ಜೀವನ ಮಕರಂದ: ಕೋಡಿಹಳ್ಳಿ ಮುರಳೀಮೋಹನ್


ತೆಲುಗು ಮೂಲ: ವಿಜಯ ಶ್ರೀಮುಖಿ
ಕನ್ನಡ ಅನುವಾದ: ಕೋಡಿಹಳ್ಳಿ ಮುರಳೀಮೋಹನ್


“ಅಮ್ಮಾ, ಕೈವಲ್ಯಾ! ಅಭಿನವ್ ಕಾಲ್ ಮಾಡಿದ್ರು.. ನಿನ್ನ ಜೊತೆ ಮಾತಾಡೋಣ ಅಂತ ಎರಡು ಮೂರು ಸಾರಿ ಮಾಡಿದ್ರೂ ನೀನು ಲಿಫ್ಟ್ ಮಾಡ್ಲಿಲ್ಲ ಅಂತೆ?” ಕರೆದು ಕೇಳಿದ್ರು ರಾಮಚಂದ್ರ.
“ಹೌದಾ ಅಪ್ಪಾ? ನನ್ನ ಮೊಬೈಲ್ ಬೆಡ್‌ರೂಮ್‌ನಲ್ಲಿದೆ. ನಾನು ಅಮ್ಮ, ಅಕ್ಕ ಅವರ ಜೊತೆ ಮಾತಾಡ್ತಾ ಅಡುಗೆಮನೆಯಲ್ಲಿದ್ದೆ. ಹೋಗಿ ನೋಡ್ತೀನಿ” ತಂದೆಯೊಂದಿಗೆ ಹೇಳುತ್ತಲೇ ಬೆಡ್‌ರೂಮ್‌ಗೆ ಹೋದಳು ಕೈವಲ್ಯ.

“ನನ್ನಗೆ ಕಾಲ್ ಮಾಡಿದ್ರಂತೆ? ನಾನು ನೋಡಲೇ ಇಲ್ಲ, ಮೊಬೈಲ್ ಇನ್ನೊಂದು ರೂಮ್‌ನಲ್ಲಿದೆ” ಕಾಲ್ ಮಾಡಿ ಅಭಿನವ್‌ಗೆ ಹೇಳಿದಳು ಕೈವಲ್ಯ.
“ಅಷ್ಟೇನಾ? ಕೋಪ ಮಾಡ್ಕೊಂಡು ಎತ್ತಲಿಲ್ಲ ಅಂದುಕೊಂಡೆ” ಅಂದ ಅಭಿನವ್.
“ಈಗ ಯಾಕೆ ಕೋಪ ಮಾಡಿಕೊಳ್ಳುತ್ತೇನೆ?”
“ಅಂದ್ರೆ, ಮದುವೆ ಆದ್ಮೇಲೆ ಕೋಪ ಮಾಡಿಕೊಳ್ಳಿವಿರಂತೆ ” ನಕ್ಕ.
ಸಣ್ಣಗೆ ನಕ್ಕು ಸುಮ್ಮನಾದಳು ಕೈವಲ್ಯ.
“ವಿಡಿಯೋ ಕಾಲ್‌ಗೆ ಬರ್ತೀರಾ?” ಕೇಳಿದ. “ಸರಿ” ವಿಡಿಯೋ ಆನ್ ಮಾಡಿದಳು.
“ಅಬ್ಬಾ! ಮದುವೆ ಕಳೆ ಬಂದ್ಬಿಟ್ಟಿದೆ ಆಗಲೇ!” ನಗುತ್ತಾ ಅಂದ.
ನಾಚಿಕೆಯಿಂದ ನಕ್ಕು ಸುಮ್ಮನಾದಳು ಕೈವಲ್ಯ.
“ನಿಮ್ಮ ಮನೆಯಲ್ಲಿ ಮದುವೆ ಏರ್ಪಾಡುಗಳು ಎಲ್ಲಿವರೆಗೆ ಬಂದಿವೆ?” ಕೇಳಿದ.
“ನಾನೂ ಅದರ ಬಗ್ಗೆನೇ ನಿಮ್ಮ ಜೊತೆ ಮಾತಾಡಬೇಕು ಅಂದುಕೊಂಡಿದ್ದೀನಿ” ಹೇಳಿದಳು ಕೈವಲ್ಯ.
“ಹೌದಾ! ಹಾಗಾದ್ರೆ ಹೇಳಿ” ಅಂದ.
“……………..”
“ಏನು ಮೌನವಾಗಿದ್ದೀರಾ?”
“ನಾನು ಹೇಳೋದು ನಿಮಗೆ ಅರ್ಥ ಆಗುತ್ತಾ?”
“ಏನು? ಅನುಮಾನನಾ? ನೇರವಾಗಿ ಹೇಳಿ… ತಪ್ಪು ತಿಳ್ಕೊಳ್ಳಲ್ಲ” ನಂಬಿಕೆಯಿಂದ ಹೇಳಿದ ಅಭಿನವ್.
“ನಿಮಗೆ ಗೊತ್ತು.. ನಮ್ಮದು ಮಧ್ಯಮ ವರ್ಗದ ಕುಟುಂಬ. ಅಪ್ಪ ಒಬ್ಬ ಸಾಮಾನ್ಯ ನೌಕರ. ಅಕ್ಕನನ್ನ ಡಿಗ್ರಿ ವರೆಗೆ ಓದಿಸಿ ಮದುವೆ ಮಾಡಿದ್ರು. ನಾನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೇರಿಕಾ ಹೋಗ್ತೀನಿ ಅಂದ್ರೆ ನನ್ನ ಆಸಕ್ತಿಯನ್ನ ಹುಮ್ಮಸ್ಸನ್ನ ಬೇಡ ಅನ್ನಲಾಗದೆ ಸ್ವಲ್ಪ ಸಾಲ ಮಾಡಿ, ಲೋನ್ ಹಾಕಿ ನನ್ನನ್ನ ಅಲ್ಲಿಗೆ ಕಳುಹಿಸಿದ್ರು. ಅಲ್ಲಿ ನನ್ನ ವಿದ್ಯಾಭ್ಯಾಸ ಮುಗಿದು ನಾನು ಜಾಬ್‌ಗೆ ಸೇರಿದ ಮೇಲೆ ಅಮೇರಿಕಾದಲ್ಲೇ ನಾವಿಬ್ಬರೂ ಪರಿಚಯ ಆದೆವು. ಮದುವೆ ಮಾಡಿಕೊಳ್ಳೋಣ ಅನ್ನೋ ನಮ್ಮ ನಿರ್ಧಾರವನ್ನ ದೊಡ್ಡವರು ಕೂಡ ಒಪ್ಪಿ ಮುಹೂರ್ತ ಇಟ್ಟಿದ್ದರಿಂದ ನಾವು ಇಲ್ಲಿಗೆ ಬಂದ್ವಿ..”
“ಕೈವಲ್ಯಾ! ಇದೆಲ್ಲಾ ನನಗೆ ಗೊತ್ತಿಲ್ವಾ?” ನಗುತ್ತಾ ಕೇಳಿದ ಅಭಿನವ್.
“ಗೊತ್ತಿಲ್ಲ ಅಂತಲ್ಲ… ನಾನು ಹೇಳೋದು ವಿವರವಾಗಿ ಹೇಳ್ತಿದ್ದೀನಿ…”
“ಸರಿ, ಹೇಳಿ”
“ನನ್ನ ನಂತರ ತಮ್ಮ ಇದ್ದಾನೆ. ಅವನ ವಿದ್ಯಾಭ್ಯಾಸ ಇನ್ನೂ ಆಗಿಲ್ಲ, ನಾನು ಅಲ್ಲಿ ಜಾಬ್ ಮಾಡಿ ಇಲ್ಲಿಗೆ ಕಳುಹಿಸಿದ ದುಡ್ಡು ನನ್ನ ಮದುವೆಗೋಸ್ಕರ ಉಳಿಸಿದ್ದಾರೆ ಅಂತ ಹೇಳಿದ್ರು. ಅಂದ್ರೆ? ನಮ್ಮ ವಿದ್ಯಾಭ್ಯಾಸಕ್ಕೆ, ನನ್ನನ್ನ ಅಲ್ಲಿಗೆ ಕಳುಹಿಸೋದಕ್ಕೆ ಆದ ಸಾಲದ ಬಡ್ಡಿಗಳು ಹಾಗೇ ಇದಾವೆ.. ಅಲ್ಲ ಇನ್ನೂ ಜಾಸ್ತಿ ಆಗ್ತಿದ್ದಾವೆ…”
“………………”
“ಅಮ್ಮ-ಅಪ್ಪ ಜೀವನ ಪೂರ್ತಿ ನಮ್ಮನ್ನ ಬೆಳೆಸೋದಕ್ಕೆ, ವಿದ್ಯಾಭ್ಯಾಸಕ್ಕೆ, ಕೆಲಸ ಸಿಗೋ ವರೆಗೂ ನಮ್ಮನ್ನ ಸಾಕಿಕೊಂಡು, ಮದುವೆಗಳಿಗೂ ಸಂಪಾದಿಸಿದ್ದು ಸಾಲದೆ ಸಾಲ ಮಾಡ್ತಾ, ಮಾಡಿದ ಸಾಲಕ್ಕೆ ಬಡ್ಡಿ ಕಟ್ಟುತ್ತಾ…” ನಿಂತಳು ಕೈವಲ್ಯ. ನಿಂತು ಕೇಳಿದಳು…
“ಅಭಿನವ್, ಕೇಳ್ತಿದ್ದೀರಾ?”
“ಹಾ… ಕೇಳ್ತಿದ್ದೀನಿ. ಹೇಳಿ… ಹೇಳಿ” ಅವನ ಧ್ವನಿ ಕೇಳಿದ ರೀತಿ ನೋಡಿದರೆ ಸಂತೃಪ್ತಿಯಿಂದ ಮತ್ತೆ ಹೇಳೋಕೆ ಶುರು ಮಾಡಿದಳು…
“ಇನ್ನೊಂದಿಷ್ಟು ದಿನಗಳಲ್ಲಿ ನಡೆಯೋ ನಮ್ಮ ಮದುವೆಗೆ ಅಕ್ಕ, ನನ್ನ ಸ್ನೇಹಿತರೆಲ್ಲಾ ಸೇರಿ ಹಲ್ದಿ ಫಂಕ್ಷನ್, ಮೆಹಂದಿ, ಸಂಗೀತ ಅಂತ ಏನೋ ಕಾರ್ಯಕ್ರಮಗಳನ್ನ ಪ್ಲಾನ್ ಮಾಡ್ತಾ, ಈವೆಂಟ್ ಮ್ಯಾನೇಜರ್‌ಗಳನ್ನ ಕರೆಸೋಕೆ ಹೇಳ್ತಿದ್ದಾರೆ. ಅಮ್ಮ-ಅಪ್ಪ ‘ಸರಿ’ ಅಂತಿದ್ದಾರೆ… ನನಗೆ ಮಾತ್ರ ಇಷ್ಟ ಇಲ್ಲಾ ಅಂದೆ…” ನಿಂತಳು.
“…ಕೇಳ್ತಿದ್ದೀನಿ ಹೇಳಿ”
“ಹತ್ತು ಜನರಲ್ಲಿ ಮೆಚ್ಚುಗೆಗೋಸ್ಕರ ತಲೆ ಮೀರಿ ಖರ್ಚು ಮಾಡಿ.. ನನ್ನ ಕಳುಹಿಸಿದ ಮೇಲೆ ಆಗೋದು ಏನು? ಅವರಿಗೆ ಕಡಿಮೆ ಆಗೋ ಆರೋಗ್ಯ, ಜಾಸ್ತಿ ಆಗೋ ವಯಸ್ಸು, ಜಾಸ್ತಿ ಆಗೋ ಸಾಲಗಳು.. ಬಡ್ಡಿಗಳಿಂದ ಮನಸ್ಸಿಗೆ ನೆಮ್ಮದಿ ಇಲ್ಲದೆ ಕುಗ್ಗಿ ಹೋಗೋದಲ್ವಾ? ನೆನಸಿಕೊಂಡ್ರೆ ಸಹಿಸೋಕೆ ಆಗ್ತಿಲ್ಲ…”
“ನೀವು ಮೊದಲು ಕಳುಹಿಸಿದ ದುಡ್ಡು ಖರ್ಚುಗಳಿಗೆ ಉಪಯೋಗಿಸಿ ಅಂತ ಹೇಳಿ” ಅಂದ.
“ಆ ಮಾತೇ ಹೇಳಿದೆ. ನಮ್ಮ ಸಂಪ್ರದಾಯದ ಪ್ರಕಾರ ಹೇಗೆ ಮಾಡ್ತಾರೋ ಹಾಗೆ ಅಷ್ಟೇ ಮಾಡಿ. ಅದಕ್ಕಿಂತ ಜಾಸ್ತಿ ಆಡಂಬರಗಳು ನನಗೆ ಇಷ್ಟ ಇಲ್ಲ ಅಂತ. ಆದ್ರೂ.. ಹೆತ್ತವರನ್ನ ನಮ್ಮವರೆಲ್ಲರನ್ನೂ, ಹುಟ್ಟಿದ ದೇಶವನ್ನ ಬಿಟ್ಟು ಹೋಗಿ ಅಲ್ಲಿ ಒಬ್ಬಂಟಿಯಾಗಿ ಇದ್ದುಕೊಂಡು ನಾವು ಸಂಪಾದಿಸಿದ್ದು ನಾವು, ನಮ್ಮವರು ಕಷ್ಟ ಪಡದೆ ಬದುಕೋದಕ್ಕೆ ಉಪಯೋಗಿಸಬೇಕು ಅಲ್ವಾ.. ವಿಲಾಸಗಳಿಗೆ, ಹೊಗಳಿಕೆಗೆ ಹಾಳು ಮಾಡಬಾರದು ಅಂತ ನನ್ನ ಉದ್ದೇಶ.” ಹೇಳ್ತಿದ್ದ ಕೈವಲ್ಯಳ ಮುಖವನ್ನ ಸೂಕ್ಷ್ಮವಾಗಿ ನೋಡ್ತಿದ್ದ ಅಭಿನವ್.
“….ಇದರ ಬದಲು ಯಾರಿಗಾದ್ರೂ ಇರೋದ್ರಲ್ಲಿ ಸ್ವಲ್ಪ ಸಹಾಯ ಮಾಡಿದ್ರೆ ಆ ತೃಪ್ತಿ ಬೇರೆ ಅಲ್ವಾ?”
” ಸಂತೋಷ, ಸಂಭ್ರಮಗಳು ವೇಸ್ಟ್ ಅಂತೀರಾ?”
“ಹಾಗೆ ಅರ್ಥ ಆಯ್ತಾ ನಿಮಗೆ? ನಮ್ಮ ಹತ್ರ ನೂರು ಇದ್ರೆ ಆ ನೂರಲ್ಲೇ ಮಾಡ್ಕೋಬೇಕು. ಐದು ನೂರು ಸಾಲ ಮಾಡಿ ಮಾಡ್ಕೋಬಾರದು ಅಂತ. ತಾತ್ಕಾಲಿಕ ಆಡಂಬರಗಳಿಗೋಸ್ಕರ ದೀರ್ಘಕಾಲ ಕುಗ್ಗಿ ಹೋಗಬಾರದು ಅಂತ.”
“ಅದು ಅವರಿಗೆ ಗೊತ್ತಿಲ್ವಾ! ಏನು ಅಂದ್ರು ಮತ್ತೆ?” ಅಂದ ಅಭಿನವ್.
“ಗೊತ್ತಿಲ್ಲ ಅಂತಲ್ಲ… ಆದ್ರೂ ಹೇಳಿದೆ. ‘ಈಗ ಎಲ್ಲರೂ ಹಾಗೇ ಮಾಡ್ತಿದ್ದಾರೆ ಅಲ್ವಾ? ಖರ್ಚಿಗೆ ಹಿಂಜರಿದು ಹಳೆ ಕಾಲದ ಮದುವೆ ತರ ಮಾಡಿ ಕೈ ತೊಳ್ಕೊಂಡ್ರು ಅಂದುಕೊಳ್ತಾರೆ ಅಂತ ಅಪ್ಪನ ಭಯ. ‘ಮದುವೆ ಅದ್ದೂರಿಯಾಗಿ ಮಾಡೋಕೆ ಹೇಳಿದ್ರಲ್ವಾ ಬೀಗರು’ ಬೇಜಾರಿಂದ ಅಂದ್ಲು ಅಮ್ಮ. ‘ಹಲ್ದಿ, ಮೆಹಂದಿ, ಸಂಗೀತ ತರ ಫಂಕ್ಷನ್ಸ್ ರಿಸೆಪ್ಷನ್ ಮಾಡ್ಕೊಂಡು, ಖುಷಿ ಖುಷಿಯಾಗಿ ಧೂಮ್ ಧಾಮ್ ಆಗಿ ಮಾಡ್ಕೊಳ್ಳದೆ ನೀನೇನು? ಅಮೇರಿಕಾದಲ್ಲಿ ಓದಿ, ಅಲ್ಲೇ ಕೆಲಸ ಮಾಡ್ತಾ ಇದ್ರೂ ಕೂಡ ಸರಳವಾಗಿ ಮಾಡಬೇಕು ಅಂತಿದ್ದೀಯಾ? ನಿಜವಾಗ್ಲೂ ನಿನಗೆ ಈ ಮದುವೆ ಇಷ್ಟಾನಾ?’ ಅನ್ನೋ ಅನುಮಾನ ಎತ್ತಿದ್ರು ಅಕ್ಕ, ಸ್ನೇಹಿತರು”
“ಒಂದು ನಿಮಿಷ ನಿಲ್ಲಿ. ಹೌದು.. ನಿಜವಾಗ್ಲೂ ನಿಮಗೆ ಈ ಮದುವೆ ಇಷ್ಟಾನಾ?” ನಗು ಮುಚ್ಚಿಕೊಳ್ಳುತ್ತಾ ಕೇಳಿದ ಅಭಿನವ್.
“ಅಭಿ! ನಾನು ಗಂಭೀರವಾಗಿ ಮಾತಾಡ್ತಿದ್ರೆ ನಿಮಗೆ ಹಾಸ್ಯನಾ? ನಾನು ಹೇಳಲ್ಲ.. ನಿಲ್ಲಿಸ್ತೀನಿ.” ಕೋಪ ಮಾಡ್ಕೊಂಡಳು ಕೈವಲ್ಯ.
“ತಮಾಷೆಗೆ ಅಂದೆ ಹೇಳಿ” ಅಂದ.
“ನಿಮ್ಮನ್ನ ನಾನು ಕೇಳೋದು ಏನಂದ್ರೆ… ನೀವು ನಮ್ಮ ಅಪ್ಪನಿಗೆ ಕಾಲ್ ಮಾಡಿ ಹೇಳ್ತೀರಾ? ಯಾವ ಆಡಂಬರಗಳು ಅನಾವಶ್ಯಕ ಖರ್ಚುಗಳು ಇಲ್ಲದೆ ಸಂಪ್ರದಾಯಬದ್ಧವಾಗಿ ನಮ್ಮ ಮದುವೆ ಸರಳವಾಗಿ ಮಾಡಿಸಿ ಅಂತ?”
“ನಾನು ಹೇಳಿದ್ರೆ ಕೇಳ್ತಾರಾ?”
“ಕೇಳ್ತಾರೆ. ಅವರಲ್ಲಿರೋ ಸಂಕೋಚ ಹೋಗುತ್ತೆ. ಬೇರೆಯವರ ಹೊಗಳಿಕೆಗೋಸ್ಕರ ಸಾಮರ್ಥ್ಯ ಮೀರಿ ಸಾಲ ಮಾಡಿ ಕಷ್ಟ ಪಡಬಾರದು ಅಂತ ಹೇಳಿ ನಿಮ್ಮ ಮಾವನಿಗೆ. ಅಷ್ಟೇ ಅಲ್ಲ.. ಸಾಲ ಇಲ್ಲದೆ ಇರೋದೇ ಆನಂದ, ಆನಂದವೇ ಜೀವನ ಮಕರಂದ ಅಂತ ಕೂಡ ಹೇಳಿ” ಸಣ್ಣಗೆ ನಗುತ್ತಾ ಅಂದಳು ಕೈವಲ್ಯ.
“ಖಂಡಿತವಾಗಿ ಹೇಳ್ತೀನಿ. ನನಗೆ ತುಂಬಾ ತೃಪ್ತಿಯಾಗಿದೆ ಹೆಮ್ಮೆಯಾಗಿದೆ. ಇರೋ ಆರ್ಥಿಕ ಸಂಪನ್ಮೂಲಗಳಿಂದ ಕುಟುಂಬವನ್ನ, ಕುಟುಂಬದ ಸದಸ್ಯರನ್ನ ಜಾಗರೂಕತೆಯಿಂದ ನಡೆಸಬಲ್ಲ ವ್ಯಕ್ತಿ ನನ್ನ ಜೀವನ ಸಂಗಾತಿಯಾಗಿ ಬರ್ತಾಳೆಂದು! ನಿಮಗೊಂದು ಸಣ್ಣ ರಹಸ್ಯ ಹೇಳಲಾ? ‘ಹುಡುಗಿ ಯಾವುದೇ ಆಡಂಬರ ಬೇಡವೆಂದು ಜಗಳ ಮಾಡ್ತಿದ್ದಾಳೆ. ನೋಡಿದವರು ಏನು ಅಂದುಕೊಳ್ತಾರೆ? ನೀವಾದ್ರೂ ಒಪ್ಪಿಸಿರಿ!’ ಎಂದು ನಿಮ್ಮ ಅಪ್ಪನವರು ಕಾಲ್ ಮಾಡಿದ್ರು. ಅದಕ್ಕಾಗಿಯೇ ಈಗ ಮಾಡಿದೆ. ನಿಮ್ಮ ಕಡೆ ನನ್ನ ವೋಟು!” ನಗುತ್ತಾ ಅಂದನು ಅಭಿನವ್.
“ಥ್ಯಾಂಕ್ಯೂ!” ನಕ್ಕಳು ಕೈವಲ್ಯ.

ಕೋಡಿಹಳ್ಳಿ ಮುರಳೀಮೋಹನ್


ಕೋಡಿಹಳ್ಳಿ ಮುರಳಿಮೋಹನ್ ಒಬ್ಬ ತೆಲುಗು ಬರಹಗಾರ, ಸಂಪಾದಕ, ಅನುವಾದಕ ಮತ್ತು ತೆಲುಗು ವಿಕಿಪೀಡಿಯನ್. ಇವರು ಡಾ.ಎಚ್.ನರಸಿಂಹಯ್ಯ ನವರ ಆತ್ಮಕಥೆ “ಹೋರಾಟದ ಹಾದಿ” ಯನ್ನ ತೆಲುಗು ನಲ್ಲಿ “ಪೋರಾಟಪಥಂ” ಅಂಥ ಅನುವದಿಸಿದ್ದಾರೆ . ಇವರ ಊರು ಹಿಂದೂಪುರ ಬಳಿಯ ಲೇಪಾಕ್ಷಿ ಮಂಡಲದ ಕೋಡಿಹಳ್ಳಿ. ಇವರು ಪ್ರಸ್ತುತ ದಕ್ಷಿಣ ಮಧ್ಯ ರೈಲ್ವೆಯಲ್ಲಿ ಹಿರಿಯ ವಿಭಾಗ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x