಳನ್ನು ಬಾಲ್ಯದಿಂದಲೇ ಮೈಗೂಡಿಸಿಕೊಳ್ಳಬೇಕು. ಚಿಕ್ಕಂದಿನಲ್ಲಿ ಕಲಿತುದನ್ನು ಸಾಯುವ ತನಕ ಮರೆಯಲ್ಲ. ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣ ನೈತಿಕತೆಯ ಕೊರತೆ ಎನ್ನಬಹುದು. ಯಾರು ಆತ್ಮಸಾಕ್ಷಿಯಾಗಿ ದುಡಿಯುತ್ತಾರೋ ಅವರು ಪ್ರಾಮಾಣಿಕತೆಯನ್ನು ಮೆರೆಯುತ್ತಾರೆ. ಸರ್ಕಾರಿ ಅಧಿಕಾರಿಗಳಲ್ಲಿ, ಸಮಾಜದ ಪ್ರತಿಷ್ಠಿತರಲ್ಲಿ, ಸಾರ್ವಜನಿಕರಲ್ಲಿ ಪ್ರಾಮಾಣಿಕತೆಯಿದ್ದರೆ ಭ್ರಷ್ಟಾಚಾರಕ್ಕೆ ಎಡೆಯೆಲ್ಲಿ? ಭ್ರಷ್ಟಾಚಾರ ಇಲ್ಲದಿದ್ದರೆ ದೇಶ ಅಭಿವೃದ್ಧಿ ಹೊಂದುತ್ತದೆ. ಹಾಗಾಗಿ ಶಿಕ್ಷಣದೊಂದಿಗೆ ಮಕ್ಕಳ ವ್ಯಕ್ತಿತ್ವ ವಿಕಸನ, ನೈತಿಕತೆಗೂ ಗಮನ ಹರಿಸುವುದು ಶಿಕ್ಷಕರ ಮತ್ತು ಹೆತ್ತವರ ಆದ್ಯ ಕರ್ತವ್ಯ.
-ಪರಮೇಶ್ವರಿ ಭಟ್