ಗಲ್ಲಿ ಗಲ್ಲಿಗೂ ಡಾಕ್ಟ್ರುಗಳನ್ನು ಕಾಣುತ್ತಿದ್ದ ನಾವು ಕೆನಡಾಗೆ ಬಂದ ನಂತರ ಮೊದಲ ಬಾರಿಗೆ “ಎಲ್ಲಿಗೆ ಬಂದುಬಿಟ್ಟೆವೋ?” ಅನ್ನಿಸಿದ್ದು ಸತ್ಯ. ಅನಾರೋಗ್ಯವಾದರೆ ನಾಟಿ ಔಷಧ, ಮನೆಮದ್ದು ಅಥವಾ ಸ್ಪೆಷಲಿಸ್ಟ್ ಡಾಕ್ಟ್ರನ್ನೇ ಕಂಡು ಏನೋ ಒಂದು ಉಪಶಮನ ಮಾಡಿಕೊಳ್ಳುತ್ತಿದ್ದ ನಮಗೆ (ಬರಿಯ) ಅಸಿಡಿಟಿಯ ಅತಿರೇಕವನ್ನು ಅನುಭವಿಸಿ ಸುಸ್ತು ಹೊಡೆದೆವು. ನನ್ನ ಗಂಡನಿಗೆ ಅಸಿಡಿಟಿ ಸಮಸ್ಯೆ ಬಹಳ ಕಾಲದಿಂದಲೂ ಇದೆ. ವಿಜೇತ್‌ರ ಈ ಸಮಸ್ಯೆ ನಮಗೆ ಇಲ್ಲಿಗೆ ಬರುವವರೆಗೂ ಭಾರವೆನಿಸಿರಲಿಲ್ಲ. ಅಲ್ಲಲ್ಲೆ ಉಪಶಮನ ಕಾಣುತ್ತಿದ್ದ ನಾವು, ಈ ಚಿಕ್ಕ ಸಮಸ್ಯೆಗೆ ಉಪಶಮನ ಕಾಣಲು ಬೆಳಗ್ಗೆ ೮ ಕ್ಕೆ ತೆರೆದು ೧೦ ಕ್ಕೆ ಮುಚ್ಚಿಬಿಡುವ ಕ್ಲಿನಿಕ್ಕಿಗೆ ಮುಂಜಾನೆ ೫.೩೦ ಕ್ಕೆ ಹೋಗಿ ಹಿಮದ ರಾಶಿಯ ನಡುವೆಯೂ ಸರದಿಯಲ್ಲಿ ಆಚೆಯೇ ನಿಂತಿದ್ದೆವು. ವೈದ್ಯರನ್ನು ಕಂಡು ಔಷಧ ತೆಗೆದುಕೊಂಡ ಮೇಲಷ್ಟೆ ನಮಗೆ ಗೊತ್ತಾದದ್ದು ಅವರು ಕೊಟ್ಟ ಔಷಧಿ ಏನನಕ್ಕೂ ಸಾಲದು ಎಂದು. ಮಕ್ಕಳಿಗೆ ಕೆಮ್ಮು ನೆಗಡಿ ಬಂದರಂತೂ ಮುಗಿದೇ ಹೋಯಿತು. ಬೆಳ್ಳಂ ಬೆಳಗ್ಗೆ ಎದ್ದು ಹೋಗಿ ನಿಂತು ಡಾಕ್ಟ್ರನ್ನು ಕಾಣುವಷ್ಟರಲ್ಲಿ ಜೀವನ ಜಿಗುಪ್ಸೆ ಬಂದು ಯಾಕಾದರೂ ಬರುತ್ತೇವೋ ಎನಿಸಿಬಿಡುತ್ತಿತ್ತು.
ಸರಿ, ಆಸ್ಪತ್ರೆಗೆ ಹೋಗೋಣವೆಂದರೆ ಎಮರ್ಜೆನ್ಸಿಯ ಕಾಯುವ ಸಮಯವೇ ೧೦ ಘಂಟೆಗಳು. ಆದರೂ ಇಲ್ಲಿಯ ಕ್ಲಿನಿಕ್ಕುಗಳ ವೈದ್ಯರು ನೀಡಿದ ಔಷಧಗಳಾವುದೂ ಸರಿಯಾಗದೆ ಅಸಿಡಿಟಿ ಹೆಚ್ಚಾಗಿ ಆಸ್ಪತ್ರೆಯಲ್ಲಿ ಒಮ್ಮೆ ತೋರಿಸಿಬಿಡುವ ಎಂದು ನಿರ್ಧರಿಸಿ ಅಂದು ಮಕ್ಕಳನ್ನು ನೋಡಿಕೊಳ್ಳಲು ಗೆಳತಿಯೊಬ್ಬಳಿಗೆ ಬರ ಹೇಳಿ ಸಂಜೆ ೬ಕ್ಕೆ ಹೋದೆವು. ಅಲ್ಲಿನ ಪರಿಸ್ಥಿತಿ ನೋಡಿ ಕಣ್ಣಲ್ಲಿ ನೀರು ಬರುವುದಷ್ಟೇ ಬಾಕಿ. ರಿಜಿಸ್ಟ್ರೇಷನ್ ಮುಗಿಸಿ ಬಂದು ಕೂತಾಗ ನಮ್ಮ ಪಕ್ಕ ವಯಸ್ಸಾದ ಅಜ್ಜಿಯೊಬ್ಬರು ಕೂತಿದ್ದರು. ಅವರಿಗೆ ಕ್ಯಾನ್ಸರ್ ಬಂದು ಆಪರೇಷನ್ ಆಗಿ ಫಾಲೋ-ಅಪ್ ಗೆ ಬಂದಿದ್ದಾರೆ. ಅವರು ಮಧ್ಯಾಹ್ನ ಹನ್ನೆರಡು ಘಂಟೆಯಿಂದ ಕಾಯುತ್ತಿದ್ದಾರೆ. ಪಾಪ, ಕೂರಲಾಗುತ್ತಿಲ್ಲ, ನಿಲ್ಲಲಾಗುತ್ತಿಲ್ಲ. ಇನ್ನು ಈ ಕಡೆ ಪಕ್ಕ ಒಂದು ಹುಡುಗಿ. ಮುಟ್ಟಿನ ನೋವು ತಾಳಲಾಗದೆ ಮಧ್ಯಾಹ್ನ ಮೂರರಿಂದ ಉಪಶಮನಕ್ಕಾಗಿ ಕಾಯುತ್ತಾ ಕುಳಿತಿದ್ದಾಳೆ.
ಎಮರ್ಜೆನ್ಸಿಯ ದೊಡ್ಡ ಟಿವಿಯಲ್ಲಿ ಹೀಗೆ ಬರೆದಿದೆ. ಅತ್ಯಂತ ಗಂಭೀರವಾಗಿರುವ ತುರ್ತಾದ ರೋಗಿಗಳ ಕಾಯುವ ಸಮಯ – ೪ ರಿಂದ ೫ ಘಂಟೆಗಳು. ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ- ೬ ರಿಂದ ೭ ಘಂಟೆಗಳು. ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ- ೮ ರಿಂದ ೧೦ ಘಂಟೆಗಳ ಕಾಯುವಿಕೆ, ಎಂದು. ಇದನ್ನು ನೋಡಿದ ನಾವು ರಾತ್ರಿಯಿಡೀ ಅಲ್ಲೆ ಎಂದು ನಿರ್ಧರಿಸಿ ಕಾಯುತ್ತಿದ್ದೆವು. ಅಲ್ಲೇ ಆಚೆ ಪಕ್ಕದಲ್ಲಿ ಒಂದು ಮಗು ಒಂದೇ ಸಮನೆ ಕೆಮ್ಮುತ್ತಿತ್ತು. ಆ ಮಗುವನ್ನು ಒಳಗೆ ಕರೆದಾಗ, ಬೆಳಗ್ಗೆಯಿಂದ ಕಾಯುತ್ತಿದ್ದ ಅವರ ತಾಯಿಯ ಮುಖ ಮುದುಡಿದ್ದರೂ ಹಾಗೊ ಹೀಗೊ ಅರಳಲೆತ್ನಿಸಿದ ತಾವರೆಯಂತೆ ಭಾಸವಾಗುತ್ತಿದ್ದುದು ವಿಷಾದನೀಯ. ಅಳುತ್ತಾ ಕೆಮ್ಮುತ್ತಿದ್ದ ಮಗು ಅತ್ತುಕೊಂಡೇ ಒಳಗೆ ಹೋಯಿತು.
ಹೀಗೆ ಕಾಯುತ್ತಾ ಕಾಯುತ್ತಾ ರಾತ್ರಿ ಹನ್ನೆರಡಾಯಿತು. ಪಕ್ಕದಲ್ಲಿ ನೋವೆಂದು ಕುಳಿತಿದ್ದ ಹುಡುಗಿ, ಅಯ್ಯೋ ನನ್ನ ನೋವು ಹಾಗೆ ಹೋಯಿತೆಂದು ಹೊರಟೇ ಹೋದಳು. ಇನ್ನು ಇತ್ತ ಪಕ್ಕ ಕುಳಿತಿದ್ದ ಅಜ್ಜಿಯ ಸರದಿ ಬಂದು ಅವರೂ ಒಳ ಹೋದರು. ನಾವು ಹಿಂದೆ ಮುಂದೆ ತಿರುಗಿ ನೋಡಿದರೆ ಸುಮಾರು ಅನುಭವವಿರುವ ಮಂದಿ, ದಿಂಬು ಹೊದಿಕೆ ಎಲ್ಲವನ್ನೂ ತಂದು ಅಲ್ಲಲ್ಲೇ ಹಾಸಿ ಮಲಗಿದ್ದಾರೆ. ನಾವು “ದುರ್ದೈವವೇ” ಎಂದುಕೊಂಡು ಕಾಯುತ್ತಾ ಅಲ್ಲೇ ನಿದಿರೆಗೆ ಜಾರಿದೆವು. ಮತ್ತೆ ನನಗೆ ಎಚ್ಚರಾದಾಗ ಸಮಯ ಮಧ್ಯರಾತ್ರಿ ಮೂರಿರಬಹುದು. ಜೋರಾಗಿ ಯಾರೋ ಬಿದ್ದ ಸಪ್ಪಳ. ಹೆದರಿ ಕಣ್ಣು ತೆರೆದರೆ ಒಂದು ಹೆಂಗಸು ಕಿರುಚಿ ಬಂದು ಕೆಳಗೆ ಬಿದ್ದೇ ಬಿಟ್ಟಿದ್ದಾಳೆ. ನರ್ಸ್ ಬಂದು ಅವಳನ್ನು “ಬದುಕಿದ್ದಾಳೆ” ಎಂದು ಖಾತ್ರಿ ಪಡೆಸಿಕೊಂಡು ಸುಮ್ಮನೆ ಹೊರಟೇ ಹೋದಳು. ಅವಳು ಹಾಗೇ ಬಿದ್ದೇ ಇದ್ದಳು. ಸುಮಾರು ೫ ಘಂಟೆಯ ಹೊತ್ತಿಗೆ ಪೊಲೀಸರು ಬಂದರು. ಅವಳ ಮುಖ ಮತ್ತು ಐಡಿಯನ್ನು ನೋಡಿ ಯಾರೆಂದು ಪತ್ತೆ ಮಾಡಿ, ಅವಳನ್ನು ಒಳಗೆ ಕರೆದುಕೊಂಡು ಹೋಗುವವರೆಗೂ ಅಲ್ಲೇ ಇದ್ದರು. ಅವಳನ್ನು ಸ್ಟ್ರೆಚರ್ ತಂದು ಕರೆದುಕೊಂಡು ಹೋಗುವಷ್ಟರಲ್ಲಿ ಸುಮಾರು ಆರು ಘಂಟೆ.
ಇನ್ನು ನಮ್ಮ ಪಕ್ಕ ಮತ್ತೊಬ್ಬರು ಕಾಲಿಗೆ ದೊಡ್ಡ ಬಟ್ಟೆ ಸುತ್ತಿಕೊಂಡು ಬಂದು ಕುಳಿತರು. ಅವರಿಗೆ ಪಾಪ ನೋವಾಗಿ ಎರಡು ತಿಂಗಳಾಗಿದೆ. ಕಾಲು ಮುರಿದಿದೆ ಎನಿಸುತ್ತದೆ ಎಂದು ಹೇಳಿದ ವೈದ್ಯರು ಆ ಮುರಿದ ಕಾಲಿಗೆ ಸರಿಯಾದ ಚಿಕಿತ್ಸೆ ನೀಡಲು ಎಮ್. ಆರ್.ಐ ಆಗಬೇಕು. ಆದರೆ ಅದಕ್ಕೆ ಅಪಾಯಿಂಟ್‌ಮೆಂಟ್ ಇನ್ನೂ ಆರು ತಿಂಗಳು, ಅಲ್ಲಿಯವರೆಗೂ ಮಾತ್ರೆ ಕೊಟ್ಟು ತಿಂಗಳಿಗೊಮ್ಮೆ ಡ್ರೆಸಿಂಗ್ ಮಾಡಿಸಿಕೊಂಡು ಹೋಗಿ ಎಂದು ಹೇಳಿದ್ದರಿಂದ, ಆ ನೋವಲ್ಲೇ ಮುಂದಿನ ಹನ್ನೆರಡು ಘಂಟೆಗಳ ಕಾಲ ಇಲ್ಲಿ ಕೂತು ಡ್ರೆಸಿಂಗ್ ಮಾಡಿಸಿಕೊಳ್ಳಲು ಬಂದಿದ್ದರು. ಬೇಕಾದರೆ ಪಕ್ಕದ ಊರಿಗೆ ಹೋಗಿ ಎಮ್.ಆರ್. ಐ ಮಾಡಿಸಿಕೊಳ್ಳಬಹುದು. ಆದರೆ ಅದಕ್ಕೆ ೨೦೦೦ ಡಾಲರ್. ಅಂದರೆ ರೂಪಾಯಿಗಳಲ್ಲಿ ಲಕ್ಷದ ಇಪ್ಪತ್ತು ಸಾವಿರ.
ಇವರೆಲ್ಲರ ಕಥೆಗಳಲ್ಲಿ ಜೀವಿಸುತ್ತಾ ಅಂತು ಮುಂಜಾನೆ ಸುಮಾರು ಒಂಭತ್ತು ಘಂಟೆಗೆ ನಮ್ಮ ಸರದಿ. ನಮ್ಮಿಬ್ಬರಿಗೂ, ವಿಜೇತ ಎನ್ನುವ ಹೆಸರು ಅಷ್ಟು ಅಮೂಲ್ಯ ಎನಿಸಿದ್ದು ಆಗಲೆ. ಇಬ್ಬರೂ ಹದಿನೈದು ಘಂಟೆಗಳು ಕಾದ ನಂತರ ಒಳಗೆ ಹೋದರೆ, ಇಬ್ಬರೇ ವೈದ್ಯರು. ನಮ್ಮ ಥರ ತರಾವರಿ ಸ್ಪೆಷಲಿಸ್ಟುಗಳೇನು ಇಲ್ಲ. ಸುಮಾರು ಚೆಕ್ಕುಗಳೆಲ್ಲಾ ಆಗಿ ನಂತರವಷ್ಟೇ ಓಹ್ ಅಸಿಡಿಟಿ ಎಂದೂ ಅದೇ ಹಳೇ ಮಾತ್ರೆ ಕೋಡೋದ? ವಿಜೇತ್ ಹೇಳಿದರು ಈ ಮಾತ್ರೆ ನನಗೆ ಒಗ್ಗುತ್ತಿಲ್ಲವೆಂದು. ಭಾರತದಲ್ಲಿ ನಮ್ಮ ಡಾಕ್ಟ್ರು ಇದನ್ನು ಕೊಡುತ್ತಿದ್ದರು ಎಂದು ಅವರು ಮೈಸೂರಿನಲ್ಲಿ ತೆಗೆದುಕೊಳ್ಳುತ್ತಿದ್ದ ಮಾತ್ರೆಯ ಹೆಸರನ್ನು ತೋರಿಸಿದೊಡನೆ ವೈದ್ಯೆ ಮರು ಮಾತಾಡದೇ ಪ್ರಿಸ್ಕ್ರಿಪ್‌ಷನ್ನಿನಲ್ಲಿ ಅದನ್ನೇ ಬರೆದುಕೊಟ್ಟರು. ಹೊರ ಬಂದೆವು.
ಬರುತ್ತಾ ಕಾಯುತ್ತಿದ್ದವರ ಬಾಯಲ್ಲಿ, ನಮ್ಮ ದೇಶ ಥರ್ಡ್ ವರ್ಲ್ಡ್ ಅಂತೆಲ್ಲಾ ಕೇಳಿ, ಅವರನ್ನು ನೋಡುತ್ತಿದ್ದಂತೆ “ಅಯ್ಯೋ” ಎನಿಸಿತು. ಉಚಿತ ಯುನಿವರ್ಸಲ್ ಹೆಲ್ತ್‌ಕೇರ್ ಹೆಸರಿನಲ್ಲಿ ಒಂದು ಮುಂದುವರೆದ ದೇಶದ ಜನರ ಸ್ಥಿತಿ ಮುಂದು ಎಂದೇನಿಲ್ಲ. ದುಡ್ಡಿಗಿಂತ ಆರೋಗ್ಯವೇ ಮುಖ್ಯ. ನಾವು ದುಡ್ಡು ಕೊಟ್ಟರೂ, ಅಥವಾ ಆಯುಷ್ಮಾನ್ ಭಾರತದ ಹೆಸರಿನಲ್ಲಿ ನಮ್ಮ ದೇಶದಲ್ಲಿ ಸಿಗುತ್ತಿರುವ ಚಿಕಿತ್ಸೆಯು ಎಂತಹ ಚೆನ್ನಾಗಿದೆ ಎನಿಸುತ್ತದೆ. ಪರ್ ಕಾಪಿಟ, ಜಿಡಿಪಿ ಹೀಗೆ ಎಕಾನಾಮಿಕ್ಸ್ ಹೆಸರಲ್ಲಿ ಅಳೆದು ಮುಂದುವರೆದ- ಮುಂದುವರೆಯುತ್ತಿರುವ ಎಂದು ಪ್ರತ್ಯೇಕಿಸುವ ಬದಲು, ಜನರಿಗೆ ಲಭ್ಯವಿರುವ ಸಾರ್ವಜನಿಕ ಸೇವೆಗಳ ಆಧಾರದ ಮೇಲೆ ಪ್ರತ್ಯೇಕಿಸಿದರೆ ಭಾರತೀಯರಾದ ನಾವೆಷ್ಟೋ ಮುಂದಿದ್ದೇವೆ ಎನಿಸುತ್ತದೆ.
-ಡಾ. ಅಮೂಲ್ಯ ಭಾರದ್ವಾಜ್