”ಮಕ್ಕಳಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೩೩ ಮಕ್ಕಳನ್ನು ಮಾದಕಪದಾರ್ಥಗಳಿಂದ ರಕ್ಷಿಸಬೇಕು ಎಂದು ಹೇಳಿದೆ. ಮಾದಕ ಪದಾರ್ತಗಳಿಗೆ ಮಕ್ಕಳು ಬಲಿಯಾಗದಿರುವಂತೆ ಮಾಡುವುದು ಮಕ್ಕಳಹಕ್ಕು. ನೀವು ಯೋಚಿಸಬೇಡಿ ಸಾರ್ ನಾವು ನಿಮ್ಮ ಶಾಲೆಗೆ ಬಂದು ಮಾದಕ ಪದಾರ್ಥಗಳಿಗಿಂದ ಆಗುವ ಅನಾಹುತಗಳ ಬಗ್ಗೆ ನಿಮ್ಮ ಶಾಲೆಯ ಮಕ್ಕಳಿಗೆ ಅರಿವು ಮೂಡಿಸುತ್ತೇವೆ” ಎಂದು ಮಾರೇನಹಳ್ಳಿ ಸರ್ಕಾರೀ ಹಿರಿಯ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಿಗೆ ಭರವಸೆ ನೀಡಿದೆ, ತಮ್ಮ ಶಾಲೆಯ ಮಕ್ಕಳು ಬೀಡಿ, ಸಿಗರೇಟುಗಳಿಗೆ ಬಲಿಯಾಗುತ್ತಿದ್ದಾರೆ, ಅವರಿಗೆ ಅರಿವು ಮೂಡಿಸಿ ಎಂದು ನಮ್ಮನ್ನು ಆಹ್ವಾನಿಸಲು ದೂರದ ಮಾರೇನಹಳ್ಳಿಯಿಂದ ನಮ್ಮ ಕಚೇರಿಗೆ ಮುಖ್ಯೋಪಾದ್ಯಾಯರು ಬಂದಿದ್ದರು. ಮಕ್ಕಳ ಪರವಾದ ಅವರ ಕಾಳಜಿ ಕಂಡ ಸಂತೋಷವಾಗಿತ್ತು. ಕಾರ್ಯಕ್ರಮ ಯಾವತ್ತೂ ಮಾಡುವುದು ? ಸಮಯ ? ಯಾವ ತರಗತಿಗೆ ಈ ಎಲ್ಲಾ ವಿಚಾರಗಳನ್ನು ಚರ್ಚಿಸಿ ಮುಖ್ಯೋಪಾದ್ಯಾಯರನ್ನು ಬೀಳ್ಕೊಟ್ಟೆ
ಮಕ್ಕಳು ಮಾದಕ ಪದಾರ್ಥಗಳಿಗೆ ದಾಸರಾಗಿರುವುದು ಕೇವಲ ಒಂದು ಶಾಲೆಯ ಸಮಸ್ಯೆ ಅಲ್ಲ, ಹಲವಾರು ಶಾಲೆಗಳಲ್ಲಿ ಈ ಸಮಸ್ಯೆ ಇರಬಹುದು ಎಂದು ಯೋಚಿಸಿ ಸುಮಾರು ೩೦ ಶಾಲೆಗಳ ಇಮೇಲ್ ಸಂಗ್ರಹ ಮಾಡಿ ನಾವು ಮಕ್ಕಳ ಹಕ್ಕುಗಳ ಸಂಸ್ಥೆಯಿಂದ ನಿಮ್ಮ ಶಾಲೆಗೆ ಬಂದು ಮಾದಕ ಪದಾರ್ಥಗಳ ಅಪಾಯ ಮತ್ತು ಅದರಿಂದ ದೂರ ಇರಿ ಎಂದು ಮಕ್ಕಳಿಗೆ ಅರಿವು ಮೂಡಿಸುತ್ತೇವೆ ದಯವಿಟ್ಟು ಮಕ್ಕಳ ಹಿತದೃಷ್ಟಿಯಿಂದ ಅವಕಾಶ ಕೊಡಿ ಎಂದು ಇಮೇಲ್ ಕಳುಹಿಸಿದೆ. ಕೇವಲ ನಾಲ್ಕು ದಿನದೊಳಗೆ ಸುಮಾರು ೧೪ ಶಾಲೆಗಳ ಪ್ರಿನ್ಸಿಪಾಲರು ನಮ್ಮ ಶಾಲೆಗೆ ಬನ್ನಿ ಎಂದು ಪ್ರತಿಕ್ರಿಯೆ ನೀಡಿದರು. ಮಾದಕ ಪದಾರ್ಥಗಳು ಯಾವುವು, ಅವುಗಳ ಸೇವನೆಯಿಂದ ಆಗುವ ಅನಾಹುತ, ಕಾನೂನು ಏನು ಹೇಳುತ್ತದೆ ಎಂಬ ಮಾಹಿತಿ ಅದರೊಂದಿಗೆ ಕೆಲವು ಪ್ರಕರಣಗಳನ್ನು ಸಂಗ್ರಹಿಸಿ ಮಂಡನೆಗೆ ಸಿದ್ದನಾದೆ. ನಮ್ಮ ಕಚೇರಿಯ ಸಂಪರ್ಕದಲ್ಲಿ ಇರುವ ಸುಮಾರು ಐದು ಸ್ವಯಂ ಸೇವಾ ಸಂಸ್ಥೆಗಳು ನಮ್ಮ ”ಶಾಲೆಗಳಲ್ಲಿ ಮಾದಕಪದಾರ್ಥ ನಿಷೇದ ಮತ್ತು ಅರಿವು ‘ ಆಂದೋಲನಕ್ಕೆ ಕೈ ಜೋಡಿಸಲು ಸಿದ್ದರಾದರು.
ಶಾಲೆಗಳಿಗೆ ಹೋಗುವ ಮೊದಲು ಶಾಲೆಯಲ್ಲಿ ಮಾತಾಡುವ ಮಕ್ಕಳಿಗೆ ಮಾಹಿತಿ ನೀಡುವ ಸಂಪನ್ಮೂಲ ವ್ಯಕ್ತಿಗಳನ್ನು ಸಿದ್ಧಪಡಿಸ ಬೇಕಿತ್ತು. ಹಾಗಾಗಿ ಐದು ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರನ್ನು ಆಹ್ವಾನಿಸಿ ”ಶಾಲೆಗಳಲ್ಲಿ ಮಾದಕಪದಾರ್ಥ ನಿಷೇದ ಮತ್ತು ಅರಿವು ” ಕುರಿತು ಒಂದು ದಿನದ ತರಬೇತಿಯನ್ನೂ ಸಹ ನೀಡಿದೆ. ಬ್ಯಾನರ್, ಮಾಹಿತಿ, ಸಂಪನ್ಮೂಲ ವ್ಯಕ್ತಿಗಳು ಸಿದ್ದರಾದರು. ದಿನಕ್ಕೆ ಎರಡು ಶಾಲೆಗಳಿಗೆ ಹೋಗಿ ಒಂದು ವಾರದಲ್ಲಿ ನಮ್ಮ ಆಂದೋಲನ ಮುಗಿಸುವ ನಿರ್ಧಾರ ಆಗಿತ್ತು. ಆಂದೋಲನವನ್ನು ಮಾರೇನಹಳ್ಳಿ ಸರ್ಕಾರೀ ಶಾಲೆಯಿಂದಲೇ ಪ್ರಾರಂಭಿಸೋಣ ಎಂದು ನಿರ್ಧರಿಸಿದೆವು. ಈ ನಮ್ಮ ಆಂದೋಲನಕ್ಕೆ ಪ್ರಚಾರದ ಅಗತ್ಯವಿದ್ದರಿಂದ ಆಂದೋಲನದ ಬಗ್ಗೆ ದೀರ್ಘವಾಗಿ ಬರೆದು ಪತ್ರಿಕೆಗಳಿಗೆ ಕಳುಹಿಸಿದೆ. ಒಂದು ಪತ್ರಿಕೆಯ ವರದಿಗಾರರು ಕರೆಮಾಡಿ ಉತ್ತಮ ಕೆಲಸ ನಾವು ಈ ಮಾಹಿತಿಯನ್ನು ಪ್ರಕಟಿಸುತ್ತೇವೆ ಎಂದು ಭರವಸೆ ನೀಡಿದರು.
”ಶಾಲೆಗಳಲ್ಲಿ ಮಾದಕಪದಾರ್ಥ ನಿಷೇದ ಮತ್ತು ಅರಿವು ” ಆಂದೋಲನದ ಪ್ರಾರಂಭದ ದಿನ ಬಂದೆ ಬಿಟ್ಟಿತು. ಆ ದಿನ ಬೆಳಗ್ಗೆ ಆರುಗಂಟೆಗೆ ಮಾರೇನಹಳ್ಳಿ ಸರ್ಕಾರೀ ಶಾಲೆಯ ಮುಖ್ಯೋಪಾದ್ಯಾಯರು ಕರೆ ಮಾಡಿದರು, ಅವರ ಹೆಸರನ್ನು ಮೊಬೈಲ್ ನಲ್ಲಿ ನೋಡಿದ ತಕ್ಷಣ ಎತ್ತಿಕೊಂಡು ” ನಮಸ್ಕಾರ ಸಾರ್, ಎಲ್ಲಾ ರೆಡಿಯಿದೆ, ಹತ್ತುಗಂಟೆಗೆ ನಿಮ್ಮ ಶಾಲೆಯಲ್ಲಿ ಇರುತ್ತೇವೆ, ಅಂದೆ, ”ಅದಿರಲಿ ಸಾರ್ ಇವತ್ತಿನ ಪತ್ರಿಕೆ ನೋಡಿದ್ರಾ ? ಬೇಗ ಆ ಪತ್ರಿಕೆ ನೋಡಿ ನನಗೆ ಕರೆ ಮಾಡಿ ” ಎಂದು ಫೋನ್ ಕಟ್ ಮಾಡಿದರು. ಆ ಪತ್ರಿಕೆ ನಮ್ಮ ಎದುರು ಮನೆಗೆ ಬರುತಿತ್ತು ಓಡಿ ಹೋಗಿ ಎದುರು ಮನೆಯಲ್ಲಿ ಇನ್ನೂ ಓದದೇ ಇಟ್ಟಿದ್ದ ಆ ಪತ್ರಿಕೆಯನ್ನು ತರೆದು ನಮ್ಮ ಸುದ್ದಿಗಾಗಿ ಹುಡಿಕಿದೆ. ಮೂರನೇ ಪುಟದ ಮೊದಲ ಸುದ್ದಿಯೇ ನಮ್ಮದು, ದೊಡ್ಡ ಅಕ್ಷರಗಳಲ್ಲಿ ಬರೆದಿದ್ದರು ”೧೪ ಶಾಲೆಗಳಲ್ಲಿ ಗಾಂಜಾ ವ್ಯಸನಿ ಮಕ್ಕಳು ” ತಲೆ ಬರಹ ನೋಡಿಯೇ ನನಗೆ ತಲೆ ತಿರುಗಿತು. ” ಮಕ್ಕಳ ಹಕ್ಕುಗಳ ಸಂಸ್ಥೆಗೆ ಈ ೧೪ ಶಾಲೆಗಳಲ್ಲಿ ಗಾಂಜಾ ಸೇವನೆ ಚಟಕ್ಕೆ ಬಿದ್ದಿರುವ ಸುದ್ದಿ ತಿಳಿದು ಬಂದಿದ್ದು ಮಕ್ಕಳ ಹಿತದೃಷ್ಟಿಯಿಂದ ಈ ಶಾಲೆಗಳಲ್ಲಿ ಮಾದಕಪದಾರ್ಥ ನಿಷೇದ ಮತ್ತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ‘ ಎಂದು ಬರೆದಿತ್ತು. ನಾನು ಪತ್ರಿಕೆಗಳಿಗೆ ಕಳುಹಿಸಿದ ಹೇಳಿಕೆಯಲ್ಲಿ ಗಾಂಜಾ ವ್ಯಸನಿ ಮಕ್ಕಳು, ಶಾಲೆಗೆ ತೊಂದರೆ, ಪೋಷಕರ ಅಳಲು ಹೀಗೆಲ್ಲಾ ಬರೆದಿರಲೇ ಇಲ್ಲ. ಮತ್ತೊಂದು ಶಾಲೆಯ ಮುಖ್ಯೋಪಾದ್ಯಾಯರು ಕರೆ ಮಾಡಿದರು ” ಏನ್ ಸಾರ್ ಮಕ್ಕಳಿಗೆ ಅರಿವು ಮೂಡಿಸ್ತಿವಿ ಅಂತ ಹೇಳಿ ಮಕ್ಕಳ ಮಾನ ತೆಗೆದು ಶಾಲೆಯ ಹೆಸರನ್ನು ಕೆಡಿಸಿಬಿಟ್ಟಿರಿ ‘ ಅಂತ ಕೋಪದಲ್ಲಿ ಮಾತನಾಡಿದರು.
ಏನು ಮಾಡಲಿ ? ಮತ್ತೆ ಬೇರೆ ಶಾಲೆಗಳ ಮುಖ್ಯೋಪಾದ್ಯಾಯರುಗಳು ಕರೆ ಮಾಡಿ ಉಗಿಯಬಹುದು ಏನು ಮಾಡೋದು ? ಮೊದಲು ಸುದ್ದಿ ಬರೆದ ಮಾಧ್ಯಮ ಮಿತ್ರರಿಗೆ ಕರೆಮಾಡಿ ಯಾಕೆ ಹೀಗೆ ಬರೆದಿದ್ದೀರಾ ಎಂದು ಕೇಳುವ ಎಂದು ಅವರಿಗೆ ಕರೆ ಮಾಡಿದೆ, ಯಾಕೆ ಗಾಂಜಾ, ಗಾಂಜಾ ವ್ಯಸನಿ ಮಕ್ಕಳು ಅಂತೆಲ್ಲಾ ಬರೆದು ಶಾಲೆಗಳ ಹೆಸರೂ ಬರೆದು ಬಿಟ್ಟಿದ್ದೀರಾ ಇದು ತಪ್ಪು ಅಲ್ಲವೇ ಅಂದೇ, ಅದೇ ಸಾರ್ ಮಾದಕ ಪದಾರ್ಥ ಅಂದರೆ ಗಾಂಜಾನು ಸೇರುತ್ತೆ ಅಲ್ವ ? ಗಾಂಜಾ ಸೇವನೆ ಮಾಡಿದರೆ, ಚಟಕ್ಕೆ ಬಿದ್ದರೆ ಅವರು ಗಾಂಜಾ ವ್ಯಸನಿಗಳು ತಾನೇ ?ಎಂದು ನನಗೆ ಪ್ರಶ್ನೆ ಹಾಕಿದರು. ನೋಡಿ ಅದೆಲ್ಲಾ ಗೊತ್ತಿಲ್ಲ ನಾನು ಕಳಿಸಿದ ಮಾಧ್ಯಮ ಮಾಹಿತಿಯಲ್ಲಿ ಇಲ್ಲದ ವಿಚಾರಗಳನ್ನು ಬರೆದಿದ್ದೀರಿ ನೀವು ತಪ್ಪಾಗಿದೆ ಎಂದು ನಾಳೆಯೇ ಮತ್ತೊಂದು ಸುದ್ದಿ ಹಾಕಿ, ಇಲ್ಲದಿದ್ದರೆ ನಾನು ದೂರು ಕೊಡುತ್ತೇನೆ, ಎಂದು ಹೇಳಿ ಕರೆ ಕಟ್ ಮಾಡಿದೆ.
ಮಾರೇನಹಳ್ಳಿ ಸರ್ಕಾರೀ ಶಾಲೆಯಲ್ಲಿ ನಮ್ಮ ಆಂದೋಲನ ಕಾರ್ಯಕ್ರಮ ಸರಿಯಾಗಿ ೧೦, ೦೦ ಗಂಟೆಗೆ ಪ್ರಾರಂಭವಾಯಿತು. ಮಕ್ಕಳ ರಕ್ಷಣಾ ನಿಯಮಗಳ ಬ್ಯಾನರ್ ಗೆ ಪ್ರತಿ ಶಿಕ್ಷಕರು ಸಹಿ ಮಾಡುವ ಮೂಲಕ ಆಂದೋಲನ ಉದ್ಘಾಟನೆಯಾಯಿತು, ನಾವು ಕೊಟ್ಟ ಮಾಹಿತಿಯನ್ನು ಮಕ್ಕಳು ಗಮನವಿಟ್ಟು ಕೇಳಿಸಿಕೊಂಡರು, ಹಲವು ಪ್ರಶ್ನೆ ಕೇಳಿದರು. ಕಾರ್ಯಕ್ರಮದ ಅಂತ್ಯದಲ್ಲಿ ನಾವು ಯಾವುದೇ ಕಾರಣಕ್ಕೂ ಮಾದಕ ಪದಾರ್ಥ ಸೇವಿಸುವುದಿಲ್ಲ, ನಮ್ಮ ಗೆಳೆಯರೂ ಸೇವಿಸದಂತೆ ತಡಿಯುತ್ತೇವೆ ಎಂದು ಶಪಥ ಮಾಡಿದರು. ಮುಖ್ಯೋಪಾದ್ಯಾಯರು ಧನ್ಯವಾದ ಹೇಳಿದರು.
ಕಾರ್ಯಕ್ರಮದ ಮದ್ಯೆ ಒಂದು ನಂಬರ್ ನಿಂದ ಸುಮಾರು ಸಾರಿ ಕರೆ ಬಂದಿತ್ತು, ಯಾರಪ್ಪ ಇದು ? ಯಾವುದೊ ಶಾಲೆಯ ಮುಖ್ಯೋಪಾದ್ಯಾಯರು ಇರಬೇಕು ಎಂಬ ಅಂಜಿಕೆಯಿಂದಲೇ ಮತ್ತೆ ಆ ನಂಬರ್ ಗೆ ಕರೆ ಮಾಡಿದೆ. ಕರೆ ತೆಗೆದು ಕೊಂಡವರು ನಾನು ಯಾರು ಎಂದು ಕೇಳುವ ಮೊದಲೇ ” ನಮಸ್ಕಾರ ನಾಗಸಿಂಹ ಸರ್, ನೀವು ಇಂದಿನದಿಂದ ಶಾಲೆಯಲ್ಲಿ ಮಾಡುತ್ತಿರುವ ಆಂದೋಲನ ವಿಚಾರ ಪತ್ರಿಕೆಯಲ್ಲಿ ಓದಿದೆ, ಅಭಿನಂದನೆಗೆಳು, ನಾನು ಪೊಲೀಸ್ ಮಾದಕ ದ್ರವ್ಯ ನಿಷೇದ ವಿಭಾಗದಿಂದ ಮಾತಾಡ್ತಿರೋದು, ನಮಗೆ ಗಾಂಜಾ ವ್ಯಸನಿ ಮಕ್ಕಳು, ಆ ಶಾಲೆಗಳ ವಿವರ ಬೇಕು, ನಾಳೆ ಹತ್ತುಗಂಟೆಗೆ ನಿಮ್ಮ ಆಫೀಸ್ ಗೇ ಬರುತ್ತೀನಿ. ” ಅಂತ ಹೇಳಿ ಫೋನ್ ಕಟ್ ಮಾಡಿದರು. ಅಯ್ಯೋ ದೇವರೇ ನಾನೆಲ್ಲಿ ವಿವರ ನೀಡಲಿ ?
ಮಾಧ್ಯಮ ಮಿತ್ರರಿಗೆ ಕರೆ ಮಾಡಿ ಪೊಲೀಸರು ಕರೆ ಮಾಡಿ ವಿವರಣೆ, ಮಾಹಿತಿ ಕೇಳುತ್ತಿರುವ ವಿಚಾರ ತಿಳಿಸಿ ಸುದ್ದಿಯನ್ನು ತಿದ್ದಿ ಬರೆಯಲು ತಿಳಿಸಿದೆ. ಸಂಪಾದಕರೊಂದಿಗೆ ಮಾತನಾಡುತ್ತೇನೆ ಎಂದರು. ಬರೀ ಮಾತಾಡೋದಲ್ಲ ದಯವಿಟ್ಟು ಬದಲಿಸಿ ಬರೆಯಿರಿ ಎಂದು ಮತ್ತೆ ಒತ್ತಡ ಹಾಕಿದೆ. ಕಾರ್ಯಕ್ರಮ ಚನ್ನಾಗಿ ಆದರೂ ಮನಸ್ಸಿನಲ್ಲಿ ಒಂದು ರೀತಿಯ ಕಳವಳ, ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಬಹಳ ಪ್ರಭಾವನ್ನು ಉಂಟು ಮಾಡುತ್ತದೆ, ಗಾಂಜಾ ವ್ಯಸನಿ ಮಕ್ಕಳು ಎಂದು ಕೇಳಿದರೆ ಭಯವಾಗುತ್ತದೆ. ಇಂತಹ ಶಾಲೆಯಲ್ಲಿ ಗಾಂಜಾ ವ್ಯಸನಿ ಮಕ್ಕಳು ಇದ್ದಾರೆ ಎಂದರೆ ಶಾಲೆಯ ಘನತೆಗೆ ದಕ್ಕೆ ಅಲ್ಲವೇ ? ಪೋಷಕರು ಸುಮ್ಮನಿರುತ್ತಾರೆಯೇ ?ಶಾಲೆಯ ವಿರುದ್ಧ ಗಲಾಟೆ ಮಾಡುವುದಿಲ್ಲವೇ ? ಗಲಾಟೆ ಪ್ರಾರಂಭವಾದರೆ ಅದು ನಮ್ಮ ಕಾರ್ಯಕ್ರಮದಿಂದ ಆದಂತೆ ಅಲ್ಲವೇ ? ಹೀಗೆಲ್ಲಾ ಯೋಚನೆ, ಅಂದು ರಾತ್ರಿ ಸರಿಯಾಗಿ ನಿದ್ದೆ ಬರಲೇ ಇಲ್ಲ.
ಮರುದಿನ ಬೆಳಗ್ಗೆ ಎದ್ದ ತಕ್ಷಣ ಮೊದಲು ಮಾಡಿದ ಕೆಲಸವೆಂದರೆ ಆ ಪತ್ರಿಕೆಯನ್ನು ತಂದು ನಮ್ಮ ಸುದ್ದಿ ಬದಲಾಗಿ ಪ್ರಕಟವಾಗಿದೆಯೇ ಎಂದು ಹುಡಿಕಿದ್ದು ಇಲ್ಲ ನಮ್ಮ ಸುದ್ದಿ ಇರಲೇ ಇಲ್ಲ, ಕೋಪ ಬಂತು ತಕ್ಷಣ ಮಾಧ್ಯಮ ಮಿತ್ರರಿಗೆ ಕರೆ ಮಾಡಿದೆ ಸ್ವಿಚ್ ಆಫ್. ಏನು ಮಾಡೋದು ಪತ್ರಿಕೆಯವರು ಮಾಡಿರುವ ತಪ್ಪಿಗೆ ನಾನು ಚಿತ್ರಹಿಂಸೆ ಅನುಭವಿಸುತ್ತಿದ್ದೇನೆ. ಇಂದು ಆಫೀಸಿಗೆ ಬರುವ ಪೊಲೀಸರಿಗೆ ಏನು ಹೇಳೋದು ? ನಾನು ಪತ್ರಿಕೆಗಳಿಗೆ ಏನು ಕಳಿಸಿದ್ದೆ ಅವರು ಏನು ಬರೆದಿದ್ದಾರೆ ಎಂದು ವಿವರಿಸುವುದು ಸರಿಯಾದ ಮಾರ್ಗ ಎಂದು ಯೋಚಿಸಿದೆ. ಮಾಧ್ಯಮ ಮಿತ್ರರಿಗೆ ನಿಮಗೆ ಸಮಯವಾದಾಗ ತಪ್ಪದೆ ಕರೆ ಮಾಡಿ ಎಂದು ಮೆಸೇಜ್ ಮಾಡಿದೆ. ಅವರಿಂದ ಯಾವುದೇ ಉತ್ತರ ಬಾರದಿದ್ದರೆ ನಾನೇ ಅವರ ಸಂಪಾದಕರೊಂದಿಗೆ ಮಾತಾಡುವ ನಿರ್ಧಾರ ಮಾಡಿದೆ.
ನನ್ನನ್ನು ಸಂಧಿಸಲು ಬಂದ ಪೊಲೀಸ್ ಅಧಿಕಾರಿ ಮಾದಕ ಪದಾರ್ಥ ತಡೆ ಕೋಶ ( Narcotic Drug Cells) ನ ಅಧಿಕಾರಿ. ನನ್ನ ಪರಿಚಯ ಅವರಿಗಿತ್ತು, ಅವರ ಹುದ್ದೆ ಅವರ ಕೋಶದ ವಿವರಗಳನ್ನು ನೀಡಿದರು. ನಾನು ಪತ್ರಿಕೆಗೆ ನಾನು ಕಳುಹಿಸಿದ ಮಾಹಿತಿ ಕೊಟ್ಟು ಸಂದರ್ಭವನ್ನು ವಿವರಿಸಿದೆ, ಅವರಿಗೆ ಸಂದರ್ಭ ಬೇಗ ಅರ್ಥವಾಯಿತು. ಒಹೋ ಹಾಗಾ, ಹಾಗಾದರೆ ಆ ಪತ್ರಿಕೆಯಲ್ಲಿ ತಿದ್ದು ಪಡಿ ಬರೆಸಿಬಿಡಿ. ಇಲ್ಲದಿದ್ದರೆ ತಪ್ಪಾಗುತ್ತದೆ. ನಾನು ಮತ್ತೆ ಕರೆ ಮಾಡುತ್ತೇನೆ ಎಂದು ಹೇಳಿ ಹೊರಟರು. ಅವರು ನನ್ನ ಮಾತನ್ನು ಅರ್ಥ ಮಾಡಿಕೊಂಡಿದ್ದು ನಂಗೆ ಸಂತೋಷವಾಯಿತು. ಆ ದಿನ ಪೂರ್ತಿ ಮಾಧ್ಯಮ ಮಿತ್ರರಿಂದ ಕರೆ ಬರಲೇ ಇಲ್ಲ.
ಮರುದಿನ ಮದ್ಯಾನ ಸುಮಾರು ಎರಡು ಗಂಟೆ ವೇಳೆಗೆ ಪೊಲೀಸ್ ಅಧಿಕಾರಿಯಿಂದ ಕರೆ ಬಂತು ” ಏನ್ ಸಾರ್ ಪ್ರಾಬ್ಲಮ್ ದೊಡ್ಡದಾಗಿದೆ. ನೀಮ್ಮ ಸಮಸ್ಯೆ ವಿಧಾನಸೌಧದಲ್ಲಿ ಚರ್ಚೆಗೆ ಬಂದು, ನಮ್ಮ ತಲೆಗೆ ಬಂದಿದೆ. ಆ ಪತ್ರಿಕೆ ನೋಡಿ, ನನಗೆ ಕರೆ ಮಾಡಿ’ ಅಂದ್ರು. ತಕ್ಷಣ ನಮ್ಮ ಆಫೀಸ್ ನಲ್ಲೆ ಇದ್ದ ಆ ಪತ್ರಕೆಯನ್ನ ತೆಗೆದುಕೊಂಡು ನೋಡಿದೆ ಯಾವ ಪುಟದಲ್ಲೂ ನಮ್ಮ ಸುದ್ದಿ ಇಲ್ಲ. ವಿಧಾನಸೌಧದಲ್ಲಿ ಅಧಿವೇಶನ ನಡಿಯುತಿತ್ತು ಅಲ್ಲಿ ನಮ್ಮ ಸುದ್ದಿ ಹೇಗೆ ಚರ್ಚೆ ಆಯಿತು ? ಅನ್ನೋ ಯೋಚನೆಯಲ್ಲಿ ತಲೆ ಎತ್ತಿ ಸಂಪಾದಕೀಯ ನೋಡಿದೆ. ಆ ಪತ್ರಿಕೆಯ ಸಂಪಾದಕರು ಸರ್ಕಾರದ ಗಮನ ಸೆಳೆಯುವುದಕ್ಕೆ ” ಶಾಲೆಗಳಲ್ಲಿ ಮಕ್ಕಳು ಗಾಂಜಾ ವ್ಯಸನಿಗಳಾಗುತ್ತಿರುವುದು ಗಂಭಿರದ ವಿಷಯ ಇದಕ್ಕೆ ಸರ್ಕಾರ ಕೈ ಗೊಂಡಿರುವ ಕ್ರಮವೇನು ? ಎಂದು ಸಂಪಾದಕೀಯವನ್ನು ಬರೆದಿದ್ದರು. ಅವರ ಉದ್ದೇಶ ಬಹಳ ಒಳ್ಳೆಯದಿತ್ತು ಆದರೆ ಅದು ನನ್ನ ಗ್ರಹಚಾರವಾಗಿತ್ತು. ಸಮಪಾದಕೀಯವನ್ನು ಓದಿ ಮುಗಿಸಿದೆ, ನನ್ನ ವಾಟ್ಸ್ ಆಪ್ ಗೆ ಪೊಲೀಸ್ ಅದಿಕಾರಿಯವು ಒಂದು ಪತ್ರ ಕಳುಹಿಸಿದ್ದರು.
ವಿಧಾನಸೌಧದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸಚಿವರೊಬ್ಬರು ಗೃಹ ಮಂತ್ರಿಗಳಿಗೆ ” ಶಾಲೆಗಳಲ್ಲಿ ಮಕ್ಕಳು ಗಾಂಜಾ ವ್ಯಸನಿಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ? ಸರ್ಕಾರ ಏನು ಕ್ರಮ ಕೈ ಗೊಂಡಿದೆ ಮಾಹಿತಿ ಕೊಡಿ ” ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಸಂಪೂರ್ಣ ಮಾಹಿತಿ ನೀಡಿ ಎಂದು ಗೃಹಕಚೇರಿಯಿಂದ ಮಾದಕ ಪದಾರ್ಥ ತಡೆ ಕೋಶಕ್ಕೆ ಆದೇಶ ಕಳುಹಿಸಿದ್ದರು. ನನ್ನ ಕಣ್ಣಿನ ಮುಂದೆ ಕತ್ತಲು ಬಂದಿತ್ತು.
ತಕ್ಷಣ ಆ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿದೆ, ಸರ್ ಪರಿಸ್ಥಿತಿ ನಿಮಗೆ ಗೊತ್ತಿದೆ, ಏನು ಮಾಡೋದು ? ಅಂದೇ. ಅವರು ಆಗಲೇ ಅದಕ್ಕೆ ಪರಿಹಾರ ಯೋಚನೆ ಮಾಡಿದ್ದರು. ” ನೀವು ಯೋಚಿಸ ಬೇಡಿ, ಈಗ ಎಷ್ಟು ಶಾಲೆನಲ್ಲಿ ಪ್ರೋಗ್ರಾಮ್ ಮಾಡಿದಿರಾ ಅದರ ಒಂದು ರಿಪೋರ್ಟ್ ಕಳಿಸಿ, ಫೋಟೋ ಸಹ ಕಳಿಸಿ. ಎಂದರು. ನನ್ನ ಸಹದ್ಯೋಗಿಗಳ ಸಹಕಾರದಿಂದ ಎರಡು ಪುಟಗಳ ವರದಿ ಸಿದ್ದಪಡಿಸಿ ಫೋಟೋಗಳೊಂದಿಗೆ ಅವರು ಕೊಟ್ಟ ಇಮೇಲ್ ಗೆ ಕಳುಹಿಸಿದೆ.
ಎರಡು ಮೂರು ದಿನ ಇದೇ ವಿಚಾರ ಯೋಚಿಸಿ ತಲೆ ಕೆಟ್ಟು ಹೋಗಿತ್ತು. ಏನಾಗುತ್ತೋ ಅನ್ನುವ ಆತಂಕ, ಮರುದಿನ ಬೆಳಗ್ಗೆ ಎದ್ದು ನಮ್ಮ ಮನೆಗೆ ಬರುವ ಪತ್ರಿಕೆಯನ್ನು ಓದತೊಡಗಿದೆ. ” ಮಾದಕ ಪದಾರ್ಥಗಳ ವಿರುದ್ದ ಶಾಲೆಗಳಲ್ಲಿ ಪೊಲೀಸರು ಹಾಗೂ ಸ್ವಯಂಸೇವಾ ಸಂಸ್ಥೆಗಳಿಂದ ಜಾಗೃತಿ ಆಂದೋಲನ ಎಂದು ನಾನು ಕಳುಹಿಸಿದ ವರದಿ ಪ್ರಕಟವಾಗಿತ್ತು. ಪೊಲೀಸ್ ಅಧಿಕಾರಿಗಳ ಹೇಳಿಕೆ ಇತ್ತು. ವಾವ್ ಪರವಾಗಿಲ್ಲ ಪೊಲೀಸರು ನಮ್ಮೊಂದಿಗೆ ಕೈ ಜೋಡಿಸಿದರು ಅಂದುಕೊಂಡೆ. ಎಲ್ಲಾ ಪತ್ರಿಕೆಗಳಲ್ಲೂ ಈ ಈ ವರದಿ ವರದಿ ಪ್ರಕಟವಾಗಿತ್ತು. ಮುಂದಿನ ಎರಡು ಮೂರೂ ದಿನಗಳಲ್ಲಿ ಗೃಹಸಚಿವರು ಸದನದಲ್ಲಿ ”ಶಾಲೆಗಳಲ್ಲಿ ಮಕ್ಕಳು ಗಾಂಜಾ ವ್ಯಸನಿಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ, ಸರ್ಕಾರ ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ” ಎಂದು ಹೇಳಿಕೆ ನೀಡಿದ್ದರು.
ನನ್ನ ಮಾಧ್ಯಮ ಮಿತ್ರರು ಕರೆ ಮಾಡಿ ‘ಸುದ್ದಿ ಸರಿಯಾಗಿ ವರದಿಯಾಗಿದೆ ನೋಡಿದಿರಾ” ಎಂದರು, ಒಹೋ ನೋಡಿದಿದೆ ತುಂಬಾ ಚನ್ನಾಗಿದೆ ‘ ಅಂದೆ. ಮಾರೇನಹಳ್ಳಿ ಶಾಲೆಯ ಮುಖ್ಯೋಪಾದ್ಯಾಯರು ಕರೆ ಮಾಡಿ ”ಸಾರ್ ನಾವು ಮಾಡಿದ ಸಣ್ಣ ಪ್ರಯತ್ನ ಸರ್ಕಾರದ ಗಮನ ಸೆಳೆದಿದೆ, ನಿಮಗೆ ದನ್ಯವಾದಗಳು ಸಾರ್ ‘ಅಂದರು. ವಾಸ್ತವ ಗೊತ್ತಿದ್ದ ನಾನು ಮನದಲ್ಲೇ ನಕ್ಕು, ಧನ್ಯವಾದಗಳು ಸಾರ್ ಅಂದೆ.
–ನಾಗಸಿಂಹ ಜಿ ರಾವ್
ವಾಸ್ತವ ಮತ್ತು ಸತ್ಯ (ಎರಡೂ ಬೇರೆ) ಎರಡನ್ನೂ ನಮ್ಮ ಮಾಧ್ಯಮ
ಮಿತ್ರರು ತಿರುಚದೇ ಅಂದರೆ ಸೆನ್ಸೆಷನಲ್ ಮಾಡದೇ ವಸ್ತುನಿಷ್ಠವಾಗಿ
ವರದಿಸುವುದು ಇತ್ತೀಚೆಗೆ ಅಪರೂಪವಾಗುತ್ತಿದೆ.
ಬಹಳ ಹಿಂದೆ ಎರಡು ಬಸ್ಸುಗಳ ಢಿಕ್ಕಿ; ಒಂದೇ ಒಂದು ಸಾವು ಎಂಬ
ವರದಿಯನ್ನು ಓದಿ ತಲೆ ಚಚ್ಚಿಕೊಂಡಿದ್ದೆ. ನಾನೂ ಒಂದು ಕಾಲದಲ್ಲಿ
ಪತ್ರಿಕಾ ಏಜೆಂಟನಾಗಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ.
ಒಂದು ಸಾವು ಎಂಬುದಕ್ಕೂ ಒಂದೇ ಒಂದು ಸಾವು ಎಂಬುದಕ್ಕೂ
ಎಷ್ಟೊಂದು ಅರ್ಥವ್ಯತ್ಯಯ! ಅವರ ದೃಷ್ಟಿಯಲ್ಲಿ ಒಂದೇ ಒಂದು ಸಾವು
ಸಂಭವಿಸಿದ್ದು ಸುದ್ದಿಗೆ ಅವಮಾನ. ಹೆಚ್ಚು ಸಾವು ಸಂಭವಿಸಬೇಕಿತ್ತೆಂಬ
ಮನೋಧರ್ಮ!!
ನಿಮ್ಮ ಅಸಹಾಯ-ಕತೆಯು ಚೆನ್ನಾಗಿ ವ್ಯಕ್ತವಾಗಿದೆ. ಪೊಲೀಸರ
ಸಹಾಯ ಮತ್ತು ಸಹಕಾರದಿಂದ ಸಹಾಯ-ಕತೆಯಾಗಿ ಮಾರ್ಪಾಟಾಗಿದ್ದು
ನನಗೆ ಸಮಾಧಾನವಾಯಿತು.
ಹಲವು ನೂರು ಸಾಮಾಜಿಕ ಸಮಸ್ಯೆಗಳ ಜೊತೆಗೆ ಈ ವ್ಯಕ್ತಿತ್ವ ಸಮಸ್ಯೆ ಸಹ
ಜೊತೆಯಾಗಿ ನಮ್ಮ ಭಾರತವನ್ನು ಹಿಂಸಿಸುತ್ತಿದೆ. ಇವುಗಳೊಂದಿಗೆ
ಪತ್ರಿಕೆಯ ತಿರುಚಲ್ಪಟ್ಟ ವರದಿಗಳೂ ಸೇರಿಕೊಂಡು ಬಿಟ್ಟಿವೆ. ಈ ದಿವಸ ಒಂದೂ
ಅಪಘಾತವಿಲ್ಲ ಎಂದು ಪ್ರಕಟಿಸುವುದಿಲ್ಲ. ಏಕೆಂದರೆ ಅವರಿಗದು ʼಬಂಡವಾಳʼ ಅಲ್ಲ!!
ಚಿಂತನೆಗೆ ಹಚ್ಚಿದ ಬರೆಹ ನಿಮ್ಮದು ಸರ್. ನಿಮ್ಮ ಲೇಖನವು ಏಕಕಾಲಕೆ
ಅರಿವನ್ನೂ ಇರವನ್ನೂ ಎಚ್ಚರಿಸುತ್ತವೆ. ಅನಂತ ಧನ್ಯವಾದಗಳು ಗುರುಗಳೇ.