
ವಿವಶತೆ ಮತ್ತು ಆರ್ತತೆಗಳ ನಡುವೆ ತೂಗುಯ್ಯಾಲೆಯಾಡುವ ಘನಮೌನ
ಪ್ರಭುವೇ,
ಇನ್ನಾದರೂ ಹೊರಗೆ ಕತ್ತಲಾಗಿಸು
ಈ ಬೆಳಕು ದಾರಿ ತೋರಿಸಿದ್ದು ಸಾಕು
ನಡೆದೂ ನಡೆದೂ ಸುಸ್ತಾಗಿದ್ದೇನೆ,
ದಾರಿ ಗುರಿಗಳ ನಡುವೆ ಸಾಗುವಲ್ಲಿ
ಸಾಧನೆಗಳ ಮಿಂಚುಳದ ಬೆಳಕಿನಲ್ಲಿ
ದಾಹ ತೀರದ ಚಪ್ಪಾಳೆಯಲ್ಲಿ
ನಾನಿಲ್ಲದಂತೆ ಬಂಧಿಯಾಗಿದ್ದೇನೆ
ನಿದ್ದೆ ಮತ್ತು ಎಚ್ಚರದ ನಡುವಿನ
ಸ್ಥಿತಿಯೊಂದು ಮೂರ್ತವಾದ ಹಾಗೆ
ಬದುಕು ಎರಡು ಕೊನೆಗಳ ನಡುವೆ
ಸಿಲುಕಿ ಇಲ್ಲವಾದ ಹಾಗೆ,
ಇರುವ ಸ್ಥಿತಿಯಲ್ಲಿ ಕಣ್ಣು ಮುಚ್ಚಲಾಗದಷ್ಟು
ಬದುಕು ಬಟ್ಟ ಬಯಲಾಗಿದೆ
ನಗುವ ಧರಿಸಿ ಸುಮ್ಮನೆ ಒಟ್ಟಿಗಿದ್ದದ್ದು ಸಾಕು
ಕೆಳಗಿಳಿಸಿ ಬಿಡು ಈ ಹೆಗಲ ಭಾರ
ದೂರ ಮಾಡಿಸು; ಕಳಚಿಕೊಳ್ಳುತ್ತೇನೆ
ಸಾಕಿನ್ನು ಒಣಮಾತಿನ ಉಪಚಾರ;
ನನಗೆ ನಾನೊಂದಿಷ್ಟು ಹತ್ತಿರವಾಗುತ್ತೇನೆ
ದೂರುತ್ತಿರಲಿ ಈ ಜಗತ್ತು ಪಲಾಯನಕ್ಕೆ;
ನನ್ನ ಕಾಲ ಕೆಳಗಿನ ಮಣ್ಣು ಬಗೆದಷ್ಟು
ಇನ್ನೂ ಆಳವಾಗಿ ಬೇರೂರುತ್ತೇನೆ.
ಕತ್ತಲಾಗಿಸು ಪ್ರಭುವೇ
ಈ ಜಗತ್ತು ಮತ್ತೆ ಎಚ್ಚರಗೊಳ್ಳುತ್ತಿದೆ.
ಕಣ್ಣು ಮುಚ್ಚಿಕೊಳ್ಳುತ್ತೇನೆ
ಈ ಬೆಳಕು ದಾರಿ ತಪ್ಪಿಸುತ್ತಿದೆ
-ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಜುಲೈ ೫, ೨೦೨೪
‘ಶತಶತಮಾನಗಳಿಂದಲೂ ಕತ್ತಲೆಗೆ ಕೊನೆಯಿರದ ಬಾಯಾರಿಕೆ’ ಎಂಬುದು ಕವಿನುಡಿ. ಬರೀ ನೀರಡಿಕೆ ಮಾತ್ರವಲ್ಲ; ಅಗಾಧ ಹಸಿವು ಕೂಡ. ಅದಕೇ ಬ್ಲ್ಯಾಕ್ ಹೋಲ್ ಅಂದರೆ ಅನಂತ ವಿಶ್ವದ ಎಲ್ಲ ಆಕಾಶಕಾಯಗಳನು ತನ್ನೊಳಗೆ ನುಂಗಿಕೊಳ್ಳುವ ಕಪ್ಪುಕುಳಿಯು ಕತ್ತಲ ಕೂಪ! ಅಸೀಮ ವಿಶ್ವದಲಿ ಶಾಶ್ವತವಾಗಿರುವುದೇ ಈ ಕಾರಿರುಳು. ಬೆಳಕು ಎಂಬುದು ಬರುತ್ತದೆ; ಹೋಗುತ್ತದೆ. ಆದರೆ ಇರುಳು ಯಾವಾಗಲೂ ಇರುತ್ತದೆ. ಇದನ್ನು ಅರ್ಥಮಾಡಿಕೊಂಡೇ ನಮ್ಮ ಪರಂಪರೆಯು ‘ತಮಸೋಮಾ ಜ್ಯೋತಿರ್ಗಮಯ’ ಎಂದದ್ದು. ಪಂಚೇಂದ್ರಿಯಗಳಲ್ಲಿ ಕಣ್ಣಿನಿಂದ ದಕ್ಕಿದ್ದನ್ನು ಅರಿವಾಗಿಸಿಕೊಳ್ಳಲು ಬೆಳಕು ಬೇಕು; ಉಳಿದ ಇಂದ್ರಿಯಗಳಿಗೆ ಬೆಳಕಿನ ಹಂಗಿಲ್ಲ! ಅದಕೆಂದೇ ಕತ್ತಲನು ದೂಷಿಸುವುದರಿಂದ ಯಾವ ಪ್ರಯೋಜನವೂ ಇಲ್ಲ; ದೀಪ ಹಚ್ಚುವುದರಿಂದ ಶತಮಾನಗಳ ಕತ್ತಲನು ಇಲ್ಲವಾಗಿಸಲು ಸಾಧ್ಯ ಎನ್ನುವುದು. ಪುಟ್ಟ ಹಣತೆಯ ಬೆಳಕು ಸಾಕು; ಇಡೀ ಕೋಣೆಯನು ಆವರಿಸಿರುವ ಕತ್ತಲನು ಹೊರ ದಬ್ಬಲು. ಹೀಗಾಗಿಯೇ ಕತ್ತಲನ್ನು ಅಜ್ಞಾನವೆಂದೂ ಬೆಳಕನ್ನೂ ಜ್ಞಾನವೆಂದೂ ಸಂಕೇತಿಸಿದ್ದು. ಆದರೆ ಈ ಬೆಳಕೂ ಹೆಚ್ಚಾಗಬಾರದು! ಆಗ ಅದರ ಪ್ರಖರತೆಗೆ ಕಣ್ಣು ಮುಚ್ಚುತ್ತೇವೆ. ತೀಕ್ಷ್ಣವಾದ ಬೆಳಕೆಂಬುದು ತನ್ನೊಡಲಲ್ಲಿ ಉರಿಯುವ ಬೆಂಕಿಯ ಕೆನ್ನಾಲಿಗೆಯನ್ನು ಹೊರ ಚಾಚಿ ಎಲ್ಲವನೂ ಆಪೋಶನಗೈಯುವುದು. ಜ್ಞಾನವೂ ಹೆಚ್ಚಾಗಬಾರದು! ಅದು ಅಹಮಿಗೆ ಕಾರಣವಾಗಬಾರದು. ಇದನ್ನೇ ರಾಮಕೃಷ್ಣ ಪರಮಹಂಸರು ‘ಜ್ಞಾನದ ಮುಳ್ಳು’ ಎಂದದ್ದು.
ಸಂಪಾದನೆ ಎಂದರೆ ಹಣ ಮತ್ತು ಸಂಪತ್ತಿನದ್ದಲ್ಲ; ಜ್ಞಾನದ್ದು! ಜ್ಞಾನ ಸಂಪಾದನೆಯನ್ನು ನಮ್ಮ ಭರತಭೂಮಿ ಇನ್ನಿಲ್ಲದಂತೆ ವಿವರಿಸಿದೆ, ವ್ಯಾಖ್ಯಾನಿಸಿದೆ ಮತ್ತು ವಿಶ್ಲೇಷಿಸಿದೆ. ‘ಸತ್ಸಂಗತ್ವೇ ನಿಸ್ಸಂಗತ್ವಂ, ನಿಸ್ಸಂಗತ್ವೇ ನಿರ್ಮೋಹತ್ವಂ, ನಿರ್ಮೋಹತ್ವೇ ನಿಶ್ಚಲತತ್ತ್ವಂ, ನಿಶ್ಚಲತತ್ತ್ವೇ ಜೀವನುಕ್ತಿಃ’ ಎಂದಿದ್ದಾರೆ ಶಂಕರಾಚಾರ್ಯರು. ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುವುದು. ಸಂಪಾದನೆ ಎಂದರೆ ಕೇವಲ ಸಂಪತ್ತಿನ ಸಂಗ್ರಹವಲ್ಲ ಎಂಬುದು ಮನವರಿಕೆಯಾಗುವುದು. ಸಜ್ಜನರು ಎಂದರೆ ಜ್ಞಾನದ ನಿಜಸ್ವರೂಪ ಅರಿತವರು. ಹುಟ್ಟಿನಿಂದ ಅಲ್ಲ; ಗುಣದಿಂದ ಸಿರಿವಂತರಾದವರು. ಉಚ್ಚ ವರ್ಣ, ಜಾತಿ, ಕುಲಗಳಲ್ಲಿ ಹುಟ್ಟಿದವರಲ್ಲ; ಬೆಳೆಯುತ್ತ ಬೆಳೆಯುತ್ತ ವ್ಯಕ್ತಿತ್ವವನ್ನು ಹಸನು ಮಾಡಿಕೊಂಡವರು. ಉನ್ನತಾದರ್ಶ ವ್ಯಕ್ತಿತ್ವಗಳನ್ನು ಕಂಡು, ಕೇಳಿ, ಅರಿತು, ಅನುಕರಿಸಲು ಪ್ರಯತ್ನಿಸಿದವರು. ಹೀಗಾಗಿ ಸತ್ಸಂಗವೆಂಬುದು ಏಕಕಾಲಕ್ಕೆ ಸಂಸ್ಕೃತಿ ಪರಂಪರೆಗಳಿಂದ ಕಲಿಯಬೇಕಾದುದನ್ನು ಕಲಿತು ವಿನಯ ವಿವೇಕಗಳನ್ನು ಮೈಗೂಡಿಸಿಕೊಂಡ ಧಾರ್ಮಿಕ, ಆಧ್ಯಾತ್ಮಿಕ ಚಿಂತನಗಳಲ್ಲಿ ಮನ ನೆಟ್ಟವರು ಎಂದು ಅರ್ಥೈಸಬೇಕು. ಇವರಿಂದ ಲೌಕಿಕ ಸಂಪತ್ತಿನ ಚಿಂತೆ ಮಾಯವಾಗಿ, ಒಂದು ಬಗೆಯ ವೈರಾಗ್ಯ ಮೈಗೂಡುವುದು. ಸತ್ಸಂಗವು ನಿಸ್ಸಂಗವನ್ನು ಬೋಧಿಸುತ್ತದೆ; ನಿರ್ಮೋಹವನ್ನು ಕಲಿಸುತ್ತದೆ. ನಿರ್ಮೋಹವಿದ್ದೆಡೆ ನಿಶ್ಚಲತತ್ತ್ವ ನೆಲೆಗೊಳ್ಳುತ್ತದೆ. ಅಜ್ಞಾನದಿಂದಾದ ಮೋಹವು ಹೋದ ಮೇಲೆ ಅಲ್ಲಿ ಶಾಶ್ವತ ಸತ್ಯದ ಜ್ಞಾನ ಉದಯವಾಗುವುದು. ಇಂಥ ಜ್ಞಾನೋದಯವೇ ಜೀವನ್ಮುಕ್ತಿಗೆ ದಾರಿ. ಕೊಟ್ಟ ಕುದುರೆಯನೇರದೆ ಮತ್ತೊಂದು ಕುದುರೆಯ ಬಯಸುವವರೇ ತುಂಬಾ! ಭಗವಂತ ಕೊಟ್ಟಿದ್ದರಲ್ಲಿ ತೃಪ್ತಿ ಪಡದೇ ಹಪಹಪಿಸುವವರೇ ನಿಜವಾದ ಹುಂಬ!! ಎಲ್ಲರೂ ಬದುಕುತ್ತಾರೆ; ಹೇಗೋ ಕಟ್ಟಿಕೊಳ್ಳುತಾರೆ. ಅದಲ್ಲ ಜೀವನ! ತಮ್ಮಿಷ್ಟದಂತೆ ರೂಪಿಸಿಕೊಳ್ಳುವುದು ಜೀವನದ ನಿಜವಾದ ಅರ್ಥ.
ಇದನ್ನೇ ರಾಮಕೃಷ್ಣ ಪರಮಹಂಸರು ‘ಬಂಧಿಸಲ್ಪಟ್ಟ ದೇವರೇ ಮನುಷ್ಯ, ಬಂಧನದಿಂದ ಬಿಡಿಸಿಕೊಂಡ ಮನುಷ್ಯನೇ ದೇವರು’ ಎಂದು ಸುಂದರವಾಗಿ ಹೇಳಿದ್ದಾರೆ. ಲೌಕಿಕ ಬಂಧನಗಳಿಂದ ಬಿಡುಗಡೆ ಹೊಂದುವುದನ್ನೇ ನಾವು ಜೀವನ್ಮುಕ್ತಿ ಎಂದು ತಿಳಿಯಬೇಕು. ಇದಕ್ಕಾಗಿ ಸಾಕ್ಷಿತ್ವವನ್ನು ಅಳವಡಿಸಿಕೊಳ್ಳಬೇಕು. ನನ್ನನೇ ನಾ ಗಮನಿಸುವ ನನ್ನೊಳಗಿನ ಅನ್ಯನನ್ನು ಗುರುತಿಸಿ, ಕೈ ಬಿಡುವ ಪರಿಪಾಠ ಸಾಗಬೇಕು. ಆಗ ಸಾಕ್ಷಿಪ್ರಜ್ಞೆಯು ವೈರಾಗ್ಯವನ್ನು ಅರ್ಥ ಮಾಡಿಸುತ್ತದೆ. ಪರಮಹಂಸರು ಇನ್ನೂ ಮುಂಬರಿದು ಹೇಳುತ್ತಾರೆ: ‘ಅಜ್ಞಾನವೆಂಬ ಮುಳ್ಳನ್ನು ಜ್ಞಾನವೆಂಬ ಮುಳ್ಳಿನಿಂದ ತೆಗೆಯಿರಿ. ಆನಂತರ ಅಜ್ಞಾನದ ಮುಳ್ಳಿನೊಡನೆ ಜ್ಞಾನದ ಮುಳ್ಳನ್ನೂ ಬಿಸಾಡಿರಿ!’ ಎಂಥ ಮಾತಿದು!! ವಿವೇಕ ಎಂಬುದೇನೆಂಬುದನು ಆ ಪದದ ಹಂಗಿಲ್ಲದೆ ಹೇಳುತ್ತದೆ. ಜೊತೆಗೆ ಜ್ಞಾನವೂ ಅಜ್ಞಾನದಷ್ಟೇ ಅಪಾಯಕಾರಿ ಎಂದೂ ಸಾರುತ್ತದೆ.
ನಾವಿಲ್ಲಿ ಗೊಂದಲಕ್ಕೆ ಒಳಗಾಗಬೇಕಾಗಿಲ್ಲ. ಕತ್ತಲನ್ನು ದೂರಬೇಕಾಗಿಲ್ಲ.
ಜ್ಞಾನೋದಯಗೊಂಡವರಿಗೆ ಬೆಳಕು ಮತ್ತು ಕತ್ತಲು ಎರಡೂ ಒಂದೇ! ಇದು ಬರೀ ಜ್ಞಾನೋದಯವಲ್ಲ; ವಿವೇಕೋದಯ ಕೂಡ! ಆಳವಾದ ಕತ್ತಲೆಯನು ಅರ್ಥೈಸಲು ಹೋದಾಗ, ಬದುಕಿಗೆ ಹಲವು ತಿಳಿವಳಿಕೆಗಳು ದೊರಕುತ್ತವೆ. ಇದನ್ನೊಂದು ದೃಷ್ಟಾಂತದಿಂದ ವಿವರಿಸುವುದಾದರೆ, ಕಷ್ಟಪಟ್ಟು, ಇಷ್ಟಪಟ್ಟು ಹಲವು ಅಡೆತಡೆಗಳನ್ನು ದಾಟಿ ಬೆಟ್ಟ ಗುಡ್ಡಗಳ ಮೇಲೆ, ಕಣಿವೆಗಳ ಪಕ್ಕದಲೇ ನಿಸರ್ಗದ ಮಡಿಲಿನಲ್ಲಿ ಸ್ವರ್ಗಶಾಂತಿಯಲಿರುವ ದೇಗುಲಕ್ಕೆ ಹೋಗುತ್ತೇವೆ. ಮತ್ತೂ ಅಲ್ಲಿ ಸರದಿ ಸಾಲಲಿ ನಿಂತು ಸಹನೆಯಿಂದ ಕಾದು, ಗರ್ಭಗುಡಿಯ ಮುಂದೆ ನಿಲ್ಲುತ್ತೇವೆ. ದೇವರ ಮೂರ್ತಿಯನ್ನು ಕಣ್ತುಂಬಿಕೊಂಡು, ಮರುಕ್ಷಣ ಕಣ್ಣು ಮುಚ್ಚಿ ನಮ್ಮೊಳಗೆ ಆವಾಹಿಸಿಕೊಂಡು ಭಕ್ತಿಯಿಂದ ಪ್ರಾರ್ಥಿಸುತ್ತೇವೆ. ‘ಅದೇನು? ಅಷ್ಟು ದೂರ ಸಾಹಸಪಟ್ಟು ಬಂದದ್ದು ಇದಕೇ ಏನು? ಕಣ್ಣು ಮುಚ್ಚಿಕೊಳ್ಳಲು ಬಂದೆವೇನು?’ ಇದರರ್ಥ ಇಷ್ಟೇ: ನಾವು ಅಂತರ್ಮುಖಿಯಾಗಲು ನಮಗೆ ನಾವೇ ಅಭಿಮುಖಿಯಾಗಲು ಕಣ್ಣು ಮುಚ್ಚಿ ಕತ್ತಲೆಯಲಿ ಹುಡುಕಾಡಬೇಕು; ಅಂತರ್ಯಾತ್ರೆಗೆ ಕುಳಿತಲ್ಲೇ ಕಣ್ಣು ಮುಚ್ಚಿದರೆ ಸಾಕು! ಏಕೆಂದರೆ ಬೆಳಕು ನಮಗೆ ಹಲವು ಸಲ ಮೋಸ ಮಾಡಬಹುದು. ನೋಡಿದ್ದೆಲ್ಲಾ ನಿಜವೆಂಬ ಭ್ರಮೆಯನ್ನು ತರಿಸಬಹುದು. ಅದಕಾಗಿಯೇ ಧ್ಯಾನಸ್ಥರಾಗಲು ಕಣ್ಣು ಮುಚ್ಚುತ್ತೇವೆ. ಹೃದಯದ ಬೆಳಕನ್ನು ಅರಸಲು ಹೆಣಗಾಡುತ್ತೇವೆ. ಇದಕ್ಕಾಗಿಯೇ ನಮ್ಮ ಪ್ರಾಚೀನ ಪರಂಪರೆಯು ಕೃಷ್ಣನನ್ನು ಶ್ಯಾಮನೆಂದು ಚಿತ್ರಿಸಿದ್ದು! ಅಂದರೆ ಕತ್ತಲೆಯನ್ನು ಪ್ರೀತಿಸಬೇಕು; ಪ್ರೀತಿಸುವಂತಾಗಬೇಕು. ಇದು ಅಜ್ಞಾನದಿಂದಲ್ಲ; ಜ್ಞಾನದಿಂದಲೇ! ಇಷ್ಟಕೂ ‘ಜ್ಞಾನವೆಂದರೇನು? ಅಜ್ಞಾನದ ಅರಿವು; ಅಜ್ಞಾನವೆಂದರೇನು? ಜ್ಞಾನದ ಮರೆವು!!’ ಇಷ್ಟೇ. ನಾವೆಲ್ಲಾ ಮತ್ತೆ ಮಗುವಾಗಲು ಹೊರಡುವುದೇ ತಾನೇ ಸಾಧನೆ. ಭವಚಕ್ರ ಪೂರ್ಣಗೊಳ್ಳುವುದೇ ಇದರಲ್ಲಿ.
ವಯಸಾದವರು ಮಕ್ಕಳಂತೆಯೇ ತಾನೇ. ಆಗ ಏನೂ ತಿಳಿದಿರಲಿಲ್ಲ; ಈಗ ಎಲ್ಲ ತಿಳಿದೂ ಏನೂ ತಿಳಿಯದಂತೆ ಮರೆತು ಬದುಕುವ ಪ್ರಕ್ರಿಯೆಯೇ ತಾನೇ ಮುಗ್ಧತೆ; ಮುಗ್ಧತೆಯು ಕಾಲಚಕ್ರದೊಂದಿಗೆ ಬೆಸೆದಾಗ ಪ್ರಬುದ್ಧತೆಯಾಗುವುದು. ಅಹಮಿನ ಶೋಧನೆಯಲ್ಲಿ ಅಹಮನೇ ಕಳೆದುಕೊಂಡಾಗ ಉಂಟಾಗುವ ಶೂನ್ಯಸ್ಥಿತಿಯೇ ಪಕ್ವತೆ. ಅದಕೆಂದೇ ಸಂತರು, ದಾರ್ಶನಿಕರು, ತತ್ತ್ವಜ್ಞಾನಿಗಳು ಕತ್ತಲನು ವ್ಯಾಖ್ಯಾನಿಸುವ ಪರಿಯೇ ಬೇರೆ. ನಾವು ಲೌಕಿಕರು ಕತ್ತಲೆಗೆ ಹೆದರುತ್ತೇವೆ; ಬೆಳಕಿಗಾಗಿ ಹಪಹಪಿಸುತ್ತೇವೆ. ಕತ್ತಲೆಗೆ ಹೆದರುವುದೆಂದರೆ ನಮ್ಮೊಳಗೆ ಕಟ್ಟಿಕೊಂಡ ಹಲವು ಭ್ರಮೆಗಳಿಂದ ಹೊರ ಬರಲು ಮನಸು ಮಾಡುವುದಿಲ್ಲ ಎಂದೇ ಅರ್ಥ. ಗಾಢಾಂಧಕಾರವು ಹೇಗೆ ಭೀತಿ ಮೂಡಿಸುವುದೋ ಹಾಗೆಯೇ ಪ್ರಖರ ಬೆಳಕೂ! ನಮಗೆ ಅಸಹನೀಯ! ಎಲ್ಲವೂ ಅಷ್ಟೇ. ‘ಅತಿ ಸರ್ವತ್ರ ವರ್ಜಯೇತ್!’ (ಎಕ್ಸೆಸ್ ಆಫ್ ಎವೆರಿಥಿಂಗ್ ಈಸ್ ಬ್ಯಾಡ್) ಇದೊಂದು ಸಂಸ್ಕೃತ ಶ್ಲೋಕದ ಕೊನೆಯ ಸಾಲು. ಸುಖವಾಗಲೀ ದುಃಖವಾಗಲೀ ಯಾವುದೂ ಹೆಚ್ಚಾಗಬಾರದು ಎಂಬ ‘ಪ್ರಮಾಣ ಪ್ರಜ್ಞೆ’ ಯನ್ನು ತಿಳಿದವರು ಹೇಳಿದ ಬಗೆಯಿದು. ಎರಡು ಅತಿಗಳ ನಡುವಿನ ಮಿತಿಯನ್ನು ಮತಿಯು ಅರಿಯಬೇಕು. ಎಷ್ಟು ಬೇಕೋ ಅಷ್ಟು; ರುಚಿಗೆ ತಕ್ಕಷ್ಟು ಎಂಬ ಮಾತಿನಂತೆ ಬದುಕಿರಬೇಕು. ಆಗ ಅದು ವಿವೇಚನ. ಬೆಳಕೆಂಬುದು ಕತ್ತಲೆಯ ಗೈರು; ಕತ್ತಲೆಯೆಂಬುದು ಬೆಳಕಿನ ಪೈರು! ಈ ಸಮಸ್ಥಿತಿಯೇ ಲೋಕದ ಹದ; ನೆಮ್ಮದಿಯ ಕದ!
ನಾನು ಈ ಹಿನ್ನೆಲೆಯಲ್ಲಿ ಲೇಖನದ ಮೊದಲಿಗೆ ಉಲ್ಲೇಖಿಸಿದ ಕವಿ ರವೀಂದ್ರನಾಯಕರ ವಾಚನೀಯ ಕವಿತೆಯನ್ನು ಪರಿವೀಕ್ಷಿಸಲು ಬಯಸುವೆ.
ಬೆಳಕು ದಾರಿ ತೋರಿಸಿದ್ದು ಸಾಕು; ‘ಕತ್ತಲಾಗಿಸು ಪ್ರಭುವೇ’ ಎಂದು ಆಲಾಪಿಸುವ ಕವನದ ನಿರೂಪಕ ಒಂದು ಹೊಸ ಬಗೆಯ ಸಂಚಲನವನ್ನು ಮೂಡಿಸುತ್ತಾನೆ. ನಡೆದೂ ನಡೆದೂ ಸುಸ್ತಾಗಿರುವ, ದಾರಿ ಗುರಿಗಳ ನಡುವೆ ಸಾಗುವ ಈ ಪ್ರಯಾಣದಲಿ ನಂಬುಗೆ ಕಳೆದುಕೊಂಡಿದ್ದಾನೆ. ಸಾಧನೆಗಳೆಂಬವು ಈಗ ಮಿಂಚುಹುಳದ ಬೆಳಕಾಗಿದೆ; ಹಾರುತ್ತಾ ಹಾರುತ್ತಾ ಅದು ದೂರ ಹೋಗುವಂತೆ. ಎಷ್ಟೆಲ್ಲ ಚಪ್ಪಾಳೆಗಳ ಶಬುದ ಕೇಳಿದರೂ ಅದರ ದಾಹ ತೀರಿಲ್ಲ; ಇನ್ನೂ ಬೇಕೆಂಬ ಕೊರಗಿಗೆ ಕೊನೆಯಿಲ್ಲ! ಇದರ ವರ್ತುಲದಲ್ಲಿ ಆತ ಬಂಧಿಯಾಗಿದ್ದಾನೆ. ಬಾಹ್ಯದಲೇ ಬದುಕಿ ತನ್ನ ಸ್ವಂತಿಕೆಯನು ಕಳೆದುಕೊಂಡಿದ್ದಾನೆ. ಇದು ಅವನಿಗೂ ಗೊತ್ತಾಗಿದೆ. ಅದಕೇ ಈ ನಿವೇದನ ಪರಿಪರಿಯಾಗಿ ಹೊರ ಬರುತ್ತಿದೆ. ‘ಇದೇನಿದು? ಕತ್ತಲೆಗೆ ಹಂಬಲಿಸುವ ಈತನಿಗೆ ತಲೆ ಕೆಟ್ಟಿದೆಯೇ? ಎಲ್ಲರೂ ಬೆಳಕಿಗಾಗಿ ಹಾತೊರೆಯುವಾಗ ಈತ ಅದನ್ನೇ ತೊರೆಯಲು ಚಡಪಡಿಸುವನಲ್ಲ?’ ಎಂದು ಓದುಗರು ಹುಬ್ಬೇರಿಸಬಹುದು. ಇಲ್ಲೇ ಇದರ ಸ್ವಾರಸ್ಯವಿರುವುದು. ಎಂದೂ ತೃಪ್ತವಾಗದ ದಾಹದ ಸ್ವರೂಪವನ್ನು ನಮ್ಮ ಮುಂದಿಡುವುದು. ಬೆಳಕು ಸಾಕು; ಕತ್ತಲೆ ಬೇಕು ಎಂದರೆ ಅದು ಮೂರ್ಖತನವಲ್ಲ; ತನ್ನಾತ್ಮದ ಹುಡುಕಾಟ. ತನ್ನೊಳಗೆ ಪಯಣಿಸುವ ಮಾಟ. ಎಲ್ಲ ಸಾಧಕರಿಗೂ ಒಮ್ಮೆ ಹೀಗನಿಸುವುದು ಸಹಜ. ಒಂದು ಹಂತದಲ್ಲಿ ‘ಇವೆಲ್ಲ ಲೌಕಿಕ; ಸಾಕಿನ್ನು ಇದರ ಸುಖ’ ಎಂದೆನಿಸುವುದು. ಮದುವೆ ಮನೆಯ ಸಡಗರದಲ್ಲಿ ತುಂಬು ಸಂಭ್ರಮದಲೇ ಓಡಾಡಿ, ಎಲ್ಲರನೂ ಸಂತೈಸಿ, ತೃಪ್ತಗೊಳಿಸಿ, ಜವಾಬುದಾರಿಯನ್ನು ಸುಸೂತ್ರದಲೇ ನಿಭಾಯಿಸಿ, ಸವಿನೆನಪುಗಳ ಸಂಗ್ರಹಿಸಿ, ಬಂದ ನೆಂಟರಿಷ್ಟರಿಗೆ ಕೈ ಬೀಸಿ, ಕಳಿಸಿಕೊಟ್ಟ ಮೇಲೆ ನಿಟ್ಟುಸಿರಿಟ್ಟು ಒಂದಷ್ಟು ಹೊತ್ತು ಏಕಾಂತ ಬಯಸಿ, ನಾವಷ್ಟೇ ನಮ್ಮೊಂದಿಗೆ ಇದ್ದು ಬಿಡುವ ಪರಿಯಿದು. ಹೊರಗೆ ಬದುಕಿದ್ದು ಸುಳ್ಳಲ್ಲ; ಅದು ನಟನೆಯೂ ಅಲ್ಲ; ಮುಖವಾಡ ಮೊದಲೇ ಅಲ್ಲ. ಆದರೆ ಅದು ಸಾಕೆನಿಸಿದೆ. ಮತ್ತೆ ಮೊದಲಿನ ಶಾಂತಿ ಬೇಕೆನಿಸಿದೆ. ಎಲ್ಲ ಅಬ್ಬರ, ಗದ್ದಲಗಳು ಮುಗಿದ ಮೇಲೆ ಏರ್ಪಡುವ ಮೊದಲಿನ ನೀರವ ಇದೆಯಲ್ಲ, ಅದರಲಿ ಒಂಥರಾ ವಿಲಕ್ಷಣ ಶಾಂತಿಯಿದೆ. ನಡೆದೂ ನಡೆದೂ ಸುಸ್ತಾದಾಗ, ಈ ಲೋಕದ ಬಾಹ್ಯಾಡಂಬರದಲೇ ಬಂಧಿಯಾದ ಮೇಲೆ ಬೇಕೆನಿಸುವ ಇಂಥ ನಿರಾಳತೆಯನ್ನು ಕವಿಯು ಇಲ್ಲಿ ಕತ್ತಲೆಯೆಂದು ಕರೆದಿದ್ದಾರೆ. ಈ ಕತ್ತಲು ಏನೂ ಕಾಣದ ಕಾರಿರುಳಲ್ಲ; ತನ್ನೊಳಗೇ ಪಯಣಿಸಲು ಅಗತ್ಯವಾಗಿ ಬೇಕಾದ ಹತಾರ; ಅದಕಾಗಿ ನಿರಂತರ ಕಾತರ!
ಕವಿತೆಯಲ್ಲಿ ಐದು ಪ್ಯಾರಾಗಳಿವೆ. ಮೊದಲನೆಯ ಸ್ಟ್ಯಾಂಜಾದಲ್ಲಿ ನಿರೂಪಿತವಾದ ಆಯಾಸವು ಎರಡನೆಯದರಲ್ಲಿ ಬೇಸರವಾಗಿ ಪರಿವರ್ತಿತವಾಗಿದೆ. ಬದುಕಿನ ಸಂತೆ ಸರಕನು ಮಾರುವ ಮತ್ತು ಕೊಳ್ಳುವ ಯಾಂತ್ರಿಕತೆಯಿಂದಾಗಿ ಕಂಗಾಲಾದ ನಿರೂಪಕನಿಗೀಗ ಕಣ್ಣು ಮುಚ್ಚಲೂ ಆಗುತಿಲ್ಲ. ಅಷ್ಟರಮಟ್ಟಿಗೆ ಬಟ್ಟ ಬಯಲಾಗಿ, ಎಲ್ಲವೂ ಖುಲ್ಲಂ ಖುಲ್ಲವಾಗಿ ನಿದ್ರೆ ಮತ್ತು ಎಚ್ಚರದ ನಡುವಿನ ಸ್ಥಿತಿ ಅಂದರೆ ಒಂದು ಬಗೆಯ ವಿವಶತೆ ಮತ್ತು ವಿಕ್ಷಿಪ್ತತೆ ಆವರಿಸಿದೆ. ಎರಡು ಕೊನೆಗಳ ನಡುವೆ ಸಿಲುಕಿ ತನ್ನತನವೇ ಕಾಣೆಯಾಗಿ ದಿಗಿಲಾಗಿದೆ. ‘ತನ್ನಷ್ಟಕೆ ತಾನು, ತನ್ನಿಷ್ಟಕೆ ಬೇಕಾದುದನು’ ಮಾಡುವ ಅಥವಾ ಸುಮ್ಮನಿರುವ ಸಾಧ್ಯತೆಯೇ ಇಲ್ಲದಂತಾಗಿದೆ. ಅತಿ ಜನಪ್ರಿಯತೆ ಅಥವಾ ಅತಿ ಜನಪ್ರೀತಿಯ ದುರಂತಕ್ಕೆ ಸಿಲುಕಿದ ಸೆಲೆಬ್ರಿಟಿಗಳ ಹಣೆಬರೆಹವನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಮೀಡಿಯಾಗಳ ಮಹಾ ಕಪಿಮುಷ್ಟಿಯಲ್ಲಿ ಸಿಲುಕಿ ನರಳುವ ಅಂಥವರ ಖಾಸಗೀ ಬದುಕಿನ ಅನಾವರಣದ ಅನಾಹುತವನ್ನು ಮುನ್ನೆಲೆಗೆ ತಂದುಕೊಳ್ಳಬೇಕು. ಅವರಿಗೂ ಒಂದು ವೈಯಕ್ತಿಕ ಜೀವನವಿದೆ; ಒಂದು ಸ್ಪೇಸಿದೆ, ಸಾಮಾಜಿಕ ಚೌಕಟ್ಟಿನಡಿಯಲ್ಲೇ ಅವರು ತಮಗನಿಸಿದಂತೆ ಬದುಕುವ ಹಕ್ಕುಳ್ಳವರು ಎಂಬುದನ್ನು ಮರೆತ ಅಭಿಮಾನಿಗಳು ಹೋದಲ್ಲಿ ಬಂದಲ್ಲಿ, ಕುಂತಲ್ಲಿ, ನಿಂತಲ್ಲಿ ಸುದ್ದಿ ಮಾಡುವ ಚಾಳಿಯಿಂದ ಏನಾಗಿದೆ? ಅವರ ಸ್ವಂತ ಬದುಕನ್ನು ಅಗೌರವಿಸಿದಂತಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಹೊರಟಾಗ ಬಹುಶಃ ಅವರು ಇನ್ನಾದರೂ ಹೊರಗೆ ಕತ್ತಲಾಗಿಸು ಎಂದಿರಬೇಕು! ಕವಿತೆಯನ್ನು ಹೇಗೂ ನೋಡಬಹುದು ಮತ್ತು ವ್ಯಾಖ್ಯಾನಿಸಬಹುದು. ಜನ-ಪ್ರಿಯತೆಯ ಉತ್ತುಂಗ ತರುವ ಏಕಾಕೀತನ, ಪರಕೀಯತೆ, ಸೋಗಲಾಡೀ ಟೊಳ್ಳುತನ ಮತ್ತು ಅಸಹಾಯಕತೆಗಳ ಹಿನ್ನೆಲೆಯಲ್ಲಿ ಇಂಥ ಉದ್ಗಾರಗಳು ಬಂದರೆ ಅದಕೆ ಅಚ್ಚರಿ ಪಡಬೇಕಿಲ್ಲ.
ಮೂರನೆಯ ಪ್ಯಾರವಂತೂ ಇನ್ನೊಂದಷ್ಟು ಮುಂದಕೆ ಹೋಗಿ, ‘ಇಂಥ ಸಂತೆ ಸರಕು ಹೊತ್ತು ಹೆಗಲು ಭಾರವಾಗಿದೆ, ಕೆಳಗಿಳಿಸಿ ಬಿಡು ಪ್ರಭುವೇ’ ಎಂದು ಕವಿತೆಯ ನಾಯಕನು ಆರ್ತಿಸುತ್ತಾನೆ. ನಗುವ ಧರಿಸಿದ್ದು ಸಾಕು; ಒಣಮಾತಿನ ಉಪಚಾರವೂ ಸಾಕು. ಇದರಿಂದ ನನಗೆ ನಾನೇ ಅಪರಿಚಿತನಾಗಿದ್ದೇನೆ. ಹಾಗಾಗಿ ‘ನನಗೆ ನಾನೊಂದಿಷ್ಟು ಹತ್ತಿರವಾಗುತ್ತೇನೆ’ ಎಂದು ನುಡಿಯುತ್ತಾನೆ. ಅಂದರೆ ನನ್ನೊಳಗೆ ಪ್ರಯಾಣಿಸಲು ಅನುಮತಿಸು ಎಂದು ಬೇಡುತ್ತಾನೆ.
ಇನ್ನು ಆತನಿಗೆ ಲೌಕಿಕದ ಜಂಜಡವಿಲ್ಲ; ಜಂಜಾಟವೂ ಇಲ್ಲ. ಜಗತ್ತು ಏನಾದರೂ ಅನ್ನಲಿ; ಇದು ಪಲಾಯನವಾದ ಎಂದೇ ದೂರಲಿ. ಭಯವಿಲ್ಲ. ಅದು ಏನೇ ಅಂದರೂ ನನ್ನ ಚರಿತ್ರೆ ಬಗೆದರೂ ನನಗೇನೂ ಬಾಧೆಯಿಲ್ಲ. ‘ಕಾಲ ಕೆಳಗಿನ ಮಣ್ಣು ಬಗೆದಷ್ಟೂ ಆಳವಾಗಿ ಬೇರೂರುವುದು’ ನನಗೆ ಗೊತ್ತಿದೆ ಎಂದು ಇದ್ದಕ್ಕಿದ್ದಂತೆ ಅದರ ಪರಿಣಾಮವನ್ನು ಉದ್ಘೋಷಿಸುತ್ತಾನೆ. ಇಡೀ ಕವಿತೆಯ ವಸ್ತುವಿಗೊಂದು ತಿರುವು ಲಭಿಸುತ್ತದೆ; ಅದುವರೆಗೂ ಇದ್ದ ಹಮ್ಬಲ್‌ನೆಸ್ (ವಿನೀತತೆ) ಏಕ್‌ದಂ ಕಾನ್ಫಿಡೆನ್ಸ್ (ವಿಶ್ವಾಸಾತ್ಮಕತೆ) ಆಗಿ ಬದಲಾಗುತ್ತದೆ. ‘ವ್ಯಸ್ತ ಸಮಾಜಕ್ಕೆ ಡೋಂಟ್ ಕೇರ್’ ಆಗುವ ಇಂಥ ನಿರ್ಧಾರ ಮಾತ್ರ ಇಡೀ ಪದ್ಯವನ್ನು ಹೊಸ ಬಗೆಯಲ್ಲಿ ನೋಡುವಂತೆ ಪ್ರೇರಿಸುತ್ತದೆ. ಹೊರಗಿನ ಪ್ರಲೋಭನೆಗಳಿಗೆ ತಲೆ ಕೆಡಿಸಿಕೊಂಡರೆ, ಅದಕೆ ವಶವರ್ತಿಯಾದರೆ ನನಗೆ ಉಳಿಗಾಲವಿಲ್ಲ; ಸ್ವಂತಿಕೆ ಕಳೆದುಕೊಂಡ ಬದುಕಿಗೆ ಅರ್ಥವಿಲ್ಲ ಎಂಬ ಸಂದೇಶವನ್ನು ಸೈಲೆಂಟಾಗಿ ಸಾರುತ್ತದೆ. ಇನ್ನೂ ಆಳವಾಗಿ ಬೇರೂರುವ ಬಯಕೆ ಮತ್ತು ಕನಸುಗಳು ಇದರಿಂದ ವ್ಯಕ್ತ; ಬೇರೂರುತ್ತೇನೆಂಬ ಛಲ ಇದರಿಂದ ಪ್ರಕಟಿತ. ಹಾಗಾಗಿ ಇದು ಪಲಾಯನ ಅಲ್ಲ! ಎಂಬುದನ್ನು ಕವಿತೆಯ ನಿರೂಪಕ ಹೀಗೆ ಪ್ರತಿಪಾದಿಸುತ್ತಾನೆ. ಹೀಗೆ ಇನ್ನಷ್ಟು ಬೇರೂರಲು ನನಗೆ ಒಂದಷ್ಟು ಕತ್ತಲು ಬೇಕಾಗಿದೆ, ಜಗತ್ತು ಮತ್ತೆ ಎಚ್ಚರಗೊಳುವ, ಬೆಳಕು ದಾರಿ ತಪ್ಪಿಸುವ ಮುಂಚೆಯೇ ಕತ್ತಲಾಗಿಸು ಪ್ರಭು ಎಂದು ಕವಿಯು ತಾನು ಹೊರಟ ಬಿಂದುವಿಗೆ ರೀಚ್ ಆಗುತ್ತಾರೆ. ಒಂದು ಸರ್ಕಲು ಪೂರ್ಣಗೊಂಡ ಸಮಾಧಾನವು ಏಕಕಾಲಕೆ ಕವಿಗೂ ಓದುಗರಿಗೂ ಉಂಟಾಗುತ್ತದೆ.
ಹಲವು ನೂರು ಚಲಿಸುವ ಮೋಡಗಳಲ್ಲಿ ಇಂಥದೊಂದು ವಿಭಿನ್ನ ಅನಿಸಿಕೆ ಮತ್ತು ಅನುಭವದ ಕಾರ್ಮೋಡವನ್ನು ಕವಿಯು ಗುರುತಿಸಿ, ಹಿಡಿದು, ಇಳೆಗೆ ಎಳ ತಂದು ಮಳೆ ತರಿಸುವಲ್ಲಿ ಸಫಲರಾಗಿದ್ದಾರೆ. ಆ ಕ್ಷಣ ಮನಸಿಗೆ ಅನಿಸಿದ ಭಾವತುಮುಲವನ್ನು ಯಾವುದೇ ಅಂಜಿಕೆ ಮತ್ತು ಅಳುಕಿಲ್ಲದೇ ಅಭಿವ್ಯಕ್ತಿಸಿದ್ದಾರೆ. ವಿವಶತೆ ಮತ್ತು ಆರ್ತತೆಗಳ ನಡುವೆ ತೂಗುಯ್ಯಾಲೆಯಾಡುವ ಘನಮೌನದ ಜಾಡನ್ನು ಹಿಡಿದು ತಂದು ಕೂರಿಸಿ, ಕಲಾತ್ಮಕಗೊಳಿಸಿದ್ದಾರೆ. ಹೇಗೆ ಬೇಕಾದರೂ ಕವಿತೆಯನ್ನು ಒಗ್ಗಿಸಿಕೊಳ್ಳುವ ಮತ್ತು ಬಗ್ಗಿಸಿಕೊಳ್ಳುವ ವಿಪುಲ ಅವಕಾಶವನ್ನು ಒದಗಿಸಿ ಕೊಟ್ಟಿದ್ದಾರೆ. ಇಂಥ ಸಾಧ್ಯತೆ ಮತ್ತು ಸಂಭವನೀಯತೆಗಳಿರುವುದೇ ನಿಜಕವನ. ಸಾಲುಗಳಲ್ಲಿ ಕವಿಯೇ ಪ್ರಜ್ವಲಿಸಿ, ಪ್ರತಿಫಲಿಸಿದರೂ ಭಾವಸಂವೇದನೆಯ ಯಾತನೆಯೊಂದು ಉದ್ದಕೂ ಪ್ರತಿಬಿಂಬಿತವಾಗಿದೆ. ಉತ್ತಮ ಪುರುಷ ಸರ್ವನಾಮ ಕೊಡುವ (ಬಂಧಿಯಾಗಿದ್ದೇನೆ, ಹತ್ತಿರವಾಗುತ್ತೇನೆ, ಕಣ್ಣು ಮುಚ್ಚಿಕೊಳ್ಳುತ್ತೇನೆ) ಅರ್ಥ ಪರಂಪರೆಯೇ ಈ ಕವಿತೆಯನ್ನು ಕಟ್ಟಿ ಕೊಟ್ಟಿದೆ. ಪ್ರಭುವಿನಲ್ಲಿ ನಿವೇದಿಸುವ ಧಾಟಿಯಿಂದಾಗಿ ಇದೊಂದು ಶುದ್ಧಾತ್ಮ ಕೈಗೊಂಡ ಪ್ರಾಂಜಲ ಮನಸಿನ ಪ್ರಾರ್ಥನೆ, ಬೇಡಿಕೆ ಎಂದಾಗಿದೆ. ಇಲ್ಲದಿದ್ದರೆ ‘ಇದೇನು? ಅಹಮಿನ ವಿಜೃಂಭಣೆ’ ಎನಿಸುತಿತ್ತು. ಸಾಧನೆಗಳನು ಅನುಮಾನಿಸುವ ಸಿನಿಕತನ ಎಂದಾಗಿ ಬಿಡುತಿತ್ತು! ಪ್ರಭುವಿನಲ್ಲಿ ಏನು ಬೇಕಾದರೂ ಪ್ರಾರ್ಥಿಸಬಹುದು; ಬೆಳಕು ಸಾಕು, ಕತ್ತಲೆ ಬೇಕು ಎಂದೂ ವಿನಂತಿಸಬಹುದು ಎಂಬುದನ್ನು ಕವಿತೆ ಧ್ವನಿಸುವ ಪರಿ ವಿಶಿಷ್ಟವಾಗಿದೆ. ಪ್ರಾರ್ಥನೆಯೊಂದು ತನ್ನೊಳಗೇ ಅರಳಿ, ಮಗಮಗಿಸುವ ಧ್ಯಾನಸ್ಥ ಪರಿಮಳಕೆ ಸಜ್ಜಾಗುವ ಸಡಗರವನ್ನು ವಿಭಿನ್ನವಾಗಿ ವಿವರಿಸಿದೆ. ‘ನನಗೇ ನಾನೊಂದಿಷ್ಟು ಹತ್ತಿರವಾಗಲು ಏಕಾಂತ ಬೇಕು; ಲೋಕಾಂತ ಸಾಕು’ ಎಂಬುದೇ ಒನ್‌ಲೈನ್ ಅಜೆಂಡಾ ಆಗಿದೆ.
ಈ ಕವಿತೆಯ ಅನುಸಂಧಾನದ ಸಂದರ್ಭದಲೊಂದು ಪುಟ್ಟ ಸೃಜನಕತೆ: ಅಗಾಧ ಬೆಳಕಿನುಂಡೆಯಾದ ಸೂರ್ಯನೂ ಅಗಾಧ ಕತ್ತಲ ಕೂಪದ ಗವಿಯೂ ಅಕಸ್ಮಾತ್ತಾಗಿ ಭೇಟಿಯಾದರು. ಅದೂ ಇದೂ ಮಾತಾಡುತ್ತಾ ಪರಸ್ಪರ ಮನೆಗೆ ಆಹ್ವಾನಿಸಿಕೊಂಡರು. ಮೊದಲಿಗೆ ತಮ್ಮ ಮೂಲಸ್ವರೂಪವೇ ಬೇರೆ ಬೇರೆಯಾಗಿರುವುದರಿಂದ ಇಬ್ಬರಿಗೂ ಅಪರಿಚಿತತೆ ಕಾಡಿತು. ಆದರೂ ಗೆಳೆತನ ಬೆಳೆದ ಕಾರಣವಾಗಿ ಅತಿಥಿ ಸತ್ಕಾರಕ್ಕೆ ಮನಸ್ಸು ಮಾಡಿದ್ದರು. ಸರಿ, ಮೊದಲು ಸೂರ್ಯನೇ ಗವಿಯ ಮನೆಗೆ ಬಂದನು. ಆ ಗಹ್ವರದ ಮೂಲೆ ಮುಡುಕುಗಳೆಲ್ಲ ಈಗ ಸ್ಪಷ್ಟವಾಗಿ ಕಾಣತೊಡಗಿತು. ಗವಿಯ ಮಡದಿ, ಮಕ್ಕಳೆಲ್ಲಾ ಮುಜುಗರದ ಮುದ್ದೆಯಾದರು. ಯಾವುದೋ ಬೆಂಕಿಯುಂಡೆಯೇ ಮನೆಯೊಳಗೆ ಕಾಲಿಟ್ಟು ಕಣ್ಣು ಕುಕ್ಕುವಂತಾಗಿದ್ದರಿಂದ ಎಂದೂ ಕಾಣದ ಸೂರ್ಯನನ್ನು ಅಚ್ಚರಿ ಮತ್ತು ಆಘಾತಗಳಿಂದ ನೋಡತೊಡಗಿದರು. ಸೂರ್ಯನು ತಂದಿದ್ದ ಬಗೆ ಬಗೆಯ ತಿಂಡಿಪೊಟ್ಟಣಗಳನ್ನು ಮಕ್ಕಳ ಕೈಗೆ ಕೊಡಲು ಸಮೀಪ ಕರೆದರೂ ಅವರಿಗೆ ಹೋಗಲು ಸಂಕೋಚವಾಯಿತು. ಆಗಾಗ ಗವಿಯ ಹೊರಗೆ ಹೋಗಿ, ಊಟಕ್ಕಾಗಿ ಬೇಟಕ್ಕಾಗಿ ದಿನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಮಾತ್ರ ಬೆಳಕನ್ನು ಅನಿವಾರ್ಯವಾಗಿ ಭೇಟಿ ಮಾಡುತಿದ್ದ ಆ ಸಂಸಾರವು ಸೂರ್ಯನ ಬೆಳಕನ್ನು ಹೆಚ್ಚು ಹೊತ್ತು ತಡೆದುಕೊಳ್ಳಲಾಗದೇ ಅಸಹನೀಯತೆ ಅನುಭವಿಸಿತು. ಗವಿರಾಜನಂತೂ ತನ್ನ ಮನೆಯ ಪ್ರತಿ ಇಂಚನ್ನೂ ಕಣ್ಣಾರೆ ಕಾಣುವಂತಾಗಿ ದಿಗ್ಭ್ರಮಿತನಾದನು. ತನ್ನ ಮನೆಯಲ್ಲಿ ತಾನೇ ಅಪರಿಚಿತನಂತಾದನು. ಬಂದ ಅತಿಥಿಗೆ ತನ್ನ ಮನೆಯನ್ನು ಪರಿಚಯಿಸಿ ಕೊಡಲು ಗವಿರಾಜನು ಕರೆದುಕೊಂಡು ಹೋಗಬೇಕಾಗಿಯೇ ಇರಲಿಲ್ಲ. ಸೂರ್ಯನು ಕುಳಿತ ಕಡೆಯೇ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿತ್ತು. ವಿವರಿಸಬೇಕಾದ ಅಗತ್ಯವೂ ಇರಲಿಲ್ಲ. ಏಕೆಂದರೆ ಮನೆಯು ತೀರಾ ಪುಟ್ಟದಿತ್ತು. ಜೀವನಾವಶ್ಯಕ ಸಾಮಗ್ರಿಗಳಷ್ಟೇ ಇದ್ದವು. ಯಾವ ವೈಭವಯುತ ವಸ್ತುಗಳಾಗಲೀ, ಕುರ್ಚಿ ಮೇಜುಗಳಾಗಲೀ ಇರಲಿಲ್ಲ. ಗವಿರಾಜನ ಮಡದಿ ಹಾಸಿದ ಮಂದಲಿಗೆಯಲ್ಲಿ ಸೂರ್ಯನು ಕುಳಿತು ಅಚ್ಚರಿ ಮತ್ತು ಆಸಕ್ತಿಗಳಿಂದ ನೋಡುತ್ತಿದ್ದನು. ಆಗ ಗವಿರಾಜನು ಜೇನು ಬೆರೆಸಿದ್ದ ಹಲಸಿನ ಹಣ್ಣು, ಸುಟ್ಟಿದ್ದ ಒಂದಷ್ಟು ಗೆಡ್ಡೆ-ಗೆಣಸು, ಹೆಚ್ಚಿಟ್ಟ ಹಸಿ ತರಕಾರಿಗಳನ್ನು ತಟ್ಟೆಯಲ್ಲಿ ತಂದಿಟ್ಟು ಜೊತೆಗೆ ಅದರಲ್ಲಿ ಪಾನಕ, ಮಜ್ಜಿಗೆಗಳ ಲೋಟವನಿಟ್ಟು, ಬಡವರ ಮನೆಯ ಆತಿಥ್ಯವನ್ನು ಸ್ವೀಕರಿಸು ಎಂದನು. ಸೂರ್ಯನು ನಮ್ರತೆಯಿಂದ ತಿಂದು ಕುಡಿದು, ನನಗಿದು ಹೊಸ ಪರಿಸರ, ಇಷ್ಟು ದಿವಸ ನನಗೆ ಇಂಥದೊಂದು ಮನೆ ಇರುತ್ತದೆಂದೇ ತಿಳಿದಿರಲಿಲ್ಲವೆಂದು ತಿಳಿಸುತ್ತಾ, ತನ್ನ ಮನೆಗೆ ಕರೆದನು.
ಒಂದು ದಿವಸ ಗವಿರಾಜನೂ ಸೂರ್ಯನ ಮನೆಗೆ ಬಂದನು. ಎಲ್ಲ ಕಡೆಯೂ ಬೃಹತ್ ದೀಪಗಳನ್ನು ಹಚ್ಚಿಟ್ಟಂತೆ ಬೆಳಕು ಹರಡಿತ್ತು. ಆದರೆ ಅಂಥದೇನೂ ನಿಜವಾಗಿ ಇರದೇ, ಸಿಂಹಾಸನದಲ್ಲಿ ಕುಳಿತಿದ್ದ ಸೂರ್ಯದೇವನ ಕಡೆಯಿಂದಲೇ ಎಲ್ಲ ಕಡೆಯೂ ಬೆಳಕು ಹರಡಿ, ತುಂಬಿ ಹೋಗಿತ್ತು. ಅಲ್ಲಿದ್ದ ಏಳೂ ಜನ ಸೇವಕರು ವಿಧ ವಿಧವಾದ ಭಕ್ಷ್ಯ ಭೋಜನಗಳನ್ನು ಸಿದ್ಧಪಡಿಸಿ, ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಬೀಳುತ್ತಾ ಸತ್ಕರಿಸಿದರು. ಸೂರ್ಯನು ಎತ್ತರವಾದ ಗಾದಿಯ ಮೇಲೆ ಕುಳಿತು ಆದೇಶ ನೀಡುತ್ತಿದ್ದನು. ಜೊತೆಗೆ ‘ಇನ್ನೊಂದು ಸ್ವಲ್ಪ ಹಾಕಿಸಿಕೋ, ಇದು ಹೊಸ ಥರದ ಅಡುಗೆ, ರುಚಿ ನೋಡು’ ಎಂದೆಲ್ಲಾ ಗವಿಗೆ ಪ್ರೀತಿಯಿಂದ ಆತಿಥ್ಯ ಮಾಡುತ್ತಿದ್ದನು. ಹೊಟ್ಟೆ ತುಂಬ ಉಂಡು ಸುಸ್ತಾದ ಗವಿರಾಜನ ಕಣ್ಣಿಗೆ ನಿದ್ದೆ ಎಳೆಯುತ್ತಿದ್ದರೂ ಸೂರ್ಯನ ಪಕ್ಕವೇ ಕುಳಿತಿದ್ದರಿಂದ ಆ ಪ್ರಜ್ವಲತೆಗೆ ಜೋಂಪಿಸಲು ಸಹ ಆಗಲಿಲ್ಲ. ಕಣ್ಣು ಕುಕ್ಕುವ ಪ್ರಖರತೆಗೆ ಗವಿರಾಜನು ಹೆಚ್ಚು ಹೊತ್ತು ಇರಲಾಗದೇ ಚಡಪಡಿಸಿದನು. ಎಷ್ಟು ಸಾಧ್ಯವೋ ಅಷ್ಟು ಬೇಗ ತನ್ನ ಮನೆಗೆ ಹೊರಟು ಹೋಗಬೇಕೆಂದು ತೀರ್ಮಾನಿಸಿ, ‘ನನಗೆ ನಿನ್ನ ಅರಮನೆಯ ವೈಭವ ಮತ್ತು ಬೆಳಕು ವಿಪರೀತ ಹಿಂಸೆ ನೀಡುತ್ತಿದೆ, ಕ್ಷಮಿಸು’ ಎಂದು ಕೈ ಮುಗಿದು, ಹೊರಟು ನಿಂತನು. ಸೂರ್ಯನು ನಗುತ್ತಾ, ‘ನೀನು ಹೇಳೀ ಕೇಳೀ ಗವಿರಾಜ, ಕತ್ತಲೆ ನಿನ್ನ ಮನೆಯ ದೇವರು. ನಾನು ಹಾಗಲ್ಲ, ನನಗೆ ನಿನ್ನ ಮನೆ ಇಷ್ಟವಾಯಿತು. ಆದರೆ, ನಾನು ಒಳ ಹೊಕ್ಕಂತೆ ನಿನ್ನ ಮನೆಯ ಸಹಜವಾದ ಪರಿಸರ ಕಣ್ಮರೆಯಾಗುತ್ತದೆ, ಬೆಳಕು ಬಿದ್ದು ಎಲ್ಲವೂ ಬಟಾಬಯಲಾಗುತ್ತದೆ. ನಿನ್ನ ಮನೆ ನನಗಿಷ್ಟವಾದರೂ ನನಗದು ತನ್ನ ಸ್ವಸ್ವರೂಪದಲ್ಲಿ ಲಭಿಸದು; ಆದರೆ ನಿನಗೆ ನನ್ನ ಮನೆಯ ಬೆಳಕು ಕಣ್ಣು ಕುಕ್ಕಿ ಹಿಂಸೆಯಾಗುವುದು. ನಾವಿಬ್ಬರೂ ಸ್ನೇಹಿತರಾದರೂ ನಂನಮ್ಮ ಮೂಲಸ್ವಭಾವ ಮಾತ್ರ ಹೊಂದಿಕೆಯಾಗದು. ಇದೇ ನೋಡು ಸೃಷ್ಟಿ ವೈಚಿತ್ರ್ಯ’ ಎಂದು ಗವಿರಾಜನನ್ನು ತಬ್ಬಿಕೊಂಡು ತನ್ನ ದುಃಖವನ್ನು ತೋಡಿಕೊಂಡನು. ಗವಿರಾಜನು ಕಕಮಕಗೊಂಡು, ಕಲ್ಲವಿಲನಾಗಿ ಏನೂ ಹೇಳಲಾಗದೇ ಅಲ್ಲಿಂದ ಬೇಗ ಬೇಗ ಹೊರಟು, ತನ್ನ ಕತ್ತಲಗೂಡನ್ನು ಸೇರಿ ನಿರುಮ್ಮಳವಾದನು.
ರವೀಂದ್ರ ನಾಯಕರ ಈ ಕವಿತೆಯನು ಆಲಿಸಿದಾಗ ನನ್ನೊಳಗೇ ಈ ಸಾಂಕೇತಿಕ ಕತೆ ಒಡಮೂಡಿತು. ಲೋಕದ ಬಹಿರ್ಭಾವಗಳು ನಮ್ಮ ಸ್ವ-ಭಾವವಾಗದೇ ಹೋದಾಗ ಅಥವಾ ಅಂಥವು ಬೇಡವೆಂಬ ಅ-ಭಾವ ಮೂಡಿದಾಗ ನಾವೆಲ್ಲರೂ ಕತೆಯ ಗವಿರಾಜರೇ ಆಗಿ ಬಿಡುತ್ತೇವೆ. ಸಾಕು ಸೂರ್ಯನ ಸಹವಾಸ! ಎನಿಸಿ ಬಿಡುತ್ತದೆ. ಆ ಕ್ಷಣದ ಅನಿಸುವಿಕೆ ಇದು. ಹಾಗೆಂದು ಸೂರ್ಯನ ಬೆಳಕೇ ಬೇಡವೆಂದಲ್ಲ; ಸದ್ಯಕೆ ಸಾಕಾಗಿದೆ ಎಂದಿದರ ಅಂತರಾಳ. ಅದಕೇ ಕವಿತೆಯಲಿ ಕವಿ ಜೀವಿಸುತ್ತಾನೆ; ಹಾಗೆಂದು ಕವಿಯೇ ಕವಿತೆಯಲ್ಲ! ಈ ಸೂಕ್ಷ್ಮತೆ ಗೊತ್ತಾದರೆ ನಾವು ಕಾವ್ಯವನ್ನು ಪರಿಭಾವಿಸುವ ಧಾಟಿಗಿನ್ನೊಂದು ಆಯಾಮ ಲಭಿಸೀತು. ಬಹುಶಃ ನನ್ನೀ ಬರೆಹ ಅಂಥದೊಂದು ಪ್ರಯತ್ನ.
ಬೆಳಗೆಂಬುದು ಜ್ಞಾನವೆಂದೂ ಇರುಳೆಂಬುದು ಅಜ್ಞಾನವೆಂದೂ ಹೇಳುವ ತಿಳಿವನ್ನು ಪಕ್ಕಕಿಟ್ಟು ನೋಡಿದರೆ ಕತ್ತಲೆಯೇ ಶಾಶ್ವತ; ಬೆಳಕು ತಾತ್ಕಾಲಿಕ! ಈ ಲೋಕಕೆ ಬರುವ ಮುಂಚೆಯೂ ನಮ್ಮದು ಕತ್ತಲ ಬದುಕೇ; ಹೋದ ಮೇಲೂ ಕತ್ತಲೆಯೇ. ಏನೂ ಗೊತ್ತಿಲ್ಲದ, ಏನೂ ಕಾಣದ ಈ ಮಬ್ಬಿನಿಂದ ಮಬ್ಬಿಗೆ ಸಾಗುವ ಬಾಳುವೆಯಲ್ಲಿ ಕಣ್ಣು ಚುಚ್ಚುವ ಬೆಳಕು ನಮ್ಮನ್ನು ಅಧೀರಗೊಳಿಸುವುದು ಸ್ವಾಭಾವಿಕವೇ. ಎಲ್ಲವನೂ ಮರೆಸಿ, ಬೇಕಾದುದನ್ನು ಉಳಿಸಿ, ಮತ್ತೆ ದಿನದ ಚಟುವಟಿಕೆಗೆ ನಮ್ಮನ್ನು ಹದಗೊಳಿಸುವ ನಿದ್ರೆಯೂ ನಮ್ಮ ಕಣ್ಣ ಮುಚ್ಚಿಸಿ ಬರುವ ಕಳ್ಳನೆಂಟನೇ. ಅಂತರ್ಯಾತ್ರೆಯು ಯಾವಾಗಲೂ ಕತ್ತಲೆಯೊಂದಿಗೇ ಶುರುವಾಗುವುದು. ಬೆಳಕಿನ ಬಟಾಬಯಲು ಹೆಚ್ಚಾದರೂ ಸಂವೇದನಾಶೀಲ ಮನಸಿಗೆ ಅಸಹನೀಯ. ಎಲ್ಲರೂ ಬೇಕೆನ್ನುತ್ತೇವೆ; ಎಲ್ಲವೂ ಬೇಕೆನ್ನುತ್ತದೆ ಮಳ್ಳ ಮನಸು. ಆದರೆ ಅದು ದೊರೆತ ಮೇಲೆ ಯಾಕೋ ಬೇಡವೆನಿಸುವುದು; ಸಾಕೆನಿಸುವುದು. ಈ ಜಗತ್ತು ಮತ್ತೆ ಎಚ್ಚರಗೊಂಡು ನನ್ನನು ಗುರುತಿಸುವುದು ಬೇಡ; ಅದಕಾಗಿ ಕತ್ತಲಾಗಿಸು ಎಂದು ಕೊನೆಯಲ್ಲಿ ಬಡಬಡಿಸುವ ಈ ಕವಿತೆಯ ನಿರೂಪಕನು ಈ ಬೆಳಕು ದಾರಿ ತಪ್ಪಿಸುತ್ತಿರುವುದರಿಂದ ಕಣ್ಣು ಮುಚ್ಚಿಕೊಳ್ಳುತ್ತೇನೆ ಎನ್ನುವನು. ಬರೀ ಕಣ್ಣು ಮುಚ್ಚಿಕೊಂಡರೆ ಕತ್ತಲಾಗದು; ನಾನಿರುವ ಸುತ್ತಲ ಪರಿಸರವನ್ನೂ ಕತ್ತಲು ಮಾಡು ಎಂಬುದೇ ಇವನ ಒಳದನಿ. ಇಂಥದೊಂದು ನಿರಾಶೆ ಮತ್ತು ಹತಾಶೆಗಳು ಏತಕಾಗಿ ಬಂದವು? ಯಾಕೆ ಹೀಗೆ ಈ ಬಡಬಡಿಕೆ? ಎಂಬುದನ್ನು ಓದುಗ ಕೇಳಿಕೊಳ್ಳುವ ಬದಲು, ಅಂಥದೊಂದು ಮೂಡ್ ಅನ್ನು ಕವಿತೆಯು ಎಷ್ಟು ಸ್ಪಷ್ಟವಾಗಿ ದಾಖಲಿಸಲು ಹೊರಟಿದೆ? ಎಂಬುದರತ್ತ ಆದ್ಯ ಗಮನ ನೀಡಿದರೆ ‘ನಿರಾಳವೂ ಎಷ್ಟೊಂದು ತೀವ್ರತೆಯಲ್ಲಿ ಅಭಿವ್ಯಕ್ತವಾಗಿದೆ!’ ಎಂದಚ್ಚರಿ ಮೂಡುವುದು. ಬದುಕಿನ ಅಸ್ಪಷ್ಟತೆಯನ್ನು ಸ್ಪಷ್ಟವಾಗಿ ಕವಿತೆಯ ಧಾಟಿಯಲ್ಲಿ ಹೇಳುವುದೂ ಒಂದು ಕಲೆಗಾರಿಕೆ. ಇದು ರವೀಂದ್ರರಿಗೆ ಸಿದ್ಧಿಸಿರುವ ಅಂಗೈನೆಲ್ಲಿ. ಹೀಗಾಗಿಯೇ ಇಲ್ಲಿ ಪಾಡು ಹಾಡಾಗಿಲ್ಲ; ಲಯರಹಿತ ಗದ್ಯವಾಗಿದೆ. ಇದೂ ಒಂದು ಸಂಕೇತವೆ. ‘ನಾದವಿರದ ಬದುಕೇ ಉನ್ಮಾದ ತೋರಬೇಡ’ ಎಂದು ಕವಿ ನಿಸಾರ್ ಅಹಮದರ ಸಾಲುಗಳು ನೆನಪಾಗುತ್ತವೆ. ವಿವಶತೆ ಮತ್ತು ಆರ್ತತೆಗಳ ನಡುವೆ ತೂಗೂಯ್ಯಾಲೆಯಾಡುವ ಘನಮೌನದಿಂಚಿಂಚನ್ನೂ ಕವಿ ದಾಟಿಸಲು ಯತ್ನಿಸಿದ್ದಾರೆ; ‘ಪ್ರಭು’ವಿನಲ್ಲಿ ನಿವೇದಿಸುತ್ತಲೇ ತನ್ನ ಅಸಹನೀಯ ಸಂಘರ್ಷವನ್ನು ಸೈರಣೆಯಿಟ್ಟು ಹಂಚಿಕೊಂಡಿದ್ದಾರೆ.
ಒಟ್ಟಿಗಿದ್ದದ್ದು ಸಾಕು, ಹೆಗಲ ಭಾರ ಕೆಳಗಿಳಿಸು, ಸಾಕಿನ್ನು ಒಣಮಾತಿನ ಉಪಚಾರ, ದಾಹ ತೀರದ ಚಪ್ಪಾಳೆ, ಎರಡು ಕೊನೆಗಳ ನಡುವೆ ಸಿಲುಕಿದ ಬದುಕು, ನಡೆದೂ ನಡೆದೂ ಸುಸ್ತು, ನಾನಿಲ್ಲದಂತೆ ಬಂಧಿ, ದಾರಿ ತಪ್ಪಿಸುತಿರುವ ಬೆಳಕು………..ಮುಂತಾದ ನೇತ್ಯಾತ್ಮಕ ಶಬ್ದನುಡಿಯ ಕಟ್ಟುಗಳಿಂದ ಕವಿ ಏನನ್ನು ಧ್ವನಿಸುತ್ತಿದ್ದಾರೆ? ಎಂದು ಅವಲೋಕಿಸಿದರೆ ಬೇರೊಂದು ಅರ್ಥಕೂ ಜಿಗಿಯಬಹುದು. ಯಾರೊಟ್ಟಿಗೆ ಇವರಿಗೆ ಸಾಕೆನಿಸಿದೆ? ಆ ಜವಾಬ್ದಾರಿಯುತ ಹೆಗಲ ಭಾರ ಯಾವುದಾಗಿರಬಹುದು? ಪ್ರೀತಿ ಮತ್ತು ಕಾರುಣ್ಯವಿಲ್ಲದ ಒಣಮಾತೆಂದು ಗೊತ್ತಾಗಿದ್ದು ಹೇಗೆ? ಅಭಿನಂದಿಸುವ ಚಪ್ಪಾಳೆ ಕೂಡ ಬೇಡವೆನಿಸಿತಲ್ಲ! ಎಷ್ಟು ದೀರ್ಘಕಾಲದ ಪಯಣ ಇದಾಗಿರಬಹುದು? ಒಟ್ಟಿನಲ್ಲಿ ಬೆಳಕು ಇಲ್ಲಿ ದಾರಿ ತಪ್ಪಿಸುತಿರುವುದಂತೂ ನಿಜ. ಅದಕಾಗಿಯೇ ಕತ್ತಲು ಬೇಕೆಂದು ಬಿನ್ನವಿಸಿಕೊಳ್ಳುತ್ತಿದ್ದಾರೆ. ಹೀಗೆ ಅರ್ಥ, ಅಪಾರ ಅರ್ಥಗಳನ್ನು ಹಚ್ಚಿಕೊಂಡು, ಏನೇನೋ ಸಮಜಾಯಿಷಿಗಳಿಂದ ಕವಿತೆಯನ್ನು ಸೀಳುವ ಸಾಧ್ಯತೆಗಳು ಇಲ್ಲಿವೆ. ಆ ಸಾಹಸಕ್ಕೆ ನಾನು ಹೋಗುವುದಿಲ್ಲ. ಏಕೆಂದರೆ ಕವಿತೆಯನ್ನು ನನ್ನ ಮಟ್ಟಿಗೆ ವಿವರಿಸಿಕೊಂಡು ತಪ್ಪು ಮಾಡಿದ್ದೇನೆಂಬ ಅಪರಾಧೀ ಭಾವ ಕಾಡುತ್ತಿರುವ ಹೊತ್ತಲ್ಲಿ ಸುಮ್ಮನೆ ವಾಚಿಸುತ್ತಾ, ಕವಿಯ ಯುಟ್ಯೂಬ್ ವಾಹಿನಿಯಲ್ಲಿ ಶ್ರೀ ಅಭಿಷೇಕ್ ಶೆಟ್ಟಿಯವರು ವಾಚಿಸಿದ್ದನ್ನು ಆಲಿಸುತ್ತಾ ಇದ್ದು ಬಿಡಬೇಕಿತ್ತು. ಆದರೆ ಹಾಗಿದ್ದು ಬಿಡಲು ಆಗದಂತೆ ಸಾಲುಗಳು ಬರೆಸಿಕೊಂಡವು; ಮಾತು ಮನಸಿನಲಿ ಮಥಿಸಿದವು! ಕವಿತೆಯ ಕೊನೆಯ ಸಾಲು: ‘ಈ ಬೆಳಕು ದಾರಿ ತಪ್ಪಿಸುತ್ತಿದೆ’ ಎಂಬುದು ತಪ್ಪೋ ಸರಿಯೋ ಗೊತ್ತಿಲ್ಲ. ಆದರೆ ನನ್ನ ವಿಶ್ಲೇಷಣೆ ಮಾತ್ರ ಖಂಡಿತಾ ದಾರಿಯಲ್ಲ; ದಿಕ್ಕನ್ನೇ ತಪ್ಪಿಸಿಬಿಟ್ಟಿದೆ!! ಹಾಗಾಗಿ ಕ್ಷಮೆಯಿರಲಿ.
ಕವಿತಾ ವಾಚನದ ಯುಟ್ಯೂಬ್ ವಾಹಿನಿಯ ಕೊಂಡಿ ಇಲ್ಲಿದೆ..
-ಡಾ. ಹೆಚ್ ಎನ್ ಮಂಜುರಾಜ್,
ಅನಂತ ಧನ್ಯವಾದಗಳು ಸರ್………….ನಿಮ್ಮ ನಿರಂತರ ಪ್ರೋತ್ಸಾಹನಕೆ ನಾ ಆಭಾರಿ