“ಮುಂಗಾಲಿನ ಮ್ಯಾಲೆ ನಡೆಯೋ ಹೆಂಗ್ಸು ಮೂರೊಲೇ ಗುಂಡು ಒಂದ್ಕಡೆ ಇಕ್ಕಲ್ಲ, ಯಿಟ್ನೊತ್ಗೇ ಒಲೆ ಕಿತ್ತಾಕಿ ಮುಂಗೈನ ತಿಕುಕ್ಕೆ ಸೀಟ್ಕಂಡು ಮುಂದ್ಲೂರಿಗೆ ವೋತಾಳೆ, ನೀನು ಅಂಗೇ ಕಣೇಳೇ ಬಿತ್ರೀ ಆಹ ಹ ಹಾ… ಹೆಂಗ್ ವನಿತಾಳ್ನೋಡು ಇವುಳ್ ವೈಯ್ಯಾರುಕ್ಕೆ ನನ್… ” ಮಲ್ಲಕ್ಕ ಕುಂತಲ್ಲೇ ಕೊಸರಾಡತೊಡಗಿದಳು, ಅವಳ ಆವೇಶ, ಆಕ್ರೋಶ ಎಷ್ಟಿತ್ತೆಂದರೆ ಅವಳು ಕುಂತಿರೋ ಜಾಗಕ್ಕೆ ಗಾರೆ ಬಳಿಯದೇ ಬರೀ ಮಣ್ಣಿನ ನೆಲವಾಗಿದ್ದಿದ್ರೇ ಅವಳ ಕೊಸರಾಟಕ್ಕೆ ಅವಳ ಕುಂಡಿಯಷ್ಟಗಲವೂ ನೆಲ ತೂತು ಬಿದ್ದು ನೆಲದೊಳಗೆ ವೊಲ್ಟೋಗಿರೋಳು, ಇವಳ ಕೊಸರಾಟ ನೋಡಿದ ಮುದ್ದಕ್ಕ “ ಏ ಥು… ನಾಚ್ಕೆ ಇಲ್ದೋಳು ಮೊಮ್ಮಕ್ಳಾಗ್ಯಾವೆ ಅದೇನು ಮಾತೂ ಅಂತ ಆಡ್ತೀಯ ತಗೋ, ನಿಂಕೇನು ಅಕ್ಕ-ಪಕ್ಕ ಸಣ್ಣುಡುಗೇರು ಅವ್ರೇ ಅನ್ನೋದು ಗ್ಯಾಪ್ನ ಇಲ್ವಾ, ಸಾಕು ಸುಮ್ಕಿರು ಆಡೋ ವುಡುಗ್ರು ಕಲ್ತಂಕಂಡಾವು ನಿನ್ ವಾಣೀನಾ… ” ಎಂದು ಗದರಿಸಿ ಎಲೆಗೆ ಸುಣ್ಣ ಹಚ್ಚಿ ಪಕ್ಕದಲ್ಲಿದ್ದ ಎಲೆ ಅಡಿಕೆ ಚೀಲಕ್ಕಾಗಿ ತಡಕಾಡತೊಡಗಿದಳು. ಅದಾಗಲೇ ಮಲ್ಲಕ್ಕನ ಕೈಯ್ಯಲ್ಲಿ ಕಣ್ಣುಬಾಯಿ ಬಿಟ್ಕಂಡು ಒದ್ದಾಡ್ತಿತ್ತು, ಮುದ್ದಕ್ಕನಿಗೆ ಅದೆಲ್ಲಿತ್ತೋ ಆ ಕ್ವಾಪ ರಪ್ಪಂತ ಮಲ್ಲಕ್ಕನ ಕೈಯ್ಯಿಂದ ಚೀಲ ಕಿತ್ಕಂಡು, “ತತ್ತಾರೇ ವiಲ್ಲೀ ನಿನ್ ಕೈ ಸೇದೋಗ ಅದೇನ್ ನಿನ್ ಗಂಡುನ್ದೂ ಅಂತಾ ಹಂಗ್ ಹಿಡಿ ತುಂಬಾ ಬಾಚ್ಕಂತೀಯ” ಅಂತಾ ಅಂದು ಅದರೊಳಗಿದ್ದ ಅಡಿಕೆ ಎಷ್ಟಿರಬೌದು ಅಂತಾ ಚೀಲ್ದೊಳಿಕ್ಕೆ ಕೈ ಹಾಕಿ ತಡಕಾಡಿ ಹುಸಿಮುನಿಸಿನಿಂದ “ ಲೇ ಲೇ ನನ್ ಗಂಡ ಮೊದ್ಲೇ ಪಿಸ್ನಾರಿ ಮುಂಡೇ ಮಗ ಅವುನಿಗೆ ಕಾಣ್ದಂಗೆ ಆ ತಿಪ್ಪೂರು ಸಾಬಿಗೆ ಹೊಂಗೆ ಬೀಜ ಕೊಟ್ಟು ಅಚ್ಚೇರಡಕೆ ತಗಂಡಿದೀನಿ, ನೀನು ಅದರಾಗೂ ಹಿಂಗ್ ಮಾಡ್ತೀಯಲ್ಲೇ ” ಅಂತ ಅಂದು ಎಲೆ ಅಡಿಕೆ ಚೀಲವನ್ನು ತೊಡೆಯ ಕೆಳಗೆ ಇಟ್ಕೊಂಡು ಎಲೆ ಅಡಿಕೆಯನ್ನ ಅಗಿಯತೊಡಗಿದಳು. ಮಲ್ಲಕ್ಕ ಕಾಲುಗಳ ಸಂದಿಯಿಂದ ಸೀರೆಯನ್ನು ಎತ್ತಿ ಒಗೆದು ಎರಡೂ ಕೈಗಳಿಂದ ಮುದ್ದಕ್ಕನ ಮಕಕ್ಕೆ ತಿವಿಯೋ ಹಾಗೆ ಮಾಡಿ “ಓಹೋಹೋ ತಗಳೇ ನಿನ್ ಚೀಲ ಯಾವೊಳ್ಗೆ ಬೇಕು, ಏನು ಬಂಗಾರ ಇಕ್ಕಿದಿಯ ಅದ್ರಾಗೆ ನನ್ ಗಂಡ ನಿನ್ ಗಂಡ್ನಂಗಲ್ಲೇಳು ನೆನ್ನೆ ಆರೂಢಿ ಸೆಂತ್ಗೋಗಿ ಸೇರಡಿಕೆ ತಂದವ್ನೇ ಚೀಲಕಾಕ್ಕಣೋದು ಮರ್ತು ಬಂದೆ, ನಿನ್ ಬಣ್ದಡಿಕೇಗೆ ಇಲ್ಯಾವೊಳೂ ಬಾತ್ಗಂಡು ಕುಂತಿಲ್ಲ” ಎಂದು ಕುಂತಲ್ಲಿಯೇ ಗರ್ ಗರ್ ಅಂತ ತಿರುಗತೊಡಗಿದಳು. ಇವರಿಬ್ಬರ ಮಾತಿನ ವರಸೆ ನೋಡುದ್ರೆ ಜಗ್ಳ ಮಾಡ್ತಾ ಅವ್ರೇ ಅಂತಾನೇ ಅಂದ್ಕೋಳೋದು ಆದ್ರೇ ಅವರಿಬ್ಬರೂ ಯಾವಾಗ್ಲೂ ಯಿಂಗೆ, ಅದೇನೋ ಅವರಿಬ್ಬರ ಮದ್ಯೇ ಅದೆಂತಾದ್ದೋ ಪ್ರೀತಿ ಐತೆ. ಮುದ್ದಕ್ಕ ಮತ್ತೆ ಮಲ್ಲಕ್ಕ ಇಬ್ಬರೂ ಹುಟ್ಟಿದಾಗ್ಲಿಂದಾನೂ ಯಿಂಗೇ ಅವ್ರೇ, ಊರಾಗೆ ರವಷ್ಟು ಅನುಕೂಲಸ್ತ ನರಸೇಗೌಡನ ಒಬ್ಳೇ ಮಗುಳುನ್ನ ಎಲ್ಲೋ ದೂರಕ್ಕೆ ಕೊಡೋದಿಕ್ಕಿಂತ ತನ್ನ ಸ್ವಂತ ತಂಗಿ ಮಗನಿಗೇನೆ ಮದುವೆ ಮಾಡಿಕೊಟ್ಟು ಮನೆವಾಳ್ತನುಕ್ಕೆ ಮೆನೇಲೇ ಇಟ್ಕಂಡಿದ್ದ. ಹಂಗಾಗಿ ಮುದ್ದಕ್ಕನಿಗೆ ಅತ್ತೆ ಮನೆ ಅನುಭೋಗ ಆಗ್ಲಿ ತವ್ರು ಮನೆ ಬಿಟ್ಟೋಗೋ ನೋವಾಗ್ಲಿ ಗೊತ್ತೇ ಇಲ್ಲಾ. ಮಲ್ಲಕ್ಕ ಆರ್ಸಿಯಿಂದಾನೂ ನರಸೇಗೌಡರ ಮನೇತಾವ ತಾರಾಡ್ಕಂಡು ಸಣ್ಣ ಪುಟ್ಟ ಕೆಲ್ಸಾ ಮಾಡ್ಕಂಡು ನರಸೇಗೌಡರ ಮನೇ ಮಗ್ಳು ತರಾನೇ ಇದ್ದೋದ್ಲು. ಅವ್ಳ ಗಂಡ ಹನುಮಂತರಾಯ, ಗೌಡರ ಗದ್ದೆ ಕೆಲಸ ಮಾಡ್ಕಂಡು ಜೊತೆಗೆ ತನ್ನದೂ ಎರಡೆಕ್ರೆ ದಿನ್ನೆ ವೊಲಾನೂ ಉತ್ಕಂಡು ಯವ್ಸಾಯ ಮಾಡ್ಕಂಡು ದುಡೀತಿದ್ದ.
ಅಮರಾವತಿ ಆಗಲೇ ಅದೇ ದಾರಿಯಲ್ಲಿ ಹೋಗಿದ್ದೋಳು ತಿರುಗಾ ಅದೇ ದರ‍್ಯಾಗೇ ಬತ್ತಿರೋದ್ನಾ ದೂರದಿಂದಾನೇ ನೋಡಿದ ಮಲ್ಲಕ್ಕ ಸರಕ್ ಅಂತಾ ಕುಂತಲ್ಲಿಯೇ ತಿರುಗಿ ಕುಂತಿದ್ದಳು, ಮುದ್ದಕ್ಕ ಸೆರಗಿನಿಂದ ಮೂಗು ಸೀಟ್ಕೊಂಡು ನೋಡೋವಷ್ಟರಾಗೆ ಮಲ್ಲಕ್ಕನ ಮುಖ ಇದ್ದ ಜಾಗದಲ್ಲಿ ಹಿಂದಲೆ ಗಂಟಿತ್ತು ಆ ಜುಟ್ಟಿನಾಗೇ ಮೂರೆಳೆ ಮಲ್ಗೇ ವುವ್ವಾ ನೇತಾಡ್ತ್ತಿದ್ವು. ಮುದ್ದಕ್ಕ ಗರ ಬಡ್ದೋಳಂಗೆ ನೋಡಿ “ ಲೇ ಅಮ್ಮಯ್ಯ ಇದೇನಾಯ್ತೇ, ಹರಕೆ ತರ‍್ಸದೇ ಇರೋರ ಮನೇ ಕಡೇ ಮುತ್ರಾಯ ಸಾಮಿ ತಿರುಗಿದಂಗೆ ರ‍್ರಕ್ಕನೇ ತಿರುಗಿ ಕುಂತಿದೀಯ, ಅದೇನಾಯ್ತೇ ನಿಂಕೆ ಎಂದು ಅವಳ ಸೊಂಟಕ್ಕೆ ಕೈ ಹಾಕಿ ತಿವಿದಂತೆ ಗಿಚ್ಚಿದಳು, ಅದ್ಯಾವುದಕ್ಕೂ ಜಪ್ಪಯ್ಯ ಅನ್ನದ ಮಲ್ಲಕ್ಕ ಅಮರಾವತಿ ಅವಳನ್ನು ದಾಟಿಕೊಂಡು ಹೋದಂತೆಲ್ಲಾ ಇವಳು ಮೆಲ್ಲಗೆ ಗುಂಡುಕಲ್ಲು ತಿರುಗಿದಂಗೆ ಮುದ್ದಕ್ಕನ ಕಡೆಗೆ ತಿರುಗಿ ಕುಂತ್ಕಂಡ್ಳು. ಇದನ್ನು ನೋಡಿದ ಮುದ್ದಕ್ಕ ಏನೂ ಅರ್ಥವಾಗದವಳಂತೆ “ ಅದ್ಯಾಕೆ ಅವುಳನ್ ಕಂಡ್ರೇ ಹಂಗ್ ಕೊಸರಾಡ್ತೀಯ ಏನು ಮಾಡೈತೆ ಆ ಮಗ ನಿನ್ನಾ” ಅಂತಾ
ಅಂದ ಮಾತ್ಗೇ ಇನ್ನಷ್ಟು ವ್ಯಗ್ರಳಾಗಿ ಕೈ ಕಾಲುಗಳನ್ನೆಲ್ಲಾ ಕುಂತಲ್ಲೇ ಝಾಡಿಸಿ “ಥೂ… ನನ್ನಂತವ್ಳಾಗಿದ್ದಿದ್ರೇ ಅವುಳುನ್ನ ಸರೀ ಅರ್ಧಕ್ಕೆ ತುಂಡು ಮಾಡಿ ಜೈಲಿಗೋಲ್ಟೋತಿದ್ದೆ… ” ಅಂದವಳು ರ‍್ರಂತಾ ಎದ್ದು ರಾಮಬಾಣದ ಹಾವು ಹೋದಂಗೆ ವೊಲ್ಟೇ ವೋದ್ಲು. ಮಲ್ಲಕ್ಕ ಹಂಗೇನೆ ಅವ್ಳು ಬರೋವಾಗ್ಲೂ ಹೇಳ್ಕಂಡು ಬತ್ತರ‍್ಲಿಲ್ಲ ವೋಗೋವಾಗ್ಲೂ ಅಷ್ಟೇ, ನಿಸೂರಾದ ಹೆಂಗ್ಸು ಮಲ್ಲಕ್ಕ. ಅವ್ಳು ವೋದ ರಬುಸುಕ್ಕೆÀ ಮುದ್ದಕ್ಕ ಮನಿಸ್ನಾಗೇ “ ಅಯ್ಯೋ ಇವುಳ್ ಮಕ್ಕೇ… ಒಳ್ಳೆ ತೊಣಚಿ ಹತ್ತಿದೋಳ್ ಆಡ್ದಂಗೆ ಆಡ್ತಾಳೆ, ನೆಲಾನೆಲ್ಲಾ ಹೆಂಗ್ ಗುದ್ರ ಇಕ್ಕವ್ಳೇ ಇವುಳ್ ತಿಕ ಕೊಳ್ತೋಗ ಅಂತಾ ಶಪಿಸಿಕೊಂಡು ಮಲ್ಲಕ್ಕ ಕೊಸರಾಡಿದ ಜಾಗದಲ್ಲಿ ಕಸ ಗುಡಿಸಿ, ಕ್ಯಾಕರಿಸಿ ಉಗಿದು ಕ್ ಕ್ ಕ್ ಕ್ಕೋ ಎಂದು ಕೋಳಿಗಳನ್ನು ಕರೆದು ರಾಗಿಕಾಳುಗಳನ್ನ ಚೆಲ್ಲಿ ಕಂಕುಳ್ನಾಗೇ ಮಂಕ್ರಿ ರ‍್ಕಿಕೊಂಡು ತಿಪ್ಪೆ ಕಡೆ ಸೆಗಣಿ ಬಾಚ್ಕೊಂಡು ವೋದೋಳ ಹಿಂದೆ ಕೋಳಿಗಳೂ ಕೂಡಾ ಸದ್ದು ಮಾಡ್ತಾ ಹಾರಿ ಹೋದ್ವು.
ಮಲ್ಲಕ್ಕ ನೋಡಾಕೆ ರವಟು ರ‍್ಟು, ಮನ್ಸು ಮಾತ್ರ ಬೆಣ್ಣೆ ತರಾ, ಮಕ್ಕೊಡ್ದಂಗೆ ಮಾತಾಡ್ತಾಳಷ್ಟೇ ಯಿಂದೊಂದು ಮುಂದೊಂದು ಮಾತಾಡಲ್ಲ, ಹಟ್ಟಿನಾಗೆ ಏನಾದರು ಜೋರ್ ಜೋರಾಗಿ ಮಾತು ಕೇಳ್ತವೇ ಅಂದ್ರೆ, ಅದು ಈ ಮಲ್ಲಕ್ಕ ಯರ‍್ತಾವ್ಲೋ ನಗ್ಸಾರ ಮಾಡ್ತಾವ್ಳೆ ಇಲ್ಲಾಂದ್ರೆ ಜನ್ಮ ಜಾಲಾಡ್ತಾ ಅವ್ಳೆ ಅಂತ ರ‍್ತ, ಅವ್ಳು ಯಾವೊತ್ತೂ ಕೂಡಾ ಮನ್ಸಿನಾಗೇ ಹೊಲಸೆಲ್ಲಾ ತುಂಬ್ಕಂಡು ಕೊಳ್ಕು ಜೀವ್ನಾ ಮಾಡ್ದೋಳಲ್ಲ ಎಂತಾ ಗಂಡ್ಸೇ ಆಗ್ಲೀ ಇವುಳ್ ಕೊಸರಾಟಕ್ಕೆ ಗಪ್‌ಚುಪ್ ಆಗೋತಿದ್ದ. ವೊಲದ್ ಕೆಲ್ಸ ಅಂತಾ ಸೊಂಟಕ್ಕೆ ಸೆರಗು ಸಿಕ್ಕಿಸ್ಕಂಡು ನರ‍್ಗೆ ಯಿಡ್ದು ಮೊಣಕಾಲ್ ತನ್ಕ ಎತ್ತಿ ಕಟ್ಟಿ ಇಳಿದವ್ಳೆ ಅಂದ್ರೇ ಅವುಳ್ ಸಮುಕ್ಕೆ ಎಂತಾ ಮೀಸೆ ಮಿಂಡಾಳ ಆದ್ರೂ ಸುಸ್ತಾಗಿ ಸೋಲೊಪ್ಲೇ ಬೇಕಿತ್ತು ಇಂತಾ ಗಂಡಸ್ನಂತಾ ಹೆಂಗ್ಸು ಮಲ್ಲಕ್ಕ.
ಅಮರಾವತಿ, ಇಂದ್ರನ ಐಭೋಗದ ರಾಜಧಾನಿಯಲ್ಲ ಒಂದು ನಲ್ವತೈವತ್ತು ಮನೆಗಳಿರುವ ಪುಟ್ಟ ಗ್ರಾಮ, ಗ್ರಾಮ ಅನ್ನೋದಿಕ್ಕಿಂತಾ ಹಳ್ಳಿ ಅನ್ನಬೌದು, ಬೆಂಗ್ಳೂರು ಪಟ್ಣದಿಂದ ಅರವತ್ತೆಪ್ಪತ್ತು ಕಿಲೋ ಮೀಟ್ರು ದೂರ ಐತೆ, ಆ ಹಳ್ಯಾಗೆ ಗೋವಿಂದಪ್ಪನ ಮನೇನೆ ರವಷ್ಟು ಅನುಕೂಲವಾಗಿರೋದು, ಅವರಪ್ಪನ ಕಾಲದಿಂದ ಅವರೇನು ಕಬರ‍್ರಲ್ಲ, ಪಟೀಲ್ಕೇ ಶ್ಯಾನುಭೋಗಿಕೆ ಮಾಡ್ದೋರಲ್ಲ್ಲ. ಅವರಪ್ಪ ಕಾಮಯ್ಯ ಕೂಲಿ ನಾಲಿ ಮಾಡಿ, ಅವರಮ್ಮ ಹೊಂಗೆ ಬೀಜ ಬೇವಿನ ಬೀಜ ಕುಟ್ಟಿ ಶೆಟ್ರಂಗ್ಡಿಗೆ ಹಾಕಿ ತೂತು ಕಾಸ್ನೆಲ್ಲಾ ಕೂಡ್ಹಾಕಿ ಗೋವಿಂದಪ್ಪುನ್ನ ಮೇಷ್ಟುç ಕೆಲ್ಸಾ ಬರಂಗೆ ಓದ್ಸಿದ್ರು. ಅದ್ಕೆ ಗೋವಿಂದಪ್ಪ ಈ ರ‍್ನಾಗೇ ರವಷ್ಟು ಅನುಕೂಲಸ್ತನ ತರಾ ಬಾಳ್ತಾ ಅವ್ನೇ. ಇದ್ಯಾವಂತನಾದ ಗೋವಿಂದಪ್ಪನ ಮನೆ ರ‍್ನೊರ‍್ಗೆಲ್ಲಾ ಪಂಚಾಯ್ತಿ ಕಟ್ಟೇ ತರಾ ಇತ್ತು ಏನೇ ಸಮಸ್ಯೆ ಬಂದಾಗ್ಯೂ ಕೂಡಾ ಇವಪ್ಪ ಕಡ್ಡಿ ಮರ‍್ದಂಗೇ ನ್ಯಾಯ ಯೇಳ್ತಿದ್ದ. ಅದ್ಕೇ ಗೋವಿಂದಪ್ಪುನ್ನ ಕಂಡ್ರೇ ಊರ್ ಜನುಕ್ಕೆಲ್ಲಾ ಭಾಳಾ ರ‍್ಯಾದೆ ಇತ್ತು. ಗೋವಿದಪ್ನೂ ಸೈತಾ ಆ ರ‍್ಯಾದೆನಾ ಜೀವುಕ್ಕಿಂತಾ ಸ್ಯಾನೆ ಜ್ವಾಕ್ಯಾಗೆ ಜೋಪಾನ ಮಾಡ್ಕಂಡು ಬದುಕ್ತಿದ್ದ. ಹತ್ತಾರು ಜನುಕ್ಕೆ ಕಷ್ಟ ಅಂತಾ ಬಂದರ‍್ಗೇ ಆಗಾಗ ದುಡ್ಡು ಕಾಸ್ನೂ ಕೊಡ್ತಿದ್ದ, ಆ ದುಡ್ಡು ಈಸ್ಕಂಡೋರು ದುಡ್ಡಿನ ಬಡ್ಡಿಗೆ ಅಂತಾ ಗೋವಿಂದಪ್ಪನ ವೊಲಾ-ಗದ್ದೆ ಕೆಲ್ಸಾ ಮಾಡ್ಬೇಕಿತ್ತು, ಆದ್ರೂ ಗೋವಿಂದಪ್ಪ ನಿಯತ್ತಿನ ಮನ್ಸಾ ಕೆಲ್ಸಾ ಮಾಡಿ ಮನೆಗೋಗೋ ಮುಂಚೆ ಕೆಲ್ಸಾ ಮಾಡ್ದೊರ‍್ಗೆಲ್ಲಾ ಅವುರ್ ಕಷ್ಟದ ಬಾಬ್ತು ಚುಕ್ತಾ ಮಾಡ್ತಿದ್ದ. ಅದ್ಕೇ ಜನ ಬಡ್ಡಿ ಕೊಟ್ರೂ ಕೆಲಸಕ್ಕೆ ರ‍್ದಾಗ ಇಲ್ಲಾ ಅಂತರ‍್ಲಿಲ್ಲಾ. ಗೋವಿಂದಪ್ಪ ಸಣ್ಣೋನಿದ್ದಾಗ ರ‍್ನೋರೆಲ್ಲಾ ಅವುರಪ್ಪನ ಕಷ್ಟ ಸುಖಕ್ಕೆ ನೆರವಾಗಿದ್ರೂ ಆ ನಿಯತ್ತಿಟ್ಕಂಡಿದ್ದ ಗೋವಿಂದಪ್ಪ ಯಾರುನ್ನೂ ಅವಮಾನ ಮಾಡ್ತರ‍್ಲಿಲ್ಲ. ಅದ್ರೇ ಬೆಣ್ಣೇಗೆ ಕರ‍್ಲು ತೆಗ್ದಂಗೆ ಕೆಲಸ ಮಾಡ್ಸಕಂತಿದ್ದ.
ಕಾಮಯ್ಯ ಗೋವಿಂದಪ್ಪನ ಬೆಳ್ವಣ್ಗೇ ನೋಡ್ಲೇ ಇಲ್ಲಾ ಅವುನ್ತಾವ ಕೂತು ಒಂದು ಒಳ್ಳೇ ಮಾತಾಡ್ಲಿಲ್ಲ ಬುದ್ಧಿ ಯೇಳ್ದೋನಲ್ಲ. ಸಂಸಾರ ಸಾಗ್ಸೋಕೇ, ಸಾಗ್ಸೋ ಸಂಸಾರಾನಾ ಸಾಕೋಕೇ ಅಂತಾನೇ ಕೂಲಿ ಮಾಡ್ತಲೇ ಇದ್ದ, ಕೂಲಿ ಮಾಡೀ ಮಾಡೀನೇ ಜೀವ ತೇದು ಹಣ್ಣಾಗೋದಾ ಅವುನ್ ಮನಸಿನಾಗಿನ ಮಾತೆಲ್ಲಾ ಎದೆಯಾಗೆ ಇಟ್ಕಂಡು ಒಂದು ದಿನಾ ಸಂಜೆ ಎದೆ ಮ್ಯಾಲೆ ಚಿಪ್‌ಗುದ್ಲಿ ಇಟ್ಕಂಡು ಮಣ್ಣಾಗಿ ವೋದ. ಸತ್ ಮ್ಯಾಕೆ ಸಮಾಧಿ ಒಳಗೆ ಮಲಗಿದೋನಿಗೆ ನೆರಳಾಗರ‍್ಲಿ ಅಂತಾ ಸಂಪ್ಗೆ ಮರ ವೂಣಿದ್ರು. ಸಂಪ್ಗೇ ಮರ ಯಾವಾಗ್ಲೂ ತಂಪಾಗಿರೋ ನೆಳ್ಳು ಕೊಡ್ತೆöÊತೆ ಸುವಾಸ್ನೇ ಬೀರೋ ವುವ್ವ ಬಿಡ್ತೆöÊತೆ, ಅದ್ಕೇ ಏನೋ ಸತ್ತೊರ‍್ನಾ ಸತ್ ಸಂಪ್ಗೇ ಮರ ಅದ್ರೂ ಅನ್ನೋದು.
ಆ ಸಂಪ್ಗೆ ಮರ ಅಂದ್ರೇ ಸುಮ್ನೇನಾ ಅದರಾಗಿಂದಾ ಯಾವಾಗ್ಲೂ ಸದಾ ಘಮ್ಮನ್ನೋ ಪರಿಮಳ ಬತ್ತಾ ಇತ್ತು ಗೋವಿಂದಪ್ಪ ಆ ಮರುದ್ ಕೆಳ್ಗೇ ಯಾವಾಗಾನಾ ಆಸರಿಕೆ-ಬ್ಯಾಸರಿಕೆ ಆದ್ರೇ ಕೂಕಂತಿದ್ದ ಅವನಪ್ಪನ ಎದೆಯಾಗಿನ ಮಾತೆಲ್ಲಾ ಆ ಸಂಪ್ಗೇ ಮರದ ವೂವೊಳ್ಗೇ ತುಂಬ್ಕಂಡು ತೇಲಾಡ್ತಿರಂಗೆ ಅನ್ನುಸ್ತಿತ್ತು. ಗೋವಿಂದಪ್ಪುನ್ಗೇ ಆಯಾಸಾದಾಗೆಲ್ಲಾ ಅದರ ಕೆಳಗೆ ಕುಂತ್ಕಂಡು ಅವನಪ್ಪನ ದನೀನಾ ಗ್ಯಾಪ್ಕ ಮಾಡ್ಕಂತಿದ್ದ, ನೆಪ್ಪು ಮಾಡ್ಕಂತಿದ್ದ. ಉಹೂಂ… ಅವನ ಎದೇಗೆ, ಮನಿಸ್ನಾಗೇ, ಗುಂಡ್ಗೇ ವಳ್ಗೇ ಎಲ್ಲೂ ಅವನಪ್ಪನ ದನಿ ಸಿಗ್ಲೇ ಇಲ್ಲಾ. ಎಷ್ಟೇ ಪಾತಾಳಗರಡಿ ಹಾಕಿ ತಿರುವಿದರೂ ಅವನ ಮಾತುಗಳ್ಯಾವೂ ಸೈತಾ ಸಿಗ್ಲಿಲ್ಲ. ಅಮ್ಮನ ನೆರಳಲ್ಲೇ ಬೆಳೆದ ಗೋವಿಂದನಿಗೆ ಅವನಪ್ಪನ ಆಸರೆಯ ಅಕ್ರೆ ಅನುಭವಿಸೋ ಯೋಗ ಕೂಡಿ ರ‍್ಲಿಲ್ಲ. ಕಾಮಯ್ಯ ಬದ್ಕಿದ್ದಷ್ಟೂ ಕಾಲ ಅವನ ಎದೆಯಾಗಿನ ಬಾವನೆಗಳ್ನಾ ಮನದಾಗಿನ ಮಾತುಗಳನ್ನಾ ಮಣ್ಣಿನ ಜತೆ ಹಂಚ್ಕೊಂಡಿದ್ದ ಕೊನೆಗಾಲುಕ್ಕೆ ಅವನ ದೇಹಾನ್ಕೂಡಾ.
ತನ್ನೂರ ಮ್ಯಾಲಿನ ಮಮಕಾರದಿಂದ ಗೋವಿಂದಪ್ಪ ಅವನ ಒಬ್ಬಳೇ ಮಗಳಿಗೆ ಅಮರಾವತಿ ಅಂತಾನೇ ನಾಮಕರಣ ಮಾಡಿದ್ದ. ಹೆಸರಿಗೆ ತಕ್ಕಂತೆ ರೂಪವತಿ ಆಗಿದ್ಲೂ ಅಷ್ಟೇ ಗರ್ವವೂ ಇತ್ತು, ಆ ಗರ್ವದ ಕಾರಣವೇ ಮಲ್ಲಕ್ಕನ ಕೋಪಕ್ಕೆ ಕೊಸರಾಟಕ್ಕೆ ಕಾರಣವಾಗಿತ್ತು. ಅವಳ ಕೋಪಕ್ಕೆ ಇನ್ನೊಂದು ಕಾರಣವೇನಂದರೆ ಈ ಅಮರಾವತಿ ಮುಂಗಾಲಿನ ಮ್ಯಾಲೆ ನಡೆಯೋದು, ಗಂಡುಡುಗರ‍್ನಾ ಕೆಕಕ್ಕರಿಸ್ಕಂಡು ನೋಡಾದು, ಸುಮ್ ಸುಮ್ನೇ ಅಂದಾನಪ್ನೋರ ಅಂಗ್ಡಿ ಕಡೇ ಸುತ್ತಾಡೋದು. ಹಿಂಗ್ ಸುತ್ತಾಡ್ವಾಗ್ಲೇ ಪೌಂಡ ಪಕ್ಕದಾಗೇ ಒಬ್ಳೇ ಬರೋವಾಗ ಯಾವನೋ ಕತ್ಲಾಗೇ ನಿಂತಿದ್ದೋನು ಅಮ್ರಾವತೀನಾ ಭದ್ರವಾಗಿ ತಬ್ಕಂಡಿದ್ದ, ಗೋವಿಂದಪ್ಪನ ಮ್ಯಾಲಿನ ಪ್ರೀತಿಯಿಂದ ಅಮ್ರಾವತಿ ಯಿಂದೇನೆ ಬತ್ತಿದ್ದ ಮಲ್ಲಕ್ಕ ಜೋರಾಗಿ” ಏಯ್ ಯಾವೋನೋ ಅವ್ನು ನನ್ ವೊಲೆಸ್ಯಾಲೆ ನಿನ್ ಬಾಯಿಗ್ ನನ್… ” ಎಂದು ಗುಡುಗಿದ ಮಾತು ಕೇಳಿ ಕತ್ಲಾಗೆ ಎದ್ನೋ ಬಿದ್ನೋ ಅಂತಾ ವಾಟ ಕಿತ್ತಿದ್ದ. ಮಲ್ಲಕ್ಕ ಅಮ್ರಾವತೀನಾ ಬಾಯಿಗೆ ಬಂದಂಗೇ ಬೈದು ಅವ್ಳ ರಟ್ಟೆ ಯಿಡ್ಕಂಡು ದರದರೋಂತಾ ಎಳ್ಕಂಡು ವೋದ್ಲು.
ಗೋವಿಂದಪ್ಪ ಮೇಷ್ಟಾçದ ಮ್ಯಾಲೇ ಅವನಪ್ಪ ಅಮ್ಮುನ್ನ ದೂರ ಇಕ್ಕಿದ್ದೋರೆಲ್ಲಾ ಮೆತ್ಗೇ ಓಬಿರಾಯುನ್ ಕಾಲದ ಸಂಬಂಧಾನ ಗ್ಯಾಪ್ಕ ಮಾಡ್ಕಂಡು ಬರೋಕೆ ಸುರು ಮಾಡಿದ್ರು. ಹಂಗ್ ಬಂದೋರೊಳ್ಗೇ ಗುಮ್ಮನಹಳ್ಳಿ ಗ್ಯಾಂಗ್ ಮೇಸ್ತಿç ಗಂಗಯ್ಯ ಕೂಡಾ ಒಬ್ನು. ಈ ಗಂಗಯ್ಯ ಕಾಡ್ನಾಗಿನ ಕತ್ತಾಳೆ ಕೀಳ್ಸೀ ಅಳ್ಳೀಪುರುದ್ ಸಾಬ್ರಿಗೆ ಮರ‍್ತಿದ್ದ, ಇವುನ್ ಎಂತಾ ಕೆಲಸ್ಗಾರ ಅಂದ್ರೇ ಯಾರಾದ್ರು ನಂಬಿ ಕೆಲಸ ಕೊಟ್ರೆ ಅದುನ್ನ ನಿಯತ್ತಾಗಿ ಮಾಡಿಕೊಡ್ತಿದ್ದ ಕೆಲ್ಸಾ ಮಾಡೋಕೆ ಬರೋ ಕೂಲಿಯಾಳುಗುಳ್ಗೂ ಕೂಲಿನಾ ರ‍್ಯಾದ ಟೇಮ್ಗೇ ಕೊಡ್ತಿದ್ದ ಅದ್ಕೇ ಗಂಗಯ್ಯನ ಕೆಲಸ ಅಂದರೆ ಯಾರೂ ಯಿಂದೆ ಮುಂದೆ ನೋಡ್ತರ‍್ಲಿಲ್ಲ. ಹತ್ತಿಪ್ಪತ್ತು ಹೆಣ್ಣಾಳು ಗಂಡಾಳುಗುಳು ಯಾವಾಗ್ಲೂ ಕೆಲ್ಸುಕ್ಕೆ ಸಿಕ್ತಿದ್ರು ಗಂಗಯ್ಯನ ಹಿಂದೆ ಇರೋ ಈ ಹತ್ತಿಪ್ಪತ್ತು ಹೆಣ್ಣಾಳು ಗಂಡಾಳುಗುಳ್ನಾ ನೋಡಿನೇ ಗುಮ್ಮನಹಳ್ಳಿ ಗಂಗಯ್ಯನಿಗೆ ಗ್ಯಾಂಗ್ ಗಂಗಯ್ಯ ಅಂತಾ ಕರೀತಿದ್ರು ಅವ್ನೂ ಕೂಡಾ ಅದೇ ಯೆಸ್ರಿಗೆ ಒಗ್ಗೋಗಿದ್ದ. ಇಂತಾ ಗ್ಯಾಂಗ್ ಗಂಗಯ್ಯ ತನ್ತಾವ ಕೆಲ್ಸುಕ್ಕೆ ಬತ್ತಿದ್ದ ಈರಮ್ಮನ ವನಪು ವೈಯ್ಯಾರುಕ್ಕೆ ಬೆರಗಾಗಿ ಮದ್ವೇ ಮಾಡ್ಕಂಡಿದ್ದ. ಗ್ಯಾಂಗ್ ಗಂಗಯ್ಯ ಮತ್ತೆ ಈರಮ್ಮನ ಮಗಳುನ್ನ ಈ ಗೋವಿಂದಪ್ಪುನ್ಗೇ ಲಗ್ನ ಮಾಡ್ಕೊಟ್ಟಿದ್ರು. ತನ್ನಜ್ಜಿ ಈರಮ್ಮನ ಬಾಯಾಗೆ ಬಿದ್ದಂಗೆ ರೂಪ ವೊತ್ಕಂಡು ಈ ಅಮರಾವತಿ ವುಟ್ಟಿದ್ಲು, ಅವರಜ್ಜೀನಾ ಅವುಳ್ ಅವ್ತಾರಾನಾ ನೋಡಿದ್ದ ಮಲ್ಲಕ್ಕ ಈ ಅಮರಾವತೀನಾ ಕಂಡಾಗೆಲ್ಲಾ ಈರಮ್ಮ ಕಂಡಂಗೇ ಆಗಿ ಕೊಸರಾಡೋಳು.
ಮಲ್ಲಕ್ಕ ಸುತ್ತೇಳು ಹಳ್ಳಿಗಳಲ್ಲಿ ಸಂಪ್ರದಾಯ ಪದಗಳಿಗೆ ಹೆಸರುವಾಸಿಯಾಗಿದ್ಲು ಎಲ್ಲರ ಮನೆಯ ಕ್ವಾಣೆಯಿಂದÀ ಮೊದಲ್ಗೊಂಡು ಹಿತ್ಲ್ ಬಾಗ್ಲ್ರ‍್ಗೂ ತಿಳ್ಕೊಂಡಿದ್ಲು. ಗೋವಿಂದಪ್ಪ ಒಳ್ಳೆಯವನೇ ಆದರೆ ಅಂಥಾ ಒಳ್ಳೆಯವನಿಗೆ ಇಂಥಾ ಮುಂಗಾಲಿನ ಮ್ಯಾಲೆ ನಡೆಯೋ ಮಗಳು ಇರೋದು ಅವಳಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಅರೇ ಅವರ ಮನೆಯ ವಿಚಾರಕ್ಕೆ ಈ ಮಲ್ಲಕ್ಕ ಯಾಕೆ ಇಷ್ಟು ಕೊಸರಾಡ್ತಾಳೆ ಎಂದು ತಲೆ ಕೆಡಿಸಿಕೊಂಡರೆ ತಲೆಯೊಳಗಿನ ಹೇನಿನಷ್ಟೇ ಸತ್ಯವಾದ ಮಾತು ಏನೆಂದರೆ ಮಲ್ಲಕ್ಕನಿಗೆ ಇಡೀ ಊರೇ ಒಂದು ಕುಟುಂಬವಾಗಿತ್ತು ಮಲ್ಲಕ್ಕಳನ್ನು ಇಷ್ಟ ಪಡದ ಒಂದೇ ಒಂದು ನರಪಿಳ್ಳೆ ಇರಲಿಲ್ಲ. ಕಾಸಗಲದ ಕುಂಕುಮ ಸದಾ ಕೆಂಪಾಳಕೆಂಪಗೆ ಹೊಳೆಯುವ ಅವಳ ಎಲೆ ಅಡಿಕೆ ತಿಂದಿರುವ ಬಾಯಿ ಅವಳ ನಿಷ್ಕಲ್ಮಶ ನಗು ನಿಷ್ಕಾಮ ಪ್ರೀತಿ ಎಲ್ಲರನ್ನೂ ಆಕರ್ಷಣೆ ಮಾಡಿತ್ತು. ಊರೇ ನನ್ ಮನೆ ಅನ್ನೋ ತರಾ ಮಲ್ಲಕ್ಕ ಬದಕ್ತಿದ್ಲು, ಅದ್ಕೇ ಅವ್ಳು ಒಂತರಾ ಪ್ರೀತಿ ಮಮಕಾರದಿಂದ ಎಲ್ರ ಮನೆ ಯಿಚಾರುಕ್ಕೂ ಮಾತಾಡೊಳು.
ಆದರೆ ಈ ಮಲ್ಲಕ್ಕ ಮಂಗಳವಾರದಿಂದ ಗುರುವಾರದವರೆಗೂ ಅವಳ ಮನೆಯ ಪಕ್ಕದ ಬಂಡೆಯ ಮೇಲೆ ಕೈಯ್ಯಲ್ಲಿ ಒಂದು ಕೋಲು ಹಿಡಿದು ಕಾಗೆ-ಹದ್ದುಗಳನ್ನು “ಉಶ್ಶು ಉಶ್ಶು ಥೂ ಇವುನ್ನಾಯಿ ತಿನ್ನಾ ಎಷ್ಟು ಬಡ್ಕಂಡ್ರು ಹಂಗೇ ಅಮರಿಕಂತವೇ” ಎಂದು ತನ್ನ ಸೆರಗು ತೆಗೆದು ಇನ್ನೊಂದ್ ಕೈನಾಗೇ ರೋಜಿ ಕಡ್ಡಿ ಯಿಡ್ಕಂಡು ಜೋರಾಗಿ ಗಾಳಿ ಬೀಸೋ ತರಾ ಬೀಸ್ತಿದ್ಲು.
ಆ ಕಾಗೆ ಹದ್ದುಗಳೋ ಇವಳು ಸೆರಗು ಬೀಸಿದಷ್ಟೂ ಹೊತ್ತು ಮರೆಯಾದಂತೆ ಮಾಡಿ ರ‍್ರನೇ ಬಂದು ಬಂಡೆಯ ಮೇಲೆ ಒಣುಗ್ಸಾಕೆ ಹಾಕಿದ್ದ ಬಾಡಿನ ತುಂಡೊಂದನ್ನು ಗಬುಕ್ನೇ ಬಾಚ್ಕಂಡು ಹಾರಿ ಹೋಗ್ತಿದ್ವು.
ಶ್ರೀರಾಮನಹಳ್ಳಿ ಮಾರಮ್ಮನಿಗೆ ಹರಕೆ ಹೊತ್ತವರು ಪ್ರತೀ ಮಂಗಳವಾರ ಅವರವರ ಶಕ್ತಾö್ಯನುಸಾರ ನಾಟಿ ಕೋಳಿ ಫಾರಂ ಕೋಳಿಗಳಿಂದ ಮೊದಲ್ಗೊಂಡು ಕುರಿ ಕ್ವಾಣದವರೆಗೆ ತಂದು ಕಾಯಿ ವಡೆದು ತೀರ್ಥ ತಂದು ಚಿಮುಕ್ಸಿ ಅವುಕ್ಕೆ ಹಣೆ ತುಂಬಾ ಕುಂಕುಮ ಇಟ್ಟು ಗೋರಗಂಬುಕ್ಕೆ ಏರಿಸಿ ಕಚಕ್ಕನೆ ಕಡಿಯೋ ಕೆಲ್ಸುಕ್ಕೆ ಈ ಮಲ್ಲಕ್ಕನ ಅಳಿಯ ಕೈವಾಡ ಮಾಡ್ತಿದ್ದ. ಕೈವಾಡ ಮಾಡೋದು ಅಂದ್ರೆ ಸುಮ್ನೇ ಅಲ್ಲಾ ಅದ್ಕೆಲ್ಲಾ ನ್ಯಾಕ್ ರ‍್ಬೇಕು, ರ‍್ಕೆ ವೊತ್ಕಂಡೋರು ವಾರಕ್ಕೆ ಮೊದ್ಲೇ ಇಂತಾ ದಿವ್ಸಾ ಮಾರಮ್ಮುನ್ಗೇ ಕ್ವಾಣಾ ಕಡೀತೀವಿ ನೀನು ಬಂದು ನಮ್ಮೂರಿಂದ ಕ್ವಾಣಾನ ವೊಡ್ಕಂಡು ವೋಗ್ಬೇಕು ಅಂತಾ ಸುದ್ದಿ ಕೊಡ್ತಿದ್ರು. ಆಗ ಮಲ್ಲಕ್ಕನ ಅಳಿಯ ಯಾರುನ್ನಾದ್ರು ಜತೆ ಮಾಡ್ಕಂಡು ಆ ರ‍್ಕೆ ಮಾಡ್ಕಂಡೋರ್ ರ‍್ಗೋಗಿ ಕ್ವಾಣಾನ ಗದುಮ್ಕಂಡು ಅವರ‍್ತಾವ ದುಡ್ ಇಸ್ಕಂಡು ಬತ್ತಾ ದರ‍್ಯಾಗೆ ಪರಮಾತ್ಮುನ ತೀರ್ಥ ತಗಂಡು ಸರೊತ್ತಾಗ್ಲಿ ಅಟ್ಟಿ ಸರ‍್ಕಂಡು ಒಂದ್ವಾರ ಆ ಕ್ವಾಣಾನ ಸೆನ್ನಾಗಿ ಮೆಯ್ಸಿ ರ‍್ಕೆ ವೊತ್ಕಂಡೋರು ಬರೋ ದಿನ ಗೊತ್ ಮಾಡ್ಕಂಡು ಕ್ವಾಣುಕ್ಕೆ ಮೈ ತೊಳ್ದು ಕೊಳ್ಗೇ ಬೇವಿನಸೊಪ್ಪು ಹಾರ ಮಾಡಿ ಕಟ್ಕಂಡು ಮಾರಮ್ಮುನ ಗುಡಿತಾಕೆ ವೊಡ್ಕಂಡು ರ‍್ತಿದ್ದ. ತನ್ನ ಕ್ವಾಣುಕ್ಕೆ ಮಾಡಿರೋ ಸಿಂಗಾರ ನೋಡಿ ರ‍್ಕೆ ವೊತ್ಕಂಡೋರು ಉಬ್ಬುಬ್ಬಿ ಉಬ್ಲು ಮೂಟೆ ಆಗಿ ಮಲ್ಲಕ್ಕನ ಅಳಿಯನ್ಗೇ ಹಿಡಿ ತುಂಬಾ ಕಾಸು ಕೊಟ್ಟು ಕುಸಿ ಪಡ್ತಿದ್ರು, ಕ್ವಾಣುನ್ ಅಂದಾ ಸೆಂದಾ ನೋಡಿ ಆ ಕ್ವಾಣುನ್ ಮಕುದ್ ಮ್ಯಾಗೆ ಮಾರಮ್ಮುನ್ ಕಂಡೋರಂಗೇ ಮೈ ಬಗ್ಸೀ ಕೈ ಮುಗ್ದು ಮಣ ಮಣಾಂತ ಏನೋ ಅಂದ್ಕೋಳ್ಳೊರು ಅವುರ್ ತುಟಿ ಮಾತ್ರ ಅಲ್ಲಾಡೋವು ಮಾತು ಕೇಳಿಸ್ತಿರಲಿಲ್ಲ. ಯಿಂಗೆ ಸಿಂಗಾರ ಮಾಡ್ಕಂಡು ಬಂದ ಕ್ವಾಣಾನಾ ಮಲ್ಲಕ್ಕನ ಅಳಿಯ ಕಂಕ್ಳಾಗೇ ಇಟ್ಕಂಡು ಬಂದಿದ್ದ ಫಳ ಫಳಾಂತ ಮಿಂಚ್ತಿದ್ದ ಮಚ್ಚಿನಿಂದ ಒಂದೇ ಏಟಿಗೆ ಕಚಕ್ ಅಂತಾ ಕತ್ತರಿಸ್ತಿದ್ದ. ರ‍್ಕೇ ವೊತ್ಕಂಡೋರು ಕ್ವಾಣಾನಾ ನ್ಯರ‍್ವಾಗಿ ಮಾರಮ್ಮುನ ಮಡಿಲಿಗೇ ರ‍್ಕೊಂಡೋದ್ಲೂ ಅಂತಾ ತಿಳ್ಕೊಂಡು ನಿಸೂರಾಗಿ ಅರ‍್ಗೇ ಅಂತಾ ತಂದಿದ್ದ ನಾಟಿ ಕೋಳಿ ಸಾರು ಮಾಡಿ ಮುತ್ತುಗದೆಲೆ ಹಾಕ್ಕಂಡು ಉಂಡು ಕೈಮುಗಿದು ವೋಗೋರು. ಮಲ್ಲಕ್ಕನ ಅಳಿಯನ ಜೊತೆ ಇನ್ನಾ ಐದಾರು ಜನ ಬಂದಿರೋರು ಎಲ್ಲಾರೂ ಸರ‍್ಕಂಡು ನೀಲಗಿರೀದೋ ಬಿದಿರಿಂದೋ ಗಳ ತಂದು ಕ್ವಾಣುದ್ ನಾಲ್ಕು ಕಾಲ್ನೂ ಹಗ್ಗದಿಂದ ಕಟ್ಟಿ ವೊತ್ಕಂಡು ದಾಸರಪಾಳ್ಯ ಕೆರೆ ಯಿಂದುಕ್ಕೆ ಜನ ಓಡಾಡ್ದೇ ಇರೋ ಜಾಗುಕ್ಕೆ ತಗಂಡೋಗಿ ಕುಯ್ದು ಬಾಡ್ನಾ ಪಾಲಾಕ್ಕಂಡು ಮನೀಗಿಷ್ಟಿಷ್ಟು ಅಂತಾ ಹಂಚ್ಕಂಡು ಆ ಬಾಡ್ನಲ್ಲಾ ಚೀಲುಕ್ಕಾಕ್ಕೊಂಡು ತಗಂಡೊದ್ರೇ ಮಲ್ಲಕ್ಕನ ಅಳಿಯ ಕೈವಾಡ ಮಡೋದ್ರಿಂದ ಇವುನ್ಗೇ ಒಂದು ಪಾಲು ಜಾಸ್ತಿ ಬತ್ತಿತ್ತು ಆ ಜಾಸ್ತಿ ಪಾಲ್ನಾ ಅತ್ತೆ ಮನೀಗೆ ಕಳುಸ್ತಿದ್ದ ಜತೇಗೆ ಕ್ವಾಣುನ್ ತಲೇನೂ ಮಲ್ಲಕ್ಕ ಸಿಂಬೆ ಇಟ್ಕಂಡು ಮೊದ್ಲೇ ಮನೀಗೆ ಸಾಗ್ಸಿರೋಳು. ಯಿಂಗೆ ಅಳಿಯ ಕೊಟ್ಟ ಕ್ವಾಣುನ್ ಬಾಡ್ನಾ ಇವಳು ಉದ್ದುದ್ದ ಕುಯ್ದು ಕತ್ತಾಳೆ ಸರಗಳಂತೆ ಮಾಡಿ ಒಣಗಿಸಿ ಅವು ಒಣಗಿದ ಮ್ಯಾಲೆ ಜ್ವಾಪಾನ ಮಾಡಿ ಬರಲು ಎರಡು ದಿನ ಬೇಕಿತು. ್ತ ಅದ್ಕೇ ಅವಳು ಸ್ವಾಮಾರ ಸಂಜೆ ಕಾಣೆಯಾದರೇ ಮತ್ತೆ ಊರೊಳಗೆ ಕಾಣಸಿಗುತ್ತಿದ್ದದ್ದು ಶುಕ್ರವಾರವೇ. ಅವಳು ಬಂಡೆಯ ಮ್ಯಾಲೆ ಇದ್ದರು ಕೂಡಾ ಊರಾಗಿನ ಯಾವ ವಿಷಯವೂ ಅವಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಗೋವಿಂದಪ್ಪನ ಮಗಳು ಬಂಡೆಯ ಹಿಂದೆ ಯಾವನೋ ಒಬ್ಬನ ಜತೆ ಲಲ್ಲೆ ಹೊಡೆಯುತ್ತಿದ್ದದ್ದನ್ನ ನೋಡಿದ್ಲು ಆವತ್ತಿನಿಂದ ಅವಳನ್ನು ಕಂಡಾಗಲೆಲ್ಲಾ ಮೈಮೇಲೆ ದೇವರೋ ದೆವ್ವವೋ ಒಟ್ನಲ್ಲಿ ಎರಡೂ ಒಟ್ಟಿಗೆ ಬಂದವಳಂತೆ ಗರಕ್ಕನೆ ತಿರುಗುವುದನ್ನು ರೂಢಿ ಮಾಡಿಕೊಂಡಿದ್ದಳು.
ಅಮರಾವತಿಯಲ್ಲಿ ಯಾವುದೇ ಮದುವೆ ಒಸಗೆ ಮೈನೆರೆದವರ ಕಾರ್ಯ ಏನೇ ಇರಲಿ ಮಲ್ಲಕ್ಕನ ಕಛೇರಿ ಇರಲೇಬೇಕಿತ್ತು ಅವುಳ್ನಾ ಯಾರೂ ಕರೆಯಬೇಕಿರಲಿಲ್ಲ “ ನನ್ನ ಮನೆಗೆ ನನ್ನ ಯಾರು ಕರೀಬೇಕು” ಎಂಬ ಪ್ರೀತಿ ಅವಳಲ್ಲಿತ್ತು. ಹೀಗೆ ಅಮರಾವತಿಯ ಮದುವೆಯೂ ಕೂಡಾ ಒಂದು ದಿನ ನೆರವೇರಿತು ಮಲ್ಲಕ್ಕ ಕೊಸರಾಡುವುದನ್ನು ಬಿಟ್ಟು ಮೈಕ್‌ಸೆಟ್ಟು ಹನುಮಂತಿ ತಂದಿಟ್ಟ ಸ್ಟಾö್ಯಂಡ್ ಮೈಕ್ನಾಗೇ ಅವತ್ತು ಸೋಬಾನೆ ಪದ ಹಾಡಿ ಕಣ್ಣೀರು ಹಾಕಿದ್ಲು.
ಅಮರಾವತಿಯ ಗಂಡ ತೋಡಲಬಂಡೆಯ ಮಾರಪ್ಪನ ಮಗ ಎಸ್ಸೆಲ್ಸಿ ಫೇಲಾದವ್ನು ದೊಡ್ಡಬಳ್ಳಾಪುರದಲ್ಲಿ ಮಗ್ಗ ಬಿಡೋಕೆ ಸರ‍್ಕಂಡು ಸಂಪಾದ್ನೇ ಮಾಡಿ ಸ್ವಂತ ಮನೆ ಕಟ್ಕಂಡಿದ್ದ ಜತೇಗೆ ನಾಲ್ಕು ಮನೆ ಬಾಡಿಗೇನೂ ಬತ್ತಿತ್ತು ವುಡ್ಗಾ ಬುದ್ವಂತಾ. ಗೋವಿಂದಪ್ಪನ ದೂರದ ಸಂಬಂಧಿಯಿಂದ ಕುದುರಿದ್ದ ಸಂಬಂಧವಾದ್ದರಿಂದ ಗೋವಿಂದಪ್ಪನಿಗೆ ನಿರಾಳವಾಗಿತ್ತು. ಕೈಮಗ್ಗದಲ್ಲಿ ಚೆನ್ನಾಗಿ ದುಡಿದು ಬುದ್ದಿವಂತನೆನೆಸಿಕೊಂಡಿದ್ದ ಹುಡುಗ ಅಳಿಯನಾಗಿ ಬಂದಿದ್ಕೇ ಸಂತೋಷ ಪಟ್ಟಿದ್ದ ಮಗಳು ಸುಖವಾಗರ‍್ತಾಳೆ ಅಂತಾ ನೆಮ್ಮದಿ ತಂದುಕೊಂಡಿದ್ದ.
ಅಮರಾವತಿ, ಗಂಡನ ಮನೆಗೆ ಹೋಗೋ ದಿನ ಮಲ್ಲಕ್ಕ ಬಂದು ಪದ ಹಾಡಿ ವೀಳ್ಯ ಈಸ್ಕೊಂಡು “ ಅಮ್ರಾ ಇನ್ಮೇಲಾದ್ರೂ ಮುಂಗಾಲ್ ಮ್ಯಾಲೇ ನಡಿಯೋದ್ನಾ ಬಿಡು, ಮುಚ್ಚಂಜೇ ವತ್ನಾಗೆ ಬಾಗ್ಲಾಗ್ ನಿಂತ್ಕಾ ಬ್ಯಾಡಾ.. ” ಅಂತಾ ಏನೇನೋ ಹೇಳಿ ಹಾರೈಸಿ ಹೋಗಿದ್ದಳು. ಅಮರಾವತಿಯ ಮೊದ¯ನೇ ಸಲದ ಹೆರಿಗೆ ಕೂಡಾ ಮಲ್ಲಕ್ಕಳೇ ಮಾಡಿಸಿದ್ದಳು ಅದಕ್ಕೆ ಬೇಕಾದ ಇನಾಮು ಕೂಡಾ ಪಡೆದಿದ್ದಳು. ನೋಡು ನೋಡುತ್ತಿದ್ದಂತೆ ಅಮರಾವತಿ ಎರಡು ಮಕ್ಕಳ ತಾಯಿಯಾದಳು ಮಲ್ಲಕ್ಕ ಮುದಿಯಾಗಿ ಮುಂಗೈ ಕಣ್ಣಿಗಡ್ಡವಿಟ್ಟುಕೊಂಡು ಯಾರು ಎಂದು ತಿಳಿಯದೇ ಕಕಮಕ ನೋಡಿ “ ಅಯ್ಯೋ ಇದರ ಮನೆಯಾಳಾಗ ವೋಗತ್ತ ಯಾರೋ ಏನೋ ಗುರ್ತು ಸಿಕ್ಕಲ್ಲ, ಅವರು ಮಾತಾಡಲ್ಲ” ಎಂದು ಗೊಣಗಾಡುತ್ತಿದ್ದಳು.
ಅಮರಾವತಿಯ ಗಂಡ ಈಗ ಎರಡು ಮಗ್ಗದ ಓನರ್ ಆಗಿದ್ದ ಹೆಂಡತಿಯ ಊರಿನ ಒಂದೆರಡು ಹುಡುಗರಿಗೂ ಕೆಲಸ ಕೊಟ್ಟು ಊರಳಿಯನಾಗಿದ್ದಕ್ಕೂ ಸಾರ್ಥಕವಾಯ್ತು ಗೋವಿಂದಪ್ಪನ ಅಳಿಯ ಅಪ್ಟ ಬಂಗಾರ ಅನ್ನೋ ಮಾತು ಕೇಳಿ ಗೋವಿಂದಪ್ಪ ಹಿಗ್ಗಿ ಹೀರೆಕಾಯಿ ಆಗುತ್ತಿದ್ದ. ಉಬ್ಬಿ ಉಬ್ಬಿ ಉಬ್ಬಲು ಮೂಟೆ ಆಗಬ್ಯಾಡಪ್ಪೋ ಗೋವಿಂದಪ್ಪ ಅವ್ನು ನನ್ನ ಅಳಿಯ ಅಂತಾ ಮಲ್ಲಕ್ಕ ಅವನನ್ನು ಕಿಚಾಯಿಸುತ್ತಿದ್ದಳು.
ಎರಡು ಮಕ್ಕಳ ತಂದೆಯಾದ ಗೋವಿಂದಪ್ಪನ ಅಳಿಯ ಮಕ್ಕಳ ಭವಿಷ್ಯಕ್ಕಾಗಿ ದಿನಾ ಎರಡು ಗಂಟೆ ಹೆಚ್ಚು ದುಡಿಯೋಕೆ ಶುರು ಮಾಡಿದ. ದಿನಾ ಹತ್ತು ಗಂಟೆಗೆ ಬರುತ್ತಿದ್ದವನು ಹನ್ನೆರಡಕ್ಕೆ ಬರುವಂತಾದ ಮುಂಜಾನೆ ಆರಕ್ಕೆ ಹೋಗುತ್ತಿದ್ದವನು ನಾಲ್ಕಕ್ಕೆ ಹೊರಟು ನಿಂತ ಅಮರಾವತಿಯ ನರನಾಡಿಗಳು ನುಡಿಯುವ ಸಮಯದಲ್ಲಿ ಇವನು ಮಗ್ಗದ ಲಾಳಿ ಹಿಡಿದು ನೇಯಲು ಕುಳಿತಿರುತ್ತಿದ್ದ. ಮಗ್ಗದಲ್ಲಿನ ಸೀರೆಗಳೇನೋ ಬಣ್ಣ ಬಣ್ಣದ ದಾರಗಳಿಂದ ವಿಧವಿಧವಾದ ಚಿತ್ರಗಳನ್ನು ಪೋಣಿಸಿಕೊಂಡು ಕಣ್ಮನ ಸೆಳೆಯುತ್ತಿತ್ತು.
ಅಮರಾವತಿಯ ಚಿತ್ತದೊಳಗಿನ ಬಣ್ಣಬಣ್ಣದ ಕನಸುಗಳು ನೇಯುವವರಿಲ್ಲದೇ ವಿಕಾರ ರೂಪ ತಾಳುತ್ತಿದ್ದವು. ಅವುಗಳದ್ದೇ ಬೇಕಾದ ರೀತಿಯಲ್ಲಿ ಚಿತ್ರಗಳಾಗಿ ದಿಕ್ಕು ದಿಕ್ಕಿನೆಡೆ ಮೈಚಾಚಿ ಮಲಗುತ್ತಿದ್ದವು. ಒಮ್ಮೊಮ್ಮೆ ಬೀದಿಯೆಡೆ ನೋಡಿದರೆ, ಮತ್ತೊಮ್ಮೆ ನೇಯ್ದ ಸೀರೆಗಳನ್ನು ಮನೆಗೆ ತರುತ್ತಿದ್ದ ಹುಡುಗರೆಡೆಗೆ ಅವಳ ಕನಸುಗಳು ಕೈಚಾಚುತಿದ್ದವು. ನಾಲ್ಕು ಗೋಡೆಗಳ ಮಧ್ಯೆ ಆ ಗೋಡೆಯಿಂದ ಈ ಗೋಡೆಗೆ ಈ ಗೋಡೆಯಿಂದ ಆ ಗೋಡೆಗೆ ಬಡಿಬಡಿದು ತಾಕಲಾಡುತ್ತಿದ್ದ ಅವಳ ಬಯಕೆಗಳು ಪಕ್ಕದ ಮನೆಯ ಹೊಸ್ತಿಲು ದಾಟಿ ಮಕಾಡೆ ಮಲಗಿದ್ದವು. ಅಮರಾವತಿ ಸುಖವಾಗಿ ಬೆಳೆದಿದ್ದವಳು ಗಂಡನಿಗಿಂತ ಹತ್ತು ವರ್ಸ ಚಿಕ್ಕೋಳು ಉಕ್ಕಿ ಕುಣಿಯೋ ಆಸೆಗಳ್ನಾ ಹೆಂಗ್ ತಾನೇ ತಡ್ಕಂಡಾಳು. ಎರಡು ಮಕ್ಳು ಜೀವ್ನಾ ಸೆನ್ನಾಗರ‍್ಬೇಕು ಅಂತೇಳಿ ದುಡಿಯೋ ಕಡೇ ಗಮ್ನಾ ಕೊಟ್ಟೋನ್ಗೇ ಅಮರಾವತಿ ಗಮ್ನಾ ಎಲೈತೇ ಅನ್ನೋದು ಇವುನ್ಗೇ ಗೊತ್ತೇ ಆಗ್ಲಿಲ್ಲಾ. ಸಣ್ಣುಡುಗಿದ್ದಾಗ್ಲಿಂದಾ ದುಡ್ದೂ ದುಡ್ದೂ ರಸ ಯಿಂಡಿದ್ ಕಬ್ಬಾದಂಗಾಗಿದ್ದ, ಗಾಣದ ಸುತ್ತಾ ಮೂಗೆತ್ತು ತರ‍್ಗಿದಂಗೇ ಮನೇಗೆ ಅಲ್ಲಿಂದ ಮಗ್ಗದ ಮನೇಗೆ ತಿರುಗ್ತಿದ್ನೇ ವರ‍್ತು ಮನೇಲೀರೊ ಹೆಂಡ್ತೀ ಮನಸೆಂಬೋ ಗಾಣದೊಳಗೆ ಏನೈತೆ ಅಂತಾ ತಿಳ್ಕೊಳ್ದೇ ಸೋತೋಗಿದ್ದ. ಅಮರಾವತಿಯ ಮನಸ್ಸು ಮೆಲ್ಲಗೇ ಬೀದಿ ಕಡೇ ವಾಲೋಕೆ ಮೊದಲ್ಗೊಂಡು ಮುಚ್ಚಂಜೆ ವೊತ್ನಾಗೇ ಮುಂಬಾಗ್ಲಾಗೇ ಮುಂಗಾಲಿನ ಮ್ಯಾಲೇ ನಿಂತ್ಕಳೋಕೆ ಸುರು ಮಾಡಿದ್ಲು ರಂಗೋಲಿ ರಾಣಿಯಾದ್ಲು.
ಅಮರಾವತಿಯ ಗಂಡ ಅವತ್ತು ವೊತ್ತೀಲೇನೆ ಮಸ್ಲು ಮಸ್ಲಿಗೇ ಎದ್ದು ಹೋದೋನು, ಮಗ್ಗದ ಮನೆಯ ಬೀಗದ ಕೈಗಳನ್ನು ದಿಂಬಿನ ಕೆಳಗೆ ಇಟ್ಟು ಮರೆತು ಬಂದದ್ದನ್ನು ನೆನಪು ಮಾಡಿಕೊಂಡು ರ‍್ಧ ದಾರಿಗೆ ಹೋಗಿದ್ದವನು ಮತ್ತೆ ಮನೆಗೆ ಬಂದ. ಬಾಗಿಲು ಬಡಿದ, ಜೋರಾಗಿ ಕೂಗಿದ ಅವಳ ಬೆತ್ತಲೆ ಎದೆ ಕ್ಷಣ ನಡುಗಿತು ಅವಳೆದೆ ಮೇಲಿದ್ದ ಕೈಗಳು ಸರಕ್ಕನೆ ಮಾಯವಾದವು ತಡವರಿಸುತ್ತಾ ಬಂದು ಬಾಗಿಲು ತೆರದಳು “ ಏನೇ ಇಷ್ಟೊತ್ತು ಬೇಕಾ ಬಾಗ್ಲು ತೆಗೀಯಾಕೆ, ದಿಂಬಿನ ಕೆಳಗೆ ಬೀಗ ಐತೆ ತಕಂಬಾ” ಎಂದು ಒಳಗೆ ಬಂದವನನ್ನು ಬೆತ್ತಲೆ ದೇಹವೊಂದು ಬಲವಾಗಿ ಇವನನ್ನು ತಳ್ಳಿಕೊಂಡು ಆಚೆ ಹೋದಂತಾಯಿತು.
ಅಮರಾವತಿಯ ಗಂಡನ ತಲೆ ಸಾವಿರ ಹೋಳಾದಂತಾಯಿತು, ಯಾರೋ ಗಡಪಾರಿಯಿಂದ ಅವನ ಎದಯನ್ನು ತಿವಿದು ಬಗೆದು ತೆಗೆದಂತಾಯಿತು, ರಕ್ತವೆಲ್ಲಾ ತಣ್ಣಗಾಗಿ ಸತ್ತೋದಂಗನುಸ್ತು ಕುಸಿದು ಬಿದ್ದ, ತಕ್ಷಣವೇ ಎದ್ದ, ಬೀಸಿ ಕಪಾಳ ಕಿತ್ತೋಗಂಗೇ ಚಟೀರ್ ಅಂತಾ ಒಂದು ಹೊಡೆದ, ಅಮರಾವತಿಯ ಜುಟ್ಟು ಹಿಡಿದು ಮಂಚಕ್ಕೆ ತಳ್ಳಿ ಮಾತಾಡಲು ಬಾಯಿ ಬರುತ್ತಿಲ್ಲ ಭೂಮಿಯೇ ಕುಸಿದಂತೆ ಅವನು ನಿತ್ರಾಣನಾದವನಂತೆ ಸೋತು ಕುಳಿತ. ದೀರ್ಘವಾದ ಮೌನದ ನಂತರ ಕಣ್ಣುಬಿಟ್ಟ
ಅವಳು ಏನೋ ನರ‍್ಧಾರ ಮಾಡಿದವಳಂತೆ ಕೆದರಿದ್ದ ಕೂದಲನ್ನು ಗಂಟು ಕಟ್ಟಿಕೊಂಡು ಬಾಗಿಲನ್ನು ದಢಾರನೆ ತೆರದು ಸರ ಸರನೇ ಹೊರಟು ಬಿಟ್ಟಳು ಏನಾಗುತ್ತಿದೆ ಎಂದು ಇವನು ತಿಳಿಯುವಷ್ಟರಲ್ಲಿ ಅಮರಾವತಿಯು ಐನೂರು ಹೆಜ್ಜೆ ಮುಂದೆ ಹೋಗಿದ್ದಳು. ಇವನು ಮಲಗಿದ್ದ ಮಕ್ಕಳನ್ನು ಕಂಕುಳಲ್ಲಿ ಹಾಕಿಕೊಂಡು ಅವಳನ್ನು ನಿಲ್ಲುವಂತೆ ಕೂಗಿ ಕರೆಯುತ್ತಾ ಹೆಚ್ಚು ಕಡಿಮೆ ಓಡಿದ, ಅವನು ಅವಳನ್ನು ಹಿಡಿಯುವಷ್ಟರಲ್ಲಿ ಅವಳ ಬಲಗಾಲು ಪೊಲೀಸ್ ಠಾಣೆಯ ಒಳಗಿತ್ತು.
ಆಗ ತಾನೇ ಕೂತಿದ್ದ ಕುರ್ಚಿಯ ಮೇಲೆಯೇ ಬಾಯಿ ತೆರೆದುಕೊಂಡು ನಿದ್ದೆಗೆ ಜಾರಿದ್ದ ದಫೇದಾರಪ್ಪ ಇವರ ಗದ್ದಲದಿಂದ ಬೆಚ್ಚಿ ಬಿದ್ದು “ ಥೂ ಯಾವೊನಲೇ ಅವ್ನು ಈಟೊತ್ನಾಗೆ, ಲೇಯ್ ಸೆಂಟ್ರಿ ಏನು ಮಾಡ್ತಿದೀಯೋ ಯಾರೋ ಇವ್ರೂ ದನ ನುಗ್ಗಿದಂಗೆ ನುಗ್ತಾರೆ ಲೇಯ್, ಏ.. ಮುಚ್ಚಮ್ಮ ಬಾಯಿ, ಏಯ್ ಯಾರೋ ನೀನು ಸರೋತ್ನಾಗೆ ಒಂಟಿ ಯೆಂಗ್ಸು ಅಂತಾ ಯಿಂದೆ ಬಿದ್ದಿದಿಯೆನೋ ಬೋಸುಡಿಕೆ ಒದ್ರೆ ಕಳ್ಳುಪಚ್ಚಿ ಎಲ್ಲಾ ಆಚೆ ಬಂದ್ಬಿಡ್ಬೇಕು” ಎಂದು ಅಬ್ಬರಿಸಿದವನೇ ಮೈಮೇಲೆ ಇದ್ದ ರಗ್ಗನ್ನು ಝಾಡಿಸಿ ಎದ್ದ ನಿಂತ. ದಫೇದಾರಪ್ಪ ಮಲಗಿರೋದನ್ನ ಖಾತ್ರಿ ಪಡಿಸಿಕೊಂಡು ತಾನು ಕೂಡಾ ಒಂದು ಮೂಲೆಯಲ್ಲಿ ಬಂದೂಕನ್ನು ಎರಡು ಕಾಲುಗಳ ಮದ್ಯೆ ಇಟ್ಟುಕೊಂಡು ನಿದ್ದೆಗೆ ಜಾರಿದ್ದ ಸೆಂಟ್ರಿ ಪಿ. ಸಿ. ಯು ಕೂಡಾ ದಡಬಡಾಯಿಸಿ ಬಂದವನೇ ನಿದ್ದೆಗೆಡಿಸಿದ್ದುಕ್ಕೂ ದಫೇದಾರಪ್ಪ ಬೈದಿದ್ಕೂ ತನ್ ಶಕ್ತಿ ಎಲ್ಲಾ ಬಿಟ್ಟು ಅಮರಾವತಿಯ ಗಂಡನ ಎಕ್ಸಿರದ ಮೇಲೆ ಒಂದು ಗುದ್ದು ಗುದ್ದಿದ ಅಮರಾವತಿಯ ಗಂಡ ಗುಂಯ್ಕ್ ಅಂದು ಕುಸಿದು ಕುಂತಾ.
ಅಮರಾವತಿ ಮತನಾಡಿದಳು “ಸ್ವಾಮಿ ಅವರನ್ನು ವಡೀಬೇಡಿ ಮನೆಗೆ ವೋಗಾಕೆ ಯೇಳಿ” ಎಂದು ಹೇಳಿ ಸುಮ್ಮನಾದಳು. ದಫೇದಾರಪ್ಪನಿಗೆ ಏನೂ ರ‍್ತವಾಗದೇ ಅಮರಾವತಿಯ ಗಂಡನ ಮುಖ ನೋಡಿದ ಅವನು ನಡೆದ ಕತೆಯನ್ನೆಲ್ಲ ಹೇಳಿದ ಕಂಕುಳಲ್ಲಿದ್ದ ಮಗುವನ್ನು ಕೂಡಾ ತೋರಿಸಿದ. ಎಲ್ಲವನ್ನೂ ಕೇಳಿದ ದಫೇದಾರಪ್ಪ ಸಾವಧಾನವಾಗಿ ಪರಿಸ್ತಿತಿಯನ್ನು ಅರಿತುಕೊಡು ಏನು ಹೇಳಬೇಕೋ ತಿಳಿಯದೇ ಸ್ವಲ್ಪ ಹೊತ್ತು ಮಗುವಿನ ಮುಖ ನೋಡುತ್ತಾ ಕುಳಿತು ಬಿಟ್ಟ. ತಾನು ಹೊಡೆಯಬಾರದಿತ್ತು ಎಂದು ತಪ್ಪಿತಸ್ತನಾಗಿ ಸೆಂಟ್ರಿ ಪಿಸಿಯು ಸುಮ್ಮನೇ ನಿಂತು ಬಿಟ್ಟ.
ನಿಧಾನವಾಗಿ ಮಾತನಾಡಲಾರಂಭಿಸಿದ ದಫೇದಾರಪ್ಪ “ ನೋಡಮ್ಮ ಇಷ್ಟೊತ್ನಲ್ಲಿ ನೀನು ಹಿಂಗೆಲ್ಲಾ ಬರಬಾರದು ಏನೇ ಸಮಸ್ಯೆ ಇದ್ದರು ಬೆಳಿಗ್ಗೆ ಮಾತಾಡಾನ ಈಗ ಇಬ್ರೂ ಮನೇಗೆ ವೋಗ್ರಿ ವೊತ್ತಿಲಿಕ್ಕೆ ನಿಮ್ಮ ತಂದೆ ತಾಯಿಗಳ್ನ ಕರ‍್ಕೊಂಡು ರ‍್ರೀ, ಇಲ್ಲಾ ನೀವೇ ಕುಂತು ತೀರ್ಮಾನ ಮಾಡ್ಕಳಿ ಎಂದು ಹೇಳಿ ಮುಗಿಸುವಷ್ಟರಲ್ಲಿ ಆಮರಾವತಿಯ ಬಾಯಿಯಿಂದ “ ನಾನು ವೋಗಲ್ಲ” ಎಂಬ ದೃಢ ನಿರ‍್ಧಾರದ ಮಾತು ಬಾಣದಂತೆ ಬಂದಿದ್ದು ನೋಡಿ ದಫೇದಾರಪ್ಪನಿಗೆ ಪೀಕಲಾಟಕ್ಕೆ ಇಟ್ಟುಕೊಂಡಿತು, “ ನೋಡಮ್ಮ ಗಂಡ ಯೆಂಡ್ರು ಮದ್ಯೆ ಒಂದ್ಮಾತು ಬತ್ತದೆ ವೋತದೆ ಅದ್ಕೆಲ್ಲಾ ಯಿಂಗೆ ಇಷ್ಟೊತ್ನಾಗೆ ಮನೆ ಬಿಟ್ಟು ಬತ್ತಾರ ಯೇಳು, ನಾವು ಪೊಲೀಸ್ನೋರು ಸಂಸಾರಗಳ್ನ ಒಡಿಯೊಕಲ್ಲ ಇರಾದು, ಗಂಡ ಯೆಂಡ್ರು ಜಗಳ ಉಂಡು ಮಲ್ಗೋತನ್ಕ ಅನ್ನೋ ಗಾದೆ ಗೊತ್ತಿಲ್ವೇ, ಆದರೆ ನೀವು ಉಂಡು ಮಲಗಿದ್ಮೇಲೂ ಜಗಳ ಮಾಡ್ಕೊಂಡು ಬಂದಿದೀರ ಅಂದ್ರೆ… ” ಅಮರಾವತಿ ಮತ್ತೆ ಸಿಡಿದಳು “ ಅಲ್ವಾ ಸ್ವಾಮಿ, ನಾನು ಉಂಡು ಮಲಗೋದು ಇವನಿಗೇ ಗೊತ್ತೇ ಇಲ್ಲಾ, ನನ್ನ ಬಾವನೆಗಳೇನೂ ಅಂತಾ ಅರ‍್ತಾನೆ ಮಾಡ್ಕಂಡಿಲ್ಲ, ನಾನು ಇವನ ಜತೆ ಬಾಳಲ್ಲ, ಇವನ ಹಣ ಆಸ್ತಿ ಅಂತಸ್ತು ಇವನೇ ಇಟ್ಕಂಡ್ಲಿ ಇವನ ದುಡಿಮೆ ಯಾರಿಗಾದ್ರೂ ಕೊಡ್ಲೀ ಇವನು ನನ್ನಿಂದೆ ಬರ‍್ಕೂಡ್ದು ನನಗೆ ನನ್ನ ಮನಸಿಗೆ ಹಿಡಿಸಿದವನು ಯಾರೋ ಅವನ ಜತೆ ವೋಗ್ತೀನಿ ಅಂದವಳೇ ಬಿರುಗಾಳಿಯಂತೆ ನುಗ್ಗಿ ಕತ್ತಲಲ್ಲಿ ಕರಗಿ ಹೋದಳು.
ಬೆಪ್ಪನಂತೆ ನಿಂತು ತಬ್ಬಿಬ್ಬಾದ ಅಮರಾವತಿಯ ಗಂಡನನ್ನು ನೋಡಿದ ದಫೇದಾರಪ್ಪ ಅವನ ಹೆಗಲ ಮೇಲೆ ಕೈಹಾಕಿ “ ತಮ್ಮಾ, ಅಷ್ಟೇ ಅವಳಿಗೂ ನಿನಗೂ ಇದ್ದ ಋಣಾ ವೋಗು ನೀನು ಮೈಮೂಳೆ ಮುರ‍್ಕಂಡು ದುಡಿಯೋದು ಮುಖ್ಯ ಅಲ್ಲಪ್ಪಾ ಅವಳ ಮೈಮೂಳೆ ಮುರೀಬೇಕು ಯಾವಾಗ, ಎಲ್ಲಿ ಹೆಂಗೇ ಅನ್ನೋದು ನಿನಗೆ ಗೊತ್ತಿದ್ದಿದ್ರೆ ಈಗ ಈ ಥರಾ ನಿಂತ್ಕೋಬೇಕಾದ ಪರಿಸ್ಥಿತಿ ಬತ್ತಾ ಇರಲಿಲ್ಲ” ಎಂದು ಹೇಳಿ ಅಮರಾವತಿಯ ಗಂಡನನ್ನು ಹೋಗುವಂತೆ ಕೈ ಸನ್ನೆ ಮಾಡಿದ ದಪೇದಾರಪ್ಪ ರಗ್ಗನ್ನು ಹೊದ್ದುಕೊಂಡು ನಿದ್ದೆಗೆ ಜಾರಿದ.
-ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ.