-೯-
ದಿನಗಳೂ ಉರುಳುತ್ತ ವಾರಗಳೂ ಉರುಳುತ್ತ ತಿಂಗಳುಗಳೂ ಉರುಳುತ್ತ ಹಂಗೆ ವರ್ಷಗಳೂ ಉರುಳಿದವು. ಈಗ ಊರು ಬದಲಾಗಿತ್ತು. ಹಿಂಗೆ ಬದಲಾಗ್ತ ಇದ್ದದ್ದ ನಾನೂ ನೋಡ್ತಾ ಬೆಳಿತಾ ಎಸೆಸೆಲ್ಸಿಯಲ್ಲೇ ಐದಾರು ವರ್ಷ ಏಗಿ ಕೊನೆಗೂ ಅದಾಗಿ ಪಿಯುಸಿಗೂ ಸೇರಿದ್ದಾಯ್ತು. ನಾನೋ ಕಾಲೇಜು ಹ್ಯಾಂಗೋವರಲ್ಲಿ ಎಲ್ಲರು ನೋಡಲೆಂದು ಇರೊ ಹಳೇ ಬಟ್ಟೆನೆ ಒಗೆದು ಐರನ್ ಉಜ್ಜಿ ಮನೆಯೊಳಗಿನ ತಂತಿ ಮೇಲೆ ಬಟ್ಟೆ ಅಂಗಡಿಯಲ್ಲಿ ಜೋಡಿಸಿಟ್ಟಂಗೆ ಮಡಚಿ ಇಟ್ಟುಕೊಂಡು ದಿನಾ ಒಂದೊಂದು ಸೆಲೆಕ್ಟ್ ಮಾಡಿಟ್ಟು ಇನ್ಸರ್ಟ್ ಮಾಡಿಕೊಂಡು ಪೌಡರ್ ಸ್ನೊ ಹಾಕೊಂಡು ಸ್ಟೈಲಾಗಿ ಒಂದೆರಡು ಬೈಂಡ್ ಹಿಡಿದು ಹೋಗುವಾಗ ಅದೇ ಪೋಸ್ಟ್ ಮ್ಯಾನ್ ಗಂಗಣ್ಣ ನನ್ನನ್ನು ತಾಕಿಸಿಕೊಂಡೇ ಸೈಕಲಿಂದ ಇಳಿದು “ಏ ಬಾರಪ್ಪ ಇಲ್ಲಿ..” ಅಂತ ಮರ‌್ಯಾದೆ ಕೊಡೊ ತರ ತಡೆದು ನಿಲ್ಲಿಸಿದ. ನನ್ನ ಜೊತೆ ಇದ್ದವರೆಲ್ಲ ಈಗಿರದೆ ಅದೂ ಇದೂ ಕೆಲ್ಸ ಅಂತ ಊರೂರು ಅಲೆಯುತ್ತ ಕೆಲವರು ಊರಲ್ಲಿದ್ದರೂ ದೂರಾಗಿದ್ದರು. ನಾನು ಅವನು ನೋಡಲೆಂದು ಅದೇ ಸ್ಟೈಲಲ್ಲಿ ಬೈಂಡು ಹಿಡಿದು “ಏನ್ ಗಂಗಣ್ಣ” ಅಂತ ಅಫಿಸಿಯಲ್ಲಾಗಿ ಮಾತಾಡಲು ಶುರು ಮಾಡಿದೆ. ಅವನು “ಅಯ್ಯೋ ಬಾರಯ್ಯ ಇಲ್ಲಿ ಒಂದೆರಡು ಎಂಓ ಫಾರಂಗೆ ಎಲ್ಟಿಎಂ ಜಡಿ” ಅಂದ. ನನಗೂ ಓಲ್ಡೇಜು ವಿಡೊ ಪೆನ್ಸನ್ ಎಂಓ ಪಾರಂ ಗೆ ಎಲ್ಟಿಎಂ ಹಾಕೊ ಕಾಲ ಬಂತಲ್ಲ ಅನ್ನೊ ಖುಷಿ. ಎಂಓ ಫಾರಂ ಈಸಿಕೊಂಡು ಅಲ್ಲಿದ್ದ ಹೆಸರು ಓದುತ್ತ ಎಲ್ಟಿಎಂ ಹಾಕುವಾಗ “ಏನಪ್ಪಾ… ನೀನು ಎಷ್ಟನೇ ಕ್ಲಾಸು” ಅಂದ.
ನಾನು ಬೀಗುತ್ತ “ಪಿಯುಸಿ ಗಂಗ.. ಕಾಲೇಜೂ..” ಅಂತ ರಾಗವಾಗಿ ಹೇಳ್ತಾ ಎಂಓ ಫಾರಂ ನಲ್ಲಿದ್ದ ಹೆಬ್ಬೆಟ್ಟಿನ ಗುರುತಿನ ಮೇಲೆ ಇಂಗ್ಲಿಷ್ ಕ್ಯಾಪ್ಟಲೆಟರಲ್ಲಿ ಎಲ್ಟಿಎಂ ಬರೆದು ಸೈನ್ ಮಾಡಿ ಅವನ ಕೈಗೆ ಕೊಡುವಾಗ “ಏಳನೇ ಕ್ಲಾಸ್ ಪಾಸಾಗಿದೆಯಾ” ಅನ್ನೋನು. ನಾನು “ಪಿಯುಸಿ ಅಂತ ಹೇಳುದ್ನಲ್ಲ” ಅಂದರೆ “ಅಯ್ಯೋ ಗೊತ್ತು ಕಣಯ್ಯ. ನಂಗೊತ್ತಿಲ್ವ.. ನಾನ್ ಕೇಳಿದ್ದು ಏಳ್ ಪಾಸಾಗಿದೆಯಾ ಅಂದೆ” ಅಂತ ನನಗೇ ಮರು ಪ್ರಶ್ನೆ ಹಾಕ್ತ “ಸರಿ ಬತ್ತಿನಪ್ಪ ಲೆಟರೆಲ್ಲ ಹಂಚಬೇಕು ಲೇಟಾದರೆ ನಮ್ ಮೇಷ್ಟ್ರು ಬೈತಾರೆ ಏನ್ಮಾಡೋದು ಬೈಸ್ಕೊಂಡ್ ಬೈಸ್ಕೊಂಡ್ ಸಾಕಾಗಿದೆ” ಅಂತ ಸೈಕಲ್ ತಿರುಗಿಸಿದ. ಅರೆ, ಅದೇ ಪ್ಯಾಂಟು. ತಿಕದ ಎರಡೂ ಕುಂಡಿತವು ಪ್ಯಾಂಟೆಲ್ಲ ನುಸೋದಾಗಿ ಹರಿದು ಗಂಗಣ್ಣನ ಲೋಕ ಸಂಚಾರದ ಹೊತ್ತಲ್ಲಿ ಆ ಕುಂಡಿಗಳೂ ಹಿಂದಿನ ಆಗು ಹೋಗುಗಳ ಕಡೆ ಎಗ್ಗಿಲ್ಲದೆ ಗಮನಿಸುತ್ತಿದ್ದವು. ಅರೆ, ಅದೇ ಬ್ಯಾಗು. ಅದೂ ಮೂಲೆ ಮೂಲೆ ಹರಿದು ಬಟ್ಟೆ ಪಿನ್ನು ಹಾಕಿತ್ತು. ಆ ಹರಿದ ಬ್ಯಾಗನ್ನು ಹ್ಯಾಂಡಲ್ಲಿಗೆ ಸಿಕ್ಕಿಸಿಕೊಂಡು ಅರೆ, ಅದೇ.. ಅದೇ ಬಾಡಿಗೆ ಸೈಕಲ್ ತಳ್ಳುತ್ತ ಸ್ವಲ್ಪ ಮುಂದೆ ಹೋಗ್ತ ಲಕ್ಕಲಕ್ಕನೆ ಪೆಡಲ್ ಒತ್ತುತ್ತ ಲಕ್ಕನೆ ಬಲಗಾಲು ಮೇಲೆತ್ತಿ ಒಂದೇ ಕುಂಡಿ ಕೂರೊ ತರ ಉರುಗಿಕೊಂಡು ಸೀಟಲ್ಲಿ ಕುಂತು ಪೆಡಲ್ ತುಳಿಯುತ್ತ ಊರ ಬೀದಿಯೊಳಕ್ಕೆ ಹೋಗುತ್ತಿದ್ದುದು ಮಾಮೂಲಿಯಾಗಿತ್ತು. ಇದರೊಳಗೆ ಅವನ ರಂಪ ರಗಳೆ ರಾಮಾಯಣವನ್ನೆಲ್ಲ ಜನ ಬಂದು ಬಂದು ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ತನಕ ಹೇಳ್ತಾನೆ ಇದ್ರು. ಅವರಿಗೊ ಇದನ್ನೆಲ್ಲ ಕೇಳಿ ಕೇಳಿ ಸಾಕಾಗಿ ಅವನು ಬಂದಾಗೆಲ್ಲ ಬೈಯುತ್ತಾ ಬುದ್ದಿವಾಣಿ ಹೇಳೋರು.
ಆಗಾಗ ಹೆಡ್ ಪೋಸ್ಟ್ ಆಫೀಸಿಗೂ ಮುಟ್ಟಿಸದೇ ಇರುತ್ತಿರಲಿಲ್ಲ. ಅಲ್ಲಿ ಕೇಳಿಸಿಕೊಂಡವರು ಗಂಗಣ್ಣ ನಡೆನುಡಿ ಕೆಲಸದ ವೈಖರಿ ಬಗ್ಗೆ ತಮಾಷೆ ಮಾಡುತ್ತ ನಗುತ್ತ ಕೊನೆಗೆ “ಏನೊ.. ದಿಕ್ಕುದೆಸೆ ಇಲ್ಲದೋನು. ಅವನ ತಪ್ಪನ್ನೆಲ್ಲ ದೊಡ್ಡದು ಮಾಡೊಕಾಗುತ್ತ. ಒಂಥರ ಪೆದ್ದ. ಅದಕ್ಕಿಂತ ಮುಗ್ಧಾ ಅಂದ್ರೆ ಮುಗ್ಧ. ಅವನಿಗೇನು ಗೊತ್ತಾಗುತ್ತೆ..? ಸದ್ಯ ನಿಮ್ಮ ಜೊತೆ ಇರೋದು ಅವನ ಪುಣ್ಯ. ಬೇರೆ ಯಾರೇ ಆಗಿದ್ರು ಇಟ್ಕೊತಾ ಇರ‌್ಲಿಲ್ಲ ಸಾರ್. ಅನುಸರಿಸ್ಕಂಡು ಹೋಗಿ ಪಾಪ. ನೀವೆ ಹಿಂಗಂದ್ರೆ ಹೆಂಗೆ ಹೇಳಿ” ಅಂತ ಸಮಾಧಾನ ಮಾಡಿದರೆ ಷಣ್ಮಖಸ್ವಾಮಿ ಕರುಳು ಚುರ್ ಅನ್ನದೆ ಇರುತ್ತಿರಲಿಲ್ಲ.
ಈ ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿಗೆ ಈಗ ಇದೊಂದೆ ಕೆಲಸ ಅಲ್ಲ. ಇನ್ನೊಂದನ್ನು ಹೆಗಲಿಗೆ ಏರಿಕೊಂಡು ಬುಗುಬುಗು ಸುತ್ತುತ್ತಿದ್ದರು. ಈ ಕಾರಣ ಅವರು ನರಸೀಪುರದಲ್ಲೆ ಅಲ್ಲ ಇಡೀ ತಾಲ್ಲೋಕಲ್ಲೇ ಫೇಮಸ್ ಆಗಿದ್ದರು. ಮೊದಲಿಂದಲೂ ರೂಢಿಸಿಕೊಂಡು ಬಂದಿದ್ದ ಅವರ ಹವ್ಯಾಸಕ್ಕೊಂದು ವೇದಿಕೆ ಸಿಕ್ಕಿತ್ತು. ಕತೆ ಕವನ ಬರಿತಾ ಇದ್ರು. ಅವರಿವರು ಸಿಕ್ಕಾಗ ಅವರ ಮುಂದೆ ಕವನ ಹೇಳ್ತತಾ ಲೋಕದ ವಿಚಾರ ಮಾತಾಡುತ್ತಿದ್ದರು. ತಾಲ್ಲೊಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರರಾಗಿ ಈಗಾಗಲೇ ಹಲವು ವರ್ಷ ಪೂರೈಸಿ ಕವಿಗೋಷ್ಠಿ ಇನ್ನಿತರ ಸಾಹಿತ್ಯ ಕಾರ್ಯಕ್ರಮ ಮಾಡಿ ಷಣ್ಮುಖಸ್ವಾಮಿ ಅಂದರೆ ಸಾಹಿತ್ಯ ಪರಿಷತ್ತು. ಸಾಹಿತ್ಯ ಪರಿಷತ್ತು ಅಂದರೆ ಷಣ್ಮುಖಸ್ವಾಮಿ ಅಂತಾಗಿತ್ತು.
ಅದಾಗುತ್ತಾ ಆಗುತ್ತ ಈಗ ಚೌಡಮ್ಮನ ಮನೆಯಲ್ಲಿದ್ದ ಪೋಸ್ಟಾಫೀಸು ಹೊಸ ತಿರುಮಕೂಡಲು ನಡುವಿದ್ದ ಚಂದ್ರಶೇಖರ್ ಛತ್ರದ ಓನರ್ ಬಂಗಲೆಯ ಪಕ್ಕದ ಅವರದೇ ಹಳೇ ಮನೆಯ ಒಂದು ರೂಮಿಗೆ ಶಿಫ್ಟ್ ಆಗಿತ್ತು.
ಚಂದ್ರಶೇಖರ ಫ್ಯಾಮಿಲಿ – ಮೈಸೂರು ರಾಜರ ಅರಮನೆಯ ಪ್ರಾಂಗಣದಲ್ಲಿ ಸಂಗೀತ ನೃತ್ಯಕ್ಕೆ ಹೆಸರುವಾಸಿಯಾಗಿತ್ತು. ಹೊಸ ತಿರುಮಕೂಡಲಿನಲ್ಲಿ ಅವರ ಮನೆ ಮಿನಿ ಅರಮನೆ ತರಾನೆ ಇತ್ತು. ರಾಜ ಮನೆತನದ ಕಡೆಯಿಂದ ಜಮೀನೂ ಬಳುವಳಿ ತರ ಬಂದಿತ್ತು. ವ್ಯವಸಾಯ ಮಾಡಲು ಹಸು ಎಮ್ಮೆ ನೋಡಿಕೊಳ್ಳಲು ಒಂದಷ್ಟು ಆಳುಗಳೂ ಇದ್ದರು. ಎಮ್ಮೆಗಳು ಹಸುಗಳು ಹಾಲನ್ನು ಕರೆಯುತ್ತಿದ್ದವು. ಆ ಹಾಲು ಮಾರಲೂ ಒಂದಿಬ್ಬರಿದ್ದರು. ನಾನೂ ಅವರ ಆ ಮಿನಿ ಅರಮನೆಯಂತಿದ್ದ ಮನೆಯನ್ನು ನೋಡಬೇಕೆಂಬ ಆಸೆಯಾಗಿ ಅವ್ವ ಹಾಲು ತರಲು ಹೇಳಿದರೆ ಹೂಂಕಂಡು ಸರ‌್ರನೆ ಓಡಿ ಅವ್ವ ತರುತ್ತಿದ್ದವರ ಮಾಮೂಲು ಮನೆಗೆ ಹೋಗದೆ ಅರಮನೆಯಂತಿದ್ದ ಮನೆಗೆ ಹೋಗಿ ಬಾಗಿಲಾಚೆ ನಿಂತು ಕಾಸು ಕೊಟ್ಟು “ಅಪ್ಪೊ ಹಾಲು ಕೊಡಿ” ಅಂತ ಕೂಗಿ ಕೇಳುತ್ತ ಬೇಕಂತಲೇ ಹೊರಗೆ ನಿಂತು ಬಣ್ಣದಿಂದ ಹೊಳೆಯುತ್ತಿದ್ದ ಬಾಗಿಲ ಹಿಡಿದು ಒಳಕ್ಕೆ ಇಣುಕಿದರೆ ನಡು ಮನೆ ಫಳಾರ್ ಅಂತಿತ್ತು. ಒಂದು ಮೂಲೇಲಿ ದೊಡ್ಡ ರೇಡಿಯೊದಲ್ಲಿ ಹಾಡೇ ಇಲ್ಲದ ಮ್ಯೂಜಿಕ್ ಬರುತ್ತಿತ್ತು. ಆ ಮ್ಯೂಜಿಕ್ಕು ನಮ್ಮೂರು ರಾಮಭಜನೆಯಲ್ಲಿ ಬಾರಿಸುತ್ತಿದ್ದ ಹಾರ‌್ಮೋನಿ ತಬಲ ಬಾರಿಸೋ ತರನೇ ಇತ್ತು. ಆದರೆ ಆ ಮ್ಯೂಜಿಕ್ ಸೌಂಡು ಆ ಮಿನಿ ಅರಮನೆಯಲ್ಲಿ ದಿಮ್ ದಿಮ್ ದಿಮುಗುಡುತ್ತ.. ಕೇಳೋಕೆ ಒಂಥರಾ ಮಜವಾಗಿ ನನ್ನ ಮೈ ಜುಂ ಅಂತಿತ್ತು.
ಇಂಥ ಅರಮನೆಯಂತಿದ್ದ ಫ್ಯಾಮಿಲಿಯೊಂದಿಗೆ ಸಂಗೀತ ನೃತ್ಯ ನಾಟಕ ಸಾಹಿತ್ಯ ಅಂತ ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ಅವರಿಗೆ ಹತ್ತಿರದವರಾಗಿದ್ದರಿಂದ ಪೋಸ್ಟಾಫೀಸ್ ಗೆ ಅವರ ಹಳೇ ಮನೆಯ ರೂಮು ಸಲೀಸಾಗಿ ಕಡಿಮೆ ಬಾಡಿಗೆಗೆ ಸಿಕ್ಕಿತ್ತು. ಪೋಸ್ಟಾಫೀಸ್ ಅಲ್ಲಿಗೆ ಶಿಫ್ಟಾದ ಮೇಲೆ ನಮ್ಮ ಕೇರಿಯವರು ದೂರ ಅಂತಲೊ ಒಕ್ಕಲಿಗರ ನಡುಮಧ್ಯೆದ ಕೇರಿಗೆ ಪದೇಪದೇ ಹೋದರೆ ಆ ಕೇರಿಯವರು ಬೈಯುತ್ತಾರೆ ಅಂತಲೊ ಅಂತು ಚೌಡಮ್ಮನ ಮನೇಲಿದ್ದ ಪೋಸ್ಟಾಫೀಸೇ ಚೆನ್ನಾಗಿತ್ತು ಅಂತ ಊರವರು ಮಾತಾಡಿಕೊಳ್ಳುತ್ತಿದ್ದುದು ಉಂಟು. ಈತರ ಅಂತಂತಲೇ ಯಾವಾಗಲೊ ಒಂದೊಂದು ಸಲ ಅದು ಇದು ಲೆಟರ್ ಕೇಳೋಕೆ ಹೋಗ್ತಾ ಇದ್ದರು.
ಆದರೆ ಈ ಕುಂಟ ಸಿದ್ದಪ್ಪ ಮಾಮೂಲಿಯಾಗೆ ಬೆಳಗ್ಗೆ ಎದ್ದು ಶಿಸ್ತಾಗಿ ಬಂದು ಅಲ್ಲೆ ಝಾಂಡಾ ಊರಿ ರಾಜಕೀಯ ಅದೂ ಇದು ಮಾತಾಡ್ತ ಜೋರಾಗಿ ನಗ್ತಾ ಬಂದವರೊಂದಿಗೂ ಮಾತಾಡ್ತ ಸಲಿಗೆಯಿಂದ ಗೌಡರ ಕೇರಿಯಲ್ಲು ಫೇಮಸ್ ಆಗಿದ್ದ. ನಾನೂ ಆಗಾಗ ಅವರಿವರ ಟೆಲಿಗ್ರಾಂ ಮಾಡಲೊ ಆರ್ಡಿನರಿ ಪೋಸ್ಟ್ ಮಾಡಲೊ ರೆವಿನ್ಯೂ ಸ್ಟ್ಯಾಂಪ್ ತರಲೊ ಪೋಸ್ಟಾಫೀಸಿಗೆ ಹೋಗುತ್ತಿದ್ದೆ. ಇದೆ ತರ ಒಂದ್ಸಲ ಹೋಗಿ ಬಾಗಿಲಲ್ಲಿ ಸುಮ್ಮನೆ ಒಂಟಿ ಕಾಲಲ್ಲಿ ನಿಂತಿದ್ದೆ. ನನ್ನನ್ನು ನೋಡಿ ಮಾಮೂಲಿ ತರ ಸಾವಧಾನದಿಂದ “ಏನಪ್ಪ ಪೋಸ್ಟಾ” ಅನ್ನೋರು. ನಾನು “ಇಲ್ಲ ಸಾರ್” ಅಂದೆ. ಅವರು ತಿರುಗಿ ನೋಡಿದರು. ನನ್ನ ಕೈಲಿ ಒಂದು ಪೇಪರ್ ಹಿಡಿದಿದ್ದನ್ನು ನೋಡಿ “ಏನು ಅದು ಪೋಸ್ಟ್ ಮಾಡಕಲ್ವ? ಅದೇನು ಪೇಪರು? ಬೇರೆ ಏನಾದ್ರು ಬೇಕೇನಪ್ಪಾ..? ಕವರು, ಸ್ಟ್ಯಾಂಪು ಏನಾದ್ರು ಬೇಕಾ” ಅನ್ನೋರು. ನಾನು “ಇಲ್ಲ ಸಾರ್ ಅದೂ..” ಅಂತ ನನ್ನ ಕೈಲಿದ್ದ ಪೇಪರ್ ಕೊಟ್ಟು “ನೋಡಿ ಸಾರ್” ಅಂತ ಕೈಕಟ್ಟಿ ನಿಂತೆ. ಅವರು “ಏನಪ್ಪ ಇದು” ಅಂತ ನೋಡ್ತಾ “ಏನ್ ಪದ್ಯ ಇದ್ದಂಗಿದೆ.. ಯಾರ್ ಬರೆದಿದ್ದು….” ಎಂದು ಒಂದು ಕ್ಷಣ ಜೋರಾಗಿ ಹಾಗೆ ದನಿ ತಗ್ಗಿಸಿ ತುಟಿ ಕುಣಿಸುತ್ತ ಓದತೊಡಗಿದರು. ಓದಿ ಮುಗಿಸಿ “ಬ್ಯೂಟಿಫುಲ್.. ಯಾರಪ್ಪ ಬರ‌್ದಿದ್ದು.. ನೀವೇನಾ ಬರ‌್ದಿದ್ದು.. ನೀವೆ ತಂದಿದ್ದಿರಾ ಅಂದ್ರೆ ಇದನ್ನ ನೀವೆ ಬರ‌್ದಿರ‌್ತಿರಾ ” ಅಂತ ಮೊದಲ ಬಾರಿ ಅವರು ನನ್ನನ್ನ ‘ನೀವು’ ಅಂತ ಕರೆದದ್ದು ಒಂಥರಾ ಆಯ್ತು. ನಾನು “ಹುಂ ಸಾರ್ ನಾನೆ ಬರ‌್ದಿದ್ದು ಚೆನ್ನಾಗಿದ್ದಿಯಾ ಸಾರ್” ಅಂತ ಅವರು ಬ್ಯೂಟಿಫುಲ್ ಅಂದಿದ್ದರು ಮತ್ತೆ ಕೇಳಿದೆ. ಅವರು “ಫೈನ್ ಫೈನ್” ಅಂತ ಅನ್ನುವಾಗ ಗಂಗಣ್ಣ ಪೋಸ್ಟ್ ಚೀಲ ಏರಿಕೊಂಡು ಬಂದು ಹಜಾರದಲ್ಲಿ ಉಸ್ ಅಂತ ಕುಂತ. ಪೋಸ್ಟ್ ಮೇಷ್ಟ್ರು ನನ್ನ ಒಳ ಕರೆದು ಎದ್ದು ನಿಂತು ಬೆನ್ನು ತಟ್ಟಿ “ಭೇಷ್.. ನೋಡಿ, ನಿಮ್ಮೂರ‌್ಗೆ ಪಂಚಾಯ್ತಿ ದೆಸೆಯಿಂದ ಒಂದು ಪೋಸ್ಟಾಫೀಸ್ ಸಿಕ್ತು..
ಹಂಗೆ ನಮ್ ಪೋಸ್ಟಾಫೀಸ್ ವ್ಯಾಪ್ತಿಲಿ ನಂಗೆ ಒಬ್ಬ ಕವಿ ಸಿಕ್ದ. ಬನ್ನಿ ಕುಂತ್ಕಳಿ” ಅಂತ ಕುರ್ಚಿ ತೋರಿದರು. ಮೊದಲ ಬಾರಿಗೆ ಪೋಸ್ಟ್ ಮೇಷ್ಟ್ರು ಎದುರಿಗೆ ಕುರ್ಚಿಯಲ್ಲಿ ಕುಂತ ಖುಷಿ ನನಗಾಯ್ತು. ಆಗ ಕುಂಟ ಸಿದ್ದಪ್ಪ ಗಳಗಳ ಮಾತಾಡ್ತ ಬರುತ್ತಿದ್ದುದು ಗೊತ್ತಾಯ್ತು. ಪೋಸ್ಟ್ ಮೇಷ್ಟ್ರು “ಸಿದ್ದಪ್ಪ ಬರ‌್ತಾ ಅವ್ರ” ಅಂತ ಟಪಾಲು ತುಂಬಿದ ಮರದ ಬಾಕ್ಸ್ ಮೇಲೆ ನನ್ನ ಕೂರಿಸಿದರು. ಕುಂಟ ಸಿದ್ದಪ್ಪ “ನಮಸ್ಕಾರ ಸಾರ್” ಅಂತ ಅವರಿಗೆ ಹೇಳುತ್ತಾ ನನ್ನ ಕಡೆ ನೋಡಿ ಅದೇನಾಯ್ತೊ ಏನೊ “ಬರ್ತಿನಿ ಸಾರ್” ಅಂದ. ಆಗ ಷಣ್ಮುಖಸ್ವಾಮಿ “ಸಿದ್ದಪ್ಪೋರೆ ಬನ್ನಿ ಬನ್ನಿ” ಅಂತ ಬಲವಂತ ಮಾಡಿ ಕುರ್ಚಿಯಲ್ಲಿ ಕೂರಿಸಿ ಅವರ ಮುಂದೆ ನನ್ನ ಕವನ ಓದಿದರು. ಕುಂಟ ಸಿದ್ದಪ್ಪ “ಸಾರ್ ನಿಮಗೆ ಹೇಳಬೇಕಾ.. ನಿಮ್ಮಂಗ ಬರೆಯೋರು ಯಾರಿದ್ದರು…? ನೀವು ಇಲ್ಲಿ ಇರೋದು ನಮ್ಮೂರ‌್ಗೇ ಒಂದು ಗೌರವ ಸಾರ್.. ನೋಡಿ ಯಾರ‌್ಯಾರಿಗೊ ಪ್ರಶಸ್ತಿ ಅದು ಇದು ಕೊಡ್ತರ.. ನೀವು ಇಸ್ಟೆಲ್ಲ ಮಾಡುದ್ರೂ ಗುರ್ತಿಸ್ತಿಲ್ಲ ” ಅಂತ ಅವರನ್ನೆ ದುರುದುರು ನೋಡಿದ. ಆಗ ಷಣ್ಮುಖಸ್ವಾಮಿ “ಇರಲಿ, ಇದು ನಾನ್ ಬರ‌್ದಿದ್ದಲ್ಲ. ನೋಡಿ ಇವ್ರು. ನಿಮ್ಮೂರ‌್ಗ ಒಬ್ಬ ಕವಿ ಸಿಕ್ಕರ. ಇಂತೆವ್ರಿಂದ ನಿಮ್ಮೂರಿಗೂ ಒಂದು ಗೌರವ ಸಿದ್ದಪ್ಪ” ಅಂದರು. ಕುಂಟು ಸಿದ್ದಪ್ಪ ನಗ್ತಾ “ಹೌದಾ.. ಮತ್ತೆ ನಂಗ್ ಹೇಳ್ನೇ ಇಲ್ವಲ್ಲ… ನೀವು ಪದ್ಯ ಬರೆಯೊ ತರ ಆಗ್ಬಿಟ್ಯಾ..? ಪರ‌್ವಾಗಿಲ್ಲ. ನಿಮ್ಮಪ್ಪ ಗಾಡಿ ಹೊಡ್ದು ಎಲ್ರುನು ಓದ್ಸಿಕ್ಕು ಸಾರ್ಥಕವಾಯ್ರು. ಸಾರ್ ನಮ್ಮುಡುಗ್ರು ಇವ್ರು. ನಮ್ ಬೆಂಬಲ ಇದ್ದೇ ಅದ. ನೀವು ಹೆಂಗೂ ಕವಿಗೋಸ್ಟಿ ಗಿವಿಗೋಸ್ಟಿ ಮಾಡ್ತಿದ್ದರೆಲ್ಲ ಹಾಕಂಡು ಮುಂದುವರಿಸಿ. ಬನ್ನಿ ಇದೆ ಖುಷಿಲಿ ಸಣ್ಣಪ್ಪನ ಹೋಟೆಲ್ಗೋಗಿ ಟೀ ಕುಡ್ದು ಬರಾಣ. ಗಂಗ, ವಸಿ ಆಫೀಸ್ ಕಡೆ ನೋಡ್ಕ ಬತ್ತಿಂವಿ” ಅಂತ ನನ್ನ ಹೆಗಲ ಮೇಲೆ ಕೈಯಾಕಿಕೊಂಡು ಕುಂಟುತ್ತ “ಕುವೆಂಪು ಈ ಸ್ಟೇಜ್ಗ ಬರಬೇಕಾದ್ರ ಎಸ್ಟ್ ಕಷ್ಟ ಪಟ್ಟರ ಗೊತ್ತಾ..?” ಅಂತ ಸಡನ್ ಪೋಸ್ಟ್ ಮೇಷ್ಟ್ರು ಕಡೆ ತಿರುಗಿ “ಏನ್ ಸಾ..” ಅಂದ. ಅವರು “ಹೌದು ಹೌದು.. ಸದ್ಯ ನಾವು ಅವ್ರ ಲೆವಲ್ಗ ಅನ್ಕೊಳ್ದೆ ಕೆಟ್ಟ ದಾರಿ ಹಿಡಿದೆ ಈತರ ಪದ್ಯಗಿದ್ಯ ಅಂತ ಚರ್ಚೆ ಮಾಡ್ತಿವಲ್ಲ ಅದೆ ನಾವು ಸಮಾಜಕ್ಕೆ ಕೊಡೊ ಗೌರವ” ಅಂತೆಲ್ಲ ಮಾತಾಡ್ತ ಒಕ್ಕಲಿಗರ ಬೀದಿಯಲ್ಲಿ ನಡೆಯುತ್ತ ಅವರ ಮಧ್ಯೆ ಹೋಗುವಾಗ ನನಗೆ ಒಂಥರಾ ದೊಡ್ಡ ಸನ್ಮಾನ ಮಾಡ್ತ ಇದ್ದರೇನೊ ಅನ್ನಿಸುತ್ತಿತ್ತು.
-ಎಂ.ಜವರಾಜ್
(ಮುಂದುವರಿಯುವುದು)
[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]