ಕದಲಿಕೆ
ನಿನ್ನದೊದು ಸಣ್ಣ
ಸಾಂತ್ವನಕ್ಕಾಗಿ
ಅದೆಷ್ಟು ಕಾದಿದ್ದೆ
ನಿನಗದರ ಅರಿವಿತ್ತೇ
ನನ್ನ ದಿಮ್ಮನೆ ಭಾವ
ನೋಡಿ ಹೊರಟು
ಬಿಟ್ಟೆಯಲ್ಲ ದೂರ
ಹೋಗುವಾಗ ಹಾಗೆ
ನನ್ನ ಕಂಗಳ
ದಿಟ್ಟಿಸಿದ್ದರೆ
ಕಾಣುತ್ತಿತ್ತು
ನನ್ನ ಹಂಬಲಿಕೆ
ತೆಳ್ಳನೆ ಕಣ್ಣೀರ
ಪಸೆಯ ಆರ್ದ್ರತೆ
ನಿನ್ನದೊಂದು ಕದಲಿಕೆಗೆ
ನನ್ನೊಳಗಿನ
ಭಾವಗಳ ಸಡಿಲಿಕೆ
ಒಮ್ಮೆ ಕಣ್ಣಲ್ಲಿ ಕಣ್ಣು
ನೆಟ್ಟಿದ್ದರೆ ಸಾಕಿತ್ತು
ನೋಟ ಹೇಳುತ್ತಿತ್ತು
ನೀನು ಬೇಕೆಂದು
ಕೇಳಿಸಿಕೊಳ್ಳುವ
ತಾಳ್ಮೆ ಇಲ್ಲದ ನೀನು
ಹೇಳುವ ವಾಂಛೆ
ಇಲ್ಲದ ನಾನು
ಆಹಾ ಅದೆಂತಹ
ಜೋಡಿ ನಮ್ಮದು.
ಎದೆಯ ಗೂಡಿನೊಳಗೆ
ಬಚ್ಚಿಟ್ಟಿದ್ದೆ ಅನುರಾಗ
ಆದರೆ ನಿನಗೆ ಕಂಡಿದ್ದು
ಬಿರು ವದನ ಮಾತ್ರ
ಹುಡುಕುವ
ಪ್ರಾಮಾಣಿಕತೆ
ನಿನ್ನಲ್ಲಿದ್ದಿದ್ದರೆ
ಜೋಡಿ ಹಕ್ಕಿಯಾಗಿ
ಸುತ್ತಾಡ ಬಹುದಿತ್ತು
ಬಾನ ತುಂಬಾ
ಆದರೀಗ ರೆಕ್ಕೆ
ಮುರಿದ
ಹಕ್ಕಿಯಂತೆ
ನಿಂತಲ್ಲೇ
ಸುತ್ತುತ್ತಾ
ಚಡಪಡಿಸುವ
ದುಸ್ಥಿತಿ
*
ವಿಕಾರದ ಮರಳು
ಇದಿರು ಹಳಿಯುವುದು
ಬೇಡವೆ ಬೇಡ
ತನ್ನ ತಾ ಬಣ್ಣಿಸಿಕೊಳ್ಳುವುದಂತು
ಇಲ್ಲವೆ ಇಲ್ಲ
ಈ ಅಂತರಂಗದ
ಬಹಿರಂಗದ ಶುದ್ದಿಯ
ಅವಿರ್ಭವಿಸಿಕೊಂಡಂತೆಲ್ಲ
ಅಗ್ನಿ ಪರೀಕ್ಷೆ
ಅಯ್ಯೋ ಅನುವ
ಕರುಣೆಯೆ ಉರುಳು
ಹೃದಯ ವಿಕಾರದ ಮರುಳು
ಮಾತುಗಳ ಕಾಠೀಣ್ಯ
ಕಬ್ಬಿಣ ಕದದ ಮನಸು
ಒಡಲೆಲ್ಲಾ ಹಾಲಾಹಲ
ಕುಟುಕುವ ಚೇಳು
ಅಮೃತವೆಂಬ ಭ್ರಮೆಯಲಿ
ವಿಷವನೆ ಗಟಗಟನೆ ಹೀರಿ
ನೀಲಕಂಠನ ಹಾದಿಯಲಿ
ಲೋಕೋದ್ಧಾರದ ಕನಸಿನಲಿ
ವಿಲವಿಲ ಒದ್ದಾಟ ಮನಸಿನಲಿ
ನೀ ಅಂದಷ್ಟೂ ನಿನ್ನೋಳಗಿನ
ಅಲ್ಪತೆಗೆ ಮೆರುಗು ಬೆರಗು
ಅದು ಅರಿಯದ ನಿನ್ನೆಡೆಗೆ
ಅರೆ ಕ್ಷಣದ ಮರುಕ
ಮನದಂಧತೆಗೆ ಮದ್ದಿಲ್ಲ
ಅಂಕೆಯಿಲ್ಲದ ಮರ್ಕಟ
ಧಿಮಾಕಿನ ನರ್ತನ
ಆಗಲೆಬೇಕಿದೆ ಸಮಾಪ್ತಿ
ಬಿಟ್ಟಾಯಿತು ಎಳ್ಳು ನೀರು.
*
ನಾಳೆಯೆಂಬ ನಂಬಿಕೆ
ಬೆಳಗ್ಗೆ ನೆನೆಸಿಟ್ಟಿದ್ದ
ಅಕ್ಕಿಯನು ತೊಳೆದು
ಬೆಳಗ್ಗೆಯ ತಿಂಡಿಗಾಗಿ
ನುಣ್ಣಗೆ ರುಬ್ಬಿಟ್ಟಿದ್ದೇನೆ
ಒಂದಿಷ್ಟು ಆಲೂಗಡ್ಡೆಗಳನ್ನು
ಕುಕ್ಕರ್ನಲ್ಲಿ ಇರಿಸಿದ್ದೇನೆ
ನಾಳೆ ಕೂಗಿಸಲಿಂದು
ನಾಳೆ ಉಡುವ ಸೀರೆಯನ್ನು
ಇಸ್ತ್ರಿ ಮಾಡಿ ಇರಿಸಿದ್ದೇನೆ
ಒಂದೆ ಸಲ ಉಟ್ಟಿದ್ದ
ಮೈಸೂರು ಸಿಲ್ಕ್ ಸೀರೆ
ಇರಲಿ ಮುಂದಿನ
ದಿನಗಳ ಸಮಾರಂಭಕೆ
ನೆನ್ನೆ ನೋಡಿ ಇಷ್ಟವಾಗಿದ್ದ
ಕೆಂಪು ಕಲ್ಲಿನ ಸುಂದರ
ಬಳೆಯ ಖರೀದಿಯನ್ನು
ಬ್ಯಾಂಕ್ ಬ್ಯಾಲೆನ್ಸ್
ಇದ್ದಾಗ್ಯೂ ಮುಂದಕ್ಕಾಕಿದ್ದೇನೆ
ಗೆಳತಿ ಹೋಗಿ ಬಂದ
ಮಲೇಷಿಯಾ ಟ್ರಿಪ್
ಕುರಿತು ಹೇಳುವಾಗ
ಆಸೆಗಳು ಗರಿಕೆದರಿದರೂ
ರಜೆ ಇಲ್ಲದ ನೆಪ ಹೂಡಿ
ಅರಳಿದ ಆಸೆಗಳ ಕುಗ್ಗಿಸಿ
ಹಿಂಗಿಸಿ ಮುದುಡಿಸಿ
ತಟ್ಟಿ ತಟ್ಟಿ ಮಲಗಿಸಿದ್ದಾಯ್ತು
ನಾನಿಲ್ಲದೆ ಮನೆಯ
ಕೋಳಿ ಕೂಗುವುದೆ ಇಲ್ಲ
ಗಂಡನಿಗೂ ಮಗನಿಗೂ
ಏನೂ ತಿಳಿಯುವುದಿಲ್ಲ
ಅಡುಗೆ ಮನೆಯ
ಗಂಧ ಗಾಳಿ ಗೊತ್ತೇ ಇಲ್ಲ
ನಾನಿರಲೇ ಬೇಕು
ಸ್ವಂತಕೆ ಸೂರಿದ್ದರೂ
ಮತ್ತೊಂದು ಸೈಟಿಗೆ
ಅರ್ಜಿ ಸಲ್ಲಿಸಿದ್ದೇನೆ
ಚಂದವಾದ ಕನಸಿನ
ಅರಮನೆ ಕಟ್ಟಲು
ಅದಮ್ಯ ನಂಬಿಕೆ
ನಾಳೆ ಇದ್ದೇ ಇದೆಯೆಂದು
ರಾತ್ರಿ ಮಲಗುವಾಗ ಬೆಳಗಿನ
ಸೂರ್ಯನ ಕಿರಣ
ನೋಡಿಯೆ ನೋಡುವೆನೆಂದು
ಎದಿರು ಮನೆಯಾಕೆಗೆ
ಬೆಳಗು ಕಾಣಿಸದ ಹೃದಯ ಬೇನೆ
ಕನ್ನಡಿತಿಯ ಕೊಂದ ಅರ್ಬುದ
ಇದಕ್ಕೆಲ್ಲ ಅರೆಕ್ಷಣದ ಅನುಕಂಪ
ಮತ್ತದೆ ನಾಳೆಗಾಗಿ ಸಿದ್ದತೆ
–ಎನ್.ಶೈಲಜಾ ಹಾಸನ
ಎನ್.ಶೈಲಜಾ ಹಾಸನ ರಾಜ್ಯದ ಪ್ರಮುಖ ಕಾದಂಬರಿಗಾರ್ತಿಯಾಗಿದ್ದು ಇವರ ಅನೇಕ ಕಾದಂಬರಿಗಳು ಸುಧಾ, ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ಯಶಸ್ವಿಯಾಗಿ ತಲುಪಿ ಅಪಾರ ಮೆಚ್ಚುಗೆ ಪಡೆದಿವೆ. ಕಥಾ ಸಂಕಲನ, ಕಾದಂಬರಿ, ಲೇಖನಗಳ ಸಂಕಲನ, ಕವನ ಸಂಕಲನ, ಪ್ರಬಂಧ ಸಂಕಲನ ಹೀಗೆ ಒಟ್ಟು 25 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ. ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.