ಕೆಲ ವರ್ಷಗಳ ಹಿಂದಿನ ಮಾತು, ಹೆಸರಾಂತ ಲೇಖಕ ಅಬ್ಬಾಸ್ ಮೇಲಿನಮನಿಯವರು “ಲೋಕ-ದರ್ಶನ” ಸಾಪ್ತಾಹಿಕದಲ್ಲಿ ಬೆಳಕು ಕಂಡ ನನ್ನ ಕಥೆ “ಜನ್ನತ್” ಬಗ್ಗೆ ಪ್ರತಿಕ್ರಿಯಿಸಿ ಬೆನ್ನ ತಟ್ಟಿದ್ದರು. ಹಾಗೇ ನಾನು ಸಹ “ಪ್ರಜಾ-ವಾಣಿ”ಯಲ್ಲಿ ಪ್ರಕಟವಾದ ಅವರ ಕಥೆ “ಅಮಿನಾಳ ಹಝ್ ಯಾತ್ರೆ”ಯ ಬಗ್ಗೆ ಮಾತಾಡಿದ್ದೆ. ತನ್ನ ಗಂಡನ ಹಝ್ ಯಾತ್ರೆಯ ಕನಸು ಪರೋಪಕಾರದಲ್ಲಿ ಸಾಕಾರಗೊಳಿಸುವ ಒಂದು ಶೋಷಿತ ಹೆಣ್ಣಿನ ಕರಳು ಮಿಡಿಯುವ ಕಥೆ ತುಂಬಾ ಹೈದಯ ಸ್ರ‍್ಶಿಯಾಗಿ ಮೂಡಿ ಬಂದಿತ್ತು. ಆ ಕಥೆಯ ಬಗ್ಗೆ ಬರೆಯುವುದು ಈ ಲೇಖನದ ಉದ್ದೇಶವಲ್ಲವಾದ್ದರಿಂದ ಅದು ಇಲ್ಲಿ ಅಪ್ರಸ್ತುತ ಅವರ-ನನ್ನ ನಡುವೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಅವರು ಎತ್ತಿದ ಮುಖ್ಯವಾದ ಪ್ರಶ್ನೆಯೊಂದು ನನ್ನ ಚಿಂತನೆಗೆ ಗ್ರಾಸವಾಗಿದ್ದೆ ಈ ಲೇಖನಕ್ಕೆ ಕಾರಣ. ನನ್ನ ಅವರ ಮಾತಿನ ನಡುವೆ ಆಕಸ್ಮಿಕವಾಗಿ ಅವರಿಂದ ಬಂದ ಪ್ರಶ್ನೆಗೆ ಆ ಕ್ಷಣದಲ್ಲಿ ನಾನು ನಿರುತ್ತರನಾಗಿದ್ದಂತು ನಿಜ. ಅವರು ಕೇಳಿದ “ಒಬ್ಬ ಸಾಹಿತಿಯಾಗಿ ಧರ್ಮದ ಕುರಿತು ತಮ್ಮ ನಿಲುವುವೇನು?” ಎನ್ನುವದಿತ್ತು. ಪ್ರಶ್ನೆಗೆ ನಾನು ಉತ್ತರವಾಗಿ ‘ಯಾರೇ ಆಗಲಿ ಯಾವುದರ ಕುರಿತೇಯಾಗಲಿ ಪ್ರಶ್ನಾತೀತವಾದ ನಂಬಿಕೆ ಹೊಂದಿದಾಗ ನಾವು ಯಾವುದನ್ನೂ ವಿಶಾಲವಾದ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದಾಗ “ಯಾವುದೇ ಧರ್ಮವನ್ನು ನಾವು ಸರಿಯಾದ ಅರ್ಥದಲ್ಲಿ ಸ್ವೀಕರಿಸಿದಾಗ ನಮ್ಮಲ್ಲಿ ಅಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ. ಈ ಮುಖಾಂತರ ಭವದ ಸ್ಥಿತಿ ನಿರ್ಮಾಣವಾಗುತ್ತದೆ. ಭವದ ಸ್ಥಿತಿ ಎಂದರೆ ಸಂತನ ಭಾವನೆ, ಅದು ಬಂದಾಗ ಎಲ್ಲವನ್ನು ಪ್ರೀತಿಸುವ, ಸ್ವೀಕರಿಸುವ ವಿಶಾಲಮನೋಭಾವ ತಾನಾಗಿಯೇ ಉಂಟಾಗುತ್ತದೆ” ಎಂದು ವಿವರಿಸಿದ್ದರು. ಅವರ ಆ ಮಾತು ಬಹಳ ದಿನಗಳವರೆಗೆ “ಧರ್ಮದ ಕುರಿತು ನನ್ನ ಧೋರಣೆ ಏನು ?” ಎನ್ನುವ ಕಾಡಿದ ಪ್ರಶೆಗೆ ಉತ್ತರ ಹುಡುಕಲು ತೊಡಗಿದ್ದೆ.
ಜಾತಿಯ ಬಣ್ಣ ಬಳೆದುಕೊಂಡು ಮಾನವ ಕಲ್ಯಾಣದ ಉದ್ದೇಶವನ್ನೇ ಮರೆತು ನಾ ಶ್ರೇಷ್ಠ, ತಾ ಶ್ರೇಷ್ಠ ಎಂದು ಹೊಡೆದಾಡಕೊಂಡು ರಕ್ತ ಸಿಕ್ತವಾಗಿ ಮಾನವ ಕುಲಕ್ಕೇ ಮಾರಕವಾಗಿರುವ ಧರ್ಮಗಳಲ್ಲಿ (ಅವುಗಳ ಉದ್ದೇಶ ಒಳ್ಳೆಯದಿದ್ದರೂ) ಗುರ್ತಿಕೊಳ್ಳುವುದು ಯಾಕೋ ಹೆದರಿಕೆಯಾಗುತ್ತಿತ್ತು. ಎಲ್ಲ ಧರ್ಮಗಳ ಸಾರವೂ ಒಂದೇ ಆಗಿರುವಾಗ ಒಂದೇ ಧರ್ಮದಲ್ಲಿ ನಂಬಿಕೆ ಹೊಂದುವುದು ಕೂಡ ಸಾಧ್ಯವಿರಲಿಲ್ಲ. ನನ್ನ “ಒಂದು ಜೋಡಿ ಕಣ್ಣು” ಕವಿತೆಯಲ್ಲಿ ನಾನು ಯೋಚಿಸುವಂತೆ “ಧರ್ಮ ಬೇರೆ ಬೇರೆ/ ಹೆಸರು ಬೇರೆ ಬೇರೆ/ ಆಶಯವೊಂದೇ/ ಪ್ರೇಮ..ದಯೆ..ಕರುಣೆ..” ಇತ್ಯಾದಿ ಅಂದರೆ ಮಾನವೀಯ ಮೌಲ್ಯಗಳೇ ಸರ್ವ ಧರ್ಮಗಳ ತಿರುಳು. ಬಹುಶಃ ನಾವು ಒಂದೇ ಧರ್ಮದ ಬಗ್ಗೆ, ಒಬ್ಬನೇ ಧರ್ಮ ಬೋಧಕನ ಬಗ್ಗೆ ಅಂಧಶ್ರದ್ಧೆ ಹೊಂದಿದಾಗಲೇ ನಾವು ಜಾತಿವಾದಿಗಳು ಆಥವಾ ಮೂಲಭೂತವಾದಿಗಳಾಗುವ ಅಪಾಯವಿರುತ್ತದೆ. ಅದಕ್ಕೆ ನಾನು ಆಂತರಿಕವಾಗಿ ಒಪ್ಪಿಕೊಂಡ ಕುವೆಂಪು ಅವರ ವಿಶ್ವ ಮಾನವ ಪರಿಕಲ್ಪನೆ ಹದಗೆಟ್ಟ ಇಂದಿನ ಧಾರ್ಮಿಕ ಪರಿಸ್ಥಿತಿಗೆ ಪರ‍್ಯಾಯವಾಗಿ ಕಂಡು ಬರುತ್ತದೆ ಅನಿಸುತ್ತದೆ.
ಓ ನನ್ನ ಚೇತನ ಆಗು ನೀ ಅನಿಕೇತನ…ಎಂದು ತಮ್ಮನ್ನು ತಾವೇ ಕರೆ ನೀಡಿಕೊಂಡ ಕುವೆಂಪು ಅವರು-
“ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರ ಬನ್ನಿ
ಬಡತನದ ಬುಡಮೆಟ್ಟು ಕೀಳ ಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿಸಿ
ವಿಜ್ಙಾನ ದೀವಿಗೆಯ ಹಿಡಿಯ ಬನ್ನಿ
ಓ ಬನ್ನಿ ಸೋದರರೆ ಬೇಗ ಬನ್ನಿ”
ಎಂದು ನಮ್ಮನ್ನೆಲ್ಲ ಹೊಸ ಆಚಾರ ವಿಚಾರ, ಹೊಸ ಆಲೋಚನೆಯತ್ತ ಕಂಡೂಯ್ದ ಕುವೆಂಪು ಅವರು ‘ಜಲಗಾರ’ಎಂಬ ನಾಟಕದಲ್ಲಿ ಹಾಡಿದ್ದು ಹೀಗೆ-
“ವಿಗ್ರಹದೊಳಗಿದೆ ರಾಮ, ಯಾರಿಂದೀ ಲೋಕದಾರಾಮ
ಮೂಡಣದೊಳಗಿರುವನು ರಾಮ ಪಡುವಣದಿ ಅಲ್ಲಾಹು
ಹೃದಯದೊಳು ನೀನೊಮ್ಮೆ ಸೆಲೆ ವಿಚಾರಿಸೆ
ಅಲ್ಲೇ ಇರುವನು ಕರೀಮ, ಅಲ್ಲೇ ಇರುವನು ರಾಮ
ಅಲ್ಲಿ ರಾಮರ ಕಂದನೇ ಆಗಿರುವನು ಕಬೀರ”
ಎಂದು ಈ ಮೂಲಕ ಅವರು ತಮ್ಮ ಅಧ್ಯಾತ್ಮಿಕ ನಿಲುವು ವ್ಯಕ್ತ ಪಡಿಸುತ್ತಾರೆ. ಇದನ್ನೇ ನಾವು ಸರಳವಾಗಿ ಮನೆಯೇ ಮಂತ್ರಾಲಯ, ಮನಸೇ ದೇವಾಲಯ ಎಂದು ನಡೆದುಕೊಂಡರೆ ಪ್ರಾರ್ಥನಾ ಸ್ಥಳಗಳ, ಧಾರ್ಮಿಕ ವ್ಯಕ್ತಿಗಳ ಹೆಸರಿನಲ್ಲಿ ಕಿತ್ತಾಡುವುದು ನಿಲ್ಲಿಸಬಹುದೇನೋ! ಈ ಕಾರಣಕ್ಕಾಗಿಯೇ ಕುವೆಂಪು ಅವರ ವಿಚಾರ ಇಂದಿಗೂ ಪ್ರಸ್ತುತ ಅನಿಸುತ್ತದೆ. ಹೀಗಾದಲ್ಲಿ ಮನುಷ್ಯ ಮನುಷ್ಯರ ನಡುವೆ ತೆಲೆ ಎತ್ತಿರುವ ಗೋಡೆಗಳನ್ನು ಕೆಡವಿ ಎಲ್ಲರೂ ಒಂದೇ ಎನ್ನುವ ಸಮದರ್ಶಿತ್ವ ಭಾವನೆ ಉಂಟಾಗಿ ಹೃದಯದಲ್ಲೇ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗಬಹುದೇ ಕಣ್ಣಿಗೆ ಕಾಣದ ದೇವರೆಂದರೆ ಸಹನೆ, ಒಲುಮೆ. ದಯೆ. ಕರುಣೆ. ಕ್ಷಮೆ ಮುಂತಾದ ಉತ್ತಮ ಉದಾತ್ತ ಗುಣಗಳ ಒಟ್ಟು ಮೊತ್ತ ಎಂದು ಹೇಳಿದರೆ ತಪ್ಪಾಗಲಾರದು.
ಬುದ್ದಿಜೀವಿಗಳು ಅಥವಾ ಜಾತ್ಯಾತೀತರು ಎಂದು ಕರೆಸಿಕೊಳ್ಳವ ಬಹಳಷ್ಟು ಮಂದಿ ಆಂತರ್ಯದಲ್ಲಿ ಧರ್ಮದ ಹೆಸರಿನಲ್ಲಿ ಜಾತಿ ಸರ್ಪವನ್ನು ಸಾಕಿಕೊಂಡೆ ಇರುತ್ತಾರೆ. ಧರ್ಮದ ಬಗ್ಗೆ ಮಾತ್ನಾಡುವಾಗ ಬಲು ಎಚ್ಚರದಿಂದಲೇ ತಾವು ಜಾತಿವಾದಿಗಳಲ್ಲ ಎಂಬಂತೆ ನಟಿಸಿ ಧರ್ಮದ ಹೆಸರಿನಲ್ಲಿ ಜಾತಿಯನ್ನು ಪ್ರೇರೆಪಿಸುತ್ತಲೇ ಇರುತ್ತಾರೆ. ಆದರೆ ಕುಟುಂಬದ ಅಥವಾ ಸಮಾಜದ ಪ್ರಶ್ನೆ ಬಂದಾಗ ಇದನ್ನು ಅನಿವಾರ್ಯವಾಗಿ ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಧರ್ಮರೂಪದಲ್ಲಿ ಇಡೀ ಮನುಷ್ಯ ಜಾತಿಗೆ ಮಾರಕವಾಗಿರುವ ಈ ಜಾತಿ ವ್ಯವಸ್ಥೆಯನ್ನೇ ಸಾರಾಸಗಟಾಗಿ ಕಿತ್ತೊಗೆಯಲು ಸಾಧ್ಯವಿಲ್ಲವೇ ಎನ್ನುವುದು ಪ್ರಗತಿ ಪರ ಚಿಂತಕರು ಚರ್ಚೆ ಮಾಡುವ ಅಗತ್ಯ ಈಗಲೂ ಇದೆ. ಹೀಗಾದಾಗ ಧಾರ್ಮಿಕ ತಳಹದಿಯ ರಾಷ್ಟ್ರದಲ್ಲಿ ಅದು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಬರಬಹುದೇನೋ ಅದಕ್ಕೆಂದೇ ಬಹುಶಃ ಋಷಿಮುನಿಗಳು, ಸಾಧುಸಂತರು, ಪೀರಪೈಗಂಬರರು ಒಂದಿಲ್ಲ ಒಂದು ಧರ್ಮದ ನೆರಳಲ್ಲಿ ನಿಂತಕೊಂಡೇ ಇ ಡೀ ಮನುಷ್ಯ ಸಂಕುಲಕ್ಕೆ ಬೇಕಾದರು, ಬೆಳಕಾದರು. ತಮ್ಮ ಅಧ್ಯಾತ್ಮ ಸಾಧನೆಯ ಮುಖಾಂತರವೇ ಮಾನವ ಕಲ್ಯಾಣ ಮಾಡಿದ ಅವರು ಧರ್ಮದ ಮೂಲಕವೇ ಜಾತ್ಯಾತೀತರಾಗಿ ಗುರ್ತಿಸಿಕೊಂಡರು. ಆದರೆ ಅಂಥ ಮಹಾತ್ಮರನ್ನು ಸಹ ಒಂದೇ ಧರ್ಮಕ್ಕೆ ಸಿಮೀತಗೊಳಿಸಿ ಅವರ ಹೆಸರಿನಲ್ಲಿ ರಕ್ತದ ಕೋಡಿಯನ್ನೇ ಹರಿಸುತ್ತಿರುವುದು ಧರ್ಮಗಳ ದುರಂತವಲ್ಲಲ್ಲದೇ ಇನ್ನೇನು!
ಯಾವ ಕಾಲದ ಶಾಸ್ತ್ರ, ಏನು ಹೇಳಿದರೇನು
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು
ಹಿಂದಿನ ಋಷಿಗಳು ಮಾನವರೆ ನಮ್ಮಂತೆ
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ”(ಕುವೆಂಪು)
ಕುವೆಂಪು ಅವರ ವಿಚಾರ ಈ ಕಾಲಕ್ಕೆ ಸಮ್ಮತವಾದ ಮಾತ್ರಕ್ಕೆ ಅವರು ನುಡಿದಿದ್ದೇ ಅಂತಿಮ ಸತ್ಯವೆಂದು ನಂಬಿ ಅವರನ್ನೆ ಆರಾಧಿಸಿ ಅವರ ಬಗ್ಗೆ ಅಂಧಶ್ರದ್ಧೆ ಹೊಂದುವುದು ಆಥವಾ ಅವರ ಹೆಸರಿನಲ್ಲಿ ಹೊಡೆದಾಡುವಂತಾದರೆ ಅದು ಸಹ ಅಷ್ಟೇ ಅಪಾಯಕಾರಿ ಸಂಗತಿ ಅಲ್ಲವೇ?. ಅವರು ಸಹ ಧರ್ಮದ ಬೋಧಕರು ಅಥವಾ ಪ್ರಚಾರಕರಾಗಿದ್ದರೆ ಖಂಡಿತ ಈ ಅಪಾಯ ಇರುತ್ತಿತ್ತು ಅನ್ನಿಸುತ್ತದೆ. ಅವರೊಬ್ಬ ಕವಿ ಸಾಹಿತಿ ಎನ್ನುವ ಕಾರಣಕ್ಕೆ ಹೀಗೆಲ್ಲ ಆಗಿಲ್ಲ ಎನ್ನುವುದು ನೆಮ್ಮದಿ ವಿಚಾರ. ಒಟ್ಟನಲ್ಲಿ ಧರ್ಮ ಹೆಸರಿನಲ್ಲಿ ಹಿಂಸೆ, ಅನಾಚಾರಗಳು ಅತ್ಯಾಚಾರಗಳು ಹೆಚ್ಚಾದಾಗ ಧರ್ಮ ಒಂದು ರೋಗವಾಗಿ ಕಾಣಿಸುವುದು ಸಹಜ. ಅದಕ್ಕಾಗಿ ಬರ್ಟ್ರಂಡ್ ರಸಲ್ ಎಂಬ ಬ್ರಟೀಷ ದಾರ್ಶನಿಕ “ನಾನು ಧರ್ಮವನ್ನು ಒಂದು ರೋಗವೆಂದು ಪರಿಗಣಿಸುತ್ತೇನೆ, ಅದು ಭೀತಿಯಿಂದ ಉಗಮವಾಗಿ ಮಾನವ ಜನಾಂಗದ ಹೇಳಿಕೊಳ್ಳಲಾರದ ದಃಖ ದುಮ್ಮಾನಗಳಿಗೆ ಕಾರಣವಾಗಿದೆ “ ಎಂದು ಹೇಳುತ್ತಾನೆ. ವಿಲ್ ಡ್ಯುರಾಂಟ್ ಎಂಬ ಇನ್ನೊಬ್ಬ ದಾರ್ಶನಿಕ ಹೇಳುವ ಹಾಗೆ “ ನಮ್ಮ ಕಾಲದ ಅತ್ಯಂತ ಮಹತ್ವದ ಪ್ರಶ್ನೆ ಸಮಾಜವಾದ ಅಥವಾ ವ್ಯಕ್ತಿವಾದವಲ್ಲ, ಯೂರೋಪ್ ಅಥವಾ ಅಮೇರಿಕ ಅಲ್ಲ, ಪೂರ್ವ ದೇಶಗಳು ಅಥವಾ ಪಶ್ಚಿಮ್ ದೇಶಗಳು ಅಲ್ಲ; ಅದಾವುದೆಂದರೆ ಮಾನವರು ದೇವರಿಲ್ಲದೆ ಬದುಕಬಲ್ಲರೇ? ಎಂಬುದಾಗಿ ಪ್ರಶ್ನಿಸುತ್ತಾನೆ. ಇದೇ ಪ್ರಶ್ನೆಯನ್ನು ನಾವಿಂದು ಕೇಳಿಕೊಳ್ಳಬೇಕಾಗಿದೆ ಎನ್ನಿಸುತ್ತದೆ. ಹೀಗಾದಾಗ ಮಾತ್ರ ನಾವು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಜಾಗತೀಕ ಕಲಹವನ್ನು ನಿಲ್ಲಿಸಿ ವಿಶ್ವ ಪ್ರೇಮ ಭಾತೃತ್ವವನ್ನು ಬೆಳೆಸಲು ಸಾಧ್ಯ. ಅದನ್ನೇ ನಮ್ಮ ಭಾರತೀಯ ಚಿಂತಕ ಎ ಎನ್ ಮೂರ್ತಿರಾವ್ ಅವರು “ಮಾನವ ಮತದ ಹಿಂದಿರುವ ತತ್ವಗಳು ಯಾವುವು? ಸರ್ವಸಮತಾಭಾವ, ನ್ಯಾಯ, ನೀತಿ- ಒಟ್ಟಿನಲ್ಲಿ ಪ್ರೇಮ. ನಮಗೆ ಬೇಕಾದ ದೇವರು ಎಂಥವನು ಎಂದು ನಾವು ಯೋಚಿಸಿದಾಗ ನಾವು ಬಯಸುವ ಗುಣಗಳು ಇವೇ ತಾನೆ?” ಎಂದು ಕೇಳುತ್ತಾರೆ. ಆದರೆ ವಾಸ್ತವದಲ್ಲಿ ಈ ಗುಣಗಳ ವಿರುದ್ಧವಾಗಿ ವಿವಿಧ ಧರ್ಮದ ಅನುಯಾಯಿಗಳು ತಮ್ಮ ತಮ್ಮ ದೇವರುಗಳ ಅಸ್ತಿತ್ವಕ್ಕಾಗಿ ಹೋರಾಡುತ್ತಾ ಸಮಾಜದ ಸ್ವಾಸ್ತ್ಯವನ್ನು ಕೆಡಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಅನಿಸುತ್ತದೆ. ಆದರೆ ಇವುಗಳ ನಡುವೆ ಬಲಿಯಾಗುತ್ತಿರುವರು ಯಾರು? ಅಮಾಯಕ ಮನುಷ್ಯರು ತಾನೇ?.
“ಯಾವುದೇ ಧರ್ಮವನ್ನು ನಾವು ಸರಿಯಾದ ಅರ್ಥದಲ್ಲಿ ಸ್ವೀಕರಿಸಿದಾಗ ನಮ್ಮಲ್ಲಿ ಅಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ. ಈ ಮುಖಾಂತರ ಭವದ ಸ್ಥಿತಿ ನಿರ್ಮಾಣವಾಗುತ್ತದೆ. ಭವದ ಸ್ಥಿತಿ ಎಂದರೆ ಸಂತನ ಭಾವನೆ, ಅದು ಬಂದಾಗ ಎಲ್ಲವನ್ನು ಪ್ರೀತಿಸುವ, ಸ್ವೀಕರಿಸುವ ವಿಶಾಲಮನೋಭಾವ ತಾನಾಗಿಯೇ ಉಂಟಾಗುತ್ತದೆ” ಎನ್ನುವ ಕಥೆಗಾರ ಅಬ್ಬಾಸ ಸರ್ ಅವರ ಮಾತಿಗೆ ನಾನು ನಿಜವಾಗಿಯೂ ಪ್ರತಿಯೊಬ್ಬರಲ್ಲಿ ಈ ಭಾವನೆ ಮೂಡಿ ಎಲ್ಲ ಧರ‍್ಮದ ಜನರನ್ನು ಸಮನಾಗಿ ಕಾಣುವಂತೆ ಆಗಿ ಧರ್ಮ ಸಂಘರ್ಷದಿಂದ ಜಗತ್ತನ್ನು ರಕ್ಷಿಸಬಹುದು ಎನ್ನುವ ಮಾತನ್ನು ಸೇರಿಸಲು ಬಯಸುತ್ತೇನೆ.
-ಅಶ್ಫಾಕ್ ಪೀರಜಾದೆ.