ಕೃಷ್ಣಮೂರ್ತಿ ಹನೂರರು “ಚಾಮರಾಜನಗರ ಸೆರಗಿನ ಇಲ್ಲವೇ, ತಿರುಮಕೂಡಲು ನರಸೀಪುರ ಸುತ್ತಮುತ್ತಲಿನ ಬದುಕು ಬವಣೆ ಹೇಳುವ..” ಎಂದು ನನ್ನ ಮೊದಲ ಕಥಾ ಸಂಕಲನದ ಮುನ್ನುಡಿಯಲ್ಲಿ ಬರೆಯುತ್ತಾರೆ. ಇದು ಮೈಸೂರು ಚಾಮರಾಜನಗರ ಜಿಲ್ಲೆಗಳ ಅವಿನಾಭಾವ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಮನೋಸ್ಥಿತಿಯ ದ್ಯೂತಕದ ಬೆಸುಗೆಯಾಗಿದೆ. ಮೈಸೂರು ಜೆಲ್ಲೆಯ ಭಾಗವಾಗಿದ್ದ ಚಾಮರಾಜನಗರ, ರಾಜ್ಯದ ದಕ್ಷಿಣ ಗಡಿ ನೆಲವಾಗಿ ಆಳುವವರಿಂದ ನಿರ್ಲಕ್ಚ್ಯಕ್ಕೆ ಗುರಿಯಾಗಿ ಅಭಿವೃದ್ಧಿಹೀನವಾಗಿ ಅನಾಥವಾದಂತೆ ಕಾಣುತ್ತಿತ್ತು. ಇದನ್ನರಿತ ಸ್ಥಳೀಯ ಜನ ಸಮೂಹದಲ್ಲಿ ಪ್ರಭುತ್ವದ ವಿರುದ್ಧ ಅಸಹನೆಯ ಕಾರಣವಾಗಿ ಅದೊಂದು ಸಮಯ ಓಟ್ ಬ್ಯಾಂಕ್ ರಾಜಕಾರಣವೊ ಅಥವಾ ನಿಜವಾಗಿಯೋ ‘ನಗರ’ ಅಭಿವೃದ್ಧಿಕೋನವೊ ಅಂತೂ ಏನೊ ಒಂದು ನೆಪದಲ್ಲಿ ಮೈಸೂರು ಜಿಲ್ಲೆ ಭಾಗದಿಂದ ಬೇರ್ಪಡಿಸಿ ಚಾಮರಾಜನಗರವೆಂಬೊ ಜಿಲ್ಲೆ ಸೃಷ್ಟಿಯಾಯ್ತು. ಸೃಷ್ಟಿಯಾದರೇನು, ಅಭಿವೃದ್ಧಿ..? ಸದ್ಯ ಪರವಾಗಿಲ್ಲ ಅನ್ನೊ ಚಾಮರಾಜನಗರ ಎಂಬ ಜಿಲ್ಲೆಯಲ್ಲಿ ಅಂತೂ ಇಂತು ನಿಧಾನಕೆ ಜಿಲ್ಲಾ ಕೇಂದ್ರಕ್ಜೆ ಬೇಕಾದ ಆಫೀಸು, ಕಛೇರಿ, ಇನ್ನಿತರ ಸಾಂಸ್ಕೃತಿಕ ವೇದಿಕೆಗಳು ಸೃಷ್ಟಿಯಾದದ್ದು ‘ನಗರ’ಕ್ಕೆ ಒಂದು ಮೆರುಗು ಬಂತು. ಈ ಮೆರುಗಿನ ‘ನಗರ’ ಕ್ಕೆ ಹೊಂದಿಕೊಂಡು ತಮಿಳುನಾಡಿನ ಆಡಳಿತಕ್ಕೆ ಒಳಪಟ್ಟ ಗಾಜನೂರು, ಮುತ್ತುರಾಜ್ ಎಂಬ ರಾಜ್ ಕುಮಾರ್ ರನ್ನು ಈ ನಾಡಿಗೆ ನೀಡಿದ ಕೊಡುಗೆಯ ತವರೂರು. ಈ ಕಾರಣಕ್ಕೆ ಚಾಮರಾಜನಗರ ಮತ್ತು ಜಿಲ್ಲೆ ಕರ್ನಾಟಕದ ಪ್ರವಾಸಿಗರ ವಿಶೇಷ ಆಕರ್ಷಣಾ ಕೇಂದ್ರವೂ ಹೌದು.
ಈ ನಡುವೆ ಚಾಮರಾಜನಗರ ‘ರಂಗವಾಹಿನಿ’ ನನ್ನ “ಮೆಟ್ಟು ಹೇಳಿದ ಕಥಾ ಪ್ರಸಂಗ” ಕಾವ್ಯ ಕೃತಿಗೆ “ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ” ನೀಡಿತು. ಈ ‘ಕಾವ್ಯ ಪ್ರಶಸ್ತಿ’ ಬಗ್ಗೆ ಗೊತ್ತಿತ್ತು. ಆದರೆ ಇದರ ಹಿಂದಿನ ರೂವಾರಿ ಗೊತ್ತಿರಲಿಲ್ಲ. ಹಾಗೆ ಚಾಮರಾಜನಗರದಲ್ಲಿ “ಡಾ.ರಾಜ್ ಕುಮಾರ್ ರಂಗಮಂದಿರ” ಗೊತ್ತಿತ್ತು. ಆದರೆ ಅದರ ನಿರ್ಮಾಣಕ್ಕೆ ಧ್ವನಿ ಎತ್ತಿದ ಹಿಂದಿನ ರೂವಾರಿ ಬಗ್ಗೆ ಗೊತ್ತಿರಲಿಲ್ಲ. ಡಾ.ರಾಜ್ ಕುಮಾರ್ ಅಲ್ಲದೆ ಕವಿಗಳು, ಕಥೆಗಾರರು, ಸಿನಿಮಾ ಕಲಾವಿದರು ಇರುವ ನೆಲವಿದು. ಇರಲಿ,
ನನ್ನ ಫೇಸ್ ಬುಕ್ ಫ್ರೆಂಡ್ ಲಿಸ್ಟಲ್ಲಿ ಕಪ್ಪಗಿನ ಸಾದಾರಣ ಮೈಕಟ್ಟಿನ, ಸಿನಿಮಾ, ಸಂಗೀತ, ನಾಟಕ, ರಾಜಕೀಯ ಮತ್ತು ಸಾಂಸ್ಕೃತಿಕ ವ್ಯಕ್ತಿಗಳ ಒಡನಾಟದ ಜೊತೆಗಿನ ಯಾವಾಗಲೂ ನಗುಮುಖದ ಫೋಟೋ ಪೋಸ್ಟ್ ನೋಡಿ ಲೈಕು ಕಮೆಂಟು ನೀಡುತ್ತಿದ್ದದ್ದು ಬಿಟ್ಟರೆ ಅವರು ಯಾರೆಂದು ನನಗೆ ಗೊತ್ತಿರಲಿಲ್ಲ. ಒಮ್ಮೆ ನನಗೊಂದು ಕಾಲ್ ಬರುತ್ತದೆ. ಆ ಕಾಲ್ ವಾಯ್ಸ್ ಅಭಿನಂದನೆ ಹೇಳುತ್ತದೆ. ಖುಷಿಯಿಂದ ಪರಿಚಯ ವಿನಿಮಯವಾದಾಗಲೇ ಅವರು ಮೇಲ್ಕಾಣಿಸಿದ ರೂವಾರಿ ಸಿ.ಎಂ.ನರಸಿಂಹಮೂರ್ತಿ ಎಂಬುದು!
ಯಾವುದೇ ಪ್ರಶಸ್ತಿ, ಸನ್ಮಾನ, ಸ್ಪರ್ಧೆಯಂಥ ವೇದಿಕೆಗೆ ಮನಸು ಕೊಡದ ನನಗೆ ನಿರೀಕ್ಷೆಯೇ ಇಲ್ಲದ ‘ಕಾವ್ಯ ಪ್ರಶಸ್ತಿ’ ಗೆ ನನ್ನ ಕೃತಿ ಆಯ್ಕೆಯಾಗಿದ್ದನ್ನು ಸ್ವತಃ ‘ರಂಗವಾಹಿನಿ’ ಅಧ್ಯಕ್ಷರಿಂದಲೇ ಕೇಳಿದ್ದು ಅತ್ಯಂತ ಹೆಚ್ಚು ಖುಷಿ ಕೊಟ್ಟ ಸಂಗತಿಯಾಗಿತ್ತು. ಆನಂತರವೇ ನನಗೆ ಸಿ.ಎಂ.ನರಸಿಂಹಮೂರ್ತಿ ಎಂಬ ಮಲೈ ಮಹದೇಶ್ವರ, ಬಿಳಿಗಿರಿರಂಗರು ತಿರುಗಾಡಿದ ಹಸಿರು ಕಾಡುಗಳ ನಡುವಲ್ಲಿ ಅದುವರೆಗೂ ಸುಶ್ರಾವ್ಯವಾಗಿ ಹಾಡುತ್ತಿದ್ದ ‘ಕಪ್ಪು ಹಕ್ಕಿ’ಯೆಂದು ಗೊತ್ತಾಗಿದ್ದು. ಈ ಕಪ್ಪುಹಕ್ಕಿಗೆ ಅಂತರಾಷ್ಟ್ರೀಯ ಕಲಾವಿದ/ಗಾಯಕ ಎಂಬ ಬಿರುದೂ ಅಂಟಿಕೊಂಡು ಬಿಡಿಸಲಾರದ ನಂಟಾಗಿದೆ.
ಸಿ.ಎಂ.ನರಸಿಂಹಮೂರ್ತಿ ಈಗಿನ ‘ಅಂತರಾಷ್ಟ್ರೀಯ ಕಲಾವಿದ’ ಆಗುವ ಮುನ್ನ ತೀರಾ ಕಡು ಬಡತನದ ಹಟ್ಟಿಯಲ್ಲಿ ಹುಟ್ಟಿ ಬೆಳೆದವರು. ಸಣ್ಣದರಿಂದ ನೋಡಿ ಕೇಳಿದ ಅಂಬೇಡ್ಕರ್, ಅವರು ಕೊಟ್ಟ ಕೊಡುಗೆ, ಮತ್ತು ದಸಂಸ ಹೋರಾಟದ ಬಗ್ಗೆ ಗಮನಿಸುತ್ತ ತಾನೂ ಅವರಂತಲ್ಲದಿದ್ದರು ಗುರುತಿಸುವ ವ್ಯಕ್ತಿಯಾಗಿ ಸಮಾಜದಲ್ಲಿ ಬದುಕುವ ಕನಸು ಹೆಮ್ಮರವಾಗುತ್ತ ಹೋಯ್ತು. ಕಷ್ಟಪಟ್ಟ ಓದಿ ಪಿಯುಸಿಯ ನಂತರ ಇಂಜಿಯರಿಂಗ್ ಪದವಿಯತ್ತ ದಾಪುಗಾಲಿಕ್ಕಿದರು. ಬೆಂಗಳೂರಿನಂತ ಬೆಂಗಳೂರು ತೀರಾ ಹಳ್ಳಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಇದ್ದಂತಹ ಕಾಲವದು. ಅಂತ ಮನಸ್ಥಿತಿ ನರಸಿಂಹಮೂರ್ತಿಯವರನ್ನು ಬಿಡದೆ ಅವರ ‘ಹಸಿವಿನ ಮನಸ್ಸು’ ಏನೊ ಹುಡುಕುತ್ತಾ ಹೋಯಿತು. ಇಂಜಿನಿಯರಿಂಗ್ ಪದವಿ ಪಡೆದು ಒಂದೊಳ್ಳೆ ಉದ್ಯೋಗ ಗಿಟ್ಟಿಸಿ ಕೈತುಂಬ ಹಣ ಸಂಪಾದಿಸಬಹುದಿತ್ತು. ಆದರೆ ಅದನ್ನು ಬಿಟ್ಟು ಅವರ ಮನಸ್ಸಲ್ಲಿ ಏನೊ ಸಾಧಿಸುವ, ತೀವ್ರವಾಗಿ ವ್ಯಕ್ತಪಡಿಸುವ ಒಂದು ತರದ ಹಸಿವಿತ್ತು.. ಅದೇ ಅವರೊಳಗಿದ್ದ ಕಲಾವಿದ.
ಚಿಕ್ಕ ವಯಸ್ಸಿನಲ್ಲೇ ನಾಟಕದಂತ ರಂಗದ ಗೀಳು ಅಂಟಿಸಿಕೊಂಡಿದ್ದ ನರಸಿಂಹಮೂರ್ತಿ ಅನೇಕ ರಂಗಾಸಕ್ತರು, ನಾಟಕಕಾರರು, ಕವಿಗಳು, ಸಾಹಿತ್ಯಾಸಕ್ತ ಮನಸ್ಸುಗಳೊಂದಿಗೆ ನಿರಂತರ ನಿಕಟ ಸಂಪರ್ಕ ಇಟ್ಟುಕೊಂಡು ಒಂದೊಂದೇ ಹೆಜ್ಜೆ ಇಡತೊಡಗಿದರು. ಅದುವೆ, ‘ಭಾರತ ಯಾತ್ರಾ ಕೇಂದ್ರ’ ನಡೆಸುತ್ತಿದ್ದ ರಂಗ ತರಬೇತಿ ಶಿಬಿರಾರ್ಥಿಯಾಗಿ ಅವರ ಮನಸ್ಸಿನ ಹಸಿವನ್ನು ನೀಗಿಸುವ ನೆಲೆಯಾಯ್ತು. ಅಲ್ಲಿದ್ದ ಶ್ರೀನಿವಾಸಪ್ರಭು, ಅನಂತನಾಗ್, ಬಸವಲಿಂಗಯ್ಯ, ಮಾಸ್ಟರ್ ಹಿರಣ್ಣಯ್ಯ ತರಹದವರ ಮಾರ್ಗದರ್ಶನದಲ್ಲಿ ರಂಗಾಸಕ್ತಿ ತಳೆದರು. ಅವರ ಮುಂದೆ ತನ್ನ ಮನಸ್ಸಿನೊಳಗಿನ ಏನೊ ಒಂಥರದ ಹಸಿವಿನ ಕನಸಿನ ಹಂಬಲಿಕೆಯನ್ನು ವ್ಯಕ್ತಪಡಿಸುತ್ತಲೇ ಹೋದರು. ಆ ಹಂಬಲಿಕೆ ಬಗ್ಗೆ ಅವರಿಂದ ಸದಾಭಿಪ್ರಾಯವೇ ವ್ಯಕ್ತವಾಯ್ತು.
ಆ ಕನಸಿನ ಕೂಸೇ 2004ರಲ್ಲಿ ಹುಟ್ಟಿದ ‘ರಂಗವಾಹಿನಿ”!
ಇದಕ್ಕು ಮೊದಲು ಕವಿ, ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಅವರ ಮಂಟೇಸ್ವಾಮಿ ಕಥಾಪ್ರಸಂಗ ನಾಟಕಕ್ಕೆ ನೀಲಗಾರರ ಶೈಲಿಯ ಗಾಯಕರ ತಲಾಶ್ ನಡೆಸಲಾಗುತ್ತಿತ್ತು. ಹೀಗೆ ಹುಡುಕುತ್ತಿದ್ದಾಗ ಸಿ.ಎಂ.ನರಸಿಂಹಮೂರ್ತಿ ಎಂಬ ‘ಕಪ್ಪುಹಕ್ಕಿ’ಯ ಗಾಯನ ಶೈಲಿಗೆ ಇಡೀ ನಾಟಕ ತಂಡ ಮೆಚ್ಚುಗೆ ವ್ಯಕ್ತಪಡಿಸಿ ಬೆನ್ಬುತಟ್ಟಿ ಅವಕಾಶ ಕೊಟ್ಟೇ ಬಿಟ್ಟಿತು. ಆ ನಂತರ ಅಲ್ಲಿಂದ ಅವರು ತಿರುಗಿ ನೋಡಿದವರೇ ಅಲ್ಲ.
ನಂತರ ಇವರು ತಮ್ಮದೇ ‘ರಂಗವಾಹಿನಿ’ಯ ವೇದಿಕೆಗೆ ಬರಗೂರು ರಾಮಚಂದ್ರಪ್ಪ, ಕಾಳೇಗೌಡ ನಾಗವಾರ, ರಾಜಶೇಖರ ಕೋಟಿ, ಪಿಚ್ಚಳ್ಳಿ ಶ್ರೀನಿವಾಸ್, ಬಾನಂದೂರು ಕೆಂಪಯ್ಯ ಎಲ್.ಹನುಮಂತಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ,, ಕೃಷ್ಣಮೂರ್ತಿ ಹನೂರು ಸೇರಿದಂತೆ ನಾಡಿನ ಹೆಸರಾಂತ ಲೇಖಕ ಕಲಾವಿದರನ್ನು ಕರೆ ತಂದು ರಂಗವಾಹಿನಿಗೆ ಒಂದು ಕಳೆ ತಂದದ್ದರ ಪರಿಣಾಮ ಅನೇಕ ನಾಟಕ ಪ್ರಯೋಗಗಳು ಜಿಲ್ಲೆಯಾಚೆ ನಾಡಿನಾಚೆ ಪಸರಿಸಿಸಲು ಕಾರಣವಾಗಿಸುವಲ್ಲಿ ಕಪ್ಪುಹಕ್ಕಿ ನರಸಿಂಹಮೂರ್ತಿಯ ಪಾತ್ರ ದೊಡ್ಡದು.
ಮುಖ್ಯವಾಗಿ ನರಸಿಂಹಮೂರ್ತಿಯವರು “ರಂಗವಾಹಿನಿ”ಯಲ್ಲಿ ಕೆರೆಗೆಹಾರ, ಪೋಲಿಕಿಟ್ಟಿ, ಅಲ್ಲೇ ಇದ್ದವರು, ನೀರು, ಆಲಿಬಾಬಾ ಮತ್ತು ನಲವತ್ರು ಮಂದಿ ಕಳ್ಳರು, ಕಾರಿ ಹೆಗ್ಗಡೆ ಕೆಂಚವ್ವ ತರಹದ ನಾಟಕಗಳನ್ನು ಸ್ವಯಂ ನಿರ್ದೇಶಿಸಿ ನಟಿಸಿದ ಕೀರ್ತಿ ಇವರ ಖಾತೆಯಲ್ಲಿದೆ. ಅಲ್ಲದೆ 2010 ರಲ್ಲಿ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದ ಅಕ್ಕ ಸಮ್ಮೇಳನ, 2011ರಲ್ಲಿ ಬೆಳಗಾವಿಯಲ್ಲಿ ಜರುಗಿದ 2ನೇ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ವ್ಯಕದತಪಡಿಸಿದ್ದಾರೆ.
ಇವರಿಗೆ ನಾಟಕ ಮತ್ತು ಗಾಯನ ಕೇವಲ ಹವ್ಯಾಸವಾಗಿರದೆ ಅದು ಸಮಾಜಮುಖಿಯಾಗಿತ್ತು. ಅಸ್ಪೃಶ್ಯ ನಿರ್ಮೂಲನೆ, ಸ್ತ್ರೀ ಶೋಷಣೆ, ಸಾಮಾಜಿಕ ಅಸಮತೋಲನದಂತಹ ವಸ್ತು ವಿಚಾರಗಳ ಮೂಲಕ ಸಮಷ್ಠಿ ಪ್ರಜ್ಞೆಯ ಸ್ವಾಸ್ಥ್ಯ ಮತ್ತು ಸಮ ಸಮಾಜ ನಿರ್ಮಾಣದ ಕಟ್ಟುವಿಕೆಯಲ್ಲಿ ಅವರ ಕಲೆಯ ಕಾರ್ಯಕ್ರಮ ಚಲನಶೀಲವಾಗಿ ಜನರ ಕಣ್ತೆರೆಸುವ ಅರಿವು ಮೂಡಿಸುವಿಕೆಯೇ ಪ್ರಧಾನಧಾರೆಯಾಗಿದೆ.
ಈ ರೂಪದಲ್ಲಿ ಅವರ ಸಮಾಜಮುಖಿ ರಂಗಾಸಕ್ತತೆಯನ್ನು ಗುರುತಿಸಿ ನಾಡಿನ ದೇಶದ ವಿವಿಧ ಸಂಘ ಸಂಸ್ಥೆಗಳಲ್ಲದೆ ಕರ್ನಾಟಕ ಸರ್ಕಾರದ ಗೌರವಕ್ಕು ಪಾತ್ರರಾಗಿ ನೂರಾರು ಪ್ರಶಸ್ತಿ ಪುರಸ್ಕಾರ ಪಡೆದವರಾಗಿದ್ದಾರೆ. ಅವುಗಳಲ್ಲಿ ಕರ್ನಾಟಕ ರಾಜ್ಯ ಯುವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಸಿಜಿಕೆ ಪ್ರಶಸ್ತಿ, ಬೆಂಗಳೂರು ದೂರದರ್ಶನ ಚಂದನ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಂಕರನಾಗ್ ಪ್ರಶಸ್ತಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಡಾ.ಬಾನಂದೂರು ಕೆಂಪಯ್ಯ ಪ್ರಶಸ್ತಿಗಳು ಅವರ ಗರಿಮೆಗೆ ಮುಕುಟಪ್ರಾಯವಾಗಿವೆ.
ಪ್ರಸ್ತುತ ಚಾಮರಾಜನಗರದಲ್ಲಿನ “ಕಾವ್ಯ ಸಂಸ್ಕೃತಿ ಯಾನ ಜನರೆಡೆಗೆ ಕಾವ್ಯ” ಕಾರ್ಯಕ್ರಮದ ರೂವಾರಿಗಳಲ್ಲೊಬ್ಬರಾಗಿದ್ದಾರೆ ಎಂಬುದು ಗಮನಾರ್ಹ.
ಈತರ ಹೊಸ ಹೊಸ ಆಲೋಚನೆಗಳ ಚಲನಶೀಲ ಪ್ರಯೋಗಶೀಲ ಚಟುವಟಿಕೆಗಳ ಮೂಲಕ ಪರಂಪರೆಯನ್ನು ಉಳಿಸಿ ಬೆಳೆಸುವ ಮನೋಸ್ಥಿತಿಯನ್ನು ಇರಿಸಿಕೊಂಡು ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತ ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರವಲ್ಲ ನಾಡಿನ, ದೇಶದ ಸಾಂಸ್ಕೃತಿಕ ರಂಗಕಲಾ ಧ್ಬನಿಯಾಗಿ ಸಿಎಮ್ಮೆನ್ ಎಂಬ ‘ಕಪ್ಪುಹಕ್ಕಿ’ ವೆಬ್ ಮ್ಯಾಗಜಿನಗಳಲ್ಲಿ, ಕಲರ್ ಕಲರ್ ಯೂಟ್ಯೂಬ್ ಚಾನೆಲಗಳಲ್ಲಿ, ನಾಡಿನ ಹೆಸರಾಂತ ಪತ್ರಿಕೆಗಳ ಪುಟ ಪುಟಗಳಲ್ಲಿ – ಸುಶ್ರಾವ್ಯವಾಗಿ ಹಾಡಿದ ನಟಿಸಿದ ನರ್ತಿಸಿದ ರಂಗ ದೃಶ್ಯಗಳು ಜನಮನ ಗೆದ್ದಿವೆ.
-ಎಂ.ಜವರಾಜ್