ಪ್ರೀತಿ
ಎಷ್ಟು ಪ್ರೀತಿ, ಎಷ್ಟ್ ಎಷ್ಟೋ ಪ್ರೀತಿ,
ಸತ್ಯವೇ ಕಾಣುವ ಪ್ರೀತಿಯಾಗಿ,
ನಂಬಿಕೆಯ ಅನಿವಾರ್ಯತೆ ಇಲ್ಲದ ಪ್ರೀತಿ,
ಬಯಕೆಗಳ ಮೀರಿ ಇರುವ ಪ್ರೀತಿ,
ಪರರ ಕಾಡದ, ಎನ್ನ ನೋಯಿಸದ,
ಗೌರವದ ಶ್ರೇಣಿ ಇದು ಪ್ರೀತಿ,
ಶಾಂತಿಯ ಧರಿಸಿದ ಪ್ರೀತಿ,
ಬದುಕನ್ನ ಸ್ವೀಕರಿಸಿ ಅದುವೇ,
ಬಯಲೆಂದು ಅರಿತ ಪ್ರೀತಿ,
ಅರಿತು ಓಡುತಲಿರಲು,
ಜಂಗಮನಲ್ಲವೆ ಶರಣಾಗತಿಯೆ
ಅಧಮ್ಯ ಶಕ್ತಿಯ ಮೇಲಿನ ಪ್ರೀತಿ.
*
ತರಂಗ ರೂಪ
ಬೆಲೆಯುಳ್ಳ ಚುಕ್ಕಿಗಳು,
ಬಗೆ ಬಗೆಯ ಜೋಡಿಗಳ,
ಸುಂದರ ಮಿಲನ ನಾ,
ನನ್ನೀ ಗಣಿತ ಕಾರ್ಯಕ್ಕೆ,
ಪ್ರಕ್ಷೇಪಣಗೆ ಜಾಗ ಉಂಟು,
ಹೊರತೆಗೆಯುವಿಕೆಯು ಸಾಧ್ಯ,
ಅಂಶಗಳ ಧರಿಸುವ ಭರದಲ್ಲಿ,
ಸಾಗರದ ತೀರವ,
ಮುಟ್ಟಿ ಬಂದಿದ್ದೇ, ಬಂದಿದ್ದು,
ಪ್ರೀತಿಯ ಅಂಶಗಳ ತೊಟ್ಟ ನಂತರ,
ಕತೃ, ಕರ್ಮ, ಕ್ರಿಯೆ,
ಎಲ್ಲಾ ನಾನೆ ಎಂದರಿತು,
ತರಂಗ ತಂಪಾದಳು.
*
ಪ್ರಿಯಳು
ಸಹಜ ಬೇಂದ್ರೆ ಪ್ರಿಯಳು ನಾ,
ಇವರ ಕಾವ್ಯ ಬಾವ ಹೃದಯ ಹೊಕ್ಕು, ನಕ್ಕು,
ಮೆದುಳಲ್ಲಿ ಹರಡಿ, ನಲಿದು,
ಕಾಣುತ್ತವೆ ಮೋಕ್ಷ,
ನಿಶ್ಚಿತ ಕುವೆಂಪು ಪ್ರಿಯಳು ನಾ,
ಇವರ ಸಾಹಿತ್ಯ ದರ್ಶನ ಮೆದುಳ ತಣಿಸಿ,
ಹೃದಯಕ್ಕೆ ಮಾನವೀಯತೆಯ,
ಉಣಬಡಿಸಿ ತಾಳುತ್ತವೆ ಮೌನ,
ಮನದಾಳದಿ ಕಾರಂತರ ಪ್ರಿಯಳು ನಾ,
ಇವರ ಸಾಹಿತ್ಯ ಕೃಷಿ ಹೃದಯ ಮೆದುಳ ಮಂಥಿಸಿ,
ಬದುಕೆಂಬ ಧ್ಯಾನಕ್ಕೆ ಕರುಣಿಸುತ್ತದೆ,
ಶ್ರೇಷ್ಠ ಅನುಭೂತಿಯ,
ಪ್ರಶ್ನಾತೀತವಾಗಿ ತೇಜಸ್ವಿ ಪ್ರಿಯಳು ನಾ,
ಇವರ ಕಾದಂಬರಿಗಳು ಹೃದಯ ಮೆದುಳೆಂಬ,
ಬೇಧವಿಲ್ಲದೆ ಎರಡ ಮೆಚ್ಚಿಸಿ ಬದುಕಿಗೆ,
ಧಾರೆಎರೆಯುತ್ತವೆ ಅದ್ವಿತೀಯ ವಿಸ್ಮಯತೆಯ
*
ವಿಶ್ವ
ಇಲ್ಲಿಂದ ಎನಲು ಎಲ್ಲಿಂದ,
ಎಲ್ಲಿಯವರೆಗೆ ಎನಲು ಏನು,
ಏನೆಂದು ಅರಿಯಲಿ ಬಾಹ್ಯ ಬದುಕ,
ಎಷ್ಟೆಂದು ಅರಿಯಲಿ ಅಂತರಾಳದ ಬದುಕ,
ಅರಿಯುವ ಪ್ರಯತ್ನ ಏಕೆ ಎಂದೆನಲು,
ಈ ಮನುಜಮನ ಮೆಚ್ಚದು,
ಅರಿತು ದೊರಕುವುದೇನೆಂದು ಅರಿಯದು,
ಅರಿಯಲೆಂದು ನೋಡುತಲಿರುವುದೇ ಭಾಗ್ಯ
ಅವರವರ ಭಾಗ್ಯ, ಬಗೆಬಗೆಯ ಭಾಗ್ಯ
ನೀಲಿ ಕನ್ನಡಕಕ್ಕೆ, ಜಗತ್ತೇ ಮೌನ
ಹಳದೀ ಕನ್ನಡಕಕ್ಕೆ, ಪ್ರಪಂಚವೇ ಪ್ರಜ್ವಲ
ಹಸಿರು ಕನ್ನಡಕಕ್ಕೆ, ಬ್ರಹ್ಮಾಂಡವೇ ಬನ,
ತೊಟ್ಟ ದರ್ಪಣಕ್ಕೆ ಸರಿಯಾದ ದರ್ಶನ,
ದರ್ಶನಕ್ಕೆ ಅನುವಾದ ವ್ಯಾಖ್ಯಾನ,
ವ್ಯಾಖ್ಯಾನವೇ ಇಲ್ಲದಲ್ಲಿ,
ಇರುವ ನೀನೆ ವಿಶ್ವ, ನಾನು ವಿಶ್ವ
ನಾವಿರುವುದು ವಿಶ್ವದಲ್ಲಿ
–ಚಾರುಶ್ರೀ ಕೆ ಎಸ್