ಚಾರ್ಲಟ್‌ಟೌನ್, ಕೆನಡಾ – ಇಲ್ಲಿನ ಬದುಕು ಅಕ್ಷರಶಃ ಬಣ್ಣಗಳ ನಡುವೆ ಜೀವಿಸಿದಂತಿದೆ ಎಂದರೆ ತಪ್ಪಾಗದು. ಊರೆಲ್ಲಾ ಹಾಲು ಚೆಲ್ಲಿದಂತೆ ಕಾಣುವ ಚಳಿಗಾಲವು, ಬೆಂಕಿಯ ರಶ್ಮಿಯೊಂದಿಗೆ ಬೆರೆತು ನಗುವ ಬೇಸಿಗೆ, ಕೋಗಿಲೆಯ ರಾಗದಲ್ಲಿ ಮೂಡುವ ಗೀಜುಗಾಲು, ಹೊಸ ಜೀವನಕ್ಕೆ ಶಕ್ತಿಯ ಉಡುಗೊರೆಯಾದ ವಸಂತ—ಪ್ರಕೃತಿಯೆಂಬ ಭಾಷೆಯಲ್ಲಿ ಇಲ್ಲಿ ಎಲ್ಲವೂ ಒಂದು ಅಪೂರ್ವ ಕವಿತೆಯಾಗಿ ಮೂಡಿಬರುತ್ತವೆ.
ಮೈಸೂರಿನಲ್ಲಿ ವರ್ಷ ಪೂರ್ತಿ ಹಸಿರಿನ ಸಿರಿಯನ್ನೇ ಕಂಡ ನಾವು ಇಲ್ಲಿಗೆ ಬಂದಾಗ, ಕಾಲದೊಂದಿಗೆ ಬದಲಾಗುವ ಪ್ರಕೃತಿಯ ಬಣ್ಣ ಮತ್ತು ಆಕಾಶವೇ ದಿನಕ್ಕೊಂದು ಹೊಸ ಬಣ್ಣದಲ್ಲಿ ಅರಳುವಂತೆ ಕಾಣುತ್ತಿದ್ದುದು ಮೈನವಿರೇಳಿಸುವಂತೆ ಮಾಡಿತ್ತು. ಹಸಿರು, ಕಿತ್ತಳೆ, ಕೆಂಪು, ಬೂದು, ಹೊಳೆಯುವ ಬಿಳುಪಿನ ನೆರಳು—ಪ್ರಕೃತಿಯ ಹಸ್ತಲಾಘವವೆಂದರೆ ಇದೇ ಇರಬೇಕು!
ಚಳಿಗಾಲದ ನಂತರ, ವಸಂತ ತನ್ನ ಎಲ್ಲಾ ಎಲೆ-ಗರಿ-ಚಿಗುರುಗಳನ್ನು ಹಸಿರಾಗಿ ಮರಳಿಸುವ ಮಾಯಾಜಾಲವನ್ನು ನೋಡಿಯೇ ಅನುಭವಿಸಬೇಕು. ಹಿಮದಿಂದ ಮುಚ್ಚಿದ್ದ ಎಲ್ಲಾ ಮರಗಳು ಹೊಸ ಚಿಗುರು ಒಡೆಯುತ್ತದೆ. ಆರು ತಿಂಗಳುಗಳಿಂದ ಮುಚ್ಚಿದ್ದ ಬಿಳಿಯ ಹೊದಿಕೆ ಮತ್ತೆ ತೆರೆದುಕೊಳ್ಳುವ ಈ ಕ್ಷಣ—ಇದು ಕೇವಲ ಒಂದು ಋತುಬದಲಾವಣೆ ಎನಿಸುವುದಿಲ್ಲ, ಬದುಕಿನ ಹೊಸ ಪುಟ ತೆರೆದುಕೊಳ್ಳುವ ಕ್ಷಣ. ಹಕ್ಕಿಗಳು ಹೊಸ ಹಾಡುಗಳನ್ನು ಹಾಡುತ್ತವೆ, ಬೀಸು ಗಾಳಿ ತಂಪಾದ ಚುಂಬನ ನೀಡುತ್ತಿರುತ್ತದೆ. ಚಿಟ್ಟೆಗಳು ಹಸಿರು ಎಲೆಗಳ ನಡುವೆ ಸುಂದರವಾದ ಕುಣಿತವಾಡುತ್ತಿರುತ್ತವೆ. ಪ್ರತಿಯೊಂದು ಮರವೂ, ತಾನೊಂದು ಹೊಸ ಬಾಳನ್ನು ಪ್ರಾರಂಭಿಸಿದ್ದೇನೆ ಎಂದು ಘೋಷಿಸುವಂತೆ ಕಾಣುತ್ತದೆ. ಪಟಪಟನೆ ಮನೆಗೆ ಓಡುವ ಜನ ರಾತ್ರಿ ಹತ್ತಾದರೂ ಇಳಿಯದ ಸೂರ್ಯನ ಒಡಲಲ್ಲಿ ಬೆಚ್ಚಗೆ ಸಮುದ್ರ ತೀರದಲ್ಲೋ ಅಥವಾ ನಗರದಲ್ಲಿ ನಡೆಯುವ ಅದೆಷ್ಟೊ ವಿಶಿಷ್ಟ ಕಾರ್ಯಕ್ರಮಗಳಲ್ಲಿ ಕಾಣಸಿಗುತ್ತಾರೆ.
ಆ ಹಸಿರು ಉತ್ಸವದ ನಂತರ, ಮತ್ತೊಂದು ಅಮೋಘ ನೈಸರ್ಗಿಕ ಬಣ್ಣೋತ್ಸವ ಆರಂಭವಾಗುತ್ತದೆ. ಗೀಜುಗಾಲು! ಮರಗಳೆಲ್ಲಾ ಬಣ್ಣ ಬದಲಾಯಿಸುವ ಹಬ್ಬವನ್ನಾಚರಿಸುತ್ತವೆ. ನೋಡನೋಡುತ್ತಿದ್ದಂತೆ ಹಸಿರಾದ ಎಲೆಗಳು ಕಿತ್ತಳೆ, ಕೆಂಪು, ಹಳದಿ ಬಣ್ಣಕ್ಕೆ ತಿರುಗಿಬಿಡುತ್ತವೆ. ಒಮ್ಮೆ ತಲೆ ಎತ್ತಿ ನೋಡಿದರೆ, ಆಕಾಶಕ್ಕೇ ಕೈಹಾಕಿದಂತೆ ಅನ್ನಿಸುವ ಮರಗಳು ಬಣ್ಣದ ಪೇಟ ತೊಟ್ಟು ನಿಂತಂತಿರುತ್ತದೆ. ಬೀದಿಗಳೆಲ್ಲಾ ಈ ಬಣ್ಣದ ಎಲೆಗಳನ್ನು ಹೊದ್ದು ಬೆಚ್ಚನೆ ತಂಪು ಗಾಳಿಯ ಸವಿಯನ್ನು ಅನುಭವಿಸುತ್ತಿರುತ್ತದೆ. ಅಷ್ಟೊಂದು ಸುಂದರ! ಆ ಮರಗಳ ಕೆಳಗೆ ನಿಂತರೆ, ಎಳೆ ಬೂದಿನ ಕೆಂಪು ಸೀರೆ ತೊಟ್ಟು ನಿಂತ ವಧುವಿನಂತೆ ಪ್ರಕೃತಿಯೇ ನಮ್ಮ ಮುಂದೆ ನಿಂತಿರುವಂತೆ ಅನಿಸುತ್ತದೆ.
ಇದರ ನಡುವೆಯೇ ಚಳಿಯ ಮುನ್ಸೂಚನೆ! ಹಸಿ ಚಳಿ ಬೆನ್ನಿಗೆ ಹತ್ತಿದಂತೆ, ಹಿಮದ ಹೊದಿಕೆ ಎಲ್ಲೆಡೆ ಹರಡುತ್ತದೆ. ಮರಗಳು ತಮ್ಮ ಕೊನೆಯ ಎಲೆಗಳನ್ನು ಸಹ ತ್ಯಜಿಸುತ್ತವೆ. ಒಂದು ಬಿಳಿಯ ಕಡಲಂತೆ ಎಲ್ಲವೂ ದೀಪದ ಬೆಳಕಿನಲ್ಲಿ ಹೊಳೆಯುತ್ತದೆ. ಹಿಮಪಾತದ ದಿನ, ಸೂರ್ಯನ ಕಿರಣಗಳು ಹಿಮದ ಹನಿಗಳ ಮೇಲೆ ಬೀಳುವಾಗ ಹೊಳೆಯುವ ಬೆಳಕೇ ನಿಜವಾದ ಮಣಿಮುತ್ತುಗಳ ಹೊಳಪಿನಂತೆ. ಮೈಸೂರಿನಲ್ಲಿ ಚಳಿಗಾಲ ಎಂದರೆ ಸ್ವಲ್ಪ ಶೀತ, ಸ್ವಲ್ಪ ಹಸಿರು ಕಂಡ ನಾವು, ಇಲ್ಲಿ? ಚಳಿಗಾಲ ಎಂದರೆ ಬಿಳಿಯ ಮೋಡದಲ್ಲಿ ಮುಚ್ಚಿದ ಹೃದಯದ ಬಡಿತ ಎನ್ನುವುದ ಕಣ್ಣಾರೆ ಕಂಡೆವು. ಹಿಮದ ರಾಶಿ ಮುಚ್ಚುತ್ತಿದ್ದಂತೆ, ಮಣ್ಣು, ಮರ, ಬೀದಿ ಎಲ್ಲವೂ ಒಂದು ಬಿಳಿಯ ಕನಸಿನ ನಗರಿಯಂತಾಗಿಬಿಡುತ್ತವೆ.

ಮತ್ತೂ ಸುಂದರ ಎಂದರೆ ಚಳಿಗಾಲದಲ್ಲಿ, ಸಮುದ್ರವು ತನ್ನ ಸ್ವರೂಪವನ್ನು ಬದಲಾಯಿಸುವ ಅದ್ಭುತ ಪ್ರಕ್ರಿಯೆ ಇಲ್ಲಿ ಕಾಣಬಹುದು. ತಣ್ಣನೆಯ ತೀವ್ರತೆಗೆ ಕಡಲು ನಿಧಾನವಾಗಿ ಹಿಮರಾಶಿಯಿಂದ ಆವರಿಸಲ್ಪಡುತ್ತದೆ. ನೀರು ನಿಧಾನವಾಗಿ ಗಟ್ಟಿಯಾಗುತ್ತಾ, ಹೊಳೆಯುವ ಬಿಳುಪಿನ ಹಿಮಪದರವಾಗಿ ಪರಿವರ್ತನೆಯಾಗುತ್ತದೆ. ಚಂಡಮಾರುತದ ಸಮುದ್ರ ಈಗ ಸುಮ್ಮನಾದ ಪೀಠಭೂಮಿಯಂತೆ ಗೋಚರಿಸುತ್ತದೆ, ಕೆಲವೊಮ್ಮೆ ಬಿರುಕು ಬಿಟ್ಟ ಹಿಮದ ಚದರಗಳ ನಡುವೆ ನೀರಿನ ತೆಳು ಹರಿವು ಮಾತ್ರ ಕಾಣಿಸುತ್ತದೆ. ಬೋಟ್‌ಗಳು ನಿರ್ಜನವಾಗಿ ತಟದ ಬಳಿ ನಿಂತಿರುವ ದೃಶ್ಯ, ಸಮುದ್ರದ ಮೇಲ್ಮೈಯ ಮೇಲೆ ಹೆಜ್ಜೆ ಹಾಕುವ ಹಕ್ಕಿಗಳ ನೃತ್ಯ—ಈ ದೃಶ್ಯಗಳು ಚಳಿಗಾಲದ ಶೀತ ಸೌಂದರ್ಯವನ್ನು ಮತ್ತಷ್ಟು ಗಾಢಗೊಳಿಸುತ್ತವೆ.
ಈ ಕಾಲದಲ್ಲಿ ಆಕಾಶವೇ ಪ್ರತ್ಯೇಕ ಕಥೆಯನ್ನು ಹೆಣೆಯುತ್ತದೆ. ಒಂದು ದಿನ ಅದು ಗಾಢ ನಿಲಿ ಬಣ್ಣದಲ್ಲಿ ತೆರೆದುಕೊಂಡರೆ, ಇನ್ನೊಂದು ದಿನ ಹಗುರವಾದ ಗುಲಾಬಿ ಮೋಡಗಳ ಹೊದಿಕೆಯಲ್ಲಿ ನಗುತ್ತದೆ. ನಾವು ಸಣ್ಣವರಿದ್ದಾಗ ನನ್ನ ಸ್ನೇಹಿತೆ ಹೇಳಿದ್ದಳು, ಗುಲಾಬಿ ಮೋಡಗಳನ್ನು ನೋಡಿದರೆ ಮನದಾಸೆ ಪೂರ್ತಿಯಾಗುತ್ತದೆ ಎಂದು. ಆದರೆ ನಾನು ಮೊದಲ ಬಾರಿಗೆ ಇಲ್ಲಿಗೆ ಬಂದಾಗ, ಆ ಗುಲಾಬಿ ಮೋಡಗಳು ನಿಜವಾಗಿಯೂ ಇರುತ್ತದೆ ಹಾಗು ಅದು ನಿಜವಾಗಿಯು ಥೇಟ್ ಗುಲಾಬಿಯ ಬಣ್ಣವೇ ಎನ್ನುವ ಅಪೂರ್ವ ಸತ್ಯವನ್ನು ಅರಿತುಕೊಂಡೆ. ಆ ಗುಲಾಬಿ ಮೋಡಗಳು ನನ್ನ ಮೇಲೆ ಮೋಡದ ನೆನಪುಗಳಂತೆ ಇಳಿಯುತ್ತಾ ಹೋದವು.
ಇಲ್ಲಿನ ಆಕಾಶ ಇನ್ನೊಂದು ಅದ್ಭುತವನ್ನು ಬಿಚ್ಚಿಡುತ್ತದೆ—ಅದೇ ಅರೋರಾ! ಅವರಿವರು ಹೇಳುವ ಇಲ್ಲಿ ಕಂಡಿತು, ಅಲ್ಲಿ ಕಂಡಿತು ಎಂಬ ಮಾತುಗಳು ಪೊಳ್ಳೆನಿಸುತ್ತಿತ್ತು. ಏಕೆಂದರೆ ಮೊಬೈಲಿನಲ್ಲಿ ಮಾತ್ರ ಅಷ್ಟು ಗಾಢವಾಗಿ ಚಿತ್ರಗಳಲ್ಲಿ ಕಾಣುವಂತೆ ಬಣ್ಣಗಳು ಕಾಣುತ್ತಿತ್ತು. ನಿಜ ನೋಡಿದರೆ ಅವು ಕೇವಲ ತಿಳಿ ಬಣ್ಣಗಳು. ನಮ್ಮೂರಲ್ಲೂ ಹೀಗೆ, ಎಂದುಕೊಳ್ಳುತ್ತಿದ್ದೆವು. ಆದರೆ ಅದೊಂದು ರಾತ್ರಿ ನಮ್ಮ ಹಿತ್ತಲಲ್ಲಿ ಕೆಪಿ ಇಂಡೆಕ್ಸ್ ೭ ತೋರಿಸುವಾಗ ಹೋಗಿ ನೋಡಿದರೆ, ಇಡೀ ಆಕಾಶ ಕೆಂಪು, ದಿಂಗತದ ತುದಿಯಲ್ಲಿ ಹಸಿರು, ನೀಲಿ ನೇರಳೆ. ಆಕಾಶದ ವಿಸ್ತಾರದಲ್ಲಿ ಬಣ್ಣಗಳು ನೃತ್ಯ ಮಾಡುವಾಗ ನಾವು ಮನುಷ್ಯರು ಏನೇ ಮಾಡಿದರು ಈ ಪರಿ ಸೌಂದರ್ಯವ ಸೃಷ್ಠಿಸಲು ಸಾಧ್ಯವೇ ಇಲ್ಲ. ಇಂಥದ್ದೊಂದು ಸ್ವರ್ಗವನ್ನು ನಾನು ಇಲ್ಲಿಯವರೆಗೆ ನೋಡಿರಲಿಲ್ಲ!
ಇನ್ನು ಸೂರ್ಯ ಚಂದ್ರರ ಬಗ್ಗೆ ಹೇಳುವುದಾದರೆ? ಮಾತೇ ಹೊರಡದು. ಇಲ್ಲಿನ ಪೂರ್ಣಚಂದ್ರನದು ಬೇರೆಯೇ ಕಥೆ! ಇಲ್ಲಿ ಚಂದ್ರನು ನಮ್ಮ ಅಕ್ಕಪಕ್ಕದ ಮನೆಯಲಿ ಇದ್ದಂತೆ ಕಾಣಿಸುತ್ತಾನೆ! ಪೌರ್ಣಮಿಯ ದಿನ, ಆ ಹಗುರ ಬೆಳಕಿನ ಹೊತ್ತಿಗೆ, ಈ ಜಗತ್ತು ಸ್ವಲ್ಪ ಹೆಚ್ಚು ಸುಂದರವೆನಿಸುತ್ತದೆ. ನೀಲಿಪಟದ ಮೇಲೆ ನಿಂತ ಒಂದು ದೊಡ್ಡ, ಹೊಳೆಯುವ ಅಕ್ಕಸಾಲಿಗನಂತೆ.
ನಾವು ಇಷ್ಟು ವರ್ಷದಲ್ಲಿ ಸೂರ್ಯಗ್ರಹಣ ಬಂದಾಗ, ಕಿಟಕಿಗಳನ್ನು ಮುಚ್ಚಿ, ಹೊರಗೆ ಹೋಗದೆ ಕುಳಿತವರೆ. ಆದರೆ ಇಲ್ಲಿನ ಜನರು ಮನೆಮನೆಗಳಲ್ಲಿ ಗ್ರಹಣವನ್ನು ವೀಕ್ಷಿಸಲು ವಿಶೇಷ ಕಣ್ಣಕಟ್ಟುಗಳನ್ನು ಧರಿಸುತ್ತಾರೆ! ಅಲ್ಲದೆ ಶಾಲೆಗಳಲ್ಲಿ, ಎಲ್ಲೆಡೆ ಆ ಕಣ್ಣಕಟ್ಟುಗಳನ್ನು ನೀಡುತ್ತಾರೆ. ಇದರ ಮೂಲಕ ನಾನು ಮೊದಲ ಬಾರಿಗೆ ಗ್ರಹಣದ ಮೋಹಕ ಪರಿವರ್ತನೆಯನ್ನು ಕ್ಷಣಕ್ಷಣಕ್ಕೂ ನೋಡಿ ರಸದೌತಣವನುಂಡೆ. ಅಲ್ಲದೆ ಇಲ್ಲಿನ ಅರ್ಧಕ್ಕರ್ಧ ಜನ ಗ್ರಹಣದ ಸಮಯದಲ್ಲಿ ಸಮುದ್ರದ ತೀರದಲ್ಲಿ ಕ್ಯಾಂಪಿಂಗ್ ಮಾಡಿ ಗ್ರಹಣ ವೀಕ್ಷಿಸಿ ಮರಳುತ್ತಾರೆ. ಸೂರ್ಯ ಮತ್ತು ಚಂದ್ರನ ಈ ಮೋಹಕ ನೃತ್ಯವನ್ನು ವೀಕ್ಷಿಸಲು ನಾವು ಬಲು ದೂರ ಹೋಗಬೇಕಿಲ್ಲ ಎನಿಸಿತು!
ಈ ಪರಿ ಬಣ್ಣಗಳ ಹಬ್ಬ ನಮ್ಮೊಳಗೊಬ್ಬ ಪ್ರಕೃತಿಪ್ರೇಮಿಯನ್ನು ಹುಟ್ಟಿಸುವುದಂತೂ ಖಚಿತ. ಮರ, ಹೂ, ಆಕಾಶ, ಹಿಮ—ಪ್ರತಿ ಋತುವೂ ಹೊಸಬಣ್ಣ ಹೊದ್ದಂತೆ. ಒಂದು ದಿನ ಹಸಿರು, ಇನ್ನೊಂದು ದಿನ ಅರ್ಧ ಬಿಳಿ, ಇನ್ನೊಂದು ದಿನ ಅರ್ಧ ಕಿತ್ತಳೆ! ನಾವು ಕನಸಿನ ಜಗತ್ತಿನೊಳಗೇ ಇದ್ದು ಬಿಟ್ಟಿದ್ದೇವೇನೋ ಎಂಬ ಭ್ರಮೆ ಮೂಡುತ್ತದೆ. ಇಲ್ಲಿನ ಪ್ರಕೃತಿಯ ಜೀವನ ರಸಮಯ, ಅದ್ಭುತ. ಆಕಾಶದೆತ್ತರಕ್ಕೆ ತಾಗುವ ಮರದಂತೆ ನಮ್ಮ ಹೃದಯ ಇಲ್ಲಿಯ ಹಸಿರು-ಬಿಳಿ-ಕಿತ್ತಳೆ ಶಾಖೆಗಳಲ್ಲಿ ಬೆಸೆದುಕೊಳ್ಳುತ್ತದೆ. ಇಲ್ಲಿನ ಋತುಬದಲಾವಣೆ ಕೇವಲ ಬಿಸಿ, ಚಳಿಗೆ ಮಾತ್ರ ಸೀಮಿತವಲ್ಲ. ಇದು ನಮ್ಮ ಬದುಕಿಗೆ ಹೊಸ ಬಣ್ಣಗಳನ್ನು ತುಂಬುವ ಪ್ರೀತಿ. ಇದು ನಮ್ಮ ಕನಸು, ಮರಳಿ ತಾಯಿ ಚಾಮುಂಡೇಶ್ವರಿಯ ಆಶ್ರಯಕ್ಕೇ ಬಂದಾಗ ಒಂದು ಸುಂದರ ನೆನಪು, ಚಾರ್ಲಟ್‌ಟೌನ್!
-ಡಾ. ಅಮೂಲ್ಯ ಭಾರದ್ವಾಜ್