ವಾಸ್ತವ
ಎಷ್ಟೇ
ಅದುಮಿಟ್ಟರೂ
ಕನಸುಗಳು
ಚಿಗುರುವುದು
ಆಶೆಗಳು
ಗರಿ ಗೆದರುವುದು
ಹೂವಂತೆ ಅರಳಿ
ಘಮ ಘಮಿಸುವುದು
ಸಂಭ್ರಮಿಸುವ
ಮೊದಲೇ
ನಿರಾಶೆಯ
ಕಾರ್ಮೋಡ
ಸುಳಿಯುವುದು
ಖುಷಿ ಖುಷಿಯಾಗಿದ್ದ
ಮನವು
ನೋವಿಂದ
ನರಳುವುದು
ಮನಸ್ಸು
ಇನ್ನೆಲ್ಲೋ
ಹೊರಳುವುದು
ವಾಸ್ತವದ ಅರಿವು
ಕಣ್ಣ ತೆರೆಸುವುದು
ಖುಷಿಯ ಅಳಿಸುವುದು
ಕಣ್ಣೀರ ಧಾರೆಯ
ಹರಿಸುವುದು
ಮನದ ತುಂಬ
ನೋವುಗಳನ್ನು
ಉಳಿಸುವುದು
ಬೀಸಿ ಬರುವ
ತಂಗಾಳಿಯೂ
ತಂಪ ನೀಡದು
ನೊಂದ ಮನಕೆ
ಕೊನೆಯ ನಿಲ್ದಾಣ
ದೂರದೂರಿನ ಈ ಪಯಣ
ಕೊನೆಗೆ ಸೇರುವುದು ಸ್ಮಶಾನ
ಇರುವುದು ನಾಲ್ಕಾರು ದಿವಸ
ಇರಲಿ ಇರುವಷ್ಟು ದಿನ ಹರುಷ
ಕಳೆದು ಹೋಗುವುದು ವರುಷ
ನಡುವೆ ಯಾಕೆ ಸುಮ್ಮನೆ ವಿರಸ
ಸಂಸಾರದಲ್ಲಿ ಇರಲಿ ಸರಸ
ಅನುಭವಿಸು ನೀ ಪ್ರತಿ ದಿವಸ
ನಿನ್ನದೆನ್ನುವುದು ಇಲ್ಲಿ ಏನಿಲ್ಲ
ಅವನು ಆಡಿಸಿದಂತೆ ನಡೆಯುವುದೆಲ್ಲ
ಬರಿ ಪಾತ್ರದಾರಿಗಳು ನಾವೆಲ್ಲಾ
ಅವನೆದಿರು ಆಟ ನಡೆಯುವುದಿಲ್ಲ
ಅವನು ಕುಣಿಸಿದಂತೆ ಕುಣಿಯಬೇಕಲ್ಲ
ಯಾವ ಉನ್ಮಾದವೂ ಜೊತೆಯಾಗುವುದಿಲ್ಲ
ಯಾವ ಸಂಪತ್ತು ಕೈ ಹಿಡಿಯುವುದಿಲ್ಲ
ನೀ ಮಾಡಿದ ಒಳಿತಷ್ಟೇ ನಿನ್ನ ಕಾಯುವುದು
ಸುಡುವ ಮೌನ ಕಣ್ಣೀರಾಗಿ ಹರಿಯುವುದು
ಎಲ್ಲ ವೇದನೆಯೂ ಕೊನೆಗೊಳ್ಳುವುದು
ದಾರಿ ಮುಗಿದಾಗ ಮುಗಿಯಲಿ ಪಯಣ
ಸುಗಮವಾಗಿ ತಲುಪಲಿ ಕೊನೆಯ ನಿಲ್ದಾಣ
ನಡೆಯುವ ಹಾದಿ
ತುಳಿಯುವವರು ತುಳಿಯುತ್ತಲೇ ಇರುತ್ತಾರೆ
ಬೆಳೆಯುವವನು ಮೈ ಕೊಡವಿ ಏಳಬೇಕು
ತುಳಿದವರ ಎದಿರು ತಲೆ ಎತ್ತಿ ನಿಲ್ಲಬೇಕು
ಸೋಲುಗಳ ಮೀರಿ ಬೆಳೆದು ತೋರಿಸಬೇಕು
ಸಾಧನೆಯ ಹಾದಿಯಲಿ ಮುನ್ನುಗ್ಗ ಬೇಕು
ತುಳಿತಕ್ಕೆ ಒಳಗಾದವರಿಗೆ ಪ್ರೇರಣೆಯಾಗಬೇಕು
ನೊಂದವರ ಕೈ ಹಿಡಿದು ಮೇಲೆತ್ತಬೇಕು
ಕಡು ಕತ್ತಲಲ್ಲೂ ಭರವಸೆಯ ಬೆಳಕ ಹಚ್ಚಬೇಕು
ಬದುಕಿನಲ್ಲಿ ಸೋಲು ಗೆಲುವು ಎಲ್ಲವೂ ಉಂಟು
ನೋವು ನಲಿವು ಬಾಳಲಿ ಬಂದು ಹೋಗುವುದುಂಟು
ಕೊಟ್ಟು ಪಡೆದಷ್ಟು ಹೆಚ್ಚುವುದು ಪ್ರೀತಿಯಗಂಟು
ಅವನ ನಿಯಮ ಮೀರಿ ನಡೆಯದಿಲ್ಲಿ ಯಾವುದೇ ನಂಟು
ಜೊತೆಗೆ ನಿಂತು ಗುಂಡಿ ತೋಡುವವರು ನಮ್ಮವರೇ
ಗೆದ್ದಾಗ ಗೆಲುವಿನ ಫಲ ಸವಿಯುವವರು ಇವರೇ
ನಮ್ಮ ಅವಶ್ಯಕತೆಗೆ ಜೊತೆ ಕೈಯನ್ನು ಜೋಡಿಸದವರು
ತಮಗೆ ಅವಶ್ಯಕತೆ ಬಿದ್ದಾಗೆಲ್ಲ
ಬಳಸಿಕೊಂಡು ದೂರಾಗುವರು
ಬದುಕು ಎಂದಿಗೂ ಎಲ್ಲರಿಗೂ ನಿತ್ಯ ನೂತನವಲ್ಲ
ಗೆದ್ದ ಗೆಲುವು ಕೈಲಿರುವ ಹಣ ಶಾಶ್ವತವಲ್ಲ
ನಾವು ನಡೆಯುವ ಹಾದಿ ತೋರುವುದು ಗುರಿಯ
ನಮ್ಮ ತಪ್ಪು ಹೆಜ್ಜೆಯಿಂದ ಕಳೆದುಕೊಳ್ಳುವೆವು ಸಿರಿಯ
–ನಾಗರಾಜ ಜಿ. ಎನ್. ಬಾಡ