-೭–
ಅವತ್ತೇನೊ ಟಪಾಲುಗಳು ಜಾಸ್ತಿ ಇದ್ದವು ಅನ್ಸುತ್ತೆ. ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ಹೋಟೆಲಿಗೆ ಹೋಗಿ ಟೀ ಕುಡಿದು ಬರೊ ತನಕ ಗಂಗಣ್ಣನ ಲೆಕ್ಕ ಮುಗಿದಿರದೆ ಕನ್ಫ್ಯೂಸ್ ಮಾಡಿಕೊಂಡು ಎಲ್ಲ ಲೆಟರುಗಳನ್ನು ಅತ್ತಿಂದಿತ್ತ ಇತ್ತಿಂದತ್ತ ಎತ್ತಿ ಎತ್ತಿ ಇಡುತ್ತ ಜೋಡಿಸುತ್ತಲೇ ಇದ್ದ. ನಾವು ಪೋಸ್ಟ್ ಮೇಷ್ಟ್ರು ಅತ್ತ ಹೋಗಿದ್ದನ್ನೇ ನೋಡಿಕೊಂಡು ಮೆಲ್ಲಗೆ ಬಂದು ಗಂಗಣ್ಣನ ಸುತ್ತ ನಿಂತು ನೋಡ್ತ ಮಾತಾಡ್ತ “ಅದು ತಿರುಮಕೂಡಲ್ದು. ಇದು ಬೈರಾಪುರುದ್ದು. ಇದಿದೆಯಲ್ಲ ಅದು ಗೋಪಾಲ್ಪುರುದ್ದು.. ಅದು ಅವ್ರದು ಇದು ಇವ್ರದು” ಅಂತ ಪೋಸ್ಟ್ ಮೇಷ್ಟ್ರು ಬಂದಿದ್ದು ಗೊತ್ತಾಗದೆ ಗೋಳು ಉಯ್ಕೊಳ್ಳುತ್ತಿದ್ದೆವು. ಆಗ ಪೋಸ್ಟ್ ಮೇಷ್ಟ್ರು “ಏಯ್ ಯಾಕ್ರಪ್ಪ ಗಲಾಟೆ ಮಾಡ್ತ ಇದಿರಾ.. ಸ್ಕೂಲು ಇನ್ನು ಮುಕ್ಕಾಲ್ ಗಂಟೆ ಇದೆ ಹೋಗಿ..” ಅಂತಂದು ಗಂಗಣ್ಣನ ಕಡೆ ತಿರುಗಿ “ಏನಪ್ಪ ಇನ್ನು ಮುಗ್ದಿಲ್ವ ನಿಂದು… ಹಿಂಗಾದ್ರೆ ನೀನೋಗೋದು ಎಷ್ಟೊತ್ಗೆ.. ಲೆಟರೆಲ್ಲ ಹಂಚೋದು ಎಷ್ಟೊತ್ಗೆ.. ನೀನ್ ಬಂದು ನಾನು ಷರಾ ಬರ‌್ದು ಕ್ಲೋಸ್ ಮಾಡದು ಯಾವಾಗ.. ಆ ಗಿರಿಮಲ್ಲಯ್ಯವ್ರು ನಿನ್ನ ನನ್ಗ ತಗಲಾಕಿ ಕ್ವಾಟ್ಲ ಕೊಟ್ಟು ಹೋದ್ರಲ್ಲಪ್ಪ” ಅಂತ ಹಣೆ ಹಣೆ ಚಚ್ಚಿಕೊಳ್ಳುತ್ತ ರೇಗುತ್ತ “ಇವತ್ತೇನು ಟಪಾಲು ಇಷ್ಟೊಂದು ಬಂದಿವೆ.. ಕೊಡಪ್ಪ ಇಲ್ಲಿ ಇನ್ನೇನಾರ ಎಡವಟ್ಟು ಮಾಡಿಯೆ” ಅಂತ ಅವರೂ ಸೆಪರೇಟ್ ಮಾಡಿ ಆರ್ಡಿನರಿ ಪೋಸ್ಟು, ಸರ್ಟಿಫಿಕೇಟ್ ಪೋಸ್ಟು, ಸ್ಪೀಡ್ ಪೋಸ್ಟು, ರಿಜಿಸ್ಟರ್ಡು ಎಲ್ಲನು ಎಂಟ್ರಿ ಹಾಕುತ್ತ ನೋಡಿದರೆ, ಎದುರಿಗಿದ್ದ ರೇಷ್ಮೇಗೂಡಿನ ಮಾರುಕಟ್ಟೆ ಟಪಾಲುಗಳೇ ಇಪ್ಪತ್ತರಿಂದ ಮೂವತ್ತು ಇದ್ದವು. ಪೋಸ್ಟ್ ಮೇಷ್ಟ್ರು ಅವೆಲ್ಲವನ್ನು ಮೊದಲು ಎಂಟ್ರಿ ಮಾಡಿ “ನೋಡಪ್ಪ ಫಸ್ಟು ಇವ್ನ ರೇಷ್ಮೇಗೂಡುನ್ ಮಾರ್ಕೆಟ್ಗ ಕೊಟ್ಟು ಸೀಲಾಕಿಸ್ಕೊಂಡು ಬಾ. ಆಮೇಲೆ ಉಳಿದ ಪೋಸ್ಟ್ ತಗಂಡೋಗು ನಿನ್ಗ ಭಾರ ಕಮ್ಮಿಯಾಗುತ್ತ” ಅಂದರು. ನಾವು ನಿಧಾನಕೆ ಹೆಜ್ಜೆ ಹಾಕ್ತ ತಿರುಗಿ ತಿರುಗಿ ಕಳ್ಳ ಹೆಜ್ಜೆ ಹಾಕ್ತ ಸನ್ಯಾಸಿ ಅಂಗಡಿ ಕಡೆ ಹೋದೆವು.
ಸ್ಕೂಲು, ಪೋಸ್ಟಾಫೀಸ್ ಪಕ್ಕದಲ್ಲೆ ಸಿಲ್ಕ್ ಫ್ಯಾಕ್ಟರಿ ಕಾಂಪೌಂಡಿಗೆ ಅಂಟಿಕೊಂಡಂತೆ ಬೈರಾಪುರ ಸರ್ಕಾರಿ ರೇಷ್ಮೇಗೂಡಿನ ಮಾರುಕಟ್ಟೆ ಇತ್ತು.
ಈ ಮಾರುಕಟ್ಟೆ ಎದುರಿಗೆ ಒಂದೆರಡು ಪೆಟ್ಟಿಗೆ ಅಂಗಡಿಗಳಿದ್ದವು. ಅದರಲ್ಲಿ ಸನ್ಯಾಸಿ ಅಂಗಡಿ ಫೇಮಸ್. ಸನ್ಯಾಸಿ ಅಂದರೆ ನಿಜವಾದ ಸನ್ಯಾಸಿಯಲ್ಲ ಬದಲಿಗೆ ಅವನು ಮೈಬಣ್ಣ, ಕತ್ತಿಗೆ ಹಾಕಿದ್ದ ರುದ್ರಾಕ್ಷಿ ಮಣಿ, ಅವನು ಹಣೆಗೆ ಇಟ್ಟುಕೊಳ್ಳುತ್ತಿದ್ದ ಬಿಳಿ ಕೆಂಪು ನಾಮ, ಅವನು ಮುಂಗೈಗೆ ಕಟ್ಟಿಕೊಳ್ಳುತ್ತಿದ್ದ ಒಂದೆರಡು ತರದ ಕಲರ್ ದಾರ, ಅವನು ನಗುವ ರೀತಿ, ಅವನ ನಡಿಗೆ ಸ್ಟೈಲು, ಅವನು ಬೆಳಗ್ಗೆ ಸೂರ್ಯ ಮೂಡುವ ಮುನ್ನವೇ ಎದ್ದು ತಣ್ಣೀರ್ ಸ್ನಾನ ಮಾಡಿ ಮನೆಯಾಚೆ ಇದ್ದ ತುಳಸಿ ಕಟ್ಟೆಗೆ ಮಾಡುತ್ತಿದ್ದ ಪೂಜೆ, ಅವನು ಪರಟ್ಟಿಗೆ ಅಂಗಡಿಯಲ್ಲಿ ಫೋಟೋಗೆ ಹೂವು ಹಾಕಿ ಗಂಧದಕಡ್ಡಿ ಹಚ್ಚಿಡಿದು ತುಟಿ ಕುಣಿಸಿ ಮಾಡುತ್ತಿದ್ದ ಪೂಜೆ – ಹೀಗೆ ಅವನ ದಿನನಿತ್ಯದ ಆಗುಹೋಗು ನೋಡಿ ಯಾರೋ ವಾರಿಗೆಯವರು ತಮಾಷೆಗೊ ಕಿಚಾಯಿಸಲೊ ಸುಮ್ಮನೆ ‘ಒಳ್ಳೆ ಸನ್ಯಾಸಿ ಸಾವಾಸ ಆಯ್ತು’ ಅಂತ ಅಂದದ್ದೆ. ಅದು ಪದೇ ಪದೇ ಆಡಿ ಆಡಿ ಸನ್ಯಾಸಿ ಅನ್ನೊ ಹೆಸರು ಬಾಯಿ ಪಾಠವಾಗಿ ಅವನೂ ಆ ಹೆಸರಿಗೆ ಒಗ್ಗಿದ್ದ ಎಂಬುದು ಬೇರೆ ಮಾತು. ಬ್ರಾಹ್ಮಣರಿಗಿಂತಲೂ ಹೆಚ್ಚೇ ಎನ್ನುವಂತೆ ಭಕ್ತಿ ಪೂಜೆ ಪುನಸ್ಕಾರ ಮಾಡುತ್ತಿದ್ದ ಒಕ್ಕಲಿಗರ ಈ ಸನ್ಯಾಸಿ ಆ ಜಾತಿ ಈ ಜಾತಿ ಅನ್ನೋದನ್ನು ಕಾಣದೆ ಜನರಲ್ ಆಗಿದ್ದ. ಈ ಕಾರಣ ಸನ್ಯಾಸಿ ಅಂಗಡಿತವು ನಮ್ಮ ಕೇರಿಯ ಪುಂಡುಡುಗರು ಅಲ್ಲದೆ ಸುತ್ಮುತ್ತಲ ಊರಿನ ಗೂಡು ತರುವವರೆಲ್ಲರು ಅವನ ಅಂಗಡಿತವು ಸೇರುತ್ತಿದ್ದುದು ಅವನ ವ್ಯಾಪಾರಕ್ಮು ಅನುಕೂಲವಾಗಿತ್ತು.
ನಮ್ಮ ಕಿರಿಯಣ್ಣನೂ ಗೂಡಿನ ಮಕ್ಕರಿ ಹೊರುವ ಕೆಲಸಕ್ಕಿದ್ದು ಆ ಅಂಗಡಿತವೇ ಯಾವಾಗಲೂ ಝೂಂಡಾ ಊರಿ ಲೋಕದ ವಿಚಾರನೆಲ್ಲ ಮಾತಾಡ್ತ ಸನ್ಯಾಸಿಗೆ ಕ್ಲೋಸ್ ಆಗಿದ್ದ. ಸ್ಕೂಲು ಬೆಲ್ಲು ಹೊಡೆಯುವ ತನಕ ನಾವೂ ಒಂದಷ್ಟು ಹುಡುಗರು ಪೋಸ್ಟಾಫೀಸ್ ಬಿಟ್ಟರೆ ಇನ್ನೊಂದು ಜಾಗವೆಂದರೆ ಆ ಸನ್ಯಾಸಿ ಅಂಗಡಿತವೇ ಬ್ಯಾಗು ನ್ಯಾತಾಕಿಕೊಂಡು ನಿಂತೊ ಕುಂತೊ ಕಾಲಹರಣ ಮಾಡುವಾಗ ಸನ್ಯಾಸಿ ನನ್ನತ್ತ ನೋಡಿ ನಮ್ಮಣ್ಣನ ಹೆಸರೇಳಿ “ನೀನು ಅವ್ನ್ ತಮ್ಮನ” ಅಂತ ಹತ್ತಿರ ಕರೆದು ಏನಾದರು ತಿಂಡಿ ಕೊಡುತ್ತಿದ್ದ. ನಮ್ಮಣ್ಣನು ಎಷ್ಟೊ ಸಲ ನಾವು ನಿಂತಿರುವುದನ್ನು ನೋಡಿ ಬೆದರಿಸಿ ಕಳುಹಿಸಲು ಪ್ರಯತ್ನಿಸಿ ವಿಫಲನಾಗುತ್ತಿದ್ದ. ಅದು ಅವನಿಗೆ ವಿಫಲ ಪ್ರಯತ್ನ ಅನಿಸದೆ ಹಂಗೆ ಬಾಯಿಲ್ಲಿ ಅಂತ ಕರೆದು ಕಡ್ಲೇಕಾಯಿ ತೆಗೆದುಕೊಟ್ಟು ಜೇಬಿಗೆ ತುಂಬಿಸಿ “ಹೋಗು ಇನ್ನೊಂದ್ಸಲ ಇಲ್ಲಿಗ ಬರ‌್ಬೇಡಿ” ಅಂತ ವಾರ್ನ್ ಮಾಡಿದರು ನಾವು ಅಷ್ಟು ಸುಲಭಕ್ಕೆ ಕೇಳುವವರಾಗಿರಲಿಲ್ಲ.
ಈ ಪೋಸ್ಟ್ ಮೇಷ್ಟ್ರು ಈ ಪೋಸ್ಟ್ ಮ್ಯಾನು ಪೋಸ್ಟಾಫೀಸಿಗೆ ಬರಬೇಕಾದರೆ ಹೋಗಬೇಕಾದರೆ ರೇಷ್ಮೇಗೂಡಿನ ಮಾರುಕಟ್ಟೆ ಮುಂಭಾಗದ ರೋಡಿನಲ್ಲೆ ಕ್ರಾಸ್ ಮಾಡಬೇಕಿತ್ತು. ಹೀಗೆ ಹೋಗ ಬರಾ ನೋಡುತ್ತ ಇದ್ದವರಿಗೆ ಅಲ್ಲಿನ ಎಲ್ಲ ವಿದ್ಯಾಮಾನಗಳು ಗೊತ್ತಿಲ್ಲದೆ ಇಲ್ಲ. ಮಾರ್ಕೆಟ್ಗೆ ಬರುವವರಿಗೆ ಇವರು ಪೋಸ್ಟ್ ಮ್ಯಾನು ಪೋಸ್ಟ್ ಮೇಷ್ಟ್ರು ಅಂತಾನು ಗೊತ್ತಿತ್ತು. ಅವರಿಂದ ಇವರಿಗೆ ಇವರಿಂದ ಅವರಿಗೆ ಏನೇ ಗೊತ್ತಿದ್ದರು ಏನೇ ನಡೆದರು ಅಲ್ಲಿ ಯಾವುದನ್ನೂ ಕೇಳುವಂಗಿಲ್ಲ ಹೇಳುವಂಗಿಲ್ಲ ಹಂಗಿತ್ತು ಅಲ್ಲಿನ ಸ್ಥಿತಿ.
ಸರಿ, ಈ ರೇಷ್ಮೇಗೂಡಿನ ಮಾರುಕಟ್ಟೆ – ಸುತ್ಮುತ್ತಲಿನ ಹತ್ತಾರು ಊರಿನ ಜನಕ್ಕೆ ರೈತರಿಗೆ ಒಂದಷ್ಟು ಕೆಲಸ ಕೊಟ್ಟಿತ್ತು. ಅಕ್ಕಪಕ್ಕದ ಹಳ್ಳಿಗಳಿಂದ ದೊಡ್ಡ ಮಕ್ಕರಿಯಲ್ಲಿ ರೇಷ್ಮೇಗೂಡು ಹೊತ್ತುಕೊಂಡು ಬರುವವರಿಗೇನು ಕಮ್ಮಿ ಇರಲಿಲ್ಲ. ಐದಾರು ಮಕ್ಕರಿ ತರುವವರು ಬಸ್ಸಿನ ಟಾಪಲ್ಲಿ ಹಾಕಿ ತಂದು ರೇಷ್ಮೇಗೂಡಿ ಮಾರುಕಟ್ಟೆ ಇರುವ ಪರ್ಲಾಂಗ್ ದೂರದ ಬಸ್ಟಾಪಲ್ಲಿ ಆ ಮಕ್ಕರಿ ಇಳಿಯುತ್ತಿದ್ದವು. ರೇಷ್ಮೇಗೂಡು ತುಂಬಿದ್ದ ಆ ಮಕ್ಕರಿಯನ್ನು ತಲೆ ಮೇಲೆ ಹೊತ್ತು ರೇಷ್ಮೇಗೂಡಿನ ಮಾರುಕಟ್ಟೆ ಜಗುಲಿಗೆ ತಂದು ಹಾಕಿದರೆ ಮಕ್ಕರಿಗೆ ಇಷ್ಟು ಅಂತ ಫಿಕ್ಸ್ ಮಾಡಿ ಕಾಸು ಕೊಡುತ್ತಿದ್ದರು. ಆ ಮಕ್ಕರಿ ಹೊರುವವರಿಗೇನು ಕಮ್ಮಿ ಇರಲಿಲ್ಲ. ಬಸ್ಸಲ್ಲಿ ಇಳಿಸುತ್ತಿದ್ದಂಗೆ ನಾಮುಂದು ತಾಮುಂದು ಅಂತ ಇಳಿಸಿದ ಮಕ್ಕರಿ ಹತ್ತಿರ ನಿಂತು ‘ಇದು ನಿಂದು, ಅದು ನಂದು, ಮತ್ತಿನ್ನೊಂದು ಅವಂದು’ ಅಂತ ಅವರವರೇ ಮಾತಾಡಿಕೊಂಡು ಒಂದೊಂದಕ್ಕೆ ಒಂದೊಂದು ವಸ್ತು ಹಾಕಿ ಗುರುತು ಮಾಡುತ್ತಿದ್ದರು. ಇದರ ಮುಂದೆ ವಾದ ಮಾಡುವಂಗಿಲ್ಲ. ವಾದ ಮಾಡಿದರೆ ಎರಡು ಮೂರಿರಲಿ ಸದ್ಯ ಒಂದು ಮಕ್ಕರಿ ಸಿಕ್ಕರೆ ಸಾಕು ಅದು ಬೆಳಗಿನ ನಾಸ್ಟಕ್ಕಷ್ಟೇ ಆಗುತ್ತದೆ. ಇನ್ನು ಮದ್ಯಾಹ್ನದ ಊಟಕ್ಕೆ ಮತ್ತು ಸಂಜೆ ಮನೆಗೆ ಹೋಗುವಾಗ ಕೈಗೊಂದಿಷ್ಟು ಲೆಕ್ಕ ಹಾಕಿಕೊಂಡು ಕೆಲಸದ ದಾರಿ ಕಂಡುಕೊಂಡಿದ್ದರು. ಹೀಗಾಗಿ ರೇಷ್ಮೇಗೂಡಿನ ಮಾರುಕಟ್ಟೆ ಮುಂಭಾಗ ಗೂಡು ತರುವ ರೈತರಿಗಿಂತ ಗೂಡಿನ ಮಕ್ಕರಿ ಹೊರುವ ಕೂಲಿಕಾರರೇ ದುಪ್ಪಟ್ಟಿದ್ದರು.
ಈ ರೇಷ್ಮೇಗೂಡು ತರುವವರು ಮಾರುಕಟ್ಟೆ ಒಳಗೆ ಚಲನ್ ಬರೆಸಿ ಗೂಡು ತುಂಬಿದ ಮಕ್ಕರಿ ತೂಕಕ್ಕೆ ಹಾಕಿಸಿ ಅದರ ಮೇಲೆ ಬಿಲ್ ಇಟ್ಟು ಬೀಟ್ ಸಾರಿ ಒಪ್ಪಿಸಿ ಹೊರ ಬಂದರೆ ಬಿಲ್ ಸಹಿತ ನಂಬರ್ ಅಂಟಿಸಿದ ಖಾಲಿ ಮಕ್ಕರಿ ಹೊರಕ್ಕೆ ಬಂದು ಬೀಳುತ್ತಿತ್ತು. ಆ ಮಕ್ಕರಿಗಳನ್ನು ಉಪ್ಪಿಟಮ್ಮ ಸೊಪ್ಪಿಟಮ್ಮ ದೇವಸ್ಥಾನದ ಕಾಂಪೌಂಡ್ ಒಳಗೆ ನಾಯಕರ ಮಾದಪ್ಪ, ಒಂದಿಬ್ಬರು ಹುಡುಗರ ಸಹಾಯದಿಂದ ಸೀರಿಯಲ್ಲಾಗಿ ಜೋಡಿಸಿಡುತ್ತಿದ್ದ. ಆ ಮಕ್ಕರಿ ಕಲೆಕ್ಟ್ ಮಾಡಿಕೊಳ್ಳಲು ಇಪ್ಪತೈದು ಪೈಸೆನೊ ನಲವತ್ತು ಪೈಸೆನೊ ನಿಗದಿ ಮಾಡಿ ನಿಗದಿ ಪಡಿಸಿದ ಕಾಸು ಕೊಟ್ಟು ಮಕ್ಕರಿ ಬಿಡಿಸಿಕೊಳ್ಳಬೇಕಿತ್ತು.
ಅದಕ್ಕು ಮುನ್ನ ಗೂಡು ತರುವವರು ಸೆಪರೇಟು ಮಾರುಕಟ್ಟೆ ಒಳಗೆ ಹೋಗದ, ಹೊರಗೇ ಮಾರಿಕೊಂಡು ತಕ್ಷಣದ ಖರ್ಚಿಗೆ ಅಂತ ಕಚ್ಚಾರೇಷ್ಮೇ ಅಂತಾನೊ ಜಲ್ಲೀ ಗೂಡು ಅಂತಾನೊ ಬ್ಯಾಗಿನಲ್ಲಿ ತುಂಬಿಕೊಂಡೊ ಅಥವಾ ಹೆಚ್ಚಿದ್ದರೆ ಪಂಚೆ ಲುಂಗಿಯಲ್ಲಿ ಹಾಕಿ ಒಂದು ಪೊಟ್ಟಣ ಮಾಡಿ ತರುತ್ತಿದ್ದರು. ಅದನ್ನು ರೇಷ್ಮೇಗೂಡಿನ ಅಧಿಕಾರಿಗಳಿಗೆ ಗೊತ್ತಾಗದ ಹಾಗೆ ಲೋಕಲ್ಲಾಗಿ ಮಕ್ಕರಿ ಹೊರುವವರ ಮೂಲಕ ಮಾರಿ ನೂಲು ತೆಗೆವ ರೀಲಿಂಗ್ ರೇಷ್ಮೇ ಘಟಕಗಳಿಗೆ ಹೋಗುತ್ತಿತ್ತು.
ಈ ಮಕ್ಕರಿ ಹೊರುವ ನಮ್ಮ ಕೇರಿಯ ಕೆಲವರು ಜಲ್ಲಿ ಗೂಡಿನ ಪೊಟ್ಟಣ ನೋಡಿ ತಂದವನನ್ನು ಕರೆವರು. ಅವನು ಜಲ್ಲಿ ಗೂಡು ಮಾರಿ ಜೇಬು ತುಂಬಿಸಿಕೊಳುವ ಆಸೆಯಿಂದ ಬರುವನು. ಇವರು ಜಲ್ಲಿ ಗೂಡಿನ ಪೊಟ್ಟಣ ಬಿಚ್ಚುವರು. “ಎಷ್ಟ್ ಹೇಳು” ಅನ್ನೋರು. ಅವನು ಇಷ್ಟು ಅಂತ ಹೇಳಿ ಗೂಡಿನೊಳಕ್ಕೆ ಕೈಯಾಕಿ ಸರಿಸಿ ಕೈಯಾಡಿ ಅದರ ತೂಕ ಅಂದಾಜು ಮಾಡಿ ‘ನೋಡಿ ಹೇಗಿದೆ.. ಕೇಳಿ ನೀವೊಂದು ಮಾತು” ಅನ್ನೋನು . ಇವರು ಗೂಡನ್ನು ಎರಡೂ ಕೈಯಿಂದ ಎರಡು ಮೂರು ಕೆ.ಜಿ.ಯಷ್ಟು ಮೇಲೆತ್ತಿ ಅರ್ಧ ಅಲ್ಲಾಡಿಸಿ ಉದುರಿಸಿದರೆ ಅದು ಸುತ್ಮುತ್ತ ಚೆಲ್ಲಿಕೊಳ್ಳುತ್ತಿತ್ತು. ಕರಳಗೆ ಕುಂತಿದ್ದ ಅವನು ಸುತ್ಮುತ್ತ ಚೆಲ್ಲಿಕೊಂಡ ಗೂಡನ್ನು ಆಯ್ದು ಆಯ್ದು ಗುಡ್ಡೆ ಹಾಕುತ್ತಿದ್ದರೆ ಮೇಲೆ ನಿಂತು ಅಲ್ಲಾಡಿಸುತ್ತಿದ್ದವನು ಅವನ ಕೈಲಿದ್ದ ಅರ್ಧ ಗೂಡನ್ನು ಅವನ ಪಕ್ಕ ಟವೆಲ್ ಹಿಡಿದು ನಿಂತವನ ಟವೆಲ್ಲಿಗೆ ಹಾಕುವನು. ಅದು ಒಂದೂ ಒಂದೂವರೆ ಕೆ.ಜಿ.ಯಷ್ಟಿರುತ್ತಿತ್ತು. ಅದನ್ನು ರೀಲಿಂಗ್ ಘಟಕಕ್ಕೆ ಮಾರಿಕೊಂಡರೆ ಐದಾರು ಜನರಿಗೆ ಅವತ್ತಿನ ದುಪ್ಪಟ್ಟು ಸಂಪಾದನೆಯಾಗುತ್ತಿತ್ತು. ಟವೆಲ್ಲಿಗೆ ಹಾಕಿಸಿಕೊಂಡವನು ಮೆಲ್ಲಗೆ ಅತ್ತ ಹೋಗಿ ಸನ್ಯಾಸಿ ಅಂಗಡಿ ಹಿಂದಕ್ಕಿದ್ದ ಎಲಗಳ್ಳಿ ಬೇಲಿ ಮರೆಗಿಟ್ಟು ಬರುತ್ತಿದ್ದ. ಆಮೇಲೆ ಅವರು ಅದೂ ಇದು ಇಷ್ಟಾದ್ರ ಕೊಡು ಇಲ್ಲಾಂದ್ರೆ ಬೇಡ ಅಂತ “ಬೇಡ ಹೋಗಪ್ಪ ರೇಟು ಜಾಸ್ತಿ ಹೇಳ್ತಿದ್ದಯ್, ಹಂಗೆ ನೋಡಿಲ್ಲಿ ವಸಿ ಡ್ಯಾಮೇಜ್ ಜಾಸ್ತಿ ಅವ.. ಇದ್ಕ ಇಷ್ಟ್ ರೇಟ್ ಹೇಳ್ತಿಯ” ಅಂತ ಚೆಲ್ಲಿಕೊಂಡಿದ್ದ ಗೂಡನ್ನು ಅವರೇ ತುಂಬಿ ಪೊಟ್ಟಣ ಕಟ್ಟಿ ಕಳಿಸುತ್ತಿದ್ದರು. ಇದೆಲ್ಲ ಮಾರುಕಟ್ಟೆ ಅಲ್ಲಿದ್ದವರಿಗೆ ಗೊತ್ತಿಲ್ಲ ಅಂತಲ್ಲ.
ಇದೇ ತರ ಒಂದಿನ ಅಲ್ಲ, ದಿನಾ ನಡೆಯೋದು.
ಆಗಾಗ ರೇಷ್ಮೇಗೂಡಿನ ಮಾರುಕಟ್ಟೆ ಅಧಿಕಾರಿ ಹೆಸರಿಗೆ ಒಂದಷ್ಟು ಜಾಸ್ತಿನೆ ಟಪಾಲು ಬರುತ್ತಿದ್ದವು. ಅವನ್ನು ಬ್ಯಾಗಲ್ಲಿ ತುಂಬಿಕೊಂಡು ಅಲ್ಲಿ ಇಲ್ಲಿ ಹೊರೊದ್ಯಾಕೆ ಈಗ್ಲೇ ಕೊಟ್ಟು ಬರಾಣ ಅಂತ ಗಂಗಣ್ಣ ಪೋಸ್ಟ್ ಮೇಷ್ಟ್ರಿಗೇಳಿ ಟಪಾಲುಗಳನ್ನು ತಬ್ಬಿಕೊಂಡು ಬರುವಾಗ ಹತ್ತಾರು ಸಲ ನೋಡಿ ಗೊಣಗುಟ್ಟಿದ್ದ. ನೋಡಿ ನೋಡಿ ಗೊಣಗುಡುವುದೇ ಆಯ್ತು. ಅವನು ಯಾತಕ್ಕೆ ಗೊಣಗುಟ್ಟುತ್ತಿದ್ದ ಅನ್ನುವುದು ಯಾರಿಗೂ ಗೊತ್ತಿಲ್ಲ.
ಅವತ್ತೂ ಹಂಗೆ ಆಯ್ತು. ನಾವು ನಿಧಾನಕೆ ಬಂದು ಸನ್ಯಾಸಿ ಅಂಗಡಿತವು ನಿಂತು ನೋಡುವಾಗ ನಮ್ಮಿಂದೆನೆ ಗಂಗಣ್ಣ ಟಪಾಲು ತಬ್ಬಿಕೊಂಡು ಬಂದು ನಿಧಾನನಕ್ಕೆ ಅಡ್ರೆಸ್ ಓದುತ್ತಾ ಕಾಲೆಳೆದುಕೊಂಡು ರೇಷ್ಮೇಗೂಡಿನ ಮಾರುಕಟ್ಟೆಗೆ ಹೋಗುವಾಗ ಅದೆ ತರ ಸೈಡಿಗೆ ಕಣ್ಣಾಡಿಸಿದ. ಅಲ್ಲಿದ್ದವನೊಬ್ಬ ಜಲ್ಲಿಗೂಡನ್ನು ಎತ್ತಿ ಎತ್ತಿ ಟವೆಲ್ಗೆ ಹಾಕೊದನ್ನ ನೋಡಿದ. ಅವರೆಲ್ಲ ರೈತನೊಂದಿಗೆ ಅದು ಇದು ಮಾತಾಡಿ ಬೇಡ ಹೋಗು ಅಂತ ಅತ್ತಿತ್ತ ಸರಿದ ಮೇಲೆ ಕೆಳಗೆ ಚೆಲ್ಲಿಕೊಂಡಿದ್ದ ಜಲ್ಲಿಗೂಡನ್ನು ಆಯುತ್ತಿದ್ದವನಿಗೆ “ಯೋ ಏನಪ್ಪ ಮಾಡ್ತ ಇದ್ದಿಯ.. ನಿನ್ ಗೂಡೆಲ್ಲ ಹೋಯ್ತು. ಅವ್ರು ಎತ್ಕ ಹೋದ್ರಲ್ಲ.. ಪಾಪ ಅಲ್ನೋಡು ಬೇಲಿ ಸಂದಿಲಿ” ಅಂತ ಲೆಟರಲ್ಲಿದ್ದ ಅಡ್ರೆಸ್ ಓದ್ತಾ ಓದ್ತಾ ಹೇಳಿದ. ಅವನು ಗಾಬರಿಗೊಂಡು “ಎಲ್ಯಾ ಸಾ..” ಅಂತ ಸನ್ಯಾಸಿ ಅಂಗಡಿ ಹಿಂದಕ್ಕೆ ಕುಂತಲ್ಲೆ ಕಣ್ಣಾಡಿಸಿದ. ಮೆಲ್ಲಗೆ ಹೋಗಿ ಮುಚ್ಚಿಟ್ಟ ಜಲ್ಲಿಗೂಡನ್ನು ಎತ್ತಿಕೊಂಡು ಬಂದು ಬೈಯ ತೊಡಗಿದ. ಸನ್ಯಾಸಿ ಅಲರ್ಟ್ ಆದ. ಎಲ್ಲರು ಗುಂಪಾದರು. ಗಂಗಣ್ಣ ಅವನಿಗೆ ಹೇಳಿ ಲೆಟರ್ ನೋಡ್ತಾ ನೋಡ್ತಾ ನಿಧಾನಕೆ ಮಾರುಕಟ್ಟೆ ಒಳಗೋದ. ಮಕ್ಕರಿ ಜೊತೆ ಜಲ್ಲಿಗೂಡು ತರುತ್ತಿದ್ದ ರೈತರೆಲ್ಲ ಓಡೋಡಿ ಬಂದು “ಏ ಈ ಜಲ್ಲಿಗೂಡ ನಾವೇನು ಕದ್ದು ಮುಚ್ಚಿ ಮಾರ‌್ತ ಇಲ್ಲ. ಸಾಯೇಬ್ರುಗ ಹೇಳೇ ಮಾಡ್ತ ಇರದು. ಕಳ್ತನ ಮಾಡಿ ಬದುಕ್ಬೇಕಾ..? ಈ ಸುದ್ದಿನ ಕೇಳಿದ್ದಿ. ಬೈರಾಪುರ ತರ ಕಳ್ಳೂರು ಯಾವ್ದು ಇಲ್ಲ.. ಗೊತ್ತಾಯ್ತಲ್ಲ ಬುಡ್ರಿ” ಅಂತ ಒಟ್ಟುಗೂಡಿ ತಲಾಗೊಬ್ಬೊಬ್ಬರು ಬೈಯಲು ಶುರು ಮಾಡಿದರು. ಆಗ ಅಲ್ಲೆ ನಿಂತಿದ್ದ ನಮ್ಮೂರಿನ ಪುಂಡೈಕಳು “ಯೋವ್ ಯಾರ್ ಕದ್ದರ ಅವ್ರ ಹಿಡ್ದು ಉಗಿ.. ಆ ಬೋಳಿಮಗ ಪೋಸ್ಟ್ ಮ್ಯಾನ್ ಗಂಗ ಹೇಳ್ದ ಅಂತ ಇಡಿ ಬೈರಾಪುರನೆ ಕಳ್ಳೂರು ಅಂತಿದ್ದಯಲ್ಲ… ಬೈರಾಪುರ ಅಂದ್ರ ಏನಂದ್ಕಂಡಿದ್ದರಿ… ಈ ಮಾರ್ಕೆಟ್ಟು ನಮ್ಮೂರೆಸ್ರಲ್ಲೆ ಇರದು. ಆ ಪೋಸ್ಟಾಫೀಸೂ ನಮ್ಮೂರೆಸ್ರಲ್ಲೆ ಇರದು. ಆ ಪಂಚಾಯ್ತಿನೂ ನಮ್ಮೂರೆಸ್ರಲ್ಲೆ ಇರದು. ನೋಡಿಲ್ಲಿ.. ಐಕ ಓದಾ ಈ ಸ್ಕೂಲೂ ನಮ್ಮೂರೆಸ್ರಲ್ಲೆ ಇರದು. ಪೋಲಿಟೇಸನ್ನು ಆ ತಾಲೊಕಾಫೀಸು ಆ ಕಾಲೇಜು ಆ ಲಿಂಕ್ ರೋಡ್ ತಂಕ ನಮ್ದೆ. ನಮ್ಮೂರ್ ಬಗ್ಗ ಮಾತಾಡ್ಬೇಕಾರ ಹಲ್ಲು ಹಲ್ಲಿಡ್ದು ಮಾತಾಡು.. ಅಂವ ಹೇಳುದ್ನಲ್ಲ ಗಂಗ, ಅವ್ನ್ ಕಾಲ್ನು ನಿನ್ ಕಾಲ್ನು ತರ‌್ದು ಕೈಕ್ಕೊಡ್ತಿಂವಿ. ಬೈರಾಪುರದವ್ರು ಅಂದ್ರ ಷಂಡ್ರು ಅಂದ್ಕಂಡಿದ್ದರ‌್ಯಾ ಮಕ್ಳ” ಅಂತ ರಂಪ ಆಯ್ತಿರುವಾಗ ಗಂಗಣ್ಣ ಟಪಾಲು ಕೊಟ್ಟು ಸೀಲ್ ಹಾಕಿಸಿಕೊಂಡು ಅದನ್ನು ನೋಡ್ತಾ ಓದ್ತಾ ಮಾರ್ಕೆಟ್ ಒಳಗಿಂದ ಬರುವಾಗ ಬೈತಿದ್ದವರು ಅವನನ್ನು ಸುತ್ತುಗಟ್ಟಿ ಬೈಯುತ್ತಾ ಹೊಡೆಯಲು ಹೋದವರ ಸುತ್ತ ಅಲ್ಲಿ ನಿಂತಿದ್ದವರು ಕುಂತಿದ್ದವರು ಸನ್ಯಾಸಿ ಸಯಿತ ದಡಬಡಾಯಿಸಿ ಹೋದರು. ನಮಗೂ ಗಾಬರಿಯಾಗಿ ಬಗ್ಗಿ ಬಗ್ಗಿ ನೋಡುವಾಗ ನಟರಾಜು ಮೇಷ್ಟ್ರು ಅವರು ಕುಂತುಕೊಳ್ಳುತ್ತಿದ್ದ ಹೆಡ್ ಮೇಷ್ಟ್ರು ಸೀಟು ಹಿಂದಿದ್ದ ಕಿಟಕಿಯೊಳಗಿಂದನೆ ಇದನ್ನೆಲ್ಲ ನಿಂತು ನೋಡ್ತಾ ಕೇಳ್ತ ನಮ್ಕಡೆನೂ ಕಣ್ಣಿಟ್ಟು ನೋಡ್ತ ಇರೋದು ಸ್ಕೂಲು ಬೆಲ್ಲು ಹೊಡೆದಾಗ ನಾವು ಓ.. ಅಂತ ಕೂಗುತ್ತಾ ಓಡಿ ಬರುವಾಗಲೇ ಗೊತ್ತಾಗಿದ್ದು.
-ಎಂ.ಜವರಾಜ್
(ಮುಂದುವರಿಯುವುದು)
[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]