ಜಾತಿ ಜಾನಪದ ಬೇರೆ ಬೇರೆ ಅಲ್ಲ ಎನ್ನುವ “ದಲಿತ ಜಾನಪದ”: ಡಾ. ನಟರಾಜು ಎಸ್ ಎಂ

ಮೊಗಳ್ಳಿ ಗಣೇಶ್ ಅವರದು ಕನ್ನಡ ಕಥಾಲೋಕದಲ್ಲಿ ಬಹು ದೊಡ್ಡ ಹೆಸರು. ೧೯೯೨ ರಲ್ಲಿ ತಮ್ಮ ಮೂವತ್ತನೇ ವಯಸ್ಸಿಗೆ ಮೊದಲ ಕಥಾಸಂಕಲನ ಪ್ರಕಟಿಸಿದ್ದ ಮೊಗಳ್ಳಿಯವರು ೨೦೨೪ ರ ತಮ್ಮ ಅವರತ್ತೆರಡನೇ ವಯಸ್ಸಿನವರೆಗೂ ಅಂದರೆ ಕಳೆದ ಮೂವತ್ತೆರಡು ವರ್ಷದಲ್ಲಿ ನವತ್ತೇಳಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಬರಹಗಳು ಕಥೆಗಳಾಗಿ, ಕಾದಂಬರಿಗಳಾಗಿ, ಸಂಸ್ಕೃತಿ ಚಿಂತನೆಗಳಾಗಿ, ಕಾವ್ಯಗಳಾಗಿ, ಬೀದಿ ನಾಟಕಗಳಾಗಿ, ಸಂಪಾದಿತ ಕೃತಿಗಳಾಗಿ ಕನ್ನಡ ಸಾರಸ್ವತ ಲೋಕಕೆ ಸೇರ್ಪಡೆಯಾಗಿವೆ. ಅವರ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ೨೦೧೭ ರ ವರೆಗೂ ನಿರಂತರವಾಗಿ ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದಿರುವ ಮೊಗಳ್ಳಿಯವರು ಏಳು ವರ್ಷಗಳ ನಂತರ ೨೦೨೪ ರಲ್ಲಿ ಒಮ್ಮೆಲೇ ಏಳು ಪುಸ್ತಕಗಳನ್ನು ಹೊರ ತಂದಿದ್ದಾರೆ. ಆ ಏಳು ಕೃತಿಗಳ ಪೈಕಿ ಜನಪದ ಸಾಹಿತ್ಯ ಸಂಸ್ಕೃತಿಗಳ ಸಂಶೋಧನಾ ಬರಹಗಳ “ದಲಿತ ಜಾನಪದ” ಕೃತಿಯೂ ಒಂದಾಗಿದೆ.

ದಲಿತ ಜಾನಪದ ಕೃತಿಯು ಮೊಗಳ್ಳಿ ಅವರ ಕನಸಿನ “ದಲಿತ ಪ್ರಕಾಶನ”ದ ಚೊಚ್ಚಲ ಕೃತಿಯಾಗಿದೆ. ಹುಲಿ ಮತ್ತು ಗೋವಿನ ಚಿತ್ರವಿರುವ ಮುಖಪುಟದಲ್ಲಿ ಹುಲಿ ಏನನ್ನೋ ಯೋಚಿಸುವಂತೆ ಕುಳಿತ್ತಿದ್ದರೆ, ಅದರ ಹೊಟ್ಟೆಯ ಮೇಲೆ ಲೇಖಕರ ಚಿತ್ರ ಹಾಗು ಬಾಲದ ತುದಿಯಲ್ಲಿ ದಲಿತ ಪ್ರಕಾಶನದ ಲಾಂಛನವಿದೆ ಹಾಗೆಯೇ ಹುಲಿಯ ಮುಖ ಹಾಗು ಗೋವಿನ ಅರ್ಧ ದೇಹವಷ್ಟೇ ಕಾಣುವ ಚಿತ್ರ ಏನನ್ನೋ ಹೇಳುತ್ತಿದೆ ಅನಿಸುತ್ತದೆ. ಆ ಚಿತ್ರ ಏನೇನೆಲ್ಲಾ ಹೇಳಿದೆ ಎನ್ನುವುದನ್ನು ಲೇಖಕರ ಪುಸ್ತಕದ ಆಶಯಕ್ಕೆ ಒಪ್ಪುವ ಚಿತ್ರವನ್ನು ಕಿರಣ್ ಕುಮಾರ್ ಅವರು ಚಿತ್ರಿಸಿದ್ದಾರೆ ಎನ್ನಬಹುದು. ಈ ಪುಸ್ತಕದ ಒಳಪುಟ ವಿನ್ಯಾಸವನ್ನು ನೀತು ಗ್ರಾಫಿಕ್ಸ್ ನ ಪಂಪಾಪತಿ ವಿ ಅವರು ಅಚ್ಚುಕಟ್ಟಾಗಿ ಮಾಡಿದ್ದರೆ, ಸ್ವಾನ್ ಪ್ರಿಂಟರ್ಸ್ ನ ಕೃಷ್ಣಮೂರ್ತಿಯವರು ಈ ಪುಸ್ತಕವನ್ನು ಅಂದವಾಗಿ ಮುದ್ರಿಸಿದ್ದಾರೆ‌.

ದಲಿತ ಜಾನಪದ ಕೃತಿಯ ಹಲವು ಬರಹಗಳು ಲೇಖಕರು ತಮ್ಮ ನುಡಿಯಲ್ಲಿ ಪುಸ್ತಕದ ಶುರುವಿನಲ್ಲಿ ಹೇಳಿದಂತೆ ೨೦೦೨, ೨೦೧೦, ೨೦೧೨ ರಲ್ಲಿ ಅಗ್ನಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಬರಹಗಳಾಗಿವೆ. ಇಷ್ಟು ವರ್ಷಗಳಾದ ಮೇಲೂ ಆ ಲೇಖನಗಳನ್ನು ಒಂದೆಡೆ ಕೂಡಿಸಿ ಪ್ರಕಟಿಸಬೇಕೆಂಬ ಹಂಬಲ ಲೇಖಕರಿಗಿದೆ ಎಂದರೆ ಅವರ ಬರಹಗಳ ಗಟ್ಟಿತನವನ್ನು ಅವರು ಮನಗಂಡಿದ್ದಾರೆ ಎನ್ನಬಹುದು. ಈ ಕೃತಿಯಲ್ಲಿ ಒಟ್ಟು ಹದಿಮೂರು ಲೇಖನಗಳಿದ್ದು, ಈ ಲೇಖನಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.
೧. ಜಾನಪದ ಸಂಶೋಧನಕಾರರ ವ್ಯಕ್ತಿಚಿತ್ರಗಳು
೨. ದಲಿತ ಜಾನಪದ ಲಹರಿಗಳು
೩. ಜಾನಪದ ಅಧ್ಯಯನಗಳ ತೌಲನಿಕ ಚರ್ಚೆಗಳು
೪. ದಲಿತ ಜಾನಪದ ಭಂಡಾಯ ಚಿಂತನೆಗಳು

೧. ಜಾನಪದ ಸಂಶೋಧನಕಾರರ ವ್ಯಕ್ತಿಚಿತ್ರಗಳು

ಮೊಗಳ್ಳಿಯವರು ಮೊದಲಿಗೆ ಜನಪದ ವಿದ್ಯಾರ್ಥಿಯಾಗಿ, ನಂತರ ಪ್ರಾಧ್ಯಾಪಕರಾಗಿ, ತದನಂತರ ಸಂಶೋಧಕರಾಗಿ, ಈಗ ವಿದ್ವಾಂಸರಾಗಿ ಜಾನಪದ ತಜ್ಞರೂ‌ ಕೂಡ ಆಗಿದ್ದಾರೆ. ಹಾಗೆಯೇ ತಮ್ಮ ವಿದ್ಯಾರ್ಥಿ‌ ದೆಸೆಯಿಂದಲೂ ಅನೇಕ ಜಾನಪದ ತಜ್ಞರ ಜೊತೆ‌ಗೆ ಒಡನಾಟ ಅವರಿಗೆ ದಕ್ಕಿದೆ. ಆ ಜಾನಪದ ತಜ್ಞರು ಅವರ ಮೇಲೆ‌ ಬೀರಿದ ಪರಿಣಾಮವನ್ನು ತುಂಬಾ ಶ್ರದ್ಧೆಯಿಂದ ಮೊಗಳ್ಳಿಯವರು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಜಾನಪದ ತಜ್ಞರಾದ ಎ ಕೆ ರಾಮಾನುಜನ್ (ಎಕೆಆರ್), ಜೀ ಶಂ ಪ, ಹನೂರು ಕೃಷ್ಣಮೂರ್ತಿ ಹಾಗು ಎಂ ಎಂ ಕಲ್ಬುರ್ಗಿ ಇವರುಗಳ ಕುರಿತು ಪ್ರತ್ಯೇಕವಾದ ಅಧ್ಯಾಯಗಳು ಈ ಪುಸ್ತಕದಲ್ಲಿವೆ. ಇವರುಗಳ ಜೊತೆಗೆ ಅನೇಕ ಜಾನಪದ ವಿದ್ವಾಂಸರ ಹೆಸರುಗಳು ಅವರ ಕಾರ್ಯಗಳು ಪುಸ್ತಕದುದ್ದಕ್ಕೂ ನಮಗೆ ಕಾಣಸಿಗುತ್ತವೆ.

ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಜಾನಪದದ “ಸಮ್ಮರ್ ಕೋರ್ಸ್” ಒಂದರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಮಾನುಜನ್ ಅವರ ಉಪನ್ಯಾಸಗಳು ಮೊಗಳ್ಳಿಯವರ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಆ ಪರಿಣಾಮ ಮೊಗಳ್ಳಿಯವರು ಜಾನಪದ ಸಂಶೋಧನಾ ಕ್ಷೇತ್ರದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಕಾರಣವಾಗುತ್ತದೆ‌ ಎಂದರೆ ತಪ್ಪಾಗಲಾರದು. ಈ ಪುಸ್ತಕದಲ್ಲಿ ರಾಮಾನುಜನ್ ಅವರ ಅನೇಕ ಕಾವ್ಯ, ಅನುವಾದ, ಸಂಶೋಧನೆಗಳು ಹೇಗೆ ದಲಿತ ಜಾನಪದದ ಜೊತೆ ತಳುಕು ಹಾಕಿಕೊಂಡಿವೆ ಎನ್ನುವುದರ ಬಗ್ಗೆ ಬಹಳ ವಿಸ್ತಾರವಾಗಿ ಬರೆದಿದ್ದಾರೆ. ಪಾಶ್ಚಾತ್ಯ ‌ಲೇಖಕರು ಸಂಸ್ಕೃತ ಭಾಷೆಯ ಆಧಾರವಿಟ್ಟುಕೊಂಡು ಬರೆದ ಗ್ರಂಥಗಳು ಭಾರತದ ಜಾನಪದದ ವಸ್ತುಸ್ಥಿತಿಗಳ ಮೇಲೆ ಬೆಳಕು ಚೆಲ್ಲಲಾರವು, ತಳ ಸಂಸ್ಕೃತಿಯು ಜಾನಪದದ ಮೂಲ. ಆ ಜಾನಪದ ಸಂಸ್ಕೃತಿ ಅಧ್ಯಯನಕ್ಕೆ ಸಂಸ್ಕೃತ ಭಾಷೆಯಲ್ಲದೆ ದ್ರಾವಿಡ ಭಾಷೆಗಳ ಕೊಡುಗೆ ಅಪಾರ ಎನ್ನುವುದ ಮನಗೊಂಡು ವಿದೇಶದಲ್ಲಿ ನೆಲೆಗೊಂಡಿದ್ದರೂ ತಮ್ಮದೇ ವಿಶಿಷ್ಟ ಅಧ್ಯಯನ ಹಾಗು ಭಾಷಾಂತರಕ್ಕೆ ತೊಡಗಿಕೊಂಡವರು ಎ ಕೆ ರಾಮಾನುಜನ್ ಎನ್ನುವುದನ್ನು ಲೇಖಕರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಪ್ರೊ ಜೀ ಶಂ ಪರಮಶಿವಯ್ಯ ಬಹುಶಃ ಮೊಗಳ್ಳಿಯವರ ಮಾನಸ ಗುರುಗಳು. ಅವರ ಮೇಲಿರುವ ಅಪಾರ ಅಭಿಮಾನ ಈ ಪುಸ್ತಕದ ಉದ್ದಕ್ಕೂ ಕಾಣಸಿಗುತ್ತದೆ. ಮೊಗಳ್ಳಿಯವರು ಜೀ ಸಂ ಪ ಅವರ ಜಾನಪದ ಅಧ್ಯಯನಗಳ ಬಗ್ಗೆ ಹೇಳುತ್ತಾ, “ಸಂಶೋಧನಾ ಅಧ್ಯಯನ ಎಂದರೆ ಹಸ್ತಪ್ರತಿಗಳ, ಶಾಸನಗಳ, ಹಳೆ ಕಾವ್ಯಗಳ ಮೊರೆ ಹೋಗುವ ಮಾರ್ಗ ಒಂದಾದರೆ ಜಾನಪದ ಸಂಶೋಧನೆ ಎಂದರೆ ಹಳ್ಳಿಗಾಡಿನ ಜನರ ಕಾವ್ಯ. ಅದು ದಕ್ಕುವುದೂ ಹಳ್ಳಿಗಳಲ್ಲೇ ಎನ್ನುವುದ ಮನಗಂಡು ಹಳ್ಳಿಗಳಲ್ಲಿ ಅಧ್ಯಯನಗಳ ನಡೆಸಿ, ಈ ರೀತಿಯ ಅಧ್ಯಯನಗಳು “ದಡ್ಡರ ಸುಲಭ ವಿಧಾನ” ಎನ್ನುವವರ ಟೀಕೆಯ ನಡುವೆಯೂ ಅಪಾರವಾದ ಜಾನಪದ ಸಂಶೋಧನೆಗೆ ತೊಡಗಿಕೊಂಡಿದ್ದವರು ಜೀಶಂಪ ಎನ್ನುವುದನ್ನು ಮೊಗಳ್ಳಿ ಬಲು ಆಸ್ಥೆಯಿಂದ ಕಟ್ಟಿಕೊಟ್ಟಿದ್ದಾರೆ. ಜೀ ಶಂ ಪ ಅವರು ಕೈಗೊಂಡ ಜಾನಪದ ಅಧ್ಯಯನಗಳು, ಮೌಖಿಕ ಪರಂಪರೆಯ ನಿರೂಪಣೆಗಳು ದಲಿತ ಕೇರಿಗಳಲ್ಲಿಯೇ ಹೆಚ್ಚು ಹೆಕ್ಕಿ ತೆಗೆದಂತಹ ಕಾವ್ಯ ಸಂಗ್ರಹಗಳೇ ಆಗಿವೆ ಎನ್ನುವುದರ ಜೊತೆಗೆ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರೊ ದೇ ಜವರೇಗೌಡ ಅವರ ಜೊತೆಗೂಡಿ “ಜಾನಪದ ಅಧ್ಯಯನ” ವಿಭಾಗ ಶುರು ಮಾಡಿದ್ದು ಕರ್ನಾಟಕದಲ್ಲಿ ಒಂದು ಅಪೂರ್ವ ಸಂಗತಿ

ಎಕೆಆರ್ ಮತ್ತು‌ ಜೀಶಂಪ ಈ ಇಬ್ಬರು ವಿಶ್ವವಿದ್ಯಾಲಯದ ಪ್ರೊಪೆಸರ್ ಗಳು ಮೊಗಳ್ಳಿ ಯವರ ಮೇಲೆ‌ ಬೀರಿದ ಪ್ರಭಾವ ಒಂದು ಬಗೆಯಾದರೆ, ಕರ್ನಾಟಕದ ವಿಶಿಷ್ಟ ಜಾನಪದ ಚಿಂತಕರಾದ ಹನೂರು ಕೃಷ್ಣಮೂರ್ತಿಯವರು ಬೀರಿದ ಪ್ರಭಾವವೇ ಬೇರೆ. ಅವರ ಮೇಲಿನ ಅಪಾರವಾದ ಗೌರವವನ್ನು “ಸೌಮ್ಯ ಸಂಪ್ರದಾಯವಾದಿಯಂತೆ ಹೊರನೋಟಕ್ಕೆ ಕಾಣುವ ಹನೂರರು ಅಂತರಂಗದಲ್ಲಿ ಅಲ್ಲಮನ ಬಯಲನ್ನೇ ಅವಾಹಿಸಿಕೊಂಡವರು” ಎನ್ನುವ ಮೂಲಕ ಮೊಗಳ್ಳಿಯವರು ಹನೂರರ ವಿಶಿಷ್ಟ ವ್ಯಕ್ತಿ ಚಿತ್ರವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹನೂರರ ಪ್ರಮುಖ ಕೃತಿಗಳ ಮಹತ್ವ ಹಾಗು ಆ ಕೃತಿಗಳಲ್ಲಿ ಕಾಣಸಿಗುವ ಜಾನಪದ ಅಂಶಗಳ ಕುರಿತು ದಲಿತ ಜಾನಪದ ಕೃತಿಯಲ್ಲಿ ಓದಿದಾಗ ಅವರ “ಕತ್ತಾಲ ದಾರಿ ದೂರ” “ಮ್ಯಾಸ ಬ್ಯಾಡರ ಸಂಸ್ಕೃತಿ” “ಸಾವಿರದ ಸಿರಿ ಬೆಡಗು” ಸೇರಿದಂತೆ ಅನೇಕ ಕೃತಿಗಳನ್ನು ಸಾಹಿತ್ಯಾಸಕ್ತರು ಸೇರಿದಂತೆ ಜಾನಪದ ವಿದ್ಯಾರ್ಥಿಗಳು ಕೂಡ ಹನೂರರನ್ನು ಓದಿಕೊಳ್ಳಬೇಕು ಎನಿಸುತ್ತದೆ.

ರಾಮಾನುಜನ್, ಜೀ ಶಂ ಪ, ಹನೂರರ ಕುರಿತು ವಿಸ್ತಾರವಾಗಿ ಬರೆಯುವ ಮೊಗಳ್ಳಿಯವರು ಎಂ ಎಂ ಕಲಬುರ್ಗಿಯವರ ಕುರಿತು ಬರೆಯುತ್ತಾ ಅವರ ಕೃತಿಗಳ ಕುರಿತಾಗಲಿ, ದಲಿತ ಜಾನಪದದ ಜೊತೆಗಿನ ಅವರ ನಂಟನ್ನಾಗಲಿ ಏನನ್ನೂ ಚಿತ್ರಿಸದೆ “ಸತ್ಯಶೀಲ ಶೋಧಕ ಡಾ. ಎಂ ಎಂ ಕಲಬುರ್ಗಿ” ಎಂಬ ಶೀರ್ಷಿಕೆಯನ್ನಷ್ಟೇ ಕೊಟ್ಟು ಆತುರ ಆತುರವಾಗಿ ಅಧ್ಯಾಯವನ್ನು ಮುಗಿಸಿದ್ದಾರೆ. ಅವರ ಕುರಿತು ಇನ್ನೂ ವಿಸ್ತಾರವಾಗಿ ಬರೆಯಬಹುದಿತ್ತು.

೨. ದಲಿತ ಜಾನಪದ ಲಹರಿಗಳು

ಮೊಗಳ್ಳಿಯವರ ಈ ಕೃತಿಯಲ್ಲಿ ನಮಗೆ ದಟ್ಟವಾಗಿ ಕಾಣುವುದು ಅವರ ಯೋಚನಾ ಲಹರಿ ಹಾಗು ಶಬ್ಧ ಸಂಪತ್ತು. ಅವರ ಈ ಲಹರಿಗಳು ಅನೇಕ ಅಧ್ಯಾಯಗಳಲ್ಲಿ ಸ್ಪಷ್ಟ ಅಭಿವ್ಯಕ್ತಿಗಳಂತೆ ವ್ಯಕ್ತವಾಗಿದೆ. ಆ ಅಭಿವ್ಯಕ್ತಿಗಳಲ್ಲಿ ಅನೇಕ ಜೋಡಿ ತತ್ವಗಳನ್ನು ಮೊಗಳ್ಳಿಯವರು ದಾಖಲಿಸುತ್ತಾರೆ. “ದೇಸಿವಾದದ ಬೇರುಗಳು” ಅಧ್ಯಾಯದಲ್ಲಿ ದೇಸಿ ಮತ್ತು ಮಾರ್ಗದ ಪರಿಕಲ್ಪನೆಯನ್ನು ಪರಿಚಯಿಸುತ್ತಾ ಹೇಗೆ ಈ ಪರಿಕಲ್ಪನೆಗಳು ಸಾಹಿತ್ಯದ ವಿಕಸನದಲ್ಲಿ ಪಾತ್ರವಹಿಸಿದವು ಎಂಬುದನ್ನು ತಿಳಿಸುತ್ತಾರೆ. ಜೊತೆಗೆ ದಲಿತ ಜಾನಪದ ಹೇಗೆ ದೇಸಿ ಬೇರುಗಳ ಜೊತೆ ಮಿಳಿತಗೊಂಡಿದೆ ಎನ್ನುವುದನ್ನು ಬಹಳ ಸಶಕ್ತವಾಗಿ ನಿರೂಪಿಸಿದ್ದಾರೆ.

“ಕಾಲಮಾನಗಳ ಚಲನಶೀಲ ಸಂಶೋಧನೆ” ಹಾಗು “ಜನಪದಗಳ ಗತ ಮತ್ತು ವರ್ತಮಾನ” ಅಧ್ಯಾಯದಲ್ಲಿ ಗತ ಮತ್ತು ವರ್ತಮಾನದ ಪರಿಕಲ್ಪನೆಯನ್ನು ಜಾನಪದದ ದೃಷ್ಟಿಕೋನದಲ್ಲಿ ನೋಡುವ ಜೊತೆಗೆ “ವರ್ತಮಾನವು ಜಾಗೃತ ಪ್ರಜ್ಞೆ ಇದ್ದಂತೆ. ಈ ಜಾಗೃತ ಅವಸ್ಥೆಯ ಸುಪ್ತ ಪ್ರಜ್ಞೆಯೇ ಗತಕಾಲ” ಎನ್ನುತ್ತಾ “ಜಾನಪದವು ಗತದ ತರ್ಕವಾದರೂ ಅದು ವರ್ತಮಾನದ ಪ್ರತಿಫಲ” ಎಂದು ಅಭಿಪ್ರಾಯಿಸಿದ್ದಾರೆ.

೩. ಜಾನಪದ ಅಧ್ಯಯನಗಳ ತೌಲನಿಕ ಚರ್ಚೆಗಳು

ಮೊಗಳ್ಳಿಯವರ ಈ ಕೃತಿಯಲ್ಲಿ ಅನೇಕ ಕಡೆ ತುಲನಾತ್ಮಕವಾದ ಚರ್ಚೆಗಳು ಕಾಣಸಿಗುತ್ತವೆ. “ಸಂಸ್ಕೃತಿ ಶೋಧದ ಸೃಜನಶೀಲ ಅಲೆಗಳು” ಅಧ್ಯಾಯದಲ್ಲಿ ಎ ಕೆ ರಾಮನುಜನ್ ಮತ್ತು ಡಿ ಆರ್ ನಾಗರಾಜ್ ಅವರ ಸಂಶೋಧನೆ ವಿಧಾನ ಮತ್ತು ವಿಷಯಗಳನ್ನು ಬಹಳ ದೀರ್ಘವಾಗಿ ಚರ್ಚಿಸಿದ್ದಾರೆ. ಈ ಚರ್ಚೆಗಳು ಜಾನಪದ ವಿಷಯವನ್ನು ಅಧ್ಯಯನ ಮಾಡುವವರಲ್ಲಿ ಒಂದಷ್ಟು ಹೊಸ ಹೊಳಹುಗಳನ್ನು ಸೃಷ್ಟಿಸಬಲ್ಲವು. “ಸಂಶೋಧನೆಯ ವಿಶ್ವಾತ್ಮಕ ಮಾನವ ಸಂಬಂಧಗಳು” ಅಧ್ಯಾಯದಲ್ಲೂ ದಲಿತ ಜಾನಪದ ಮತ್ತು ದಲಿತ ಸಾಹಿತ್ಯ ಹೇಗೆ ಭಿನ್ನ, ಭಾರತ ಮತ್ತು ಆಫ್ರಿಕಾ ದೇಶಗಳ ಜಾನಪದ ಹೇಗೆ ವಿಶಿಷ್ಟ, ಪಾಶ್ಚಾತ್ಯ ದೇಶಗಳಲ್ಲಿನ ಅಧ್ಯಯನಗಳ ವಿಸ್ತಾರ ಹೇಗಿದೆ ಎನ್ನುವ ಅನೇಕ ಅಂಶಗಳನ್ನು ಸಂಶೋಧಕರ ಕೃತಿಗಳ ಹೆಸರನ್ನು ಬರೆದು ಚರ್ಚಿಸಿದ್ದಾರೆ.

೪. ದಲಿತ ಜಾನಪದ ಬಂಡಾಯ ಚಿಂತನೆಗಳು

ಮೊಗಳ್ಳಿಯವರು ಈ ಪುಸ್ತಕದಲ್ಲಿ ಅನೇಕ ಬಂಡಾಯ ಅಂಶಗಳನ್ನು ಬರೆದಿದ್ದಾರೆ. ಮುಖ್ಯವಾಗಿ ಮೊದಲೆರಡು ಅಧ್ಯಾಯಗಳು ಬಂಡಾಯದ‌ ಚಿಂತನೆಗೆ ಮೀಸಲಾಗಿವೆ. ಒಂದು “ವಿದ್ರೋಹದ ಗೋವಿನ ಹಾಡು” ಮತ್ತೊಂದು “ಬಲಿದಾನದ ಕಾವ್ಯಕ್ಕೆ ಬಲಿಯಾದವರು”.

ವಿದ್ರೋಹದ ಗೋವಿನ ಹಾಡನ್ನು ಮೊಗಳ್ಳಿಯವರು ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಂಡಿರುವುದು ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ. ಗೋವು ಒಂದು ಸಾಕು ಪ್ರಾಣಿ, ಹುಲಿ ಒಂದು ಕಾಡು ಪ್ರಾಣಿ. ವಾಸ್ತವದಲ್ಲಿ ಹಸಿದ ಹುಲಿ ಎದುರು ಯಾವುದೇ ಆಹಾರ ರೂಪದ ಪ್ರಾಣಿ ಸಿಕ್ಕಿದರೂ ಅದನ್ನು ತಿಂದುಬಿಡುವುದು ವಾಡಿಕೆ. ಶಾಲೆಯ ದಿನಗಳಲ್ಲಿ ಓದಿಕೊಂಡಿದ್ದ ಗೋವಿನ ಹಾಡು ಒಂದು ಫ್ಯಾಂಟಸಿ ಕವಿತೆ. ಹಸಿದ ಹುಲಿಗೆ ಸಿಕ್ಕುವ ಹಸು, ಹುಲಿ ತನ್ನನ್ನು ತಿನ್ನಲು ಬಂದಾಗ ದೊಡ್ಡಿಗೆ ಹೋಗಿ ಕರುವಿಗೆ ಹಾಲು ಕೊಟ್ಟು ಖಂಡಿತಾ ಬಂದುಬಿಡುವೆ ಎಂದು ಹುಲಿಗೆ ಭಾಷೆ ಕೊಟ್ಟು ದೊಡ್ಡಿಗೆ ಹೋಗುತ್ತದೆ. ಅಲ್ಲಿ ಇತರ ಹಸುಗಳಿಗೆ ತನ್ನ ಕರುವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ, ಕರುವಿಗೂ ಸಹ ತಾನು‌ ಮತ್ತೆ ಬರುವುದಿಲ್ಲ ಎಂದು ಮನದಟ್ಟು ಮಾಡಿಸಿ ಹುಲಿ ಬಳಿಗೆ ಹಸು ಮತ್ತೆ ಬರುತ್ತದೆ. ಅಚ್ಚರಿಯೆಂದರೆ ಹಾಡಿನ ಕ್ಲೈಮ್ಯಾಕ್ಸ್ ನಲ್ಲಿ ಭಾಷೆ ಉಳಿಸಿಕೊಂಡ ಹಸುವಿಗಾಗಿ ದುಃಖಿಸಿ ಹುಲಿ ಬೆಟ್ಟದಿಂದ ಹಾರಿ ಪ್ರಾಣ ಬಿಡುತ್ತದೆ. ಇದು ಕವಿತೆಯ ಪುಟ್ಟ ಸಾರಾಂಶ.

ಇಲ್ಲಿ ಮೊಗಳ್ಳಿಯವರಿಗೆ ಹುಲಿ ಪ್ರಾಣ ಬಿಟ್ಟಿದ್ದಕ್ಕೆ ಹೆಚ್ಚು ತಕರಾರಿರುವ ಬದಲು, ಹುಲಿ ದಲಿತ ಎಂತಲೂ ಹಸು ಬ್ರಾಹ್ಮಣ ಎಂಬಂತಹ ವಾದವನ್ನು ಪೂರ್ತಿ ಅಧ್ಯಾಯದಲ್ಲಿ ಮಂಡಿಸುತ್ತಾ‌ ಹೋಗುತ್ತಾರೆ. ಒಂದು ಸಮ್ಮೇಳನದಲ್ಲಿ ಮಂಡಿಸಿದ ತಮ್ಮ ವಾದಕ್ಕೆ ಪತ್ರದ ಮೂಲಕ ಪ್ರತಿಕ್ರಿಯಿಸಿದ ಯು ಆರ್ ಅನಂತಮೂರ್ತಿ ಯವರಿಗೆ ತಮ್ಮ ಪತ್ರಗಳ ಮೂಲಕ ಉತ್ತರಿಸುವ ತಮ್ಮ ಬಂಡಾಯ ವಾದಗಳನ್ನು ಮಂಡಿಸುವ ಮೊಗಳ್ಳಿಯವರ ಹುಲಿ-ಹಸುವಿನ ಪ್ರಕರಣವನ್ನು ಮೂರನೇ ವ್ಯಕ್ತಿಯಾಗಿ ಓದುಗ ನಿಂತು ನೋಡಿದಾಗ ಗೋವಿನ ಹಾಡು ಬರೆದ ಕವಿಯನ್ನು ಇಲ್ಲಿ ದೋಷಿತನನ್ನಾಗಿ ಮಾಡುವ ಬದಲು ಮೊಗಳ್ಳಿಯವರು ತಮ್ಮನ್ನು ಎಲ್ಲೆಲ್ಲಿಗೋ ಕರೆದೊಯ್ಯುತ್ತಾರೆ ಎನ್ನುವುದು ಮನದಟ್ಟಾಗುತ್ತದೆ. ಆದರೂ ಅವರೇ ಹೇಳುವಂತೆ “ಹುಲಿಯ ರೂಪಕವು ದಮನಗೊಂಡ ಸಮುದಾಯಗಳ ಸಮಷ್ಠಿ ಸಂಕೇತ.” ಎನ್ನುವ ಅಂಶವನ್ನು ಓದುಗ ಪರಾಮರ್ಶಿಸಬೇಕಾದ ಅವಶ್ಯಕತೆ ಇದೆ. ಆ ರೀತಿಯ ಪರಾಮರ್ಶೆಗೆ ಇಳಿದಾಗ ಮೊಗಳ್ಳಿಯವರ ವಿದ್ರೋಹದ ಗೋವಿನ ಹಾಡಿನ ಚಿಂತನೆ ಓದುಗನಲ್ಲಿ ಇನ್ನಷ್ಟು ಹೊಸ ಚಿಂತನೆಗಳನ್ನು ಹುಟ್ಟು ಹಾಕಬಲ್ಲದೇನೋ!!

ಮೊಗಳ್ಳಿಯವರ ಈ ಕೃತಿಯಲ್ಲಿ ತುಂಬಾ ಅಚ್ಚುಕಟ್ಟಾಗಿ ಬರೆಸಿಕೊಂಡಿರುವ ಅಧ್ಯಾಯ “ಬಲಿದಾನದ ಕಾವ್ಯಕ್ಕೆ ದನಿಯಾದವರು”. ಹಿಂದಿನ ಕಾಲದಲ್ಲಿ ಹೊಸ ಕೆರೆಗಳನ್ನು ಕಟ್ಟಿದಾಗ ಕೆರೆಗೆ ಬಲಿಕೊಡಲು ಮನುಷ್ಯರನ್ನು ಬಳಸುತ್ತಿದ್ದದ್ದು ಒಂದು ಕೆಟ್ಟ ಆಚಾರ. ಆ ತರಹದ ಒಂದು ಕೆಟ್ಟ ಆಚಾರವನ್ನು” ಕೆರೆಗೆ ಹಾರ” ಎಂಬ ಜಾನಪದ ಗೀತೆಯಲ್ಲಿ ಜನಪದರು ದಾಖಲಿಸಿದ್ದಾರೆ. ಆ ಗೀತೆಯಲ್ಲಿ ಕೆರೆಗೆ ಬಲಿದಾನವಾಗುವ ಭಾಗೀರಥಿ ಎಂಬ ಹೆಣ್ಣಿನ ಕುರಿತು ಮೊಗಳ್ಳಿಯವರು ದಲಿತ ಬಂಡಾಯ ದೃಷ್ಟಿಕೋನದಲ್ಲಿ ನೋಡುತ್ತಾರೆ. ಸತಿ ಸಹಗಮನ ಪದ್ದತಿಯಲ್ಲಿ ಸತ್ತ ಗಂಡನ ಜೊತೆ ಹೆಂಡತಿಯೂ ಚಿತೆ ಏರುವ ಅನಿಷ್ಟ ಪದ್ದತಿ ಇದ್ದ ಈ ದೇಶದಲ್ಲಿ ಕೆರೆಗೆ ಹಾರವೂ ಸಹ ಅಂತಹುದೇ ಕೌರ್ಯಕ್ಕೆ ಸಮನಾಗುತ್ತದೆ ಎಂಬುದನ್ನು ಮೊಗಳ್ಳಿಯವರು ಸ್ಪಷ್ಟಪಡಿಸುತ್ತಾರೆ. ಈ ಅಧ್ಯಾಯದಲ್ಲಿ ಕೆರೆಗೆ ಹಾರ, ಸತಿ ಸಹಗಮನ ಪದ್ದತಿಯ ಹಾಗೆಯೇ ದೇವದಾಸಿ ಪದ್ದತಿಗಳ ಕುರಿತು ತುಂಬಾ ಕರಾರುವಾಕ್ಕಾದ ಬಂಡಾಯದ ಚಿಂತನೆಗಳನ್ನು ಬರೆದಿರುವ ಮೊಗಳ್ಳಿಯವರು ಈ ಎಲ್ಲವನ್ನೂ ದಲಿತ ಜಾನಪದದ ಚಹರೆಯಲ್ಲಿ ಅಧ್ಯಯನ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಜೊತೆಗೆ ಗೆಜ್ಜೆ ಆಳು, ಬಿಟ್ಟಿ ಆಳು, ಹರಕೆ ಆಳು, ಆಜಲು ಎಂಬ ಉಳ್ಳವರ ಅನೇಕ ಕೆಟ್ಟ ಪದ್ದತಿಯ ಅನಾವರಣವನ್ನು ಸಹಾ ಈ ಅಧ್ಯಾಯದಲ್ಲಿ ನಾವು ಕಾಣಬಹುದು. ಹಾಗೆಯೇ “ಬೂಸಾ ಸಂಶೋಧನೆಯ ಆಚೆಗೂ” ಅಧ್ಯಾಯದಲ್ಲೂ ಅನೇಕ ಭಂಡಾಯದ ಎಳೆಗಳು ಸಹ ಕಾಣಸಿಗುತ್ತವೆ.

ಕೊನೆಯದಾಗಿ
ದಶಕಗಳ ಕಾಲ ಜಾನಪದ ವಿಷಯದಲ್ಲಿ ಅನೇಕ ಅಧ್ಯಯನ ಮಾಡಿಕೊಂಡಿರುವ ಮೊಗಳ್ಳಿಯವರು ಕಥೆಗಾರರಾಗಿ ಹೆಸರು ಮಾಡಿದ್ದರೂ ವಿಮರ್ಶಕರಾಗಿ ಅವರನ್ನು ಸಾಹಿತ್ಯ ವಲಯ ಗುರುತಿಸಲೇ ಇಲ್ಲ ಎನ್ನುವ ಮಾತನ್ನು ತಮ್ಮ ಪುಸ್ತಕದ ಮೊದಲ ಮಾತಿನಲ್ಲಿ ಹೇಳಿದ್ದಾರೆ. ಇವರ ದಲಿತ ಜಾನಪದ ಪುಸ್ತಕವನ್ನು ಓದಿದ ಮೇಲೆ ಮೊಗಳ್ಳಿಯವರ ಶೈಲಿ ಇಷ್ಟೆಲ್ಲಾ ನನ್ನಿಂದ ಬರೆಸಿತು ಎಂದರೆ ಅವರ ಬರಹಗಳು ತಲುಪಬೇಕಾದ ಓದುಗ ಬಳಗವೇ ಬೇರೆ ಇದೆ. ಈ ಪುಸ್ತಕದಲ್ಲಿ ಮೊಗಳ್ಳಿಯವರೇ “ನಾನು ಬರೆಯುವುದು ನನ್ನ ವಿಮೋಚನೆಗಾಗಿ. ಈ ಬರವಣಿಗೆಯಿಂದ ಸಮಾಜ ಬದಲಾಗದು ಎಂಬುದೂ ಗೊತ್ತು. ಆದರೆ ಜಡತೆಯಿಂದ ತುಂಬಿದ ಕಾಲಮಾನಗಳಲ್ಲಿ ಯುವಕರ ಗಮನಕ್ಕೆ ಏನಾದರು ಮುಟ್ಟಿದರೆ ಮುಟ್ಟಲಿ ಎಂದು ಬರೆಯುವೆ.” ಎಂದು ಬರೆದಿದ್ದಾರೆ. ಹಾಗೆಯೇ ಈ ಪುಸ್ತಕದ ಪ್ರಕಾಶಕರ ಬಿನ್ನಹದಲ್ಲಿ “ನಾನೀಗ ಕೊನೆಗಾಲದಲ್ಲಿರುವೆ” ಎನ್ನುವಂತಹ ಸಾಲನ್ನು ಎರಡು ಸಲ ಬರೆದಿದ್ದಾರೆ‌. ಈ ಸಾಲಿಗೆ ೧೯೯೨ ರಲ್ಲಿ ಪ್ರಕಟಗೊಂಡಿದ್ದ ಅವರ ಚೊಚ್ಚಲ ಕೃತಿ ಬುಗುರಿ ಕಥಾಸಂಕಲನದಲ್ಲಿ “ನನ್ನಜ್ಜನಿಗೊಂದಾಸೆಯಿತ್ತು” ಎಂಬ ಕತೆಯ ಒಂದು ಸಾಲನ್ನು ಇಲ್ಲಿ ಸೇರಿಸಲು ಬಯಸುತ್ತೇನೆ. “ಸಾಯುಕುಟ್ಟಿರೋ ಜೀವಾವ ಸಾಯುಕಷ್ಟೇ ಬುಡದೆ ಮನ್ಸ ಅನಿಸ್ಕೋಬೇಕು”. ನನ್ನ ಕೊನೆಗಾಲ ಎನ್ನುವ ಮೊಗಳ್ಳಿಯವರು ಅವರದೇ ಈ ಸಾಲನ್ನು ಒಮ್ಮೆ ಓದಿಕೊಳ್ಳಲಿ. ಇವರು ಹಲವು ವರ್ಷಗಳ ಕಾಲ ಆರೋಗ್ಯಕರವಾಗಿ ಬಾಳಲಿ. ತಮ್ಮ ಕನಸಿನ ಪ್ರಕಾಶನದ ಮೂಲಕ “ದಲಿತ ಜಾನಪದ” ಎಂಬ ಒಂದೊಳ್ಳೆ ಪುಸ್ತಕ ಹೊರತಂದಿರುವ ಮೊಗಳ್ಳಿ ಗಣೇಶ್ ಅವರಿಗೆ ಅಭಿನಂದನೆಗಳು. ಸರ್, ನಿಮ್ಮಿಂದ ಇನ್ನೂ ಅನೇಕ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ದಕ್ಕಲಿ ಎಂದು ಹಾರೈಸುವೆ.

-ಡಾ. ನಟರಾಜು ಎಸ್ ಎಂ


ಕೃತಿ: ದಲಿತ ಜಾನಪದ
ಪ್ರಕಾರ: ಬರಹಗಳ ಸಂಗ್ರಹ
ಲೇಖಕರು: ಮೊಗಳ್ಳಿ ಗಣೇಶ್
ಪ್ರಕಾಶನ: ದಲಿತ ಪ್ರಕಾಶನ
ಬೆಲೆ: Rs. 225/-
ಪ್ರತಿಗಳಿಗಾಗಿ ಸಂಪರ್ಕಿಸಿ: 9483980959


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x