”ನಾಗಸಿಂಹ ಏನ್ರಿ ?”
”ಹೌದು ನೀವು ಯಾರು ಸರ್ ?”
”ಪೊಲೀಸ್ ಕಮಿಷನರ್ ಆಫೀಸ್ ಇಂದ ಫೋನ್ ಮಾಡಿದೀನಿ, ನಿಮ್ಮ ಮೇಲೆ ಸರ್ಕಾರೇತರ ಶಾಲೆಯ ಸಂಘದ ಅಧ್ಯಕ್ಷರು ದೂರು ಕೊಟ್ಟಿದ್ದಾರೆ, ನೀವು ಅವರ ಶಾಲೆಗೆ ನುಗ್ಗಿ ಗಲಾಟೆ ಮಾಡಿ, ಮಕ್ಕಳಿಗೆ, ಶಿಕ್ಷಕರಿಗೆ ಬೆದರಿಕೆ ಹಾಕಿದೀರಾ, ಅತಿಕ್ರಮಣ ಪ್ರವೇಶ ಮಾಡಿದ್ದೀರಾ ಅಂತ ದೂರು ಕೊಟ್ಟಿದ್ದಾರೆ, ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ನೀವು ಕಮಿಷನ್ ಆಫೀಸ್ ಗೆ ಬಂದು ಹೇಳಿಕೆ ಕೊಡಿ ” ಫೋನ್ ಕಟ್ ಆಯಿತು.
ನನಗೆ ಸಹಜವಾಗಿಯೇ ಭಯ ಆಯಿತು. ಮಕ್ಕಳ ಹಕ್ಕುಗಳ ಆಯೋಗ ರಚಿಸಿದ ಶಾಲಾ ತನಿಖಾ ಸಮಿತಿಯ ಸದಸ್ಯನಾಗಿ ನಾನು ಆ ಶಾಲೆಗೆ ಹೋಗಿದ್ದು. ತನಿಖಾ ಸಮಿತಿಯಲ್ಲಿ ನನ್ನನ್ನು ಸೇರಿಸಿ ಸುಮಾರು ಒಂಬತ್ತು ಜನ ಸದಸ್ಯರು ಇದ್ದೆವು. ನನ್ನ ಮೇಲೆ ಮಾತ್ರ ದೂರು ಕೊಟ್ಟಿದ್ದಾರೆ ಅಂದರೆ ಅರ್ಥವೇನು ? ತಕ್ಷಣ ಆಯೋಗದ ಅಧ್ಯಕ್ಷರಿಗೆ ಕರೆ ಮಾಡಿದೆ ಎರಡು ಮೂರೂ ಸಾರಿ ಕರೆ ಮಾಡಿದರೂ ಅವರು ಪ್ರತಿಕ್ರಿಯೆ ನೀಡಲಿಲ್ಲ. ”ಸರ್ಕಾರೇತರ ಶಾಲೆಯವರು ನನ್ನ ಮೇಲೆ ದೂರು ನೀಡಿದ್ದಾರೆ, ನಾನು ಆಯೋಗದಿಂದ ರಚಿತವಾದ ಸಮಿತಿಯ ಸದಸ್ಯ, ಆಯೋಗದ ಆದೇಶಕ್ಕೆ ತಲೆಬಾಗಿ ನಾನು ಆ ಶಾಲೆಗೆ ಹೋಗಿದ್ದೆ, ಯಾರನ್ನೂ ಬೆದರಿಸಿಲ್ಲ, ಮಕ್ಕಳೊಂದಿಗೆ ಆಟವಾಡಿ, ಕತೆ ಹೇಳಿ ನಗಿಸಿ ಬಂದಿದ್ದೇನೆ, ತಕ್ಷಣ ನೀವು ಪೊಲೀಸ್ ಕಮಿಷನರ್ ಜೊತೆ ಮಾತನಾಡಿ ” ಎಂದು ಅಧ್ಯಕ್ಷರಿಗೆ ಮೆಸೇಜ್ ಕಳುಹಿಸಿದೆ ಪ್ರತಿಕ್ರಿಯೆ ಬರಲಿಲ್ಲ.
ನನ್ನ ಜೊತೆ ತನಿಖೆಗೆ ಬಂದ ಇತರ ಸದಸ್ಯರಿಗೆ ಕರೆಮಾಡಿ ದೂರು ಕೊಟ್ಟಿರುವ ಬಗ್ಗೆ ವಿಚಾರ ತಿಳಿಸಿದೆ. ”ಹೋಗಿ ಸಾರ್ ಏನಾಗೋಲ್ಲ ” ಅನ್ನುವ ಸಿದ್ದ ಉತ್ತರ ಸಿಕ್ಕಿತು. ಆಯೋಗ ರಚಿಸಿದ ಸಮಿತಿಯ ಸದಸ್ಯನ ರಕ್ಷಣೆ ಯಾರದ್ದು ಅನ್ನುವ ಪ್ರಶ್ನೆ ಕಾಡತೊಡಗಿತು. ಸರಿ ನಾಳೆ ಪೊಲೀಸ್ ಕಮಿಷನರ್ ಆಫೀಸಿಗೆ ಹೋಗಬೇಕು ಅದಕ್ಕೆ ಮೊದಲು ನನ್ನ ಹೇಳಿಕೆಯನ್ನು ಸಿದ್ಧಪಡಿಸಿಕೊಳ್ಳ ಬೇಕು ಎಂದು ಕುಳಿತು ನನ್ನ ಹೇಳಿಕೆಯನ್ನು ಸಿದ್ದ ಪಡಿಸಿಕೊಂಡೆ. ನಾನು ಯಾರು, ಆಯೋಗ ನನ್ನನ್ನು ಯಾಕೆ ತನಿಖಾ ಸಮಿತಿಯಲ್ಲಿ ಸೇರಿಸಿಕೊಂಡೆ ಹಾಗೂ ಶಾಲೆಯಲ್ಲಿ ಏನು ನಡೆಯಿತು ಎನ್ನುವ ಪ್ರಕ್ರಿಯೆಯನ್ನು ಹೇಳಿಕೆಯಲ್ಲಿ ಬರೆದಿದ್ದೆ. ನನ್ನ ಲಾಯರ್ ಗೆಳಯರೊಬ್ಬರಿಗೆ ಕರೆಮಾಡಿ ನನ್ನ ಹೇಳಿಕೆಯನ್ನು ಓದಿ ಸರಿ ಇದೆಯೇ ಎಂದು ಕೇಳಿದೆ
” ಆಯೋಗದಿಂದ ನಿಮಗೆ ಬಂದಿರುವ ಪತ್ರ ವನ್ನು ತೆಗೆದುಕೊಂಡು ಹೋಗಿ, ಅಕಸ್ಮಾತ್ ಪೊಲೀಸರು ನಿಮ್ಮ ಮೇಲೆ FIR ದಾಖಲಿಸುತ್ತಾರೆ ಎಂದು ತಿಳಿದರೆ ಓಡಿ ನನ್ನ ಬಳಿ ಬನ್ನಿ ” ಎಂದು ಸಲಹೆ ನೀಡಿದರು. ಶಿಕ್ಷಣ ಹಕ್ಕು ಕಾರ್ಯಪಡೆಯ ಸದಸ್ಯರೊಬ್ಬರಿಗೆ ಕರೆಮಾಡಿ ನಾಳೆ ನನ್ನೊಂದಿಗೆ ಪೊಲೀಸ್ ಕಮಿಷನರ್ ಆಫೀಸಿಗೆ ಬನ್ನಿ ಎಂದು ಕರೆದೆ. ಅವರು ಬರುತ್ತೇನೆ ಎಂದು ತಿಳಿಸಿದರು. ಸರಿ ನಾಳೆಗೆ ಎಲ್ಲವೂ ಸಿದ್ದ ಎಂದು ಮಲಗಿ ನಿದ್ದೆ ಮಾಡಿದೆ.
ಮರುದಿನ ಮೊದಲು ನನ್ನ ಕಚೇರಿಗೆ ಹೋದೆ, ಕಾರ್ಯಪಡೆ ಸದಸ್ಯರು ಹತ್ತುಗಂಟೆಗೆ ಬಂದರು, ನನ್ನ ಹೇಳಿಕೆ ಹಾಗೂ ಆಯೋಗದಿಂದ ಬಂದ ಪತ್ರವನ್ನು ತೆಗೆದುಕೊಂಡು ಪೊಲೀಸ್ ಕಮಿಷನರ್ ಆಫೀಸಿಗೆ ಹೊರೆಟೆವು. ಅಲ್ಲಿ ಸುಮ್ಮನೆ ಒಳಗೆ ಬಿಡಲಿಲ್ಲ ನೂರು ಪ್ರಶ್ನೆಗಳು, ಎಲ್ಲರೂ ನಮ್ಮನ್ನು ಅಪರಾದಿಗಳಂತೆ ನೋಡುತ್ತಿದ್ದರು, ನನಗೆ ಕರೆ ಮಾಡಿದ್ದ ಅಧಿಕಾರಿಯ ಬಳಿ ಹೋದೆವು. ಅವರು ರೈಟರ್ ಅಂತೆ. ಸರಿ ನಿಮ್ಮ ಹೇಳಿಕೆ ಹೇಳಿ ಅಂದರು, ನಾನು ಬರೆದುಕೊಂಡು ಹೋಗಿದ್ದ ಹೇಳಿಕೆ ಹಾಗೂ ಆಯೋಗದ ಪತ್ರ ನೀಡಿದೆ.
”ಅರೆ ಸಾರ್ ನನ್ನ ಕಷ್ಟ ತಪ್ಪಿಸಿ ಬಿಟ್ರಿ, ಹೇಳಿಕೆ ಕೊಡೋರು ಸಾಮಾನ್ಯ ಬರೆದುಕೊಂಡು ಬರೋದಿಲ್ಲ, ಇಲ್ಲಿ ಬಂದು ನಾನು ಕೇಳಿದ ಪ್ರಶ್ನೆಗೆ ಉತ್ತರ ಹೇಳ್ತಾರೆ, ನಾನು ಅದನ್ನ ಟೈಪ್ ಮಾಡ್ತೀನಿ. ನೀವು ಬರೆದು ಕೊಂಡು ಬಂದಿರೋದು ಒಳ್ಳೇದು ” ನನ್ನ ಹೇಳಿಕೆಯನ್ನು ಓದಿದ ನಂತರ ” ಅಯ್ಯೋ ಸಾರ್ ನೀವು ಸರ್ಕಾರದ ಸಮಿತಿಯ ಕಡೆಯಿಂದ ಹೋಗಿದ್ರಾ ? ಮತ್ತೆ ಅವರು ಸ್ಕೂಲ್ ಒಳಗೆ ಸುಮ್ಮನೆ ನುಗ್ಗಿ ಗಲಾಟೆ ಮಾಡಿದ್ರಿ ಅಂತ ದೂರು ಕೊಟ್ಟಿದ್ದಾರೆ, ಆಯೋಗದ ಈ ಪತ್ರ ಇಲ್ಲದೇ ಇದ್ರೆ ನಿಮ್ಮ ಮೇಲೆ FIR ಆಗೋದು ” ಅಬ್ಬಾ ಮನಸಲ್ಲೀಯೇ ಆಯೋಗಕ್ಕೆ ಧನ್ಯವಾದ ಅರ್ಪಿಸಿದೆ.
”ಸರ್ ನಿಮ್ಮ ಈ ಹೇಳಿಕೆಗೆ ಕಮಿಷನರ್ ಸರ್ ದು ಸಹಿ ಆಗಬೇಕು, ನೀವು ಅವರನ್ನೂ ಮಾತಾಡಿಸ ಬೇಕು. . ಕೂತುಕೊಳ್ಳಿ ಸಾಹೇಬರು ಸಭೆನಲ್ಲಿ ಇದಾರೆ ” ಅಂದು ನನ್ನ ಕೂರಿಸಿದರು. ಪೊಲೀಸ್ ಕಮಿಷನರ್ ಏನು ಪ್ರಶ್ನೆ ಕೇಳ್ತಾರೆ ? ದೂರಿನ ಪರವಾಗಿ ಮಾತಾಡಿದರೆ ನನಗ್ಯಾರು ಸಹಾಯ ಮಾಡೋರು ? ಅಯೋದ ಸಮಿತಿಯ ಜೊತೆ ಹೋಗಿ ತಪ್ಪು ಮಾಡಿದೆನಾ ? ಎಂದೆಲ್ಲಾ ಯೋಚಿಸುತ್ತಿದ್ದೆ.
”ಇವರದ್ದೆನ್ನು ಪ್ರಾಬ್ಲಮ್ ? ” ದ್ವನಿ ಬಂದತ್ತ ನೋಡಿದೆ, ” ಇವರು ಸರ್ಕಾರದ ಸಮಿತಿ ಜೊತೆ ಶಾಲೆಗೆ ವಿಸಿಟ್ ಹೋಗಿದ್ರು, ಆ ಶಾಲೆಯವರು ಇವರ ಮೇಲೆ ದೂರು ಕೊಟ್ಟಿದ್ದಾರೆ ” ರೈಟೆರ್ ಹೇಳಿದ್ರು. . ಇವರು ಡಿಎಸ್ಪಿ ಅಂತ ನನಗೆ ಪರಿಚಯ ಮಾಡಿಕೊಟ್ರು.
”ನಮಸ್ಕಾರ ಸರ್, ನನ್ನ ಹೆಸರು ನಾಗಸಿಂಹ, ಮಕ್ಕಳ ಹಕ್ಕುಗಳ ಬಗ್ಗೆ ಕೆಲಸ ಮಾಡುತ್ತಿದ್ದೇನೆ ‘
” ಅದು ಸರಿರಿ, ಶಾಲೆಗೆ ಹೋಗಿ ಯಾಕೆ ಗಲಾಟೆ ಮಾಡಿದ್ರಿ ? ಮಕ್ಕಳ ಹಕ್ಕುಗಳು ಅಂತೀರಾ ಮಕ್ಕಳ ಜೊತೆ ಹೇಗೆ ವರ್ತನೆ ಮಾಡಬೇಕು ಅನ್ನೋದು ಗೊತ್ತಿಲ್ವ ? ” ಮಕ್ಕಳ ಜೊತೆ ಹೇಗೆ ಕೆಲಸ ಮಾಡಬೇಕು ಅಂತ ಬುದ್ದಿವಾದ ಹೇಳಿದರು. ಎದುರು ಉತ್ತರ ಹೇಳದ ಅವರು ಹೇಳಿದ್ದನ್ನೆಲ್ಲಾ ಕೇಳಿದೆ. ಡಿಎಸ್ಪಿ ಸಾಹೇಬರಿಗೆ ನನ್ನ ಮೇಲೆ ಏನೋ ಸಂದೇಹ ಇರಬಹುದು ಅನ್ನಿಸಿತು, ಯಾಕೆಂದರೆ ಅವರು ಅವರ ಮೊಬೈಲ್ ಗೂಗಲ್ ನಲ್ಲಿ ನನ್ನಹೆಸರು ಹಾಕಿ ನನ್ನ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದರು. . ” ಏನ್ರಿ ನಿಮ್ಮ ಮೇಲೆ ನಾಲ್ಕು ಐದು ಕೇಸ್ ಇದೆ ? ಶಾಲೆಗಳೇ ಹಾಕಿರೋದು ಮೂರೂ ಕೇಸ್, ಎರಡು ಪ್ರತಿಭಟನೆ ಕೇಸ್. . ಅಬ್ಬಾ ಎಷ್ಟು ಪೇಪರ್ ಹೇಳಿಕೆ ಇದೆ ಇಲ್ಲಿ. . ಸರ್ಕಾರ ಬೈಯೋದು ಬಿಟ್ಟು ಬೇರೆ ಕೆಲಸ ಇಲ್ವಾ ? ಒಹೋ ನೀವು ಪೊಲೀಸರಿಗೂ ತರಬೇತಿ ಮಾಡಿದಿರೋ ಸರಿ ಸರಿ. . ಹೋಗಿ ಕಮಿಷನರ್ ಸರ್ ಜೊತೆ ಮಾತನಾಡಿ. . ” ಕನಿಕರದಿಂದ ನನ್ನ ನೋಡಿ ಹೊರಟರು. ಡಿಎಸ್ಪಿ ಯವರೇ ಇಷ್ಟೆಲ್ಲಾ ಅಂದ್ರು. . ಇನ್ನು ಕಮಿಷನರ್ ಏನೆಲ್ಲಾ ಅನ್ನಬಹುದು ?
ಪೊಲೀಸ್ ಕಮಿಷನರ್ ರವರ ಕೊಠಡಿ ಬಳಿ ಹೋಗಿ ನಿಂತೇ, ಒಳಗೆ ಬರಬಹುದಾ ಅಂತ ಕೇಳಲಾ ? ಅಲ್ಲ ನಾನೇನು ತಪ್ಪು ಮಾಡಿದ್ದೇನೆ ? ನಾನೇಕೆ ಭಯ ಪಡಬೇಕು ? ಏನಾಗುತ್ತದೋ ಆಗಲಿ, ಎದುರಿಸಿಯೇ ಎದುರಿಸುತೇನೆ ಎಂದು ಬಾಗಿಲು ತಳ್ಳಿ ” ಬರಬಹುದಾ ಸಾರ್ ”ಎಂದು ಬಾಗಿಲು ತಳ್ಳಿ ಕೊಠಡಿಯೊಳಗೆ ಕಾಲಿಟ್ಟೆ.
”ಓಹೋ. . ನಾಗಸಿಂಹ ಬನ್ನಿ ಬನ್ನಿ ” ಎಂದು ಕಮಿಷನರ್ ಎದ್ದು ಬಾಗಿಲ ಬಳಿ ಬಂದು ನನ್ನ ಕೈ ಕುಲಕಿ ನನ್ನ ಬರಮಾಡಿಕೊಂಡರು, ನನಗೆ ಮಾತೇ ಹೊರಡಲಿಲ್ಲ, ಕಮಿಷನರ್ ಆಸನದ ಮುಂದಿನ ಕುರ್ಚಿಯಲ್ಲಿ ಕುಳಿತೆ. ಕಮಿಷನರ್ರವರು ಬೆಲ್ ಮಾಡಿದರು ಒಳಗೆ ಬಂದ ವ್ಯಕ್ತಿಗೆ ” ಕಾಫಿ ತಗೊಂಡು ಬಾ ಹಾಗೆ ನಾಗಸಿಂಹ ಇವರ ಫೈಲ್ ಕೂಡ ತಗೊಂಡು ಬಾ ‘ ಅಂದರು.
ಏನೂ ನಾಗಸಿಂಹ ಫೈಲ್ ? ನನ್ನ ಬಗ್ಗೆ ಪೊಲೀಸ್ ಕಮಿಷನರ್ ಕಚೇರೀಲಿ ಫೈಲ್ ಇದೆಯಾ ? ನನ್ನ ಎದೆ ಬಡಿತ ಜೋರಾಗಿತ್ತು.
” ನಿಮ್ಮ ಹೇಳಿಕೆ ನೋಡಿದೆ, ದೂರು ಬಂದಾಗಲೇ ಗೊತ್ತಿತ್ತು ಇದು ಎಂತಹ ಕೇಸ್ ಅಂತ, ಆದರೂ ನಾವು ಸುಮ್ಮನೆ ಇರೋಹಾಗಿಲ್ಲ ಆಲ್ವಾ ಅದೂ ಅಲ್ಲದೇ ನಿಮ್ಮನ್ನ ಮೀಟ್ ಮಾಡಬೇಕಿತ್ತು ನಾನು ” ನನ್ನ ಯಾಕೆ ಇವರು ಮೀಟ್ ಮಾಡಬೇಕಿತ್ತು ?
ಅಷ್ಟರಲ್ಲಿ ನನ್ನ ಬಗ್ಗೆ ಇರುವ ದಪ್ಪ ಫೈಲ್, ಕಾಫಿ ಬಂತು. ಕಾಫಿ ತಗೊಳ್ಳಿ ಎಂದರು ಕಮಿಷನರ್. ಕಾಫಿ ಕುಡಿಯತೊಡಗಿದೆ.
”ನೋಡಿ ನಿಮ್ಮ ವಿವರ ಹಾಗೂ ನೀವು ಮಾಡುತ್ತಿರೋ ಕೆಲಸಗಳ ಬಗ್ಗೆ ನಮ್ಮ ಪೊಲೀಸರು ಎಷ್ಟು ಮಾಹಿತಿ ಕಲೆಹಾಕಿ ಎಷ್ಟು ದೊಡ್ಡ ಫೈಲ್ ಮಾಡಿದಾರೆ, ಇನ್ನು ಮುಂದೆ ಇದನೆಲ್ಲಾ ಡಿಜಿಟಲ್ ಮಾಡ್ತೀವಿ. ನೀವು ಸರಕಾರದ ಇಲಾಖೆಗಳ ವಿರುದ್ದ ಮಾಡಿದ ಪ್ರತಿಭಟನೆ ವರದಿ. ಪೊಲೀಸರಿಗೆ ಬರೆದ ಪತ್ರಗಳು ಮಕ್ಕಳ ಹಕ್ಕುಗಳ ಉಲ್ಲಂಘನೆ ಬಗ್ಗೆ ನೀವು ನೀಡಿರುವ ಪತ್ರಿಕಾ ಹೇಳಿಕೆ ಇವೆಲ್ಲಾ ಈ ಫೈಲ್ ನಲ್ಲಿ ಇವೆ. ಈಗ ನೀವು ಕೊಟ್ಟಿರುವ ಹೇಳಿಕೆ ಸಹ ಈ ಫೈಲ್ ಸೇರುತ್ತದೆ. ನೀವು ಪೋಲೀಸರ ಫೈಲ್ ನಲ್ಲಿ ಇದ್ದೀರಾ ಅಂದರೆ ನಿಮಗೆ ನಮ್ಮ ರಕ್ಷಣೆ ಇದೆ ಅಂತ. ” ನನ್ನ ಹೇಳಿಕೆಯನ್ನು ಫೈಲ್ ಒಳಗೆ ಹಾಕಿ ನನ್ನ ಕಡೆ ನೋಡಿ ನಕ್ಕರು.
‘ನನಗೇನೂ ಮಾತಾಡಲು ತೋಚದೆ ”ಥ್ಯಾಂಕ್ಸ್ ಸರ್ ‘ ಅಂದೇ. ಆ ಪೊಲೀಸ್ ಫೈಲ್ ನಲ್ಲಿ ನನ್ನ ಫೋಟೋಗಳು ಇದ್ದವು.
” ಓಕೆ ಓಕೆ ಈಗ ಹೇಳಿ ಈ ಶನಿವಾರ ನಿಮಗೆ ಮೈಸೂರ್ ರಸ್ತೆಯಲ್ಲಿ ಇರೋ ಪೊಲೀಸ್ ತರಬೇತಿ ಕೇಂದ್ರಕ್ಕೆ ಬರೋಕಾಗುತ್ತಾ ? ‘
ಶನಿವಾರ ಯಾವುದೇ ಕೆಲಸ ಇರಲಿಲ್ಲ ” ಯಾಕೆ ಸಾರ್ ಆಗುತ್ತೆ ಬರ್ತೀನಿ ” ಅಂದೇ.
”ಥ್ಯಾಂಕ್ಸ್ ನಮ್ಮ ಹೊಸ ಬ್ಯಾಚ್ ಹುಡುಗರಿಗೆ ಪೋಕ್ಸೋ ೨೦೧೨ ರ ಬಗ್ಗೆ ಒಂದು ದಿನದ ತರಬೇತಿ ಮಾಡಿ. ನೀವು ಪೋಕ್ಸೋ ಕಾಯಿದೆಯ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಅಂತ ನಮಗೆ ಗೊತ್ತಿದೆ. ‘
ಒಹೋ ತರಬೇತಿಗೆ ಸಂಪನ್ಮೂಲ ವ್ಯಕ್ತಿ, ಏನೋ ಅಂದುಕೊಂಡಿದ್ದೆ ಏನೋ ಆಯಿತು.
‘ಬರ್ತೀನಿ ಸಾರ್. . ಈ ಸರ್ಕಾರೇತರ ಶಾಲೆಯ ದೂರು ಸಾರ್ ?”
”ಇಂತಹ ದೂರು ನಿಮ್ಮ ಮೇಲೆ ಬರುತ್ತಲೇ ಇರುತ್ತೆ, ನಾವು ನಿಮ್ಮನ್ನು ಕರಿಯುತ್ತಲೇ ಇರುತ್ತೇವೆ. ಇದೆ ನಮ್ಮ ಸಂಬಂಧ. ನಾವು ಲಿಮಿಟ್ ಮೀರಿ ಹೋಗಬೇಡಿ, ನಿಮ್ಮ ಪ್ರತಿಭಟನೆ ನ್ಯಾಯದಪರವಾಗಿ ಇರಲಿ. ಸಂವಿಧಾನ ಮರಿಯಬೇಡಿ. ಲೆಟ್ಸ್ ಮೀಟ್ ಇನ್ ಟ್ರೈನಿಂಗ್ ‘ ಎಂದು ನಗುತ್ತಾ ಬಿಳ್ಕೊಟ್ಟರು.
ಈ ಘಟನೆಯಿಂದ ಕಲಿತ ಪಾಠಗಳು ಹಲವು, ಸರ್ಕಾರದ ಯಾವುದೇ ಸಮಿತಿ ಸೇರುವ ಮೊದಲು ನನ್ನ ಶರತ್ತು ಹೇಳುವುದು, ನೇರವಾಗಿ ಪ್ರತಿಭಟನೆಗಳಲ್ಲಿ ಭಾಗಿಯಾಗದಿರುವುದು ಮೇಲಾಗಿ ನನ್ನ ಬಗ್ಗೆ ಒಂದು ಫೈಲ್ ಪೊಲೀಸ್ ಮಿಷನರ್ ಕಚೇರಿಯಲ್ಲಿದೆ ಎಂಬುದನ್ನು ಮರೆಯದಿರುವುದು.
–ನಾಗಸಿಂಹ ಜಿ ರಾವ್
ನಿಮಗೆ ನಿಮ್ಮ ಬಗ್ಗೆ ಗೊತ್ತಾದಂತೆ ನಮಗೂ ಅಂದರೆ ಓದುಗರಿಗೂ ಬಹಳಷ್ಟು ಗೊತ್ತಾದವು ; ವ್ಯವಸ್ಥೆಯ ಅಚ್ಚುಕಟ್ಟು ಮನವರಿಕೆ ಆದವು !
ನಿಮ್ಮ ಸಂಪನ್ಮೂಲ ವ್ಯಕ್ತಿತ್ವ ಮತ್ತದರ ಅಸ್ತಿತ್ವ ಎರಡೂ
ಬರೆಹದಲೂ ಲಭಿಸಿದ್ದು ಇನ್ನೂ ಮನನೀಯ….
ಕಲ್ಪನೆಗೂ ವಾಸ್ತವತೆಗೂ ಎಷ್ಟೊಂದು ಅಂತರವಿದೆ !
ಕತೆಯಲ್ಲಿ ನಡೆದದ್ದು ಹುಡುಕಬಾರದು ; ನಡೆದದ್ದರಲಿ
ಕತೆ ಹುಡುಕಬೇಕು ಅಂತ ನಮ್ಮ ಕನ್ನಡದ ಶಿಷ್ಟ ವಿಮರ್ಶಕರಾದ ದಿವಂಗತ ಡಾಕ್ಟರ್ ಗಿರಡ್ಡಿ ಗೋವಿಂದ ರಾಜರು ಒಂದೆಡೆ ಹೇಳಿದ್ದಾರೆ , ಅದು ನೆನಪಾಗಿದ್ದು ಆಕಸ್ಮಿಕ ಅಲ್ಲ !!
ನಿಮ್ಮ ಬರೆಹ ಹೀಗೆಯೇ ಸಾಗಲಿ ; ನಾವು ಸಹ ಓದುಗರು ಚಿಂತನಶೀಲರಾಗಲಿ, ಧನ್ಯವಾದಗಳು ನಿಮಗೂ ಪ್ರಕಟಿಸಿದ ಪಂಜುವಿಗೂ 👏🙏〽️