ನಾನು ಹಲವು ಬಾರಿ ಯೋಚಿಸುತ್ತಿರುತ್ತೇನೆ. ಭಾರತೀಯ ಹೆಂಗಸರ ಬಗ್ಗೆ ಯಾವಾಗಲೂ ಗುಸು ಗುಸು ಮಾಡುತ್ತಾರೆ ಎಂಬ ಆಪಾದನೆ ಎಷ್ಟು ಸರಿ ಎಂದು.
ಕೆನಡಾಗೆ ಹೋದಾಗಿನಿಂದ ಇದು ನನ್ನ ಮೂರನೇ ಕೆಲಸ. ಹಾಲು ಕೃಷಿಕರ ಹಿತಾಸಕ್ತಿಯನ್ನು ಕಾಯುವ ಇಲ್ಲಿನ ರಾಜ್ಯದ ನಂದಿನಿಯಂತಹ ಸಂಸ್ಥೆಯಲ್ಲಿರುವ ಈ ನನ್ನ ಕೆಲಸ ನನಗೆ ಅತಿ ಪ್ರಿಯವಾದದ್ದು. ಹಾಲು ಉತ್ಪಾದಕರಿಗೆ ಇಲ್ಲಿ ಎರಡು ರೀತಿಯ ವ್ಯವಸ್ಥೆಗಳಿವೆ – ಕ್ರೆಡಿಟ್ ಮತ್ತು ಕೋಟಾ ವ್ಯವಸ್ಥೆ. ಈ ಎರಡೂ ವ್ಯವಸ್ಥೆಗಳು ಹಾಲು ಮಾರಾಟದ ಕೋಟಾವನ್ನು ನಿರ್ವಹಿಸಲು ಸಹಾಯ ಮಾಡುತ್ತವೆ. ಕ್ರೆಡಿಟ್ ವ್ಯವಸ್ಥೆ ಹಾಲು ಉತ್ಪಾದನಾ ದಿನಗಳನ್ನು ಸರಿಯಾಗಿ ನಿರ್ವಹಿಸಲು ಸಹಾಯಕವಾಗುತ್ತದೆ. ಆ ಎರಡನ್ನೂ ಎಕ್ಸ್ಚೇಂಜಿನಲ್ಲಿ ಹರಾಜಿನಂತಹ ವ್ಯವಸ್ಥೆಯ ಮೂಲಕ ನಡೆಸಲಾಗುತ್ತದೆ. ಆ ಹರಾಜು ಆನ್ಲೈನ್ ನಲ್ಲಿ ನಡೆಯುವಂತದ್ದು, ಮತ್ತು ಹಲವು ಕೆಲಸಗಳಲ್ಲಿ ಅದೂ ನನ್ನ ಜವಾಬ್ದಾರಿ.
ಮೊದಲ ಬಾರಿ ಕ್ರೆಡಿಟ್ ಎಸ್ಚೇಂಜನ್ನು ರನ್ ಮಾಡಿ ಉಪ್ಪಾದಕರಿಗೆ ಇ-ಮೇಲ್ ಮೂಲಕ ಮಧ್ಯಾಹ್ನ ಹನ್ನೆರಡಕ್ಕೆ ಸರಿಯಾಗಿ ಯಾರಿಗೆ ಎಷ್ಟೆಷ್ಟು ದೊರಕಿದೆ ಎಂದು ಕಳುಹಿಸಿದ ದಿನ ಅದೆಂತಹ ಆನಂದ. ಹೊಸದೇನನ್ನೋ ಕಲಿತು ಮಾಡಿದ ಸುಖ. ಆ ಹಿಗ್ಗಿನ ನಡುವೆ, ಅಂದು ಮಾರನೇ ದಿನವೆ ನನಗೆ ಒಂದು ಫೋನ್ ಬಂತು. ಒಬ್ಬ ಹಾಲಿನ ಕೃಷಿಕ. “ನನಗೆ ಇ-ಮೇಲ್ ಬರಲೇ ಇಲ್ಲ, ಎಂದು”. ನಾನು ಆ ಕೂಡಲೆ ಅವರ ಮಾಹಿತಿಯೆಲ್ಲಾ ಕೇಳಿ ನನ್ನ ಇ-ಮೇಲಿನ ಕಳುಹಿಸಿದ ಮೇಲ್ಗಳನ್ನು ತೆಗೆಯುತ್ತಾ-“ಅಯ್ಯೋ ಇದೇನು ಮಾಡಿದೆ, ಇನ್ನು ಎಷ್ಟು ಜನಕ್ಕೆ ಕಳುಹಿಸಿಲ್ವೋ” ಎಂದು ಯೋಚಿಸುತ್ತಾ ನಮ್ಮ ಜೆನೆರಲ್ ಮ್ಯಾನೇಜರ್ ಎಂದೂ ಹೇಳುವ ಮಾತು “ಪ್ರತಿ ತಪ್ಪು ರೈತರ ಹಣ” ಜ್ಞಾಪಿಸಿಕೊಂಡು ಸ್ವಲ್ಪ ಗಾಬಾರಿಯಿಂದಲೇ ಆ ಮಾಹಿತಿ ಹಾಕಿದೊಡನೆ, ಅರೆ ಸ್ವೀಕೃತವಾಗಿದೆ, ಕಳುಹಿಸಿದ್ದೇನೆ. ಇವರೂ ನನ್ನ ಇ-ಮೇಲನ್ನು ತೆಗೆದು ಓದಿದ್ದಾರೆ, ಎಂಬ ನೋಟಿಫಿಕೇಷನ್ ಸಹ ನನಗೆ ಬಂದಿದೆ. ನಾನೂ ಮನಸಿನಲ್ಲಿ “ಅಬ್ಬಾ” ಎಂದು ನಿಟ್ಟುಸಿರು ಬಿಡುತ್ತಾ ಆ ಇ-ಮೇಲನ್ನು ಮತ್ತೆ ಅವರಿಗೆ ಕಳುಹಿಸಿ, ಬಂದಿದೆಯಾ? ನೆನ್ನೆಯೂ ಕಳುಹಿಸಿದ್ದೆ, ಎಂದು ಹೇಳಿದೊಡನೆ ಆ ಬದಿಯಿಂದ ಅದಕ್ಕೆ ತಲೆಯೇ ಕೆಡಿಸಿಕೊಳ್ಳದವರಂತೆ -“ನೀವು ಇಂಡಿಯಾ ಇಂದಲಾ?” ಕೇಳಿದರು. ನಾನು “ವ್ಹಾ?” ನಾನು ಇಲ್ಲಿ ಏನೋ ಮುಖ್ಯವಿಷಯದ ಮಧ್ಯೆ ಇದೇನು ಎನಿಸಿ “ಹೌದು” ಎಂದೆ. ಅವರೂ- “ಪಂಜಾಬಿನ?” ಕೇಳಿದರು. “ಇಲ್ಲ, ನಾನು ದಕ್ಷಿಣ ಭಾಗದ ಮೈಸೂರು ಎಂಬ ಊರಿನವಳು” ಎಂದೆ. ಆ ಬದಿಯಿಂದ ಅವರು ಕೂಡಲೇ-“ಓಹ್ ಥಾಂಕ್ ಗಾಡ್” ಎಂದು ಹಾಗೆಯೆ ಮತ್ತೇನೋ ಕೇಳಿ ಫೋನಿಟ್ಟರು.
ನಾನು ಮೊದಲ ಬಾರಿ ಒಂದು ಕರೆಯನ್ನು ಸ್ವೀಕರಿಸುತ್ತಿದ್ದರಿಂದಲೋ ಏನೋ ನನ್ನ ಕ್ಯಾಬಿನ್ ಹತ್ತಿರ ಜೆನೆರಲ್ ಮ್ಯಾನೇಜರ್ ಹಾಗೂ ಇನ್ನಿಬ್ಬರು ಬಂದು ನಿಂತಿದ್ದರು. ಹೀಗಾಯಿತು, ಎಂದು ನಡೆದದ್ದನ್ನು ಹೇಳಿದೆ. ಅವರು -“ಓಹ್ ಅವನಿಗೆ ನಿನ್ನ ಹೆಸರು ನೋಡಿ ಯಾರೆಂದು ತಿಳಿದುಕೊಳ್ಳಬೇಕಿರುತ್ತದೆ, ಅದಕ್ಕೆ ಫೋನ್ ಮಾಡಿದ್ದಾನೆ” ಎಂದು ನಕ್ಕು “ಆದರೆ ಇದನ್ನು ತಲೆಗೆ ಹಾಕಿಕೊಳ್ಳಬೇಡ, ಬಿಟ್ಬಿಡು” ಎಂದು ಹೇಳಿ ಹೋದರು. ನಾನೂ ಒಳ್ಳೆ ಕಥೆ ಎಂದು ಸುಮ್ಮನಾದೆ.
ಅದೇ ವಾರದಲ್ಲಿ ನಮ್ಮ ಕ್ರಡಿಟ್ ಸಿಸ್ಟಮಿನಲ್ಲಿ ಒಂದು ಸಮಸ್ಯೆಯಾಗಿ ನನ್ನನ್ನು ಪರಿಹಾರ ಹುಡುಕಬಹುದಾ ಎಂದು ಕೇಳಿದರು. ನಾನೂ ಅದನ್ನು ನೋಡಿ “ಮೈಸೂರು ವಿವಿಯ ನಮ್ಮ ಎಮ್. ಕಾಂ ನ ಕ್ಲಾಸಿನಲ್ಲಿ ನಮ್ಮ ಪ್ರೊ. ನಾಗರಾಜ್ ಫೈನಾನ್ಸ್ ಕ್ಲಾಸಿನಲ್ಲಿ ಹೇಳಿಕೊಟ್ಟ ಒಂದು ಪ್ರಾಬ್ಲಂ ನ ಹಾಗೇ ಇದೆ” ಎಂದುಕೊಂಡೆ. ಅದನ್ನೇ ಇಲ್ಲಿ ಬಳಸಿ ೧೦ ನಿಮಿಷದಲ್ಲಿ ಹೀಗೆ ಮಾಡಬಹುದು ಎಂದೆ. ಅಂದಿನಿಂದ “ಸ್ಮಾರ್ಟ್ ಕುಖಿ” ಎಂದಿದ್ದಲ್ಲದೆ, ಇವಳಿಗೆ ಚಿಕ್ಕ ಕೆಲಸವಲ್ಲ ಚ್ಯಾಲೆಂಜಿಂಗ್ ಕೆಲಸ ಕೊಡಬೇಕು, ಇಲ್ಲವಾದರೆ ಎಲ್ಲವನ್ನೂ ಬೇಗ ಮುಗಿಸಿ ಇರುತ್ತಾಳೆ, ಎಂಬ ಅಭಿಪ್ರಾಯ ಸರ್ರನೆ ಎಲ್ಲರ ಮನದಲ್ಲಿಯೂ ಬಂದುಬಿಟ್ಟಿತು. ಅಸಲಿಗೆ ಅದು ಸತ್ಯವಾಗಿಯೂ ತಲೆ ಹೋಗುವ ಸಮಸ್ಯೆಯೇ ಅಲ್ಲವಾಗಿತ್ತು.
ಹೀಗೆ ಅದೇ ವಾರ ಇದ್ದ ಪ್ರೋಡ್ಯೂಸರ್ಸ್ ಮೀಟಿನಲ್ಲಿ ನಾನು ಯಾರೂ? ನಾನು ದಕ್ಷಿಣದವಳೂ, ಪಂಜಾಬಿಯಂತೂ ಅಲ್ಲವೇ ಅಲ್ಲ. ನಾನು ತುಂಬಾ ಚಾಣಾಕ್ಷೆ, ಹೀಗೆ ಏನೇನೊ ಗುಸು ಗುಸು ಅವರೆಲ್ಲರ ಬಾಯಿಯಲ್ಲೂ ಕೇಳಿದೆ.
ಈ ಡೇರ್ ಡೆವಿಲ್ ಮುಸ್ತಫಾದಲ್ಲಿ ಮುಸ್ತಫಾ ಬಗ್ಗೆ ಗುಸುಗುಸು ಹೇಗೆ ಹಬ್ಬಿತೋ ಹಾಗೆ ಎಂದು ಅನಿಸಿ ಸುಮ್ಮನೆ ಒಂದು ಮೂಲೆಯಲ್ಲಿ ನಿಂತು ಬಂದಿದ್ದೆ. ನಮ್ಮ ಮ್ಯಾನೇಜರ್ ಮಾರನೇ ದಿನ ಹೀಗೆ ಹೇಳಿದರು- “ನೋ ಸರ್ಪ್ರೈಸ್. ನಡೆದದ್ದೆಲ್ಲವೂ ಒಬ್ಬ ಐಲ್ಯಾಂಡರ್ ಕಿವಿಗೆ ಬಿದ್ದ ಮೇಲೆ, ಇಲಿ ಹುಲಿಯಾಗಲೇ ಬೇಕಲ್ವ?” ಎಂದು ಹೇಳಿ ನಕ್ಕರೂ ಸಹ.
ಆಗ ನಾನು ಯೋಚಿಸಿದೆ. ಯಾರೋ ಒಬ್ಬಿಬ್ಬ ಮಾಡುವ ಕಿಡಿಗೇಡಿ ತನಕ್ಕೆ ಇಂದು ಇಲ್ಲಿಯವರು- ಭಾರತೀಯರು, ಅದರಲ್ಲೂ ಪಂಜಾಬಿಗಳು ಎಂದರೆ ಮರು ಮಾತಾಡದೇ ತಿರುಗಿಯೂ ನೋಡದಂತೆ ಹೋಗುತ್ತಾರೆ. ಬೇರೆ ರಾಜ್ಯ ಎಂದರೆ ನಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲ ತೋರುತ್ತಾರೆ. ನಮ್ಮ ಜಗಲಿಕಟ್ಟೆಗಳಲ್ಲಿ ಚರ್ಚಿತವಾಗುವಂತೆ –
“ಈ ಪಂಜಾಬಿನಿಂದ ಸಾಲಾಗಿ ಬಂದು ಬಿಟ್ಟಿದ್ದಾರೆ ಆದ್ದರಿಂದಲೇ ಹೀಗೆಲ್ಲಾ….” ಹೀಗೆ ಏನೇನೋ ಚರ್ಚೆ ಐಲ್ಯಾಂಡಿನಂತೆಲ್ಲಾ.
ಅಂತು ದಿನ ನಿತ್ಯದಲ್ಲಿ ಆಗುವ ಅನುಭವ, ಅನಿಸಿಕೆಗಳು ಐಲ್ಯಾಂಡಿನ ಒಬ್ಬನಿಗೆ ತಿಳಿದರೇ ಸಾಕು, ಹೆಂಗಸರಿಗಿಂತ ಬೇಗನೇ ವಿಷಯ ತಿಳಿದುಬಿಡುತ್ತದೆ, ಎಂದು ನನಗೆ ಆಗ ಖಾತ್ರಿಯಾಯಿತು. ಆದ್ದರಿಂದ ಈ ಗುಸುಗುಸು ಸುದ್ಧಿ ಹರಡುವ ಪರಿಪಾಠ ನಮ್ಮ ಸ್ವಂತದ್ದಲ್ಲ, ಅಥವಾ ಕೇವಲ ನಮ್ಮ ಹೆಂಗಸರಿಗೆ ಸ್ವಂತದ್ದಲ್ಲಾ, ಇದಕ್ಕೂ ಸ್ಪರ್ಧಿಗಳು ಖಂಡಿತಾ ಇದ್ದಾರೆ.
-ಡಾ.ಅಮೂಲ್ಯ ಭಾರದ್ವಾಜ್