ನಿಮ್ಮ ಮಕ್ಕಳು.. ನೀವೇ ಹೊಣೆ !!!: ನಾಗಸಿಂಹ ಜಿ ರಾವ್

‘ ಸಾರ್ ನಮ್ಮ ಮಕ್ಕಳನ್ನ ಶಾಲೆಯಿಂದ ಹೊರಗಡೆ ಹಾಕಿದ್ದಾರೆ, ಸಹಾಯ ಮಾಡಿ ಸಾರ್ ”
ಹೀಗೆ ಪೋಷಕರ ಕರೆ ಬಂತು, ಸುಮಾರು ಎಂಟು ಜನ ಏಳನೇ ತರಗತಿಯ ಮಕ್ಕಳನ್ನು ಸರಿಯಾಗಿ ಓದು ಬಾರದವರು ಎಂದು ವಸಂತನಗರದ ಸರಸ್ವತಿ ಶಾಲೆಯಿಂದ ಹೊರಗಡೆ ಕಳಿಸುವ ತೀರ್ಮಾನವನ್ನ ಶಾಲೆಯ ಆಡಳಿತ ಮಂಡಳಿ ಮಾಡಿದ್ದರು. ಪೋಷಕರನ್ನು ಕರೆದು ಟಿಸಿ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದರು. ಕೆಲವು ಪೋಷಕರಿಗೆ ಟಿಸಿ ಕೊಟ್ಟುಬಿಟ್ಟಿದ್ದರು. ಈ ಮಕ್ಕಳಿಗೆ ಓದಲು ಬರುವುದಿಲ್ಲ ಎಂದು ಸರಸ್ವತಿ ಶಾಲೆಯಿಂದ ಹೊರಗಡೆ ಹಾಕಿದ್ದಾರೆ ನಾವೂ ಈ ಮಕ್ಕಳನ್ನು ತೆಗೆದು ಕೊಳ್ಳುವುದಿಲ್ಲ ಎಂದು ಹತ್ತಿರದ ಇತರ ಶಾಲೆಗಳೂ ಈ ಪೋಪಷಕರಿಗೆ ತಿಳಿಸಿದ್ದವು. ಮಕ್ಕಳ ಶಿಕ್ಷಣದ ಬಗ್ಗೆ ತಲೆಕೆಡಿಸಿಕೊಂಡ ಪೋಷಕರಿಗೆ ಬೇರೆ ದಾರಿ ತಿಳಿಯದೆ ನನಗೆ ಕರೆ ಮಾಡಿದ್ದರು.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ರ ವಿಭಾಗ ೧೬ ರ ಪ್ರಕಾರ ಶಾಲೆಯಲ್ಲಿ ಎಂಟನೇ ತರಗತಿಯವರೆಗೂ ಯಾವುದೇ ಕಾರಣಕ್ಕೂ ನಪಾಸು ಮಾಡುವಂತಿಲ್ಲ, ಶಾಲೆಯಿಂದ ಹೊರಗೆ ಕಳಿಸುವಂತಿಲ್ಲ. ಸರಸ್ವತಿ ಶಾಲೆಯವರು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡುವುದಲ್ಲದೆ ಶಿಕ್ಷಣ ಹಕ್ಕು ಕಾಯಿದೆಯ ಉಲ್ಲಂಘನೆಯನ್ನೂ ಸಹ ಮಾಡಿದ್ದರು. ನನಗೆ ಬೇಸರವಾಯಿತು. ತಕ್ಷಣ ಮಕ್ಕಳಹಕ್ಕುಗಳ ಆಯೋಗಕ್ಕೆ ದೂರು ಬರೆದು ಕಳಿಸಿಬಿಟ್ಟೆ. ನಂತರ ಈ ವಿಚಾರದ ಬಗ್ಗೆ ನ್ಯಾಯಾಲಯಕ್ಕೆ ಹೋಗೋಣ ಎಂದು ಪೋಷಕರಿಗೆ ತಿಳಿಸಿ ವಕೀಲರೊಂದಿಗೂ ಮಾತಾಡಿದೆ. ನ್ಯಾಯಾಲಯದಲ್ಲಿ ಪ್ರಕರಣ ಧಾಖಲಿಸಲು ಸಿದ್ದತೆಗಳು ನಡೆಯತೊಡಗಿದವು.

ಎರಡು ದಿನಗಳ ನಂತರ ಮಕ್ಕಳ ಹಕ್ಕುಗಳ ಆಯೋಗದಿಂದ ನನಗೆ ಕರೆ ಬಂತು. ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಆಯೋಜನೆಯಾಗಿದ್ದ ಶಿಕ್ಷಣ ಹಕ್ಕು ಸಾರ್ವಜನಿಕ ವಿಚಾರಣೆಯ ಕಾರ್ಯಕ್ರಮಕ್ಕೆ ಸರಸ್ವತಿ ಶಾಲೆಯ ಪ್ರಕರಣವನ್ನು ಆಯ್ಕೆ ಮಾಡಿಕೊಂಡಿದ್ದರು. ಶಿಕ್ಷಣ ತಜ್ಞರೊಬ್ಬರು ಹಾಗೂ ಇಬ್ಬರು ನ್ಯಾಯಾಧೀಶರು ಸಾರ್ವಜನಿಕ ವಿಚಾರಣೆ ನಡೆಸುವವರಿದ್ದರು. ಸಾರ್ವಜನಿಕ ವಿಚಾರಣೆ ಕೆಂಪೇಗೌಡ ರಸ್ತೆಯಲ್ಲಿರುವ ಶಿಕ್ಷಕರ ಸದನದಲ್ಲಿ ಆಯೋಜನೆಯಾಗಿತ್ತು. ದೊಡ್ಡ ಸಭಾಂಗಣ, ಸುಮಾರು ೫೦೦ ಜನರು ಕುಳಿತುಕೊಳ್ಳಬಹುದಾದ ಅತಿ ದೊಡ್ಡ ಸಭಾಂಗಣ, ತಪ್ಪದೆ ಸಾರ್ವಜನಿಕ ವಿಚಾರಣೆಗೆ ಹಾಜರಾಗಿ ಸರಸ್ವತಿ ಶಾಲೆಯವರು ಮಕ್ಕಳಿಗೆ ಮಾಡಿರುವ ಅನ್ಯಾಯ ಹಾಗೂ ನಿಮಗೆ ಮಾಡಿರುವ ಮಾನಸಿಕ ನೋವನ್ನು ಹೇಳಿ ಎಂದು ಪೋಷಕರಿಗೆ ತಿಳಿಸಿದ್ದೆ. ಎಂಟು ಮಕ್ಕಳ ಪೋಷಕರು ತಾವು ತಪ್ಪದೇ ಹಾಜರಾಗುವುದಾಗಿ ತಿಳಿಸಿದರು.

ಮಕ್ಕಳ ಹಕ್ಕುಗಳ ಆಯೋಗದವರು ಸರಸ್ವತಿ ಶಾಲೆ ಆಡಳಿತ ಮಂಡಳಿಗೆ, ಶಿಕ್ಷಣ ಅಧಿಕಾರಿಗಳಿಗೆ, ಹಾಗೂ ಶಿಕ್ಷಣ ಇಲಾಖೆಗೆ ನೋಟಿಸ್ ಕಳಿಸಿ ಸಾರ್ವಜನಿಕ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಸಾರ್ವಜನಿಕ ವಿಚಾರಣೆಯ ದಿನ ಬಂದೇ ಬಿಟ್ಟಿತು. ಶಿಕ್ಷಕರ ಸದನ ಕಿಕ್ಕಿರಿದು ತುಂಬಿತ್ತು. ಹೇಗೋ ದಾರಿಮಾಡಿಕೊಂಡು ಒಳಗೆ ಪ್ರವೇಶ ಮಾಡಿದೆ. ಶಿಕ್ಷಕರು, ಪೋಷಕರು, ಕೆಲವು ಮಕ್ಕಳು ಹಾಗೂ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾಸಂಸ್ಥೆಗಳ ಸದಸ್ಯರು ಹಾಜರಿದ್ದರು. ಜೊತೆಗೆ ಮಾಧ್ಯಮ ಮಿತ್ರರು. ವೇದಿಕೆಯಮೇಲೆ ಮೂವರು ನ್ಯಾಯಾಧೀಶರು ಕುಳಿತಿದ್ದರು, ನ್ಯಾಯಾಲಯದಂತೆಯೇ ದೂರು ದಾಖಲಿಸಿದ್ದವರನ್ನು ಹಾಗೂ ಆಪಾದನೆ ಹೊತ್ತಿದ್ದವರನ್ನು ಕೂಗಿ ಕರೆದು ಇಬ್ಬರನ್ನೂ ವಿಚಾರಿಸಿ, ಪ್ರಕರಣವನ್ನು ಶಿಕ್ಷಣ ಹಕ್ಕು ಕಾಯಿದೆಯ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಿ ತೀರ್ಪು ನೀಡುತ್ತಿದ್ದರು,

ಸರಸ್ವತಿ ಶಾಲೆಯ ಮಕ್ಕಳ ಪೋಷಕರಿಗೆ ಕರೆ ಮಾಡಿದರೆ ಯಾವುದೇ ಪೋಷಕ ಫೋನ್ ತೆಗೆಯಲೇ ಇಲ್ಲ, ಮೆಸೇಜ್ ಮಾಡಿದರೆ ಪ್ರತಿಕ್ರಿಯೆ ಇಲ್ಲ. ಏನಪ್ಪಾ ಮಾಡೋದು ಅನ್ನೋ ಚಿಂತೆ ಶುರು ಆಯಿತು. ”ನಾಗಸಿಂಹ vs ಸರಸ್ವತಿ ಸ್ಕೂಲ್ ” ಎಂದು ಮೂರೂ ಸಾರಿ ಕೂಗಿದರು. ದೂರು ನನ್ನ ಹೆಸರಲ್ಲಿ ಇದ್ದರಿಂದ ನಾನೆ ಉತ್ತರ ನೀಡಬೇಕಿತ್ತು. ಸರಸ್ವತಿ ಶಾಲೆಯ ಆಡಳಿತ ಮಂಡಳಿಯಿಂದ ಆರು ಜನ ಬಂದಿದ್ದರು, ಶಿಕ್ಷಣಧಿಕಾರಿಗಳು ಇದ್ದರು. ವೇದಿಕೆಗೆ ನಡುಗುವ ಕಾಲುಗಳಿಂದಲೇ ಹತ್ತಿದೆ. ನಾನು ಕಳುಹಿಸಿದ ದೂರನ್ನು ಆಯೋಗದ ಸದಸ್ಯರು ಜೋರಾಗಿ ಓದಿದರು. ನಂತರ ನ್ಯಾಯಾಧೀಶರಿಂದ ಪ್ರಶ್ನೆಗಳು ಶುರುವಾಯಿತು.

ಮೊದಲ ಪ್ರಶ್ನೆ ನೀವು ಯಾರು ? ಪೋಷಕರೆಲ್ಲಿ ? ನನ್ನ ಪರಿಚಯ ಮಾಡಿಕೊಂಡು ಪ್ರಕರಣ ಏನು ಎಂಬುದನ್ನು ವಿವರಿಸಿದೆ, ಸರಸ್ವತಿ ಶಾಲೆಯವರು ಈ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ, ಪೋಷಕರಿಂದ ಹಣ ಪಡೆದು ಶಾಲೆಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ಕೂಗಿದರು. ಪೋಷಕರು ಯಾಕೆ ಬಂದಿಲ್ಲ ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರ ಇರಲಿಲ್ಲ. ನನ್ನ ಅದೃಷ್ಟಕ್ಕೆ ಸರಸ್ವತಿ ಶಾಲೆಯವರು ನಿಮ್ಮ ಮಕ್ಕಳನ್ನು ಹೊರಗೆ ಕಳುಹಿಸುತ್ತಿದ್ದೇವೆ ಎಂದು ಬರೆದ ಪತ್ರವಿತ್ತು ಅದನ್ನು ನ್ಯಾಯಾಧೀಶರಿಗೆ ತೋರಿಸಿದೆ. ಶಾಲೆಯವರು ಅದನ್ನು ಒಪ್ಪಲಿಲ್ಲ. ಸುಳ್ಳು ಎಂದರು.

ನ್ಯಾಯಧೀಶರೊಂದಿಗಿದ್ದ ಶಿಕ್ಷಣ ತಜ್ಞರಿಗೆ ನನ್ನ ಪರಿಚಯ ಇತ್ತು. ಪೋಷಕರಿಲ್ಲದೆ ಈ ಪ್ರಕರಣ ಬಗೆ ಹರಿಯುವುದಿಲ್ಲ. ಪೋಷಕರ ಪ್ರತಿನಿದಿ ನೀವು ಎಂದು ಒಂದು ಪತ್ರವಾದರೂ ಬೇಕಾಗುತ್ತದೆ. ಸುಮ್ಮನೆ ಹೀಗೆ ಬಂದರೆ ಸಾರ್ವಜನಿಕ ವಿಚಾರಣೆಯ ಸಮಯ ವ್ಯರ್ಥ ಮಾಡಿದಂತೆ ಆಗುತ್ತದೆ ಎಂದರು. ಪೋಷಕರು ಬರಲಿ ಎಂದು ನ್ಯಾಯಾಧೀಶರು ತಿಳಿಸಿದರು. ಸರಸ್ವತಿ ಶಾಲೆಯ ಆರು ಮಂದಿ ನನ್ನನ್ನು ಸುತ್ತುವರೆದು ‘ನಿನ್ನ ಸುಮ್ಮನೆ ಬಿಡಲ್ಲ, ನಿನ್ನ ಮೇಲೆ ಮಾನನಷ್ಟ ದೂರು ಕೊಡ್ತೀವಿ ” ಎಂದು ಬೆದರಿಸಿ ಹೋದರು.

ಮಾರನೇ ದಿನ ”ಸಾರ್ವಜನಿಕ ವಿಚಾರಣೆಯಲ್ಲಿ ಕಾರ್ಯಪಡೆಯ ಸಂಚಾಲಕರಿಗೆ ಮುಖಬಂಗ ” ಎಂದು ಕೆಲವು ಪತ್ರಿಕೆಗಳು ವರದಿ ಮಾಡಿದ್ದವು. ನಮಗೆ ಸಹಾಯ ಮಾಡಲು ಬಂದ ವ್ಯಕ್ತಿಗೆ ನಮ್ಮಿಂದ ಅವಮಾನವಾಗಿದೆ ಆತನಿಗೆ ಕರೆ ಮಾಡಿ ಕ್ಷಮೆ ಕೇಳಬೇಕು ಎಂದು ದೂರುದಾರ ಪೋಷಕರಿಗೆ ಅನ್ನಿಸಲೇ ಇಲ್ಲ. ನನ್ನ ಅದೃಷ್ಟ ಸರಸ್ವತಿ ಶಾಲೆಯವರು ನನ್ನ ಮೇಲೆ ಮಾನನಷ್ಟ ದೂರು ದಾಖಲಿಸಲಿಲ್ಲ.

ಮೇಲಿನ ಘಟನೆ ನಡೆದು ಎರಡು ವಾರ ಕಳೆದಿರಲಿಲ್ಲ ದೊಮ್ಮಲೂರು ಬಳಿಯ ಕೇರಳದ ಮಾಲೀಕತ್ವದ ಶಾಲೆಯ ವಿದ್ಯಾರ್ಥಿಗಳ ಪೋಷಕರಿಂದ ಕರೆ ಬಂತು, ಆ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಯೊಬ್ಬಳಿಗೆ ಶಿಕ್ಷಕಿಯೊಬ್ಬರು ಹೊಡೆದಿದ್ದರು, ಯಾವ ಪ್ರಮಾಣದಲ್ಲಿ ಹೊಡೆದಿದ್ದರು ಎಂದರೆ ಕೆನ್ನೆಗೆ ಹೊಡೆದ ಹೊಡೆತಕ್ಕೆ ಬಾಲಕಿಯ ಹಲ್ಲು ಮುರಿದು ಹೋಗಿತ್ತು, ಪೋಷಕರು ಪ್ರಿನ್ಸಿಪಾಲರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿರಲಿಲ್ಲ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ವಿಭಾಗ ೧೭ ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಶಿಕ್ಷೆ ಆಗಬಾರದು ಹಾಗೂ ಯಾವುದೇ ಕಾರಣಕ್ಕೂ ಮನಸ್ಸಿಕೆ ನೋವು ಉಂಟಾಗಬಾರದು ಎಂದು ತಿಳಿಸಿದೆ. ಬಾಲಕಿಗೆ ಹಲ್ಲುಮುರಿಯುವಂತೆ ಶಿಕ್ಷೆ ನೀಡಿ ಪೋಷಕರಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡದ ಶಾಲೆಯ ಬಗ್ಗೆ ಬಹಳ ಬೇಸರವಾಯಿತು, ಇದನ್ನು ಸುಮ್ಮನೆ ಬಿಡಬಾರದು ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಬೇಕೆಂದು ಪೋಷಕರಿಗೆ ತಿಳಿಸಿ ಶಾಲೆಯ ಮುಂದೆ ಪ್ರತಿಭಟನೆ ಮಾಡೋಣ ಎಂದು ತಿಳಿಸಿದೆ.

ದೊಮ್ಮಲೂರು ಶಾಲೆಯ ಪೋಷರು ಸುಮಾರು ಒಂಬತ್ತು ಜನ ನಮ್ಮ ಕಚೇರಿಗೆ ಬಂದರು. ಪ್ರತಿಭಟನೆ ಹೇಗೆ, ಎಷ್ಟು ಸಮಯ, ಏನು ಮಾಡಬೇಕು ಎಂಬುದರ ಬಗ್ಗೆ ದೀರ್ಘ ಚರ್ಚೆ ಆಯಿತು. ಸುಮಾರು ೫೦ ಜನ ಪೋಷಕರು ಭಾಗವಹಿಸುತ್ತಾರೆಂದು ಪೋಷಕರು ತಿಳಿಸಿದರು. ಪ್ರತಿಭಟನೆಗೆ ದಿನಾಂಕ ನಿಗದಿ ಮಾಡಿ ಮಾಧ್ಯಮಗಳಿಗೆ ಹೇಳಿಕೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರಗಳನ್ನು ಸಿದ್ಧಪಡಿಸಿದೆ, ಜೊತೆಗೆ ” ಶಿಸ್ತಿನ ಹೆಸರಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಿಲ್ಲಲಿ ‘ ಶಾಲೆ ಮಕ್ಕಳ ಸ್ನೇಹಿಯಾಗಲಿ, ”ಮಕ್ಕಳನ್ನು ಶಿಕ್ಸಿಸುವ ಶಿಕ್ಷಕರಿಗೆ ಶಿಕ್ಷೆಯಾಗಲಿ ” ಎಂಬ ಘೋಷಣೆಗಳನ್ನು ಸಿದ್ದಪಡಿಸಿ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.

ಪ್ರತಿಭಟನೆಯ ದಿನ ಕಪ್ಪು ಪ್ಯಾಂಟ್. ಕಪ್ಪು ಷರಟು ಹಾಕಿಕೊಂಡು, ಸುಮಾರು ೨೫ ಘೋಷಣೆಗಳ ಪ್ಲಕ್ ಕಾರ್ಡ್ ಹೊತ್ತು ನಮ್ಮ ಶಿಕ್ಷಣ ಹಕ್ಕು ಕಾರ್ಯಪಡೆಯ ಆಟೋ ಚಾಲಕರೊಂದಿಗೆ ದೊಮ್ಮಲೂರು ಶಾಲೆಯ ಕಡೆ ಹೊರಟೆ. ಪೋಷಕರ ವಾಟ್ಸ್ ಆಪ್ ಗ್ರೂಪ್ ನಲ್ಲಿ ಮರೆಯದೆ ೧೧ ಗಂಟೆಗೆ ಬನ್ನಿ ಎಂದು ಸಂದೇಶ ಕಳಿಸುವುದನ್ನು ಮರೆಯಲಿಲ್ಲ. ಹಲವಾರು ಟಿವಿ ಮಾಧ್ಯಮ ಮಿತ್ರರು ಎಲ್ಲಿಗೆ ಬರಬೇಕು ಎಂದು ಕರೆ ಮಾಡುತ್ತಿದ್ದರು, ಅವರಿಗೆ ಜಾಗ ತಿಳಿಸಿ, ಲೊಕೇಶನ್ ಕಳಿಸಿದೆ.

ಸರಿಯಾಗಿ ೧೦. ೩೦ ಕ್ಕೆ ಶಾಲೆಯ ಮುಂದೆ ನಾನು ಹಾಗೂ ನನ್ನ ಆಟೋ ಗೆಳಯರು ಆ ಶಾಲೆಯ ಮುಂದೆ ನಿಂತಿದ್ದೆವು. ಪೋಷಕರ ಪ್ರತಿಭಟನೆಯ ವಿಚಾರವನ್ನು ಕೆಲವು ಪತ್ರಿಕೆಗಳು ಪ್ರಕಟಿಸಿದ್ದವು ಇದರಿಂದಾಗಿ ಇಬ್ಬರು ಪೊಲೀಸರು ಸಹ ಶಾಲೆಯ ಹೊರಗೆ ನಿಂತಿದ್ದರು. ಪೋಷಕರು ಬರಲಿ ಎಂದು ಕಾಯತೊಡಗಿದೆವು. ಸಮಯ ೧೧ ಗಂಟೆಯಾಯಿತು, ೧೧. ೩೦ ಆಯಿತು ಒಬ್ಬ ಪೋಷಕರೂ ಬರಲಿಲ್ಲ, ಫೋನ್ ಮಾಡಿದರೆ ಸ್ವಿಚ್ ಆಫ್.. ಪೋಷಕರು ಬರೋದಿಲ್ಲ, ಮತ್ತೊಂದು ವಿಫಲತೆ ಎಂದು ಯೋಚಿಸಿ ಹೊರಡಲು ಸದ್ದರಾಗುತ್ತಿದ್ದೆವು.

”ಸಾರ್.. ನಾಗಸಿಂಹ ಸಾರ್ ‘ ಎಂಬ ಕರೆ ಕೇಳಿಸಿತು. ತಿರುಗಿ ನೋಡಿದರೆ ವ್ಯಕ್ತಿಯೊಬ್ಬರು ಶಾಲೆಯಿಂದ ಹೊರಬರುತ್ತಿದ್ದರು, ಹತ್ತಿರ ಬಂದವರೇ ನನ್ನ ಕೈ ಕುಲುಕಿ ” ನಾನು ಸ್ಯಾಮ್, ಈ ಶಾಲೆ ಪ್ರಿನ್ಸಿಪಾಲ್, ಇವತ್ತು ಪೇರೆಂಟ್ಸ್ ಪ್ರೊಟೆಸ್ಟ್ ಅಂತ ಕೇಳಿದೆ.. ಪೇರೆಂಟ್ಸ್ ಬರಲ್ಲ ಬಿಡಿ.. ನೀವು ಒಳಗೆ ಬನ್ನಿ lets have a cup of coffe… ‘ ಎಂದು ಅಹ್ವಾನ ನೀಡಿದರು.

ಸಾರ್ವಜನಿಕ ವಿಚಾರಣೆಯಲ್ಲಿ ಅದ ಅವಮಾನಕ್ಕಿಂತಾ ಈ ಅವಮಾನ ದೊಡ್ಡದು ಅನ್ನಿಸಿತು.. ಪೋಷಕರನ್ನು ನಂಬಿ ಬಂದ ನನ್ನನ್ನು ಆ ಪ್ರಿನ್ಸಿಪಾಲ್ ಕಾಫಿ ಗೆ ಕರೆದು ಅವಹೇಳನ ಮಾಡುತ್ತಿದ್ದಾನೆ ಅನ್ನಿಸಿತು. ಅಂದೇ ಅಲ್ಲೇ ತೀರ್ಮಾನ ಮಾಡಿದೆ ಒಂದು ರೀತಿಯ ಭೀಷ್ಮ ಶಪಥ ” ಇನ್ನು ಮುಂದೆ ಪೋಷಕರನ್ನು ನಂಬಿ ಯಾವುದೇ ನ್ಯಾಯಾಲಯ, ಪೊಲೀಸ್ ಠಾಣೆಯ ಮೆಟ್ಟಲೇರುವುದಿಲ್ಲ. ಪೋಷರಿಂದ ಲಿಖಿತ ದೂರು ಇಲ್ಲದೆ ಸಹಕಾರ ನೀಡುವುದಿಲ್ಲ, ಪೋಷಕರಿಗೆ ತಿಳಿಸುತ್ತೇನೆ ನಾನು ಸಹಕಾರ ನೀಡುತ್ತೇನೆ ಆದರೆ ನಿಮ್ಮ ಮಕ್ಕಳು.. ನೀವೇ ಹೊಣೆ !!!

ನಾಗಸಿಂಹ ಜಿ ರಾವ್


ಕನ್ನಡದ ಬರಹಗಳನ್ನು ಹಂಚಿ ಹರಡಿ
5 2 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Arun Kumar N
Arun Kumar N
1 month ago

Fantastic experience sharing for other prompt child rights activists.

MANJURAJ H N
MANJURAJ H N
1 month ago

ಈ ಬರೆಹದ ಬಗ್ಗೆ ನಾನೇನೂ ಹೇಳಲಾರೆ. ಆದರೆ ಈ ಬರೆಹದ ಹಿಂದಿನ ಮನೋಧರ್ಮ ನಮ್ಮನು ಆಳವಾಗಿ ಕಲಕುವುದು. ಪ್ರಾಮಾಣಿಕ ಹೋರಾಟಕ್ಕೆ ಹತಾಶೆ ಮತ್ತು ನಿರಾಶೆಗಳೇ ಫಲಿತಾಂಶವಾದರೆ ಮನಸು ಕಲ್ಲಾಗುತ್ತದೆ. ಹೃದಯ ಬರಡಾಗುತ್ತದೆ. ಭರವಸೆ ಮರೀಚಿಕೆಯಾಗುತ್ತದೆ. ಇಲ್ಲಾಗಿರುವುದೂ ಅದೇ.

ಲೇಖಕರು ನಿರಾಡಂಬರವಾಗಿ ತಮ್ಮನ್ನೊಂದು ನಿರ್ದಿಷ್ಟ ಅಂತರದಲ್ಲಿ ಇಟ್ಟುಕೊಂಡು, ವಸ್ತುನಿಷ್ಠವಾಗಿ ಅಭಿವ್ಯಕ್ತಿಸಿರುವ ಶೈಲಿ ನನಗಿಷ್ಟವಾಯಿತು. ಇಂದಿನ ಸಮಾಜದ ಗತಿ-ಸ್ಥಿತಿಯ ದ್ಯೋತಕ. ಇದನ್ನು ಬರೆಹವಾಗಿಸುವುದರ ಮೂಲಕ ನಿಶ್ಶಬ್ದವಾಗಿ ಸಂದೇಶವೊಂದನ್ನು ರವಾನಿಸುತ್ತಿದ್ದಾರೆ. ಈ ರವಾನೆಯೇ ವಿಶಿಷ್ಟವಾಗಿದೆ. ಬೋಧನೆಯ ಬಗ್ಗೆ ಇರುವ ಬೋಧನೆ! ಸಮಾಜ ಪರಿವರ್ತನೆಯ ಯಾತನೆ! ಓದಿದ ನಮ್ಮಲ್ಲಿ ನಾವು ಯಾವ ಪಾತ್ರಗಳ ಮೂಲಕ ಗುರುತಿಸಿಕೊಳ್ಳಲು ಇಷ್ಟಪಡುತ್ತೇವೆ? ಎಂಬುದು ಮಾತ್ರ ಗುಟ್ಟಿನ ಸಂಗತಿ.

ಸರ್‌, ನೀವು ಹೆಚ್ಚು ಬರೆಯಿರಿ. ಏಕೆಂದರೆ ನಿಮ್ಮ ಬರೆವಣಿಗೆಯ ನಿರಾಡಂಬರತೆ ನನ್ನನ್ನು ಇನ್ನಷ್ಟು ನಿಮ್ಮ ಬರೆಹಗಳನ್ನು ಓದುವಂತೆ ಪ್ರೇರಿಸಿದೆ. ಎಚ್ಚರಿಸಿದ ನಿಮಗೆ ಮತ್ತು ಪ್ರಕಟಿಸಿದ ಪಂಜುವಿಗೆ ನನ್ನ ನಮನ.

2
0
Would love your thoughts, please comment.x
()
x