ಅಂತರ್ಗತ
“ಲೇ ಭಾವನಾ ಎಲ್ಲೆ ಇದ್ದೀಯಾ ? ನನಗೆ ಕೆಲಸಕ್ಕೆ ಹೊರಡೋಕೆ ಸಮಯ ಆಯ್ತು. ಚಿನ್ನುಗೆ ಬೇರೆ ಸಮವಸ್ತ್ರ ಹಾಕಿಲ್ಲಾ. ಅವನನ್ನ ಶಾಲೆಗೆ ಬಿಟ್ಟು ನಾನು ತಲುಪೋದು ಯಾವಾಗಾ ?. ಹರ್ಷ ಏರು ಧ್ವನಿಯಲ್ಲಿ ಕೂಗಿದಾಗಲೇ ವಾಸ್ತವಕ್ಕೆ ಬಂದಳು. ಅವಸರವಸರವಾಗಿ ಉಕ್ಕುತ್ತಿದ್ದ ಹಾಲಿನ ಪಾತ್ರೆಯ ಉರಿಯನ್ನು ನಂದಿಸಿದಳು. ಅಡಿಗೆ ಮನೆಯ ಬಾಗಿಲಿಗೆ ಬಂದ ಪತಿಯನ್ನು ಕಂಡು ಮುಖ ಬಾಡಿಸಿಕೊಂಡಳು. ಕಣ್ಣಾಲಿಗಳು ತುಂಬಿಕೊಂಡವು. ಭಾವುಕಳಾದ ಹೆಂಡತಿಯನ್ನು ಕಂಡು ಸ್ವಲ್ಪ ಮೆತ್ತಗಾದ.
“ಇದೇನೆ ಭಾವನಾ ? ಇಷ್ಟಕ್ಕೆಲ್ಲ ಯಾರಾದ್ರು ಕಣ್ಣೀರು ಹಾಕ್ತಾರೇನೆ ಹುಚ್ಚಿ . ಆದರೆ ಒಂದು ಮಾತು ಹೇಳ್ತಿನಿ ಕಣೆ. ಯಾಕೆ ಯಾವಾಗಲೂ ಯೋಚಿಸ್ತಾನೆ ಇರ್ತಿಯಾ ? ನೀನು ಹೆಸರಿಗೆ ತಕ್ಕಂತೆ ಭಾವನಾಲೋಕಕ್ಕೆ ಹೋಗಿ ಬಿಡ್ತಿಯಾ. ಇತ್ತೀಚೆಗಂತೂ ಅತಿಯಾಗಿ ಹೋಗಿದೆ. ಯಾವುದಕ್ಕೂ ಕಡಿಮೆ ಮಾಡಿಲ್ಲ ನಾನು ನಿನಗೆ. ನೆಮ್ಮದಿಯಿಂದ ಇರಬೇಕಾದ ಸಮಯದಲ್ಲಿ ನಿನಗೇನು ಯೋಚನೆಯೋ ನಾ ಕಾಣೆ. ವೈದ್ಯರಲ್ಲಿ ಪರೀಕ್ಷೆ ಮಾಡಿಸಿಯೂ ಆಯಿತು. ಅವರು ಕೂಡಾ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾರೆ. ಎಲ್ಲದರಲ್ಲೂ ಜಾಣೆ ನೀನು. ಯಾವ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ ಮಾಡ್ತಿಯಾ. ಅಡಿಗೆ, ಮನೆಗೆಲಸ, ಮಗನನ್ನು ಕಾಳಜಿ ಮಾಡುವುದರಲ್ಲಿ ಅತ್ಯಂತ ಪರಿಪೂರ್ಣಳು.
ಯಾವುದರಲ್ಲೂ ಕೊಂಕು ತೆಗೆಯುವ ಹಾಗೇ ಇಲ್ಲ. ಮೂಡಿಯಾಗುವದನ್ನು ಒಂದು ಬಿಟ್ಟರೆ ಶುದ್ಧ ಅಪರಂಜಿ ನೀನು”. ಎಂದು ಸಮಾಧಾನಿಸುತ್ತಿದ್ದ ಪತಿಗೆ ತಿಂಡಿಯ ಬಟ್ಟಲನ್ನು ನೀಡಿ ಮಗನನ್ನು ಕರೆದಳು. ಮುಂಜಾನೆ ಎಷ್ಟು ಬೇಗನೆ ಎದ್ದರೂ ಕೆಲಸ ಸಾಗುವುದೇ ಇಲ್ಲಾ. ಗಂಡನನ್ನು, ಮಗನನ್ನು ಕಳಿಸಿಕೊಡುವವರೆಗೂ ದಾವಂತವೇ. ಇಬ್ಬರನ್ನೂ ಕಳಿಸಿಕೊಟ್ಟು ಗಟ್ಟಿಯಾಗಿ ನಿಟ್ಟುಸಿರು ಬಿಟ್ಟಳು. ಕುಳಿತಲ್ಲೇ ಮತ್ತೆ ಗಂಡನ ಮಾತುಗಳನ್ನೇ ಮೆಲುಕು ಹಾಕಿದಳು. ! ಹೌದು ಇಷ್ಟೊಂದು ಪ್ರೀತಿಸುವ ಗಂಡ, ಮುದ್ದಾದ ಮಗು, ಸುಂದರ ಸಂಸಾರ ನಮ್ಮದು.
ಹೀಗಿರುವಾಗ ಚಿಂತಿಸುವ ಅಗತ್ಯವಾದರೂ ಏನಿದೆ ನನಗೆ. ಅವರಿಬ್ಬರೂ ಮನೆಯಿಂದ ಹೋದರೆ ಬರುವುದು ಸಂಜೆಯೆ. ಅಲ್ಲಿಯವರೆಗೆ ಮನೆಯಲ್ಲಿ ಒಂಟಿ. ಮಾಡುವುದಕ್ಕೆ ಬೇರೆನೂ ಕೆಲಸವಿಲ್ಲ. ಹೊರಗಡೆ ಹೋಗಿ ಕೆಲಸ ಮಾಡೋಣವೆಂದರೆ ಇವರಿಗೆ ಇಷ್ಟವಿಲ್ಲ. ನನಗೂ ಎರಡೂ ಕಡೆ ನಿಭಾಯಿಸುವ ಧೈರ್ಯವಿಲ್ಲ. ಒಬ್ಬಂಟಿಯಾಗಿದ್ದುದೆ ನನ್ನ ವಿವಶತೆಗೆ ಕಾರಣ ಇರಬೇಕು. ಮನೆಯಲ್ಲಿಯೇ ಮಾಡುವಂತಹ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಬಹುಶಃ ಅಂತರ್ಗತವಾದ ಭಾವನೆಗಳಿಗೆ ಕಡಿವಾಣ ಬೀಳಬಹುದು. ಮನೆಯ ಮುಂದಿರುವ ಜಾಗದಲ್ಲಿ ಹೂವಿನ ಗಿಡಗಳನ್ನು , ತರಕಾರಿ ಗಿಡಗಳನ್ನು ಬೆಳೆಸಿದರೆ ನೋಡುವುದಕ್ಕೂ ಚೆಂದ ಆರೋಗ್ಯಕ್ಕೂ ಒಳ್ಳೆಯದು.! ಹೀಗೆಂದು ಯೋಚಿಸಿದವಳೇ ಕಾರ್ಯ ತತ್ಪರಳಾದಳು ಭಾವನಾ.
ಅವಳಲ್ಲಾದ ಬದಲಾವಣೆಗೆ ಅತ್ಯಂತ ಸಂತೋಷಪಟ್ಟ ಹರ್ಷ. ರಜಾದಿನಗಳಲ್ಲಿ ತಂದೆ ಮಗ ಇಬ್ಬರೂ ಅವಳೊಂದಿಗೆ ಸ್ಪಂದಿಸತೊಡಗಿದರು. ಮಕ್ಕಳಿಗೆ ಆಡಲು ಜೋಕಾಲಿ, ಜಾರುಬಂಡಿ , ಆರಾಮವಾಗಿ ಕುಳಿತುಕೊಳ್ಳಲು ಕಲ್ಲಿನ ಹಾಸು, ಪುಟ್ಟ ಮೈದಾನ, ನಡೆದಾಡುವ ದಾರಿ ಎಲ್ಲವೂ ರೂಪುಗೊಂಡಿತು. ಅಕ್ಕಪಕ್ಕದ ಮನೆಗಳಿಂದ ಮಗನ ಗೆಳೆಯರು ಆಟ ಆಡುವುದಕ್ಕೆ ಬಂದರೆ, ದೊಡ್ಡವರು ಆರಾಮಾಗಿ ವಾಯುವಿಹಾರ ಮಾಡಲು, ಕಲ್ಲು ಹಾಸಿನ ಮೇಲೆ ಕುಳಿತುಕೊಳ್ಳಲು ಬರುತ್ತಿದ್ದರು. ಹಲವಾರು ಜನರಿಗೆ ಹಾಯಾದ ಸ್ಥಳವಾಗಿ ಭಾವನಾಳಿಗೆ ಅನೇಕ ಜನ ಗೆಳತಿಯರು ಸಿಕ್ಕರು. ಬೃಂದಾವನದ ಕೆಲಸದಲ್ಲಿ ಈಗ ಹೊತ್ತು ಹೋಗುವುದೇ ತಿಳಿಯುತ್ತಿಲ್ಲ ಅವಳಿಗೆ. ಅನೇಕರಿಗೆ ಆಶ್ರಯವಾದ ಬೃಂದಾವನ ನಳನಳಿಸುತ್ತಿತ್ತು ಸುಂದರವಾಗಿ. ತಂಪಾದ ವಾತಾವರಣ, ಹಸಿರಾದ ಗಿಡಗಳು, ನೋಡುತ್ತಿದ್ದ ಭಾವನಾಳಿಗೆ ಧನ್ಯತಾಭಾವ ಮೂಡಿತು.
ದೌರ್ಬಲ್ಯ
ಎಲ್ಲೆಲ್ಲೂ ಜನಜಂಗುಳಿ. ಸಾಲುಸಾಲಾಗಿ ಹಾಕಿರುವ ತರತರದ ಅಂಗಡಿಗಳು. ಒಂದು ಕಡೆಯಲ್ಲಿ ಮಿಠಾಯಿ ಅಂಗಡಿ. ಎಲ್ಲಾ ಅಂಗಡಿಗಳ ಮುಂದು ನೂಕುನುಗ್ಗಲು. ಸಂಜೆಯ ಸಮಯ ದೀಪಗಳಿಂದ ಕಂಗೊಳಿಸುವ ತೊಟ್ಟಿಲುಗಳು. ಅದರಲ್ಲಿ ಹತ್ತುವುದಕ್ಕೆ ಟಿಕೆಟ್ ಪಡೆಯಲು ನಿಂತಿರುವ ಉದ್ದನೆಯ ಸಾಲು. ಜಾತ್ರೆಯ ಸಂಭ್ರಮವೋ ಸಂಭ್ರಮ. ಅಷ್ಟು ನೂಕುನುಗ್ಗಲಿನ ನಡುವೆಯೂ ಮುದ್ದಾದ ಚೂಟಿ ಹುಡುಗಿ ಒಬ್ಬಳು ಸಂಧ್ಯಾಳ ಗಮನ ಸೆಳೆದಿದ್ದಳು.
ಮಕ್ಕಳು ಏರುವ ತೊಟ್ಟಿಲು ಹತ್ತುತ್ತಿದ್ದ ಅಪರಿಚಿತ ಹುಡುಗಿಯ ಕಡೆಗೆ ಮತ್ತೆ ಮತ್ತೆ ನೋಟ ಹೊರಳಿತ್ತು. ಏನೋ ಹೇಳಿಕೊಳ್ಳಲಾಗದ ಭಾವಗಳಲ್ಲಿ ಬಂಧಿಯಾಗಿದ್ದಳು ಸಂಧ್ಯಾ. ಯಾಕೆ ಹೀಗೆ ಆ ಪುಟ್ಟ ಹುಡುಗಿಯ ಕಡೆಗೆ ನನ್ನ ಮನಸ್ಸು ಸೆಳೆಯುತ್ತಿದೆ ? ಮನದಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಅಸಮರ್ಥಳಾದಳು. ಕಣ್ ಮಿಟುಕಿಸುವದರೊಳಗೆ ಒಂದು ದುರ್ಘಟನೆ ಸಂಭವಿಸಿತು. ಉಳಿದ ಮಕ್ಕಳೆಲ್ಲ ಇಳಿದಾಗಿತ್ತು. ಆ ಪುಟ್ಟ ಮಗು ಇನ್ನೆನು ಇಳಿಯಬೇಕು ಅನ್ನುವಷ್ಟರಲ್ಲಿ ಹಠಾತ್ತನೆ ಏನೋ ಅಚಾತುರ್ಯದಿಂದ ತೊಟ್ಟಿಲು ತಿರುಗಲು ಪ್ರಾರಂಭವಾಯಿತು. ಸಮತೋಲನ ತಪ್ಪಿ ಮಗು ಎಸೆಯಲ್ಪಟ್ಟಳು. ಭಗವಂತಾ.. ಎನ್ನುವ ಉದ್ಗಾರ ಸಂಧ್ಯಾಳ ಬಾಯಿಂದ ಹೊರಟಿತು. ತನ್ನ ಕಾಲ ಹತ್ತಿರ ಬಿದ್ದ ಮಗುವನ್ನು ಹಿಂದೆ ಮುಂದೆ ಯೋಚಿಸದೆ ಅನಾಮತ್ತಾಗಿ ಎತ್ತಿಕೊಂಡು ಕಾರಿನ ಹತ್ತಿರ ಬಂದಳು. ಪ್ರಜ್ಞೆ ತಪ್ಪಿತ್ತು. ಕೈಗೆ ಕಾಲಿಗೆ ತರಚು ಗಾಯವಾಗಿತ್ತು. ಹಣೆಯ ಮೇಲೆ ರಕ್ತ ಸುರಿಯುತ್ತಿತ್ತು. ಯಾವ ಯೋಚನೆಯೂ ತಲೆಗೆ ಹೊಳೆಯಲೇ ಇಲ್ಲ ಆ ಸಮಯದಲ್ಲಿ. ಆ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡುವದರತ್ತ ಮಾತ್ರ ಸಂಧ್ಯಾಳ ಗಮನ.
ಮುಂದೆ ಅದರಿಂದ ಏನಾದರೂ ತೊಂದರೆ ಆದೀತು ಎನ್ನುವ ಯೋಚನೆ ಕೂಡಾ ಮಾಡಿರಲಿಲ್ಲ. ಪ್ರಥಮ ಚಿಕಿತ್ಸೆ ನೀಡಿದ ಡಾಕ್ಟರ್ “ಪ್ರಾಣಕ್ಕೆ ಯಾವ ಅಪಾಯವಿಲ್ಲ. ರಕ್ತ ಹೋಗಿರುವ ಕಾರಣ ರಕ್ತ ಕೊಡಬೇಕಾಗಬಹುದು. ಒ ಪಾಸಿಟಿವ್ ನಮ್ಮಲ್ಲಿಯೇ ಇರುವ ಕಾರಣ ಸಮಸ್ಯೆ ಇಲ್ಲ” ಎಂದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟಳು. ಪರಿಚಯದ ಡಾಕ್ಟರ್ ಆದ ಕಾರಣ ಮೊದಲು ಏನನ್ನು ವಿಚಾರಿಸದೆ ಚಿಕಿತ್ಸೆ ಪ್ರಾರಂಭಿಸಿದ್ದರು. ಈಗ ಛೇಂಬರ್ ಗೆ ಕರೆದು ವಿಚಾರಿಸಿದರು. “ಯಾರು ಆ ಮಗು.. ? ಏನಾಯಿತು? ಆಕೆಯ ತಂದೆ ತಾಯಿ ಎಲ್ಲಿ ? ಎಂದಾಗಲೇ ಸಂಧ್ಯಾಳಿಗೆ ತನ್ನ ತಪ್ಪಿನ ಅರಿವಾಗಿದ್ದು. ಎಲ್ಲಾ ವಿಚಾರಗಳನ್ನು ಸಾದ್ಯಂತವಾಗಿ ವಿವರಿಸಿದಳು. “ಆಕೆಯ ಹೆಸರು ಮಾತ್ರ ಐಕ್ಯ. ಚೂಟಿಯಾಗಿ ಓಡಾಡಿಕೊಂಡಿದ್ದ ಅವಳನ್ನು ಹೆಸರು ಕೇಳಿದಾಗ ಹೇಳಿದ್ದಳು. ಉಳಿದ ವಿಚಾರ ತಿಳಿಯದು ಎಂದಳು ಸಂಧ್ಯಾ. ಹೆಣ್ಣು ಮಕ್ಕಳೆಂದರೆ ತುಂಬಾ ಪ್ರೀತಿ ಆಕೆಗೆ. ಕಷ್ಟದಲ್ಲಿದ್ದಾಗ ಹಿಂದೆ ಮುಂದೆ ಯೋಚಿಸದೆ ಸಹಾಯ ನೀಡುವುದು ದೌರ್ಬಲ್ಯವೋ ? ಮಾನವೀಯತೆಯೋ ? ತಿಳಿಯದು.
ಮಗುವಿಗೆ ಪ್ರಜ್ಞೆ ಬಂದಿದೆ ಎಂದು ಸಿಸ್ಟರ್ ಬಂದು ಹೇಳಿದಾಗ ಡಾಕ್ಟರ್ ಜೊತೆಗೆ ಅತ್ತ ನಡೆದಳು. ತಾನು ಎಲ್ಲಿದ್ದೇನೆ ಎಂದು ತಿಳಿಯದೆ ಐಕ್ಯ ಕಂಗಾಲಾಗಿದ್ದಳು. ಗಾಯದ ನೋವು ಮುದ್ದು ಮುಖದ ಮೇಲೆ ಎದ್ದು ಕಾಣುತ್ತಿತ್ತು. ಸಂಧ್ಯಾಳನ್ನು ಕಾಣುತ್ತಿದ್ದಂತೆ ಪರಿಚಯದ ಭಾವ ಕಂಡಿತು ಕಣ್ಣುಗಳಲ್ಲಿ. ” ಹೇಗಿದ್ದಿ ಮರಿ? ನೋವಿದೆಯಾ ? ಎಂದ ಡಾಕ್ಟರ್ ಮಾತಿಗೆ “ನಾನು ಮರಿ ಅಲ್ಲಾ ಐಕ್ಯ. ನಮ್ಮಮ್ಮ ಎಲ್ಲಿ ಡಾಕ್ಟರ್? ನನಗೆ ಏನಾಯಿತು? ತೊಟ್ಟಿಲಲ್ಲಿ ಇನ್ನೊಂದು ರೌಂಡ್ ಹೋಗಬೇಕು ಅಂತ ಆಸೆ ಇತ್ತು. ಅದಕ್ಕೆ ಇಳಿಯದೆ ಅಮ್ಮನಿಗೆ ಹೇಳೋಣ ಅಂತ ಅತ್ತಿತ್ತ ನೋಡಿದರೆ ಕಾಣಲೆ ಇಲ್ಲ. ಇಳಿಯಬೇಕು ಅನ್ನುವಷ್ಟರಲ್ಲಿ ಎತ್ತಿ ಬಿಸಾಡಿದಂತೆ ಆಯಿತು.. ಆಮೇಲೆನಾಯಿತು ಗೊತ್ತೇ ಆಗಲಿಲ್ಲ. ಈ ಆಂಟಿ ನನ್ನ ಮಾತಾಡಿಸಿದ್ರು.” ಒಂದೇ ಉಸಿರಿನಲ್ಲಿ ಬಡಬಡನೆ ಹೇಳಿದಳು ಐಕ್ಯ. “ಹ ಹ ನಿದಾನ. ನಿನ್ನ ಅಪ್ಪ ಅಮ್ಮ ಯಾರು. ಎಂದು ಡಾಕ್ಟರ್ ಕೇಳಿ ಮುಗಿಸುವಷ್ಟರಲ್ಲಿ “ನಾನು ಅಮ್ಮನ ಜೊತೆ ಜಾತ್ರೆಗೆ ಬಂದಿದ್ದು. ನಮ್ಮಮ್ಮ ಸಹನಾ. ನಾವಿಬ್ಬರೇ ಇರೋದು. ಅಪ್ಪ ಇಲ್ಲ ” ಎಂದಳು. ತಾಯಿಯ ಪೋನ್ ನಂಬರ್ ಪಟಪಟನೆ ಹೇಳಿದಳು. ಆ ನಂಬರಿಗೆ ಫೋನ್ ಮಾಡಿದಾಗ ಎತ್ತಿ ಹಲೋ ಎಂದ ಧ್ವನಿಯಲ್ಲಿ ಗಾಬರಿ ಮಿಶ್ರಿತ ದುಃಖವಿತ್ತು.
ವಿಷಯ ತಿಳಿಸಿದ ಸಂಧ್ಯಾ ಆಸ್ಪತ್ರೆಯ ವಿವರ ತಿಳಿಸಿದಳು. ಹತ್ತು ನಿಮಿಷದಲ್ಲಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷಳಾದಳು ಸಹನಾ. ಐಕ್ಯ ಅಮ್ಮ ಎಂದಾಗಲೇ ಅವಳ ಮನಸ್ಸು ಸಮಾಧಾನಗೊಂಡಿದ್ದು. ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಆಕೆ ದೂರದ ಊರು ಭದ್ರಾವತಿಯಿಂದ ಶಿರಸಿಗೆ ಬಂದಿದ್ದಳು ಜಾತ್ರೆಯ ಸಲುವಾಗಿ. ಮಗಳ ಹಠಕ್ಕೆ ಕಟ್ಟುಬಿದ್ದು ಕರೆತಂದಿದ್ದಳು. ತೊಟ್ಟಿಲು ಹತ್ತಿಸಿ ಅತ್ತ ಕಡೆ ನಿಂತಿದ್ದಳು. ಆಗಲೇ ಇಷ್ಟೆಲ್ಲಾ ಘಟನೆ ನಡೆದಿತ್ತು. ಅವಳು ಶಿರಸಿಗೆ ಬರುವುದಕ್ಕೆ ಮತ್ತೊಂದು ಬಲವಾದ ಕಾರಣವೂ ಇತ್ತು. ಆಕಸ್ಮಾತ್ ಬೇಟಿಯಾದ ಆಕೆಯನ್ನು ಮದುವೆಯಾದ ಆಕೆಯ ಗಂಡ ನಾಲ್ಕು ದಿನ ಸಂಸಾರ ಮಾಡಿ ಊರಿಗೆ ಹೋಗಿ ಕರೆಸಿಕೊಳ್ಳುತ್ತೇನೆ ಎಂದು ಹೋದವನ ಪತ್ತೆಯೇ ಇಲ್ಲವಾಗಿತ್ತು. ಆತನ ಹೆಸರನ್ನು ಬಿಟ್ಟು ಪೂರ್ವಾಪರ ತಿಳಿಯದ ಸಹನಾ ಎಲ್ಲಿ ವಿಚಾರಿಸುವದೆಂದು ತಿಳಿಯದೆ ಗೊಂದಲಕ್ಕೆ ಒಳಗಾಗಿದ್ದಳು.
ಯಾರು ಇಲ್ಲದ ಅನಾಥಾಶ್ರಮದಲ್ಲಿ ಬೆಳೆದವಳು ಸಹನಾ. ಏನೂ ಮಾಡಲು ತೋಚದೆ ಕಂಗಾಲಾಗಿದ್ದಳು. ನಾಲ್ಕು ದಿನ ಆತನೊಟ್ಟಿಗೆ ಓಡಾಡಿದ ಪರಿಣಾಮ ಐಕ್ಯಳಿಗೆ ಜನ್ಮ ಕೊಟ್ಟಿದ್ದಳು. ಅನಾಥಾಶ್ರಮದ ಆಸರೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಬಾಳು ನಡೆಸುತ್ತಿದ್ದವಳು ಸಹನಾ. ಪಾಪ ಐಕ್ಯಳಿಗೆ ತಂದೆಯ ಕುರಿತು ತಿಳಿದೇ ಇಲ್ಲ. ತಾಯಿ ಶಿಕ್ಷಕಿಯಾದ ಶಾಲೆಯಲ್ಲಿ ತಾಯಿಯ ಜೊತೆಯೇ ಹೋಗಿ ಬರುತ್ತಿದ್ದಳು ಐಕ್ಯ. ಆತನ ಮಾತು ಕತೆ ತಿಳಿದಿದ್ದ ಸಹನಾ ಆತ ಉತ್ತರ ಕನ್ನಡದವನು ಎಂದು ಅರಿತಿದ್ದಳು . ಹಾಗಾಗಿ ಒಂದು ದೂರದ ಆಸೆಯನ್ನು ಹೊತ್ತು ಐಕ್ಯ ಜಾತ್ರೆಗೆ ಹೋಗೋಣ ಎಂದು ಹಠ ಹಿಡಿದಾಗ ಕರೆದುಕೊಂಡು ಬಂದಿದ್ದಳು. ದೇವಸ್ಥಾನದಲ್ಲಿ ಮದುವೆಯಾದಾಗ ಅನಾಥಾಶ್ರಮದಲ್ಲಿ ಇರುವ ಜೊತೆಗಾರರು ತೆಗೆದ ಒಂದೇ ಒಂದು ಪೋಟೊ ಇಟ್ಟುಕೊಂಡು ಬಂದಿದ್ದಳು. ಈ ಕಥೆಯನ್ನು ಕೇಳಿದ ಸಂಧ್ಯಾಳಿಗೆ ಅಯ್ಯೊ ಅನ್ನಿಸಿತು.
ಬೇರೆಯವರ ಕಷ್ಟಕ್ಕೆ ಮರುಗುವುದು ಸಹಾಯಕ್ಕೆ ಮುಂದಾಗುವುದೇ ಅವಳ ದೌರ್ಬಲ್ಯ. “ಆ ಪೋಟೋ ತೋರಿಸಿ ನೋಡೋಣ. ನಿಮಗೆ ಅಲ್ಪಸ್ವಲ್ಪ ಸಹಾಯವಾದರೆ ನನಗೆ ಸಂತೋಷ ” ಎಂದಳು. ಸಹನಾ ಪೋಟೋ ತೆಗೆದು ಕೊಟ್ಟಳು. ಪೋಟೊ ನೋಡುತ್ತಿದ್ದ ಸಂಧ್ಯಾಳಿಗೆ ದಿಗ್ಭ್ರಮೆ ಉಂಟಾಯಿತು. ಆದರ್ಶವಾದಿ ಎಂದು ಹೆಸರು ಪಡೆದುಕೊಂಡು ಎಲ್ಲಾ ಕಡೆ ಹೆಣ್ಣು ಮಕ್ಕಳ ಶೋಷಣೆಯ ವಿರುದ್ಧ ಧ್ವನಿ ಎತ್ತಿ ಮಾತಾಡುವ ವಿಕ್ರಮ್ ಪೋಟೊ ಅದಾಗಿತ್ತು. ಆತ ಬೇರಾರು ಅಲ್ಲ. ತನ್ನ ಅಣ್ಣ ಅಂತ ಹೇಗೆ ಹೇಳಬೇಕೆಂದು ತಿಳಿಯದೆ ಕಂಗಾಲಾದಳು. ಈಕೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಸಜ್ಜನನ ಸೋಗು ಹಾಕಿ ಓಡಾಡುತ್ತಿರುವ ತನ್ನ ಅಣ್ಣನಿಗೆ ಬುದ್ದಿ ಕಲಿಸಬೇಕೆಂದು ತೀರ್ಮಾನಿಸಿದಳು ಸಂಧ್ಯಾ. ಸಹನಾ ಹಾಗೂ ಐಕ್ಯಳನ್ನು ತನ್ನ ಮನೆಗೆ ಕರೆದುಕೊಂಡು ಬಂದಳು ಸಂಧ್ಯಾ.
ತಂದೆ ತಾಯಿಯನ್ನು ತಮ್ಮ ಮನೆಗೆ ಕರೆಸಿಕೊಂಡು ವಿಷಯವನ್ನೆಲ್ಲ ವಿವರಿಸಿದಳು. ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದರು ಮಾಡಿಕೊಳ್ಳದ ಮಗ ಇಂತಹ ಕೆಲಸ ಮಾಡಿದ್ದಾನೆ ಎಂದರೆ ಮೊದಲು ನಂಬಲಾಗಲಿಲ್ಲ ಅವರಿಗೆ.. ಆಮೇಲೆ ಮುದ್ದಾದ ಮಗು ಐಕ್ಯ ವಿಕ್ರಮನ ಹೋಲಿಕೆ ಇರುವುದನ್ನು ಗಮನಿಸಿ ಮನವರಿಕೆಯಾಯಿತು. ತಾವು ಈ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಮಗಳಿಗೆ ಮಾತು ಕೊಟ್ಟು ಮನೆಗೆ ಬಂದರು. ಯಾವುದೊ ಸಮಾರಂಭಕ್ಕೆ ಭಾಷಣ ಮಾಡಲು ಹೊರಟು ನಿಂತ ಮಗನನ್ನು ನಿಲ್ಲಿಸಿ ಛೀಮಾರಿ ಹಾಕಿದರು. ಇವರಿಗೆ ಸಹನಾ ಕುರಿತು ಹೇಗೆ ತಿಳಿಯಿತು ಎಂದು ತಲೆಕೆಡಿಸಿಕೊಂಡ ವಿಕ್ರಮ್.
ಅನಾಥಾಶ್ರಮದಲ್ಲಿ ಬೆಳೆದ ಅವಳನ್ನು ಮದುವೆಯಾಗಿರುವೆ ಎಂದು ತಿಳಿಸಿದರೆ ತನ್ನ ಗೌರವಕ್ಕೆ ಕುಂದು ಎಂದು ಯೋಚಿಸಿದವನು ಅತ್ತ ತಿರುಗಿ ತಲೆ ಹಾಕಿರಲಿಲ್ಲ ವಿಕ್ರಮ್. ಈಗ ತಂದೆ ತಾಯಿಗೆ ವಿಷಯ ತಿಳಿಸಿದ ಸಂಧ್ಯಾಳ ಮೇಲೆ ಸಿಟ್ಟು ಬಂತು. ಆದರೆ ಏನೂ ಮಾಡುವಂತಿರಲಿಲ್ಲ. ತಂಗಿಯ ಗುಣ ಅರಿತಿದ್ದ ವಿಕ್ರಂ ಸಹನಾ ಮತ್ತು ಐಕ್ಯಳನ್ನು ಮನೆಗೆ ಕರೆತರಲು ಒಪ್ಪಿಕೊಂಡ. ವಿಕ್ರಂ ಜೊತೆ ಹೊರಟು ನಿಂತ ಸಹನಾ ಕಣ್ಣಲ್ಲಿ ನೀರು ಜಿನುಗಿತು. ಸಂಧ್ಯಾಳನ್ನು ತಬ್ಬಿಕೊಂಡು ಕೃತಜ್ಞತೆ ಸಲ್ಲಿಸಿದಳು. ಎರಡು ಜೀವಕ್ಕೆ ನ್ಯಾಯ ಒದಗಿಸಿಕೊಟ್ಟ ಧನ್ಯತಾಭಾವ ಸಂಧ್ಯಾಳದಾಯಿತು.
–ಸುಜಾತಾ ಎಸ್ ಹೆಗಡೆ ದಂಟಕಲ್