ಲವ್ ಕ್ರುಷಾದ್: ಎಫ್ ಎಂ ನಂದಗಾವ

ರಾಜ್ಯದ ಸಚಿವ ಸಂಪುಟದ ನಡುವಯಸ್ಸಿನ ಹಿರಿಯ ಸದಸ್ಯ, ಗೃಹ ಖಾತೆಯ ಜವಾಬ್ದಾರಿ ಹೊತ್ತ ಸಚಿವ ಕೆ.ಟಿ.ಕಿರಣ ಅವರು, ಅಂದು ಸಂಗಮನೂರು ನಗರ ಪೊಲೀಸ್ ಠಾಣೆಗೆ ಭೇಟಿಕೊಡುವವರಿದ್ದರು. ಸಮಯ ನಿಗದಿ ಆಗಿರಲಿಲ್ಲ.

ಊರಲ್ಲಿನ ಅವರ ಪಕ್ಷದ ನಾಯಕ ಹಿರಿಯಣ್ಣ ನಾಯ್ಕ ಎಂಬುವವರ ಮಗಳು ಮಂಗಳಾಳ ಮದುವೆಗೆ ಅವರು ಬಂದಿದ್ದರು. ಅವರ ಈ ಖಾಸಗಿ ಭೇಟಿಯನ್ನು ಅಧಿಕೃತಗೊಳಿಸುವ ಉದ್ದೇಶದಿಂದ ಸಂಗಮನೂರು ನಗರ ಪೊಲೀಸ್ ಠಾಣೆಯ ಭೇಟಿಯ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು.

ಬಾಲ್ಯದಿಂದಲೇ ಸಂಘಟನೆಯ ಶಾಖೆಯಲ್ಲಿ ಪ್ರಾಥಮಿಕ ಸದಸ್ಯತ್ವ ಹೊಂದಿ, ಅದರಲ್ಲಿಯೇ ಬೆಳೆಯುತ್ತಾ ಬಂದಿದ್ದ ಅವರು, ಎಳೆಯ ವಯಸ್ಸಿನಲ್ಲಿಯೇ ತಮ್ಮ ಸಂಘಟನಾ ಚಾತರ‍್ಯ ಮತ್ತು ಮಾತುಗಾರಿಕೆಯನ್ನು ಕರತಲಾಮಲಕ ಮಾಡಿಕೊಂಡಿದ್ದರು.

ಚರ್ಚಾ ಕೂಟಗಳಲ್ಲಿ ಸಮರ್ಥವಾಗಿ ವಾದ ಮಂಡಿಸುತ್ತಿದ್ದ ಅವರು, ಮೇಜಿನ ಮೇಲೆ ಇರಿಸಿದ ಒಂದು ಬೋಗೋಣಿಯ ಅಸ್ತಿತ್ವದ ಬಗೆಗೆನ ಚರ್ಚೆಯಲ್ಲಿ, ಛಲದಿಂದ ಅದು ಅಲ್ಲಿ ಇಲ್ಲವೇ ಇಲ್ಲ ಎಂದು ವಾದಿಸಿ ಸಾಧಿಸುವ ವಾಕ್ಪಟುತ್ವ ಅವರಲ್ಲಿತ್ತು.

ಬೋಗೋಣಿ ಅಂದ್ರೆ ಲೋಹದ ಪಾತ್ರೆ. ಲೋಹ ಭೂಮಿಯಿಂದ ಅಗೆದು ತೆಗೆದದ್ದು. ಅದಿರಿನ ಮೂಲದ ಈ ಲೋಹದ ಪಾತ್ರೆಗೆ ತನ್ನದೇ ಆದ ಅಸ್ತಿತ್ವ ಇಲ್ಲ. ಜಗತ್ತಿನ ಅಸ್ತಿತ್ವಕ್ಕೆ ಪಂಚಭೂತಗಳೇ ಕಾರಣ. ಪಂಚಭೂತಗಳೇ ಸತ್ಯ ಮಿಕ್ಕಿದ್ದೆಲ್ಲ ಮಿಥ್ಯ. ಹೀಗಾಗಿ ಲೋಹದ ಪಾತ್ರೆ, ಅಲ್ಲಿ ಇಲ್ಲವೇ ಇಲ್ಲ ಎಂದು ವಾದಿಸಿ ಎದುರಾಳಿಯು ಕಕ್ಕಾಬಿಕ್ಕಿ ಮಾಡಿ ಮಣ್ಣುಮುಕ್ಕುವಂತೆ ಮಾಡುತ್ತಿದ್ದ ಬಾಲ್ಯದ ಪ್ರತಿಭೆ, ಶಾಖೆಯ ಹಿರಿಯ ಗುರುಗಳ ಗಮನ ಸೆಳೆದಿತ್ತು. ಅವರು ಅದಕ್ಕೆ `ಗಣೇಶ ಪ್ರತಿಭೆ’ ಎಂದು ಹೆಸರಿಟ್ಟಿದ್ದರು. ಶಿವ ಪುರಾಣದ ಪ್ರಕಾರ, ತಂದೆ ಶಿವ ತಾಯಿ ಪಾರ್ವತಿಯರ ಎದುರು ಜಗತ್ತು ಸುತ್ತುವ ಪಣ ತೊಟ್ಟು ಹೊರಟ ಹಿರಿಯ ಮಗ ಷಣ್ಮುಖ ಮಯೂರ ವಾಹನ ಹತ್ತಿ ಜಗತ್ತಿನ ಪರಿಭ್ರಮಣೆಗೆ ಹೊರಟಿದ್ದರೆ. ಎರಡನೇ ಮಗ ಗಣೇಶ ಮೂಷಿಕ ವಾಹನ ಸವಾರ, ಶಿವ ಪಾರ್ವತಿಯರನ್ನು ಸುತ್ತು ಹಾಕಿ ವಿಶ್ವ ಪ್ರದಕ್ಷಿಣೆ ಮುಗಿಯಿತು, ತಾನೇ ಗೆದ್ದೆ ಎಂದು ಸಾಧಿಸಿದ್ದ ಚತುರ ಕತೆ ಎಲ್ಲರಿಗೂ ಗೊತ್ತು.

`ಇದ್ದದ್ದನ್ನು ಇಲ್ಲವೆಂದು ಸಾಧಿಸುವ, ಇಲ್ಲದ್ದನ್ನು ಇದೆ ಎಂದು ಸಾಧಿಸುವ ಛಲ ಸಿದ್ಧಿಸಿದೆ. ಈ ಹುಡುಗ ನಮ್ಮವನಲ್ಲ ಆದರೆ, ಅವನಿಗೆ ರಾಜಕಾರಣದಲ್ಲಿ ಬೆಳೆಯಲು ಅನುಕೂಲ ಒದಗಿಸಿದರೆ, ಮುಂದೆ ಅವನು ನಮ್ಮ ಸಂಘಟನೆಗೆ, ಸಂಘಟನೆಯ ಮುಖವಾದ ಪಕ್ಷಕ್ಕೆ ಒಂದು ದೊಡ್ಡ ಆಸ್ತಿ ಆಗುವುದರಲ್ಲಿ ಸಂಶಯವಿಲ್ಲ’ ಎಂದುಕೊಂಡ ವಾಮನ ಗುರುಗಳು ಅವನನ್ನು ತಮ್ಮ ಖಾಸಾ ವಲಯಕ್ಕೆ ಸೇರಿಸಿಕೊಂಡು, ಎದುರಾಳಿಗಳ ಅರಿವಿಗೆ ಬಾರದೇ ಅವರನ್ನು ಬಗ್ಗುಬಡಿಯುವ ಬಗೆಬಗೆಯ ಪಟ್ಟುಗಳನ್ನು ಕಲಿಸತೊಡಗಿದ್ದರು.

ಅವರ ನಿರೀಕ್ಷೆ ಸುಳ್ಳಾಗಲಿಲ್ಲ. ಹದಿನೈದು ವಸಂತಗಳು ಕಳೆಯುವಷ್ಟರಲ್ಲಿ ಆ ಹುಡುಗ, ರಾಜಕಾರಣದಲ್ಲಿ ಒಂದೊಂದೆ ದಾಪುಗಾಲು ಇಡುತ್ತಾ ಸಾಗಿ, ಈಗ ರಾಜ್ಯ ಸಂಪುಟದ ಪ್ರಭಾವಿ ಸದಸ್ಯನಾಗಿದ್ದ. ಮೊದಲು ತನ್ನ ಪುಟಾಣಿ ಊರಿನ ಪುರಸಭೆಯಲ್ಲಿ ವಿವಿಧ ಬಗೆಯ ಸಮಾಜಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಅವನೊಬ್ಬ ಅವರ ಸಮುದಾಯದ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದ. ಕಿರಣ್ ಅಣ್ಣ ಎಂದು ಕರೆಯಿಸಿಕೊಳ್ಳುತ್ತಾ ಎಲ್ಲರೊಂದಿಗೂ ನಗುನಗುತ್ತಾ ಮಾತನಾಡಿಸುತ್ತಾ ಅಪಾರ ಸಂಖ್ಯೆಯ ಸ್ನೇಹಿತರ ಬಳಗವನ್ನು ಸಂಪಾದಿಸಿದ್ದ.

ಪುರಸಭೆಯಿಂದ ಜಿಲ್ಲಾ ಕೇಂದ್ರಕ್ಕೆ ತನ್ನ ಕಾರ‍್ಯಕ್ಷೇತ್ರವನ್ನು ವಿಸ್ತರಿಸಿ ನಗರಸಭೆಯಲ್ಲಿ ಪ್ರಭಾವಿ ನಾಯಕನಾಗಿ ಬೆಳೆದ. ಆಗ ಆತ ಕಿರಣ್ ಸಾರ್ ಆದ. ನಂತರ ಅವನ ಅದೃಷ್ಟ ಖುಲಾಯಿಸಿತು. ಶಾಸಕನಾಗಿಯೂ ಆಯ್ಕೆಯಾಗಿಬಿಟ್ಟ. ಶಾಖೆಯ ಹಿಂದಿನ ಪ್ರಭಾವಳಿಯ ಹಿನ್ನೆಲೆಯಲ್ಲಿ ಪಕ್ಷದ ಹಿರಿಯರ ಮೇಲೆ ಪ್ರಭಾವ ಬೀರಿ, ರಾಜ್ಯ ಸಚಿವ ಸಂಪುಟದಲ್ಲಿ. ಈಗ ಈಚೆಗೆ ಗೃಹ ಖಾತೆಯನ್ನು ತನ್ನದಾಗಿಸಿಕೊಂಡಿದ್ದ. ಈಗ ಅವರು ಸಚಿವ ಸಾಹೇಬರು. ಮತ್ತೀಗ ಅವರನ್ನು ಕಿರಣ್ ಸಾಹೇಬರೇ ಎಂದು ಕರೆಯುವಂತಾಗಿತ್ತು.

ರಾಜ್ಯದ ಗೃಹ ಸಚಿವ ಕಿರಣ ಸಾಹೇಬರದು ಒಳ್ಳೆಯ ಗುಣವೋ ಅಥವಾ ಕೆಟ್ಟ ಚಾಳಿಯೋ ಗೊತ್ತಿಲ್ಲ. ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ, ಹಿರಿಯ ರಾಜಕಾರಣಿಗಳು, ವಿಶ್ವವಿದ್ಯಾಲಯಗಳ ಅಧ್ಯಾಪಕರು ಮೊದಲಾದವರ ಒಡನಾಟವಿದ್ದರೂ, ಸಿಪಾಯಿ, ಪೇದೆಗಳ ಮಟ್ಟದಲ್ಲೂ ಅವರ ಸ್ನೇಹ ಬಳಗ ವಿಸ್ತರಿಸಿತ್ತು. ಅವರದೊಂದು ವಿಶೇಷ ಚಾಳಿ. ಎಲ್ಲರನ್ನೂ ಆಪ್ತವಾಗಿ ವಿಚಾರಿಸಿಕೊಳ್ಳುತ್ತಿದ್ದರು. ಎಲ್ಲಾದರೂ ಅವರಿಗೆ ಬಿಡುವಿದ್ದ ಸಮಯ ಸಿಕ್ಕರೆ ಸಾಕು ಪಟ್ಟಂಗ ಹಚ್ಚಿಬಿಡುತ್ತಿದ್ದರು, ಅವರ ಸಹಪಾಠಿಗಳು ಸಿಕ್ಕರಂತೂ ಮುಗಿದೇ ಹೋಯಿತು.

ಕಳೆದ ಹದಿನೈದು ದಿನಗಳ ಹಿಂದೆ ಅವರ ಸಹಪಾಠಿಯಾಗಿದ್ದ ಸೋಮಣ್ಣ ಬೆಂಗಳೂರಿಗೆ ಬಂದಾಗ, ಅವರನ್ನು ಕಂಡು ನಮ್ಮ ಊರಲ್ಲಿ ಲವ್ ಜಿಹಾದ್ ಅಷ್ಟೇ ಅಲ್ಲಾ ಕ್ರುಷಾದ್ ಕೂಡ ನಡಿತಿದೆ ಎಂದು ಏನೇನೋ ಹೇಳಿ ಕಿವಿ ಊದಿದ್ದ. ಸಂಗಮನೂರಿನ ನಿವಾಸಿಯಾಗಿದ್ದ ಈ ಸಹಪಾಠಿ, ಹಿಂದೆ ಸಚಿವ ಕಿರಣ ಸಾಹೇಬರೊಂದಿಗೆ ಅದೇ ಸಂಗಮನೂರಿನಲ್ಲಿಯೇ ಅವರೊಂದಿಗೆ ಸಂತ ಜೋಸೆಫರ ಹೆಸರಿನ ಹೈಸ್ಕೂಲಿನಲ್ಲಿ ಓದಿದ್ದ. ಹಳೆಯ ಪರಿಚಯ ಸಲಿಗೆ ತೆಗೆದುಕೊಂಡು, ತನ್ನ ಕಿವಿಗೆ ಬಿದ್ದ ಇದ್ದಬಿದ್ದ ಸಂಗತಿಗಳಿಗೆ ಬಣ್ಣ ಹಚ್ಚಿ ಬಣ್ಣಿಸಿದ್ದ. ಜೊತೆಗೆ, `ನಮ್ಮ ಇನ್ನೊಬ್ಬ ಸಹಪಾಠಿ, ಅದೇ ಸಂಗಮನೂರು ನಗರ ಠಾಣೆಯಲ್ಲಿ ಪೇದೆಯಾಗಿರುವ ಪಾಂಡುರಂಗ ಅವರನ್ನು ವಿಚಾರಿಸಿದರೆ, ಸತ್ಯ ಗೊತ್ತಾಗುತ್ತೇ’ ಎಂದು ತಲೆಗೆ ಹುಳ ಬಿಟ್ಟಿದ್ದ.

`ಸರಿ, ನಾನು ವಿಚಾರಿಸುವೆ. ಇನ್ನೂ ಹದಿನೈದು ದಿನಗಳಿಗೆ ನಮ್ಮ ಪಕ್ಷದ ಸ್ಥಳೀಯ ನಾಯಕರಾದ ಹಿರಿಯಣ್ಣ ನಾಯ್ಕ ಅವರ ಮಗಳ ಮದುವೆ ಕಾರ‍್ಯಕ್ರಮವಿದೆ ಬಂದಾಗ ವಿಚಾರಿಸುವೆ’ ಎಂದು ಸಚಿವ ಕಿರಣ್ ಸಾಹೇಬರು ಭರವಸೆಯನ್ನೂ ಕೊಟ್ಟಿದ್ದರು.

ಸಂಗಮನೂರಿನ ಸೋಮಣ್ಣ ಅವರ ಕೋಣೆಗೆ ಬರುವ ಮೊದಲು ಕೊಡಗು ಜಿಲ್ಲೆಯಲ್ಲಿ ನಡೆದ ಅತಿವೃಷ್ಠಿಯಿಂದಾದ ಅವಘಡಗಳ ಬಗೆಗೆ ಚರ್ಚಿಸುವ ಸಂದರ್ಭದಲ್ಲಿ, ಸದಾ ಸಂಸ್ಕೃತದ ಮಂತ್ರಗಳನ್ನು ಕೇಳಿಸಿಕೊಳ್ಳುತ್ತಾ, ನೇಮದಲ್ಲಿ ಬದುಕುತ್ತಿದ್ದ ಪೂಜಾರಿ ತಂದೆಯನ್ನು ನೋಡುತ್ತಾ ತಲಕಾವೇರಿ ದೇವಸ್ಥಾನದ ಅಸುಪಾಸಿನಲ್ಲೇ ಆಡಿಬೆಳೆದ ಈ ಯುವತಿಯರು ತಾವು ಕನಸು ಕಂಡ ಬದುಕು ಕಟ್ಟಿಕೊಳ್ಳಲು ಮತ ಬದಲಿಸಿ ವಿದೇಶಕ್ಕೆ ಯಾಕೆ ಹಾರಿಹೋದರು? ಎಂಬ ಯಕ್ಷ ಪ್ರಶ್ನೆ ಸಚಿವರನ್ನು ಕಾಡಿತ್ತು.

 ಏಕೆಂದರೆ, ಕಳೆದ ೨೦೨೦ರ ಆಗಸ್ಟ್ ೫ರಂದು ಕೊಡಗಿನ ಗಜಗಿರಿ ಪ್ರದೇಶದಲ್ಲಿ ಭೂಕುಸಿತ ಉಂಟಾದಾಗ ತಲಕಾವೇರಿ ದೇವಸ್ಥಾನದ ಆನಂದತೀರ್ಥ ಸ್ವಾಮೀಜಿ ಸೇರಿ ಹಲವರು ಜೀವಂತ ಸಮಾಧಿಯಾಗಿದ್ದರು. ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ನಲ್ಲಿ ನೆಲೆಸಿರುವ ಆನಂದ ತೀರ್ಥ ಸ್ವಾಮೀಜಿ ಅವರ ಮಕ್ಕಳಾದ ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಅವರು, ಮತಾಂತರಗೊಂಡು ಕ್ರಮವಾಗಿ ಶಾನನ್ ಫರ್ನಾಂಡಿಸ್ ಮತ್ತು ನಮಿತಾ ನಜರೇತ್ ಎಂದು ಹೆಸರು ಬದಲಿಸಿಕೊಂಡಿದ್ದರಿಂದ ಅವರಿಗೆ ಪರಿಹಾರ ಧನ ವಿತರಣೆಯಲ್ಲಿ ವಿಳಂಬವಾಗಿತ್ತು, ವಿವಾದವಾದಾಗ, ಅವರಿಂದ ಸೂಕ್ತ ಅಫಿಡವಿಟ್ ಮಾಡಿಸಿಕೊಂಡು ಪರಿಹಾರ ವಿತರಣೆಗೆ ಕ್ರಮ ಜರುಗಿಸಲಾಗಿತ್ತು.

ದೇಶ ಬಿಟ್ಟು ಹೋದವರು ತಂದೆಯ ಸಾವಿನ ಪರಿಹಾರದ ಹಣದ ಜೊತೆಗೆ ಅವಿವಾಹಿತ ಚಿಕ್ಕಪ್ಪನ ಸಾವಿನ ಪರಿಹಾರಕ್ಕೂ ಯತ್ನಿಸುತ್ತಿದ್ದಾರೆ ಎಂಬ ಅಪಸ್ವರಗಳೂ ಕೇಳಿಬಂದಿದ್ದವು. ನ್ಯಾಯವಾಗಿ ನೋಡಿದರೆ, ಚಿಕ್ಕಪ್ಪನ ಸಾವಿನ ಪರಿಹಾರದ ಧನ ಚಿಕ್ಕಪ್ಪನ ಹತ್ತಿರದ ಬಂಧು ಚಿಕ್ಕಪ್ಪನ ತಂಗಿ ಅಥವಾ ಅವರ ಸೋದರತ್ತೆಗೆ ಹೋಗಬೇಕು. ದೇಶ ಬಿಟ್ಟು ಪರದೇಶ ಸೇರಿಕೊಂಡು ಮತಾಂತರ ಹೊಂದಿರುವವರಿಗೆ ಪರಿಹಾರ ಕೂಡದು ಎಂದು ಕೆಲವರು ವಾದಿಸಿದ್ದರೆ, ರಕ್ತ ಸಂಬಂಧ ಕಳೆಯಲಾಗದು, ಸಾವು ಸಾವೇ ಅದಕ್ಕೆ ಧರ್ಮದ ಸೊಂಕು ಕೂಡದು ಎಂದು ಕೆಲವರು ಹೇಳುತ್ತಿದ್ದರು.

ಸಂಗಮನೂರು ಸಚಿವ ಕೆ.ಟಿ.ಕಿರಣ ಸಾಹೇಬರ ಸ್ವಂತ ಊರು ಅಲ್ಲದಿದ್ದರೂ, ಅದು ಅವರ ತಾಯಿಯ ತವರುಮನೆ. ಅವರ ಬಾಲ್ಯದ ಬಹುತೇಕ ದಿನಗಳನ್ನು ಅವರು ಸಂಗಮನೂರಿನಲ್ಲಿಯೇ ಕಳೆದಿದ್ದರು. ಸಂಗಮನೂರಿನ ನೆನಪು ತುಂಬಾ ಆಪ್ತವಾದ ನೆನಪುಗಳ ಮೂಟೆಯನ್ನೇ ಹೊತ್ತು ತರುತ್ತಿತ್ತು.

 ಪ್ರಾಥಮಿಕ ಶಾಲೆಯನ್ನು ತಮ್ಮ ಊರಿನಲ್ಲಿಯೇ ಪೂರೈಸಿ, ಹೈಸ್ಕೂಲ್ ಓದಿಗೆ ಸಂಗಮನೂರಿಗೆ ಬಂದು ಸೇರಿದ್ದರು. ತಮ್ಮ ಊರಿನಲ್ಲಿ ಶಾಲೆ ಬಿಟ್ಟ ತಕ್ಷಣ ಶಾಖೆಗೆ ಓಡಿ ಹೋಗುತ್ತಿದ್ದ ಕಿರಣಗೆ, ಹೈಸ್ಕೂಲ್ ಓದುವಾಗ ಹಾಗೆ ಮಾಡಲಾಗುತ್ತಿರಲಿಲ್ಲ. ಊರು ಬಿಟ್ಟು ತುಸು ದೂರದಲ್ಲಿದ್ದ ಹೈಸ್ಕೂಲಿಗೆ ನಡೆದು ಹೋಗಬೇಕಾಗಿತ್ತು. ಹೋಗಿ ಬರುವುದರಲ್ಲಿ ಸಾಕಷ್ಟು ಸಮಯ ಕಳೆದುಹೋಗುತಿತ್ತು. ಶಾಖೆಗೆ ಹೋಗಲು ಭಾನುವಾರವೊಂದೆ ಉಳಿದಿತ್ತು.

ಈ ನಡುವೆ ಹೈಸ್ಕೂಲಿನ ಪ್ರಿನ್ಸಿಪಾಲ್ ಫಾದರ್ ಲೋಬೋ ಅವರು ಶಿಸ್ತಿನ ಸಿಪಾಯಿಯಂತೆ ಹುಡುಗರನ್ನು ಕಾಯುತ್ತಿದ್ದರು. ಹೈಸ್ಕೂಲಿಗೆ ತಡವಾಗಿ ಬರುವಂತಿರಲಿಲ್ಲ. ಬೇಗನೇ ಮನೆಗೆ ಹಿಂದಿರುಗುವಂತೆಯೂ ಇರಲಿಲ್ಲ. ಶಾಲೆ ತಪ್ಪಿಸಿದರೆ ರಜೆ ಹಾಕಿದರೆ, ಮರುದಿನ ಪೋಷಕರಿಂದ ರಜೆ ಚೀಟಿ ಬರೆಯಿಸಿಕೊಂಡು ಬರಬೇಕಾಗಿತ್ತು.

ಪ್ರತಿದಿನವೂ ಪ್ರಾರ್ಥನೆಯ ಸಂದರ್ಭದಲ್ಲಿ ತಪ್ಪದೇ ಒಬ್ಬೊಬ್ಬರು ಒಂದೊಂದು ದಿನ ಪತ್ರಿಕೆಯ ಮುಖಪುಟದ ದಪ್ಪ ಅಕ್ಷರದ ಶಿರೋನಾಮೆಯನ್ನು ತಪ್ಪದೇ ಸರಿಯಾಗಿ ಓದಬೇಕಾಗಿತ್ತು. ಅಂದಂದಿನ ಪಾಠಗಳ ಮನೆಪಾಠವನ್ನು ಅಂದಂದೇ ಮುಗಿಸುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ತರಗತಿಯ ಗುರುಗಳಿಂದ ಮತ್ತು ಆಯಾ ವಿಷಯದ ಗುರುಗಳಿಂದ ಛಡಿ ಏಟು ತಿನ್ನುವುದು ಅನಿವಾರ್ಯವಾಗಿತ್ತು.

ಬಹುತೇಕ ಶಿಕ್ಷಕರು ಗಂಟು ಮುಖದ ಶಿಸ್ತಿನ ಸಿಪಾಯಿಗಳಾಗಿದ್ದರೆ, ಇಂಗ್ಲಿಷ್ ಟೀಚರ್ ಲೀನಾ ಮೇಡಂ ಮಕ್ಕಳನ್ನು ಅನುನಯದಿಂದ ಮಾತನಾಡಿಸುತ್ತಿದ್ದರು. ಎಷ್ಟು ಬಾರಿ ಕೇಳಿದರೂ ಬೇಸರಿಸದೇ ವಿಷಯ ಹೇಳಿಕೊಡುತ್ತಿದ್ದರು. ಜೊತೆಗೆ ಅವರ ಮಗಳು ಲಿಲ್ಲಿ ಸಹ ಅವರ ತರಗತಿಯಲ್ಲಿಯೇ ಓದುತ್ತಿದ್ದಳು. ಒಂದು ದಿನ ಲೈಬ್ರರಿಯಲ್ಲಿದ್ದ ಸಾಹಿತಿ ಅನಂತ ಮೂರ್ತಿ ಅವರ ಕಾದಂಬರಿಯಲ್ಲಿನ ಒಂದು ಸಾಲು ತುಂಬಾ ಕಾಡಿತ್ತು. ಅದನ್ನು ಕಂಠಪಾಠ ಮಾಡಿಕೊಂಡಿದ್ದ ಕಿರಣ್, ಗಣಿತ ಪಾಠ ನಡೆಯುವಾಗ, ಯಾವುದೋ ಧ್ಯಾನದಲ್ಲಿ ಸಹಜವಾಗಿ `ಲೀವ್ ಲೋಟಸ್ ಪರ್ಲ ಅಂಬ್ರೆಲಾ’ ಎಂದು ಬಿಟ್ಟಿದ್ದ. ದುರ್ವಾಸ ಮುನಿಯ ಅವತಾರ ತಾಳಿದ್ದ ದಿನೇಶ್ ಮೇಸ್ಟ್ರು ನಾಲ್ಕು ಛಡಿ ಏಟು ಹಾಕಿದ್ದರು. ಲಿಲ್ಲಿ ಅಂದರೂ ಲೋಟಸ್ಸೇ ಅಲ್ವಾ?

ಆದರೆ, ಗಣೀತದ ಪಾಠ ಮುಗಿದ ನಂತರ, ಇಂಗಿಷ್ ಪಾಠ ಹೇಳಲು ಬಂದ ಲೀನಾ ಮೇಡಂ, ವಿಷಯ ತಿಳಿದು ಕಿರಣ್ ನನ್ನು ಹತ್ತಿರ ಕರೆದು ತಲೆ ನೇವರಿಸಿ, ಹಾಗೆಲ್ಲಾ ಮಾಡುವುದು ತಪ್ಪು ಎಂದು ತಿಳಿ ಹೇಳುತ್ತಾ ಸಮಾಧಾನ ಮಾಡಿದ್ದರು. ನಂತರ ಪಾಠ ಮಾಡಿದ್ದರು.

ಟೀಚರ್ ಮಗಳೋ ಏನೋ, ಓದಿನಲ್ಲಿ ಬಹಳ ಚುರುಕಾಗಿದ್ದ ಲಿಲ್ಲಿ, ತರಗತಿಯಲ್ಲಿ ಎಲ್ಲಾ ವಿಷಯಗಳ ಪಾಠಗಳಲ್ಲಿ ಸದಾ ಮುಂದೆ ಇರುತ್ತಿದ್ದಳು. ಅವಳ ಜಾಣತನವನ್ನು ಕಂಡ ಕಿರಣ್ ಗೆ ಒಂದೊಮ್ಮೆ `ಆದರೆ, ಅವಳನ್ನೇ ಮದುವೆಯಾಗಬೇಕು’ ಎಂದು ಅನ್ನಿಸಿದ್ದೂ ಉಂಟು. ಅವಳನ್ನು ಪಾಠದಲ್ಲಿ ಸೋಲಿಸಲಾಗದಿದ್ದರೂ, ಭಂಡವಾದ ಮಂಡಿಸಿ ಚರ್ಚಾಗೋಷ್ಠಿಯಲ್ಲಿ ಸೋಲಿಸುತ್ತಿದ್ದ ಕೆ.ಟಿ.ಕಿರಣ, ತರಗತಿಯ ಮಾನಿಟರ್ ಮತ್ತು ಶಾಲೆಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ನೇರ ನುಡಿಯ ಅವಳ ಬೆಂಬಲಿಗರನ್ನು ಯಾಮಾರಿಸಿ, ಚಳ್ಳೆಹಣ್ಣು ತಿನ್ನಿಸಿ ಗೆಲವು ಸಾಧಿಸುತ್ತಿದ್ದ. ತರಗತಿಯಲ್ಲಿ ಮಕ್ಕಳನ್ನು ಮುಂದೆ ಏನಾಗುತ್ತೀರಿ ಎಂದು ಕೇಳಿದರೆ, ಟೀಚರ್ ಮಗಳು ಲಿಲ್ಲಿ, ಟೀಚರ್ ಆಗ್ತೀನಿ ಅಂದ್ರೆ ಗೂಟದ ಕಾರಿನಲ್ಲಿ ಬರುವ ಸಚಿವರನ್ನು ಕಂಡಿದ್ದ ಕಿರಣ್, ಮಂತ್ರಿ ಆಗ್ತೀನಿ ಅಂತಿದ್ದ. ಪೊಲೀಸಪ್ಪನ ಮಗ ಪಾಂಡುರಂಗ ಪೊಲೀಸ್ ಆಗ್ತೀನಿ ಅಂತಿದ್ದ.

ಶಾಖೆಯಲ್ಲಿ ಒಂದು ಭಾನುವಾರದ ದಿನ, ಬ್ರಹ್ಮಚರ್ಯ ಮತ್ತು ಮದುವೆಯ ಬಗ್ಗೆ ಪ್ರಾಣೇಶಾಚಾರ್ಯರು ಪ್ರವಚನ ಕೊಡುವಾಗ, ಎಂಟು ಬಗೆಯ ಮದುವೆಗಳ ಬಗ್ಗೆ ತಿಳಿಸಿದ್ದರು. ಬ್ರಹ್ಮ ವಿವಾಹ, ದೈವ ವಿವಾಹ, ಅರ್ಶ ವಿವಾಹ, ಪ್ರಜಾಪತ್ಯ ವಿವಾಹ, ಗಂಧರ್ವ ವಿವಾಹ, ಅಸುರ ವಿವಾಹ, ರಾಕ್ಷಸ ವಿವಾಹ ಮತ್ತು ಪೈ಼ಶಾಚ್ ವಿವಾಹ. ಇದರಲ್ಲಿ ನಮಗಿಬ್ಬರಿಗೂ ಆಗುವ ಮದುವೆ ಗಂಧರ್ವವೋ ಪೈಶಾಚವೋ ಎಂದು ಕಿರಣ್ ತಲೆ ಕಡೆಸಿಕೊಂಡಿದ್ದೂ ಹೌದು. ಏಕೆಂದರೆ, ಲೀನಾ ಮೇಡಂ ಅವರದ್ದು ಲವ್ ಮ್ಯಾರೇಜ್ ಅಂತೆ ಅಂದರೆ ಗಂಧರ್ವ ವಿವಾಹ ಎಂದು ಮೇಲಣ ತರಗತಿಯ ವಿದ್ಯಾರ್ಥಿಗಳು ಗುಸುಗುಸು ಆಡಿಕೊಂಡದ್ದೂ ಇದೆ.

ಒಂದು ದಿನ ನಸುಕಿನಲ್ಲಿ ಕಂಡ ಕನಸಿನಲ್ಲಿ, ಹಿಂದಿನ ದಿನ ಹಿಂದಿ ಪಾಠ ಮಾಡುತ್ತಿದ್ದ ಇಕ್ಬಾಲ್ ಮೇಸ್ಟç ತಂಗಿ ನೂರುನ್ನೀಸಾ ಮುಂಬೈಗೆ ಓಡಿಹೋಗಿರುವಳೆಂದು, ಅವಳು ಪ್ರೀತಿ ಮಾಡಿ ಪ್ರಾಣೇಶಾಚಾರ್ಯರ ಮಗನೊಂದಿಗೆ ವಿವಾಹವಾಗಿ ಮುಂಬೈಯಲ್ಲಿ ನೆಲೆಸಿರುವಳೆಂದು, ಹತ್ತನೇ ತರಗತಿಯ ಮಕ್ಕಳು ತಮ್ಮ ತಮ್ಮಲ್ಲಿ ಆಡಿಕೊಳ್ಳುವಾಗ, ತಾನೂ ಲಿಲ್ಲಿಯೊಂದಿಗೆ ಮುಂಬೈಗೆ ಓಡಿಹೋದ ಪ್ರಸಂಗ ನಡೆದಿತ್ತು.

ಆ ದಿನ ಸಂಜೆ ಕೊನೆಯ ಪಾಠದ ತರಗತಿ ಮುಗಿದಾಗ ಎಲ್ಲರೂ ಹೊರನಡೆದರು. ಲಿಲ್ಲಿಯ ಲಂಗ ಬೆಂಚಿನ ಅಂಚಿಗೆ ಸಿಕ್ಕು, ಎಳೆದಂತಾಗಿ ಲಿಲ್ಲಿ ಮುಗ್ಗಿರಿಸಿದ್ದಳು. ಆಗ ಅವಳು ಅನಾಮತ್ತಾಗಿ ಅವನ ಬೆನ್ನಿಗೇ ಬಿದ್ದಿದ್ದಳು. ಅದು ಬೆಳಿಗ್ಗೆ ಕಂಡ ಕನಸಿನ ಪ್ರಭಾವ ಎಂದು ಅವನಿಗೆ ಅನಿಸಿತ್ತು.


`ತಂದೆತಾಯಿಗಳ ಗಮನಕ್ಕೆ ತಾರದೇ ವಿವಾಹವಾಗುವುದು ಗಂಧರ್ವ ವಿವಾಹ- ಲವ್ ಮ್ಯಾರೇಜ್. ವಧುವಿನ ಒಪ್ಪಿಗೆ ಇದೆಯೇ ಇಲ್ಲವೋ, ಕುಡಿಸಿ ಮತ್ತೇರಿಸಿ, ಅವಳನ್ನು ಕೂಡಿ, ಅವಳ ಕೊರಳಿಗೆ ತಾಳಿ ಬಿಗಿಯುವ ಮದುವೆ ಲವ್ ಪೈಶಾಚ್. ಮತ್ತೆ ಬಹುತೇಕ ಅದೇ ಮಾದರಿಯನ್ನು ಹೋಲುವ ಮುಸ್ಲೀಂ ಯುವಕ ನಮ್ಮ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗುವುದು ಲವ್ ಜಿಹಾದ್. ಇದು ಒಂಬತ್ತನೇ ಬಗೆಯ ವಿವಾಹ ಪದ್ಧತಿ. ಈಗ ಅದಕ್ಕೆ ಹತ್ತನೇ ಪದ್ಧತಿಯೊಂದು ಬಂದು ಸೇರಿದೆ. ಅದು ಲವ್ ಕ್ರುಷಾದ್,’

ಯಾವ ಸುಳಿವೂ ನೀಡದೇ ನೇರವಾಗಿ ಸಂಗಮನೂರು ನಗರ ಠಾಣೆಗೆ ಬಂದ ಸಚಿವ ಕೆ.ಟಿ.ಕಿರಣ್ ಅವರು, ಒಬ್ಬರೇ ಸರ್ಕಲ್ ಇನ್ಸಪೆಕ್ಟರ್ ಕೊಠಡಿಯಲ್ಲಿ ಕುಳಿತಿದ್ದಾಗ, ಅವರ ಹತ್ತಿರ ಹೋದ ಕಾನ್ಸಟೇಬಲ್ ಪಾಂಡುರಂಗ ಅವರು, ತಮ್ಮ ಠಾಣೆಯಲ್ಲಿ ನಡೆದ ಒಂದು ಪ್ರಕರಣದ ಬಗೆಗೆ ವಿವರಿಸುತ್ತಿದ್ದರು.

`ಅದೇನ್ರಿ ಅದು, ಲವ್ ಕ್ರುಷಾದ್ ಲವ್ ಕ್ರುಷಾದ್ ಅಂತಿದೀರಿ’

`ಕಿರಣಣ್ಣ ನಿಮಗೆ ಇದು ಗೊತ್ತಾಗದು. ನಮ್ಮ ಸೋಮಣ್ಣ ಬೆಂಗಳೂರಿಗೆ ಬಂದಾಗ ಹೇಳಿದ್ರಂತಲ್ಲ. ನಮ್ಮ ಸರ್ಕಲ್ ಇನ್ಸಪೆಕ್ಟರ್ ಸಿರಿಲ್ ಡಿಸಿಲ್ವಾ ಅವರು ಪ್ರಕರಣ ಮುಚ್ಚಿಹಾಕಿಬಿಟ್ಟಿದ್ದಾರೆ. ಆ ಇನ್ಸಪೆಕ್ಟರ್ ಸಮಿವುಲ್ಲಾ ಅವರೂ ಅವರ ಜೊತೆ ಕೈ ಜೋಡಿಸಿದ್ದಾರಣ್ಣಾ.’

`ಏನ್ರಿ ಅದು? ಸುಮ್ನೆ ತಲೆ ತಿಂತೀರಿ.’

ಅಷ್ಟರಲ್ಲಿ ಸರ್ಕಲ್ ಇನ್ಸಪೆಕ್ಟರ್ ಸಿರಿಲ್ ಡಿಸಿಲ್ವಾ ಮತ್ತು ರಫೀಕ್ ಸಮಿವುಲ್ಲಾ ಸೆಲ್ಯೂಟ್ ಹೊಡೆದು ಬದಿಗೆ ಸರಿದು ನಿಂತರು. ಇಲ್ಲೇನು ಮಾಡುತ್ತಿದ್ದೆ? ಎಂಬ ಭಾವದ ಅವರಿಬ್ಬರ ಗಂಟು ಮುಖ ನೋಡಿ, ಕಾನ್ಸಟೇಬಲ್ ಪಾಂಡುರಂಕನಕಗ ಅವರು ನಿಧಾನವಾಗಿ ಹೊರನಡೆದರು.

`ಸಾರ್, ನೀವು ಮದುವೆ ಮಂಟದಲ್ಲಿ ಇರುವವರೆಗೂ ಅಲ್ಲಿಯೇ ಇದ್ದೆವು. ನೀವು ಹೊರಬಂದಾಗ ಪೈಲೆಟ್ ಗಾಡಿ ಇನ್ಸಪೆಕ್ಷನ್ ಬಂಗ್ಲೊ ಕಡೆ ಹೊರಟಿತ್ತು, ನೀವು ಐಬಿ ಹೋಗಿ ರೆಸ್ಟ್ ತಗೋಂಡು ಬರುತ್ತೀರಿ ಎಂದು ಕೊಂಡು ನಾವು ಮನೆಗೆ ಹೋಗಿ ಬಂದೆವು. ಕ್ಷಮಿಸಿ’

`ಸರಿ ಇರಲಿ ಬಿಡಿ, ಹೇಗೆ ನಡೆದಿದೆ ಎಲ್ಲಾ? ಕಾನೂನು ಸುವ್ಯವಸ್ಥೆಗೆ ಏನೂ ಕುಂದಿಲ್ಲ ತಾನೆ?’

`ಸಾರ್, ನೀವು ಗಮನಿಸುತ್ತಿದ್ದರಲ್ಲಾ ಸಾರ್’ ಸರ್ಕಲ್ ಇನ್ಸಪೆಕ್ಟರ್ ಡಿಸಿಲ್ಲಾ ವಿನಯದಿಂದ ಹೇಳಿದರು.

`ಅದೇನೋ ಸುದ್ದಿ ಕೇಳಿದೆ. ನಮ್ಮ ಜೋಸೆಫ್ ರ ಹೈಸ್ಕೂಲಿನಲ್ಲಿ ನಡೆದ ಪ್ರಕರಣವನ್ನು ಮುಚ್ಚಿಬಿಟ್ಟಿದ್ದೀರಂತೆ..’

ಅದಾವುದು ಸಾರ್, ಪರೀಕ್ಷೇಲಿ ಮಕ್ಕಳ ತಲೆಗೆ ಡಬ್ಬಾ ತಗಲಹಾಕಿಸಿದ್ದಾ ಸಾರ್? ಅದು ಆವಾಗ್ಲೇ ಸಾಲ್ವಾಯಿತು ಸಾರ್. ಮಕ್ಕಳು ಆಚೆ ಈಚೆ ನೋಡಿ ಕಾಪಿ ಮಾಡದಿರಲಿ ಅಂತ ತಲೆಗೆ ಡಬ್ಬ ಹಾಕ್ಸಿದ್ದರು ಲಿಲ್ಲಿ ಮೇಡಂ. ಪಾಲಕರು ಆಕ್ಷೇಪಿಸಿದರು. ಇಲಾಖೆಯವರು ಇದೇನು ಹುಚ್ಚುಚ್ಚಾರ ಅಂದ್ರು.ಕಾಪಿ ತಡೆಯುವ ಉತ್ಸಾಹದ ಅತಿರೇಕದಲ್ಲಿ ಹಾಗೆ ಮಾಡಿದ್ದು’ ಎಂದು ಮೇಡಂ ಕ್ಷಮೆ ಕೋರಿದರು. ಅಷ್ಟರಲ್ಲಿ ನೀವೂ ಫೋನ್ ಮಾಡಿದ್ದಿರಿ. ಅಲ್ಲಿಗೆ ಅದು ಮುಗಿಯಿತಲ್ಲ ಸಾರ್.’ ಇನ್ಸಪೆಕ್ಟರ್ ರಫೀಕ್ ಸಮಿವುಲ್ಲಾ ತಡಬಡಿಸಿ ತಮಗೆ ಗೊತ್ತಿರುವುದನ್ನು ಒಪ್ಪಿಸಿದರು.

`ರೀ ಅದಲ್ಲರಿ, ಅದು ಆರು ತಿಂಗಳ ಹಿಂದಿನ ಸಮಾಚಾರ. ಲಿಲ್ಲಿ ಮೇಡಂ ನನ್ನ ಗಮನಕ್ಕೆ ತಂದಾಗ, ನಾನು ನಿಮಗೆ ಸೂಚಿಸಿದ ಆ ಪ್ರಕರಣ ಅಲ್ಲಾರಿ.. ಈಗ ಹದಿನೈದು ದಿನಗಳ ಹಿಂದೆ ನಡೆದ ಪ್ರಕರಣ. ಯಾಕೋ ಈ ಬಾರಿ ಲಿಲ್ಲಿ ಮೇಡಂ. ಅದನ್ನು ನನಗೆ ಇನ್ನೂ ನನ್ನ ಗಮನಕ್ಕೆ ತಂದಿಲ್ಲ. ಇಲ ಇಲ್ಲ, ಅವರು ಪದೇ ಪದೇ ಕರೆ ಮಾಡಿದಂತಿತ್ತು, ಮೋಡಸ್ಫೋಟದ ಮಳೆ ತಂದ ಪ್ರವಾಹದ ಅವಘಡ, ಪರಿಹಾರ ಕರ‍್ಯ ಅದರ ಹಿಂದೆಯೇ ಬಂದ ಪರಿಹಾರ ಧನ ವಿತರಿಸುವ ಗದ್ದಲದಲ್ಲಿ ನಾನು ಗಮನಿಸಿದಂತಿಲ್ಲ.’

`ಸಾರ್, ಓ ಅದಾ? ಅದು ಆತ್ಮಹತ್ಯೆಯ ಪ್ರಕರಣ ಸಾರ್. ದಕ್ಷಿಣ ಕನ್ನಡದ ಹುಡುಗ ಪ್ರವೀಣ್ ಪಿಂಟೋ ಮತ್ತು ಸುನಿತಾ ಅವರ ಆತ್ಮಹತ್ಯೆ ಪ್ರಕರಣ.’

`ಅದೇ ಪ್ರಕರಣ, ನಿಮಗೆ ಬೇಕಾದಾಗಲೆಲ್ಲಾ ವಾಕಿಟಾಕಿ ಆಫ್ ಮಾಡಿಕೊಂಡಿರ್ತೀರಿ. ಟೂರ್ ಪ್ರೋಗ್ರಾಂ ನಲ್ಲಿದ್ದುದು, ಠಾಣೆಗೆ ನಾನು ಬರುವುದು ಗೊತ್ತಾಗಲಿಲ್ಲ ಅಲ್ಲವಾ?’ ಪ್ರೊಟೊಕಾಲ್ – ಶಿಷ್ಟಾಚಾರ ಪಾಲಿಸದಿದ್ದುಕ್ಕೆ ಈಗ ಸಚಿವರು ಆಕ್ಷೇಪಿಸಿದರು.

`ಸಾರಿ ಸಾರ್,’ ಇನ್ಸಪೆಕ್ಟರ್ ಡಿಸಿಲ್ವಾ ರಾಗ ಎಳೆದರು.

`ಅದೇನು? ವಿವರ ಹೇಳ್ರಿ.’

`ಸಾರ್, ಪ್ರವೀಣ ಪಿಂಟೋ ಮತ್ತು ಸುನಿತಾ ಇಟಗಿ ಅವರು ಬಾಲ್ಯದ ಸ್ನೇಹಿತರು ಸಾರ್. ಪ್ರೀತಿ, ಪ್ರೇಮ ಅಂತ ಓಡಾಡ್ತಿದ್ದ ಅವರಿಬ್ಬರಿಗೂ ಸರಿಯಾಗಿ ಓದು ತಲೆಗೆ ಹತ್ತಲಿಲ್ಲ. ಪಿಂಟೋ ಅವರಪ್ಪ, ಬಿಷಪ್ಪರ ಕೈ ಕಾಲು ಹಿಡಿದುಕೊಂಡು ದುಂಬಾಲು ಬಿದ್ದು, ಅದೇ ಸಂತ ಜೋಸೆಫ್ ರ ಹೈಸ್ಕೂಲಿನಲ್ಲಿ ಕಾವಲುಗಾರ ಕಮ್ ಅಟೆಂಡರ್ ಕೆಲಸ ಕೊಡಿಸಿದ್ದರು. ಪ್ರವೀಣನಿಗೆ ಇರಲು ಶಾಲೆಯ ಜಮಖಾನ ಕೊಠಡಿಯ ಪಕ್ಕದಲ್ಲೇ ಶಾಲೆಯವರು ಒಂದು ಕೊಠಡಿಯನ್ನು ಕೊಟ್ಟಿದ್ದರು. ಅವನಿಗೆ ಕೆಲಸ ಸಿಕ್ಕ ಕೂಡಲೇ ಮನೆ ಬಿಟ್ಟು ಓಡಿ ಬಂದ ಸುನಿತಾ ಇಟಗಿ, ಅವನೊಂದಿಗೆ ವಾಸಿಸತೊಡಗಿದಳು.’

`ಅವರುಗಳ ತಂದೆ ತಾಯಿಗಳು ಸುಮ್ಮನಿದ್ದರೇನ್ರಿ?’

`ಸಾರ್, ಹೇಗೆ ಸುಮ್ಮನಿರ್ತಾರೆ ಸಾರ್? ಪ್ರವೀಣ್ ಪಿಂಟೋ ಅಪ್ಪ ಬಂದು ಗಲಾಟೆ ಮಾಡಿದ್ದರಂತೆ. ಅದಾದ ಸ್ವಲ್ಪ ದಿನಗಳ ನಂತರ ಸುನಿತಾ ಇಟಗಿ ಅವರ ತಂದೆ ತಾಯಿಗಳೂ ಬಂದು ಅವರಿಬ್ಬರನ್ನೂ ತರಾಟೆಗೆ ತೆಗೆದುಕೊಂಡಿದರು. ಅವರುಗಳ ಪೋಷಕರು ನಮ್ಮಲ್ಲಿಗೆ ಬಂದಿದ್ದರಂತೆ. ಅವರಿಬ್ಬರೂ ವಯಸ್ಕರೂ ಏನೂ ಮಾಡಲಾಗದು ಎಂದು ಅಂದಿನ ಇನ್ಸಪೆಕ್ಟರ್ ಕೈ ಚೆಲ್ಲಿ ಕುಳಿತರು. ಎರಡೂ ಕುಟುಂಬದವರಿಗೆ ಸಮಾಧಾನ ಮಾಡಿ ಕಳಿಸಿದ್ದರಂತೆ.’

`ಇದನ್ನೆಲ್ಲಾ ನೋಡಿಕೊಂಡು ಹೈಸ್ಕೂಲ್ ನವರು ಸುಮ್ಮನೇ ಇದ್ದರೇನ್ರಿ?

ಸಾರ್, ಹೈಸ್ಕೂಲಿನ ಹೆಡ್ ಮಿಸ್ಟೆçಸ್ ಲಿಲ್ಲಿ ಮೇಡಂ ತುಂಬಾ ಸಾಫ್ಟು ಸಾರ್’ ಅಡ್ಡ ಬಾಯಿ ಹಾಕಿದ ಸಮೀವುಲ್ಲಾ ಅವರು,ಪ್ರೀತಿಸೋದು ತಪ್ಪಲ್ಲಾ, ಹೈಸ್ಕೂಲ್ ಆವರಣದಲ್ಲಿ ಹೀಗೆ ರಂಪಾಟ ಮಾಡಬೇಡಿ. ಹೈಸ್ಕೂಲ್ ನಡೆಯೋ ಸಮಯದಲ್ಲಿ ಇದೆಲ್ಲಾ ಆದರೆ, ಕಂಪೌಂಡಿನಿಂದ ಓಡಿಸ್ತೀನಿ ಎಂದು ಹೆದರಿಸಿದ್ದರಂತೆ ಸಾರ್.’

`ಸರಿ ಸರಿ, ಅವರು ಯಾವತ್ತೂ ಹಾಗೇನೆ’

`ಸ್ವಲ್ಪ ದಿನ ಕಳೆದ ನಂತರ, ಪ್ರವೀಣ ಪಿಂಟೋ ಅವರಪ್ಪ ಬಂದು ಚರ್ಚ ಮದುವೆ ಮಾಡಿಕೊಳ್ಳಿರಿ ಎಂದು ಗಂಟು ಬಿದ್ದರೆ, ಸುನಿತಾ ಇಟಗಿ ಅವರ ಅಪ್ಪ ಅಮ್ಮ ಬಂದು, ನಮ್ಮ ಮಠದಲ್ಲಿ ಮದುವೆ ಮಾಡಿಕೊಳ್ಳಬೇಕು ಅಂತ ಪಟ್ಟು ಹಿಡಿದ್ದರಂತೆ. ಚರ್ಚ ಮದುವೆ ಅಂದ್ರೆ, ಸುನಿತಾಗೆ ಕ್ರೈಸ್ತ ಧರ್ಮೋಪದೇಶ ಹೇಳಿ ಕ್ರೈಸ್ತಳನ್ನಾಗಿ ಮಾಡಿ ಮದುವೆ ಮಾಡಬೇಕಿತ್ತು. ಮಠದ ಮದುವೆ ಅನ್ನೊದಾದ್ರೆ, ಮಠದಲ್ಲಿ ಸ್ವಾಮಿಗಳಿಂದ ಶಾಸ್ತ್ರೋಸ್ತವಾಗಿ ಗುಂಡಗಡಿಗೆ ಕಟ್ಟಿಸಿ, ಮತಾಂತರ ಮಾಡಿ ಮದುವೆ ಮಾಡಿಸಬೇಕಿತ್ತು. ಆದರೆ, ಅವರಿಬ್ಬರು ಮದುವೆ ರಿಜಿಸ್ಟಾರ್ ಹತ್ತಿರ ಹೋಗಿ ಪರಸ್ಪರ ಹಾರ ಬದಲಾಯಿಸಿಕೊಂಡು ಬಂದಿದ್ದರು, ಸಾರ್’ ಇನ್ಸಪೆಕ್ಟರ್ ಡಿಸಿಲ್ವಾ ಪ್ರಕರಣದ ವಿವರ ಹೇಳತೊಡಗಿದ್ದರು.

ಸಚಿವ ಕೆ.ಟಿ ಕಿರಣ ಅವರು, ಬೇಸರದಿಂದ ಮುಖ ಕಿವುಚಿಕೊಂಡರು.

`ಪ್ರವೀಣ ಪಿಂಟೋ, ಸುನಿತಾ ಇಟಗಿ ಅವರ ಈ ನಡೆ ಎರಡೂ ಕುಟುಂಬಗಳಿಗೆ ಹಿಡಿಸಲಿಲ್ಲ. ನಮ್ಮನ್ನ ಬಿಟ್ಟುಹೋದರೂ ಎಂದು ಎರಡು ಕುಟುಂಬಗಳು ಗೋಳಾಡವರು. ಆದರೆ, ಪ್ರವೀಣ ಮತ್ತು ಸುನಿತಾ ತಲೆ ಕೆಡಸಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದರು. ಆದರೆ, ತಿಂಗಳುಗಳು ಉರುಳಿದಂತೆ ಮೈ ಮನಸ್ಸಿನಲ್ಲಿ ಏರಿದ್ದ ವಯಸ್ಸಿನ ಪ್ರೀತಿಯ ಅಮಲು ಇಳಿಯುತ್ತಿದ್ದಂತೆಯೇ ಪರಸ್ಪರ ಸಣ್ಣಪುಟ್ಟ ವಿಷಯಗಳಿಗೆ ಪರಸ್ಪರ ದೂರತೊಡಗಿದರು. ಪರಸ್ಪರ ಕಿತ್ತಾಡತೊಡಗಿದರು. ಲಿಲ್ಲಿ ಮೇಡಂ ಕರೆದು ಎಷ್ಟು ಬಾರಿ ತಿಳಿಹೇಳಿದರೂ ಪ್ರಯೋಜನವಾಗಲಿಲ್ಲ. ಈ ನಡುವೆ ಪ್ರವೀಣ ಕುಡಿತವನ್ನು ಕಲಿತಿದ್ದ. ಎಲ್ಲೂ ಕುಡಿತಕ್ಕೆ ಹಣ ಸಿಕ್ಕದಾಗ, ಹೈಸ್ಕೂಲ್ ಪ್ರಯೋಗಾಲಯದಲ್ಲಿನ ಸ್ಪೀರಿಟ್ ಕಳವು ಮಾಡಿ ಕುಡಿದು ಸಿಕ್ಕಿಹಾಕಿಕೊಂಡ. ಕೊನೆಗೊಂದು ದಿನ ಲಿಲ್ಲಿ ಮೇಡಂ ತೀವ್ರ ತರಾಟೆಗೆ ತೆಗೆದುಕೊಂಡರು.’

`ಅದು ಸರಿಯೇ, ಯಾರಾದರೂ ಎಷ್ಟೂ ಅಂತ ತಾಳಿಕೊಳ್ತಾರೆ.’

`ಅಂದಿನಿಂದ ಸ್ವಲ್ಪಮಟ್ಟಿಗೆ ಪ್ರವೀಣ ಪಿಂಟೋ ಸುಧಾರಿಸಿಕೊಂಡ. ಆದರೆ, ಸುನಿತಾ ಇಟಗಿಗೆ ಈಗ ಜ್ಞಾನೋದಯವಾದಂತೆ ನಡೆಯತೊಡಗಿದಳು. ಗಂಡನ ಪ್ರತಿಯೊಂದು ನಡೆಯನ್ನು ಆಕ್ಷೇಪಿಸತೊಡಗಿದಳು. ಪಿಂಟೋ ದಿನವೂ ಹೆಂಡತಿಯೊಂದಿಗೆ ಜಗಳಾಡಿ ಹೊಡೆಯುವುದನ್ನು ರೂಢಿಸಿಕೊಂಡ. ಕಿರಿಕಿರಿಯನ್ನು ಸಹಿಸದ ಆತ, ಒಂದು ದಿನ ರಾತ್ರಿ ಕುಡಿದು ಬಂದು, ಹೆಡಮುರಿ ಕಟ್ಟಿ ಹೆಂಡತಿಯನ್ನು ಹೊಡೆದ. ಅವಳು ಸತ್ತೇಬಿಟ್ಟಳು ಎಂದು ಹೆದರಿಕೊಂಡು ಹೈಸ್ಕೂಲ್ ಹಿಂದಿದ್ದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ. ಆದರೆ ಸುನಿತಾ ಇಟಗಿ ಸತ್ತಿರಲಿಲ್ಲ. ಏಟಿನಿಂದ ಬಸವಳಿದು ಕುಸಿದುಬಿದ್ದಿದ್ದಳು. ನೆರೆದ ಜನ ಉದ್ರಿಕ್ತರಾದಾಗ ಮಧ್ಯಾಹ್ನದ ಹೊತ್ತು ಹೈಸ್ಕೂಲಿಗೆ ಬೀಗ ಜಡಿಯುವ ಪ್ರಸಂಗ ಬಂದಿತ್ತು. ಮರುದಿನ ರಜೆ ಘೋಷಿಸಲಾಗಿತ್ತು. ಈಗ ಎಲ್ಲವೂ ಸಹಜ ಸಹಜ ಸ್ಥಿತಿಗೆ ಮರಳಿದೆ. ಆದರೆ ಸೀತಾಳ ಕತೆ ಇಂದು ಅಗಸನ ಕತ್ತೆಯಂತಾಗಿದೆ, ಸಾರ್. ಅವಳಿಗೆ ಲಿಲ್ಲಿ ಮೇಡಂ ಅವರೇ ದಿಕ್ಕು ಈಗ. ಹೈಸ್ಕೂಲಿನಲ್ಲಿ ಬದಕಿಗೆ ಆಧಾರವಾಗಿ ಅವಳಿಗೊಂದು ಕೆಲಸ ಕೊಡಿಸಿದ್ದಾರೆ.’ ಸರ್ಕಲ್ ಇನ್ಸಪೆಕ್ಟರ್ ಡಿಸಿಲ್ವಾ ಮಾತು ನಿಲ್ಲಿಸಿದರು.

`ಅಲ್ಲಾರಿ ಅದೇನೋ, ಲವ್ ಕ್ರುಷಾದ್ ಲವ್ ಕ್ರುಷಾದ್ ಅಂತಿದ್ದಾರಲ್ರಿ. ಅದೇನ್ರಿ ಅದು.’

ಇನ್ಸಪೆಕ್ಟರ್ ಸಮಿವುಲ್ಲಾ ಅವರು, ಸರ್ಕಲ್ ಇನ್ಸಪೆಕ್ಟರ್ ಡಿಸಿಲ್ವಾ ಅವರ ಮುಖ ನೋಡಿದರು.

`ಸಾರ್, ಮಹಮ್ಮದೀಯರು ಆದಿಕಾಲದಲ್ಲಿ ದೇವರೊಂದಿಗಿನ ಅನುಸಂಧಾನದ ಪಥದಲ್ಲಿನ ಹೋರಾಟವನ್ನು ಜಿಹಾದ್ ಎಂದು ಕರೆಯುತ್ತಿದ್ದರು. ನಂತರದ ಕಾಲಘಟ್ಟದಲ್ಲಿ ಧರ್ಮ ರಕ್ಷಣೆಗಾಗಿ ಮಹಮ್ಮದೀಯರಲ್ಲದವರ ಮೇಲೆ ನಡೆಸುವ ಹೋರಾಟ, ಯುದ್ಧ ಎಂಬ ಅರ್ಥ ಈ ಪದಕ್ಕೆ ಅಂಟಿಕೊಂಡಿದೆ. ಭಯೋತ್ಪಾದಕ ಸಂಘಟನೆಗಳ ದೆಸೆಯಿಂದ ಅದನ್ನೀಗ ಧರ್ಮಯುದ್ಧ ಎಂದು ಮುನ್ನೆಲೆಗೆ ತರಲಾಗಿದೆ. ಕೆಲವು ಸಂಘಟನೆಗಳು ಮುಸ್ಲೀಂ ಯುವಕ ಬೇರೆ ಧರ್ಮದ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಕ್ಕೆ ಲವ್ ಜಿಹಾದ್ ಪದ ಹುಟ್ಟುಹಾಕಿದ್ದಾರೆ. ಮುಸ್ಮೀಂ ಜಿಹಾದ್ ಪದಕ್ಕೆ ಸಂವಾದಿಯಾಗಿ ಕ್ರೆöÊಸ್ತರಲ್ಲೂ ಒಂದು ಪದ ಇದೆ. ಅದನ್ನು ಕ್ರುಸೇಡ್ ಎಂದು ಕರೆಯುತ್ತಾರೆ. ಅದರ ಅರ್ಥ, ಧರ್ಮ ರಕ್ಷಣೆಯ ಉದ್ದೇಶಕ್ಕಾಗಿ ಕೈಗೊಳ್ಳುವ ಯುದ್ಧ. ಅದು ಆಡುಭಾಷೆಯಲ್ಲಿ ಜಿಹಾದ್ ಹೋಲಿಕೆಯಲ್ಲಿ ಕ್ರುಷಾದ್ ಎಂದಾಗಿದೆ. ಅಂದರೆ, ಇಲ್ಲಿ ಕ್ರೆöÊಸ್ತ ಹುಡುಗ, ಬೇರೆ ಮತದ ಹುಡುಗಿಯನ್ನು ಮದುವೆ ಆಗುವುದನ್ನು ಸೂಚಿಸಲು ಈ ಪದ ಬಳಸಲು ಆರಂಭಿಸಿದ್ದಾರೆ, ಸಾರ್.’

`ಅಂದರೆ, ಈಚೆಗೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಜೊತೆಗೆ ಉಪಾಧ್ಯಕ್ಷೆ ಹುದ್ದೆಗೆ ಆಯ್ಕೆಯಾದ ಕಮಲಾ ಹ್ಯಾರಿಸ್ ನಮ್ಮವರು ಎಂದು ನಾವುಗಳು ಸಂಭ್ರಮಿಸಿದ್ದುದು ತಪ್ಪಾಗುತ್ತದಾ? ಹಾಗಾದರೆ, ಈಗಿನ ಮೊಳಕೆಯೊಡೆದು ಗಿಡವಾಗಿ ಮರವಾಗುತ್ತಿರುವ ಲವ್ ಜಿಹಾದ್ ಜೊತೆಗೆ ಈಗ ನಾವು ಬೀಜ ನೆಟ್ಟು ಲವ್ ಕ್ರುಸೇಡ್ ಸಸಿ ಬೆಳೆಸಿ ಜಟಾಪಟಿಗೆ ಸಜ್ಜಾಗಬೇಕಿದೆಯಾ?’

ಸಚಿವರ ಪ್ರಶ್ನೆಗೆ ಅಧಿಕಾರಿಗಳ ಮೌನವೇ ಉತ್ತರವಾಗಿತ್ತು.

ತಾವೂ ಏಕಮುಖದ ಪ್ರೀತಿಯ ಚಿಂತನೆಯಲ್ಲಿ, ಅವರ ಅಭೀಷ್ಟೆಯನ್ನು ಅರಿಯದೇ ಒಂದೊಮ್ಮೆ ಲಿಲ್ಲಿ ಮೇಡಮ್ ಅವರನ್ನು ಮದುವೆಯಾಗ ಬಯಸಿದ್ದು ನೆನಪಾಯಿತು. ಅವರೂ ಒಪ್ಪಿ ಅಂಥದ್ದು ನಡೆದೇ ಹೋಗಿದ್ದರೆ ಅದನ್ನು ಏನೆಂದು ಕರೆಯಬೇಕಾಗುತ್ತಿತ್ತು? ಎಂಬುದು ಗೊತ್ತಾಗದೇ ಗೊಂದಲದಲ್ಲಿ ಮುಳುಗಿದ್ದರು.

ಎಫ್‌ ಎಂ ನಂದಗಾವ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x