ಆಡು ಆನೆಯ ನುಂಗಿ ಕಿರುಚಿತ್ರವನ್ನು ನೋಡಿ.
ತಳಸಮಾಜಗಳು ವ್ಯವಸ್ಥೆಯು ಹೇರಿರುವ ಬಡತನವ ಮೈತುಂಬಾ ಹೊದ್ದು ಬದುಕುತ್ತಿರುವವರು. ಆದರೆ ಬಿಟ್ಟಿಯಾಗಿ ಬರುವ ಹಣ(ದಾನ) ಕ್ಕೆ ಆಸೆ ಪಡುವ ಮತ್ತು ಅದರ ಹಂಗಿನಲ್ಲಿ ತಮ್ಮ ಸ್ವಾಭಿಮಾನವ ಅಡವಿಟ್ಟು ಬದುಕುವವರಲ್ಲ. ರಟ್ಟೆಲಿ ಶಕ್ತಿ ಇರೋ ತನಕ ದುಡಿದು ಉಣ್ಣೋರು ಅವರು. ಹಸಿದು ಮಲಗಿದರೂ ಆತ್ಮಗೌರವ ಮಾರಿಕೊಳ್ಳರು. ಅದಕ್ಕೆ ಹೇಳೋದು ಬಡವನಿಗೆ ಸ್ವಾಭಿಮಾನ ಜಾಸ್ತಿ ಅಂತ. ಅಂತಹ ಸ್ವಾಭಿಮಾನವ ಬಿಟ್ಟು ಅಂಗಲಾಚುವ ಪರಿಸ್ಥಿತಿಯನ್ನ ಹೇಗಾದರೂ ತಂದು ಮತ್ತೆ ತಾವೇ ಸಹಾಯ ಮಾಡುವ ಔದಾರ್ಯವ ತೋರೋದು ಶ್ರೀಮಂತರ ವ್ಯಸನ. ಇದು ಅವರಿಗೆ ಖುಷಿ ಕೊಡುವ ವಿಚಾರ. ಇಂತಹ ನಾಟಕ ಸಮಾಜದಲ್ಲಿ ದಿನವೂ ನಡೆಯುತ್ತಿರುತ್ತದೆ. ಬಹುಪಾಲು ಜನರದ್ದು ಪ್ರಚಾರ ಗೀಳಿನ ಹೆಲ್ಪಿಂಗ್ ನೇಚರ್ರೇ ಆಗಿರುತ್ತದೆ. ಆದರೆ ಇದಕ್ಕೆ ಅಪತ್ಯವಾಗಿ ‘ಸಿರಿವಂತ ಅಜ್ಜಾರು’ ಕಾಣಿಸಿಕೊಳ್ಳುತ್ತಾರೆ ಆದರೆ ಯಾವುದಾದರೂ ಸಂಧರ್ಭದಲ್ಲಿ ತಂತಾನೆ ಇಂಥ ಗುಣ ಹೊರಬರೋದಂತೂ ನಿಜ ಅನ್ನೋದಕ್ಕೆ ಸಾಕ್ಷಿಯಾಗಿ ಅಜ್ಜಾರು ತನ್ನ ಸ್ನೇಹಿತನೊಂದಿಗೆ ಮಾಡಿದ ಸಂಭಾಷಣೆ ಹೇಳುತ್ತದೆ. ಈ ಕಿರುಚಿತ್ರ ವೀಕ್ಷಕರೊಂದಿಗೆ ಸೂಕ್ಷ್ಮವಾದ ಸಂಭಾಷಣೆಗಿಳಿಯುತ್ತದೆ. ಹಸಿದವರ ಮತ್ತು ಹೊಟ್ಟೆ ತುಂಬಿದ ಜನರ ದೈನಂದಿನ ಬದುಕು, ಅವರ ಆಸರಿಕೆ ಬೇಸರಿಕೆಗಳ ನಡುವಿನ ಅಂತರವನ್ನು ಧ್ವನಿಸುತ್ತದೆ. ಯಲ್ಲಪ್ಪ ತಾಳುವ ಮೌನದ ಮೂಲಕ ನೋಡುಗರನ್ನು ಕಾಡುತ್ತದೆ.
ಒಳ್ಳೆಯ ಪ್ರಯತ್ನ. ಇಡೀ ತಂಡಕ್ಕೆ ಅಭಿನಂದನೆಗಳು. ಒಳಿತಾಗಲಿ❤️
-ಡಾ. ಅಭಿಲಾಷ ಎಚ್ ಕೆ
