ವೃತ್ತ ಮೀರುವ ತವಕ – ‘ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ’: ಎಂ. ನಾಗರಾಜ ಶೆಟ್ಟಿ

ವೃತ್ತ ಮೀರುವ ತವಕ – ʼ ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ

ಅಗ್ನಿ ಮಾಂಸದ ಕುಲುಮೆಯಲಿ
ನನ್ನ ಕಾಯಿಸಿ ಬಣ್ಣವ ಮಾಡಿ
ಮರಳಿ ನನ್ನ ರೂಪನೇ ಕಡೆವ
ಏ ನನ್ನಾಳದ ಅಳುವೇ
ನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ?

ಎನ್ಕೆ ಹನುಮಂತಯ್ಯನವರ ಕವಿತೆ ಕೇಳುವ ʼ ನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ? ʼ ಪ್ರಶ್ನೆಯೇ ” ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ ʼ ನಾಟಕದ ಮೂರು ಪಾತ್ರಗಳ ಒಳಗುದಿ. ಚಂದ್ರಶೇಖರ್‌ ಮಾಡಿದ ಬಾರ್‌ ಸಿಂಗರ್‌ ಪಾತ್ರ ತನ್ನ ಹೆಸರನ್ನು ʼಬಾಬ್ ಮಾರ್ಲಿʼ ಎಂದು ಬದಲಾಯಿಸಿಕೊಂಡು ಗುರುತನ್ನೇ (identity) ಕಳೆದುಕೊಳ್ಳುವ ಪ್ರಯತ್ನದಲ್ಲಿದೆ. ಸ್ಟಾಂಡ್‌ ಆಫ್‌ ಕಾಮೆಡಿಯನ್‌ ಆಗುವ ಕನಸಿನ ಭರತನ ಪಾತ್ರಕ್ಕೆ ಊರಲ್ಲಿ ತನ್ನನ್ನು ಕೇಳುವವರಿಲ್ಲವೆಂದು ಗೊತ್ತಿದೆ. ಟೀಚರ್‌ ಆಗಿರುವ ಶ್ವೇತಾ ಅವರದ್ದು ಕುಕ್ಕಿ ತಿನ್ನಲು ಕಾಯುತ್ತಿರುವ ಚಿನ್ನದ ಕೊಕ್ಕಿನ ರಣಹದ್ದುಗಳಿಂದ ಪಾರಾಗುವ ಬಯಕೆ.

ಬೆನ್ನ ಹಿಂದಿನ ಬರಹ – ಗತ- ದಿಂದ ತಪ್ಪಿಸಿಕೊಳ್ಳಲು ನಗರ ಸೇರುವ ಮೂವರೂ ಮಾಂಸ ತಿನ್ನಲ್ಲವೆಂದು ಸುಳ್ಳು ಹೇಳಿ ಒಂದೇ ಕಡೆ ಇರುತ್ತಾರೆ. ಅವರು ಅಗಿದು ಹಾಕಿದ ಮಾಂಸದ ಮೂಳೆಯನ್ನು ಕಡಿಯುತ್ತಿದ್ದ ನಾಯಿಯಿಂದ ತಿಳಿದ ʼ ಜಾತಿ ʼ ಕಾರಣಕ್ಕೆ – ಅಯೋಧ್ಯೆಯ ಪ್ರತಿ಼ಷ್ಠಾಪನೆಯ ಮೊದಲು ಶುಚಿಗೊಳಿಸಲು- ರಾತ್ರಿ ಬೆಳಗಾಗುವುದರೊಳಗೆ ಮನೆ ಖಾಲಿ ಮಾಡುವಂತೆ ಮನೆ ಮಾಲೀಕ ಕಟ್ಟಪ್ಪಣೆ ನೀಡಿರುತ್ತಾನೆ. ಆ ಒಂದು ರಾತ್ರಿಯಲ್ಲಿ ಅವರೆಲ್ಲರ ಗತ ತೆರೆದುಕೊಳ್ಳುತ್ತಾ, ವರ್ತಮಾನವನ್ನು ಛೇಡಿಸುತ್ತಾ, ಚುಚ್ಚುತ್ತಾ, ಕಕ್ಷೆಯನ್ನು ಮೀರಿ ಮಿಲ್ಕಿ ವೇಯಲ್ಲಿ ಗುರುತಿಸಿಕೊಳ್ಳುವ ಬಯಕೆ, ʼಬಾಬ್‌ಮಾರ್ಲಿ ಫ್ರಂ ಕೋಡಿ ಹಳ್ಳಿʼ.

ಜಮೈಕಾದ ಗಾಯಕ ಬಾಬ್‌ ಮಾರ್ಲಿ ಆಫ್ರಿಕಾ ಬಿಟ್ಟು ಲಂಡನ್‌ನಲ್ಲಿ ನೆಲಸಿದ್ದವನು. ಅವನಿಗೂ ಗತದ ತುಡಿಕೆ ಇತ್ತು; ವರ್ಣದ್ವೇಷವನ್ನು ಬಲವಾಗಿ ವಿರೋಧಿಸುತ್ತಿದ್ದ ಬಾಬ್‌ ಮಾರ್ಲಿ ಜಮೈಕಾಕ್ಕೆ ಹೋದಾಗ ಗುಂಡಿನ ದಾಳಿಗೂ ಸಿಲುಕಿದ್ದ. ಬಾಬ್‌ ಮಾರ್ಲಿ ಹಾಡಿನೊಂದಿಗೆ ಆರಂಭವಾಗುವ ನಾಟಕ ಅಸ್ತಿತ್ವವನ್ನು ಕಂಡುಕೊಳ್ಳುವ ತುಳಿಯಲ್ಪಟ್ಟವರ ನೋವನ್ನು ತಿಳಿ ಹಾಸ್ಯದ ಹೊದಿಕೆಯಲ್ಲಿ ಸುತ್ತಿ ಕೊಡುತ್ತದೆ.
ಈ ಇರುವೆಯ ಮೇಲೆ
ನನ್ನ ಭಾರದ ಹೆಜ್ಜೆಯನ್ನಿಟ್ಟೆ
ತುಸು ಕಾಲದ ನಂತರ ತೆಗೆದೆ
ಇರುವೆ ಮತ್ತೆ ಚಲಿಸುತ್ತದೆ
ಏ ಸೂಜಿ ಗಾತ್ರದ
ಜೀವವೇ
ನನ್ನ ಭಾರ ಹೊರುವ ನಿನ್ನ
ಬೆನ್ನಿಗೆ ಶರಣು

ಬೆನ್ನ ಮೇಲಿನ ಹೊರೆ ಇಳಿಸಿಕೊಳ್ಳಲು ಯಾರಿಗೂ ಸಾಧ್ಯವಾಗುವುದಿಲ್ಲ. ಎಲ್ಲರನ್ನೂ ಒಂದಲ್ಲೊಂದು ವೃತ್ತದಲ್ಲಿ ಇರುವಂತೆ ಮಾಡಲಾಗಿದೆ. ಆ ವೃತ್ತಗಳು ಎಲ್ಲಾ ಕಡೆಯೂ ಇವೆ. ನಾಟಕವೂ ವೃತ್ತದೊಳಗೇ ನಡೆಯುತ್ತದೆ. ಈ ವೃತ್ತವನ್ನು ಅಳಿಸಬೇಕು… ಕಷ್ಟವಾದರೂ ಸರಿಯೇ…ಅಳಿಸಬೇಕು!

ಪಾರ್ಸಿಗಳು ಹೊರಹಾಕಿದ ನೋವನ್ನು ಅಂಬೇಡ್ಕರ್‌ ಮಾತುಗಳಲ್ಲೇ ಕೇಳುತ್ತೇವೆ. ಕಾಲ ಬದಲಾಗಿದೆಯೇ? ಈಗಲೂ ಹೊರ ನಡಿ ಎಂದರೆ ಹೋಗಲೇ ಬೇಕು. ಮಾರಮ್ಮನ ಕತೆ ಮತ್ತೊಮ್ಮೆ ಕೇಳಿ: ಓದಿಗಾಗಿ ಬ್ರಾಹ್ಮಣರ ಮನೆ ಸೇರಿಕೊಂಡ ಹುಡುಗ ಪ್ರೀತಿಸಿ ಆ ಮನೆಯ ಹೆಣ್ಣನ್ನು ವರಿಸುತ್ತಾನೆ. ತಾಯಿ ಬಂದಾಗ, ಅಕ್ಕರೆಯಿಂದ ಊಟಕಿಕ್ಕಿದರೆ ಜಾತಿ ತಿಳಿದು ಕೊಲೆಯಾಗುತ್ತಾನೆ. ಕೊಲೆ ಮಾಡಿದವಳು ಮಾರಿ. ಕೊಲೆಯಾದವರೇ ಅವಳಿಗೆ ಬಲಿ! ಅವರಿಂದಲೇ ಆರಾಧನೆ! ಆಗಲೂ ಈಗಲೂ, ಹಾಗೆಯೇ!

ಕೆ ಪಿ ಲಕ್ಷ್ಮಣ್‌ ನಾಟಕಗಳಲ್ಲಿ ಘಟನೆಗಳು, ನಾಟಕೀಯತೆ ನಟನೆಯಿಂದ, ಚಲನೆಯಿಂದ, ಕುಣಿತದಿಂದ, ಅಂಗಭಂಗಿಯಿಂದ ರೂಪುಗೊಳ್ಳುತ್ತವೆ. ಅದು ಪಾತ್ರವಾಗಿ, ಘಟನೆಯಾಗಿ ಪ್ರತ್ಯೇಕಗೊಳ್ಳುವುದಿಲ್ಲ. ಟೀಚರ್‌ ಮಾರಿಯಾಗುತ್ತಾಳೆ, ಮರವಾಗುತ್ತಾಳೆ, ದೇವತೆಯಾಗುತ್ತಾಳೆ. ಹಾಗೇ ಉಳಿದ ಪಾತ್ರಗಳೂ ಪರಕಾಯ ಪ್ರವೇಶ ಮಾಡುತ್ತವೆ. ನಿಶ್ಚಲತೆ ಇಲ್ಲವೇ ಇಲ್ಲ. ಇರುವ ಮೂರು ಪಾತ್ರಗಳು ತಮ್ಮೆಲ್ಲಾ ಸತ್ವವನ್ನು ರಂಗದ ಮೇಲೆ ಬಸಿದು ಹಾಕುತ್ತವೆ. ಲಕ್ಷ್ಮಣ್‌ ನಾಟಕಗಳಲ್ಲಿ ಪಾತ್ರ ಮಾಡುವವರಿಗೆ ಯಾವ ವಿಟಮಿನ್‌ ಸಪ್ಲಿಮೆಂಟ್‌ ತೆಗೆದುಕೊಂಡರೂ ಸಾಕಾಗದು!

ಗಾಢವಾದ, ಹೇಳಲಾಗದ ವಿಷಾದ, ನೋವು ಭವಿಷ್ಯದ ಅತಂತ್ರ ಸ್ಥಿತಿ ನಾಟಕದಲ್ಲಿ ಹೆಜ್ಜೆ, ಹೆಜ್ಜೆಗೂ ಕಾಣಿಸುತ್ತದೆ. ಅದನ್ನು ನಗುವಿನಲ್ಲಿ ಮರೆಸುವ ಪ್ರಯತ್ನವಿದೆ. ಕಚಗುಳಿ ಇಡುವ ಮಾತುಗಳು, ಚಿತ್ರ, ವಿಚಿತ್ರ ಚಲನೆ ವಿಷಾದದೊಟ್ಟಿಗೇ ಸಾಗುತ್ತದೆ. ಇದರಿಂದ ಕತೆಯನ್ನರಸದೇ, ಹಿಡಿದಿಡುವ, ಒಳಗೊಳ್ಳುವ ಪಾತ್ರಗಳಲ್ಲೇ ಗಮನ ಹರಿಸಲು ಸಾಧ್ಯವಾಗುತ್ತದೆ.

ತಿಳಿ ಹಾಸ್ಯದ ಲೇಪನದಲ್ಲೇ ನಡೆಯುವ ನಾಟಕ ಕೊನೆಯಲ್ಲಿ ತೀವ್ರ ವಿಷಾದವನ್ನು ಉಂಟು ಮಾಡುತ್ತದೆ. ಮೈಮರೆತು ಬತ್ತಲೆ ಕುಣಿಯವ ಅವ್ವನನ್ನು ಒಯ್ಯಲು ಕಷ್ಟ ಪಡುವ ಮಗಳು, ಅವ್ವ, ಮಗಳನ್ನು ಕುಕ್ಕಿ ತಿನ್ನ ಬಯಸುವ ಚಿನ್ನದ ಕೊಕ್ಕಿನ ರಣ ಹದ್ದು, ಅದರ ಬೀಜವನ್ನು ಕಿತ್ತು ಬಿಡುವ ತಾಯಿ, ಮತ್ತೆ ಸುತ್ತುವ ರಣ ಹದ್ದುಗಳು…ಟೀಚರ್‌ ಕೊನೆಯಲ್ಲಿ ಹೇಳುವ ಕತೆ ನಮ್ಮನ್ನು ಅಲ್ಲಾಡಿಸಿಬಿಡುತ್ತದೆ.

ಇಷ್ಟೆಲ್ಲ ನೋವಿನಲ್ಲು ಮಿಲ್ಕೀ ವೇಯ ಕನಸು; ಶ್ರೇಷ್ಠರು, ಕನಿಷ್ಠರು ಇರುವ ವರೆಗೆ ಸಂಘರ್ಷ ಇದ್ದೇ ಇರುತ್ತದೆ, ಹೋರಾಟ ಇದ್ದೇ ಇರುತ್ತದೆ, ಯುದ್ಧ ಇದ್ದೇ ಇರುತ್ತದೆ ಎನ್ನುವ ಬಾಬ್‌ ಮಾರ್ಲಿಯ ರೆಗ್ಗೆ ಧಾಟಿಯ ಹಾಡಿನಲ್ಲಿ ಭರವಸೆಯ ಬೆಳಕಿದೆ.

ನಾಟಕ ಪ್ರೇಕ್ಷಕರನ್ನು ಸಂಪೂರ್ಣವಾಗಿ ಆವರಿಸಿಕೊಂಡು ಬಿಡುತ್ತದೆ. ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದೇ ತಿಳಿಯುವುದಿಲ್ಲ. ಕೊನೆಯಲ್ಲಿ ನಿಲ್ಲುವುದೇ ಇಲ್ಲವೇನೋ ಎನ್ನುವಷ್ಟು ಚಪ್ಪಾಳೆಯ ಸರಿಮಳೆಯೇ ಇದನ್ನು ಹೇಳುತ್ತದೆ.

ನಾಟಕವನ್ನು ಒಂದು ಸಲ ನೋಡಿ ಅರ್ಥ ಮಾಡಿಕೊಂಡೆ ಎನ್ನುವುದು ದಾರ್ಷ್ಟ್ಯದ ಮಾತಾದೀತು. ನನಗೆ ಕೆಲವು ವಿಷಯಗಳು ಅರ್ಥವಾಗಲಿಲ್ಲ. ಮಗುವನ್ನು ಶಾಲೆಯಿಂದ ಮನೆಗೆ ಬಲವಂತದಿಂದ ಕರೆದುಕೊಂಡು ಹೋಗುವಾಗ ಬರೆಯಲು ಒತ್ತಾಯಿಸುವುದಿದೆ. ಇದೇನು ಹೇಳುತ್ತದೆ? ಹಾಗೊಂದು ಆಚರಣೆ ಇದೆಯೇ? ಬಾರ್‌ ಸಿಂಗರ್‌ ʼಮಾಂಸ ತಂದು ನೇತಾಕಿ ಬಿಡುತ್ತೇನೆ, ಮತ್ತೆಂದೂ ಅವರು ಯಾರಿಗೂ ಬಾಡಿಗೆ ಕೊಡಬಾರದುʼ ಎಂದು ಅಕ್ರೋಶದ ಮಾತುಗಳನ್ನು ಆಡುತ್ತಾನೆ. ಅದೇ ರೀತಿ ಸಂಘರ್ಷ ಇದ್ದೇ ಇರುತ್ತದೆ, ಹೋರಾಟ ಇದ್ದೇ ಇರುತ್ತದೆ ಎನ್ನುವಾಗ ಸಣ್ಣ ಹೋರಾಟ, ಪ್ರತಿಭಟನೆಯೂ ಇದ್ದಿದ್ದರೆ ಚೆನ್ನಾಗಿತ್ತೇನೋ…

ಮನೆ ಮುಂದೆ ಟಿವಿ ನೋಡುವ ದೃಶ್ಯವನ್ನು ಲಂಬಿಸಿದಂತೆ ಕಂಡಿತು. ಅಗ್ಗದ ಮನರಂಜನೆಯಲ್ಲಿ ಮರುಳು ಮಾಡುವುದನ್ನು ವಿಡಂಬಿಸುವ ಟಿವಿ ಮುಂದಿನ ಹಾಡು, ಕುಣಿತದಲ್ಲಿ ನಟನೆಗೆ ಅವಕಾಶ ಇದ್ದರೂ ದೀರ್ಘ ಎಂದೆನ್ನಿಸಿತು.

ನಾಟಕದ ಕಟ್ಟೋಣದಲ್ಲಿ ಪಠ್ಯದ ನೆರವಿಲ್ಲ. ಒಂದರ ನಂತರ ಒಂದರಂತೆ ಬರವಣಿಗೆಯನ್ನು ಬೆಳೆಸುತ್ತಾ ನಾಟಕದ ಶಿಲ್ಪ ರಚಿಸಲಾಗಿದೆ. ಇದರಿಂದ ನಾಟಕವನ್ನು ಯಾವಾಗ ಹೇಗೆ ಬೇಕಾದರೂ ಬೆಳೆಸಬಹುದು, ತಿದ್ದುಪಡಿ ಮಾಡಬಹುದು. ಆದರೆ ಅದರಲ್ಲಿ ಈಗಿರುವ ನಟಿ, ನಟರೇ ನಟಿಸಬೇಕು ಮತ್ತು ಲಕ್ಷ್ಮಣ್‌ಗೆ ಮಾತ್ರವೇ ಸಾಧ್ಯ ! ಬ್ರೆಕ್ಟ್‌ ನಾಟಕಗಳ ಛಾಯೆ ಇರುವ ಇಂತಾ ನಾಟಕಗಳಲ್ಲಿ ಪಠ್ಯ – ಸ್ಥೂಲ ರೂಪದಲ್ಲಾದರೂ ಇದ್ದರೆ ನಾಟಕ ನೋಡಿ ಮರೆಯುವುದು, ಮತ್ತೊಬ್ಬರು ಮಾಡಲಾಗದಿರುವುದು ತಪ್ಪಬಹುದೇನೋ…

ಅದೇನೇ ಇರಲಿ ಶಾಂತ ರೂಪದ ಲಕ್ಷ್ಮಣ್‌ ಅಪಾರ ಕ್ರಿಯಾಶೀಲತೆ, ಸೃಜನ ಶೀಲತೆ, ಕಲ್ಪನೆಗಳುಳ್ಳ ಅಪರೂಪದ ನಿರ್ದೇಶಕ. ನಾಟಕದಿಂದ ನಾಟಕಕ್ಕೆ ಬೆಳವಣಿಗೆ ತೋರುತ್ತಿರುವ ಅವರ ಬದ್ಧತೆ ಅನನ್ಯ.

ಶ್ವೇತಾ ನುರಿತ ಕಲಾವಿದೆಯಂತೆ ಪ್ರಬುದ್ಧವಾಗಿ ನಟಿಸಿದ್ದಾರೆ. ತನ್ನ ಶಕ್ತಿಯನ್ನೆಲ್ಲಾ ಬಸಿದು ಆಭಿನಯಿಸುವ ಚಂದ್ರಶೇಖರ್‌, ಪಾದರಸದಂತ ಭರತ್‌ ಇವರನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಹಾಡು, ಸಂಗೀತ, ವಾದ್ಯಗಳ ಬಳಕೆ ರಂಗಾನುಭವವನ್ನು ಹೆಚ್ಚಿಸುತ್ತದೆ. ಬೆಳಕಿನ ಸಂಯೋಜನೆ ವೃತ್ತದೊಳಗಿನ ನಾಟಕವನ್ನು ಪರಿಣಾಮಕಾರಿಯಾಗಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನು ಸಾಧ್ಯ ಮಾಡಿದ ʼ ಜಂಗಮ ಕಲೆಕ್ಟಿವ್‌ ʼ ಮತ್ತು ʼನಿರ್ದಿಂಗತʼ ಕ್ಕೆ ಅಭಿನಂದನೆಗಳು.

ಎಂ. ನಾಗರಾಜ ಶೆಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x