ಅಲೇ ಬುಡಿಯೆರಿಯೇ* ಎಂಬ ಕೂಗು ಕೇಳಿದ ತಕ್ಷಣವೇ ಎಂಟು ಕಾಲುಗಳನ್ನು ಅಟ್ಟಿಸಿಕೊಂಡು ಹೋಗಲಾರಂಭಿಸಿದ ಎರಡು ಕಾಲುಗಳು, ಎತ್ತರೆತ್ತರಕ್ಕೆ ಚಿಮ್ಮುತ್ತಿದ್ದ ನೀರು, ಕಬ್ಬಿಣಕ್ಕೂ ಕಠಿಣತೆಯೊಡ್ಡುವಂತಿದ್ದ ಮೈ ಎಲ್ಲವನ್ನೂ ನೋಡುತ್ತಲೇ ಇದ್ದ ಕೃಷ್ಣಪ್ಪನ ಕಣ್ಣುಗಳು ಕೊನೆಯ ಒಂದು ಬಿಂದುವಿನಲ್ಲಿ ಹೋಗಿ ನೆಲೆಸಿದವು. ತಮ್ಮ ತಮ್ಮ ಕಡೆಯ ಕೋಣಗಳನ್ನು ಕೈಬೀಸಿ ಕರೆಯುತ್ತಿದ್ದವರು ಹಲವರು. ಮತ್ತೀಗ ಕಂಬಳದ ಕರೆಯಾಚೆಗೆ ದೃಷ್ಟಿ ಬದಲಿಸಿದ ಕೃಷ್ಣಪ್ಪನಿಗೆ ಮುಂದೆ ಓಡುತ್ತಿದ್ದ ಎರಡು ಕೋಣಗಳು ಮತ್ತು ಹಿಂದೆ ಅಟ್ಟಿಸುತ್ತಿರುವ ಓಟಗಾರ ಈ ಇಡೀ ದೃಶ್ಯ ಹೊಸದು ಭಾವವೊಂದನ್ನು ಮೂಡಿಸಿತು. ಕಪ್ಪು ಕೋಣ ಎಂದರೆ ಯಮನ ವಾಹನ. ಅದರ ಮೇಲೆ ಯಮ ಕುಳಿತಿದ್ದಾನೆ. ಆದರೆ ಅವನು ಅಗೋಚರ. ಅಂದರೆ ಸದ್ಯದ ಮಟ್ಟಿಗೆ ಆ ಕೋಣವೇ ಯಮ. ಮರಣಕ್ಕೆ ಸಂಕೇತವದು. ಅದನ್ನು ಅಟ್ಟಿಸುತ್ತಿರುವ ಮನುಷ್ಯ. ಅಂದರೆ ಸಾವನ್ನು ದೂರಮಾಡುತ್ತಿರುವ ವ್ಯಕ್ತಿ. ಮರಣವನ್ನು ಗೆದ್ದು ಅಮರತ್ವವನ್ನು ಪಡೆಯಬಯಸುವ ಮನುಷ್ಯನ ಮನಃಸ್ಥಿತಿಯನ್ನು ಕಂಬಳ ಹೇಳುತ್ತಿರುವಂತೆ ಆತನಿಗೆ ಭಾಸವಾಯಿತು. ಹೀಗಂದುಕೊಳ್ಳುವುದಕ್ಕೆ ಪ್ರೇರಣೆ ಕೊಟ್ಟದ್ದು ಆತನ ತತ್ಕಾಲೀನ ಮನಃಸ್ಥಿತಿ.
ಕಂಬಳ ನೋಡುತ್ತಾ ನಿಂತಿದ್ದ ಏಳು ವರ್ಷ ದಾಟಿರದ ಹೆಣ್ಣುಮಗುವೊಂದನ್ನು ಆತ ನೋಡತೊಡಗಿದ. ಆ ಮಗು ಒಂದು ಸಲ ಕಂಬಳ ನೋಡುತ್ತಾ, ಇನ್ನೊಮ್ಮೆ ತನ್ನಮ್ಮನಿಗೆ ಸುತ್ತು ಬರುತ್ತಾ, ಮತ್ತೆ ಅಮ್ಮನ ಕೈ ಹಿಡಿದು ಎಳೆಯುತ್ತಾ, ಇನ್ನಿಲ್ಲದ ಕಾಟ ಕೊಡುತ್ತಾ, ತುಂಟಾಟವಾಡತೊಡಗಿತ್ತು. ಮಗುವಿನ ಬಳಿಗೇ ಹೋದ ಕೃಷ್ಣಪ್ಪ ಮಗುವನ್ನೂ ತಾಯಿಯನ್ನೂ ಸರಿಯಾಗಿ ಗಮನಿಸತೊಡಗಿದ. ನೋಡಿದ ತಕ್ಷಣವೇ ಹೇಳಿಬಿಡಬಹುದಿತ್ತು, ಆ ತಾಯಿ ತೀರಾ ಬಡವಿ. ಕೂಲಿ ಕೆಲಸ ಮಾಡಿಯೋ, ಬೀಡಿ ಕಟ್ಟಿಯೋ ಬದುಕು ನಡೆಸುತ್ತಿದ್ದಿರಬೇಕು. ಈ ಮಗುವನ್ನೇ ಎತ್ತಿಕೊಂಡು ಹೋದರಾದೀತಲ್ಲಾ ಎಂದುಕೊಂಡ ಕೃಷ್ಣಪ್ಪ ಅವಕಾಶಕ್ಕಾಗಿ ಕಾದವನಂತೆ ಅಲ್ಲಿಯೇ ನಿಂತ. ಕಂಬಳದ ಕರೆಯಲ್ಲಿ ಯಾವಾಗ ಅತೀವ ಜಿದ್ದಾಜಿದ್ದಿ ಏರ್ಪಟ್ಟಿತೋ ಆ ತಾಯಿಯ ಗಮನ ಸಂಪೂರ್ಣವಾಗಿ ಕರೆಯ ಕಡೆಗೇ ಹೋಯಿತು. ಮಗು ಅದ್ಯಾವುದೋ ಮಾಯಕದಲ್ಲಿ ತಾಯಿಯ ಸಾನಿಧ್ಯ ಬಿಟ್ಟು ಆಚೆಗೆ ನಡೆಯತೊಡಗಿತು. ತಾಯಿಯ ಕಣ ್ಣಗಿದು ಕಾಣಲಿಲ್ಲ. ಆದರೆ ಅದಕ್ಕೆಂದೇ ಕಾದುಕುಳಿತಿದ್ದ ಕೃಷ್ಣಪ್ಪನಿಗೆ ಕಂಡಿತು. ಆತ ಪ್ಯಾಂಟು ಜೇಬನ್ನು ತಡವಿ ಖಚಿತಪಡಿಸಿಕೊಂಡು ಮೆಲ್ಲನೆ ಮಗುವಿನ ಹಿಂದೆಹಿಂದೆಯೇ ಹೋದ.
*
ಕೃಷ್ಣಪ್ಪ ಬಾಡಿಗೆ ಕಾರು ಓಡಿಸುತ್ತಿದ್ದವ. ವಯಸ್ಸು ನಲುವತ್ತೆರಡು ದಾಟಿತ್ತು. ಊರಿನಲ್ಲಿ ಎಲ್ಲರ ಪಾಲಿಗೂ ಅವನು ಕಾರು ಕೃಷ್ಣಪ್ಪಣ್ಣ. ಲೆಕ್ಕಕ್ಕಿಂತ ಹೆಚ್ಚೇ ಮಾತನಾಡುತ್ತಿದ್ದ ಅವನಿಗೆ ಜನರ ಪರಿಚಯ ಜಾಸ್ತಿ. ಇಂತಹ ಕೃಷ್ಣಪ್ಪನಿಗೆ ಇತ್ತೀಚೆಗೆ ಪರಿಚಯವಾದವನು ಗೋವಿಂದ. ಅವನು ಮಂತ್ರವಾದಿಯಾಗಿದ್ದವನು. ಮೊದಲಿನಿಂದಲೂ ಕೃಷ್ಣಪ್ಪನಿಗೆ ಮಾಟ ಮಂತ್ರ ಮಾಡುವವರೆಂದರೆ ಅದೇನೋ ಕುತೂಹಲ. ಅದೆಲ್ಲಾ ನಿಜವಾಗಿಯೂ ನಡೆಯುತ್ತದಾ ಎಂಬ ಸಂಶಯ ಕೃಷ್ಣಪ್ಪನಲ್ಲಿತ್ತು. ಅದನ್ನು ಗೋವಿಂದನಲ್ಲಿ ಕೇಳಿದರೆ ಅವನು ಮಾಟ ಮಂತ್ರದ ಬಗ್ಗೆ ವಿಪರೀತ ಹೊಗಳಿ ಮಾತನಾಡುತ್ತಿದ್ದ. ಆದರೂ ಕೃಷ್ಣಪ್ಪನಿಗೆ ಅಂಥದ್ದರ ಬಗ್ಗೆ ಅಷ್ಟು ನಂಬಿಕೆ ಹುಟ್ಟಿರಲಿಲ್ಲ.
ಈತ ನಂಬುತ್ತಿಲ್ಲ ಎಂದು ಗೊತ್ತಾದ ಕ್ಷಣವೇ ಗೋವಿಂದ ಆಂಧ್ರದ ರೆಡ್ಡಿಯೊಬ್ಬರ ಕಥೆಯನ್ನು ಹೇಳಿದ್ದ. ಆ ರೆಡ್ಡಿಗೂ ಮಾಟ ಮಂತ್ರದಲ್ಲಿ ನಂಬಿಕೆ ಇರಲಿಲ್ಲವಂತೆ. ಹೆಂಡತಿಯ ಒತ್ತಾಯಕ್ಕೆ ಮಣ ದು ಗೋವಿಂದನ ಬಳಿಗೆ ಬಂದಿದ್ದನಂತೆ. ಅವನಿಗಿದ್ದದ್ದು ಹಣಕಾಸಿನ ಸಮಸ್ಯೆ. ಉದ್ಯಮ ಸರಿಯಾಗಿ ನಡೆಯುತ್ತಿರಲಿಲ್ಲ. ಹಲವು ಕಡೆ ಸಾಲ ಮಾಡಿಕೊಂಡಿದ್ದ. ಇನ್ನು ಸಾಲ ತೀರಿಸಲು ಸಾಧ್ಯವೇ ಇಲ್ಲ, ತಾನೂ ತನ್ನ ಹೆಂಡತಿಯೂ ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೇ ಎಂಬ ಸ್ಥಿತಿಯಲ್ಲಿ ಆ ರೆಡ್ಡಿ ಗೋವಿಂದನ ಬಳಿಗೆ ಬಂದಿದ್ದ. ಕೃಷ್ಣಪ್ಪನಲ್ಲಿ ಗೋವಿಂದ ಹೇಳಿದಂತೆ, ಒಂದೂವರೆ ವರ್ಷದಲ್ಲಿ ಆ ರೆಡ್ಡಿಯ ಕಷ್ಟಗಳೆಲ್ಲಾ ದೂರವಾಗಿ, ಅವನು ಮತ್ತೆ ಶ್ರೀಮಂತನಾಗಿದ್ದ. ಹೀಗಾಗುವುದಕ್ಕೆ ಅವನು ಗೋವಿಂದ ಹೇಳಿದಂತೆ ಕೇಳಿದ್ದೇ ಕಾರಣ ಎನ್ನುವುದು ಗೋವಿಂದನ ಮಾತಾಗಿತ್ತು. ಗೋವಿಂದ ಹೇಳಿದ ಈ ಮಾತುಗಳನ್ನೆಲ್ಲಾ ಕೇಳಿದ ಮೇಲೆಯೂ ಕೃಷ್ಣಪ್ಪನಿಗೆ ಮಾಟ ಮಂತ್ರವನ್ನೆಲ್ಲಾ ನಂಬಬೇಕೆಂದು ಅನಿಸಲಿಲ್ಲ. ಅದೆಲ್ಲಾ ಸುಳ್ಳು ಎನ್ನುವುದು ಅವನ ಅಂತರಂಗದಲ್ಲಿತ್ತು. ಆದರೆ ಗೋವಿಂದ ಮಾತನಾಡಿ ಮಾತನಾಡಿ ಹೆಚ್ಚು ಪರಿಚಯ ಇದ್ದವನಾಗಿ ಬದಲಾಗಿದ್ದರಿಂದ ಅವನೆದುರು ಅದನ್ನು ನೇರವಾಗಿ ಬಾಯಿಬಿಟ್ಟು ಹೇಳುವ ಮನಸ್ಸು ಮಾಡಿರಲಿಲ್ಲ.
*
ಇಂತಹ ಕೃಷ್ಣಪ್ಪ ಮಾಟ ಮಂತ್ರವನ್ನೆಲ್ಲಾ ಅತೀವವಾಗಿ ನಂಬುವ ಸನ್ನಿವೇಶ ಸೃಷ್ಟಿಯಾಯಿತು. ಅದೊಂದು ದಿನ ಬಾಡಿಗೆ ಮುಗಿಸಿ ಬಂದವನು ಕಾರನ್ನು ರಸ್ತೆಬದಿ ನಿಲ್ಲಿಸಿ, ಕಾರಿನೊಳಗಡೆಯೇ ಕುಳಿತಿದ್ದ. ಬಿಸಿಲು ಹೆಚ್ಚಾದ ಕಾರಣದಿಂದಲೋ, ಚಿಂತೆ ಅತಿಯಾದದ್ದರಿಂದಲೋ ಹೃದಯ ಆಘಾತಕ್ಕೆ ಸಿಲುಕಿಕೊಂಡಿತು. ಕಾರಿನೊಳಗಿನಿಂದಲೇ ಕೈಯ್ಯಾಡಿಸುತ್ತಾ ಆಚೀಚೆ ನಿಂತವರನ್ನು ಸಹಾಯಕ್ಕೆ ಕರೆದ. ತನಗಾಗುತ್ತಿರುವುದನ್ನು ಕಷ್ಟಪಟ್ಟು ಹೇಳಿಕೊಂಡ. ಅವರೆಲ್ಲಾ ಸೇರಿಕೊಂಡು ಆತನನ್ನು ಆಸ್ಪತ್ರೆಗೆ ಸಾಗಿಸಿದರು. ಕೃಷ್ಣಪ್ಪನ ಪ್ರಾಣ ಉಳಿಯಿತು ನಿಜ. ಆದರೆ ಆತನಲ್ಲಿ ಮೊದಲಿನ ಉತ್ಸಾಹ ಉಳಿದಿರಲಿಲ್ಲ. ಸ್ವಲ್ಪ ಸಮಯ ಕಾರು ಓಡಿಸಿದ ತಕ್ಷಣ ವಿಪರೀತ ಸುಸ್ತಾಗುತ್ತಿತ್ತು. ದಿನದ ಸಂಪಾದನೆ ಮೊದಲಿಗಿಂತ ಅರ್ಧ ಮಟ್ಟಕ್ಕೆ ಇಳಿದಿತ್ತು.
ಈ ಸಮಯದಲ್ಲಿ ಅವನಲ್ಲಿ ಸುಳಿದ ಚಿಂತೆ ಎಂದರೆ ಅರ್ಧ ಕಟ್ಟಿದ ಮನೆಯನ್ನು ಪೂರ್ತಿ ಮಾಡುವುದು. ಎಂಟು ತಿಂಗಳ ಹಿಂದಿನಿಂದಲೇ ಕೃಷ್ಣಪ್ಪನ ಹೊಸ ಮನೆ ಕಟ್ಟುವ ಕೆಲಸ ಆರಂಭವಾಗಿತ್ತು. ಇದ್ದ ಉಳಿತಾಯದ ಹಣವನ್ನು ನಂಬಿಕೊಂಡು ಆ ಕೆಲಸಕ್ಕೆ ಕೈ ಹಾಕಿದ್ದ. ಹಾಗೊಂದು ವೇಳೆ ಇರುವ ಹಣ ಸಾಲದಿದ್ದರೆ ದುಡಿಯುವ ಶಕ್ತಿಯಿರುವ ತಾನು ಇದ್ದೇನಲ್ಲಾ ಎನ್ನುವುದೇ ಅವನ ಬಲುದೊಡ್ಡ ನಂಬಿಕೆಯಾಗಿತ್ತು. ಆದರೆ ಈಗ ಹೃದಯ ಕೈ ಕೊಟ್ಟಿರುವ ಈ ಸನ್ನಿವೇಶದಲ್ಲಿ ಮನೆ ಪೂರ್ಣವಾದೀತಾ ಎನ್ನುವ ಚಿಂತೆ ಆತನನ್ನು ಕುಕ್ಕಿ ಕುಕ್ಕಿ ತಿನ್ನಲಾರಂಭಿಸಿತು. ಈ ಚಿಂತೆ ಹೆಚ್ಚಾಗುತ್ತಾ ಆಗುತ್ತಾ ಆತ ಖಿನ್ನತೆಯ ಕಪಿಮುಷ್ಠಿಗೆ ಸಿಲುಕಿಕೊಂಡ.
ಇಂತಹ ಒಂದು ದಿನ ಕೃಷ್ಣಪ್ಪನ ಬಳಿ ಬಂದ ಗೋವಿಂದ ಗುಟ್ಟಾಗಿ ಅವನ ಮನದಲ್ಲಿ ತುಂಬಿಬಿಟ್ಟದ್ದು ಅಮರತ್ವದ ಆಕಾಂಕ್ಷೆಯನ್ನು. ನಿನಗೇನೂ ಆಗುವುದಿಲ್ಲ. ನೀನು ಅಲ್ಪಾಯುಷಿಯಂತೂ ಅಲ್ಲ. ನಾನು ಹೇಳಿದಂತೆ ಮಾಡಿದರೆ ನೀನು ಕೇವಲ ಬದುಕುವುದಲ್ಲ, ಅಮರನಾಗುತ್ತಿ. ಆದರೆ ನಾನು ಹೇಳಿದಂತೆ ಮಾಡಲು ನೀನು ಸಿದ್ಧನಾಗಬೇಕು ಅಷ್ಟೇ. ಹಾಗೆ ಮಾಡಿದರೆ ನೀನೂ ಅಮರನಾಗುತ್ತಿ, ನಿನ್ನ ಮನೆಯೂ ಪೂರ್ಣವಾಗುತ್ತದೆ- ಇದು ಗೋವಿಂದ ನುಡಿದ ವಿಚಾರ. ಈ ಮಾತನ್ನು ಗೋವಿಂದನಿಂದ ಕೇಳಿಸಿಕೊಳ್ಳುವ ಸಮಯಕ್ಕೆ ಕೃಷ್ಣಪ್ಪನ ಮನಸ್ಸು ಅದ್ಯಾವ ಬಗೆಯ ತೊಳಲಾಟಕ್ಕೆ ಸಿಲುಕಿಕೊಂಡಿತ್ತೆಂದರೆ ಯಾರಾದರೂ ಅವನ ಬಳಿ ಬಂದು ಬೆಕ್ಕನ್ನು ತೋರಿಸಿ ಅದು ಬೆಕ್ಕಲ್ಲ; ನಾಯಿ ಎಂದರೂ ನಂಬಿಬಿಡುವ ಸ್ಥಿತಿಯಲ್ಲಿದ್ದ. ಈಗ ಆತ ಗೋವಿಂದ ಏನು ಹೇಳಿದರೂ ಮಾಡುವುದಕ್ಕೆ ಸಿದ್ಧನಾಗಿದ್ದ.
ಇಂತಹ ಸ್ಥಿತಿಯಲ್ಲಿ ಗೋವಿಂದ ಕೃಷ್ಣಪ್ಪನಿಗೆ ಹೇಳಿದ್ದಿಷ್ಟು- ಇನ್ನೂ ಮೈ ನೆರೆಯದ ಬಾಲಕಿಯೊಬ್ಬಳನ್ನು ಬಲಿ ಕೊಟ್ಟರೆ ನಿನಗೆ ಅಮರತ್ವ ಸಿದ್ಧಿಸುತ್ತದೆ. ಇನ್ನು ಹತ್ತು ವರ್ಷಗಳಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ. ನಿನ್ನ ಮನೆಯೂ ಪೂರ್ಣವಾಗುತ್ತದೆ. ಅಂತಹ ಬಾಲಕಿಯೊಬ್ಬಳನ್ನು ನೀನು ಹುಡುಕಿ ತರಬೇಕು. ಅಮಾವಾಸ್ಯೆ ದಿನವೇ ಅವಳನ್ನು ಬಲಿ ಕೊಡಬೇಕು.
ಕೃಷ್ಣಪ್ಪ ಈ ಮಾತನ್ನು ಪೂರ್ಣ ನಂಬಿದ. ಗೋವಿಂದನಿಗೆ ಕೈ ತುಂಬಾ ಕಾಸು ಕೊಡುವುದಕ್ಕೂ ಒಪ್ಪಿಕೊಂಡ. ಯಾವುದಾದರೂ ಹುಡುಗಿಯನ್ನು ಅಪಹರಿಸಿ ತಂದು ಕೊಡುವುದಾಗಿಯೂ ಹೇಳಿದ. ಈಗಂತೂ ಅವನಿಗೆ ತಾನು ಅಮರನಾಗಬೇಕಿತ್ತು. ಅದಕ್ಕಾಗಿ ಏನು ಮಾಡುವುದಕ್ಕೂ ಸಿದ್ಧನಾಗಿದ್ದ.
*
ಹೆಣ್ಣುಮಗುವಿನ ಹಿಂದೆಯೇ ಹೋಗುತ್ತಿದ್ದ ಕೃಷ್ಣಪ್ಪ ಎರಡನೇ ಸಲ ಪ್ಯಾಂಟು ಜೇಬನ್ನು ಮುಟ್ಟಿ ಕರವಸ್ತ್ರ ಇರುವುದನ್ನು ಖಚಿತಪಡಿಸಿಕೊಂಡ. ಕ್ಲೋರೋಫಾರ್ಮನ್ನು ಅದಕ್ಕೆ ಸವರಿ ತಂದಿದ್ದ. ಮಗುವಿನ ಪ್ರಜ್ಞೆ ತಪ್ಪಿಸಿ ಎತ್ತಿಕೊಂಡು ಹೋಗುವುದು ಅವನ ಯೋಚನೆ.
ಒಂದಷ್ಟು ದೂರ ಹೋದಂತೆ ಅವನ ಹೆಜ್ಜೆ ದುರ್ಬಲಗೊಳ್ಳತೊಡಗಿತು. ತಾನೇನೋ ತಪ್ಪು ಮಾಡುತ್ತಿದ್ದೇನೆ ಎಂಬ ಭಾವ ಅವನೊಳಗೆ ಜಾಗೃತವಾಗಿತ್ತು. ತನ್ನ ಮುಂದಿದ್ದ ಹೆಣ್ಣುಮಗುವನ್ನೊಮ್ಮೆ ಸರಿಯಾಗಿ ಗಮನಿಸಿದ. ವಿಪರೀತವೆನಿಸುವ ಉಲ್ಲಾಸವನ್ನು ಮೈಗೆ ಆವಾಹಿಸಿಕೊಂಡಿದ್ದ ಆ ಮಗು ಅರಳಿನಿಂತ ಹೂವಿನಂತೆ, ಹೂವಿಂದ ಹೂವಿಗೆ ಹಾರುವ ಮರಿದುಂಬಿಯಂತೆ ಅವನಿಗೆ ಭಾಸವಾಯಿತು. ಅದೆಷ್ಟು ಚಂದವಿದೆ ಮಗು ಎಂದುಕೊಂಡ. ತಾನು ಅಮರನಾಗಬೇಕೆಂದು ಈ ಮಗುವನ್ನು ಬಲಿ ಕೊಡುವುದು ಅದೆಷ್ಟು ಸರಿ ಎಂದು ಆತನ ಮನಸ್ಸು ಮತ್ತೆ ಮತ್ತೆ ಹೇಳತೊಡಗಿತು. ಇಷ್ಟೂ ವರ್ಷ ಒಳ್ಳೆಯ ರೀತಿಯಲ್ಲೇ ಬದುಕಿ ಈಗ ಇಂಥಾ ಕೆಲಸ ಮಾಡಬೇಕಾ? ಎಂದು ತನ್ನಂತರಂಗವನ್ನು ಪ್ರಶ್ನಿಸಿಕೊಂಡವನಿಗೆ ಉತ್ತರವೊಂದು ಸಿಕ್ಕಿತು.
ಅಷ್ಟರಲ್ಲಿ ಆತನ ಮೊಬೈಲ್ಗೆ ವಾಟ್ಸಾಪ್ ಮೆಸೇಜ್ ಒಂದು ಬಂತು. ಅದೇನೆಂದು ತೆರೆದು ನೋಡಿದ. ಯಾವುದೋ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಯಾರೋ ಒಬ್ಬರು ನೇತ್ರದಾನದ ಮಹತ್ವದ ಬಗ್ಗೆ ಬರೆದುಕೊಂಡಿದ್ದರು. ಕಣ್ಣು ದಾನ ಮಾಡಿದವರು ಮುಂದಿನ ಜನ್ಮದಲ್ಲಿ ಕುರುಡರಾಗುತ್ತಾರೆ ಎನ್ನುವುದೇ ಕುರುಡು ನಂಬಿಕೆ ಎಂದೂ ಬರೆದಿದ್ದರು. ಆ ಬರಹದ ಕೊನೆಯಲ್ಲಿದ್ದ ಸಾಲುಗಳು ಕೃಷ್ಣಪ್ಪನ ಮನಸ್ಸಲ್ಲಿ ಶಾಶ್ವತವಾಗಿ ನೆಲೆಗೊಂಡಿತು- ಮನುಷ್ಯನ ದೇಹ ಶಾಶ್ವತವಲ್ಲ. ಆದರೆ ಕಣ್ಣನ್ನು ದಾನ ಮಾಡಿದವರು ತಮ್ಮ ಕಣ್ಣುಗಳ ಮೂಲಕ ಯಾವಾಗಲೂ ಜಗತ್ತನ್ನು ಕಾಣುತ್ತಾರೆ. ಯಾವಾಗಲೂ ಜೀವಂತವಾಗಿರುತ್ತಾರೆ.
ಮಗುವಿನ ಅಳು ಕೃಷ್ಣಪ್ಪನ ಕಿವಿಗೆ ರಾಚಿತು. ಇಷ್ಟರವರೆಗೂ ಭಾರೀ ಖುಷಿಯಲ್ಲಿ ಸಾಗುತ್ತಿದ್ದ ಮಗು ಈಗ ತಾಯಿಯನ್ನು ನೆನಪಿಸಿಕೊಂಡು ಅಳಲಾರಂಭಿಸಿತ್ತು. ಹೋಗಿ ಆ ಮಗುವನ್ನು ಎತ್ತಿಕೊಂಡ ಕೃಷ್ಣಪ್ಪ ಅದರ ತಾಯಿಯ ಬಳಿಗೆ ಕರೆದುಕೊಂಡು ಹೋಗಿಬಿಟ್ಟ. “ಇಲ್ಲೇ ಇತ್ತು. ನನ್ನ ಕೈ ಹತ್ತಿರವೇ ಇತ್ತು. ಎಲ್ಲಿಗೆ ಹೋಯ್ತೋ ಗೊತ್ತಿಲ್ಲ” ಎಂದು ಸುತ್ತಮುತ್ತ ಸೇರಿದ್ದವರಲ್ಲಿ ಹೇಳುತ್ತಾ, ಅಳುಮೋರೆ ಮಾಡಿಕೊಂಡಿದ್ದ ತಾಯಿಗೆ ಸ್ವರ್ಗವೇ ಕೈವಶವಾದಷ್ಟು ಖುಷಿ.
ಅಲ್ಲಿಂದ ಹೊರಟುಬರುತ್ತಾ ಕೃಷ್ಣಪ್ಪ ವಾಟ್ಸಾಪ್ ಬರಹದಲ್ಲಿದ್ದ ನಂಬರ್ಗೆ ಕರೆಮಾಡಿ ಕೇಳತೊಡಗಿದ- “ನನಗೂ ಕಣ್ಣು ದಾನ ಮಾಡಬೇಕೆಂದು ಆಸೆಯಿದೆ. ಹೇಗೆ ಅಂತ ಹೇಳ್ತೀರಾ?”
(*ಕಂಬಳದಲ್ಲಿ ಕೋಣಗಳ ಓಟ ಪ್ರಾರಂಭವಾಗುವಾಗ ಕೋಣಗಳನ್ನು ಓಡಿಸುವವರಿಗೆ ಮತ್ತು ಸೇರಿರುವ ಜನರಿಗೆ ಉತ್ಸಾಹ ಮೂಡಿಸುವ ರೀತಿಯಲ್ಲಿ ಹೀಗೆ ಹೇಳುವ ಕ್ರಮವಿದೆ. ಹುರುಪು ತುಂಬುವ ತುಳು ಭಾಷೆಯ ಕೂಗು ಇದಾಗಿದೆ. ‘ಅದೋ ಕೋಣಗಳನ್ನು ಬಿಟ್ಟರು’ ಎನ್ನುವುದು ಇದರ ಅರ್ಥ.)
–ಡಾ. ವಿಶ್ವನಾಥ ಎನ್ ನೇರಳಕಟ್ಟೆ