ಅರ್ಥಾ ಅಯಿತ್ರೀಯಪ್ಪಾ: ಬಿ.ಟಿ.ನಾಯಕ್

ಅದೊಂದು ದಿನ ಮಾನ್ಯ ಜಿಲ್ಲಾಧಿಕಾರಿಗಳು ಒಂದು ಹಳ್ಳಿಯನ್ನು ಸರಕಾರಿ ಕರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡು ಅಲ್ಲಿಗೆ ಬಂದಿದ್ದರು. ಹೀಗಾಗಿ, ಅವರು ಹೆಮ್ಮೆಯಿಂದ ಮತ್ತು ಬಹಳೇ ಅನಂದದಿಂದ ಕರ್ಯಕ್ರಮ ಮಾಡಲು ತಮ್ಮ ಸಹೋದ್ಯೋಗಿಗಳಿಗೂ ಕೂಡ ತಿಳಿಸಿದ್ದರು. ಒಟ್ಟಿನಲ್ಲಿ ಆ ಹಳ್ಳಿಯ ಜನರ ಮನಸ್ಸು ಗೆದ್ದು ಹೋಗಲು ತವಕ ಪಡುತ್ತಿದ್ದರು. ಅಲ್ಲಿ ಕಾರ್ಯಕ್ರಮ ನಿಗದಿ ಪಡಿಸಿದಂತೆ ಮತ್ತು ವೇದಿಕೆಗೆ ಆಗಮಿಸಲು, ಅಲ್ಲಿ ಕಾರ್ಯಕ್ರಮ ಆಯೋಜಿಸಿದ್ದವರು ಮನವಿ ಮಾಡಿದಾಗ, ಅವರು ವೇದಿಕೆಗೆ ಅಲ್ಲಿಗೆ ಬಂದು ಕುಳಿತರು. ಅವರ ಪಕ್ಕದಲ್ಲಿ ಹಳ್ಳಿಯ ಮುಖ್ಯಸ್ಥರಾದ ನಾಗನಗೌಡರುಉಪಸ್ಥಿತರಿದ್ದರು. ಆ ಕಾರ್ಯಕ್ರಮಕ್ಕೆ ಸುಮಾರು ನೂರರ ಸಂಖ್ಯೆಯಲ್ಲಿ ಜನರಿದ್ದರು. ಸ್ವಾಗತ ಭಾಷಣವಾದ ಮೇಲೆ, ನೇರವಾಗಿ ಜಿಲ್ಲಾಧಿಕಾರಿಯವರು ತಮ್ಮ ಭಾಷಣ ಹೀಗೆ ಪ್ರಾರಂಭಿಸಿದರು;

‘ಇಲ್ಲಿ ವೇದಿಕೆಯ ಮೇಲೆ ಇರುವ ಹಿರಿಯರಾದ ನಾಗನಗೌಡರೇ ಮತ್ತು ಇಲ್ಲಿ ನೆರೆದಿರುವ ಆತ್ಮೀಯರೇ, ನಾನು ಅವಿನಾಶ್ ಎಂಬುವವ, ನಿಮ್ಮೆಲ್ಲರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಿಮ್ಮ ಹಳ್ಳಿಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಏಕೆಂದರೆ, ಇಲ್ಲಿ ಸಾಕಷ್ಟು ಸುಧಾರಣೆ ಕೆಲಸಗಳನ್ನು ಕೈಕೊಳ್ಳಬೇಕಿದೆ. ಆ ಬಗ್ಗೆ ನಾನು ಮತ್ತು ನಮ್ಮ ಕಚೇರಿಯ ಸಿಬ್ಬಂದಿಯವರೆಲ್ಲರೂ ಸೇರಿ, ಒಂದು ಪ್ರಮಾಣೀಕೃತ ಕೆಲಸವನ್ನು ಮಾಡಬೇಕೆಂದಿದ್ದೇವೆ. ಆದರೆ, ಬರೀ ನಮ್ಮ ನಿರ್ಧಾರದಿಂದ ಏನೂ ಪ್ರಯೋಜನವಿಲ್ಲ. ನಮ್ಮ ಯೋಜನೆಗಳಿಗೆ ನಿಮ್ಮ ಒಳ ಮನಸ್ಸು ಸ್ಪಂದಿಸಿ ನಮಗೆ ಸಹಕಾರ ನೀಡಿದರೆ ಮಾತ್ರ, ನಾವು ಧನಾತ್ಮಕವಾಗಿ ಕರ್ಯೋನ್ಮುಖರಾಗಿ ಸಾಧನೆ ಮಾಡಬಹುದಾಗಿದೆ’ ಎಂದರು.

ಏಕೋ, ಸೇರಿದ ಜನರಿಂದ ಯಾವುದೇ ಸ್ಪಂದನೆ ಬರಲಿಲ್ಲ ಎಂದು ಅವರಿಗೆಅನಿಸಿತು. ಆಗ ಜಿಲ್ಲಾಧಿಕಾರಿಗಳು ಒಂದು ಬಾರಿ ಜನರೆಡೆಗೆ ಮತ್ತೊಮ್ಮೆ ನಾಗನಗೌಡರ ಕಡೆಗೆ ತಮ್ಮ ದೃಷ್ಟಿ ಹಾಯಿಸಿದರು. ಆಗ ನಾಗನ ಗೌಡರಿಗೆ ಸ್ಪಷ್ಟವಾಗಿ ಅರ್ಥವಾಯಿತು. ಆಗ ತಕ್ಶಣವೇ ಒಬ್ಬ ವ್ಯಕ್ತಿಗೆ ಸನ್ನೆ ಮಾಡಿ ಕರೆದರು. ಆತ ಅವರಲ್ಲಿಗೆ ಓಡಿ ಬಂದ, ಮತ್ತು ಗೌಡರ ಬಳಿಗೆ ಹೋಗಿ, ಅವರು ಏನು ಹೇಳುವರೆಂದು ಅವರ ಕಡೆಗೆ ತನ್ನ ಕಿವಿ ಕೊಟ್ಟ. ಆಗ ನಾಗನಗೌಡರು ಆತನಿಗೆ ಹೀಗೆ ಕಿವಿಯಲ್ಲಿ ಹೇಳಿದರು;
‘ಏನ್ಲಾ ಶಿವೂ, ಧಡ್ಡ ಮುಂಡೆ ಮಕ್ಳು ಗೊಂಬೆ ಕುಂತಂಗೆ ಸುಮ್ನೆ ಕುಂತಗಂಡವೇ ಈ ಪಿಕನಾಸಿಗಳು, ವಸಿ ಚಪ್ಪಾಳೆನೂ ತಟ್ಟಬರ್ದ. ನೀನು ಅವರ ಪಕ್ಕಕ್ಕೆ ನಿಂತು ಚಪ್ಪಾಳೆ ತಟ್ಟೋವಂತೆ ಮಾಡ್ಲಾ. ಇದು ನಮ್ಮ ರ್ವಾದಿ ಪ್ರಶ್ನೆ. ನೀನು ಹೋಗಿ ಅವುಗಳ ಹತ್ರಾನೇ ನಿಂತ್ಕೋ. ಎಂದು ಆತನನ್ನು ಅವರಲ್ಲಿಗೆಕಳಿಸಿದರು.

ಆತ ಗೌಡರ ಆಜ್ಞೆ ಪಾಲಿಸಿ, ಸಭಿಕರ ಸಾಲಿನಲ್ಲಿದ್ದ ಹಳ್ಳಿಗರ ಪಕ್ಕಕ್ಕೆ ನಿಂತ ಮತ್ತು ಅವರಿಗೆ ಸನ್ನೆ ಮಾಡುತ್ತಿದ್ದ. ಆಗ ಅವರು ಚಪ್ಪಾಳೆ ತಟ್ಟಲು ಮುಂದಾಗುತ್ತಿದ್ದರು. ಮೊದಲು ಒಂದಿಬ್ಬರು ಆರಂಭಿಸಿದಾಗ, ಉಳಿದವರೂ ಆ ಮೇಲೆ ತಟ್ಟೋದಕ್ಕೆ ಪ್ರಾರಂಭಿಸಿದರು. ಒಟ್ಟಿನಲ್ಲಿ ಗೌಡರ ಲೆಖ್ಖಚಾರ ಸರಿಯಾಗಿ ನಡೆಯಿತುಮತ್ತು ಅವರುಖುಷಿಯಾದರು. ಅಲ್ಲಿ ಶಿವುನ ಜಾಣತನ ಕೆಲಸಮಾಡಿತು. ಆತ ಅವರ ಕಿವಿಯಲ್ಲಿ ಹೇಳಿದ್ದು ಏನೆಂದರೆ, ತಾನು ಒಂದು ಬಾರಿ ಜೋರಾಗಿ ಕೆಮ್ಮಿದರೆ ಮಾತ್ರತಪ್ಪಾಳೆ ತಟ್ಟ ಬೇಕು ಎಂದು ಹೇಳಿದ್ದ. ಅದೇ ಪ್ರಕಾರ, ಅವರು ಶಿರಸಾವಹಿಸಿ ಪಾಲಿಸುತ್ತಿದ್ದರು. ಅದನ್ನು ನೋಡಿ ನಾಗನಗೌಡರು ತಮ್ಮ ಉದ್ದನೆಯ ಮೀಸೆಗಳ ಮೇಲೆ ಕೈ ಹಾಕಿದ್ದೇ ಹಾಕಿದ್ದು.

ಆಗ ಜಿಲ್ಲಾಧಿಕಾರಿಯವರ ಭಾಷಣ ಒಂದು ಒಳ್ಳೆಯ ಸ್ತರಕ್ಕೆ ಹೋದಾಗ, ಅವರು ಹೀಗೆ ಹೇಳಿದರು;
‘ನೋಡಿ ಜನಗಳೇ, ನೀವು ಎಲ್ಲರೂ ಆರೋಗ್ಯದಿಂದಿರಬೇಕಾದರೆ ನರ್ಮಲ್ಯ ಕಾಪಾಡುವದು ಮುಖ್ಯಮತ್ತುಎಲ್ಲರರ್ಮ. ಅಂದರೆ, ನಾವು ಎಷ್ಟು ಸ್ವಚ್ಛತೆಯನ್ನು ಪಾಲಿಸುತ್ತೇವೆಯೋ, ಅದು ನಮ್ಮನ್ನು ಆರೋಗ್ಯದಿಂದ ಇರಿಸುತ್ತದೆ. ಹಾಗಾಗಿ, ಸ್ವಚ್ಛತೆಯೇ ನಮ್ಮೆಲ್ಲರ ಆರೋಗ್ಯಕ್ಕೆ ಸಾಕಾರ. ‘ ಎಂದರು.

ಆಗ ಶಿವು ಜೋರಾಗಿ ಕೆಮ್ಮಿದ. ಆಗ ತಕ್ಷಣವೇಚಪ್ಪಾಳೆಗಳು ಬಂದವು. ನಾಗನಗೌಡ್ರು ಖುಷಿಯಿಂದ ಜಿಲ್ಲಾಧಿಕಾರಿಗಳ ಕಡೆಗೊಮ್ಮೆ ಮತ್ತು ಜನರ ಕಡೆಗೊಮ್ಮೆ ನೋಡಿ ಹಿಗ್ಗುತ್ತಿದ್ದರು. ಆಗ ತಮ್ಮ ಮೀಸೆ ಮೇಲೆ ಕೈ ಹಾಕೋದು ಮರೆಯಲಿಲ್ಲ. ಆಗಜಿಲ್ಲಾಧಿಕಾರಿಗಳಭಾಷಣ ಹೀಗೆ ಮುಂದುವರೆಯಿತು;
‘ನೀವುಗಳೆಲ್ಲ ನಿಮ್ಮ ಮನೆಯ ಸುತ್ತ ಮುತ್ತಲಿನ ವಾತಾವರಣವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ನಿಮ್ಮಮುಂದಿನಪೀಳಿಗೆಗಳಾದ ಮಕ್ಕಳಿಗೆ ಕೂಡ ಇದರ ಬಗ್ಗೆ ತಿಳಿಸಿ ಹೇಳಬೇಕು. ನಿಮ್ಮೆಲ್ಲರ ಮನೆ ಅಂಗಳಗಳು ಸ್ವಚ್ಛವಿದ್ರೇ ಮಾತ್ರ , ನಿಮ್ಮ ಹಳ್ಳಿ ತನ್ನಷ್ಟಕ್ಕೆ ತಾನೇ ಸ್ವಚ್ಛವಾಗಿಮತ್ತು ಅಂದವಾಗಿಇರುತ್ತದೆ ಅಲ್ವ ?’ ಎಂದು ಕೇಳಿದರು.

ಈ ಪ್ರಶ್ನೆಗೆ ವೇದಿಕೆ ಮೇಲೆ ಇದ್ದಗೌಡರೇ ‘ ಹೌದು. . . ಹೌದು. . . ‘ ಎಂದರು. ಆದರೆ ಹಳ್ಳಿ ಸಭಿಕರಿಂದೇನೂ ಪ್ರತಿಕ್ರಿಯೆ ಬರಲಿಲ್ಲ ‘.
ಅಷ್ಟರಲ್ಲಿ, ಶಿವುನನ್ನು ಅಲ್ಲೇ ಪಕ್ಕದಲ್ಲಿ ಇದ್ದ ಸಮಾರಂಭದ ವ್ಯವಸ್ಥಾಪಕರೊಬ್ಬರು ಕರೆದರು. ಶಿವೂ ಅವರ ಹತ್ತಿರ ಹೋದ. ಆಗ ಅವರು ಹೀಗೆ ಹೇಳಿದರು;
‘ಏಯ್ ಶಿವ, ಆ ಹಿಂದಿನ ಟೆಂಟಿನ ಕಂಬ ಅಲಗಾಡ್ತದೆ. ಅದು ‘ ದೊಪ್ಪ್ ‘ ಅಂತ ಯಾರ್ ಮ್ಯಾಲಾದ್ರೂಬೀಳ್ಬೌದು ಕಣ್ಲಾ, ಒಸಿ ಅದನ್ನು ಹಿಡುಕೋ ಹೋಗು’ ಎಂದ್ರು . ಆತನನ್ನು ನಿಯಮಿತ ಸ್ಥಳದಿಂದ ರ್ಗಾಯಿಸಿದರು. ಪಾಪ ! ಶಿವೂ ಏನಾದರೂ ಅನಾಹುತ ಆಗಬಾರದೆಂದು, ಅವರು ಹೇಳಿದ ಸ್ಥಳಕ್ಕೆ ಹೋಗಿಯೇ ಬಿಟ್ಟ. ಅಲ್ಲಿಗೆ ಹೋದವನು ಅನಿವರ್ಯವಾಗಿ ಅಲುಗಾಡುತ್ತಿದ್ದ ಟೆಂಟಿನ ಕಂಬವನ್ನು ಹಿಡಿದುಕೊಂಡು ನಿಂತ. ಆದರೆ, ನಾಗನಗೌಡ್ರು ಹೇಳಿದ್ದ ಕೆಲಸಕ್ಕೆ ದಾಳಿಯಾದಾಗ, ಆಕೆಲಸರ್ಧಕ್ಕೆ ನಿಂತೋಯ್ತು!

ಏಕೆಂದರೆ, ಭಾಷಣದ ವೇಳೆಯಲ್ಲಿ ಯಾರೂ ಚಪ್ಪಾಳೆನೇ ಹೊಡಿಲಿಲ್ಲ. ಇದನ್ನು ಅರಿತ ನಾಗನಗೌಡರಿಗೆ ಕಸಿವಿಸಿಯಾಯಿತು. ಆಮೇಲೆ ನಾಗನಗೌಡರಿಗೆ ಶಿವು ದೂರದಲ್ಲಿ ನಿಂತದ್ದು ಕಾಣಿಸಿತು. ಆ ಶಿವೂ ಕಂಬವನ್ನು ಹಿಡಿದು ಅಲ್ಲಿ ಕಾಪಾಡುವದರ ಜೊತೆ ಜೊತೆಗೆ, ನಾಗನಗೌಡರ ಕಡೆಗೂ ನೋಡುತ್ತಿದ್ದ. ಆಗ ನಾಗನಗೌಡರು ಸನ್ನೆ ಮಾಡಿ ಮುಂದೆ ಬರಲು ಹೇಳಿದರು. ಈಗ ಶಿವು ಗೆ ಪೀಕಲಾಟ ಆರಂಭವಾಯಿತು. ಆತ ಅಲ್ಲಿಂದ ಹೊರಟರೆ, ಟೆಂಟಿನ ಕಂಬ ಬಿದ್ದು ಹೋಗುವುದು, ಅನಾಹುತವಾಗುವುದುಗ್ಯಾರಂಟೀ. ಹೋಗಲಿಲ್ಲಾಂದ್ರೆ ಗೌಡರ ಆಜ್ಞೆ ಮುರಿದಂತೆಯೇ. ಏನು ಮಾಡೋದು ಎಂದು ಚಿಂತಿಸತೊಡಗಿದ. ಇದನ್ನು ಅರಿತ ನಾಗನಗೌಡರು, ಶಿವುಗೇ ಅಲ್ಲಿಂದಲೇ ಕೆಮ್ಮುವಂತೆ ಸನ್ನೆಮಾಡಿ ಸೂಚಿಸಿದರು. ಆಗ ಶಿವೂ ಚಪ್ಪಾಳೆ ತಟ್ಟಲಾರದೆ ಭಾಳ ಹೊತ್ತಾಗಿದೆ ಎಂದು ಜೋರಾಗಿ ಕೆಮ್ಮಿದ. ಆದರೆ ಕೆಲವು ಜನರಿಗೆ ಅದು ಕೇಳಿಸಿತು ಇನ್ನೂ ಕೆಲವರಿಗೆ ಕೇಳಿಸಲಿಲ್ಲ. ಹಾಗಾಗಿ ಸ್ವಲ್ಪವೇ ಚಪ್ಪಾಳೆ ಬರಬಾರದ ಸಮಯದಲ್ಲಿ ಬಂದವು. ನಾಗನ ಗೌಡ್ರಗೆ ಸಿಟ್ಟು ತಲೆಗೆ ಏರಿತು. ಅವರು ಮತ್ತೆ ಮತ್ತೇ ಸನ್ನೆ ಮಾಡಿದ್ರು. ಅವರ ಸನ್ನೆ ಹೇಗಿತ್ತೆಂದರೆ ತಾವು ಬಲಗೈ ಎತ್ತಿದಾಗ ಶಿವೂ ಕೆಮ್ಮಬೇಕು ಮತ್ತು ಹಳ್ಳಿ ಜನರು ಚಪ್ಪಾಳೆ ತಟ್ಟಬೇಕು ಎನ್ನುವಂತಿತ್ತು. ! ಅದನ್ನು ರ್ಥ ಮಾಡಿಕೊಂಡ ಶಿವೂ ಹಾಗೆಯೇ ಮಾಡಿದ. ಆದರೆ, ಆತನು ದೂರ ಇರುವುದರಿಂದ, ಆತನು ಕೆಮ್ಮಿದ್ದು ಬಹಳೇ ಜನರಿಗೆ ಕೇಳಿಸಲಾಗದ ಹಾಗೆ ಆಯಿತು.

ಇನ್ನೇನು ಜಿಲ್ಲಾಧಿಕಾರಿಯವರು ತಮ್ಮ ಭಾಷಣದ ಕೊನೆಯಲ್ಲಿ, ಅಲ್ಲಿ ನೆರೆದಿದ್ದವರಿಗೆ ಹೀಗೆ ಕೇಳಿದರು;
‘ನನ್ನ ಪ್ರೀತಿಯ ಜನರೇ, ನಿಮ್ಮೆಲ್ಲರಿಗೂ ನಾನು ತಿಳಿಸಿ ಹೇಳಿದ್ದು ರ್ಥವಾಯಿತಾ ?’ ಎಂದು ಪ್ರಶ್ನಿಸಿದಾಗ, ದುರಾದೃಷ್ಟಕ್ಕೆ ಆ ಸಮಯದಲ್ಲಿ ಶಿವೂಗೇ ಸಹಜವಾಗಿ ಕೆಮ್ಮು ಬರಬೇಕೇ ? ಆತಜೋರಾಗಿ ಕೆಮ್ಮುತ್ತಲೇ ಇದ್ದ, ಜನ ಚಪ್ಪಾಳೆ ತಟ್ಟುತ್ತಲೇ ಇದ್ದರು. ಜನರು ಚಪ್ಪಾಳೆ ಹೊಡೆಯುವದನ್ನು ನಿಲ್ಲಿಸಲಿಲ್ಲ. ಏಕೆಂದರೇ ಶಿವುನ ಕೆಮ್ಮು ನಿಲ್ಲಲಿಲ್ಲ. ನಾಗನಗೌಡ್ರು ಜನರ ಕಡೆಗೆ ಸನ್ನೆ ಮಾಡಿ ನಿಲ್ಲಿಸುವಂತೆ ಹೇಳಿದರು. ಜನರಿಗೆ ಅರ್ಥವಾಗಲಿಲ್ಲ. ಹಾಗೆಯೇ ಚಪ್ಪಾಳೆ ಹೊಡೆಯುವದನ್ನು ಮುಂದುವರೆಸಿದರು.
ನಾಗನಗೌಡರಿಗೆ ತಲೆ ಕೆಟ್ಟು, ಯಾವನೋ ಒಬ್ಬನನ್ನು ಕರೆದು, ಶಿವುನನ್ನ ಅಲ್ಲಿಂದ ದೂರ ಎಳೆದುಕೊಂಡು ಹೋಗ್ರಲೇ ಎಂದು ಸಿಟ್ಟು ಮಾಡಿಕೊಂಡರು. ಆವ್ಯಕ್ತಿಅಲ್ಲಿಗೆಹೋಗಿ, ತಾನು ಕಂಬ ಹಿಡ್ಕೊಂಡು, ಶಿವುನನ್ನು ಅಲ್ಲಿಂದ ದೂರ ಕಳಿಸಿದ. ಆಗ ಚಪ್ಪಾಳೆಗಳು ನಿಂತವು !

ಅಷ್ಟರಲ್ಲಿ ಜಿಲ್ಲಾಧಿಕಾರಿ ಭಾಷಣ ಮುಗಿಸಿ ವೇದಿಕೆಯಲ್ಲಿ ತಮ್ಮ ಸ್ಥಾನದಲ್ಲಿ ಕುಳಿತುಕೊಂಡರು. ಅವರಿಗೆ ಒಂದು ಅನುಮಾನ ಕಾಡಿತು. ಅವರ ಮನಸ್ಸಿನಲ್ಲಿದ್ದ ಸಂದೇಶ ಭಾಷಣ ಜನರಿಗೆ ತಲುಪಿದೆಯಾ ಇಲ್ವಾ ಎಂಬುದು ತಿಳಿಯಲಿಲ್ಲ. ಹಾಗಾಗಿ ಅವರು ಕೊಂಚ ಚಿಂತಿತರಾದರು. ಅಲ್ಲಿಯೇ ವೇದಿಕೆ ಪಕ್ಕದಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಕರೆದು ಈ ವಿಷಯ ತಿಳಿಸಿ, ಅವರಿಗೂ ಎರಡು ಮಾತು ಹೇಳಲು ಸೂಚಿಸಿದರು. ಜಿಲ್ಲಾಧಿಕಾರಿ ಭಾಷಣ ಮುಗಿಯುತ್ತಲೇ ಎದ್ದು ಹೋಗಬೇಕೆಂದಿದ್ದ ಜನ ಪೊಲೀಸಪ್ಪ ವೇದಿಕೆ ಮೇಲೆ ಬಂದದ್ದು ನೋಡಿ ಉಸಿರು ಬಿಗಿ ಹಿಡಿದುಕೊಂಡು ಮೇಲೆದ್ದವರು, ಮೆಲ್ಲಗೆ ಕುಳಿತುಕೊಂಡರು. ಆಗ ಪೊಲೀಸ್ ಅಧಿಕಾರಿ ಮಾತಾಡಲು ಆರಂಭಿಸಿದರು.

‘ಮಾನ್ಯ ಜಿಲ್ಲಾಧಿಕಾರಿ ಸಾಹೇಬರೇ ಮತ್ತು ಈ ಹಳ್ಳಿಯ ಪ್ರಮುಖರೇ, ನಾನು ಈ ವೇದಿಕೆಯಲ್ಲಿ ಮಾತಾಡಬೇಕೆಂದು ನಮ್ ಸಾಹೇಬ್ರು ಹೇಳಿದ್ರು. ಅದಕ್ಕ ಇಲ್ಲಿ ನಾನುಮಾತಾಡ್ಲಕ್ಕ ನಿಂತೀನಿ. ’
ಸಭಿಕರ ಕಡೆಗೆ ಗಂಭೀರತೆಯಿಂದ ನೋಡಿ ;
‘ಏಯ್. . ಅದೆಷ್ಟು ಗದ್ಲ ಮಾಡ್ತೀರಿ. . ಇದು ಕಾರ್ಯಕ್ರಮ ಅಂತ ತಿಳಿದಿಲ್ಲೇನು ? ನಿಮ್ಮ ಊರಿಗೆ ಬಂದು ನಿಮ್ಮ ಕಾಳಜಿ ಮಾಡಲಿಕ್ಕೆ ನಾವ್ ಬಂದ್ರ, ನಾವು ಹೇಳಿದ್ದು ನಿಮ್ಮ ಕಿವಿ ಒಳಗ ಹೋಗವಲ್ತು ಏನು ? ಎಂದು ಗದರಿಸಿದರು.
ಆಗ ಗದ್ದಲದ ಶಬ್ದಗಳು ಅಡಗಿ, ನಿಶ್ಯಬ್ದವು ಆವರಿಸಿತು ! ಆಗ ಆ ಪೊಲೀಸಪ್ಪ ಒಬ್ಬನಿಗೆ ಸನ್ನೆ ಮಾಡಿ, ಆತನನ್ನು ಎದ್ದು ನಿಲ್ಲುವಂತೆ ಹೇಳಿದ್ರು. ಆಗ ಆತ ಎದ್ದು ನಿಂತ ಮೇಲೆ, ಪೊಲೀಸ್ ಅಧಿಕಾರಿ ಆತನನ್ನು ಹೀಗೆ ಪ್ರಶ್ನಿಸಿದರು;
‘ಏಯ್. . ಹೇಳೋ, ನಮ್ಮ ಸಾಹೇಬ್ರು ಇಷ್ಟೋತ್ತು ಏನು ಹೇಳಿದ್ರು. . ಮತ್ತ ನಿಮಗೆಷ್ಟು ಅರ್ಥವಾಯ್ತು ?’ ಆಗ ಆ ಆಸಾಮಿ ಸ್ವಲ್ಪ ನಡುಗುತ್ತಲೇ ಹೀಗೆ ಹೇಳಿದ;
‘ಯಪ್ಪಾ… ಸಾರು. . ದೇವ್ರಾಣೆಗೂ ಅರ್ಥ ಹೇಳಿದ್ದು ನಮ್ಮಗ ಅರ್ಥ ಆಗಿಲ್ಲಾ’ ಎಂದ. ‘ಅಲ್ರೋ ಮತ್ತೇ…. . ಇಷ್ಟೋತ್ತು ಪುರಾಣ ನಡೆದಿತ್ತೇನು. . ? ನೀವೆಲ್ಲಾ ಬಿಡಲಾರದಂಗ ಚಪ್ಪಾಳೆ ಹೊಡಿದ್ರಿ . . ?’
‘ಯಪ್ಪಾ ಸಾರು, ಹಂಗೆ ಅರ್ಥಾಗಿಲ್ಲಾಂದ್ರೂ ಗೌಡ್ರು ಹೇಳಿದ್ರೂ ಅಂತ ಚಪ್ಪಾಳಿ ಹೊಡದೇವು. ಆ ಸಾಹೇಬ್ರು ಮೆತ್ತಗಾ ಮಾತಾಡಿದ್ರು ನಿಮ್ಮಂಗ ಖಡಕ್ ಮಾತಾಡಿದ್ರ ಕಿವ್ಯಾಗೇನೂ ಒಮ್ಮೆಲೇ ತಲೆಯಾಗೇ ಸೇರ್ಕೊಂಡಿರೋದು. ಆದರೇ, ಅದು ಹಾಗಾಗ್ಲಿಲ್ಲ ಸಾರೂ’ ಎಂದ ಆತ.

‘ಕೂತ್ಕೋ, ಅವರು ಹೇಳಿದ್ದು ಏನೂಂತ ನಾನು ಮತ್ತೇ ಹೇಳ್ತೀನಿ. ಎಲ್ರೂ ಸರಿಯಾಗಿ ಕೇಳ್ಕಳಿ. ಒಂದು ವೇಳೆ ನಿಮ್ ಲಕ್ಷ್ಯ ಬೇರೆ ಕಡೆ ಬಿಟ್ರ, ನಾನು ಬಾರಿಸೇ ಬಿಡ್ತೀನಿ ತಿಳಿತಾ. ?’ ಅಂತಾ ಏರಿದ ಧ್ವನಿಯಲ್ಲಿ ಹೇಳಿದರು ಪೊಲೀಸಪ್ಪ.
‘ಆಯಿತು ಯಪ್ಪಾ. . ನೀವು ಹೇಳಿದ್ದು ಕೇಳ್ಕೊಂತಿವೀ ಹೇಳು ಸಾರು. ‘ ಎಂದೊಬ್ಬ ಹಿರಿಯ.
‘ನೀವೆಲ್ರೂ ನಾಳೆಯಿಂದ ಮುಂಜಾನೆ ಎದ್ದು, ಕಡ್ಡಿ ಬರ್ಗಿ ಹಿಡಿದು ನಿಮ್ಮ ನಿಮ್ಮ ಮನಿ ಸುತ್ತ ಇರುವ ಕಸ-ಕಡ್ಡಿ ಬಳ್ದು, ತೆಗೆದೊಯ್ದು ದೂರ ಹಾಕಬೇಕು. ಮನಿ ಅಂಗಳಕ್ಕ ನೀರು ಹೊಡಿಬೇಕು. ನಿಮ್ಮ ಹೆಂಗಸ್ರಿಗೆ ಹೇಳಿ ಅಂಗಳದಾಗ ರಂಗೋಲಿ ಹಾಕ್ಸ್ರಿ. ನಾನು ದಿವ್ಸ ಸಂಜೀ ಕಡೇಗೆ ಬಂದ್ ನೋಡ್ತೀನಿ. ಯಾರ ಮನಿ ಮುಂದಮತ್ತು ಸುತ್ಲಾ ಏನಾದ್ರು ಕಸ, ಕಡ್ಡಿ ಕಾಣಿಸಿದ್ರ ಒಬ್ಬೊಬ್ರನ್ನು ಹಿಡ್ದು ಎಳ್ಕೊಂಡು ಒಯ್ದು ಬೆಂಡೆತ್ತೀನಿ ತಿಳಿತಾ ? ಎಂದು ಕಣ್ಣರಳಿಸಿದರು. ,

ಆ ಕ್ಷಣವೇ ಒಟ್ಟಾದ ಧ್ವನಿಯಲ್ಲಿ ನೆರೆದಿದ್ದವರೆಲ್ಲರೂ ಸಾಮೂಹಿಕವಾಗಿ ‘ ಹ್ಞೂ ‘ ಎಂದರು. ಆಗ ಪೊಲೀಸಪ್ಪ ಮುಂದುವರೆಸಿ;
‘ಆಮೇಲೆ ಕಕ್ಕಸು ಮಾಡ್ಲಿಕ್ಕೆ ಹೊರಗ ಚೊಂಬು ಹಿಡ್ಕೊಂಡು ಯಾರೂ ಹೋಗುವಂತಿಲ್ಲ. ನಿಮಗೆಲ್ಲರಿಗೆ ಸರಕಾರ ಕಕ್ಕಸು ರೂಮ್ಗಳನ್ನು ಕಟ್ಟಿಸಿ ಕೊಟ್ಟದ ಹೌದಲ್ಲ?
‘ಹೌದು ಯಪ್ಪಾ. . ಎಲ್ರಿಗೂ ಅದ್ಯಾವ’.
‘ಅವೇನು ಚೆಂದಕ್ಕ ಅಂತ ಇದ್ದಾವೇನು ?’ ಸರಕಾರಕ್ಕ ಏನು ದುಡ್ಡು ಹೆಚ್ಚಿಗೆ ಆಗಿರ್ಚು ಮಾಡೇದೇನು? ಎಲ್ರೂ ಕಿವಿ ತೆರೆದು ಕೇಳ್ಕೊಳ್ರಿ, ನಾಳೆಯಿಂದ ಯಾರೂ ಕಕ್ಕಸು ಮಾಡುವದಕ್ಕೆ ಚೊಂಬು ಹಿಡಿದು ಹೊರಗೆ ಹೋಗುವಂತಿಲ್ಲ. ನಾಳೆಯಿಂದ ಮುಂಜಾನೆ ನಮ್ಮ ಪೊಲೀಸರು ನೋಡ್ಲಿಕ್ಕೆ ರ್ತಾರ. ಯಾವನಾದ್ರೂ ಚೊಂಬು ಹಿಡಿದು ಹೋದ್ರ, ಅಲ್ಲೇ
ನಿಂತಲ್ಲೇ ಕಕ್ಕಸು ಮಾಡಿಸ್ಬಿಡ್ತಾರ ಹುಶ್ಯಾರ್ ! ಯಾವ ನನ್ಮಗ ರ್ಕಾರದ ಆದೇಶ ಮುರಿದ್ರ ಕತ್ಲ ಕೋಣ್ಯಾಗ ಹಾಕಿ ರುಬ್ಬಿಬಿಡ್ತೀನಿ ಗೊತ್ತಾಯ್ತಾ ?
ಮತ್ತೇ ಸಾಮೂಹಿಕವಾಗಿ ‘ ಹ್ಞೂ ‘ಎಂದರು.

ಅಲ್ಲಿ ಕುಳಿತ ಒಬ್ಬನನ್ನು ಎಬ್ಬಿಸಿ ಪೊಲೀಸ್ ಅಧಿಕಾರಿ ಕೇಳಿದ್ರು.
‘ಏನ್, ರ್ಥ ಆಯತಾ. . ಇನ್ನೊಮ್ಮೆ ಹೇಳ್ಬೇಕಾ ?’ಎಂದಾಗ;
‘ಬ್ಯಾಡ ಸಾರೂ, ನೀನು ರ್ಥ ಆಗಂಗೇ ಹೇಳಿದ್ರೀ. ಇನ್ನೊಮ್ಮೆ ಹೇಳೋದು ಬ್ಯಾಡ ‘ಎಂದು ಕೈ ಕಾಲು ನಡುಗಿಸುತ್ತಾ ಕೈ ಜೋಡಿಸಿ ಹೇಳಿದ.
‘ಹಾಂ. . . . ಕೂತ್ಕೋ ‘ ಎಂದು ಆತನನ್ನು ಕೂಡ್ರಿಸಿದರು. ಮತ್ತೂಮ್ಮೆ ಪೊಲೀಸ್ ಅಧಿಕಾರಿ ಹೀಗೆಹೇಳಿದ್ರು ;
‘ಈ ಹಳ್ಳೀನ ಸ್ವಚ್ಚ ಮತ್ತು ಸುಂದರವಾಗಿಡಬೇಕು. ಹಾಗೆ ಮಾಡೋದ್ರಿಂದ ನಿಮಗೆ ಬರೋ ರೋಗ ರುಜಿನಗಳು ಮಾಯ ಆಗಿಬಿಡ್ತವ. ಏನಾದ್ರೂ ಎಡವಟ್ಟು ಮಾಡಿದ್ರೆ ಒಬ್ಬೊಬ್ಬರನ್ನು ಎಳೆದುಕೊಂಡು ಹೋಗ್ತೇನೆ ಹುಶ್ಯಾರ್ !’ ಎಂದು ತಮ್ಮ ಭಾಷಣ ಮುಗಿಸಿದರು.

ಪೊಲೀಸ್ ಅಧಿಕಾರಿ ಭಾಷಣ ಮುಗಿಸಿ ಜಿಲ್ಲಾಧಿಕಾರಿಗೆ ಸಲ್ಯೂಟ್ ಹೊಡೆದರು. ಆಗ ಜಿಲ್ಲಾಧಿಕಾರಿ;
‘ಏನ್ರೀ, ನಾನು ಹೇಳಿದ್ದು ಅವರಿಗೆ ರ್ಥವಾಗಲಿಲ್ಲ, ನೀವು ಹೇಳಿದ್ದು ಅದ್ಹೇಗೆ ಅವರಿಗೆ ರ್ಥವಾಯಿತು ?’
‘ಸರ್, ಹಳ್ಳಿಲೀ ಅವರ ಭಾಷೆಯಲ್ಲೇ ಹೇಳಿದ್ರೇ ರ್ಥವಾಗುತ್ತೆ, ನಾವು ಪೊಲೀಸರು ಅದನ್ನು ಕಂಡುಕೊಂಡಿದ್ದೇವೆ’ ಎಂದರು ಪೊಲೀಸಪ್ಪ.
ಜಿಲ್ಲಾಧಿಕಾರಿ ತಮ್ಮ ಪ್ರೋಟೋಕಾಲ್ ಮುರಿದು ಆ ಪೊಲೀಸ್ ಅಧಿಕಾರಿಯನ್ನು ಸಂತೋಷದಿಂದ ಆಲಂಗಿಸಿಕೊಂಡರು.

ಕೆಲವು ದಿನಗಳಾದ ಮೇಲೆ ಜಿಲ್ಲಾಧಿಕಾರಿ ಮತ್ತು ಅದೇ ಪೊಲೀಸ್ ಅಧಿಕಾರಿ ಹಳ್ಳಿಯ ವೀಕ್ಷಣೆಗೆ ಬಂದಿದ್ದರು. ಹಳ್ಳಿಯನ್ನು ತುಂಬಾ ಚೊಕ್ಕವಾಗಿಟ್ಟಿದ್ದನ್ನು ನೋಡಿ ಹೆಮ್ಮೆ ಪಟ್ಟರು. ಆಮೇಲೆ, ಆ ಹಳ್ಳಿಗೆ ‘ಸ್ವಚ್ಛ ಗ್ರಾಮ ‘ ಎಂದು ಪಾರಿತೋಷಕ ಬಂತು. ಅದುವೇ ‘ಪೊಲೀಸ್ ಪವರ್’ !

-ಬಿ.ಟಿ.ನಾಯಕ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x