ʼ ರೂಪಾಂತರ ʼ- ಹೊಸತರ ಹಂಬಲ: ಎಂ ನಾಗರಾಜ ಶೆಟ್ಟಿ

ಸಿನಿಮಾ ಮುಗಿದು ತೆರೆಯ ಮೇಲೆ ಕ್ರೆಡಿಟ್ಸ್‌ ಬರತೊಡಗುತ್ತದೆ. ಆದರೆ ಪ್ರೇಕ್ಷಕರು ಸೀಟು ಬಿಟ್ಟು ಕದಲುವುದಿಲ್ಲ. ಮಾತಿಲ್ಲದೆ, ಯಾವುದೋ ಗುಂಗಿಗೊಳಗಾದವರಂತೆ ಕೂತಿದ್ದು, ನಿಧಾನವಾಗಿ ಏಳುತ್ತಾರೆ. ಇದು ʼ ರೂಪಾಂತರ ʼ ಸಿನಿಮಾದ ಕುರಿತು ಬಹಳಷ್ಟನ್ನು ಹೇಳುತ್ತದೆ. ಒಂದು ರೀತಿಯಲ್ಲಿ ಪ್ರೇಕ್ಷಕನ್ನು ಆವರಿಸಿಕೊಂಡರೆ, ಇನ್ನೊಂದು ತರದಲ್ಲಿ ಗೊಂದಲʼ. ರೂಪಾಂತರ ʼ ಚಿತ್ರದ ವಿಶೇಷವಿರುವುದೇ ಇಲ್ಲಿ!

ಮೊದಲ- ವಿಚಿತ್ರ, ಕರಾಳ, ವಿಕೃತ- ದೃಶ್ಯದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ತನ್ನನ್ನು ತಾನು ಬಚಾವು ಮಾಡಿಕೊಳ್ಳಲು ಕತೆ ಹೇಳಲು ಶುರುವಿಟ್ಟುಕೊಳ್ಳುತ್ತಾನೆ. ಕತೆ ಚೆನ್ನಾಗಿಲ್ಲದ್ದರೆ ಸಾಯಿಸುತ್ತೇವೆ ಎನ್ನುವ ನಿಬಂಧನೆ ಅವನಿಗೆ ಅನ್ವಯವಾಗುವಂತೆ, ಇಷ್ಟವಾಗದಿದ್ದರೆ ನೋಡದಿರುವ ಹಕ್ಕು ನೋಡುಗನಿಗೂ ಇರುತ್ತದೆ. ಆದ್ದರಿಂದ ಕತೆಯನ್ನು ಸೊಗಸಾಗಿ, ಮೆಚ್ಚುವಂತೆ ಹೇಳಬೇಕಾಗುತ್ತದೆ; ಕಟ್ಟಬೇಕಾಗುತ್ತದೆ. ಆ ಮಟ್ಟಿಗೆ ಸಿನಿಮಾ ಯಶಸ್ವಿಯಾಗಿದೆ. ಕೊನೆಯ ವರೆಗೆ ಏನಾಗುತ್ತದೆ ಎನ್ನವ ಕುತೂಹಲವನ್ನು ಉಳಿಸಿಕೊಂಡೇ ಸಿನಿಮಾ ಸಾಗುತ್ತದೆ.

ಕೋಶದೊಳಗಿರುವ ಹುಳು, ಕೋಶವನ್ನು ಒಡೆದು ಹೊರಬಂದು ಬಣ್ಣಬಣ್ಣದ ಚಿಟ್ಟೆಯಾಗುವುದು ಸಂಕಟದ ಕೆಲಸ. ಕೆಲವು ಚಿಟ್ಟೆಯಾಗದೆ ಹುಳುವಾಗಿಯೇ ಸಾಯುತ್ತವೆ. ಎಷ್ಟು ಹುಳುಗಳು ಸಂಕಟವನ್ನು ಅನುಭವಿಸಿ ಕೋಶಾವಸ್ಥೆಯಿಂದ ಬಿಡುಗಡೆಗೊಂಡು, ರೂಪಾಂತರಗೊಂಡು ಗಗನ ಮುಖಿಯಾಗುತ್ತವೆ? ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಇಂತದ್ದೊಂದು ಅವಸ್ಥೆ ಇದೆ. ಸಹಜವಾಗಿರುವುದೆಲ್ಲ ಅಸಹಜವಾಗಿ, ಜಗತ್ತು ʼ ಹಾಳಾಗಿರುವ ʼ ಕಾಲದಲ್ಲಿ ಚಿಟ್ಟೆಯಾಗುವ ಸಂಕಷ್ಟವನ್ನು ʼ ರೂಪಾಂತರ ʼ ಚಿತ್ರ ನಾಲ್ಕು ಕತೆಗಳ ಮೂಲಕ ಹೇಳುತ್ತದೆ.

ವಿಶೇಷವೆಂದರೆ ಈ ನಾಲ್ಕು ಕತೆಗಳನ್ನು ಪ್ರತ್ಯೇಕವಾಗಿಸದೆ ಒಂದರೊಳಗೊಂದು ಸಮಾಹಿತಗೊಳಿಸಿರುವುದು. ಒಂದು ದೃಶ್ಯದ ನಂತರ ಮತ್ತೊಂದು ತೆರೆದುಕೊಂಡಾಗ ಅದಕ್ಕೇ ಸಂಬಂಧಿಸಿದ್ದೇ ಇರಬೇಕು ಎಂದುಕೊಳ್ಳುವ ಜಾಣ ಪ್ರೇಕ್ಷಕ ಕ್ರಮೇಣ ಭಿನ್ನ ಕತೆಗಳನ್ನು ಗುರುತಿಸುತ್ತಾನೆ. ಇವನ್ನು ಅಚ್ಚುಕಟ್ಟಾಗಿ, ಗೊಂದಲಕ್ಕೆ ಅವಕಾಶವಿಲ್ಲದಂತೆ ರಚಿಸಲಾಗಿದೆ.

ಬೀದಿ ರೌಡಿಯ ಉದ್ರೇಕದ ನಡವಳಿಕೆ, ವಯಸ್ಸಾದ ದಂಪತಿ ದುಮ್ಮಾನ, ಚಟಕ್ಕೆ ಬಲಿಯಾದ ಹುಡುಗನ ತುಡುಗು ಬುದ್ಧಿ, ಪೋಲಿಸನ ಅಂತಃಕರಣ ನಾಲ್ಕು ಬೇರೆ, ಬೇರೆ ಕತೆಗಳಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತವೆ. ಇವೆಲ್ಲವೂ ಎಲ್ಲಿ ಮುಟ್ಟುತ್ತವೆ ಎಂದು ಪ್ರೇಕ್ಷಕ ಕಾತರಿಸುವಾಗ, ಅದನ್ನೊಂದು ಬಂಧದಲ್ಲಿ ಹಿಡಿದಿಡಲು ನಿರ್ದೇಶಕ ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಿದ್ದು ಸ್ಟಷ್ಟವಾಗಿಯೇ ಕಾಣುತ್ತದೆ. ಚಿತ್ರದ ಕೂಡು- ಕಳೆ ಇಲ್ಲೇ ಇದೆ. ಪ್ರತಿಯೊಂದು ಎಳೆಯನ್ನೂ ಸೂಕ್ಷ್ಮವಾಗಿ, ಪ್ರೇಕ್ಷಕನನ್ನು ಆವರಿಸುವಂತೆ, ಹಿತ- ಅಹಿತ ಭಾವಗಳೆರಡೂ ಉಂಟಾಗುವಂತೆ ಕಟ್ಟಲಾಗಿದೆ. ಅವನ್ನೆಲ್ಲ ಸೂತ್ರದಲ್ಲಿ ಪೋಣಿಸಲು ಮೊದಲ, ಕೊನೆಯ ಮಾತುಗಳು, ʼ ಡಿಸ್ಟೋಪಿಯ ʼ ಸೃಷ್ಟಿಸಲಾಗಿದೆ.

ʼ ಏಕಂ ʼ ಸರಣಿ ಚಿತ್ರ ಸೇರಿದಂತೆ ಈ ತಂಡದ ಸಿನಿಮಾ/ ಸರಣಿಗಳಲ್ಲಿ ಮುನ್ನುಡಿ, ಹಿನ್ನುಡಿಯ ರೀತಿಯಲ್ಲಿ ವಾಯ್ಸ್‌ಓವರ್‌ ಗೀಳಿನಂತೆ ಸೇರಿಕೊಂಡು ಬಿಟ್ಟಿದೆ. ತೀರಾ ಅಗತ್ಯವಿದ್ದಲ್ಲಿ ಅದನ್ನು ಬಳಸಬಹುದು. ಅದೊಂದು ಒಣ ತಾತ್ವಿಕತೆಯಾಗಬಾರದು. ʼ ರೂಪಾಂತರ ʼ ದ ವಾಯ್ಸ್‌ ಓವರ್‌ನಲ್ಲೂ ಈ ಒಣ ತಾತ್ವಿಕತೆ ಇದೆ. ರಾಜ್‌ ಬಿ ಶೆಟ್ಟಿ ಇದರಿಂದ ಆದಷ್ಟು ಬೇಗ ಹೊರ ಬಂದರೆ ಒಳ್ಳೆಯದು.

ʼ ರೂಪಾಂತರ ʼ ಸಿನಿಮಾದ ಅತ್ಯುತ್ತಮ ಭಾಗ ಹೆಸರಿಲ್ಲದ ( ಈ ಚಿತ್ರದಲ್ಲಿ ಯಾವ ಪಾತ್ರಗಳಿಗೂ ಹೆಸರಿಲ್ಲ ) ವಯಸ್ಸಾದ ದಂಪತಿಯ ಪ್ರಸಂಗಗಳು. ಉತ್ತರ ಕರ್ನಾಟಕದ ಆಡುನುಡಿಯನ್ನು ಬಳಸಿಕೊಂಡು, ದಂಪತಿಯ ಮುಸ್ಸಂಜೆಯ ಬೇಗೆಯನ್ನು, ಸರಳವಾದ ಆದರೆ ಸಾಧ್ಯ ಮಾಡಲು ಕಷ್ಟವಾದ ಬೇಡಿಕೆಗಳ ಮುಖಾಂತರ ಕಟ್ಟಿಕೊಡುವ ರೀತಿ ತುಂಬಾ ಚೆನ್ನಾಗಿದೆ. ಈ ಪಾತ್ರಗಳಲ್ಲಿ ಸೋಮಶೇಖರ್‌ ಬೋಳೆಗಾಂವ್‌ ಮತ್ತು ಹನುಮಕ್ಕ ಜೀವಿಸಿದ್ದಾರೆ. ಹನುಮಕ್ಕ ʼ ಯಜಮಾನʼ ಎಂದು ಕರೆಯುವ ರೀತಿಯೇ ಮನದುಂಬುತ್ತದೆ. ಪರಿಣತ ನಟರನ್ನು ಮೀರಿಸುವಂತೆ ನಟಿಸಿದ ಸೋಮಶೇಖರ್‌ ಬೋಳೆಗಾಂವ್‌ ಚಿತ್ರ ತೆರೆ ಕಾಣುವ ಹೊತ್ತಿಗೆ ಇಲ್ಲವಾಗಿದ್ದು ನೋವಿನ ಸಂಗತಿ. ʼ ರೂಪಾಂತರ ʼ ಚಿತ್ರವನ್ನು ಈ ಭಾಗಕ್ಕಾಗಿಯೇ ನೋಡಬಹುದು.

ಸಣ್ಣ ವಿಷಯಕ್ಕೆ ಕಾಲು ಕೆದರಿ ಜಗಳ ಮಾಡುವ ಪುಡಿ ರೌಡಿಗಳ ಮನಸ್ಥಿತಿಯನ್ನು ಕಟ್ಟಿಕೊಡುವ ಕತೆಯಲ್ಲಿ ಹಿಂಸೆ ಇದ್ದರೂ ಮಾನವೀಯ ಅಂಶಗಳೂ, ದುಡುಕುತನ ಢಾಳಾಗಿದೆ. ಈ ಕತೆ ಕೊನೆಗೊಳ್ಳುವ ಬಗೆಯೇ ವಿಚಿತ್ರ. ರಾಜ್‌ ಬಿ ಶೆಟ್ಟಿ ನ್ಯಾಚುರಲ್‌ ರೌಡಿಯಾದರೆ, ಮೊದಲ ಬಾರಿಗೆ ನಟನಾಗಿ ಕಾಣಿಸಿಕೊಂಡ ʼ ಶಿವಮ್ಮ ʼ ನಿರ್ದೇಶಕ ʼ ಜೈಶಂಕರ್‌ ಅಯ್ಯರ್‌ ಸಲೀಸಾಗಿ ನಟಿಸಿದ್ದಾರೆ.

ಮಾದಕ ದ್ರವ್ಯ ಚಟಕ್ಕೆ ಬಿದ್ದ, ಟಾಸ್ಕ್‌ಗಳಲ್ಲಿ ಮೈಮರೆತು ಅಪಾಯವನ್ನು ಎದುರು ಹಾಕಿಕೊಳ್ಳುವ ಬೇಜವಾಬ್ದಾರಿ ಹುಡುಗನ ಕತೆಯಲ್ಲಿ ತೀವ್ರತೆ ಇದ್ದರೂ ಮನ ಸೆಳೆಯುವಂತಿಲ್ಲ. ಈ ಪಾತ್ರದಲ್ಲಿ ಅಂಜನ್‌ ಭಾರದ್ವಾಜ್ ಅಭಿನಯಿಸಿದ್ದಾರೆ.

ಸಮಾಜಕ್ಕೆ ಬಹಳ ದೊಡ್ಡ ಸಹಾಯ ಮಾಡುತ್ತೇವೆ ಎನ್ನುವ ಜನರ ಬೂಟಾಟಿಕೆಯನ್ನು ಅಣಕಿಸುವ, ಪ್ರಬಲರಿಗೆ ಮಣೆ ಹಾಕುವ ಪೋಲಿಸ್‌ ವ್ಯವಸ್ಥೆಯನ್ನು ಕೆಣಕುವ ಕತೆ ಹಲವು ವಿಷಯಗಳನ್ನು ಒಟ್ಟೊಟ್ಟಿಗೇ ಹೇಳಲು ಪ್ರಯತ್ನಿಸಿಯೂ ಯಶಸ್ವಿಯಾಗಿದೆ. ಸ್ಟೇಷನ್ನಿನಲ್ಲಿ ಏನಾಗುತ್ತದೆ ಎನ್ನುವುದನ್ನು ಅಮಾಯಕ ಪೋಲೀಸ್‌ ಪಾತ್ರವನ್ನು ಸೃಷ್ಟಿಸುವ ಮೂಲಕ ಹೇಳುವುದರಲ್ಲಿ ಹೊಸತನವಿದೆ. ಕಾನ್ಸ್ಟೇಬಲ್‌ ಪಾತ್ರ ಮಾಡಿದ ಭರತ್‌ ಜಿ ಬಿ ಮುಗ್ಧತೆಯನ್ನೂ, ಮಾನವೀಯತೆಯನ್ನೂ ಸಹಜವಾಗಿ ಅಭಿವ್ಯಕ್ತಿಸಿದ್ದಾರೆ. ಮಗುವಿನ ತಾಯಿ ಪಾತ್ರಕ್ಕೆ ಲೇಖಾ ನಾಯ್ಡು ಪರಿಪೂರ್ಣ ಆಯ್ಕೆ. ಕಣ್ಣುಗಳಲ್ಲೇ ಅವರು ನೋವನ್ನೂ, ಸಿಟ್ಟನ್ನೂ ವ್ಯಕ್ತ ಪಡಿಸುತ್ತಾರೆ. ನೋವಿಗೆ ಭಾಷೆಯ ಹಂಗಿಲ್ಲ ಎನ್ನುವುದನ್ನು ಈ ʼ ವಿಶಿಷ್ಟ ಭಾಷೆ ʼ ಹೇಳುವಂತಿದೆ. ಇದು ಕೂಡಾ ʼ ರೂಪಾಂತರ ʼ ಮುಖ್ಯ ಕತೆಗಳಲ್ಲೊಂದು.

ಸಿನಿಮಾದಲ್ಲಿ ಸಣ್ಣ ಪಾತ್ರಗಳನ್ನೂ ಅವಗಣಿಸಲಾಗಿಲ್ಲ. ಡಾಕ್ಟರ್‌, ನರ್ಸ್‌, ಹುಡುಗನ ತಂದೆ- ತಾಯಿ, ರೌಡಿಯ ಹೆಂಡತಿ, ದಫೇದಾರ, ಇನ್ಸ್‌ಪೆಕ್ಟರ್‌, ಪ್ರಭಾವಿ ವ್ಯಕ್ತಿಗಳು- ಎಲ್ಲಾ ಪಾತ್ರಗಳಿಗೂ ಸರಿ ಹೊಂದುವವರನ್ನೇ ಆಯ್ಕೆ ಮಾಡಲಾಗಿದೆ; ಅವರೆಲ್ಲರ ನಟನೆಯೂ ಚೆನ್ನಾಗಿದೆ.

ರಾಜ್‌ ಬಿ ಶೆಟ್ಟಿ ನಟನೆ, ವಿಸ್ತರಿತ ಚಿತ್ರಕತೆಯೊಂದಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಅವರ ಸಂಭಾಷಣೆ ಕಚಕುಳಿ ಇಡುತ್ತದೆ. ಕೆಲವು ಕಡೆಗಳಲ್ಲಿ- ಮುಖ್ಯವಾಗಿ ವೃದ್ಧ ದಂಪತಿಯ ಮಾತುಕತೆಯಲ್ಲಿ- ಪರಿಣಾಮಕಾರಿಯಾಗಿದೆ. ಆದರೆ, ಲೇಡಿ ಡಾಕ್ಟರ್‌ ಆಕೆ ʼ ಸಾಯ್ತಾರೆ ʼ ಎನ್ನುವುದು ಸರಿಯಲ್ಲ ಎನ್ನಿಸಿತು. ಅಂತಃಕರಣವುಳ್ಳ ಡಾಕ್ಟರ್‌ಗಳು ಹಾಗೆ ನೇರವಾಗಿ ಹೇಳಲಾರರು. ರಾಜ್‌ ಬಿ ಶೆಟ್ಟಿ ಮೊದಲ ಬಾರಿಗೆ ದಕ್ಷಿಣ ಕನ್ನಡದ ಗುಂಗಿ( ಸಾವು, ಬೇವಾರ್ಸಿ ) ನಿಂದ ಹೊರ ಬಂದು ಇತರೆಡೆಯ ಆಡು ನುಡಿಯೆಡೆಗೆ ಚಾಚಿದ್ದಾರೆ.

ಸಿನಿಮಾದ ಪರಿಣಾಮವನ್ನು ಹೆಚ್ಚಿಸುವಲ್ಲಿ ಮಿದುನ್‌ ಮುಕುಂದನ್‌ ಸಂಗೀತದ ಪ್ರಭಾವವೂ ಇದೆ. ಎರಡು ಹಾಡುಗಳು , ಅದರಲ್ಲೂ ʼ ಕಿತ್ತಾಳೆ…ʼ ಇಂಪಾಗಿದ್ದು, ಅರ್ಥಪೂರ್ಣವಾಗಿದೆ. ಹಾಗೆಯೇ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಪ್ರವೀಣ್‌ ಶ್ರೀಯಾನ್‌ ಫೋಟೋಗ್ರಫಿಯಲ್ಲಿ ಕಸಬುದಾರಿಕೆ ಇದೆ. ಕ್ಯಾಮರಾ ಚಲನೆ ದೃಶ್ಯಗಳಿಗೆ ತಕ್ಕಂತಿದ್ದು ಸಮರ್ಪಕವಾಗಿದೆ.

ʼ ರೂಪಾಂತರ ʼ ಸಿನಿಮಾದ ಬಹು ಮುಖ್ಯ ಅಂಶ ಬರವಣಿಗೆ. ಚಿತ್ರ ಸಂಪೂರ್ಣವಾಗಿ ನಿಂತಿರುವುದೇ ಬಿಗಿಯಾದ ಬರವಣಿಗೆಯ ಮೇಲೆ. ನಿರ್ದೇಶನ ಮತ್ತು ಚಿತ್ರಕತೆ ರಚಿಸಿದ ಮಿಥಿಲೇಶ್‌ ಎಡವಲತ್‌ ಶ್ರದ್ಧೆಗೆ ಶಹಭಾಸ್‌ ಹೇಳಲೇ ಬೇಕು. ಹೊಸ ಬಗೆಯ ಕಟ್ಟುವಿಕೆ, ಬದುಕಿನ ಸಣ್ಣ, ಸಣ್ಣ ವಿಷಯಗಳ ಜೋಡಣೆ, ಬೇಸರವಾಗದಂತೆ ಹೇಳುವ ವಿಧಾನ ಎಲ್ಲವೂ ಚೆನ್ನಾಗಿದೆ. ಮೊದಲರ್ಧ ನಿಧಾನವಾಗಿ ಸಾಗಿದರೂ ನಂತರ ವೇಗವಿದೆ.

ಜಾತ್ರೆಯ ಕಲ್ಪನೆ, ಅದನ್ನು ಬಳಸಿಕೊಂಡ ರೀತಿ ಚೆನ್ನಾಗಿದೆ. ಬದುಕೆಂಬ ಜಾತ್ರೆಯಲ್ಲಿ ಎಲ್ಲಾ ಪಾತ್ರಗಳೂ ಬಂದು ಹೋಗುತ್ತವೆ. ವಿಷಾದ, ಸಂಭ್ರಮ, ಪ್ರದರ್ಶನ ಎಲ್ಲವೂ ಜಾತ್ರೆಗಳಲ್ಲಿ ನಡೆಯುತ್ತವೆ. ಇದೊಂದು ರೂಪಕವಾದಂತೆ ಕೋಶಾವಸ್ಥೆಯಲ್ಲಿನ ಹುಳುಗಳೆಲ್ಲಾ ಪತಂಗಗಳಾಗುವುದಿಲ್ಲ ಎನ್ನುವುದನ್ನೂ ಚಿತ್ರ ಧ್ವನಿಸುತ್ತದೆ. ಅವು ಯಾವುದೆಂದು ಸಿನಿಮಾ ತೀರ್ಮಾನ ಕೊಡುವುದಿಲ್ಲ; ಕಂಡುಕೊಳ್ಳುವುದು ಪ್ರೇಕ್ಷಕನಿಗೆ ಬಿಟ್ಟಿದ್ದು.

ಈ ಗುಣಾತ್ಮಕ ಅಂಶಗಳ ಜತೆ ಕೆಲವು ಕೊರತೆಗಳೂ ಇವೆ. ಕತೆಗಳ ಕೋಶದಲ್ಲೇ ಸಮಸ್ಯೆ ಇದೆ; ಚಿಟ್ಟೆಯಾಗುವುದು ಬಿಡಿ, ಕೆಲವು ಕೋಶವೇ ಆಗಿಲ್ಲ. ಎರಡು ಕತೆಗಳಲ್ಲಿ ಕೋಶದ ಎಳೆಗಳು ಸಡಿಲವಾದಂತೆ ತೋರುತ್ತದೆ. ಇನ್ನಷ್ಟು ಶ್ರಮ ವಹಿಸಿ ಬಂಧವನ್ನು ಬಿಗಿಗೊಳಿಸಿದ್ದರೆ ʼ ರೂಪಾಂತರ ʼ ಅತ್ಯುತ್ತಮ ಸಿನಿಮಾವಾಗುತ್ತಿತ್ತು.

ಈ ಕುಂದುಗಳ ಹೊರತಾಗಿಯೂ ʼ ರೂಪಾಂತರ ʼ ನೋಡಲೇ ಬೇಕಾದ ಸಿನಿಮಾ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹೊಸತನ್ನು ಬಯಸುವ ಎಷ್ಟು ಜಾಣ, ಜಾಣೆಯರು ಸಿನಿಮಾವನ್ನು ನೋಡುತ್ತಾರೆ ಎನ್ನುವುದರ ಮೇಲೆ ಚಿತ್ರದ ಯಶಸ್ಸು ನಿಂತಿದೆ.
-ಎಂ ನಾಗರಾಜ ಶೆಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x