ಹಾಸನದ ಮುನಿಸಿಪಲ್ ಹೈಸ್ಕೂಲ್, ಒಂಬತ್ತನೇ ತರಗತಿ ಮಕ್ಕಳು ಗಲಾಟೆ ಮಾಡ್ತಾ ಕೂತಿದ್ರು, ಸಮಾಜ ವಿಜ್ಞಾನದ ಶಿಕ್ಷಕ ಮರಿಯಪ್ಪ ತರಗತಿ ಪ್ರವೇಶ ಮಾಡಿದ ತಕ್ಷಣ ತರಗತಿಯಲ್ಲಿ ನಿಶ್ಯಬ್ದ. ಎಲ್ಲಾ ವಿದ್ಯಾರ್ಥಿಗಳನ್ನು ದಿಟ್ಟಿಸಿ ನೋಡಿ ಹೇಳಿದ್ರು “ಶಿಕ್ಷಣ ಇಲಾಖೆ ಹಾಗೂ ಯುನಿಸಿಫ್ ಒಟ್ಟಿಗೆ ಬೆಂಗಳೂರಲ್ಲಿ ಒಂದು ಸಮಾಲೋಚನೆ ಮಾಡ್ತಿದಾರೆ, ವಿಶ್ವಪ್ರಗತಿ ಮತ್ತು ವಿಶ್ವಶಾಂತಿಯ ಬಗ್ಗೆ ವಸ್ತುಪ್ರದರ್ಶನ, ರಾಜ್ಯದ ಯಾವುದೇ ಶಾಲೆಯಿಂದ ಮಕ್ಕಳು ಭಾಗವಹಿಸಬಹುದು, ವಿಶ್ವಪ್ರಗತಿ ಅಥವಾ ವಿಶ್ವಶಾಂತಿಯ ಬಗ್ಗೆ ಒಂದು ಮಾಡಲ್ ಸಿದ್ಧ ಮಾಡಿ ಪ್ರದರ್ಶನ ಮಾಡಬೇಕು. ಉತ್ತಮವಾದ ಮಾಡಲ್ಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಕೊಡ್ತಾರೆ. ನಿಮ್ಮಲ್ಲಿ ಯಾರು ಮಾಡ್ತೀರಾ?”
ಮೇರಿ, ಶಾಲಿನಿ, ಅಲಿ ಹಾಗೂ ಶರಣ್ ತಕ್ಷಣ ಕೈ ಎತ್ತಿದ್ರು. ಬೇರೆಯವರು ಸುಮ್ಮನಿದ್ರು.
“ಅಲಿ, ಶರಣ್, ಮೇರಿ ಮತ್ತು ಶಾಲಿನಿ ಮಾಡಲ್ ಮಾಡಬಹುದಾ? ಬೇರೆಯೋರಿಗೆ ಓಕೆನಾ? ಮರಿಯಪ್ಪ ಸರ್ ಕೇಳಿದ ಪ್ರಶ್ನೆಗೆ ಎಲ್ಲಾ ವಿದ್ಯಾರ್ಥಿಗಳು ಓಕೆ ಸಾರ್ ಅಂತ ಒಟ್ಟಾಗಿ ಕೂಗಿಹೇಳಿದ್ರು.
‘ಸರಿ ಹಾಗಾದ್ರೆ ಮೇರಿ ಅಂಡ್ ಗ್ರೂಪ್ ನೀವು ಮಾಡಲ್ ಸಿದ್ಧಮಾಡಿ. ನಮಗೆ ಇರುವ ಸಮಯ ಕೇವಲ ಒಂದು ವಾರ ಮಾತ್ರ. ನೀವು ಮಾಡಿದ್ದು ನಮ್ಮ ಶಿಕ್ಷಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒಪ್ಪಿಗೆ ಆದ್ರೆ ಮುಂದಿನ ತಿಂಗಳು ಒಂದನೇ ತಾರೀಕು ನೀವು ಬೆಂಗಳೂರಿಗೆ ಹೋಗಿ ರಾಷ್ಟ್ರಮಟ್ಟದ ವಸ್ತುಪ್ರದರ್ಶನದಲ್ಲಿ ಭಾಗವಹಿಸಬೇಕು. ಆಲ್ ದಿ ಬೆಸ್ಟ್’
ತರಗತಿ ಮುಗಿದ ಮೇಲೆ ನಾಕು ಜನ ಮೀಟಿಂಗ್ ಸೇರಿದ್ರು, ಯಾವ ಮಾಡಲ್ ಮಾಡೋದು ಅನ್ನೋದು ದೊಡ್ಡ ಚರ್ಚೆ ಆಗಿ ಎಲ್ಲರು ವಿಶ್ವಶಾಂತಿ ಬಗ್ಗೆ ಒಂದು ಮಾಡಲ್ ಮಾಡೋದು, ನಾಲಕ್ಕು ಬಿಳಿ ಪಾರಿವಾಳಗಳ ಮೇಲೆ ನೀಲಿ ಭೂಮಿ ಅನ್ನುವ ಕಲ್ಪನೆ ಎಲ್ಲರಿಗೂ ಇಷ್ಟ ಆಯಿತು.
ಮಾಡಲಿಗೆ ಬೇಕಾಗೋ ಸಾಮಗ್ರಿಗಳನ್ನ ಶಾಲಿನಿ, ಅಲಿ ತರಬೇಕು, ಶರಣ್ ಹಾಗೂ ಮೇರಿ ಮಾಡಲ್ ಮಾಡಬೇಕು ಎನ್ನುವ ಕೆಲಸದ ಹಂಚಿಕೆ ಸಹ ಆಯಿತು. ಮರಿಯಪ್ಪ ಸರ್ ಹೇಳಿದ ದಿನ ಬಂದೇಬಿಡ್ತು.
ಆ ದಿನ ಶನಿವಾರ, ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್ ಬಂದರು. ವಿದ್ಯಾರ್ಥಿಗಳನ್ನು ಸಭಾಂಗಣಕ್ಕೆ ಕರೆದು ಎಲ್ಲರ ಮುಂದೆ ಶಾಲಿನಿ, ಶರಣ್, ಅಲಿ, ಮೇರಿ ತಾವು ವಿಶ್ವಶಾಂತಿ ಬಗ್ಗೆ ಮಾಡಿದ್ದ ಮಾಡಲ್ ಪ್ರದರ್ಶನ ಮಾಡಿದರು. “ಈ ಮಾಡಲ್ ಬಹಳ ಸರಳವಾಗಿದೆ, ವಿಶೇಷವಿಲ್ಲ್ಲ, ಪಾರಿವಾಳಗಳು ಹೊತ್ತಿರುವ ಭೂಮಿ. ಇನ್ನೂ ಚೆನ್ನಾಗಿರೋದನ್ನ, ಅರ್ಥಗರ್ಭಿತವಾಗಿರೋದನ್ನ ನಿರೀಕ್ಷೆ ಮಾಡಿದ್ದೆ. ಓಕೆ ಏನು ಮಾಡೋದು ನಿಮ್ಮ ಹೆಸರನ್ನ ಆಗಲೇ ಬೆಂಗಳೂರಿಗೆ ಕಳಿಸಿದೆೆ. ಹೋಗಿ ಬನ್ನಿ” ಅಂತ ಹೇಳಿದಾಗ ಶಾಲಿನಿ ಮತ್ತು ಗೆಳಯರಿಗೆ ಅಳುವೇ ಬಂದಿತ್ತು.
ಮರಿಯಪ್ಪ ಸರ್ ಕೂಡ ಟೈಮ್ ವೆಸ್ಟ್ ಮಾಡಿದಿರಾ, ಹೋಗಿ ಬೆಂಗಳೂರು ನೋಡಿಕೊಂಡು ಬನ್ನಿ ಅಂತ ವ್ಯಂಗ್ಯ ಮಾಡಿದರು. ನಾಲ್ಕು ಜನ ಮಕ್ಕಳಿಗೂ ಬೇಸರವಾಯಿತು. ಮರುದಿನ ಸಂಜೆ ಮಾಡಲ್ನೊಂದಿಗೆ ಬೆಂಗಳೂರಿಗೆ ಹೋಗುವ ಬಸ್ ಹತ್ತಿದರು, ಯಾರಿಗೂ ಉತ್ಸಾಹ ಇರಲಿಲ್ಲ.
ಬಸ್ ಕಂಡಕ್ಟರ್ ಮಾಡಲ್ ಇದ್ದ ಬಾಕ್ಸ್ ಅನ್ನು ಬಸ್ ಕೆಳಭಾಗದಲ್ಲಿ ಇದ್ದ ಲಗೇಜ್ ಜಾಗದಲ್ಲಿ ಇಡಿ ಇಲ್ಲ ಬಸ್ ಹತ್ತಬೇಡಿ ಎಂದ. ಅನಿವಾರ್ಯವಾಗಿ ಕಂಡಕ್ಟರ್ ಹೇಳಿದ ಜಾಗದಲ್ಲಿ ಇಟ್ಟು ಬಸ್ ಹತ್ತಿದರು. ಬೇಸರದಲ್ಲಿ ಪರಸ್ಪರ ಮಾತಾಡಬೇಕು ಅಂತ ಗೆಳೆಯರಿಗೆ ಅನ್ನಿಸಲೇ ಇಲ್ಲ.
ರಾತ್ರಿ ೮ ಗಂಟೆಗೆ ಮಕ್ಕಳು ಆಟೋ ಮೂಲಕ ವಸ್ತುಪ್ರದರ್ಶನದ ಸ್ಥಳ ನ್ಯಾಷನಲ್ ಕಾಲೇಜ್ ಮೈದಾನ ತಲುಪಿದರು. ಅಲ್ಲಿ ವಸ್ತು ಪ್ರದರ್ಶನಕ್ಕೆ ಬಂದ ಮಕ್ಕಳಿಗೆ ಎಲ್ಲಾ ವ್ಯವಸ್ಥೆಯಿತ್ತು. ದೊಡ್ಡ ಬಾಕ್ಸ್ ಹೊತ್ತು ತಂದ ಮಕ್ಕಳನ್ನು ವ್ಯವಸ್ಥಾಪಕರು ಸ್ವಾಗತಿಸಿದರು. ಮೊದಲು ಊಟ ಮಾಡಿ ನಂತರ ನಿಮ್ಮ ಸ್ಟಾಲ್ ೧೧೨ಕ್ಕೆ ಹೋಗಿ ನಿಮ್ಮ ಮಾಡಲ್ ಇಡಿ, ನಾಳೆ ಎಂಟು ಗಂಟೆಗೆ ಶುರುವಾಗುತ್ತೆ ಎಂದು ತಿಳಿಸಿದರು.
ಸೊಗಸಾದ ಊಟದ ನಂತರ ಬಾಕ್ಸ್ ಹಿಡಿದು ವಿಶಾಲವಾದ ವಸ್ತುಪ್ರದರ್ಶನ ಸ್ಥಳಕ್ಕೆ ಹೋದರೆ ಅಲ್ಲಿ ಹಲವಾರು ರಾಜ್ಯ ಮತ್ತು ಜಿಲ್ಲೆಗಳಿಂದ ಬಂದ ಮಕ್ಕಳು ಅವರುಗಳು ಮಾಡಿದ್ದ ಮಾಡಲ್ ಇಡುತ್ತಿದ್ದರು. ಅಬ್ಬಾ ಒಂದಕ್ಕಿಂತ ಒಂದು ಅದ್ಬುತ. . ತಾವು ತಂದಿರೋ ಮಾಡಲ್ ಏನೂ ಪ್ರಯೋಜನವಿಲ್ಲ ಅನ್ನಿಸತೊಡಗಿತ್ತು ಹಾಸನದ ಮಕ್ಕಳಿಗೆ.
ತಮ್ಮ ಸ್ಟಾಲ್ಗೆ ಹೋಗಿ ಬಾಕ್ಸ್ ತೆಗೆದ ಮಕ್ಕಳಿಗೆ ದೊಡ್ಡ ಶಾಕ್. ಮಾಡಲ್ ಒಡೆದುಹೋಗಿತ್ತು, ಪಾರಿವಾಳಗಳು ಚೂರಾಗಿದ್ದವು, ಬಸ್ ಕುಲುಕಾಟಕ್ಕೆ ಮಕ್ಕಳು ಸಿದ್ಧಪಡಿಸಿದ್ದ ವಿಶ್ವಶಾಂತಿ ಮಾಡಲ್ ಒಡದೇಹೋಗಿತ್ತು. ಮಕ್ಕಳಿಗೆ ಏನು ಮಾಡಲೂ ತೋಚಲಿಲ್ಲ. ಮೇರಿ ಸ್ವಲ್ಪ ಸಮಾಧಾನ ಮಾಡಿಕೊಂಡು “ಯೋಚಿಸಬೇಡಿ, ಹೇಗೂ ನಮ್ಮ ಹತ್ರ ಟೇಪ್ ಇದೆ, ಚೂರಾಗಿ ಹೋಗಿರೋ ಭೂಮಿಯನ್ನ ಅಂಟಿಸೋಣ, ಇಲ್ಲದಿದ್ದರೆ ಶಾಲೆಗೆ ಅವಮಾನ”. ಎಲ್ಲರು ದುಃಖದಿಂದ ಭೂಮಿಯ ತುಂಡುಗಳನ್ನು ಸೇರಿಸಿ ದುಂಡಾಗಿ ಮಾಡಿ ತುಂಡುಗಳನ್ನು ಅಂಟಿಸಿದರು. ರಾತ್ರಿ ಯಾರಿಗೂ ನಿದ್ದೆ ಬರಲಿಲ್ಲ.
ಮರುದಿನ ಬೆಳಗ್ಗೆ ಯುನಿಸಿಫ್ ಪ್ರತಿನಿಧಿ ವಿಕಾಸವರ್ಮ ವಸ್ತುಪ್ರದರ್ಶನವನ್ನು ಉದ್ಘಾಟನೆ ಮಾಡಿದರು. ಅವರೊಂದಿಗೆ ಸರ್ಕಾರದ ಪ್ರತಿನಿಧಿಗಳು ಪ್ರತಿ ಸ್ಟಾಲ್ಗೆ ಭೇಟಿ ನೀಡಿ ಮಾಡಲ್ ವೀಕ್ಷಣೆ ಮಾಡತೊಡಗಿದರು. ಎಲ್ಲೆಡೆ ಚಪ್ಪಾಳೆ ಸದ್ದು. ಇಲ್ಲಿಂದ ಓಡಿ ಹೋಗೋಣ ಅಂತ ಹಾಸನದ ಮಕ್ಕಳು ಪ್ಲಾನ್ ಮಾಡುತಿದ್ದರು.
ವಿಕಾಸವರ್ಮ ಸ್ಟಾಲ್ ೧೧೨ ಪ್ರವೇಶ ಮಾಡಿಯೇಬಿಟ್ರು, ಮೇರಿ, ಶಾಲಿನಿ, ಅಲಿ, ಶರಣ್ ಸುಮ್ಮನೆ ನಿಂತರು. ಟೇಪ್ ಹಾಕಿ ಅಂಟಿಸಿದ್ದ ಭೂಮಿಯನ್ನು ವಿಕಾಸವರ್ಮ ಆಶ್ಚರ್ಯದಿಂದ ನೋಡಿದರು, ಭೂಮಿಯ ಹತ್ತಿರ ಬಂದು ಅಂಟಿಸಿದ್ದ ತುಂಡುಗಳನ್ನು ಎಣ ಸಿದರು. “ವಾವ್ ೧೭” ಎಂದು ಉದ್ಗರಿಸಿದರು. ಬೇರೆಯವರೆಲ್ಲಾ ಚಪ್ಪಾಳೆ. ಹಾಸನದ ಮಕ್ಕಳಿಗೆ ಆಶ್ಚರ್ಯವೋ ಆಶ್ಚರ್ಯ. “ಇದು ವಿಶ್ವ ಪ್ರಗತಿ. ಸೊ ಮೀನಿಂಗ್ ಫುಲ್” ಎಂದ ವಿಕಾಸವರ್ಮ ಮಕ್ಕಳ ಬೆನ್ನುತಟ್ಟಿ ಮುಂದಿನ ಸ್ಟಾಲ್ಗೆ ಹೋದರು.
ನಮ್ಮನ್ನ ಯಾಕೆ ಹೊಗಳಿದರು? ಅಲಿ ಕೇಳಿದ ಪ್ರಶ್ನೆಗೆ ಯಾರಲ್ಲೂ ಉತ್ತರ ಇರಲಿಲ್ಲ. ಮಕ್ಕಳು ಎಂದು ಸುಮ್ಮನೆ ಹೊಗಳಿದ್ದಾರೆ ಅಂದುಕೊಂಡ ಮಕ್ಕಳು ಸಂಜೆ ಬದಲು ಮಧ್ಯಾಹ್ನವೇ ಊರಿಗೆ ಹೊರಟುಹೋಗೋಣ ಎಂದು ನಿರ್ಧರಿಸಿದರು.
ಮಧ್ಯಾಹ್ನ ೨ ಗಂಟೆಗೆ ಊಟ ಮುಗಿಸಿ ಸ್ಟಾಲ್ಗೆ ಬಂದು ನೋಡಿದರೆ ಅವರು ಮಾಡಿದ್ದ ಮಾಡೆಲ್ ಇರಲಿಲ್ಲ. ಅಯ್ಯೋ ನಮ್ಮ ಮಾಡಲ್ ಅನ್ನು ಹೊರಗೆ ಎಸೆದಿದ್ದಾರೆ ಎಂದು ಭಾವಿಸಿದ ಮಕ್ಕಳು ತಮ್ಮ ಬ್ಯಾಗ್ಗಳನ್ನು ಎತ್ತಿಕೊಂಡು ಹೊರಟರು, ಅಷ್ಟರಲ್ಲಿ ಆಗಲೇ ವೇದಿಕೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಗಿತ್ತು. ಮಕ್ಕಳು ಇನ್ನೇನು ವಸ್ತುಪ್ರದರ್ಶನದಿಂದ ಹೊರಬರಬೇಕು ಅಷ್ಟರಲ್ಲಿ “ಹಾಸನದ ಮಕ್ಕಳಾದ ಮೇರಿ, ಅಲಿ, ಶಾಲಿನಿ, ಶರಣ್ ವೇದಿಕೆ ಬರಬೇಕು” ಎಂದು ಮೈಕ್ನಲ್ಲಿ ಕರೆದಿದ್ದು ಕೇಳಿಸಿ “ಯಾಕಪ್ಪಾ ಕರೆದರು” ಅಂದುಕೊಂಡು ಮಕ್ಕಳು ವೇದಿಕೆ ಬಳಿ ಬಂದರು. ವೇದಿಕೆಯ ಮುಂದೆ ಹಾಸನದ ಮಕ್ಕಳು ಮಾಡಿದ್ದ ಮಾಡಲ್ ಇತ್ತು. ಯುನಿಸೆಫ್ ಪ್ರತಿನಿಧಿ ಹೇಳುತ್ತಿದ್ದರು.
“ನೋಡಿ ಹಾಸನದ ಮಕ್ಕಳು ಸುಸ್ಥಿರ ಅಭಿವೃದ್ಧಿ ಗುರಿಗಳಿಂದ ಇಡೀ ಪ್ರಪಂಚವನ್ನು ಒಗ್ಗೂಡಿಸಬಹುದು ಎಂದು ತೋರಿಸಿದ್ದಾರೆ. ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ೧೭ ಗುರಿಗಳಿವೆ. ಈ ಮಕ್ಕಳು ಹದಿನೇಳು ತುಂಡುಗಳಲ್ಲಿ ಭೂಮಿಯನ್ನು ರಚಿಸಿ ಸಾಂಕೇತಿಕವಾಗಿ ವಿಶ್ವಪ್ರಗತಿಗೆ ಸುಸ್ಥಿರ ಅಭಿವೃದ್ಧಿ ಗುರಿಗಳು ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. ಈ ಮಾಡಲ್ಗೆ ಯುನಿಸೆಫ್ ಸಂಸ್ಥೆಯಿಂದ ವಿಶೇಷ ಬಹುಮಾನವನ್ನು ಕೊಡುತ್ತಿದ್ದೇವೆ” ಎಂದಾಗ ದೊಡ್ಡ ಚಪ್ಪಾಳೆ ಸದ್ದು.
ಹಾಸನದ ಮಕ್ಕಳು ತಮ್ಮ ಕಿವಿಗಳನ್ನು ನಂಬಲಾರದೆ ಆಶ್ಚರ್ಯದಿಂದ ತಮ್ಮ ಮಾಡಲ್ನ ನೋಡುತ್ತಾ ನಿಂತಿದ್ದರು.
(ಮಕ್ಕಳೇ ಮರೆಯಬೇಡಿ ವಿಶ್ವಸಂಸ್ಥೆ ಪ್ರತಿ ರಾಷ್ಟ್ರಗಳಿಗೂ ೨೦೧೬ರಲ್ಲಿ ೧೭ ಗುರಿಗಳನ್ನು ನೀಡಿ ೨೦೩೦ರೊಳಗೆ ಈ ಗುರಿಗಳನ್ನು ಸಾಧಿಸುವ ಸವಾಲನ್ನು ನೀಡಿದೆ. ನಮ್ಮ ದೇಶವೂ ಕೂಡ ಈ ಗುರಿಗಳಿಗೆ ಬದ್ಧವಾಗಿದೆ).
೧ ಬಡತನದಿಂದ ಮುಕ್ತಿ
೨ ಹಸಿವಿನಿಂದ ಮುಕ್ತಿ
೩ ಎಲ್ಲರಿಗೂ ಅರೋಗ್ಯ
೪ ಎಲ್ಲರಿಗೂ ಶಿಕ್ಷಣ
೫ ಲಿಂಗ ಸಮಾನತೆ
೬ ಸ್ವಚ್ಚ ನೀರು ಮತ್ತು ನೈರ್ಮಲ್ಯ
೭ ಶುದ್ಧ ಇಂಧನ ಶಕ್ತಿ
೮ ಗೌರವಯುತ ಕೆಲಸ
೯ ಉದ್ಯಮ ಆವಿಷ್ಕಾರ
೧೦ ಅಸಮಾನತೆ ಇಳಿಕೆ
೧೧ ಸುಸ್ಥಿರ ನಗರಗಳು
೧೨ ಜವಾಬ್ದಾರಿಯುತ ಬಳಕೆ
೧೩ ಹವಾಮಾನ ಕ್ರಮ
೧೪ ಜಲದಡಿಯ ಜೀವರಾಶಿ
೧೫ ಭೂಮಿಯ ಮೇಲಿನ ಜೀವಜಾಲ
೧೬ ಶಾಂತಿ, ನ್ಯಾಯ
೧೭ ಸಹಭಾಗಿತ್ವ
-ನಾಗಸಿಂಹ ಜಿ ರಾವ್
ಚೆನ್ನಾಗಿದೆ, ಧನ್ಯವಾದಗಳು