ಅಭಿವ್ಯಕ್ತಿಗಳ ಧರ್ಮಸಂಕಟ
-೧-
ಉಸಿರಿನಿಂದ ರಚಿಸಿದ ಬೇಲಿಯಿಂದ
ಮನದ ಅಭಿವ್ಯಕ್ತಿಗಳಿಗೆ ಬಂಧಿಸಿದ್ದೇನೆ
ಸೂಕ್ಷ್ಮಕ್ರಿಮಿಗಳು ಹಾರುವ
ಹೂದೋಟದಲಿ ಅರಳದ ಹಾಗೆ
ಭೂಮಿಯ ಗುರುತ್ವಾಕರ್ಷಣೆಯಿಂದ
ತಪ್ಪಿಸಿಕೊಳ್ಳುವಷ್ಟೇ ಕಷ್ಟವಿದ್ದರೂ
ಬೇಲಿ ಜಿಗಿದು ಹೂಬನದಲಿ ಹೆಜ್ಜೆ
ಇಡಲೇಬೇಕೆಂಬುವ ದಿವ್ಯ ಉತ್ಸಾಹ
ಹೊಂದಿರುವ ಈ ಅಭಿವ್ಯಕ್ತಿಗಳಿಗೆ
ಮನವೊಲಿಸುವಲ್ಲಿ ಪೂರ್ಣ ವೈಫಲ್ಯ
ಬಂಧಮುಕ್ತಗೊಳಿಸಲೂ ಅಸಾಧ್ಯ
ಚಂಚಲ ಮನಸ್ಸಿನ ಅಭಿವ್ಯಕ್ತಿಗಳಿಗೆ
ಅನುಕ್ಷಣ ಕಾವಲು ಕಾಯುವ ತುಟಿಗಳು
-೨-
ಅಭಿವ್ಯಕ್ತಿ ಇಡುವ ಹೆಜ್ಜೆಗಳಿಗೆ ಧರ್ಮದ
ಗೆಜ್ಜೆ ಕಟ್ಟಿ ರಾಜಕೀಯದ ಬಣ್ಣ ಬಳಿದು
ಅವಾಚ್ಯ ಶಬ್ದಗಳ ಪಲ್ಲಕ್ಕಿಯಲಿ
ಹೂದೋಟದ ತುಂಬೆಲ್ಲ ಮೆರವಣಿಗೆ
ಅದಕ್ಕಾಗಿಯೇ ಜನ್ಮಪಡೆದ ಅಭಿವ್ಯಕ್ತಿಗಳ
ಕೊರಳು ಹಿಸುಕಿ ಉಸಿರು ನಿಲ್ಲಿಸುತ್ತಿದ್ದೇನೆ
ಮರಳಿ ಸೇರುತಿವೆ ಪಂಚಭೂತಗಳ ಗೂಡಿಗೆ!
-೩-
ಬೆಳಕಿನ ಮೇಲೆ ಭಯದ ಗುರುತುಗಳು
ರೇಖಾಚಿತ್ರಗಳು ಬರೆಯಲು
ಬಣ್ಣ ತುಂಬುತಿವೆ ನೋವಿನ ಕಲೆಗಳು
ಮಡಿದ ಕನಸುಗಳು ತೇಲುತ್ತಿವೆ
ಕಂಬನಿಯ ವಿಶಾಲ ಕಡಲಿನೊಳಗೆ
ಅಭಿವ್ಯಕ್ತಿಗಳಿಗೆ ಬಿಡುಗಡೆ ಮಾಡಲು
ಮನದ ಆಜ್ಞೆಯಿದ್ದರೂ ದಂತಪಂಕ್ತಿಗೆ ಭಯ
ಉಗುರಿಲ್ಲದ ಬೆರಳಿನಂತೆ ಒಂಟಿ ನಾಲಿಗೆ
-೪-
ನಂದನವನದ ಬಯಲಿನಲಿ ಹೊನ್ನ
ಕುಸುಮಗಳ ಜೊತೆ ತುಂಬಿದೆ ಕಸವೂ
ಆದರೆ ಆ ಕಸ ಗುಡಿಸಲಾಗದು
ಬರೀ ಹೂಗಳನ್ನೆ ಬೆಳೆಸಲಾಗದು
ಭೂಮಿಯಂತೆ ತೋರುಬೆರಳ ತುದಿಯಲ್ಲಿ
ಬ್ರಹ್ಮಾಂಡವೇ ಇರುವ ಕಾಲ ಬಂದರೂ!
ಜೊತೆಗೆ ಯುಗ ಯುಗಗಳೇ ಗತಿಸಿ
ಬ್ರಹ್ಮ ಯುಗಗಳು ಜನ್ಮ ಪಡೆದರೂ
-೫-
ಕಣ್ಣು ತಪ್ಪಿಸಿ ಬೇಲಿ ದಾಟಿದ
ಮನದ ಅಭಿವ್ಯಕ್ತಿಗೆ ಮುಳ್ಳುಗಳು ಚುಚ್ಚಲು
ಮೃದು ಶರೀರದ ತುಂಬೆಲ್ಲ ಗಾಯ
ನೆತ್ತರಿನ ವಾಸನೆ ಸಹಿಸಲಾಗುತ್ತಿಲ್ಲ
ಆದರೂ ಜಳಕ ಮಾಡಲಾಗುವುದಿಲ್ಲ
ಹೂದೋಟದಾದ್ಯಂತ ಕೇವಲ
ನಿಂಬೆ ರಸದ ನದಿಗಳೇ ಹರಿಯುತಿವೆ
ಇಬ್ಬಗೆಯ ಹೂ
ವೃಕ್ಷದಿಂದ ವೃಕ್ಷಕ್ಕೆ ಜಿಗಿಯುವ ಕಪಿಯಂತೆ
ಬಿಂದುವಿನಿಂದ ಬಿಂದುವಿಗೆ ಪಾದ ಬೆಳೆಸುವ
ಅಭಿರುಚಿ ದ್ರವ ರೂಪ ಪಡೆದು ನದಿಯಾಗಿದೆ
ಘನ ಬಂಡೆಯಾಗಿದ್ದಾಗ ಕುಸುಮ ಅರಳುತ್ತಿರಲಿಲ್ಲ
ಈಗ ಹೂ ವಿಕಸನಿಸಿದರೂ ಪರಿಮಳ ಬೀರುತ್ತಿಲ್ಲ
ಹಸಿರಿಲ್ಲದ ಒಣ ಮಾತುಗಳಲಿ
ಬಹುಶಃ ಉಸಿರು ಕೂಡ ಉಳಿದಿಲ್ಲ
ಅಭಿರುಚಿ ಸಾವು ನುಂಗಿರಬಹುದು
ಏನೂ ಮಾತಾಡಲು ಆಗುತ್ತಿಲ್ಲ
ಮೌನಕ್ಕೆ ಶರಣಾಗಿ ಶಸ್ತಾಸ್ತ್ರಗಳು
ಒಪ್ಪಿಸಿ ಮಂಡಿಯೂರಲೂ ಆಗುತ್ತಿಲ್ಲ
ಸದಾ ಸಕ್ಕರೆ ನಗುವಿನ ಅವಸಾನ
ಮೌನ ಅದೇಷ್ಟೂ ಪಾಪಿಯಾಗಿದೆ ಎಂದರೆ
ಲೆಕ್ಕವಿಲ್ಲದಷ್ಟು ಮಾತುಗಳಿಗೆ
ತನ್ನ ಗರ್ಭದಲ್ಲೆ ಸಮಾಧಿ ತೊಡಿದೆ
ಗರ್ಭಪಾತ ಕಾನೂನು ಬಾಹಿರ
ಎಂದು ಹೇಳಲು ಮಂದಹಾಸ ಬೀರುತಿದೆ
ಬಹುಶಃ ಅದಕ್ಕೂ ಅರ್ಥವಾಗಿರಬೇಕು
ಸಾಕ್ಷಿ ಇಲ್ಲದೆ ಅಪರಾಧಿಯಾಗುವುದಿಲ್ಲ
ನಿರಾಸೆಯ ನಾಲಿಗೆಯಲಿ ನರಳುವ ನುಡಿಯ ಹಾಗೆ
ಭೀಕ್ಷಾ ಪಾತ್ರೆಯ ಒಂಟಿ ನಾಣ್ಯದಂತೆ ಕನಸು
ಅಂತರಂಗದಲಿ ಬೇಸರದ ದೃಷ್ಟಿ ಬೀರುತ್ತಿರಲು
ದರ್ಪಣದ ಹಾಗೆ ಒಡೆದು ಚೂರಾಗಿದೆ ಮನಸು
ಚೆಲ್ಲಾಪಿಲ್ಲಿ ಬಿದ್ದಿರುವ ಆಸೆಗಳನ್ನು ಆರಿಸುವ
ವ್ಯರ್ಥ ಪ್ರಯತ್ನಗಳಲ್ಲಿ ಕಾಲದ ಕೋಲು ಮುರಿದಿದೆ
ಬೆಳಕಿಲ್ಲದೆ ಕಣ್ಣುಗಳು ಕುರುಡಾಗುತಿವೆ
ಸೋಲೊಪ್ಪದೆ ನಂಬಿಕೆಗಳು ಅಸುನೀಗಿವೆ
ವ್ಯವಸ್ಥೆಯಿಲ್ಲದೆ ಆ ಗೂಡು ಬಿಟ್ಟಾಗಿದೆ
ರೆಕ್ಕೆ ಇಲ್ಲದ ಹಕ್ಕಿಗಳು ಬಾನಲಿ ಹಾರುತಿವೆ
ಈಜು ಗೊತ್ತಿಲ್ಲದ ಮೀನುಗಳು
ಕಡಲ ತುಂಬೆಲ್ಲ ನಲಿದಾಡುತ್ತಿವೆ
ಎರಡು ದಡದ ಬಿಂದುಗಳ
ನಡುವೆ ಅಭಿರುಚಿಯ ನದಿ ಹರಿಯುತ್ತಿದೆ
ಅದರಲ್ಲಿ ಪಕಳೆ ಬಿಚ್ಚಿ ಅರಳುತ್ತಿರುವ
ಉಭಯ ಸಂಕಟದ ಇಬ್ಬಗೆಯ ಹೂ
ಹಕ್ಕಿಗಳಿಗೆ ರೆಕ್ಕೆ ಕಟ್ಟುತಿದೆ
ಮೀನುಗಳಿಗೆ ಈಜು ಕಲಿಸುತ್ತಿದೆ
ಕಂಬನಿ ಬತ್ತಿದ ಕಂಗಳು
ನೆಲದ ಕಂಗಳ ಬಟ್ಟಲಿನಲಿ
ಕನಸುಗಳೆಲ್ಲ ಉಸಿರು ಬಿಡುತಿವೆ
ಕಂಬನಿ ಕ್ರಮೇಣ ಖಾಲಿಯಾದಂತೆ
ಆಸೆಗಳು ಹೋಗುತಿವೆ
ಗುರಿಯಿಲ್ಲದೆ ಅಲೆಮಾರಿಯಾಗಿ
ಅಲೆಯುವ ಮೋಡಗಳ ಕರೆ ತರಲು
ಪ್ರತಿದಿನ ಸೂರ್ಯ ಹುಟ್ಟುವ ವೇಳೆ
ಹಕ್ಕಿಗಳ ಚಿಲಿಪಿಲಿ ನಿನಾದ
ಆತ್ಮತೃಪ್ತಿಗಾಗಿ ಹಾಡುವ ಹಾಡುಗಳಲ್ಲ
ಜನನಾಯಕರ ವ್ಯವಸ್ಥಿತ ರಾಜಕೀಯ
ಚದುರಂಗದಾಟದ ವಿರುದ್ದ
ಕೂಗುವ ಧಿಕ್ಕಾರದ ಕೂಗು
ನಮ್ಮ ನೆಲದ ಒಡಲಾಳದ ನೋವು ಹೇಗೆ
ಅರ್ಥವಾದೀತು ಮಹಾನಗರಿಯ
ಒಡಲಿನಲಿ ಅನ್ನ ಬೇಯಿಸುವ ಜನನಾಯಕರಿಗೆ
ವಿಷಪೂರಿತ ಜಲ ಸೇರುತಿದೆ ನಮ್ಮ ದೇಹದೊಳಗೆ
ನನ್ನ ಉಸಿರು ಭೂಮಿಯ ಹೆಸರಿಗೆ ಬರೆದು
ಅವಳ ಹೃದಯ ಸೇರುತ್ತೇನೆ
ಜನ್ಮಾಂತರದ ನಿದ್ದೆಗಳು ಮಾಡುತ್ತೇನೆೆ
ಇದರ ನಡುವೆ ಬಯಲು ಸೀಮೆಯ ತುಂಬೆಲ್ಲ
ಹಸಿರು ನೋಡುವ ಬಯಕೆ ಮನದೊಳಗೆ!
ಮಣ್ಣಿನ ಮಕ್ಕಳ ಹೋರಾಟದ ಕಿಚ್ಚು
ಇಳಿಮುಖ ಸೀಮಾಂತ ತುಷ್ಟಿಗುಣಕ್ಕೆ
ಬಿಗಿದಪ್ಪಿ ನರಳುವ ಮುನ್ನ
ಹಲವು ರಹಸ್ಯಗಳ ಜನನಿ ಸೃಷ್ಟಿಯೇ
ಒಂದಷ್ಟು ಹನಿಗಳಾದರೂ ಸುರಿದು ಬಿಡು
ನೆಲದ ಕಂಗಳು ತುಂಬಿ ಕನಸುಗಳು ಉಸಿರಾಡಲಿ!
–ರಾಜಹಂಸ