ಮೇಷ್ಟ್ರು ರವಿ, ರಾಜಿ ಮತ್ತು ಮಗ ರವಿರಾಜ: ಲಿಂಗರಾಜು ಕೆ ಮಧುಗಿರಿ


ಅಗ್ರಹಾರಕ್ಕೆ ವರ್ಗವಾಗಿ ಬಂದ ರವಿಯನ್ನು, “ಆ ಶಾಲೆಯನ್ಯಾಕೆ ತೆಗೆದುಕೊಂಡೆ ಗುರು? ನೆಕ್ಸ್ಟ್ ಅಕಾಡೆಮಿಕ್ ಇಯರ್‌ಗೆ ನೀನು ಹೆಚ್ಚುವರಿ ಆಗೋದು ಪಕ್ಕಾ. ಆ ಹೆಸ್ರಿಗೂ ಆ ಊರ್ಗೂ ಸಂಬಂಧಾನೇ ಇಲ್ಲ. ಊರಿನ ತುಂಬೆಲ್ಲಾ ಇರೋದು ಮಾದಿಗ್ರು, ಹೊಲೇರು, ಕುರುಬ್ರು, ಮಡಿವಾಳ್ರೇ. ಗೊತ್ತಲ್ಲಾ ಅವ್ರೆಂಗೆ ಅಂತಾ?”, ಹೀಗೆ ತುಟಿಗೆ ಇಷ್ಟಿಷ್ಟೇ ವೋಡ್ಕಾನಾ ಮುತ್ತಿಡ್ತಾ, ರವಿಯ ಕಸಿನ್, ಕುಮಾರ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ.

ರವಿ, ಅಗ್ರಹಾರದ ಹೆಸರಿನಿಂದ ಹಾಗೂ ಕೌನ್ಸೆಲಿಂಗ್ ನಲ್ಲಿ ಉಳಿದ ಒಂದೇ ಒಂದು ಶಾಲೆ ಇದಾಗಿದ್ದುದರಿಂದ ಅನಿವಾರ್ಯವಾಗಿ ಇದನ್ನೇ ಆಯ್ಕೆ ಮಾಡಿಕೊಂಡು, ಗಂಟು ಮೂಟೆ ಕಟ್ಟಿಕೊಂಡು ಒಂದೂವರೆ ವರ್ಷದ ಹಿಂದೆ ಬೀದರಿನಿಂದ ಓಡಿ ಬಂದಿದ್ದ. ಕೆಲಸ ಮಾಡಿದ ಒಂದೂವರೆ ವರ್ಷದಲ್ಲಿ ಮುರಿದು ಮಕಾಡೆ ಮಲಗಿದ್ದ ಶಾಲೆಯ ಗೇಟನ್ನು ಸರಿಮಾಡಿಸದೇ ಇದ್ದರೂ, ಹೇಗೋ ಊರಿನವರು, ರವಿ ಬಗ್ಗೆ ಒಳ್ಳೆಯ ಮಾತುಗಳನ್ನಾಡಲು ಶುರು ಮಾಡಿದ್ದರು. ಒಂದು ವರ್ಷದಲ್ಲಿ ಕಲಿಸಿದ “ಜಾನಿ ಜಾನಿ ಎಸ್ ಪಾಪ…”, “ಕ್ವಾಕ್ ಕ್ವಾಕ್ ಕ್ವಾಕ್ ಕ್ವಾಕ್…” ಈ ಎರಡು ರೈಮ್ಸ್ಗಳು ಈ ಮಟ್ಟಕ್ಕೆ ಹೆಸರು ತಂದುಕೊಟ್ಟದ್ದು ಅವನಿಗೆ ಅವನನ್ನೇ ನಂಬಲಾಗಿರಲಿಲ್ಲ !. ನರ ಹರಿದುಕೊಂಡು, ಮೈ ಪರಚಿಕೊಂಡು ಪಾಠ ಮಾಡಿದರೂ, ಕೈಲಿರೋ ದುಡ್ಡು ಖರ್ಚು ಮಾಡಿಕೊಂಡು ಟೀಚಿಂಗ್ ಏಡೂ, ಹಾಳು ಮೂಳು ಅಂತಾ ಏನೆಲ್ಲಾ ಸರ್ಕಸ್ ಮಾಡಿದರೂ ಬೀದರ್ನ ಪೋಷಕರಿಂದ ಈ ಮಟ್ಟದ ಪ್ರಶಂಸೆ ಸಿಕ್ಕಿರಲಿಲ್ಲ. ಅದಾದಂದಿನಿಂದ, “ಈ ಗರ್ನಮೆಂಟ್ ಸ್ಕೂಲ್ ಮಕ್ಳಿಗೆ ಎಷ್ಟು ಮಾಡಿದ್ರೂ ಇಷ್ಟೇ” ಎಂಬ ನಿರ್ಧಾರಕ್ಕೆ ಬಂದಿದ್ದ ರವಿಗೆ, ಅಗ್ರಹಾರದ ಪೋಷಕರ ಪ್ರತಿಕ್ರಿಯೆ ಅಚ್ಚರಿ ಮೂಡಿಸಿತ್ತು.

ಆದರೆ ರವಿಯ ಈ ಪ್ರಖ್ಯಾತಿ ದೊಡ್ಮನೆ ರಾಜಿಯ ಮನೋ-ದೇಹವನ್ನು ಗೆದ್ದಿತ್ತು ಎಂದು ಹೇಳುವುದು ತೀರಾ ಸರಳ ಮತ್ತು ಉತ್ಪ್ರೇಕ್ಷೆ ಎನಿಸಿದರೂ ಒಪ್ಪಬಹುದಾದ ಸಂಗತಿಯಾಗಿತ್ತು. ತನ್ನ ಯೌವನದ ಉತ್ತುಂಗ ಮತ್ತು ಓದಿನಲ್ಲಿ ಮುಂದಿದ್ದ ರಾಜಿಯ ಬಾಳು, ಕೃಷಿಕನಾದ ತನ್ನ ಸೋದರ ಮಾವನನ್ನು ಮದುವೆಯಾಗುವುದರೊಂದಿಗೆ ನೇರವಾಗಿ, ಅಗ್ರಹಾರಕ್ಕೆ ಬಂದು ಬಿದ್ದಿತ್ತು. “ಹೆಣ್ಣು ಎಷ್ಟೇ ಓದಿದರೂ ಮುಸುರೆ ತೊಳೆಯುವುದು ಬಿಡಲಾರಲಾದೀತೇ?” ಎಂಬ ಅಸಂಖ್ಯ ಭಾರತೀಯರ ನಂಬಿಕೆಯಂತೆ, ತನ್ನ ಗಂಡನ ಮನೆಯಲ್ಲಿ ಎರಡು ಹೆಣ್ಣು ಮಕ್ಕಳನ್ನೆತ್ತಿ, ಮನೆ-ಮುಸುರೆ ಬೆಳಗುತ್ತಾ ಕಾಲ ಕಳೆಯುತ್ತಿದ್ದಳು. ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಅನೌಪಚಾರಿಕ ಟ್ಯೂಶನ್ ಸಹಾ ಮಾಡುತ್ತಾ, ಈ ಗೌಡ್ತಿ, ಮಕ್ಕಳ ಬಾಯಲ್ಲಿ ‘ರಾಜಿ ಮಿಸ್’ ಎಂದು ಹೆಸರಾಗಿದ್ದಳು. ಯಾವ ಕೇರಿ ಗಂಡು ಮಕ್ಕಳನ್ನಾದರೂ ಆಕೆ ಎದೆಗಪ್ಪಿಕ್ಕೊಂಡು ಮುದ್ದಾಡುತ್ತಿದ್ದಕ್ಕೆ ಒಂದು ಕಾರಣವೂ ಇತ್ತು. ಊರಿಗೂರೇ ಜಾತಿ ಜಾತಿ ಎಂದು ಬಡಿದಾಡುತ್ತಿದ್ದರೆ, ಈ ರಾಜಿ ಮಾತ್ರ ಯಾವ ಮಕ್ಕಳನ್ನು ಅಪ್ಪಿಕೊಂಡರೂ, ಯಾವ ಶ್ರೇಷ್ಠ ಜಾತಿಯವನೂ ಮೂಗು ಮುರಿಯುತ್ತಿರಲಿಲ್ಲ. ಏಕೆಂದರೆ ಪದವಿ ಮುಗಿಸಿ, ಈ ಕೊಂಪೆಗೆ ಬಂದಿದ್ದ ಅವಳ ಬಗ್ಗೆ ಎಲ್ಲರಿಗೂ ತುಸು ಗೌರವ ಮಿಶ್ರಿತ ಭಯವಿತ್ತು.

ತನ್ನ ಅಜ್ಜಿ, ತನ್ನ ಮೇಲಿನ ಮಮಕಾರದಿಂದ, ಎರಡು ಗಂಡಾದ ಮೇಲೂ, “ಒಂದು ಹೆಣ್ಣು ಹೆತ್ತು ಕೊಡಲಿಲ್ಲ, ರಾಜಿ”, ಎಂದು ಯಾವತ್ತು ಹೇಳದಿದ್ದರೂ, ತಾನು ಗಂಡು ಮಕ್ಕಳನ್ನು ಮುದ್ದಾಡುವಾಗ, ಅಜ್ಜಿಯ ಮುಖದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಗಮನಿಸಿರದಷ್ಟು ರಾಜಿ, ಭಾವನಾ ಶೂನ್ಯಳಾಗಿರಲಿಲ್ಲ.

ಇತ್ತ ಕಡೆ ಅಗ್ರಹಾರದ ಶಾಲೆಯಲ್ಲಿ ಆರ್ ಟಿ ಐ ಮತ್ತು ತಮಗೆ ಕಮೀಶನ್ ಕೊಡದ ಶಿಕ್ಷಕರನ್ನು ಬೀದೀಲಿ ನಿಲ್ಲಸಿ ಮರ್ಯಾದೆ ಕಳೆಯುತ್ತಿದ್ದ ಕೆಲಸಗಳಿಂದ ಕಂಗೆಟ್ಟ ಶಿಕ್ಷಕ ವರ್ಗ, ವರ್ಷ ತುಂಬುವುದರೊಳಗೆ ಮಾಯವಾಗುತ್ತಿದ್ದರಿಂದ, ರಾಜಿಯೂ ಆಗಾಗ ಶಾಲೆಗೆ ಬಂದು ಅನೌಪಚಾರಿಕ ಶಿಕ್ಷಕಿಯಾಗುತ್ತಿದ್ದಳು. ಹೀಗೆ ಬಂದು ಹೋಗುತ್ತಿದ್ದಾಗಲೇ, ರವಿಯ ಕಡೆಗೆ ಅವಳ ಮನಸ್ಸು ಹೊರಳಿದ್ದು.
ಸದಾ ಹೊಲದ ಕೆಸರು, ಧೂಳು, ಬೆವರುಗಳ ಬಿಢಾರವಾಗಿದ್ದ ತನ್ನ ಗಂಡನ ಬಟ್ಟೆಗಳಿಗಿಂತ ರವಿಯ ಬಟ್ಟೆಗಳು ಆಕೆಯನ್ನು ಇನ್ನಿಲ್ಲದಂತೆ ಆರ್ಷಿಸಿಬಿಟ್ಟಿದ್ದವು! ಆತ ತನ್ನ ನೀಳ ಮೈಗೆ ಒಪ್ಪುವಂತೆ ಹಾಕುತ್ತಿದ್ದ ಶುಭ್ರವಾದ ಬಟ್ಟೆ, ಸೊಂಟಕ್ಕೆ ಕಟ್ಟುತ್ತಿದ್ದ ಬೆಲ್ಟು, ಹಾಕುತ್ತಿದ್ದ ಬೂಟುಗಳು, ಅವಳ ಮನವನ್ನು ಹೊಕ್ಕಿ ಮತ್ತೆ ಮತ್ತೆ ಹೆಣ್ಣಾಗುತ್ತಿದ್ದಳು ! ರವಿ, ಅದು ಎಷ್ಟರಮಟ್ಟಿಗೆ ಅವಳೊಳಗೆ ಕಿರಣಗಳನ್ನು ಬೀರಿದ್ದನೆಂದರೆ, ಸಾಮಾನ್ಯವಾಗಿ ಮಿಥುನದಲಿ ಕೊರಡಾಗಿ ಬಿದ್ದಿರುತ್ತಿದ್ದ ರಾಜಿ, ಇತ್ತೀಚೆಗೆ ಅಪರೂಪಕ್ಕೊಮ್ಮೆ ತನ್ನ ಗಂಡ ಮೈಮೇಲೆ ಬಿದ್ದಾಗ, ರವಿಯ ನೀಳ ಕಾಯದ ಮೇಲಿನ ಬಟ್ಟೆ, ಬೂಟುಗಳು ನೆನಪಾಗಿ, ಗಂಡನನ್ನೇ ರವಿಯೆಂದು ಮೋಹಿಸಿ, ಶೃಂಗಾರ ರಾಣಿಯಾಗಿ ಕೆನೆ ಹಾಲು ಉಕ್ಕುವಂತೆ ಕೆನೆಯುತ್ತಿದ್ದಳು !

ಒಮ್ಮೆ ಪಲ್ಸ್ ಪೋಲಿಯೋ ಆಂದೋಲನದ ಅಂಗವಾಗಿ, ಶಾಲಾ ಮಕ್ಕಳು ಊರೊಳಗೆ ಪ್ರೊಸೆಶನ್ ಕರೆದುಕೊಂಡು ಹೋಗಿದ್ದಾಗ ರವಿಯನ್ನು, ಕರೆದು ಕೂರಿಸಿ ತಂಬಿಗೆಯೊಳಗೆ ಮಜ್ಜಿಗೆ ನೀಡಿ ಸತ್ಕರಿಸಿದ್ದಳು ರಾಜಿ. ಆಗ ಅಜ್ಜಿ ಏನು ಮಾತನಾಡದಿದ್ದರೂ, ರವಿ ಹೋದ ಮೇಲೆ, ಅವನು ಮಜ್ಜಿಗೆ ಕುಡಿದ ತಂಬಿಗೆಯನ್ನು ನಂತರ ಹಿತ್ತಲಿನೊಳಕ್ಕೆಸೆದು ತನ್ನ ಗೌಡತನವನ್ನು ಕಾಪಾಡಿಕೊಂಡಿದ್ದನ್ನು ರಾಜಿ ಗಮನಿಸಲಿಲ್ಲ; ಆದರೆ ಹೇಗೋ ಅದನ್ನು ನೋಡಿದ ರವಿ, ಕುಡಿದ ಮಜ್ಜಿಗೆಯನ್ನು ಕಕ್ಕುವಂತೆಯೂ ಇರಲಿಲ್ಲ. ಈ ಘಟನೆಯೊಂದೇ ಸಾಕಾಗಿತ್ತು ರವಿಗೆ, ರಾಜಿಯ ವಿಷಯದಲ್ಲಿ ಯಾವುದೇ ಸಣ್ಣದೊಂದು ಭಾವ ತಳೆಯದಿರಲು! ಆದರೆ ನಡೆದದ್ದೇ ಬೇರೆ!
ಶಾಲೆಯ ಕಡೆ ಹೋಗುತ್ತಾ ಬರುತ್ತಾ ರವಿಗೆ ಹತ್ತಿರವಾಗಲು ಶುರುವಾದಂತೆ, ತನ್ನಜ್ಜಿ ಬಯಸುತ್ತಿದ್ದ ಯಾವುದೋ ಒಂದು ಕನಸ ಈಡೇರಿಸಲು ರಾಜಿ ದೊಡ್ಡ ಹೆಜ್ಜೆಯೊಂದನ್ನು ಇಟ್ಟಂತೆ ಭಾಸವಾಗುತ್ತಿತ್ತು ರಾಜಿಯ ಇತ್ತೀಚಿನ ನಡೆಗಳು. ಇಟ್ಟ ದೊಡ್ಡ ಹೆಜ್ಜೆಗೆ ರವಿಯೇ ಹೆದ್ದಾರಿ ಆಗಿದ್ದ ಎಂಬುದೇ ವಿಸ್ಮಯಕಾರಿ ಸಂಗತಿ.

ಮೊದಲನೇ ಹೆಂಡತಿಗೆ ವಿಚ್ಛೇದನ ನೀಡಿ, ಎರಡನೇ ಪ್ರೇಯಸಿಯ ಜೊತೆಗೆ ಬ್ರೇಕಪ್ ಆಗಿ, ಇಲ್ಲಿಗೆ ಬರುವಾಗ ಬೀದರ್ ಜೊತೆಗೆ, ವಿಧವೆಯೊಬ್ಬಳನ್ನೂ ಬಿಟ್ಟು ಬಂದಿದ್ದ ರವಿಗೆ, ಹೆಣ್ಣಿನ ಬಗೆಗೆ ಅಷ್ಟೇನೂ ರೊಮ್ಯಾಂಟಿಕ್ ಎನಿಸುವ ಭಾವನೆಗಳಿರಲಿಲ್ಲ. ಮನುಷ್ಯ ಸಹಜ ದೈಹಿಕ ಭಾವನೆಗಳು, ‘ರವಿಯಂತಹ ಗಂಡಿಗೆ ಹೆಣ್ಣು ಅವಶ್ಯಕ’, ಎಂದು ಎಚ್ಚರಿಸಿರದಿದ್ದಲ್ಲಿ ಹೆಣ್ಣಿನ ಅಗತ್ಯವೇ ಇರಲಿಲ್ಲ ಎನಿಸುವಷ್ಟು ಸಂಕೀರ್ಣ ಅನುಭವಗಳಾಗಿದ್ದವು ಆತನಿಗೆ. ಆದರೆ ರಾಜಿಯ ಮನೋಭೂಮಿಕೆಯಲ್ಲಿ ಆತ ಮೊದಲ ಮಳೆಯ ಕಂಪನ್ನೂ, ಹುಣ್ಣಿಮೆಯ ಕಾಮವನ್ನೂ ಹದವಾಗಿ ಮೂಡಿಸಿದ್ದ. ಈಗ ರಾಜಿಗೆ ಸದಾ ಮನದಲ್ಲಿದ್ದದ್ದು ಒಂದೇ-ರವಿಯ ಬೆಳಕಿಂದ ತನ್ನಜ್ಜಿಯ ಕನಸಾದ ಒಂದು ಗಂಡು ಮಗುವನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದು?
ಇತ್ತ ಕಡೆ ರಾಜಿಯು ತನ್ನ ಓದು, ನಾಜೂಕುತನ, ಆಲೋಚನಾ ಲಹರಿಗಳ ಕಾರಣಕ್ಕೆ ದಿನದಿಂದ ದಿನಕ್ಕೆ ತನ್ನ ಗಂಡನಿಂದ ಬಹುಪಾಲು ಮನಸ್ಸು ಮತ್ತು ದೇಹದಿಂದ ದೂರವೇ ಉಳಿಯುತ್ತಿದ್ದರೆ, ಅತ್ತ ಕಡೇ ಅಷ್ಟೇ ವೇಗವಾಗಿ ರವಿಯ ಸೆಳೆತಕ್ಕೆ ಸಿಲುಕಿದ್ದಳು.
ಒಂದು ದಿನ ಶಾಲೆಯಲ್ಲಿ, ಸುತ್ತಿ ಬಳಸಿ, ತನ್ನ ಬಯಕೆಯನ್ನು ರವಿಗೆ ಹೇಳಿಯೇ ಬಿಟ್ಟಿದ್ದಳು ರಾಜಿ. ಇದು ಆಗುವ-ಹೋಗುವ ವಿಷಯವಲ್ಲವೆಂದು ಅರಿತಿದ್ದ ರವಿ, “ಆಯ್ತು ಬಿಡಮ್ಮ, ಒಂದು ವೇಳೆ ಹಾಗೇನಾದರೂ ಆಗಿ, ನಾನು ನೀನು ಸೇರಿ, ಗಂಡು ಮಗುವೇ ಹುಟ್ಟಿದರೆ, ನಿನ್ನೆರಡು ಹೆಣ್ಣು ಮಕ್ಕಳನ್ನು ಹೇಗೂ ಕಾನ್ವೆಂಟ್‌ಗೆ ಸೇರಿಸಿದ್ದೀಯ. ಈ ಮಗೂನಾ ನಮ್ಮ ಶಾಲೆಗೆ ಸೇರಿಸ್ತೀಯೇನಮ್ಮಾ?” ಎಂಬ ಟೈಂ ಪಾಸಿನ ಮಾತಿಗೆ, ರಾಜಿ “ಹ್ಹೂಂ” ಎಂದಿದ್ದಳು. ಇದಾದ ಇಪ್ಪತ್ತು ದಿನಗಳ ಬಳಿಕ ತಾನು ಡಿಗ್ರಿ ಓದಿದ್ದ ಕಾಲೇಜಿನಲ್ಲಿ ಗೆಟ್ ಟುಗೆದರ್ ಪಾರ್ಟಿ ಇದ್ದುದರಿಂದ, ರಾಜಿ, ಪಾರ್ಟಿಯ ರಾತ್ರಿ, ತನ್ನ ಗೆಳತಿಯ ಮನೆಯಲ್ಲುಳಿದು ಮಾರನೇ ದಿನ ಬರುವುದಾಗಿ ಮನೆಯವರಿಗ್ಹೇಳಿ ತುಮಕೂರಿನ ಬಸ್ಸು ಹತ್ತಿದ್ದಳು. ಪಾರ್ಟಿಗೆ ಹೋದಾಗ ಅವಳಿಗೊಂದು ಆಶ್ಚರ್ಯ ಕಾದಿತ್ತು. ಅದೇ ಕಾಲೇಜಿನ ಅಲ್ಯೂಮ್ನಿಯಾಗಿದ್ದ ರವಿಯೂ ಆರ್ಗನೈಸಿಂಗ್ ಬಾಡಿಯ ಮೆಂಬರಾಗಿ ಅಲ್ಲಿಗೆ ಬಂದಿದ್ದ ! ಮುಂದೆ ರವಿ ಹಾಗೂ ರಾಜಿ ಇಬ್ಬರೂ ಕಾಣದೂರಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾ, ಅನ್ನಪೂರ್ಣ ಲಾಡ್ಜ್ನಲ್ಲಿ ‘ಸೇರಿ’ದ್ದರು.

ಇದಾದ ಮುಂದಿನ ‘ಮುಟ್ಟು ಕಟ್ಟಿನ’ ಫಲವಾಗಿ ರಾಜಿಗಾದ ವಾಕರಿಕೆ, ಹುಳಿ, ಕೆಮ್ಮಣ್ಣು ತಿನ್ನುವ ಬಯಕೆಗಳು, ರಾಜಿಯ ಮಟ್ಟಿಗೆ ಹೊಸದಲ್ಲದಿದ್ದರೂ, ವಿಶೇಷವಾಗಿದ್ದವು. ಮೊದಲೆರಡು ಗರ್ಭಧಾರಣೆಯಲ್ಲಿ ಆಗುತ್ತಿದ್ದ ವಾಂತಿ, ತಲೆ ಸುತ್ತು, ವಾಕರಿಕೆಗಳಿಗೆಲ್ಲಾ ಗಂಡನನ್ನು ಗುರಿಯಾಗಿಸಿ ಶಪಿಸುತ್ತಿದ್ದರೆ, ಈ ಬಾರಿ ಮಾತ್ರ ಪ್ರತಿ ಬಾರಿಯ ವಾಕರಿಕೆಗೆ ತನ್ನ ಗಂಡನನ್ನು ಅಪ್ಪಿಕೊಂಡು ನಾಚುತ್ತಿದ್ದಳು; ಒಳೆಗೊಳಗೆ ರವಿಯನ್ನು ಧ್ಯಾನಿಸುತ್ತಿದ್ದಳು. ಇತ್ತಕಡೆ, ರವಿಯ ಜೊತೆ, ಫೋನಿನಲ್ಲಿ “ತನಗಾಗುತ್ತಿರುವ ವಾಕರಿಕೆ, ಸುಸ್ತಿಗೆ ನೀನೇ ಕಾರಣ” ಎಂದು ಹೇಳುವಾಗಲೆಲ್ಲಾ, ರವಿಗೆ ರೋಮಾಂಚನವಾಗತೊಡಗಿತ್ತು. ಭ್ರೂಣ ಬೆಳೆಯುತ್ತಾ ಅದು ಒದ್ದಾಗ, ಆಗುವ ನೋವು ಮಿಶ್ರಿತ ಸಂತೋಷವನ್ನು ರಾಜಿ ಹೇಳಿಕೊಳ್ಳುತ್ತಿದ್ದಾಗ, ರವಿಗೆ ಹೆಣ್ಣೆಂದರೆ, ಬೇರೆ ಏನೋ ಎಂಬ ಭಾವ ಮೂಡತೊಡಗಿತ್ತು. ಆತನು ಈಗ ಆಕೆ ಜೊತೆಗೆ ಎಷ್ಟು ಕನೆಕ್ಟ್ ಆಗಿದ್ದನೆಂದು ಆತನಿಗೆ ಅರ್ಥವಾಗಿದ್ದು, ರಾಜಿ, ರವಿಗೆ ಫೋನ್ ಮಾಡುವುದನ್ನು ನಿಲ್ಲಿಸಿದ ಮೇಲಷ್ಟೇ. ಏಳು ತಿಂಗಳು ತುಂಬಿದಂತೆ, ತನ್ನ ಗಂಡ, ಅಜ್ಜಿ, ತನ್ನಮ್ಮ ಎಲ್ಲರೂ ಮನೆಯಲ್ಲಿರುತ್ತಿದ್ದರಿಂದ ಹಾಗೂ ಈಗ ಅವಳೆಲ್ಲ ಗಮನ ಹುಟ್ಟಬಹುದಾದ ತನ್ನ ‘ಗಂಡು ಮಗುವಿನ’ ಮೇಲಿದ್ದಿದ್ದರಿಂದ ರವಿ ಈಗ ಮರೆಯಾಗಿಬಿಟ್ಟಿದ್ದ.

ರವಿಗೆ ಈಗ ತನಗೆ ಗೊತ್ತಿಲ್ಲದೆಯೇ ರಾಜಿ, “ನಿನ್ನ ಮಗು… ನಿನ್ನ ಮಗು” ಎಂದು ಮಾತಿಗೆ ಮುಂಚೆ ಆಡುವ ಮಾತುಗಳು ಆತನೆದೆಯೊಳಗೆ ಭಾವ ಲಹರಿ ಮೂಡಿಸಿದ್ದವು. ಪ್ರಾರಂಭದಲ್ಲಿ, ತನ್ನ ದೈಹಿಕ ವಾಂಛೆಗೆ ತಕ್ಕಂತೆ ಸಮಯ ಸಾಧಕ ನುಡಿಗಳಾಡುತ್ತಿದ್ದವನು, ಈಗ ಸಮಯ ಸಿಕ್ಕಾಗಲೆಲ್ಲ ‘ತನ್ನ ಮಗು!’ವಿಗಾಗಿ, ಹೃದಯ ತುಂಬಿ ಮಾತನಾಡತೊಡಗಿದ್ದ. ರಾಜಿ ಬಯಸಿದಂತೆ ಅದು ಗಂಡೇ ಆಗಿರಬೇಕೆಂಬ ಆಲೋಚನೆಯೇನು ಅವನಿಗಿರಲಿಲ್ಲ. ಗಂಡಾಗಲೀ ಹೆಣ್ಣಾಗಲೀ “ನಾನೇ ಅದರಪ್ಪ!” ಎಂದು ಧೈರ್ಯವಾಗಿ ಹೇಳಿಕೊಳ್ಳಲಾದರೂ ಸಾಧ್ಯವಿತ್ತೇ? ಆದರವನು ತನ್ನದೇ ‘ಮಗುವಿನ’ ಮತ್ತು ‘ಮಗುವಿನಮ್ಮನ’ ಭಾವಗಳನ್ನು ಹೃದಯ ತುಂಬಿಕೊಂಡಿದ್ದ. ಈಗ ಇದ್ದಕ್ಕಿದ್ದಂತೆ ರಾಜಿ ಸುಮ್ಮನಾದದ್ದು ರವಿಗೆ ಹೃದಯವೇ ನಿಂತಂತಾಗಿತ್ತು. ಕನಸಲ್ಲಿ “ಅಪ್ಪಾ” ಎಂದು ಕೇಕೆ ಹಾಕಿದ ಹಾಗೆ ಆಗಿ, ಎದ್ದು ಕೂರುತ್ತಿದ್ದ.

ಆತನ ದು:ಖ, ಸಂಕಟಗಳು ಆತನು ಹಾಕುತ್ತಿದ್ದ ಬಟ್ಟೆಯಲ್ಲಿ ಕಾಣಿಸತೊಡಗಿದವು. ಯಾವ ಬಟ್ಟೆಗಳು ರಾಜಿಯೊಳಗೆ ತನ್ನದೊಂದು ಪುಟ್ಟ ಜೀವ ಬೆಳೆಯಲು ಕಾರಣವಾದವೋ ಅದೇ ಬಟ್ಟೆಗಳು ಈಗ, ಇಸ್ತ್ರಿ ಇಲ್ಲದೇ, ಮುಸುರೆ ಬಟ್ಟೆಗಳಾಗಿದ್ದವು. ಬೆಲ್ಟ್ ಹಾಕದೇ, ಇನ್ ಶರ್ಟ್ ಮಾಡದೇ ಹೊರಗೆ ಬರದಿದ್ದ ರವಿ, ಎಷ್ಟೋ ಸಾರಿ, “ಸರ್, ನೀವು ಜಿಪ್ ಹಾಕಿಲ್ಲ” ಎಂದು ಮಕ್ಕಳು ಮುಸಿ ಮುಸಿ ನಕ್ಕಾಗಲೇ ವಾಸ್ತವಕ್ಕೆ ಬರುತ್ತಿದ್ದನು. ಹೊರಗೆ ಹೇಳಿಕೊಳ್ಳಲು ಆಗದೇ, ಒಳಗೆ ಅನುಭವಿಸಲೂ ಆಗದೇ, ಸಾಕಿದ ನಾಯಿಗೆ ಕಜ್ಜಿ ಹಿಡಿದಂತೆ ಹೆಣಗುತ್ತಿದ್ದ.

ಗಂಡು ಮಗು ಆಗುವುದೆಂದು ಆಂಜನೇಯನ ಸಾಕ್ಷಿಯಾಗಿ ನಂಬಿದ್ದ ತವರು ಮನೆಯವರು, ರಾಜಿಯ ವಿಶೇಷ ಕಾಳಜಿಗಾಗಿ ಸಿಟಿಗೆ ಹತ್ತಿರವಿದ್ದ ರಾಜಿಯ ಹುಟ್ಟೂರಾದ ಶೆಟ್ಟಿಹಳ್ಳಿಗೆ ಕರೆದಕೊಂಡು ಹೋಗಿದ್ದರು. ಅಂದಿನಿಂದ ರವಿ, ಪ್ಯಾದೆಯಂತಾಗಿ ಹೋಗಿದ್ದ. ಆದರೆ ಆತನ ಕಾಲ್ಗುಣವೋ, ಮಕ್ಕಳಿಗೆ ತೋರಿಸುತ್ತಿದ್ದ ಪ್ರೀತಿಯೋ, ಮಕ್ಕಳ ಕಲಿಕೆಯಲ್ಲಿ ಬದಲಾವಣೆ ಬಂದುಬಿಟ್ಟಿತ್ತು. ಹೀಗೆ ಶಾಲೆಯ ಪ್ರಗತಿಯನ್ನು ಕೊರಳಿಗೆ ಕಟ್ಟಿಕೊಂಡು ರವಿ, ಹೃದಯವನ್ನು ಕಲ್ಲಾಗಿಸಿಕೊಂಡು, ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ, ಮಕ್ಕಳಿಗೆ ಲೇಖನಾ ಸಾಮಾಗ್ರಿ… ಹೀಗೆ ಉಸಿರಾಡಲು ಪುರುಸೊತ್ತಿಲ್ಲದಂತೆ ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಮಾಡತೊಡಗಿದಂತೆ, ರಾಜಿ, ರವಿಯ ಜೀವನದಲ್ಲಿ ಬಂದು ಹೋದ ಐದನೆಯವಳಾಗಿ ಮನದಲ್ಲಿ ಸಾಮಾನ್ಯ ಹೆಣ್ಣಾಗಿ ಹೂತು ಹೋಗಿದ್ದಳು.

ಇದಾಗಿ ಸುಮಾರು ಐದು ವರ್ಷಗಳ ನಂತರ, ರಾಜಿಯ ಅಜ್ಜಿ, ಶುಭ್ರವಾದ ಬಟ್ಟೆಗಳನ್ನು ಧರಿಸಿ, ಬೆಲ್ಟ್ ಹಾಕಿ, ಟಿಪ್ ಟಾಪಾಗಿ ಇನ್ ಶರ್ಟ್ ಮಾಡಿದ್ದ ಪುಟಾಣಿಯೊಬ್ಬನನ್ನು ಶಾಲೆಗೆ ಸೇರಿಸಲು ಕರೆತಂದರು.

ವಿದ್ಯಾರ್ಥಿಯ ಹೆಸರು: ರವಿರತ್ನ, ತಂದೆಯ ಹೆಸರು: ರಾಮರಾಜು ತಾಯಿಯ ಹೆಸರು : ರಾಜಮ್ಮ !
ಪ್ರವೇಶ ಅರ್ಜಿಯನ್ನು ತುಂಬುತ್ತಿದ್ದ ರವಿ ನಿಲ್ಲಿಸಿ, ಆ ಮಗುವನ್ನೇ ನೋಡುತ್ತಾ, ಅಜ್ಜಿಯನ್ನು ಕೇಳಿದ, “ಅಜ್ಜಿ, ಈತ ರಾಜಿಯ ಮಗನೇ?”
ಹೌದು ಮೇಷ್ಟ್ರೇ. ಇವ್ರಮ್ಮ ಇವ್ನ ಹೆತ್ತ ಒಂದೇ ವರ್ಷುಕ್ಕೆ ಅದೇನೋ ಅನೀಮಿಯ ಅಂತೆ. ಅದಾಗಿ ಸತ್ತೋದ್ಲು. ಆದ್ರೆ ಸಾಯೋ ಮುಂಚೆ, “ರವಿ ಮೇಷ್ಟ್ರು ಇಂಗ್ಲಿಷು, ಮತ್ತೆ ಚಿದಂಬರ, ಶಕುಂತಲಾ ಮೇಡಮ್ಮರು ಚೆನ್ನಾಗಿ ಪಾಠ ಮಾಡ್ತಾರೆ. ಅದ್ಕೆ ನಮ್ಮೂರು ಗವರ್ಮೆಂಟ್ ಸ್ಕೂಲಿಗೇ, ಮಗೂನಾ ಸೇರ್ಸ್ಬೆಕು ಅಂತಾ ಇವ್ರಪ್ಪನಿಂದ ಭಾಷೆ ತಗಂಡಿದ್ಲು. ಇವ್ರಪ್ಪಾನೂ ಓದ್ ಮಾರ್ನವ್‌ಮಿಲಿ ಆವು ಕಡುಸ್ಕಂಡು ಸತ್ತೋದ. ಅದ್ಕೆ ಕಣಪ್ಪಾ ಈ ತಬ್ಲೀನ ಈ ಗರ್ಮೆಂಟ್ ಇಸ್ಕೂಲ್ಗೆ ಆಕ್ತಿದೀನಿ. ನಿನ್ ಮಗ ಅನ್ಕಂಡು ಎಲ್ಡ್ ಅಕ್ಸರ ಹೇಳ್ಕೊಡು ಸ್ವಾಮಿ…” ಕಣ್ಣಲ್ಲಿ ನೀರಾಡಿಸುತ್ತಾ ದೈನ್ಯದಿಂದ ಅಜ್ಜಿ ಹೇಳಿತು.

ಇದನ್ನು ಕೇಳಿದ ತಕ್ಷಣವೇ ರವಿ ತಾನು ತಮಾಷೆಗೆ ರಾಜಿಯನ್ನು, “ಆಯ್ತು ಬಿಡಮ್ಮ, ಒಂದು ವೇಳೆ ಹಾಗೇನಾದರೂ ಆಗಿ, ನಾನು ನೀನು ಸೇರಿ, ಗಂಡು ಮಗುವೇ ಹುಟ್ಟಿದರೆ, ನಿನ್ನೆರಡು ಹೆಣ್ಣು ಮಕ್ಕಳನ್ನು ಹೇಗೂ ಕಾನ್ವೆಂಟ್‌ಗೆ ಸೇರಿಸಿದ್ದೀಯ. ಈ ಮಗೂನಾ ನಮ್ಮ ಶಾಲೆಗೆ ಸೇರಿಸ್ತೀಯೇನಮ್ಮಾ?” ಎಂಬ ಟೈಂ ಪಾಸಿನ ಮಾತೂ, ಅದಕ್ಕೆ ರಾಜಿ “ಹ್ಹೂಂ” ಎಂದಿದ್ದು… ಗೆಟ್ ಟುಗೆದರ್ ಪಾರ್ಟಿ, ಅನ್ನಪೂರ್ಣ ಲಾಡ್ಜ್… ಎಲ್ಲಾ ಒಂದರ ನಂತರ ಒಂದು ಕಣ್ಣ ಮುಂದೆ ಬಂದು, ಎದುರಿಗಿದ್ದ ರವಿರತ್ನನನ್ನು ಅಪ್ಪಿಕೊಂಡು ತಲೆಗೆ ಒಂದು ಮುತ್ತು ಕೊಡುವಾಗ, ಮಡುಗಟ್ಟಿದ್ದ ನೋವು, ನೆನಪು, ಸಂಕಟ, ಕಣ್ಣ ಹನಿಯಾಗಿ, ರವಿಯ ಕನ್ನಡಕವನ್ನು ಒದ್ದೆ ಮಾಡಿದ್ದು, ಸೊರಗಿ ಶಕ್ತಿ ಕಳೆದುಕೊಂಡಿದ್ದ ಅಜ್ಜಿಯ ಮಂದ ದೃಷ್ಟಿಗೆ ಕಾಣಿಸಲಿಲ್ಲ. ಕನ್ನಡಕ ತೆಗೆದ ಮೇಷ್ಟ್ರು ರವಿಯ ಕಣ್ಣಲ್ಲಿ, ರವಿರಾಜ ಮಿರ ಮಿರ ಮಿನುಗುತ್ತಿದ್ದರೆ, ತಲೆಯಲ್ಲಿ, ಶಾಲೆಗೆ ಇಂಗ್ಲಿಷ್ ಮೀಡಿಯಂ ತಂದು ರವಿರಾಜನ ಅಕ್ಕಂದಿರನ್ನು ಕಾನ್ವೆಂಟಿನಿಂದ ತನ್ನ ಸರ್ಕಾರಿ ಶಾಲೆಗೆ ಸೇರಿಸಿಕೊಳ್ಳುವ ಪ್ಲಾನ್ ಸಿದ್ಧವಾಗುತ್ತಿತ್ತು.

ಲಿಂಗರಾಜು ಕೆ ಮಧುಗಿರಿ


ಲಿಂಗರಾಜು ಕೆ. ವೃತ್ತಿಯಲ್ಲಿ ಶಿಕ್ಷಕರು. ಮೂಲ ಮಧುಗಿರಿ ತಾಲ್ಲೂಕು ತುಮಕೂರು ಜಿಲ್ಲೆಯ ಜಡೇಗೊಂಡನಹಳ್ಳಿ ಗಾಮ. ಲಿಂಗರಾಜು ಕೆ ಮಧುಗಿರಿ ಎಂಬ ಹೆಸರಿನಲ್ಲಿ ಕಥೆ, ಲೇಖನ, ಅನುವಾದ ಇನ್ನಿತರ ಸಾಹಿತ್ಯ ಪ್ರಕಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪಂಜು ಕವಿತೆ ಸ್ಪರ್ಧೆ ೨೦೨೪ ರಲ್ಲಿ ದ್ವಿತೀಯ‌ ಬಹುಮಾನ ಪಡೆದಿದ್ದಾರೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x