ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 8)”: ಎಂ.ಜವರಾಜ್

-೮-
ಒಂಟೆತ್ತಿನ ಗಾಡಿಲಿ ಗೋದಿ ಉಪ್ಪಿಟ್ಟು ಬಂದಾಗ ಹತ್ತತ್ತಿರ ಒಂದು ಗಂಟೆಯಾಗಿತ್ತು. ಗೋದಿ ಉಪ್ಪಿಟ್ಟನ್ನು ದೊಡ್ಡ ದೊಡ್ಡ ಕ್ಯಾನ್ಗಳಿಂದ ಸ್ಕೂಲಲ್ಲಿದ್ದ ಎರಡು ದೊಡ್ಡ ಬಾಂಡಲಿಗೆ ಸುರಿವಾಗ ಗೋದಿ ಉಪ್ಪಿಟ್ಟು ಗಮಗಮ ಅಂತಿತ್ತು. ಬಿಸಿ ಗೋದಿ ಉಪ್ಪಿಟ್ಟು ತುಂಬಿದ್ದ ಬಾಂಡಲಿಯಿಂದ ಹೊಗೆ ಏಳುತ್ತಿತ್ತು. ಆ ಗಮಲು ಹೀರುತ್ತಿದ್ದರೆ ಮಜವಾಗುತ್ತಿತ್ತು.. ನಟರಾಜ ಮೇಷ್ಟ್ರು ಏಳನೇ ಕ್ಲಾಸಿನ ಗೌಡರ ಹುಡುಗರಿಂದ ಆ ಗೋದಿ ಉಪ್ಪಿಟ್ಟನ್ನು ಇಳಿಸಿಕೊಳುವುದು ಮತ್ತು ಮದ್ಯಾಹ್ನ ಬೆಲ್ಲು ಹೊಡೆದಾಗ ಕ್ಯೂ ನಿಲ್ಲಿಸಿ ಎಲ್ಲರಿಗೂ ಕೊಡುವ ಜವಾಬ್ದಾರಿ ವಹಿಸಿದ್ದರು. ಪೋಸ್ಟ್ ಮ್ಯಾನ್ ಗಂಗಣ್ಣನೂ ತನ್ನೆಲ್ಲ ಕೆಲಸ ಮುಗಿಸಿ ನಮಗೆ ಉಪ್ಪಿಟ್ಟು ಕೊಡುವ ಆಸುಪಾಸು ಟೈಮಿಗೆ ಸರಿಯಾಗಿ ಒಂದು ದೊಡ್ಡ ಪ್ಲಾಸ್ಟಿಕ್ ಕವರ್ ರೆಡಿ ಮಾಡಿಕೊಂಡು ಬಂದು ಜಗುಲಿಯ ಮಗ್ಗುಲಲ್ಲಿ ಕುಂತು ತನಗೆ ತಾನೇ ಮಾತಾಡಿಕೊಂಡು ಅದು ಇದು ಬರೆಯುತ್ತ ಲೆಕ್ಕ ಮಾಡುತ್ತ ಇದ್ದುದು ಅವನ ರೂಢಿಯಾಗಿತ್ತು. ನಾವು ಕ್ಯೂ ನಿಂತಿದ್ದರು ಆ ಮೇಷ್ಟ್ರು ಅವನಿಗೇ ಮೊದಲು ಕೊಟ್ಟು ‘ಪಾಪ ಬಿಸಿಲು ಮಳೆ ಅನ್ನದ ರೀತಿ ಪೋಸ್ಟ್ ಹಂಚ್ತಾನೆ ಮೊದಲು ಕೊಡಿ ಅವನಿಗೆ” ಅಂತ ಕೊಡಿಸುತ್ತಿದ್ದರು.

ಆ ಹೊತ್ತಲ್ಲಿ ಹೆಡ್ ಮೇಷ್ಟ್ರು ರೂಮಲ್ಲೆ ಎಲ್ಲ ಟೀಚರು ಸೇರುತ್ತಿದ್ದರು. ಅವತ್ತು ಹಂಗೆ ಸೇರಿದ್ದರು. ಅವರಲ್ಲಿ ನಮ್ಮೂರಿನ ಮೇಡಮ್ಮೂ ಒಬ್ಬರಿದ್ದರು. ಅವರ ಗಂಡ ಪೋಲೀಸರಾಗಿದ್ರು. ಹಂಗಾಗಿ ಸ್ಕೂಲಲ್ಲಿ ಅವರಿಗೆ ಬೇರೆ ತರ ರೆಸ್ಪೆಕ್ಟ್ ಇತ್ತು. ಒಂದೊಂದ್ಸಲ ಆ ಮೇಡಂ ಗಂಡ ಪೋಲೀಸ್ ಡ್ರೆಸ್ಸಲ್ಲೆ ಬ್ಯಾಟರಿ ಇರುವ ಅಟ್ಲಾಸ್ ಸೈಕಲಲ್ಲಿ ಬರೋರು. ಆ ಸೈಕಲ್ ಕ್ಯಾರಿಯರಿಗೆ ಹಿಂದಿನಿಂದ ಸೀಟಿನ ನಡು ಮಧ್ಯೆಕ್ಕೆ ಬರುವಂತೆ ಸಿಕ್ಕಿಸಿದ್ದರು.
ಉದ್ದಕ್ಕೆ ದಪ್ಪಗೆ ಪೊದೆ ಮೀಸೆಯ ಅವರು ಬಂದಾಗ ನಮ್ಮೂರವ್ರು ಅಂತ ಎಲ್ಲರಿಗೂ ಗೊತ್ತಾಗಲಿ ಅಂತ ಬೀಗಿ ಗಸಗಿ, ಕಾಂತ, ಪರ್ಸಿ, ನಾನು ಓಡಿ ಹೋಗಿ ‘ನಮಸ್ಕಾರ ಸಾರ್’ ಅಂದರೆ ದಪ್ಪ ಮೀಸೆಯ ಅವರು ನಗ್ತಾ ಬೆನ್ನು ತಟ್ಟಿದರೆ ನಾವು ನಮ್ಮೊಳಗೆ ‘ನಮ್ಮ ತಂಟೆಗೆ ಬಂದರೆ’ ಅಂತ ನಮ್ಮ ಕ್ಲಾಸಿನ ಬೇರೆಯವರನ್ನು ನೋಡ್ತ ಗುರಾಯಿಸಿ ನಮ್ಮ ನಮ್ಮ ಸೀಟಿನಲ್ಲಿ ಕೂರುತ್ತಿದ್ದೆವು. ಅಂತಾ ಪೋಲೀಸರ ಹೆಂಡತಿಯಾದ ನಮ್ಮೂರಿನ ಮೇಡಂಗೆ “ಏನ್ರಿ ನಿಮ್ಮೂರವ್ರು ಎಲ್ಲ ನಮ್ದೆ ಅಂತಾರಲ್ಲ.. ಅವ್ರಪ್ಪಂದ್ರು ಕಟ್ಸಿದ್ರ ಸ್ಕೂಲು ಮಾರ್ಕೆಟ್ಟು ಬಸ್ಟ್ಯಾಂಡು ಎಲ್ಲನು..? ಪಾಪ ಆ ಗಂಗ ಏನ್ಮಾಡ್ದ ಹೇಳಿ.. ಅವನಿಗೆ ಹೊಡಿಯೋಕೆ ಸುತ್ತ ಸುತ್ತಿದ್ರು ಗೊತ್ತಾ..? ನಾನು ಕಿಟಕೀಲಿ ನೋಡ್ತಾನೆ ಇದ್ದೆ. ಪಾಪ ಕಂಡ್ರಿ ರೈತ್ರು. ಅವ್ರ್ ಗೂಡ್ನೆಲ್ಲ ಕದಿತಾರಲ್ರಿ.. ಏನೊ ಗಂಗ ನೋಡ್ದ ಹೇಳ್ದ. ಅವ್ನು ಸರಿಯಾಗೆ ಹೇಳ್ದ. ನಮ್ಗು ಗೊತ್ತಿತ್ತು ಇದೆಲ್ಲ ಮೊದಲಿಂದ. ಏನೊ ಮಾಡ್ಕಳ್ಳಿ ಕೂಲಿ ಮಾಡೋರು ಅವ್ರ ಕೆಲ್ಸದ ಮಧ್ಯೆ ನಾವ್ಯಾಕೆ ಅಂತ ಸುಮ್ನಿದ್ದಾಯ್ತು. ಬರ‌್ತಾರೆ ನೋಡಿ ಪೋಲೀಸ್ರು ನಾಲಕ್ ದಿನ ಒಳಗಾಕಿ ಏರೋಪ್ಲೇನ್ ಎತ್ತುದ್ರೆ ಆವಾಗ ಗೊತ್ತಾಗುತ್ತೆ ಬಡ್ಡಿ ಮಕ್ಖಿಗೆ.. ಹೇಳಿ ನಿಮ್ ಯಜಮಾನ್ರುಗು ಅವ್ರೂ ಪೋಲೀಸಲ್ವ.. ಸ್ಕೂಲ್ಲಿ ಬೈರಾಪುರ ಅಂತ ಹೆಸ್ರಿದಿಯಂತೆ. ಸ್ಕೂಲಿರೋದು ಹೊಸ ತಿರುಮಕೂಡಲಲ್ಲಿ ಗೊತ್ತಾ.. ಅದೆಂಗೆ ಬೈರಾಪುರ ಅಂತ ಮಾಡಿದಾರೆ? ಮಾಡ್ತಿನಿ ಇವ್ರ್ ಆಂಕಾರ ಎಲ್ಲಿತಂಕ ಇರುತ್ತೊ ” ಅಂದರು.

ನಾವು ಮಿಕಿ ಮಿಕಿ ಕಣ್ಣು ಬಿಟ್ಟು ನೋಡ್ತ ಉಪ್ಪಿಟ್ಟಿನ ಗಮಲು ಹೀರುತ್ತಿದ್ದೆವು. ಆಗ ನಮ್ಮೂರ್ ಮೇಡಮ್ಮು “ಸಾರ್ ನಮ್ಮೂರವ್ರು ಅಂತ ನಾನೇನ್ ವಯಿಸ್ಕಳ. ನಿಮ್ಮಿಷ್ಟ. ನಮ್ಗು ಅದ್ಕು ಸಂಬಂಧ ಇಲ್ಲ” ಅಂತ ಸಿಟ್ಟುಗೊಂಡು ಕುಂತರು. ಅವತ್ಯಾಕೊ ಗಂಗಣ್ಣನ ಸುಳಿವಿರದೆ ನಟರಾಜ ಮೇಷ್ಟ್ರು “ಲೇ ಗಂಗನ್ ಕರಿಯೋ” ಅಂದರು. ಹೊರಗೆ ಗಂಗನ ಸುಳಿವಿರಲಿಲ್ಲ.

*

ತಿಂಗಳಾಯ್ತು. ಉಪ್ಪಿಟಮ್ಮ ಸೊಪ್ಪಿಟಮ್ಮ ಹಬ್ಬವಿತ್ತು. ಊರು ರಂಗು ಬಳಿದುಕೊಂಡು ನಲಿಯುತ್ತಿತ್ತು. ತಮಟೆ ಸದ್ದು ಊರಾಳುತ್ತಿತ್ತು. ಹೊಳೆ ಕಡೆಯಿಂದ ಕೇಲು ಬರುತ್ತಿತ್ತು. ಕುಂಟು ಸಿದ್ದಪ್ಪ ಶಿಸ್ತಾಗಿ ಕಂಡು ಸ್ವಲ್ಪ ಎದ್ದಾಳುಗಳು, ಕೋಲಾಟ ದೊಣ್ಣೆ ವರಸೆ ಆಡುತ್ತಿದ್ದ ಯುವಕ ಸಂಘದವರನ್ನು ಸೇರಿಸಿಕೊಂಡು ಏನೇನೊ ಮಾತಾಡಿಕೊಂಡು ಹೋಗುವಾಗ ತಮಟೆ ಸದ್ದಿಗೆ ಸರಿಯಾಗಿ ಕೇಳದೆ ಗಸಗಿ, ಗೋಳು, ವಾಟೀಸು, ಪರ್ಸಿ, ಕಾಂತು, ನಾನು ಗರಿಗರಿ ಹೊಸ ಬಟ್ಟೆ ಇಕ್ಕಿಕೊಂಡು ಕೇಲಿನ ಮುಂದೆ ಕುಣಿಯುತ್ತಿದ್ದವರು ಅದೇನೊ ಎತ್ತ ಅಂತ ಅವರ ಗುಂಪಿಗೆ ಸೇರಿಕೊಂಡು ಬೀಗುತ್ತ ಹೋಗುತ್ತಿದ್ದಾಗ ಕುಂಟು ಸಿದ್ದಪ್ಪ “ಆ ಹೆಡ್ ಮೇಷ್ಟ್ರುಗೆ ಒಂದ್ ಗತಿ ಕಾಣ್ಸಗಂಟ ಬುಡದಿಲ್ಲ” ಅಂತಿದ್ದು ನಮಗೊಂಥರ ಮಜ ಅನಿಸಿದ್ದರು ಇವರೊಂದಿಗಿದ್ದದ್ದು ನೋಡಿ ಸ್ಕೂಲಿಗೆ ಹೋದಾಗ ಹೊಡೆದರೆ ಎಂಬ ಅಳುಕಿನಲ್ಲೇ ಅದೇನಾದ್ರು ಆಗಲಿ ಅಂತ ಮಾತಾಡ್ತ ಮಾತಾಡ್ತ ಬಿರಬಿರ ಹೆಜ್ಜೆ ಹಾಕತೊಡಗಿದೆವು.

ಬಿಸಿಲ ಧಗೆ. ಹನ್ನೊಂದು ಗಂಟೆಗೆ ಸೈಕಲ್ ಏರಿ ಬಂದಿದ್ದ ಗಂಗಣ್ಣ ಊರು ಬಳಸಿ ಪೋಸ್ಟ್ ಹಂಚಿ ಓಲ್ಡೇಜು ವಿಡೊ ಪೆನ್ಸನ್ ಕೊಟ್ಟು ಹೆಬ್ಬೆಟ್ಟು ಒತ್ತಿದ್ದ ಎಂ.ಓ ಫಾರಂ ಕೊಟ್ಟು ಎಲ್ಟಿಎಂ ಹಾಕಿಸಿಕೊಳ್ತ “ಏನ್ ಸಿದ್ದಪ್ಪೋರೆ ಹಬ್ಬ ಜೋರು’ ಅಂದ. ಕುಂಟು ಸಿದ್ದಪ್ಪ “ಹು ಗಂಗಣ್ಣ ಬಾ ಊಟ ಮಾಡುವಂತೆ.. ಕೆಂಪುಂಜನೆ ಕುಯ್ತಿಂವಿ” ಅಂದ. ಗಂಗಣ್ಣ, ಬ್ಯಾಲೆನ್ಸ್ ಇದ್ದ ಇನ್ನೊಂದೆರಡು ಪೋಸ್ಟ್ ಎತ್ತಿ ಅಡ್ರೆಸ್ ಓದ್ತಾ ನೋಡ್ತ “ಅಯ್ಯೋ ನಿಮ್ಮನೇಲಿ ಉಣ್ಣಂಗಿದ್ರೆ ಉಣ್ತಿದ್ದೆ ಸಿದ್ದಪ್ಪೋರೆ. ಏನ್ಮಾಡದು ಸಂಪ್ರದಾಯ ಬಿಡೊಕಾಗುತ್ತ..ಅದೂ ಅಲ್ದೆ ನೀವೇನಪ್ಪ ದನ ಬೇರೆ ಕುಯ್ತಿರಿ.. ನಮ್ ದೇವ್ರು ಅಲ್ವ. ದೇವ್ರನ್ನ ಯಾರಾದ್ರು ತಿಂತಾರ. ಒಳ್ಳೆದಾಗುತ್ತ.. ಗೋಮಾತೆ ಅಂದ್ರೆ ಬಸವಣ್ಣೋರು ಸಿದ್ದಪ್ಪೋರೆ.. ” ಅಂತಂತ “ಅಯ್ಯೋ ಸ್ಕೂಲ್ಗೊಂದ್ ಪಾರ್ಸಲ್ ಮರ‌್ತೆ ಬಿಟ್ನಲ್ಲ.. ನಮ್ ಪೋಸ್ಟ್ ಮೇಷ್ಟು ನೋಡುದ್ರೆ ಬೈತಾರಲ್ಲ ಏನ್ಮಾಡೋದು.. ಆಗ್ಲೇ ಕೊಟ್ಟು ಬರಬೇಕಿತ್ತು.. ಇವತ್ತು ಶನಿವಾರ ಬೇರೆ. ಅವ್ರು ಇದಾರ ಇಲ್ವ.. ಅದೇನೋ ಬೆಳಗ್ಗೆ ಮೇಲೆ ಬಣ್ಣ ಹೊಡಿಸ್ತ ಬೋರ್ಡ್ ಬರಿಸ್ತಿದ್ರು. ನೋಡಾಣ ಇರಬೋದು. ಇದ್ರೆ ಕೊಟ್ಬುಟ್ಟು ಕ್ಲಿಯರ್ ಮಾಡ್ಕೊಳಾಣ.. ಕೊಡಿ ಸಿದ್ದಪ್ಪೋರೆ” ಅಂತ ಎಂಓ ಫಾರಂ ಈಸಿಕೊಳ್ಳುವಾಗ ಕುಂಟ ಸಿದ್ದಪ್ಪ “ಯಾವ್ ಬೋರ್ಡ ಗಂಗಣ್ಣ” ಅಂದ. “ಅದೇ ಸ್ಕೂಲ್ ನೇಮು ಸಿದ್ದಪ್ಪೋರೆ. ಎಲ್ಲ ಹಳೇದಾಗಿ ಸರಿಯಾಗಿ ಏನೂ ಕಾಣ್ತ ಇರ‌್ಲಿಲ್ವಂತೆ. ಆ ಸ್ಕೂಲು ಹೊಸ ತಿರುಮಕೂಡಲು ಏರಿಯಾದಲ್ಲಿ ಇದಿಯಲ್ವ.. ಅದ್ಕೆ ಅದ್ಯಾರನ್ನೊ ಬೈತಾ ಒಂದೆ ಸಲ ಬೈರಾಪುರ ಹೆಸ್ರು ಹೊಡಿಸಾಕಿ ಹೊಸ ತಿರುಮಕೂಡಲು ಅಂತ ಬರೆಸ್ತಿದ್ರು. ಬರಿಸ್ತಾ ಬರಿಸ್ತಾ ಬರೆಯೋನ್ ಜೊತೆ ಅದೇನೇನೊ ಮಾತಾಡ್ತ ಅವ್ರು ಯಾರ‌್ಯಾರನ್ನೊ ಬೈಯ್ತ ಇದ್ರು.

ನಾನು ಅವರು ಬಯ್ಯೊ ಗ್ಯಾನ್ದಲ್ಲಿ ಕೇಳ್ತಾ ಕೇಳ್ತಾ ಸೈಕಲ್ ಏರಿ ಈ ಕಡೆ ಬಂದಾಯ್ತು. ಏನ್ಮಾಡೋದು..” ಅಂತ ಎಂ.ಓ ಫಾರಂ ನೀಟಾಗಿ ಜೋಡಿಸಿಕೊಂಡು ಸೈಕಲ್ ಏರಿ ಹೋದ ಗಂಗಣ್ಣನನ್ನೇ ನೋಡುತ್ತ ಕುಂತಲ್ಲೇ ಸಿಡಿಸಿಡಿ ಸಿಡಿಯುತ್ತ ಸಡನ್ ಹೋಗದೆ ಯಾರನ್ನೊ ಕರೆದು ತನ್ನ ಬ್ಯಾಟರಿ ಇರೊ ಫಳಫಳ ಮಿಂಚ್ತಿದ್ದ ಅಟ್ಲಾಸ್ ಸೈಕಲ್ ಕೊಟ್ಟು ನೋಡಿ ಬರಲು ಹೇಳಿದ. ಸೈಕಲ್ ತುಳಿದು ಭರ‌್ರಂತ ಹೋದವನು ಅದೇ ಸ್ಪೀಡಲ್ಲಿ ಬಂದು ದಸ್ಸೊಬಸ್ಸೊ ಏದುತ್ತ “ಸಾ ಹಳೇ ಬೋರ್ಡ್ ಅಳ್ಸಿ ಹೊಸ ಬೋರ್ಡ್ ಬರೆಸ್ತಾ ಅವ್ರ. ಅದ್ರಲ್ಲಿ ನಮ್ಮೂರೆಸ್ರೆ ಇಲ್ಲ. ಹೊಸ ತಿರುಮಕೂಡಲು ಅಂತ ದಪ್ಪಗ ಬರ‌್ದು ಡಿಸೈನ್ ಮಾಡ್ತ ಇದ್ರು..” ಅಂದ. ಕುಂಟು ಸಿದ್ದಪ್ಪನಿಗೆ ಇನ್ನಷ್ಟು ಉರಿ ಏಳ್ತು. ಊರಿನ ಮೇನ್ ರೋಡಲ್ಲಿ ಹೊಳೆಯಿಂದ ತಮಟೆ ಜೋರು ಸದ್ದು ಮಾಡುತ್ತ ಪುಂಡುಡುಗರು ಕೋಲಾಟ ದೊಣ್ಣೆ ವರಸೆ ಆಡುತ್ತ ಉಪ್ಪಿಟಮ್ಮ ಸೊಪ್ಪಿಟಮ್ಮನ ಕೇಲು ಮುಂದೆ ಲಕ್ಜಲಕ್ಜನೆ ಕುಣಿಯುತ್ತಾ ಬರುತ್ತಿದ್ದವು. ಆಗ ಕುಂಟು ಸಿದ್ದಪ್ಪನ ಮಾತು ಎಲ್ಲ ಕಡೆ ಸದ್ದು ಮಾಡಿ ಬಿರಬಿರನೆ ಸಾಗಿ ಸ್ಕೂಲ್ ಹತ್ರ ಬಂದಾಗ ನಟರಾಜ ಮೇಷ್ಟ್ರು ಆಲದ ಮರದ ಕೆಳಗೆ ಕುರ್ಚಿ ಹಾಕಿಕೊಂಡು ಗಂಗಣ್ಣ ಕೊಟ್ಟ ಪಾರ್ಸಲ್ ಪೋಸ್ಟ್ ನೋಡ್ತ ಮಾತಾಡ್ತ ಸೈನ್ ಮಾಡಿ “ಗಂಗಣ್ಣ ನನ್ ಟೇಬಲಲ್ಲಿ ಸೀಲಿದೆ ತಗೊ ಹಾಕೊ” ಅಂತಿದ್ದರು. ಗಂಗಣ್ಣ ಹೆಡ್ ಮೇಷ್ಟ್ರು ರೂಮಿನತ್ತ ಡಿಸ್ಪ್ಯಾಚ್ ಟಪಾಲು ಹಿಡಿದು ಜಗುಲಿ ಹತ್ತಿದ. ಉಪ್ಪಿಟಮ್ಮ ಸೊಪ್ಪಿಟಮ್ಮ ದೇವಸ್ಥಾನದ ಒಳಗೆ ಅಷ್ಟಗಲಕು ಹರಡಿಕೊಂಡಿದ್ದ ದೊಡ್ಡ ದೊಡ್ಡ ಛತ್ರಿ ಮರಕ್ಕೆ ಕಟ್ಟಿದ್ದ ಮೈಕ್ ಸೆಟ್ ಹಾರನ್ ಲಿ ರಾಜಕುಮಾರ್ ‘ನಾನೊಬ್ಬಕಳ್ಳ’ ಪಿಚ್ಚರ‌್ನ “ನಾನೊಬ್ವ ಕಳ್ಳನು/ ನಾನೊಬ್ಬ ಸುಳ್ಳನು/ ಬಲುಮೋಸಗಾರನು ಸರಿಯೇನು..” ಹಾಡು ಮೊಳಗುತ್ತಿತ್ತು.

ಕುಂಟು ಸಿದ್ದಪ್ಪ ಸೈಲೆಂಟಾಗಿ ಕತ್ತೆತ್ತಿ ಮೇಲೆ ಬೋರ್ಡ್ ನೋಡಿದ. ಏಣಿ ಮೇಲೆ ನಿಂತವನು ಎಲ್ಲ ಮುಗಿಸಿ ಸೈಡ್ ಬಾರ್ಡರ್ ಬರೆದು ಡಿಸೈನ್ ಮಾಡ್ತ ಇದ್ದ. ಅವನನ್ನು “ನೋಡಪ್ಪ ನಿಲ್ಸು ಇಲ್ಲಿ. ಇಲ್ನೋಡು.. ಆ ಹೊಸ ತಿರುಮಕೂಡಲು ಇದಿಯಲ್ಲ ಅದನ್ನ ಅಳ್ಸಿ ಬೈರಾಪುರ ಅಂತ ಬರೀ” ಅಂತ ಜೋರು ದನಿಯಲ್ಲಿ ಹೇಳಿದ. ಅಷ್ಟೊತ್ತಿಗೆ ನಟರಾಜ ಮೇಷ್ಟ್ರು ಪಾರ್ಸಲ್ ಬಿಚ್ಚಿ ನೋಡ್ತ ಇದ್ದವರು ಎದ್ದು ಬಂದು “ಏನ್ ಸಿದ್ದಪ್ಪ ಯಾಕೆ” ಅಂತ ಕೇಳಿದರು. ನಾನು, ಗೋಳು, ಕಾಂತ, ಗಸಗಿ ಎಲ್ಲ, ಮೇಷ್ಟ್ರು ಕಣ್ಣಿಗೆ ಬೀಳದ ಹಾಗೆ ಜನರ ಮರೆಯಲ್ಲಿ ನಿಂತೆವು. ಸಿದ್ದಪ್ಪ ವಾದ ಮಾಡ ತೊಡಗಿದ. ಮೇಷ್ಟ್ರೂ ಜೋರು ಮಾಡಿದರು. ನಮ್ಮೂರಿನವರೆಲ್ಲ ತುಂಬಿಕೊಂಡರು. ಹಬ್ಬಕ್ಕೆ ಅಂತ ಕುಲದವರು ಪೋಲೀಸರನ್ನ ಕರೆಸಿದ್ದರು. ಪೋಲೀಸು ವ್ಯಾನು ದೇವಸ್ಥಾನದ ಹತ್ತಿರ ನಿಂತಿತ್ತು. ಒಳಗಿದ್ದ ಪೋಲೀಸರು ದಡದಡನೆ ಇಳಿದು ಬಂದರು. ಗಂಗಣ್ಣ ಜಗುಲಿ ಮೇಲೆ ನಿಂತವನು ಕೆಳಗಿಳಿದು ಬರದೆ ಸುಮ್ಮನೆ ನೋಡ್ತಾ ಇದ್ದ. ಅಷ್ಟೊತ್ತಿಗೆ ತಿರುಮಕೂಡಲಿನ ಒಕ್ಕಲಿಗ ಲೀಡರೂ ಬಂದರು. ಅವರೊಂದಿಗಿಷ್ಟು ಪುಂಡುಡುಗರು ಬಂದು ಕೈಕೈ ಮಿಲಾಯಿಸಿದರು. ಈಗಾಗಲೇ ಕುಂಟು ಸಿದ್ದಪ್ಪ ಯಾರಿಗೊ ಹೇಳಿ ಎಮ್ಮೆಲ್ಲೆ ಟಿ.ಪಿ. ಬೋರಯ್ಯನವರಿಗೆ ವಿಷಯ ಮುಟ್ಟಿಸಿದ ಕಾರಣ ತಾಲ್ಲೊಕು ಶಿಕ್ಷಣ ಇಲಾಖೆ ಅಧಿಕಾರಿ ಧಾವಿಸಿ ಬಂದಿದ್ದರು. ಅವರ ಮುಖ ನೋಡಿದ್ದೆ ಜೋರಾಗಿ ಮಾತಾಡುತ್ತಿದ್ದ ನಟರಾಜು ಮೇಷ್ಟ್ರು ಏನೂ ಮಾತಾಡದೆ ಮುಖ ಕಿವುಚುತ್ತ ಬನ್ನಿ ಸಾರ್. ಒಳಗ್ ಬನ್ನಿ ಸಾರ್ ಅಂತ ಗಾಬರಿಯಲ್ಲಿ ಮೆತ್ತಗಾಗಿದ್ದು ಕಂಡಿತು.

ಅದಾಗಿ ವಾರ್ಷಿಕ ಪರೀಕ್ಷೆ ಮುಗಿದು ಏಳನೇ ಕ್ಲಾಸ್ ಮೆಟ್ಟಿಲು ಹತ್ತಿದಾಗ ನಟರಾಜ ಮೇಷ್ಟ್ರು ವರ್ಗ ಆಗಿರ ಸುದ್ದಿನ ಆ ಗಂಗಣ್ಣನೇ ತಂದು ಕೊಟ್ಟ ಶಿಕ್ಣಣ ಇಲಾಖೆಯಿಂದ ಬಂದಿದ್ದ ಸ್ಪೀಡ್ ಪೋಸ್ಟ್, ಕ್ಲಾಸ್ ಕ್ಲಾಸಿಗೂ ತಲುಪಿ ಎಲ್ಲ ಟೀಚರುಗಳು ಹೆಡ್ ಮೇಷ್ಟ್ರು ರೂಮಲ್ಲಿ ಕುಂತು ಒಳಗೊಳಗೆ ಗುಸುಗುಸು ಪಿಸಿಪಿಸಿ ಅಂತ ಮಾತಾಡುತ್ತಿದ್ದುದು ಸ್ಕೂಲಾಚೆಗು ಸುದ್ದಿ ಹೋಯ್ತು.

-ಎಂ.ಜವರಾಜ್

(ಮುಂದುವರಿಯುವುದು)


[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x