ಅದೊಂದು ದಿನ ನಿಸ್ತೇಜತೆ ಮೈಯಲ್ಲಿ ಹೊಕ್ಕು, ತನ್ನೆಲ್ಲ ಸಂತೋಷವನ್ನು ಸಮಾಧಿಗೊಳಿಸಿ.. ತಲೆ ಮೇಲೆ ಕೈ ಹೊತ್ತು ಕೂಡುವಂತೆ ಮಾಡಿತ್ತು. ನಡೆದ ಇತಿಹಾಸವೆಲ್ಲ ಕಣ್ಣಿನ ಹನಿಗಳು ಬೇಡವೆಂದರೂ ನೆನಪಿಸುತ್ತಿವೆ… ಅರೆ ಘಳಿಗೆಯೂ ಸುಮ್ಮನಿರದ ಮನಸು ಇಂದೇಕೋ ಸ್ಮಶಾನ ಮೌನಕ್ಕೆ ಬಲಿಯಾಗಿದೆ.
ಹೌದು… ಹೌದು….. ಅವನೇಕೆ ಹೀಗೆ ಮಾಡಿದ…!! ಸುಖಾಸುಮ್ಮನೆ ಕೋಪಗೊಳ್ಳದವನು ಇಂದೇಕೆ ಮೃಗದಂತಾದ, ಗೋವಿನಂತಹ ಮನಸ್ಸುಳ್ಳ ನನ್ನ ತೇಜು, ಏಕೆ ಈ ದಿನ ಹೆಬ್ಬುಲಿಯಂತಾಡಿದ.
ಸದಾ ಹಸನ್ಮುಖಿ ಲವಲವಿಕೆಯ ಗಣಿ ನೂರು ಮಾತಿಗೆ ಒಂದು ಮಾತನಾಡುವವ ಒಂದು ಮಾತೂ ಆಲಿಸದೆ ನನ್ನ ಮೇಲೆ ಹೆಗರಾಡಿದ.
ಒಂದು ಇರುವೆಗೂ ನೋವು ಕೊಡದ ನನ್ನ ತೇಜು… ತನ್ನ ಹೃದಯವನ್ನೇ ಹಿಂಸಿಸುವಷ್ಟು ಕ್ರೂರಿ ಹೇಗಾದ. ನನ್ನನ್ನೇ ಸದಾ ಆರಾಧಿಸುತ್ತಿದ್ದವ, ಪ್ರೇಮದ ಅಂಬರದಲ್ಲಿ ಹೂವಿಗಿಂತಲೂ ಸೂಕ್ಷö್ಮವಾಗಿ ಆರೈಕೆ ಮಾಡುತ್ತಿದ್ದ ತೇಜು. ಇಂದೇಕೆ ನನ್ನ ಮೇಲೆ, ಕೈ ಮಾಡಿಬಿಟ್ಟ. ಅಯ್ಯೋ…!!!
ಏಕೋ ನನ್ನ ಮನಸು; ಗಾಡಾಂಧಕಾರದೊಳಗೆ ರೆಕ್ಕೆ ಹರಿದ ಹಕ್ಕಿ ನರಳಾಡುವಂತೆ ಸಂಕಟ ಪಡುತ್ತಿದೆ. ಎಂದೂ ಇಷ್ಟು ಹಿಂಸೆ ಆಗಿರಲಿಲ್ಲ. ಆದರೆ ನನ್ನ ಪ್ರಿಯತಮನ ಈ ದೂಡಿಕೆ, ಅವನು ನನ್ನ ಬಗ್ಗೆ ವ್ಯಕ್ತಪಡಿಸಿದ ಉದಾಸೀನತೆ, ಚುಚ್ಚು ಮಾತುಗಳು ನನ್ನನ್ನು ಕೊಲ್ಲುತ್ತಿವೆ.
ತೇಜುವಿನ ಈ ಸ್ಥಿತಿಗೆ ಪರೋಕ್ಷವಾಗಿ ನಾನೇ ಕಾರಣ ಆಗಿಬಿಟ್ಟೆನೇ! ಇಲ್ಲಾ….. ಖಂಡಿತವಾಗಿಯೂ ಇಲ್ಲ. ಎಂದು ದುಃಖ ಗಟ್ಟಿದ ಹೃದಯದಿಂದ ಅಳುತ್ತಿದ್ದ ವಿಭಾವರಿಗೆ, ಪ್ರತೀ ನೋವಿಗೂ ತಕ್ಷಣವೇ ಸ್ಪಂದಿಸುತ್ತಿದ್ದ, ಧೈರ್ಯ ತುಂಬಿ ಸಂತೈಸುತ್ತಿದ್ದ ಕೈಗಳು ಈ ದಿನ ಇರಲಿಲ್ಲವೆಂಬುದನ್ನು ನೆನೆದು ಮತ್ತಷ್ಟು ದುಃಖವಾಯಿತು.
ವಿಭಾವರಿ….. ಶೂನ್ಯ ಮನಸ್ಥಿತಿಗೆ ಜಾರಿ ಅಲ್ಲೇ ಕುಸಿದು ಬಿದ್ದಳು. ಎಚ್ಚರ ತಪ್ಪಿಯೂ ಆಗಿತ್ತು.
ಇತ್ತ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು, ಮನೋಸ್ಥಿಮಿತ ಕಳೆದುಕೊಂಡು ದೂಷಿಸಿದ್ದು ಕೇವಲ ವಿಭಾಳನ್ನಲ್ಲ, ಅವಳ ಪವಿತ್ರ ಪ್ರೇಮವನ್ನು. ತನ್ನ ಪ್ರೇಮದ ಮೂರ್ತಿಯನ್ನೇ ದೂಷಿಸಿ ಹೊರಟ ತೇಜುವಿನ ಮನಸೇನು ನೆಮ್ಮದಿಯಾಗಿರಲಿಲ್ಲ. ಪ್ರೇಮ ಮೊಳೆತ ದಿನದಿಂದಲೂ ವಿಭಾಳ ಪ್ರತಿ ಹೆಜ್ಜೆ ಹೆಜ್ಜೆಗೂ ಜೊತೆಯಾದವನು, ಅವಳ ಪ್ರತಿ ಮಾತನ್ನೂ ಕಾರ್ಯರೂಪಕ್ಕೆ ತಂದವನು. ಅರೆ ಘಳಿಗೆಯೂ ಅನ್ಯ ಮನಸ್ಕನಾಗಿರದೆ ಅವಳದೇ ಗುಂಗಲ್ಲಿ ಇದ್ದವನ ಮನಸು ಇವತ್ತು ಇಷ್ಟರ ಮಟ್ಟಿಗೆ ಕ್ರೋಧವಾಗಿರುವುದಕ್ಕೆ ಕಾರಣವೂ ಇದೆ.
ಅದೇ ವಿಭಾ…. ವಿಭಾಳ ನಡೆ.
ಹೌದು ವಿಭಾವರಿ ಓದಿದ್ದು ಡಾಕ್ಟರ್ ಪದವಿ. ಮುಂದುವರೆದು ಹೃಜಯತಜ್ಞೆ ಆಗಲು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೊರ ದೇಶಕ್ಕೆ ಹೊರಡಬೇಕಿದೆ. ಅದು ಅವಳ ಗುರಿಯಾದರೂ ತೇಜುವಿಗೆ ತಡೆಯಲಾರದ ಸಂಕಟ, ನರಕಯಾತನೆ ಆಗಿದೆ. ಪ್ರಾಣಕ್ಕಿಂತ ಹೆಚ್ಚಾಗಿದ್ದ ವಿಭಾ ಪರದೇಶಕ್ಕೆ ಹೋದರೆ ತೇಜುಗೆ ಸಂತೋಷವಿಲ್ಲವೆ ಂದಲ್ಲ. ಆದರೆ ಆಕೆಯನ್ನು ಅರೆ ಘಳಿಗೆಯೂ ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದ ತೇಜು ಹೃದಯವೇ ದೂರ ಆದಂತಹ ಅನುಭವಕ್ಕೆ ಸಿಕ್ಕು ನಲುಗುತ್ತಿದ್ದ. ನಿಜವಾಗಿಯೂ ಪ್ರೀತಿಯನ್ನು ದೂರ ಕಳಿಸುವುದೆಂದರೆ ಸಹಜವಾಗಿಯೇ ನೋವಾಗುತ್ತದೆ. ಆದರೆ ತಾನು ಮಾಡಿದ್ದು ಎಷ್ಟು ಸರಿ? ತನ್ನ ಮನದನ್ನೆ ಉನ್ನತ ವ್ಯಾಸಂಗಕ್ಕೆ ಹೊರಟರೆ ಖುಷಿಪಡಬೇಕೇ ಹೊರತು ಈ ರೀತಿಯಾಗಿ ಅವಳ ಮನಸಿಗೆ ನೋವು ಮಾಡುವುದು ಪ್ರೀತಿಗೆ ಅವಮಾನ ಮಾಡಿದಂತೆ. ಆದರೂ ೨ ವರ್ಷ ವಿಭಾಳನ್ನು ಬಿಟ್ಟು ಇರುವುದು ಹೇಗೆ? ಎಂಬ ಚಿಂತೆಯಲ್ಲಿ ಕಣ್ಣೀರಾಗುವುದರಲ್ಲಿ ಫೋನ್ ‘ಓ ಮೈ ಲವ್ ರಿಸೀವ್ ಮೀ’ ಎಂದು ವಿಭಾಳ ಧ್ವನಿಯು ಫೋನು ಟ್ಯೂನಾಗಿ ಕೂಗಿತು. ವಿಭಾಳದೇ ಕಾಲ್ ಎಂದು ರಿಸೀವ್ ಮಾಡಿದ. ಅತ್ತ ಕಡೆಯಿಂದ ಗಾಬರಿಯ ಧ್ವನಿ, “ವಿಭಾ ತಲೆ ತಿರುಗಿ ಬಿದ್ದಿದಾಳೆ; ಬೇಗ ಬಾ ತೇಜು” ಎಂದಷ್ಟೇ ಹೇಳಿ ಪ್ರತಿ ಮಾತಿಗೆ ಕಾಯದೆ ಕಾಲ್ ಕಟ್ ಮಾಡಿದ್ದರು. ತೇಜು ಆಕಾಶವೇ ತಲೆ ಮೇಲೆ ಬಿದ್ದಂತೆ ತನ್ನವಳನ್ನು ನೋಡಲು ಓಡಿದ.
ತೇಜು-ವಿಭಾ ಇಬ್ಬರ ನಡುವಿನ ಪ್ರೇಮದ ಆಳಕ್ಕೆ ಹೋಲಿಕೆಯೇ ಇರಲಿಲ್ಲ. ಒಬ್ಬರನ್ನೊಬ್ಬರು ಮದುವೆಯ ಮುಂಚೆಯೇ ಸಂಪೂರ್ಣ ಅರ್ಥಮಾಡಿಕೊಂಡವರು. ನಿರ್ಮಲ ಮತ್ತು ಪವಿತ್ರ ಪ್ರೇಮ ನಮ್ಮದಾಗಬೇಕು ಎಂಬುದು ಇಬ್ಬರ ಒಮ್ಮತದ ಮನಸ್ಥಿತಿಯಾಗಿತ್ತು. ಅಂತೆಯೇ ಇದ್ದರೂ ಕೂಡ. ವಿಭಾಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದರೂ ದೂರದೂರಿಗೆ ಕಳಿಸಲು ತೇಜುವಿನ ಮನಸು ಒಪ್ಪುತ್ತಿಲ್ಲ. ವಿಭಾಳಿಗೂ ಮನಸಿದ್ದಿಲ್ಲವಾದರೂ ಹೋಗುವುದು ಅತೀ ಅವಶ್ಯಕವಾಗಿತ್ತು. ಈ ದಿನಮಾನದಲ್ಲಿ ಹೆಚ್ಚಿನ ವ್ಯಾಸಂಗ ಅನಿವಾರ್ಯವೂ ಕೂಡ ಎಂಬುದು ಇಬ್ಬರಿಗೂ ತಿಳಿಯದ ವಿಷಯವೇನಲ್ಲ. ಎಲ್ಲ ಗೊತ್ತಿದ್ದೂ ನಾನೇಕೆ ಹೀಗೆಮಾಡಿದೆ! ವಿಭಾಳನ್ನು ದೂಷಿಸಿ ಬರುವ ಮಟ್ಟಕ್ಕೆ ಏಕೆ ಹೋದೆ, ಅವಳನ್ನು ಕಂಡು ಸಂತೈಸಬೇಕು; ಸಂತೋಷದಿ ಂದ ಧೈರ್ಯ ತುಂಬಿ ಬೀಳ್ಕೊಡಬೇಕು; ಎಂದು ತನ್ನ ವೇಗವನ್ನು ಹೆಚ್ಚಿಸಿದ ತೇಜು ಬೇಗನೆ ವಿಭಾಳ ಬಳಿ ಬಂದ. ಅಷ್ಟರಲ್ಲಾಗಲೇ ವಿಭಾಳಿಗೆ ಎಚ್ಚರವಾಗಿತ್ತು. ಅಳುತ್ತ ಕುಳಿತಿದ್ದ ವಿಭಾಳನ್ನು ಸಂತೈಸಲು ಆಗದೆ; ಅವಳ ಗೆಳತಿ ವೇದಶ್ರೀ, ತೇಜು ಬರುವುದನ್ನೇ ಕಾಯುತ್ತಿದ್ದಳು. ತೇಜು ಬಂದ ಕೂಡಲೆ “ಬನ್ನಿ ನಿಮ್ಮ ಮನದನ್ನೆಯನ್ನು ಸಮಾಧಾನಿಸಲು ಸಾಧ್ಯವಾಗುತ್ತಿಲ್ಲ. ಪರದೇಶಕ್ಕೆ ಹೋಗುವ ಅವಕಾಶ ಸಿಕ್ಕಿದ್ದಕ್ಕೆ ಅಭಿನಂದಿಸಲು ಬಂದೆ. ಇವಳು ಬಿದ್ದದ್ದು ಕಂಡು ಗಾಬರಿಯಾಗಿ ನಿಮಗೆ ಫೋನ್ ಮಾಡಿದೆ. ಮುಖಕ್ಕೆ ನೀರು ಹಾಕಿದೆ, ಎದ್ದವಳೇ ಅಳುತ್ತ ಕುಳಿತಿದ್ದಾಳೆ. ಇನ್ನು ನೀವುಂಟು, ನಿಮ್ಮ ಪ್ರೇಯಸಿ ಉಂಟು. ಆದರೆ ಒಂದು ಮಾತು ನಿಮ್ಮ ಪ್ರೇಮ ನಮ್ಮ ಕ್ಯಾಂಪಸ್ಗೇ ಮಾದರಿ. ಅದು ಎಂದಿಗೂ ಆದರ್ಶಮಯವಾಗಿಯೇ ಇರಲಿ ಎಂಬುದು ನನ್ನಾಸೆ. ಆಲ್ ದ ಬೆಸ್ಟ್. ಒಳ್ಳೆಯ ನಿರ್ಧಾರಕ್ಕೆ ಬನ್ನಿ. ಬಾಯ್ ವಿಭಾ ಹುಷಾರು ಕಣೆ” ಎಂದು ವೇದಶ್ರಿ ಹೊರಟಳು. “ತುಂಬಾ ಥ್ಯಾಂಕ್ಸ್ ರಿ ವೇದಶ್ರಿ, ಸರಿಯಾದ ಸಮಯಕ್ಕೆ ಬಂದು ವಿಭಾಳಿಗೆ ಉಪಚರಿಸಿದಿರಿ”.
“ನೋ ಮೆನ್ಶನ್ ಇಟ್ಸ್ ಮೈ ಡ್ಯೂಟಿ” ಎಂದು ವೇದಶ್ರೀ ಹೊರಟು ಹೋದಳು.
ತೇಜು ವಿಭಾಳನ್ನು ತಬ್ಬಿ “ನನ್ನ ಕ್ಷಮಿಸು ವಿಭಾ; ನಾನು ಹಾಗೆ ಮಾಡಬಾರದಿತ್ತು. ಭಾವುಕ ಆಗಿಬಿಟ್ಟೆ, ವ್ಯಾಮೋಹಕ್ಕೆ ಬುದ್ಧಿ ಇರುವುದಿಲ್ಲ ಎಂಬುದು ಸತ್ಯ ನೋಡು. ನನ್ನ ಮನದನ್ನೆ ಹಾರ್ಟ್ ಸ್ಪೆಸಿಯಲಿಸ್ಟ್ ಆದರೆ ಅದು ನನಗೆ ತಾನೆ ಹೆಮ್ಮೆ, ಹೋಗಿ ಬಾ. ಗುಡ್ ಲಕ್ ಸ್ವೀಟ್ ಹಾರ್ಟ್, ಏನೇ ಆದರೂ ನಿನ್ನ ಹಿಂದೆ ನಾನಿದೀನಿ, ಚಿಂತೆ ಬೇಡ” ಎಂದು ಗಟ್ಟಿ ಮನಸಿಂದ ನುಡಿದ. “ಪರದೇಶಕ್ಕೆ ಹೋಗಿ ಈ ಬಡವನನ್ನು ಮರಿಬೇಡಮ್ಮ ಮತ್ತೆ” ಎಂದು ನಗುತ್ತ ಹೇಳಿದರೂ ಕಣ್ಣಂಚಲ್ಲಿ ನೀರು ಜಿನುಗಿದ್ದು ವಿಭಾಳ ಗಮನಕ್ಕೆ ಬಾರದೇ ಇರಲಿಲ್ಲ. ತೇಜುವನ್ನು ಆಲಿಂಗಿಸಿದ ವಿಭಾ “ನನ್ನ ಪ್ರಾಣವನ್ನು ಬಿಟ್ಟು ಹೋಗಲು ನನಗೇನು ಇಷ್ಟನಾ? ಆದರೆ… ಆದರೆ…”
“ನಂಗೊತ್ತು ವಿಭಾ ನೆಮ್ಮದಿಯಾಗಿ ಹೋಗಿ ಬಾ, ಮಿಸ್ ಯು… ಲವ್ ಯು….”
“ಮತ್ತೆ ನೀನು ನನ್ನ ಆಲೋಚನೆಯಲ್ಲೇ ಇರದೆ ನಿನ್ನ ಕೆಲಸದಲ್ಲಿ ಮಗ್ನವಾಗಿರಬೇಕು. ಎರಡೇ ವರ್ಷ ಬಂದೊಡನೇ ನಾನು ನೀನು ಮದುವೆ ಆಗೋಣ. ಜಾಣ ಅಲ್ವಾ. ನನ್ ಬಂಗಾರ ನನ್ ತೇಜು” ಎಂದು ಮತ್ತೆ ಆಲಿಂಗಿಸಿ ಹಣೆಗೆ ಸಿಹಿ ಮುತ್ತಿಟ್ಟು “ತುಂಬಾ ಥ್ಯಾಂಕ್ಸ್ ನನ್ನ ಅರ್ಥ ಮಾಡಿಕೊಂಡಿದ್ದಕ್ಕೆ, ಲವ್ ಯು…. ನಾಳೆ ನನ್ನ ಕಳಿಸೋಕೆ ಬರ್ತೀ ಅಲ್ವಾ?”
ಖಂಡಿತ ಬರ್ತೀನಿ ವಿಭಾ, ಎಂದು ತನ್ನ ಆಶ್ರಮಕ್ಕೆ ಹೊರಟ ತೇಜು.
ಮರುದಿನ ಆಕಾಶಕ್ಕೆ ಹಾರಿದಳು ವಿಭಾ. ಕಸಿವಿಸಿ ಇಂದಲೇ ಕೈ ಬೀಸಿ ವಿಭಾಳನ್ನು ಕಳುಹಿಸಿದ ತೇಜುವಿಗೆ ಸಂಪೂರ್ಣ ಒಂಟಿತನ ಕಾಡತೊಡಗಿತ್ತು. ದಿನದಲ್ಲಿ ಬಿಡುವು ಸಿಕ್ಕಾಗಲೆಲ್ಲ, ಚಾಟಿಂಗ್ ಮಾಡುತ್ತ, ಮಾತನಾಡುತ್ತ ರಜಾ ದಿನಗಳಲ್ಲಿ ಜೊತೆಯಲ್ಲೇ ಇರುತ್ತಿದ್ದ ಜೋಡಿ ಇವತ್ತು ಕಣ್ಣಿಂದ ದೂರವಾಗಿದ್ದರೂ ಮನಸುಗಳು ಮಾತ್ರ ಒಂದೇ ಕಡೆ ಇದ್ದವು.
ವಿಭಾ ತನ್ನ ಸ್ಥಾನವನ್ನು ಮುಟ್ಟಿದ ಕೂಡಲೇ ಮೊದಲು, ಹಾಯ್ ತೇಜು ಈಗ ತಲುಪಿದೆ ಮಿಸ್ ಯು ಡಿಯರ್ ಎಂದು ಮೆಸೇಜ್ ಹಾಕಿದಳು. ಮಿಸ್ ಯೂ ಟೂ… ವಿಭಾ… ಸದಾ ನಿನ್ನ ನೆನಪಲ್ಲೇ ಇರುವೆ ಬಿಡುವಾದಾಗ ಕಾಲ್ ಮಾಡು. ನಿನ್ ಜೊತೆ ಮಾತಾಡದೇ ಇರಲಾರೆ ಎಂದು ರಿಪ್ಲೆöÊ ಮಾಡಿದ.
ಓಕೆ ತೇಜು ಎಂದ ವಿಭಾ ಮುಂದಿನ ತಯಾರಿಯಲ್ಲಿ ಮಗ್ನವಾದಳು. ಇತ್ತ ತನ್ನ ಕಾರ್ಯದಲ್ಲಿ ತಲ್ಲಿನವಾದ ತೇಜುಗೆ ಎಲ್ಲಿ ನೋಡಿದರೂ ವಿಭಾಳದೇ ಪ್ರತಿರೂಪ ಕಾಣಿಸುತ್ತಿತ್ತು. ಹಾಗೇ ದಿನಗಳು ಕಳೆದವು.
ತೇಜುವಿನ ನೆನಪಿನಲ್ಲೇ ಕಾಲ ಕಳೆಯುವುದು ಕಷ್ಟವಾಗಿ. ಅಳುತ್ತ ತೇಜುವಿಗೆ ಕಾಲ್ ಮಾಡುತ್ತಿದ್ದಳು. ತೇಜು ಧೈರ್ಯ ತುಂಬಿ ಧನಾತ್ಮಕ ಮಾತುಗಳೊಂದಿಗೆ ವಿಭಾಳನ್ನು ಸಂತೈಸಿ. “ಅಳಬೇಡ ಪುಟ್ಟಿ ಎರಡು ವರ್ಷ ಬೇಗ ಮುಗಿದು ಹೋಗುತ್ತೆ. ಆಮೇಲೆ ನಾವಿಬ್ಬರೂ ಜೊತೆಯಲ್ಲೇ ಇರ್ತೀವಿ ಅಲ್ವಾ ನನ್ ಬಂಗಾರ ಅಳಬೇಡಮಿ” ಎಂದ ಸಮಾಧಾನ ಮಾಡುತ್ತಿದ್ದ. ಫೋನ್ ಇಟ್ಟ ಮೇಲೆ ಹೋ ಎಂದು ತಾನು ಅಳುತ್ತಿದ್ದ ತೇಜು.
ಅಳುತ್ತಲೇ ಹಿಂದಿನದನ್ನೆಲ್ಲ ನೆನಪಿಸಿಕೊಳ್ಳುತ್ತಿದ್ದ. ಇಬ್ಬರೂ ಇಷ್ಟು ಪಟ್ಟು ಆಯ್ದುಕೊಂಡ ವೃತ್ತಿಯಲ್ಲಿ ತೇಜು ವಿದ್ಯಾರ್ಥಿ ವೇತನದ ಸಹಾಯದೊಂದಿಗೆ MBBSಗೆ ತೃಪ್ತಿ ಪಡೆದಿದ್ದರೆ. ಆಗರ್ಭ ಶ್ರೀಮಂತ ಮನೆತನದ ವಿಭಾ ಹಾರ್ಟ್ ಸ್ಪೆಶಲಿಷ್ಟ್ ಆಗಲು ಹೋಗಿದ್ದಾಳೆ. ಆದರೆ, ಅವಳನ್ನು ಕಳುಹಿಸುತ್ತಿರುವುದು ಅವಳ ತಂದೆ ತಾಯಿ ಅಲ್ಲ. ಇವರಿಬ್ಬರ ಪ್ರೇಮ ತಿಳಿದು, ದೂರಮಾಡಲು ಪ್ರಯತ್ನಿಸಿದಾಗ, ಎಲ್ಲವನ್ನು ತೊರೆದು ತೇಜು ಬಳಿ ಬಂದವಳು ವಿಭಾ. ಇನ್ನೂ ಓದುವ ಸಮಯದಲ್ಲೇ ವಿಭಾ ಮನೆ ಬಿಟ್ಟು ಬಂದು, ಮುಂದಿನ ಬದುಕಿಗೆ ಪ್ರಶ್ನೆಯಾಗಿದ್ದಳು. ಗೆಳೆಯರ ಸಹಾಯದಿಂದ ವಿಭಾಳನ್ನು ಪಿ.ಜಿ ಯಲ್ಲಿ ಬಿಟ್ಟು ಸ್ವತಃ ತಾನೇ ಅವಳನ್ನು ಓದಿಸಿದ ತೇಜು. ಒಂದು ವರ್ಷವಷ್ಟೇ ವ್ಯತ್ಯಾಸವಿದ್ದ ತೇಜು MBBS ಮುಗಿಸಿ, ಹಣದ ತೊಂದರೆಯಿ ಂದ ವಿದ್ಯಾಭ್ಯಾಸ ಮೊಟಕುಗೊಳಿಸಿ ದುಡಿಯಲು ಪ್ರಾರಂಭಿಸಿದ. ಕಷ್ಟ ಪಟ್ಟು ಹಗಲು ರಾತ್ರಿ ವೈದ್ಯಕೀಯ ಸೇವೆ ಮಾಡಿ, ತನ್ನ ದುಡಿಮೆಯಲ್ಲೇ ವಿಭಾಳನ್ನು ಓದಿಸಿದ. ಈ ಕಾರಣಕ್ಕಾಗಿಯೇ, ಕಾಲೇಜಲ್ಲಿ ಈ ಪ್ರೇಮಿಗಳಿಗೆ ಎಲ್ಲಿಲ್ಲದ ಗೌರವ, ಆದರ ಸಿಕ್ಕಿತ್ತು. ಕೊನೆಗೂ ವಿಭಾಳನ್ನು ಅವಳ ಆಸೆಯಂತೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಹೊರದೇಶಕ್ಕೆ ಕಳುಹಿಸಿಕೊಟ್ಟ, ಎಷ್ಟೇ ಖರ್ಚಾದರೂ ಭರಿಸಲು ಸಿದ್ಧವಾಗಿ, ಪರದೇಶಕ್ಕೆ ಕಳುಹಿಸಿಕೊಟ್ಟಿದ್ದ.
ಬದುಕಿಗೆ ಕಷ್ಟವಾದರೂ ತಂದೆ ತಾಯಿ ಇಲ್ಲದೆ ಅನಾಥಾಶ್ರಮದಲ್ಲಿದ್ದುಕೊಂಡೇ ಡಾಕ್ಟರ್ ಆಗಿದ್ದ ತೇಜು ಅಪ್ಪಟ ಪ್ರತಿಭಾವಂತ, ಆದರೆ ಬಡವ. ರೋಗಿಗಳ ಕೈ ಮುಟ್ಟಿ, ಮೃದು ಮಾತಾಡಿದರೆ ಸಾಕು; ಮುಕ್ಕಾಲು ರೋಗ ವಾಸಿಯಾಗುತ್ತಿದ್ದವು. ಅಷ್ಟೊಂದು ಸಂಯಮಿ, ಸಹೃದಯಿ, ಪರೋಪಕಾರಿ, ಮೃದು ಹೃದಯಿ. ಹೀಗೆ ತನ್ನ ಜಾಣ್ಮೆಯಿಂದ ಒಳ್ಳೆಯ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಕೈ ತುಂಬ ಸಂಬಳ ಬರುತ್ತಿತ್ತಾದರೂ, ಅದರಲ್ಲಿ ತಾನು ಹುಟ್ಟಿ ಬೆಳೆದ ಆಶ್ರಮಕ್ಕೆ ಒಂದು ಪಾಲು ವಿನಿಯೋಗಿಸುತ್ತಿದ್ದ. ಮಿಕ್ಕದ್ದನ್ನು ತನ್ನ ಮನದೊಡತಿ ಓದಿಗೆ ಮೀಸಲಿಟ್ಟಿದ್ದ. ತೇಜುವಿನ ಗೆಳೆಯರು, “ಮೊದಲು ಮದುವೆ ಆಗಪ್ಪ, ಆಮೇಲೆ ಓದಿಸುವಂತೆ” ಎಂದು ಎಷ್ಟು ಹೇಳಿದರೂ, “ಮದುವೆ ಆದರೆ ಸಂಸಾರ, ಮಕ್ಕಳೆಂದು ಓದಲು ಸಾಧ್ಯವಿಲ್ಲ, ಮೊದಲು ನನ್ನ ವಿಭಾ ಓದಿ ಬಂದುಬಿಡಲಿ. ಬಂದ ಕೂಡಲೇ ಮದುವೆ. ಹೃದಯ ತಜ್ಞೆ ನನ್ನ ಹೃದಯನಿವಾಸಿ ಅವಳು, ಎನ್ನುತ್ತಿದ್ದ. ಅವಳ ನೆನಪಲ್ಲೇ ವರುಷ ಉರುಳಿತು.
ವರುಷ ಕಳೆದಂತೆ ವಿಭಾಳು ಆ ಪರಿಸರಕ್ಕೆ ಹೊಂದಿಕೊ ಂಡಳು. ಹೊಸ ಜಾಗ, ಹೊಸ ಗೆಳೆಯ ಗೆಳತಿಯರ ಪರಿಚಯ. ಕಾಲೇಜು, ಪ್ರಾಕ್ಟಿಕಲ್ಸ್ ಹೀಗೆ ಬಿಜಿಯಾದಳು. ಗೆಳೆಯ ಗೆಳತಿಯರೊಂದಿಗಿನ ಮಾತುಕತೆ, ಅವರ ಜೊತೆಗಿನ ಆರೋಗ್ಯಕರ ಚರ್ಚೆ, ಓದು ಡಿಸ್ಕಶನ್ ಇದರಿಂದ ಕ್ರಮೇಣ ದುಃಖ ಕಡಿಮೆ ಆಗಿತ್ತು. ನಂತರ ಕ್ರಮೇಣ ದಿನಗಳುರುಳಿದಂತೆ ಓದುವುದರಲ್ಲಿ ಬಿಜಿಯಾಗಿ ತೇಜುವಿನ ಪ್ರೇಮದ ಸವಿನೆನಪು ಕಡಿಮೆ ಆಗ ತೊಡಗಿತು. ಪ್ರತೀ ದಿನ ತೇಜು ಎಷ್ಟೇ ಮೆಸೇಜು ಕಾಲ್ ಮಾಡಿದರೂ ಸ್ಪಂದಿಸದೆ ಸಮಯ ಸಿಕ್ಕಾಗ ಮಾತ್ರ ಒಂದೊ ಂದು ಮೆಸೇಜು ಫೋನ್ ಮಾಡಿ ಮಾತಾಡಿ ಸುಮ್ಮನಾಗತೊಡಗಿದಳು.
ಪ್ರತೀ ದಿನ ನೂರಾರು ಮೆಸೇಜ್ ಮಾಡುತ್ತಿದ್ದವಳು. ಹತ್ತು ಮೆಸೇಜ್ ಮಾಡಿದರೆ ಬಹಳವಾಗಿತ್ತು. ಬೆಳಿಗ್ಗೆ ಮೆಸೇಜ್ ಮಾಡಿದರೆ ಮಧ್ಯಾಹ್ನ, ಮಧ್ಯಾಹ್ನ ಮಾಡಿದರೆ ರಾತ್ರಿ ರಿಪ್ಲೆ ಮಾಡುತ್ತಿದ್ದಳು. ಬರುಬರುತ್ತ ಅದೂ ಕಡಿಮೆ ಆಗತೊಡಗಿತು.
ದಿನಕ್ಕೆ ಹತ್ತಾರು ಬಾರಿ ಕಾಲ್ ಮಾಡುತ್ತಿದ್ದ ವಿಭಾ ಕೇವಲ ಒಂದು ಎರಡು ಬಾರಿ ಮಾತ್ರ ಮಾಡುತ್ತಿದ್ದಳು. ಬರುಬರುತ್ತ ವಾರಕ್ಕೆ ಒಂದು ಅಥವಾ ಎರೆಡು ಬಾರಿ ಮಾತ್ರ ಫೋನ್ ಮಾಡತೊಡಗಿದಳು. ಗಂಟೆಗಟ್ಟಲೇ ಮಾತಾಡುತ್ತಿದ್ದವಳು ನಿಮಿಷಕ್ಕೆ ಬಂದಳು. ಕೇಳಿದರೆ ಓದಬೇಕು ಎನ್ನುವ ಉತ್ತರ. ತೇಜುವೇ ಕಾಲ್ ಮಾಡಿದರೂ ಎತ್ತುತ್ತಿರಲಿಲ್ಲ. ನಂತರ ಕೇಳಿದರೆ ಓದಿನ ನೆಪ.
ಈ ಕಾರಣಕ್ಕೆ ತೇಜುವಿನ ಮನದಲ್ಲಿ ತಳಮಳ, ವೇದನೆ ದುಗುಡ. ತನ್ನ ಕೆಲಸದಲ್ಲಿ ಚಿತ್ತ ಕೇಂದ್ರೀಕರಿಸಲು ಸಾಧ್ಯವಾಗದೆ ಒದ್ದಾಡ ತೊಡಗಿದ. ವಿಭಾಳ ಫೋನ್ ಬಂದ ಕೂಡಲೇ ಉತ್ಸುಕನಾಗುತ್ತಿದ್ದ. ಅವಳ ಮಧುರ ಸವಿಜೇನಿನಂತಹ ಮಾತುಗಳಲ್ಲಿ ಕಳೆದು ಹೋಗುತ್ತಿದ್ದ. ಎರಡೂ ವರ್ಷದ ಫೀಸ್, ಹಾಸ್ಟೆಲ್ ಖರ್ಚು, ವಿಭಾಳ ವೈಯಕ್ತಿಕ ಖರ್ಚು ಎಲ್ಲವನ್ನೂ ತಾನೇ ದುಡಿದು ಕಟ್ಟಿದ್ದ. ವಿಭಾಳೂ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದಳು. ಕಾಲೇಜಿಗೇ ನಂಬರ್ ಒನ್. ಇದನ್ನು ಕಂಡ ಅನೇಕ ಗೆಳೆಯ ಗೆಳತಿಯರು ಹೆಮ್ಮೆ ಪಟ್ಟರೆ, ಕೆಲವರು ಹೊಟ್ಟೆ ಉರಿದುಕೊಳ್ಳುತ್ತಿದ್ದರು. ಹೆಮ್ಮೆ ಪಟ್ಟವರಲ್ಲಿ ಮೊದಲಿಗನಾದವನೇ ಹೇಮಂತ್. ಪ್ರತಿಭಾವಂತ, ರೂಪವಂತ, ಗುಣವಂತ, ಐಶ್ವರ್ಯವಂತ ಕನ್ನಡಿಗನೂ ಸಹ. ಸಮಯ ಸಿಕ್ಕಾಗಲೆಲ್ಲಾ ವಿಭಾಳನ್ನು ಹೊಗಳುತ್ತ, ಅವಳನ್ನು ಮಾತಿಗೆ ಎಳೆಯುತ್ತಿದ್ದ. ಮೊದಮೊದಲು ಎಷ್ಟು ಬೇಕೋ ಅಷ್ಟೇ ಮಾತಾಡಿ ಪೂರ್ಣ ವಿರಾಮವಿಡುತ್ತಿದ್ದಳು ವಿಭಾ. ಆದರೆ, ಹೇಮಂತ್ ಓದಿನ ವಿಷಯದ ಕುರಿತಾಗಿ ಚರ್ಚಿಸಲು ಫೋನ್ ಮಾಡತೊಡಗಿದ. ಗ್ರಂಥಾಲಯದಲ್ಲೂ ಓದಲು ಕುಳಿತ ವಿಭಾಳ ಬಳಿ ಬಂದು ಮಾತನಾಡಿಸುತ್ತಿದ್ದ. ಕ್ರಮೇಣ ಆಪ್ತತೆ ಬೆಳೆಯಿತು. ಓದಿನ ಜೊತೆ ನಗಾಡುವುದು, ವೈಯಕ್ತಿಕ ವಿಷಯಗಳನ್ನ ಹಂಚಿಕೊಳ್ಳುವುದಾಯಿತು. ರಜೆಯ ಸಂದರ್ಭದಲ್ಲಿ ಕಾಫಿ ಡೇ ಪ್ರಾರಂಭವಾದವು. ಕನ್ನಡದವರೇ ಇಲ್ಲದ ಪರಿಸರದಲ್ಲಿ ಸಹಜವಾಗಿಯೇ ಅವರಿಬ್ಬರ ನಡುವೆ ಸ್ನೇಹ ಬೆಳೆಯಿತು. ಹೆಚ್ಚು ಹೆಚ್ಚು ಆತ್ಮೀಯತೆ ಸಲುಗೆಯೂ ಬೆಳೆಯಿತು.
ಮುಂದುವರೆಯುವುದು….
-ವರದೇಂದ್ರ ಕೆ ಮಸ್ಕಿ