ಗುಂಡೂಮಾಮನ ಜಾದು ಮತ್ತು ಇಕ್ಕಳ: ಡಾ. ಹೆಚ್ ಎನ್ ಮಂಜುರಾಜ್

ಪ್ರೌಢಶಾಲೆಯಲ್ಲಿ ಓದುವಾಗ ಕೆ ಎಸ್ ನರಸಿಂಹಸ್ವಾಮಿಯವರ ‘ಇಕ್ಕಳ’ ಎಂಬೊಂದು ಪದ್ಯವಿತ್ತು. ಮೇಡಂ ಪಾಠ ಮಾಡುವಾಗ ಅದೇನು ಹೇಳಿದರೋ ಆಗ ತಲೆಗೆ ಹೋಗಿರಲಿಲ್ಲ. ಆದರೆ ನಮ್ಮ ಮನೆಯ ಅಡುಗೆಮನೆಯಲ್ಲೊಂದು ಇಕ್ಕಳ ಇತ್ತು. ಆ ಪದ್ಯಪಾಠ ಓದುವಾಗೆಲ್ಲ ನನಗೆ ಅದೊಂದೇ ನೆನಪಾಗುತ್ತಿತ್ತು. ಮನೆಮಂದಿಗೆಲ್ಲಾ ಆ ಇಕ್ಕಳದ ಮೇಲೆ ಬಲು ಅಕ್ಕರೆ. ಏಕೆಂದರೆ ಕೆಳಮಧ್ಯಮವರ್ಗದವರಾದ ನಮ್ಮ ಮನೆಗೆ ಬಂದಿದ್ದ ಮೊತ್ತ ಮೊದಲ ವಿದೇಶಿ ವಸ್ತುವದು. ನಮ್ಮ ತಂದೆಯ ಸೋದರಮಾವ ಚಿಕ್ಕಂದಿನಲ್ಲೇ ಮುಂಬಯಿಗೆ ಓಡಿ ಹೋಗಿ ಅಲ್ಲೆಲ್ಲೋ ಇದ್ದು, ಏನೇನೋ ವಿದ್ಯೆಗಳನ್ನು ಕಲಿತು, ಕೊನೆಗೆ ಮ್ಯಾಜಿಷಿಯನ್ ಅಂದರೆ ಜಾದೂಗಾರರಾಗಿ ಇಪ್ಪತ್ತು ವರುಷಗಳ ನಂತರ ಮನೆಗೆ ಬಂದರಂತೆ. ಮೈಸೂರು ಬೆಂಗಳೂರುಗಳಲ್ಲಿ ಜಾದೂ ಪ್ರದರ್ಶನ ನೀಡಿ ಹಣವನ್ನೂ ಹೆಸರನ್ನೂ ಮಾಡಿದ್ದರು. ನಮ್ಮ ವಂಶದಲ್ಲಿ ಮೊದಲ ಬಾರಿಗೆ ವಿದೇಶಕ್ಕೆ ಹೋಗಿ ಬಂದವರೂ ಅವರೇ ಅಂತೆ. ಆ ಕಾಲಕ್ಕಾಗಲೇ ಇಂಗ್ಲೆಂಡು, ಅಮೆರಿಕ, ಜರ್ಮನಿ ಮೊದಲಾದ ಐರೋಪ್ಯ ದೇಶಗಳಿಗೆ ಹೋಗಿ ಅಲ್ಲಿ ಜಾದೂ ಪ್ರದರ್ಶನ ನೀಡಿ ಬರುತ್ತಿದ್ದರಂತೆ. ಸರಿಯಾಗಿ ಸ್ಕೂಲಿಗೇ ಹೋಗದ ಈ ಮನುಷ್ಯ ಅದು ಹೇಗೆ ಫಾರಿನ್ನಿಗೆ ಹೋಗಿ ಬರುತ್ತಾನೆಂದು ನಮ್ಮಜ್ಜಿ ಅಂದರೆ ಈ ಜಾದೂಗಾರ್ ಗುಂಡೂರಾವ್ ಅವರ ಸ್ವಂತ ಅಕ್ಕ ಚಕಿತರಾಗಿ ಬಯ್ಯುತ್ತಿದ್ದುದನ್ನು ನಾನು ಕಿವಿಯಾರೆ ಕೇಳಿಸಿಕೊಂಡಿದ್ದೇನೆ. ಅಂದರೆ ಈ ಜಾದೂಗಾರ ನಮ್ಮ ಅಜ್ಜಿಯ ತಮ್ಮನೂ ಹೌದು; ಅಜ್ಜಿಯ ಮಗಳ ಗಂಡನೂ ಹೌದು! ನಾನು ಅವರನ್ನು ನೋಡುವ ವೇಳೆಗಾಗಲೇ ಅವರು ಜಾದೂ ಪ್ರದರ್ಶನವನ್ನು ಕೈಬಿಟ್ಟು ಹೊಟೆಲೊಂದರ ಮ್ಯಾನೇಜರಾಗಿದ್ದರು. ಅಲ್ಲಿಂದ ಕಾಲ್ತೆಗೆದು ಸ್ವಲ್ಪ ಕಾಲ ಹಿಂದಿ ಸಿನಿಮಾ ಜಗತ್ತಿನ ಅಂತಃಪುರವಾದ ಮುಂಬಯಿಗೆ ಹೋಗಿದ್ದರು.

ಅಲ್ಲೇನಾಯಿತೋ? ಮರಳಿ ಬಂದವರೇ ಮೈಸೂರಿನ ಶಾಂತಲಾ ಥಿಯೇಟರಿನ ಮುಂದೆ ನಾಲ್ಕು ಚಕ್ರದ ಟೀಗಾಡಿಯಲ್ಲಿ ಟೀ ಮತ್ತು ಬನ್ನನ್ನು ಮಾರುತ್ತಾ ನಿಂತಿರುತ್ತಿದ್ದರು. ನಾವು ಕನ್ನೇಗೌಡನ ಕೊಪ್ಪಲು ಮತ್ತು ಜಯನಗರಗಳ ಬಾಡಿಗೆ ಮನೆಯಲ್ಲಿ ಇದ್ದಾಗ ಅವರು ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ಸಂಪೂರ್ಣವಾಗಿ ಜಾದು ಮಾಡುವುದನ್ನು ನಿಲ್ಲಿಸಿದ್ದರು. ಅಂಥವರು ಎಲ್ಲವನ್ನೂ ಕಳೆದುಕೊಂಡು, ಬಟ್ಟಂ ಬಯಲಾಗಿ, ಟೀ ಅಂಗಡಿಯೊಂದನ್ನು ನಿರ್ವಹಿಸುವಂತಾದುದು ಆ ಪರಮಾತ್ಮನ ನಿಜವಾದ ಜಾದು ಎಂದು ನನಗೀಗ ಅನ್ನಿಸುತ್ತಿದೆ. ಹೇಗಿದ್ದವರು ಹೇಗಾಗುತ್ತಾರೆ? ಆಮೇಲೆ ಏನೂ ಆಗಿರದಂತೆ ಸುಮ್ಮನಿದ್ದು ಬಿಡುತ್ತಾರೆ! ತಾನು ಏನನ್ನೂ ಸಂಪಾದಿಸಿಯೇ ಇಲ್ಲ; ಏನನ್ನೂ ಕಳೆದುಕೊಂಡಿದ್ದೇ ಇಲ್ಲ ಎಂಬ ಸ್ವಾಭಾವಿಕ ತತ್ತ್ವಜ್ಞಾನ ಈತನಿಗೆ ಸಹಜವಾಗಿಯೇ ಕರಗತವಾಗಿತ್ತೆನಿಸುತ್ತದೆ. ‘ಜಾದೂ ಮಾಡೀ ಮಾಡೀ ಈ ಜೀವವೇ ಒಂದು ಜಾದು; ಜೀವನವೇ ಒಂದು ಜಾದು’ ಎಂಬ ಶ್ರೀ ಶಂಕರರ ಮಾಯಾಸಿದ್ಧಾಂತವನ್ನು ಹೀಗೆ ಅರಗಿಸಿಕೊಂಡಿದ್ದರೆನಿಸುತ್ತದೆ!
ಮೈಸೂರಿನಲ್ಲಿ ಇದ್ದಷ್ಟು ಕಾಲ ನಮ್ಮ ತಂದೆಯವರು ಈ ಸೋದರಮಾವನ ಸಂಪರ್ಕದಲ್ಲಿದ್ದರು. ‘ಇವನು ಹೆಚ್ಚೂ ಕಡಮೆ ಮೂವತ್ತು ದೇಶಗಳನ್ನು ಸುತ್ತಿ ಬಂದವನು. ಹತ್ತಾರು ಭಾಷೆಗಳನ್ನು ನಿರರ್ಗಳವಾಗಿ ಮಾತಾಡಬಲ್ಲವನು. ದೇಶ ವಿದೇಶದಲ್ಲಿ ನೂರಾರು ಶಿಷ್ಯರನ್ನು ತಯಾರು ಮಾಡಿರುವವನು. ಹೀಗೆ, ಒಂದು ಥಿಯೇಟರಿನ ಮುಂದೆ ಅಬ್ಬೇಪಾರಿಯಂತೆ ಟೀ ಬಿಸ್ಕತ್ತು ಮಾರಿಕೊಂಡು ನಿಂತಿದ್ದಾನೆ! ಕೇಳಿದರೆ ಆ ಜಾದೂಗಾರ ನಾನಲ್ಲ; ನನಗಿದೇ ಸಾಕು ಎನ್ನುತ್ತಾನೆ!’ ಎಂದು ನನಗೆ ತಮ್ಮ ಮಾವನ ತತ್ತ್ವಜ್ಞಾನವನ್ನು ಬೇಸರ ಮತ್ತು ದಿಗಿಲುಗಳನ್ನು ಬೆರೆಸಿ ಹೇಳುತ್ತಿದ್ದರು. ನಮ್ಮ ತಂದೆಯವರು ಟೈಲರ್ ಆಗಿದ್ದುದರಿಂದ ಎಂತೆಂಥದೋ ಬಟ್ಟೆಗಳನ್ನು ಹೊಲಿಸಿಕೊಳ್ಳಲು ಈ ಜಾದೂಗಾರ ನಮ್ಮನೆಗೆ ಬರುತ್ತಿದ್ದರು. ಮೈಸೂರಿನ ದಿವಾನ್ ರಂಗಾಚಾರ್ಲು ಪುರಭವನದಲ್ಲಿ ಒಮ್ಮೆ ಗುಂಡೂರಾವ್ ಅವರ ವಿದೇಶಿ ಶಿಷ್ಯರ ಜಾದೂ ಪ್ರದರ್ಶನವಿತ್ತು.

ನಮಗೆ ಉಚಿತ ವೀಕ್ಷಣಾ ಸೌಭಾಗ್ಯ. ಒಂದು ಬಿಳಿಯ ಪಂಚೆ ಮತ್ತು ಜುಬ್ಬಾ ಧರಿಸಿ, ವೇದಿಕೆಗೆ ಬಂದು ತಮ್ಮ ವಿದೇಶೀ ಶಿಷ್ಯರನ್ನು ಸಭೆಗೆ ಪರಿಚಯಿಸಿದ ಪರಿಯನ್ನು ಕಂಡೇ ನನಗೆ ಮೈ ಜುಂ ಎಂದಿತ್ತು. ನಾನಾಗ ಚಿಕ್ಕವನೇ. ಏಕಕಾಲಕ್ಕೆ ಕನ್ನಡ, ಇಂಗ್ಲಿಷು, ತೆಲುಗು, ತಮಿಳು, ಮಲಯಾಳಂ, ಹಿಂದಿ ಮೊದಲಾದ ಭಾಷೆಗಳ ಪದಗಳನ್ನು ವಾಕ್ಯ ಮಾಡಿ, ಮಾತಾಡುತಿದ್ದ ನಮ್ಮ ಗುಂಡುಮಾಮನನ್ನು ಕಂಡು ಸಭಿಕರ ಕರತಾಡನವು ಮುಗಿಲು ಮುಟ್ಟಿತ್ತು. ಏಕೆಂದರೆ ಎಲ್ಲ ಭಾಷಿಕರ ಪ್ರೇಕ್ಷಕರೂ ಅಲ್ಲಿ ನೆರೆದಿದ್ದರು. ಎಷ್ಟೋ ವರುಷಗಳಾದ ಮೇಲೆ ಪಾತಾಳಬಾವಿಯಲ್ಲಿ ಮುಳುಗಿದ್ದ ಇವನ್ನೆಲ್ಲಾ ಸ್ಮೃತಿಪಟಲದಲ್ಲಿ ತಂದುಕೊಂಡಾಗ ನಿಧಾನವಾಗಿ ಅರ್ಥವಾಗ ಹತ್ತಿತು.
ಆ ಸಮಯದಲ್ಲಿ ನಮ್ಮ ತಂದೆಯವರ ಮುಖದಲ್ಲಿ ಮೂಡುತ್ತಿದ್ದ ಹೆಮ್ಮೆ ಮತ್ತು ಸಂತಸಗಳನ್ನು ನಾನು ಇನ್ನೂ ಮರೆತಿಲ್ಲ, ಕಣ್ಣಿಗೆ ಕಟ್ಟಿದಂತಿದೆ. ‘ನೋಡೋ, ನಮ್ ಗುಂಡನ್ನ!’ ಅಂತ ನನ್ನೆಡೆ ನೋಡಿ ತಮ್ಮ ಅಭಿಮಾನವನ್ನು ತೋರಿದ್ದರು. ಆ ಪ್ರದರ್ಶನಕ್ಕಾಗಿ ಮನೆಗೆ ಬಂದು ಥರಾವರೀ ಕರವಸ್ತ್ರಗಳನ್ನು ಹೊಲಿಸಿಕೊಂಡಿದ್ದರು. ವಾಸ್ತವವಾಗಿ, ಅವರ ವಿದೇಶೀ ಶಿಷ್ಯರು ತಮ್ಮ ಗುರುಗೌರವಕ್ಕಾಗಿ ಏರ್ಪಡಿಸಿದ್ದ ಶೋ ಅದಾಗಿತ್ತು. ಅದರಲ್ಲಿ ಬಂದ ಲಾಭವನ್ನು ತಮ್ಮ ಗುರುವಿನ ಪಾದಕಿಟ್ಟು ಹೊರಟು ಬಿಟ್ಟಿದ್ದರು. ಸುಮಾರು ಇಪ್ಪತ್ತು ಮಂದಿ ಶಿಷ್ಯ ಶಿಷ್ಯೆಯರು ಯುರೋಪಿನಿಂದ ಬಂದಿದ್ದರು. ಆಗಿನ ಪ್ರತಿಷ್ಠಿತ ದಾಸಪ್ರಕಾಶ್ ಹೊಟೆಲಿನಲ್ಲಿ ತಂಗಿದ್ದರು. ಅವರ ಶಿಷ್ಯರಲ್ಲೊಬ್ಬ ಜಾನ್ ಪಾಲ್ ಎಂಬಾತ ಗುಂಡುಮಾಮನ ಜೊತೆ ನಮ್ಮಜ್ಜಿ ಮನೆಗೆ ಬಂದಿದ್ದ. ಅಂದು ನಮ್ಮ ಮನೆಯಲ್ಲಿ ಅನಂತಪದ್ಮನಾಭ ವ್ರತ ನಿಮಿತ್ತ ಧಾರ್ಮಿಕ ಕಾರ್ಯಕ್ರಮ ಮತ್ತು ಊಟೋಪಚಾರ. ಮನೆಯ ಹೊರಗಿನ ಜಗುಲಿಯಲ್ಲಿ ಏನೋ ಆಟವಾಡುತ್ತಾ ಇದ್ದ ನನ್ನನ್ನು ಆತ ಬಂದವನೇ ಅನಾಮತ್ತಾಗಿ ಮೇಲೆತ್ತಿ ಕೈಗಳಲ್ಲಿ ಕುಣಿಸಿ ಬಿಟ್ಟ. ಮೊದಲ ಬಾರಿಗೆ ಓರ್ವ ವಿದೇಶೀಯನ ತೆಕ್ಕೆಗೆ ಸಿಕ್ಕಿಕೊಂಡು ದಿಗ್ಭ್ರಮಿತನಾದ ಅನುಭವ (ಅದೇ ಕೊನೆಯದೂ ಹೌದು!). ಅದಾದ ಮರುದಿನ ಕನ್ನೇಗೌಡನ ಕೊಪ್ಪಲಿನ ನಮ್ಮ ಮನೆಗೆ ಗುಂಡನ ಜೊತೆ ಬಂದವನೇ ಥಳಥಳ ಹೊಳೆಯುವ ಗಟ್ಟಿಮುಟ್ಟಾದ ಒಂದು ಉಕ್ಕಿನ ಇಕ್ಕಳವನ್ನು ನಮ್ಮಮ್ಮನ ಕೈಗಿಟ್ಟ. ವಿದೇಶದಲ್ಲಿ ಅವನದೊಂದು ಫ್ಯಾಕ್ಟರಿ ಇದೆಯಂತೆ. ಅದಕ್ಕೆ ಎಲ್ಲರಿಗೂ ಅವನು ಇದನ್ನು ಉಡುಗೊರೆಯಾಗಿ ಕೊಡುತ್ತಿದ್ದಾನೆಂದು ಗುಂಡೂಮಾಮ ಸ್ಪಷ್ಟೀಕರಣ ಕೊಟ್ಟರು.

ಹೀಗೆ ನನಗೆ ಕೆಎಸ್‌ನ ಅವರ ಇಕ್ಕಳ ಪದ್ಯವನ್ನು ಓದುವಾಗೆಲ್ಲಾ ಗುಂಡೂರಾವ್ ಮತ್ತವರ ಶಿಷ್ಯ ಪಾಲ್ ನೆನಪಾಗುತ್ತಿದ್ದರು. ‘ಅವತ್ತು ನೀವು ಉರಿಯುತ್ತಿದ್ದ ಬಲ್ಬನ್ನು ಬಿಚ್ಚಿ ಬಾಯಿಗೆ ಹಾಕಿಕೊಂಡು ಕಚಕಚನೆ ಅಗಿದು ನುಂಗಿದರಲ್ಲ! ನಿಮಗೇನೂ ಆಗುವುದಿಲ್ಲವೇ?’ ಎಂದು ನಾನು ಪೆದ್ದು ಪೆದ್ದಾಗಿ ಗುಂಡನನ್ನು (ನಮ್ಮಪ್ಪ ಗುಂಡ ಅಂತಲೇ ಕರೆಯುತ್ತಿದ್ದುದು) ಕೇಳಿದ್ದೆ. ಅದಕ್ಕವರು ಜೋರಾಗಿ ನಕ್ಕು, ‘ಅಯ್, ಬಲ್ಬನ್ನು ನಿಜವಾಗಿಯೂ ತಿನ್ನೋದಕ್ಕೆ ಆಗುತ್ತೇನೋ? ಎಲ್ಲಾ ಕಣ್ಕಟ್ಟು, ಹಿಪ್ನಾಟಿಸಂ, ಜಾದೂ’ ಎಂದರು. ನಮ್ಮ ಮನೆಗೆ ಬರುತ್ತಿದ್ದಾಗ ನನಗೂ ಒಂದೆರಡು ಕೈಚಳಕದ ಜಾದೂ ಹೇಳಿಕೊಟ್ಟಿದ್ದರು. ನಾನು ನನ್ನ ಸಹಪಾಠಿಗಳ ಮುಂದೆ ಪ್ರದರ್ಶಿಸಲು ಹೋಗಿ, ನಗೆಗೀಡಾಗಿದ್ದೆ. ಟೇಬಲ್ ಮೇಲೆ ವ್ಯಕ್ತಿಯೊಬ್ಬನನ್ನು ಮಲಗಿಸಿ, ರುಂಡ ಮತ್ತು ಮುಂಡಗಳನ್ನು ಬೇರ್ಪಡಿಸುವುದು, ಟವೆಲೊಂದನ್ನು ತೋರಿಸುತ್ತಾ, ಅದನ್ನು ನುಲಿಯುತ್ತಾ, ಪಾರಿವಾಳ, ಗಿಳಿಗಳನ್ನು ಈಚೆ ತೆಗೆದು ಹಾರಿ ಬಿಡುವುದು, ಇಸ್ಪೀಟಿನ ಎಲೆಗಳ ಕೈ ಚಳಕ, ಸಿಗರೇಟಿನ ಹೊಗೆಯಲ್ಲಿ ಬಿಡಿಸುವ ಚಿತ್ತಾಕರ್ಷಕ ನರ್ತನ ಭಂಗಿಗಳ ಧೂಮಲೀಲೆ, ಕಣ್ಣನ್ನು ಕಟ್ಟಿಸಿಕೊಂಡು, ಪ್ರೇಕ್ಷಕರು ಬೋರ್ಡಿನ ಮೇಲೆ ಬರೆದದ್ದನ್ನು ಮೈಕಿನ ಮುಂದೆ ಓದುವುದು, ವೇದಿಕೆಯ ಮೂಲೆಯಲ್ಲಿ ನಿಂತು ನಾನಾ ನಮೂನೆಯ ಸಂಜ್ಞೆಗಳನ್ನು ಮಾಡುತ್ತಿದ್ದರೆ ಮಧ್ಯದಲ್ಲಿ ಇಟ್ಟ ಸಂಗೀತವಾದ್ಯಗಳು ನುಡಿಯುವುದು- ಹೀಗೆ ನಮ್ಮ ಗುಂಡೂಮಾಮನ ಮ್ಯಾಜಿಕ್ಕು ತರಹೇವಾರಿ! ನಾನು ಇದನ್ನೆಲ್ಲಾ ಕಣ್ಣಾರೆ ಕಂಡವನು. ನಮ್ಮ ಮನೆಗೆ ಬಂದಾಗ ಕೇಳಿದರೆ ವಿಷಾದದಿಂದ ನಕ್ಕು, ಅದೆಲ್ಲಾ ಮಾಯಾವಿದ್ಯೆ ಎಂದಂದು ಸುಮ್ಮನಾಗುತ್ತಿದ್ದರು. ಹೆಚ್ಚು ಹೇಳಲು ಇಷ್ಟಪಡುತ್ತಿರಲಿಲ್ಲ. ಅವರನ್ನು ನೆನೆದಾಗಲೆಲ್ಲಾ ಏನನ್ನೋ ಕಳೆದುಕೊಂಡ ವಿಷಾದ ಮತ್ತು ಏನೂ ಬೇಡವೆಂಬ ವೈರಾಗ್ಯಗಳ ಅವರ ಮುಖಭಾವ ಕಣ್ಣಮುಂದೆ ಬರುತ್ತದೆ. ಅದೃಷ್ಟವೂ ದುರಾದೃಷ್ಟವೂ ಒಟ್ಟಿಗೆ ಅವರ ಕೈ ಹಿಡಿದ ವಿಚಿತ್ರ ದುರಂತ ಅವರ ಬದುಕು ಮತ್ತು ಭಾವ.

ಇಕ್ಕಳದ ಮೂಲಕ ನೆನಪಾಗಿ ಉಳಿದ ಜಾನ್‌ಪಾಲ್ ಎಂಬಾತ ನಮ್ಮ ತಂದೆಯ ಸೋದರಮಾವನಿಗೆ ಪರಿಚಯವಾಗಿ ಶಿಷ್ಯನಾದದ್ದೇ ಒಂದು ಕತೆಯಂತೆ. ವಿಪರೀತ ಶ್ರೀಮಂತಿಕೆಯ ಪರಮ ಲೋಲುಪತೆಯಿಂದ ಎಲ್ಲ ದುಶ್ಚಟಗಳನ್ನೂ ಕಲಿತಿದ್ದ ಪಾಲ್ ಎಂಬ ಮನೋರೋಗಿಯು ಕ್ಲಬ್ ಒಂದರಲ್ಲಿ ಒಮ್ಮೆ ಗುಂಡೂರಾಯರ ಜಾದೂ ನೋಡಿ, ಪರವಶನಾದನಂತೆ. ತನ್ನ ‘ಗರ್ಲ್‌ಫ್ರೆಂಡನ್ನು ಇಂಪ್ರೆಸ್ ಮಾಡಲು ನನಗೊಂದು ಜಾದು ಹೇಳಿಕೊಡು’ ಎಂದು ದುಂಬಾಲು ಬಿದ್ದನಂತೆ. ಆತ ಪ್ರೀತಿಸುತ್ತಿದ್ದ ಹುಡುಗಿ ಭಾರತದ ಯೋಗ ಮತ್ತು ಅಧ್ಯಾತ್ಮಕ್ಕೆ ಮನಸೋತು ವಾರಣಾಸಿಗೆ ಬಂದು ಸಾಧುಗಳ ಬಳಿ ಸಂನ್ಯಾಸಿಯಾಗಿ ಬಿಟ್ಟಳಂತೆ. ಇಂಪ್ರೆಸ್ ಮಾಡಲು ಹೋಗಿ ತಾನೇ ಅವಳಿಂದ ಇಂಪ್ರೆಸ್ ಆದ ಜಾನ್‌ಪಾಲನು ಗುಂಡೂರಾವ್ ಜೊತೆ ಇಂಡಿಯಾಕ್ಕೆ ಬಂದು ಆಕೆಯನ್ನು ಕೊನೆಯ ಬಾರಿ ಕಂಡು, ಮಾತಾಡಿಸಿ, ತಾನೂ ಸಂನ್ಯಾಸಿಯಾಗಿ, ‘ಹರೇ ರಾಮ್ ಹರೇ ಕೃಷ್ಣ್’ ಪಂಥಕ್ಕೆ ಸೇರಿಕೊಂಡನಂತೆ. ಅವನಿಗಿದ್ದ ಎಲ್ಲ ಮಾದಕ ದ್ರವ್ಯದ ಚಟಗಳೂ ಹೊರಟು ಹೋಗಿ ಗುಂಡೂರಾಯರ ಕೈಚಳಕಕ್ಕೆ ಮನಸೋತು, ಹಿಂದೆ ಹಿಂದೆ ಸುತ್ತುತ್ತಾ ಶಿಷ್ಯಪಡೆಯನ್ನೇ ಕಟ್ಟಿಕೊಂಡನಂತೆ. ವಿದೇಶದಲ್ಲಿ ಆ ಮಟ್ಟಿಗೆ ನಮ್ಮ ಗುಂಡೂರಾಯರು ಜನಪ್ರಿಯತೆ ಮತ್ತು ಯಶಸ್ಸು ಗಳಿಸಿದ್ದರೂ ನಮ್ಮಜ್ಜಿಗೆ ಅಂದರೆ ಅವರ ಅಕ್ಕನಿಗೆ ಅಸಡ್ಡೆ. ‘ಮನೆ ಬಿಟ್ಟು ಹೋದ, ಆಮೇಲೆ ಬಂದ, ಅದೇನೋ ಕೆಲಸಕ್ಕೆ ಬಾರದ ಕೈ ಚಳಕ ಮಾಡಿಕೊಂಡು ಅನ್ನಕ್ಕೆ ದಂಡ, ಭೂಮಿಗೆ ಭಾರವಾಗಿದ್ದಾನೆ. ಓದಿಲ್ಲ, ಬರೆದಿಲ್ಲ. ಇವನಿಗ್ಯಾರು ಹೆಣ್ಣು ಕೊಡುತ್ತಾರೆ?’ ಎಂದು ಬಯ್ಯುತ್ತಲೇ ತಮ್ಮನ ಕಾಳಜಿ ಮಾಡಿ, ತನ್ನ ಮಗಳಾದ ನಾಗಮಣಿ (ಈಕೆಯು ನಮ್ಮ ತಂದೆಯ ತಂಗಿ, ಬೈ ಬರ್ತ್ ಮೂಗು ಮತ್ತು ಕಿವುಡು) ಯನ್ನು ಕೊಟ್ಟು ಮದುವೆ ಮಾಡಿ, ತನ್ನ ಮನೆಯಲ್ಲೇ ಇಟ್ಟುಕೊಂಡರು. ಗುಂಡ ಮಾತ್ರ ಹೆಸರಿಗೆ ಅನ್ವರ್ಥವೆಂಬಂತೆ, ಹೆಂಡತಿ ಮತ್ತು ಒಂದು ಗಂಡುಮಗುವನ್ನು ಅಕ್ಕ ಕಮ್ ಅತ್ತೆ ಮನೆಯಲ್ಲೇ ಬಿಟ್ಟು, ಊರೂರು ತಿರುಗುವುದೂ ದೇಶಾಂತರ ಹೋಗುವುದೂ ಮಾಡುತಿದ್ದರು. ನಮ್ಮ ತಂದೆಯನ್ನು ಕಂಡರೆ ಗುಂಡನಿಗೆ ಅದೇನೋ ವಿಪರೀತ ಕಕ್ಕುಲಾತಿ. ವಿದೇಶದಿಂದ ಬರುವಾಗ ಮರೆಯದೇ, ನಮ್ಮ ತಂದೆಯವರಿಗೆ ಸೆವೆನ್ ಒ ಕ್ಲಾಕ್ ಬ್ಲೇಡಿನ ಒಂದು ಪ್ಯಾಕೆಟ್ ತಂದು ಕೊಡುತ್ತಿದ್ದರು. ಅದಾಗಲೇ ಅದು ಭಾರತದ ಮಾರುಕಟ್ಟೆಗೆ ಬಂದಿದ್ದರೂ ವಿದೇಶದಿಂದ ತಂದ ಬ್ಲೇಡಿನ ಕ್ವಾಲಿಟಿಯು ಇಲ್ಲಿ ಸಿಗುವ ಬ್ಲೇಡಿನಲ್ಲಿ ಇಲ್ಲ ಎಂದೇ ನಮ್ಮ ತಂದೆಯವರು ಆಗಾಗ ಹೇಳುತ್ತಿದ್ದರು. ಬಹಿರಂಗ ಪ್ರದರ್ಶನ ಕೈ ಬಿಟ್ಟ ಮೇಲೆ ಶಿಷ್ಯರನ್ನು ಬೆಳೆಸುವಲ್ಲಿ ಗಮನ ಕೊಟ್ಟು, ಅದಕ್ಕೆ ಬೇಕಾದ ಬಟ್ಟೆಯ ಸಾಮಗ್ರಿಗಳಿಗೆ ನಮ್ಮ ತಂದೆಯ ದರ್ಜಿ ಕೌಶಲ್ಯವನ್ನು ಬಳಸಿಕೊಳ್ಳುತ್ತಿದ್ದರು. ‘ದುಡ್ಡು ಕೊಡಲ್ಲ, ಕಾಸು ಕೊಡಲ್ಲ, ಅದೇನೋ ಮುಖಕ್ಷೌರದ ಬ್ಲೇಡು ತಂದು ಕೊಟ್ಟು, ದಿನಗಟ್ಟಲೆ ಮಷೀನು ತುಳಿಸಿ, ಬಟ್ಟೆ ಹೊಲಿಸಿಕೊಂಡು ಹೋಗುತ್ತಾರೆ’ ಎಂದು ನಮ್ಮಮ್ಮನಿಗೆ ವಿಪರೀತ ಸಿಟ್ಟು ಸೆಡವು. ‘ಮರ್ಯಾದೆಯಿಂದ ಬಾಳದೆ, ಪರದೇಶಕ್ಕೆ ಹೋಗಿ, ಶೀಲ ಚಾರಿತ್ರ್ಯ ಎಲ್ಲವನ್ನೂ ಕೆಡಿಸಿಕೊಂಡು, ಅದೇನು ಕೈ ಚಳಕ ತೋರಿದರೇನು ಬಂತು?’ ಎಂದು ನಮ್ಮಮ್ಮ ಬಾಯಿಗೆ ಬಂದಂತೆ ಬಯ್ಯುತ್ತಿದ್ದರು.

‘ಸುಮ್ನಿರೆ, ಅವನು ಅಸಾಧ್ಯ ಮನುಷ್ಯ, ನನಗೆ ಸೋದರಮಾವ’ ಎಂದು ನಮ್ಮ ತಂದೆ ನೂರಕ್ಕೆ ಒಂದು ಮಾತು ಆಡಿ, ಹೊಲಿಗೆ ಯಂತ್ರದ ವೇಗವನ್ನು ಹೆಚ್ಚಿಸುತ್ತಿದ್ದರು. ನಮ್ಮಮ್ಮನ ಗೊಣಗಾಟ ಕೇಳಬಾರದೆಂದು! ಗುಂಡೂಮಾಮನ ಮಗ ಚಿರಂಜೀವಿ ಮಂಜುನಾಥನು ನಮ್ಮ ಮನೆಗೆ ಬಂದರೂ ಸಹಿಸುತ್ತಿರಲಿಲ್ಲ. ನಮ್ಮ ತಂದೆ ಮನೆಯ ಕಡೆಯವರು ಯಾರು ಬಂದರೂ ನಮ್ಮ ತಾಯಿಯವರು ಮುಖ ಗಂಟು ಹಾಕಿಕೊಳ್ಳುತ್ತಿದ್ದರು. ಮಾತೆತ್ತಿದರೆ ‘ಮೂರು ಪೈಸಾ ಆದಾಯ ಇಲ್ಲ’ ಎನ್ನುತ್ತಿದ್ದರು. ಅದೇ ರೀತಿ ನಮ್ಮ ತಂದೆಯ ಇನ್ನೊಬ್ಬ ತಮ್ಮ ಗುರುರಾಜನು (ಈತ ಕೂಡ ಹುಟ್ಟಿನಿಂದ ಮೂಗರು ಮತ್ತು ಕಿವುಡರು) ಮನೆಗೆ ಬಂದು ಹೊಲಿಗೆ ಯಂತ್ರ ಬಳಸಿದರೆ ಸಹಿಸುತ್ತಿರಲಿಲ್ಲ. ‘ಕೆಡಿಸಿಬಿಟ್ಟು ಹೋಗಿ ಬಿಡುತ್ತಾರೆ, ನಮಗಿದು ಅನ್ನ’ ಎಂದು ಸಿಡಸಿಡ ಎನ್ನುತ್ತಿದ್ದರು. ಆದಾಯ ಇದ್ದರೆ ಮಾತ್ರ ಸಂಬಂಧ ಎಂಬುದು ನಮ್ಮ ತಾಯಿಯವರ ಆಲೋಚನೆಯಾಗಿತ್ತು. ಈ ಎಲ್ಲ ಒಳನೋಟಗಳೇ ನನಗೆ ಮುಂದೆ ಬದುಕಿನ ತತ್ತ್ವಶಾಸ್ತ್ರ ಕಲಿಸಿದ್ದು. ಹಾಗಾಗಿ ಪಾಲ್ ತಂದು ಕೊಟ್ಟಿದ್ದ ಇಕ್ಕಳವೊಂದೇ ನಮ್ಮ ತಂದೆಯ ಕಡೆಯವರಿಂದ ಆದ ಆದಾಯ ಆಗಿತ್ತು! ಪ್ರಾರಂಭದಲ್ಲಿ ‘ಅದೇನೋ ಸುಡುಗಾಡು ತಂದು ಕೈಗಿಟ್ಟಿದ್ದಾನೆ. ಅದೆಲ್ಲಿ ಜಾರಿ ಬಿದ್ದು, ಬಿಸಿಹಾಲೆಲ್ಲಾ ಮೈ ಮೇಲೆ ಚೆಲ್ಲಿದರೇನು ಗತಿ?’ ಎಂದು ಆತಂಕಿತರಾಗಿ ಬಳಸದೇ ಇಟ್ಟಿದ್ದರೂ ತರುವಾಯ ಅದರ ಅನುಕೂಲ ಗಮನಿಸಿ ಬಳಸಲು ಹೊರಟರು. ಅದಕಿಂತ ಮುಂಚೆ ವೇಸ್ಟು ಬಟ್ಟೆಗಳೇ ಬಿಸಿಪಾತ್ರೆಗಳನ್ನು ಒಲೆಯಿಂದ ಇಳಿಸಲು ಬಳಕೆಯಾಗುತ್ತಿದ್ದುದು.

ನನಗೀಗ ನೆನಪಿಸಿಕೊಂಡರೆ ‘ಇದೇನು ವಿಚಿತ್ರ?’ ಎಂದೆನಿಸುತ್ತದೆ. ಯಾರಾದರೂ ಇಕ್ಕಳವನ್ನು ಗಿಫ್ಟಾಗಿ ಕೊಡುತ್ತಾರೆಯೇ? ಎಂದು ನಗು ಬರುತ್ತದೆ. ಆ ಜಾನ್‌ಪಾಲ್‌ನ ಆಕಾರ ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಆರೇಳು ಅಡಿ ಎತ್ತರ, ಕೆಂಪಗಿನ ಮೈಬಣ್ಣ, ತಲೆ ತುಂಬ ಚಿನ್ನದ ಬಣ್ಣದ ಗುಂಗುರು, ಕೆಂಚು ಮೀಸೆ ಗಡ್ಡ, ಉದ್ದನೆಯ ಪೈಜಾಮ, ಬಿಳಿಬಣ್ಣದ ಜುಬ್ಬಾ, ಗುಂಡೂರಾಯರ ಸಹವಾಸದಿಂದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವರ ದರ್ಶನ ಮತ್ತು ಹಣೆಯಲ್ಲಿ ಕುಂಕುಮ. ಸದಾ ಹಸನ್ಮುಖಿ. ನೋಡುವುದಕ್ಕೆ ವಿದೇಶಿ; ಉಳಿದದ್ದೆಲ್ಲಾ ದೇಶಿ! ಒಂದು ಕಾಲದ ದುಶ್ಚಟಗಳ ದಾಸ್ಯದಿಂದಾಗಿ ದೇಹ ಸೊರಗಿದ್ದರೂ ಇನ್ನೂ ಯೌವನ ಚಿಮ್ಮುತ್ತಿದ್ದ ಮೈಮನಸು. ಭಾರತಕ್ಕೆ ಬಂದ ಮೇಲೆ ಆತನಿಗೂ ಇದು ಪುಣ್ಯಭೂಮಿ ಎನಿಸಿತಂತೆ. ತಕ್ಕಮಟ್ಟಿಗೆ ಹಿಂದಿ ಕಲಿತಿದ್ದರಿಂದ ಆತನ ಜೊತೆ ನಮ್ಮ ತಂದೆಯವರು ಹರಕು ಮುರುಕು ಹಿಂದಿಯಲ್ಲಿ ಮಾತಾಡಿ, ತಕ್ಷಣ ನನಗೆ ಕನ್ನಡದಲ್ಲಿ ಹೇಳುತ್ತಿದ್ದರು. ಆತನೆಲ್ಲಿ ನನ್ನನ್ನು ಎತ್ತಿಕೊಂಡು ಆಕಾಶಕ್ಕೆ ಎಸೆದು ಕ್ಯಾಚ್ ಎನ್ನುತ್ತಾನೇನೋ ಎಂಬ ಭಯದಿಂದಲೇ ನಾನು ಅಮ್ಮನ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದೆ. ‘ಹೋಗ್ತೀಯಾ ಅವನ್ ಜೊತೆ ಫಾರಿನ್‌ಗೆ?’ ಎಂದು ಗುಂಡ ನನ್ನನ್ನು ಕೇಳುವಾಗ ನಾನು ಇನ್ನೂ ಹೆದರಿ, ಅಡ್ಡಡ್ಡ ತಲೆ ಅಲ್ಲಾಡಿಸಿದ್ದೆ. ಮೊನ್ನೆ ನನ್ನ ಸಹೋದ್ಯೋಗಿ ಸನ್ಮಿತ್ರರು ‘ನಿಮ್ಮ ಮಗ ಇರೋ ಲಂಡನ್ನಿಗೆ ಯಾವಾಗ ಹೋಗ್ತೀರಾ?’ ಎಂದಾಗಲೂ ಅದೇ ರೀತಿ ತಲೆ ಅಲ್ಲಾಡಿಸಿದೆ. ಆಗಲೂ ಈಗಲೂ ನಾನು ಈ ವಿಚಾರದಲ್ಲಿ ಬದಲಾಗಿಯೇ ಇಲ್ಲ!
ಗುಂಡನ ಜೊತೆಯಲ್ಲಿ ನಮ್ಮ ತಂದೆಯವರು ಹಿಂದಿ ಸಿನಿಮಾಗಳಿಗೆ ಹೋಗುತ್ತಿದ್ದರು.

ಒಮ್ಮೊಮ್ಮೆ ಆ ಇಕ್ಕಳದ ಫಾರಿನ್ ಮ್ಯಾನ್ ಕೂಡ ಜೊತೆಯಾಗುತ್ತಿದ್ದ. ಹಿಂದಿ ಸಿನಿಮಾದ ನಾಯಕಿಯರು ಉಟ್ಟ ತೊಟ್ಟ ವೈವಿಧ್ಯಮಯ ವಸ್ತçವಿಭೂಷಣಗಳ ನಾನಾ ನಮೂನೆಗಳನ್ನು ತಮ್ಮ ಕಣ್ಣಳತೆಯಲ್ಲಿ ಸೆರೆ ಹಿಡಿದುಕೊಂಡು ಬಂದು ಹೊಸ ಫ್ಯಾಷನ್ನಿನ ಲಂಗ, ಜಂಪರು, ರವಿಕೆಗಳನ್ನು ಹೊಲಿಯುತ್ತಿದ್ದರು. ಅವರ ಜೊತೆ ಸಿನಿಮಾಗೆ ಹೋಗುವುದಕ್ಕೂ ನಮ್ಮಮ್ಮನಿಗೆ ಇದೇ ಕಾರಣ ಕೊಡುತ್ತಿದ್ದರು. ‘ಏನೋ ಒಂದಷ್ಟು ಹೊಸ ಡಿಸೈನು ಕಲಿಯಲಿ, ಅದು ಜೀವನಕ್ಕೆ ಬೇಕು; ಆದರೆ ಆ ಉಂಡಾಡಿ ಗುಂಡರಿಂದ ದುರ್ವಿದ್ಯೆ ಕಲಿಯದಿದ್ದರೆ ಸಾಕು’ ಎಂದು ನಮ್ಮ ತಾಯಿ ದೇವರಲ್ಲಿ ಕೇಳುತ್ತಿದ್ದರು.

ಆದರೆ ನಮ್ಮ ತಂದೆಯವರ ಹಿರಿಯಣ್ಣ ಸೀನಿ ದೊಡ್ಡಪ್ಪ (ಹೆಸರು ಶ್ರೀನಿವಾಸಮೂರ್ತಿ, ಇವರೂ ಬೈ ಬರ್ತ್ ಡೆಫ್ ಅಂಡ್ ಡೆಮ್) ಸಹ ಆಗಾಗ ಸೈಕಲ್ ಮೂಲಕ ನಮ್ಮ ಮನೆಗೆ ಬರುತ್ತಿದ್ದರು. ಸ್ಟ್ಯಾಂಡು ಹಾಕಿದ ಅವರ ಸೈಕಲ್ಲಿನ ಚಕ್ರ ತಿರುಗಿಸುವುದು ನನ್ನ ಪ್ರೀತಿಯ ಹವ್ಯಾಸ. ಆಮೇಲಾಮೇಲೆ ಅವರ ಸೈಕಲನ್ನು ತಳ್ಳಿಕೊಂಡು ಅಷ್ಟು ದೂರ ಹೋಗಿ ಬಂದು ನಿಲ್ಲಿಸುತ್ತಿದ್ದೆ. ಆಗೆಲ್ಲಾ ಅವರ ಹರ್ಕ್ಯುಲೆಸ್ ಸೈಕಲ್ಲು ನನ್ನ ಪಾಲಿಗೆ ಲ್ಯಾಂಬೋರ್ಗಿನಿ! ಅವರನ್ನು ಕಂಡರೆ ನಮ್ಮಮ್ಮ ಮಾತ್ರ ಪ್ರೀತಿ ಮತ್ತು ಗೌರವಗಳಿಂದ ನಡೆದುಕೊಳ್ಳುತ್ತಿದ್ದರು. ಕಾಫಿ ಮಾಡಿ ಕೊಡುತ್ತಿದ್ದರು. ಅಣ್ಣತಮ್ಮಂದಿರು ಮಾತಾಡಿಕೊಳ್ಳುತ್ತಿದ್ದ ಮೂಗರ ಸಂಜ್ಞೆಗಳನ್ನು ನಾನು ಬೆರಗಿನಿಂದ ನೋಡುತ್ತಿದ್ದೆ. ಅಲ್ಪ ಸ್ವಲ್ಪ ಕಲಿತೆ. ಅವರು ಹೊಲಿಗೆ ಯಂತ್ರವನ್ನು ಬಳಸುತ್ತಿರಲಿಲ್ಲವಾದ್ದರಿಂದಲೋ ಏನೋ ನಮ್ಮಮ್ಮನಿಗೆ ಸಮಾಧಾನ ಸಂತೋಷಗಳಿದ್ದವು. ಗುಂಡೂಮಾಮನ ಶಿಷ್ಯಜಾನ್ ಪಾಲ್ ಬಂದಾಗಲೆಲ್ಲಾ ‘ಇಕ್ಕಳ ಕೊಟ್ಟು ಮರುಳು ಮಾಡಲು ನೋಡ್ತಾನೆ; ಇನ್ನೊಂದು ಸಲ ಅವನು ಮನೆಗೆ ಬಂದರೆ ಗ್ರಾಚಾರ ಬಿಡಿಸ್ತೀನಿ’ ಅಂತ ನಮ್ಮಮ್ಮ ಬಾಯಿ ಜೋರು ಮಾಡಿದಾಗ ‘ಅವನೆಲ್ಲೇ ಮರುಳು ಮಾಡ್ದಾ? ಅವನೇ ನಮ್ ಗುಂಡನ ಕೈ ಚಳಕಕ್ಕೆ ಮರುಳಾಗಿದಾನೆ’ ಎಂದು ನಮ್ಮಪ್ಪ ತಣ್ಣನೆಯ ಉತ್ತರ ಕೊಟ್ಟು ಸುಮ್ಮನಾಗಿಸುತ್ತಿದ್ದರು. ‘ಅದ್ಯಾಕೆ ಬರಬೇಕು ಆ ಬಿಳಿಚರ್ಮದವನು, ಅಕ್ಕಪಕ್ಕದವರು ಏನೆಂದುಕೊಳ್ಳುತ್ತಾರೆ?’ ಅನ್ನೋದು ನಮ್ಮಮ್ಮನ ಆತಂಕವಾಗಿತ್ತು.

‘ವಿದೇಶಿಯರು ಮನೆ ಹೊಸಿಲು ತುಳಿಯಬಾರದು, ಏನೇನೋ ತಿಂದಿರ್ತಾರೆ, ಕುಡಿದಿರ್ತಾರೆ, ಹಾಳಾದವರು……ಇಷ್ಟಕ್ಕೂ ಸಮುದ್ರ ದಾಟಿ ಬಂದವರನ್ನ ಮನೆಗೆ ಸೇರಿಸಬಾರದು ಅಂತ ನಮ್ಮಜ್ಜಿ ಹೇಳುತ್ತಿದ್ದರು’ ಎಂದು ನಮ್ಮಮ್ಮ ಅಸಹ್ಯಿಸುತ್ತಿದ್ದರು. ಫಾರಿನ್ನೋರು ಮನೆಗೆ ಬಂದರೆ ಅದೊಂದು ಪ್ರೆಸ್ಟೀಜು, ದೊಡ್ಡಸ್ತಿಕೆ ಅಂತ ಆಮೇಲಾಮೇಲೆ ಸಮಾಜದಲ್ಲೊಂದು ಭಾವನೆ ಬಲವಾದ ಮೇಲೆ ನನಗೆ ಇವೆಲ್ಲಾ ನೆನಪಾಗಿ ಕಕಮಕವಾಗುತ್ತಿತ್ತು. ಎಷ್ಟು ಬೇಗ ನಮ್ಮ ಕಣ್ಣ ಮುಂದೆಯೇ ಮೌಲ್ಯಗಳು ಪಲ್ಲಟಗೊಳ್ಳುತ್ತಿವೆ? ಭಾವಗಳು ಬದಲಾಗುತ್ತಿವೆ! ಎಂದು ಅಚ್ಚರಿಯಾಗುತ್ತಿತ್ತು. ಜಾಗತೀಕರಣಗೊಂಡಿದ್ದರಿಂದ ವಿದೇಶ ಮಾತ್ರವಲ್ಲ; ವಿದೇಶೀಯರು ಸಹ ನಮಗೆ ಹತ್ತಿರದವರಾದರು. ಇಲ್ಲದಿದ್ದರೆ ಕೂಪಮಂಡೂಕಗಳಾಗುತ್ತಿದ್ದೆವು ಎಂದೇ ನನಗೆ ಅನಿಸಿದೆ. ಕವಿ ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವವರೆಗೂ ನನಗೆ ನಮ್ಮಮ್ಮನ ಕಾಲದವರ ಭಾವನೆಗಳು ಭ್ರಮೆಗಳೆಂಬುದೇ ತಿಳಿಯುತ್ತಿರಲಿಲ್ಲ. ಇದರಲ್ಲಿ ಅವರ ತಪ್ಪೂ ಏನೂ ಇಲ್ಲ. ಏಕೆಂದರೆ ಅವರು ಬೆಳೆದ ಮತ್ತು ಬೆಳೆಸಿದ ಮನೆಯ ವಾತಾವರಣವೇ ಹಾಗಿತ್ತು. ಎಜುಕೇಷನ್ ಎಷ್ಟು ಮುಖ್ಯ ಎಂಬುದನ್ನು ಇವೆಲ್ಲ ನನಗೆ ತಿಳಿಸಿ ಕೊಡುತ್ತಿದ್ದವು. ನಾನು ಸಹ ಶಾಲೆಗೆ ಹೋಗಿ ವಿದ್ಯೆ ಕಲಿಯದೇ ಹೋಗಿದ್ದರೆ, ಒಂದೋ ದರ್ಜಿಯಾಗಿ ಬಟ್ಟೆ ಹೊಲಿಯುತ್ತಿದ್ದೆ ಅಥವಾ ನಮ್ಮ ಚಿಕ್ಕಪ್ಪ ದೊಡ್ಡಪ್ಪನವರ ಮಕ್ಕಳ ಹಾಗೆ, ಅಡುಗೆ ಕೆಲಸಕ್ಕೆ ಹೋಗುತ್ತಿದ್ದೆ. ಕೇಟರಿಂಗ್ ಕಂಟ್ರಾಕ್ಟರ್ ಆಗುತ್ತಿದ್ದೆನೋ? ಅಥವಾ ಅಂಥ ಕೇಟರಿಂಗ್‌ನವರ ಕೈಕೆಳಗೆ ಕೆಲಸ ಮಾಡುತ್ತಿದ್ದೆನೋ? ಗೊತ್ತಿಲ್ಲ.

ಗುಂಡೂರಾಯರ ಜಾದೂ ಇರಲಿ, ‘ನನ್ನ ಬದುಕೇ ಒಂದು ದೊಡ್ಡ ಜಾದು; ಜಗತ್ತಿನ ಬಹು ದೊಡ್ಡ ಆಕಸ್ಮಿಕಗಳಲ್ಲಿ ಒಂದು’ ಎಂದು ಎಷ್ಟೋ ಸಲ ಅನಿಸಿದ್ದಿದೆ.
ತುಂಬಾ ಖಾಡಾಖೋಡವಾಗಿ ಇದ್ದ ಆ ಜಾನ್‌ಪಾಲ್‌ನ ಇಕ್ಕಳವು ಹಲವು ವರ್ಷಗಳ ಕಾಲ ಬಾಳಿಕೆ ಬಂತು. ಸುಮಾರು ಇಪ್ಪತ್ತು ವರ್ಷಗಳಾದ ಮೇಲೆ ಒಮ್ಮೆ ಅಡುಗೆಮನೆಯ ಕಟ್ಟೆಯ ಮೇಲಿಂದ ಬಿದ್ದು ಅದರ ಒಂದು ಭಾಗದ ಹಿಡಿಕೆ ಮುರಿದು ಹೋಯಿತು. ನಮ್ಮ ತಂದೆಯವರು ಬೇಜಾರು ಮಾಡಿಕೊಂಡು, ಅದೆಲ್ಲೋ ವೀರನಗೆರೆ ಬಳಿ ಇದ್ದ ಸಾಲ್ಡರಿಂಗ್ ಅಂಗಡಿಯಲ್ಲಿ ರಿಪೇರಿ ಮಾಡಿಸಿ ತಂದಿಟ್ಟರು. ಅದರಿಂದ ಆ ಇಕ್ಕಳದ ಆಕಾರವೇ ಕೆಟ್ಟು ಹೋಯಿತು. ಒಂದು ಕೋಲಿಗೆ ದಾರದುಂಡೆ ಸುತ್ತಿದಂತೆ ಮತ್ತು ಮಂಡಿಚಿಪ್ಪು ಎದ್ದು ಕಾಣುವ ಆದರೆ ಬಡವಾಗಿ ಸೊರಗಿದ ಮೊಣಕಾಲಿನಂತೆ ಕಾಣತೊಡಗಿತು. ನಮ್ಮಮ್ಮನಂತೂ ಅಡುಗೆಮನೆಯ ಕಟ್ಟೆಗೇ ಶಾಪ ಹಾಕಿ, ಬೀಳಿಸಿದ ಸಿಟ್ಟನ್ನು ತೀರಿಸಿಕೊಂಡರು. ‘ಇಷ್ಟು ದಿವಸ ನೆಲದ ಮೇಲೆ ಸ್ಟವ್ ಇಟ್ಟು ಅಡುಗೆ ಮಾಡುತ್ತಿದ್ದೆವು. ಆಗೆಲ್ಲಾ ಯಾವುದೂ ಬೀಳುತ್ತಿರಲಿಲ್ಲ. ಈಗ ದರಿದ್ರ ಅದೇನೋ ಅಡುಗೆಮನೆಗೆ ಕಟ್ಟೆಯಂತೆ; ಎಲ್ಲವನ್ನೂ ಮೇಲಿಟ್ಟು ಅಡುಗೆ ಮಾಡಬೇಕಂತೆ, ಹಾಗಾಗಿ ಮೇಲಿಂದ ಇಕ್ಕಳಾನೂ ಬೀಳುತ್ತೆ; ಅನ್ನದ ಪಾತ್ರೇನೂ ಬೀಳುತ್ತೆ, ಇದೇನು ಸುಡುಗಾಡು ಫ್ಯಾಷನ್ನೋ’ ಎಂದು ಬಯ್ದರು. ವಯಸಾದ ಮೇಲೆ ಎದ್ದೂ ಕೂತು ಮಾಡಲು ತ್ರಾಸವಾಗುತ್ತದೆ; ಹಾಗಾಗಿ ಪ್ರತ್ಯೇಕ ಅಡುಗೆಮನೆ ಮತ್ತು ಅದಕ್ಕೆ ಅಡುಗೆ ಕಟ್ಟೆ ಇರುವ ಮನೆಯನ್ನು ನಮ್ಮ ತಂದೆಯವರು ಬಾಡಿಗೆಗೆ ಹಿಡಿದಿದ್ದರು. ಇಕ್ಕಳದ ಸೊಂಟ ಮುರಿಯಲು ಇದೇ ಕಾರಣವೆಂಬುದು ನಮ್ಮಮ್ಮನ ವಾದ! ಒಮ್ಮೆ ಅದು ರಿಪೇರಿ ಮಾಡಿಸಿಕೊಂಡು ಬಂದ ಮೇಲಂತೂ ಅದನ್ನು ಬಳಸುವಾಗಲೆಲ್ಲಾ ಆತಂಕವಾಗುತ್ತಿತ್ತು. ಎಲ್ಲಿ ಅದು ಜಾಯಿಂಟಾದ ಜಾಗ ದುರ್ಬಲವಾಗಿ ಮತ್ತೆ ಮುರಿದೀತೇನೋ ಎಂಬ ಗಾಬರಿ. ಇದರಿಂದಾಗಿ ನಮ್ಮ ತಾಯಿಯವರು ಮತ್ತೆ ಯಥಾಪ್ರಕಾರ ಸುಡುಪಾತ್ರೆಗಳನ್ನು ಒಲೆಯ ಮೇಲಿನಿಂದ ಇಳಿಸಲು ಒಣಬಟ್ಟೆಯನ್ನೇ ಬಳಸಲು ಶುರು ಮಾಡಿದರು. ಅದರ ಉಪಯೋಗವಿಲ್ಲೆಂದು ಮನಗಂಡ ನಮ್ಮಮ್ಮ ಅದನ್ನು ಎಲ್ಲೋ ಎತ್ತಿಟ್ಟು ಬಿಡುತ್ತಿದ್ದರು. ನಮ್ಮ ತಂದೆಯವರು ಬೆಳಗಿನ ಜಾವವೇ ಬೆಡ್‌ಕಾಫಿ ಸಂಭ್ರಮವನ್ನು ಪ್ರತಿ ದಿನವೂ ಆಚರಿಸುವಾಗ ತಮ್ಮ ಗುಂಡನ ಶಿಷ್ಯ ಕೊಡ ಮಾಡಿದ್ದ ಇಕ್ಕಳವನ್ನು ಹುಡುಕುತ್ತಿದ್ದರು. ತಕ್ಷಣಕ್ಕೆ ಕೈ ಸಿಗದಂತೆ ಎಲ್ಲಿಯೋ ಎತ್ತಿಟ್ಟು ಬಿಡುತ್ತಾಳೆಂದು ರೇಗುತ್ತಿದ್ದರು. ಬೆಳಗಿನ ಜಾವದ ಸವಿನಿದ್ದೆಯಲಿ ಕನಸು ಕಾಣುತ್ತಿದ್ದ ನನಗೆ ಅವರ ರೇಗುವಿಕೆಯಿಂದಾಗಿ ಎಚ್ಚರಗೊಳ್ಳುತ್ತಿದ್ದೆ. ಆಗೆಲ್ಲಾ ಗುಂಡೂಮಾಮನೂ ಅವರ ಶಿಷ್ಯೋತ್ತಮನೂ ನನ್ನ ಕಣ್ಣಮುಂದೆ ಬಂದು ತಮ್ಮ ಜಾದೂ ಪ್ರದರ್ಶಿಸುತ್ತಿದ್ದರು. ಎಷ್ಟೋ ಬಾರಿ ಬೆಳಗಿನ ಸವಿನಿದ್ದೆಯು ಅವರ ಕನಸುಗಳಿಂದಲೇ ತುಂಬಿರುತ್ತಿದ್ದವು.

ಹೀಗೆ ಇಕ್ಕಳವೂ ಒಮ್ಮೆ ಹೀರೋ ಆಗಿ, ಇನ್ನೊಮ್ಮೆ ವಿಲನಾಗಿ ತನ್ನ ಪಾತ್ರಾಂತರ ಮಾಡುತ್ತಿತ್ತು. ನಮ್ಮ ತಂದೆಯವರಿಗೆ ಅದು ತಮ್ಮ ಕಡೆಯವರ ಸಕಲ ಪರಿವಾರದ ಸಂಕೇತ; ಆದರೆ ನಮ್ಮಮ್ಮನಿಗೆ ಮಾತ್ರ ತನ್ನ ಗಂಡನ ಕಡೆಯವರನ್ನು ದೂರುವ ದಾರಿ ಮತ್ತು ಹೀಯಾಳಿಸುವುದೇ ಗುರಿ! ಇಕ್ಕಳದ ಗುಣವೇ ಗಟ್ಟಿಯಾಗಿ ಕಚ್ಚಿ ಹಿಡಿಯುವುದು! ಅದು ಗಟ್ಟಿಯಾಗಿ ಹಿಡಿಯದಿದ್ದರೆ ಪ್ರಯೋಜನಕ್ಕೆ ಬರುವುದಿಲ್ಲ. ನಾವು ಗಟ್ಟಿಯಾಗಿ ಹಿಡಿಯಬೇಕು ಜೊತೆಗೆ ಕೈ ಬೆರಳುಗಳನ್ನು ಸಡಿಲ ಬಿಟ್ಟಾಗ ಅದು ಬಾಯಿ ತೆರೆದು ತನ್ನ ಹಿಡಿತವನ್ನು ಬಿಡಬೇಕು. ಇಷ್ಟಕೂ ಇಕ್ಕಳ ಇರುವುದು ನಮಗೆ ಸಹಾಯ ಮಾಡಲು. ಅದೊಂದು ಸನ್ನೆ ಅಥವಾ ಉಪಕರಣ. ಅದನ್ನು ಬಳಸುವುದು ಸಹ ಒಂದು ಕಲೆ. ಒಂದು ಕಾಲದ ಅಡುಗೆಮನೆಯಲ್ಲಿ ಇಕ್ಕಳವು ನಡೆಸಿದ ಸದ್ದಿಲ್ಲದ ಕ್ರಾಂತಿಯಿದು. ಹರಿದು ಚಿಂದಿಯಾದ ತುಂಡುಬಟ್ಟೆಯ ಬದಲಿಗೆ ಡೀಸೆಂಟಾದ ಇಕ್ಕಳವನ್ನು ಬಳಸುವುದು ಸುಧಾರಣೆಯ ಮತ್ತು ಅಚ್ಚುಕಟ್ಟಾದ ಕೆಲಸ. ಆದರೆ ಬಟ್ಟೆಯಲ್ಲಿ ಬಿಸಿಪಾತ್ರೆಯನ್ನು ಹಿಡಿದು ಅಭ್ಯಾಸವಾದ ಕೈಗಳಿಗೆ ಇಕ್ಕಳವನ್ನು ಬಳಸಿ ಕೆಲಸ ಮಾಡುವುದು ಪ್ರಾರಂಭದಲ್ಲಿ ಕಷ್ಟಕರ. ಎಷ್ಟೇ ಬೇಡವೆಂದರೂ ಇಕ್ಕಳದ ಬದಲಿಗೆ ಬಟ್ಟೆಗೇ ಕೈ ಹೋಗುವುದು ರೂಢಿ. ಇದು ಒಂದು ಕಾಲದ ಅಡುಗೆಮನೆಯ ಸ್ಥಿತಿಗತಿಯಾಗಿತ್ತು. ನಮ್ಮಜ್ಜಿಯಂತೂ ಸ್ವಲ್ಪ ಶಾಖವಿದ್ದ ಪಾತ್ರೆಯನ್ನು ಒಲೆಯ ಮೇಲಿನಿಂದ ಇಳಿಸಲು ಯಾವ ಬಟ್ಟೆಯನ್ನೂ ಬಳಸುತ್ತಿರಲಿಲ್ಲ. ಅವರಿಗದು ‘ಮಡಿಗೆ ಬರುತ್ತದಾ? ಇಲ್ಲವಾ?’ ಎಂಬುದೇ ಮೊದಲನೆಯ ಚಿಂತೆ. ಮಡಿಗೆ ಬರುವುದಾದರೆ ‘ಅದು ಎಲ್ಲಿತ್ತು? ಎಲ್ಲಿದೆ?’ ಎಂಬುದು ಎರಡನೆಯ ಚಿಂತೆ. ಹಾಗಾಗಿ ಬಿಸಿಪಾತ್ರೆಯನ್ನು ಹಾಗೆಯೇ ಬರಿಗೈಯಿಂದಲೇ ಇಳಿಸಿ ಅಭ್ಯಾಸ ಮಾಡಿಕೊಂಡಿದ್ದರು. ಇದೂ ನನ್ನ ಪಾಲಿಗೆ ಜಾದುವೇ ಆಗಿತ್ತು. ‘ಕೈ ಸುಡುವುದಿಲ್ಲವಾ ಅಜ್ಜಿ?’ ಎಂದರೆ ‘ಅಭ್ಯಾಸ ಕಣೋ, ಬಿಸಿ ತಾಗೀ ತಾಗೀ ಕೈಗೆ ರೂಢಿಯಾಗಿದೆ’ ಎನ್ನುತ್ತಿದ್ದರು. ಬದುಕಿನ ಕಷ್ಟಗಳನ್ನೂ ಹಾಗೆಯೇ ಅಭ್ಯಾಸ ಮಾಡಿಕೊಂಡಿದ್ದರು ಎಂಬುದು ನನಗೆ ತುಂಬ ವರುಷಗಳಾದ ಮೇಲೆ ಹೊಳೆಯಿತು. ಮನುಷ್ಯ ಸಂಬಂಧಗಳೂ ಹಾಗೆಯೇ. ಯದ್ಭಾವಂ ತದ್ಭವತಿ; ನಾವು ಹೇಗೋ ಹಾಗೆ. ಸುಖಕ್ಕೆ ಹೊಂದಿಕೊಳ್ಳುವ ಹಾಗೆ ಕಷ್ಟಕ್ಕೆ ಹೊಂದಿಕೊಳ್ಳಲು ಆಗದು. ಭಿಕಾರಿಯೊಬ್ಬ ಮಹಾರಾಜನಾದರೆ ಮೈ ಮರೆಯಬಹುದು; ಆದರೆ ಮಹಾರಾಜ ಭಿಕಾರಿಯಾದರೆ ಜೀವನ ಘನಘೋರವಾಗುವುದು. ನಮ್ಮಜ್ಜಿಗೆ ಸುಖದುಃಖಗಳು ನೀರು ಕುಡಿದಷ್ಟು ಸಹಜವಾಗಿತ್ತು. ಎರಡೂ ಅವನದೇ ಬಹುಮಾನ; ಮತ್ತೇಕೆ ಬಿಗುಮಾನ ಎಂಬುದವರ ಸಹಜ ನಿಲುವಾಗಿತ್ತು.
ತರಗತಿಗಳಲ್ಲಿ ಮೊದಲು ಪಾಠ ಕಲಿತು ಆನಂತರ ಪರೀಕ್ಷೆ ಬರೆಯುತ್ತೇವೆ; ಆದರೆ ಬದುಕೆಂಬುದು ಮೊದಲು ಪರೀಕ್ಷಿಸಿ ಆನಂತರ ಪಾಠ ಕಲಿಸುತ್ತದೆ. ನಮ್ಮ ಬಂಧುಗಳ ವಿಚಾರದಲ್ಲಿ ಇದು ನೂರಕ್ಕೆ ನೂರು ನಿಜ. ಅದರಲ್ಲೂ ಗುಂಡೂಮಾಮನ ಜೀವ ಜೀವನದ ಏರಿಳಿತಗಳು ನನಗೀಗಲೂ ನುಂಗಲಾರದ ತುತ್ತು. ಅವರಿದ್ದ ಬಗೆ, ಕಿತ್ತು ತಿನ್ನುವ ಬಡತನ, ಶಾಲಾ ಕಾಲೇಜು ಶಿಕ್ಷಣದ ಕೊರತೆ, ಆಸ್ಥೆ-ಅಕ್ಕರಾಸ್ಥೆಗಳಿಲ್ಲದೇ ಬಳಲುವಿಕೆ, ಪರವೂರು-ಪರದೇಶ-ಪರಭಾಷೆ-ಅಲ್ಲೆಲ್ಲೋ ಇದ್ದು ಕೌಶಲ್ಯದ ಗಳಿಕೆ, ಆ ದೇಶವಾಸಿಗಳನ್ನೇ ಶಿಷ್ಯರನ್ನಾಗಿ ಪಡೆಯುವಿಕೆ, ಏನೋ ಅಚಾತುರ್ಯ-ಆಕಸ್ಮಿಕ-ಅನಿರೀಕ್ಷಿತಗಳ ನಿಭಾವಣೆ, ಗಳಿಸಿದ ಎಲ್ಲವನೂ ಕಳೆದುಕೊಳ್ಳುವಿಕೆ, ಎಲ್ಲವನೂ ಗಳಿಸಿ, ಕಳೆದುಕೊಂಡು ಇಷ್ಟೇ ಜೀವನ ಎಂಬ ಹಳಹಳಿಕೆ, ನಿರ್ಲಿಪ್ತತೆ ಇವೆಲ್ಲವನ್ನೂ ವಿಶ್ಲೇಷಿಸಿದಾಗ ಗೆದ್ದವರಲ್ಲಿ ಅಹಮು ಅಡರಿದರೆ ಸೋತವರಲ್ಲಿ ಕತೆಗಳಿರುತ್ತವೆ; ಸ್ವಾನುಭವದ ವ್ಯಥೆಗಳಿರುತ್ತವೆ ಎಂದು ಗೊತ್ತಾಯಿತು.

-ಡಾ. ಹೆಚ್ ಎನ್ ಮಂಜುರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
MANJURAJ H N
MANJURAJ H N
1 month ago

ಪ್ರಕಟಿಸಿದ್ದಕಾಗಿ ಧನ್ಯವಾದಗಳು

M.Kusuma
M.Kusuma
1 month ago

ವ್ಯಕ್ತಿಚಿತ್ರದಿಂದ ಸಮಷ್ಟಿ ಜೀವನತತ್ವಕ್ಕೆ ತೆರೆದುಕೊಳ್ಳುವ ಈ ಸ್ವಾನುಭವದ ಲೇಖನದಲ್ಲಿ ಬಾಲ್ಯದ ಮುಗ್ಧತೆ, ವಯಸ್ಕರ ಪರಿಪಾಟಲು, ಹುಡುಕಾಟ; ಬದಲಾವಣೆಗೆ ತೆರೆದುಕೊಂಡೂ ಅಸ್ಮಿತೆ ಉಳಿಸಿಕೊಳ್ಳುವ ಜಂಜಾಟ, ಇಂತಹ ಜೀವನದ ಹಲವಾರು ಮಗ್ಗಲುಗಳನ್ನು ಮೂರನೇ ವ್ಯಕ್ತಿಯಾಗಿ ನಿಂತು ಚಿತ್ರಿಸಿದ ಪರಿ ಬಹಳ ಇಷ್ಟವಾಯ್ತು. ಗುಂಡುಮಾಮ ಮತ್ತು ಇಕ್ಕಳ, ವ್ಯಕ್ತಿ ಹಾಗೂ ವಸ್ತುವಿಗೆ ಉಪಮೆಯಾಗಿ ಓದುಗರ ಮನಸಿನಾಳಕ್ಕೆ ಇಳಿದುಬಿಡುತ್ತಾರೆ. ಲೇಖನದಲ್ಲಿ ದಾಖಲಾಗುವ ಮಾನವ ಸಂಬಂಧಗಳ ಬೆರಗು, ವಿಷಾದ, ಆತ್ಮೀಯತೆ ನೆನಪಿನಂಗಳದ ಪಾತಾಳಗರಡಿಗೆ ದಕ್ಕಿ, ವಿಸ್ತರಿಸುತ್ತಾ, ಕೊನೆಗೊಮ್ಮೆ ಓದುಗರ ಪ್ರಜ್ಞಾವಲಯದಲ್ಲಿ ಲೀನವಾಗುವ ಪರಿ ಲೇಖಕರ ಗರಿಮೆಯೆನ್ನಬಹುದು. ಅಭಿನಂದನೆಗಳು ಸರ್.
—- ಎಂ. ಕುಸುಮ, ಹಾಸನ.

2
0
Would love your thoughts, please comment.x
()
x