ನಿರೀಕ್ಷೆ
ಸುಂದರ ವದನದಲ್ಲಿ ನಿರೀಕ್ಷೆಯ ಗೆರೆ
ಫ಼ಲಿಸುವವರೆಗೂ ಚಿಂತೆಯ ನೆರೆ
ಸ್ವಾರ್ಥವೇ ಪರಾರ್ಥವೇ; ಜ್ಞಾನವೇ ಸತ್ಯವೇ
ನೀತಿಯ ಬೋಧೆಯ ಶಾಂತಿ ಸುಭಿಕ್ಷಕ್ಕೆ
ಕಾದಿರುವೆ ನೀ..ಕಾಯುವ ಶಕ್ತಿಯಿರುವವರೆಗೆ!
ದ್ವೇಷ ಅಹಂಕಾರಗಳ ಅಂಧಕಾರದ ಜಗದೊಳಗಿನ
ಸ್ವಾರ್ಥನಿವಾರಣೆಗೆ, ಪುನರ್ ಸೃಷ್ಟಿಗೆ
ಭ್ರಷ್ಟತೆಯ ನೀಗಿ ಸಮಾನತೆಯ ಸಮಷ್ಟಿಗೆ
ಮಿಥ್ಯೆಯ ಮೀರಿ ಸತ್ಯವೇ ನಿತ್ಯವೆಂದು ಸಾರುವ
ಹೊಸ ಸೂರ್ಯನ ಉದಯಕ್ಕೆ
ಕಾದಿರುವೆ ನೀ ಕಾಯುವ ಶಕ್ತಿಯಿರುವವರೆಗೆ!
ಬಾಹ್ಯದಲ್ಲಿ ಆಕರ್ಷಕವಿರಬಹುದೀ ಮೊಗ
ಆದರೆ ಮಡುಗಟ್ಟಿದೆ ಕಂಗಳಲ್ಲಿ ಹತಾಶೆಯ ದುಃಖ
ಅದುರುತ್ತಿರುವ ಅಧರಗಳಲಿ ತುಡಿಯುತ್ತಿರುವ
ಹೇಳಿಯೂ ಹೇಳೆನೆಂಬ ಮನದೀ
ನೋವ ಕಿತ್ತೊಗೆಯುವ ನೈಜ ಮಹಾಶಕ್ತಿಗಾಗಿ
ಕಾದಿದ್ದೀಯ ಯಾರಿಗೋ.. ಕಾಯುವ ಶಕ್ತಿಯಿರುವವರೆಗೆ!
-ಡಾ.ಗಣೇಶ ಹೆಗಡೆ ನೀಲೇಸರ

ಕರುನಾಡು ಕನ್ನಡ………..
ಕನ್ನಡ ಕನ್ನಡ ಕರುನಾಡ ಕನ್ನಡ
ಕನ್ನಡ ಕನ್ನಡ ಆನಂದ ಕನ್ನಡ
ನೋಡಲು ಬಲುಸೊಬಗು ನಮ್ಮೀ ಕರುನಾಡ
ಕೇಳ – ನುಡಿಯಲು ಬಲುಹಿತವು ನಮ್ಮೀ ಕನ್ನಡ.
ಸವಿದಷ್ಟು ಹಿತನೋಡು ಕನ್ನಡದ ನುಡಿಯು
ತುಂಬಿಹುದು ಅದರಲ್ಲಿ ಜೇನಿನ ಸುಧೆಯು
ಕರುನಾಡ ಮಡಿಲಲ್ಲಿ ಹಸಿರಾದ ಹಾಸಿಗೆಯು
ಕಾಣುತಿದೆ ಅಲ್ಲಲ್ಲಿ ಸೊಗಸಾದ ಪರ್ವತೆಯು.
ಹೆಚ್ಚಿಹುದು ಕರುನಾಡ ಕನ್ನಡದ ಅಂದ
ವ್ಯಾಸ – ಸರ್ವಜ್ಞರ ಪದನುಡಿಗಳಿಂದ
ದಾಸ- ಶರಣರ ಗೀತೆಗಳೇ ಪರಮಾನಂದ
ರನ್ನ – ಪಂಪರ ಚಿನ್ನದ ನುಡಿಗಳೇ ಚಂದ.
ಕನ್ನಡದ ಮಣ್ಣು ಕರುನಾಡ ಹೊನ್ನು
ಕಾವೇರಿಯ ಜಲ ಹರಿತಿಹುದು ಚಿನ್ನು
ಮರೆಯದಿರು ನೀನೆಂದು ಶಿಲ್ಪ – ಕಲೆಗಳ ನೆಲೆವೀಡನ್ನು
ತೊರೆಯದಿರು ಕರುನಾಡ ಸುಸಂಸ್ಕೃತ ಚರಿತೆಯನ್ನು.
ನಡೆದಿಹುದು ಸದಾ ಕವಿ -ಕೋಗಿಲೆಗಳ ಸನ್ಮಾನ
ಜಿನುಗುತಿದೆ ಹಕ್ಕಿಗಳ ಕಲರವದ ಆಹ್ವಾನ
ತುಂಬಿರಲಿ ಎದೆಯಲ್ಲಿ ಸಿರಿಗನ್ನಡದ ಅಭಿಮಾನ
ಮೊಳಗಿರಲಿ ಎಂದೆಂದು ಕನ್ನಡದ ಅಭಿಯಾನ.
ಸಿರಗನ್ನಡಂ ಗೆಲ್ಗೆ, ಸಿರಗನ್ನಡಂ ಬಾಳ್ಗೆ, ಸಿರಗನ್ನಡಂ ಆಳ್ಗೆ.
ಡಾ. ವೀಣಾಕುಮಾರಿ ಎ. ಎನ್.
ಮಣ್ಣ ಮುಚ್ಚಿದ ಬೇರು
ಮುನಿದ ಹಿರಣ್ಯಕಶ್ಯಪ ಒಲಿಸಿಕೊಂಡ ಪ್ರಹ್ಲಾದ
ಟಿಕೇಟಿಲ್ಲದೇ , ಕ್ಯೂ ಇಲ್ಲದೇ ದೇವ ದರುಶನ
ನಂಬದ ಕಾಠಿಣ್ಯ ನಂಬಿ ನಡೆವ ಪ್ರೀತಿ
ಚಿತ್ತಭಿತ್ತಿಯ ಚಿತ್ರ ಅಚ್ಚೊತ್ತ ಕ್ಷಣ ಧನ್ಯ
ಎಡವಿದ ಕಾಲ ಬೆರಳೇ ಮತ್ತೆ ಮತ್ತೆ ಕಲ್ಲಿಗೆ ತಾಕಿದಂತೆ ಸಂಕಟ
ಹೆಗಲೊತ್ತಿದ ಕೈ ಭಾರ ಇಳಿಸಲೊಲ್ಲದ ಕೊರಕಲು ಹಾದಿ
ತಿರುವಿನ ನಂತರ ದೃಷ್ಟಿ ದಾರಿ ಕಂಡೀತೇ ದೇವನೆಂದರೆ ಕಂಕುಳ ಕೂಸು
ಹಿಡಿದಷ್ಟು ಹಿಡಿತ ಬಿಟ್ಟರೆ ಸಲೀಸಾ..
ಬಿದ್ದ ಕಲ್ಲ ನಿಲ್ಲಿಸಿ ಕೆತ್ತಿದ್ದು ನೀನೆ ಮುಗಿದು ನಿಂತು
ಬಾಗಿ ಬೇಕಾದ್ದು ಬೇಡುವವನೂ ನೀನೆ ಕೆತ್ತುವಾಗಿನ ಶ್ರದ್ಧೆ
ಬಾಗುವಾಗಿರದಿರೆ ಅವನೂ ಕೂಡ ಕೈ ಕಟ್ಟಿ ನಿಂತ
ಒಳ ಹೊರಗೊಂದೆ ಆದಾಗ ತಾನೆ ಪಾತ್ರ- ಬೆಲೆ
ದೇವರೆಂದರೇನು ತರೇವಾರಿ ಹೆಸರು, ಕಟ್ಟಡ, ಪೂಜೆ
ನಮಾಜು, ಸಿಲುಬೆಯ ಒಳ ಧ್ಯಾನ ;
ಅಪ್ಪ ಅಮ್ಮ ಅಣ್ಣ ತಮ್ಮ ತಂಗಿ ಅಜ್ಜಿಯ ಒಟ್ಟು
ಮೊತ್ತ ಮನೆ ಮತ್ತು ಒಲವ ಧಾರಾನಗರಿ
ಒಂದಾಗಿ ಬಾಳುವ ನಾಳೆಗಳ ಅಡಿಪಾಯ ಕಲ್ಲು
ಮುಟ್ಟಿದ್ದು ಹೌದಾ ಮುಟ್ಟಿಸಿಕೊಳ್ಳದ ಬದುಕಾ
ಎಡಬಲ ಕಾಣದ ಹೂ ಬಳ್ಳಿ ಏರಿದ್ದಷ್ಟೇ ಸಾದನೆ ಮಣ್ಣ ಮುಚ್ಚಿದ ಬೇರು
ಅಮ್ಮನ ಕಣ್ಣೀರಂತೆ ಯಾರಿಗೂ ಕಾಣದು ಬಿಡು…ನಡೆ ಸಿಕ್ಕಿದ್ದು ನಿನದು
ನುಣಚಿದ್ದಕ್ಕೆ ಚಿಂತೆ ಕಾಮನಬಿಲ್ಲಷ್ಟೆ!
ದೇವರಿಗೂ ಈಗ ಪುರುಸೊತ್ತಿಲ್ಲ
ನಾವು ಮನುಷ್ಯರಾಗೋದಷ್ಟೇ ತುರ್ತು…!
-ಸಂತೆಬೆನ್ನೂರು ಫೈಜ್ನಟ್ರಾಜ್
ಯಂತ್ರದ ಬಾನಾಡಿ ಗೂಡು ಸೇರಲಿಲ್ಲ
ಹುಟ್ಟಿದ ಭೂಲೋಕವನು ಬಿಟ್ಟು
ಅದೆಷ್ಟೊ ಕನಸು ಕಟ್ಟಿ ಹಾರಿದ್ದರು
ಧರೆಯಿಂದ ಗಗನದೆಡೆಗೆ ಚಿಮ್ಮುತ ಹಾರಿದ ಪಯಣವು
ಬೆಂಕಿಯ ಕಡಲೊಳಗೆ ಸುಟ್ಟು ಭಸ್ಮವಾಯಿತು………
ನಗುನಗುತ ಬಾನಾಡಿಗಳಂತೆ ತೇಲಿ ಹೊರಟವರು
ಗೂಡು ಸೇರುವ ಮುನ್ನವೇ ರೆಕ್ಕೆ ಮುರಿದೋಯಿತು
ದುಡಿವ ಹೊಣೆಗಾರಿಕೆಯಿಂದ ಮೇಲೇರಿದವರು
ಲೋಹದ ಬಾನಾಡಿಯ ಬೆಂಕಿಯ ಜ್ವಾಲೆಯ ನುಂಗಿದರು…….
ನೂರಾರು ಜನರ ಹೊತ್ತು ಹಾರಿದ ವಿಮಾನ
ಕಣ್ತೆರೆಯುವುದರೊಳಗೆ ಜೀವಂತ ಮಾರಣಹೋಮ
ಗಗನಸಖಿಯರ ಕನಸಿನ ಹುದ್ದೆಯ ವಿಮಾನಯಾನ
ಮರಳಿ ಬಾರದ ಲೋಕಕೆ ಬೆಳೆಸಿತು ಪ್ರಯಾಣ……
ಕುಟುಂಬದ ಏನೆಲ್ಲಾ ಜವಾಬ್ದಾರಿಗಳು
ಏನೆಲ್ಲಾ ಸಾಧಿಸಲು ಸಾಗಿದ ಜೀವಗಳು
ಬಂಧು ಬಳಗ ಹೆತ್ತವರ ಸೇರುವ ಮುನ್ನ
ಒಮ್ಮೆಲೆ ಎಲ್ಲರೂ ಅಗ್ನಿಯಲಿ ಉರಿದೋದವು…….
ವೈದ್ಯರಾಗುವ ಕನಸುಗಳು ನುಚ್ಚುನೂರಾದವು
ಪೈಲಟ್ ಮಾಡಿದ ಸಾಹಸವೆಲ್ಲ ವಿಫಲವಾದವು
ಒಂದಲ್ಲ ಎರಡಲ್ಲ ಅಸುನೀಗಿದ್ದು ಸಮೀಪ ಮುನ್ನೂರು
ನಂಬಿ ಬಂದವರ ಜೀವ ಉಳಿಸಲಾಗಲಿಲ್ಲ
ವಿಧಿಯಾಟಕೆ ಹೊಣೆ ಯಾರು?
ಈ ನೋವು ಕಾಡುವುದು ಕೊನೆವರೆಗೆ
ದಯೆಯೆಂಬುದಿಲ್ಲ ಕ್ರೂರ ಸಾವಿಗೆ
ಸಾವನ್ನು ಗೆಲ್ಲಲಾಗಲಿಲ್ಲ ಅಮೂಲ್ಯ ಜೀವಗಳಿಗೆ
ಆಗಸಪಯಣ ಹೊರಟವರು ಜಾರಿದರು ಚಿರನಿದ್ರೆಗೆ
ಜನರ ಹೊತ್ತು ಹಾರಿದ ಯಂತ್ರದ ಬಾನಾಡಿಯ
ರೆಕ್ಕೆ ಮುರಿದು ಗೂಡು ಸೇರಲಿಲ್ಲ…..
–ಚಲುವೇಗೌಡ ಡಿ ಎಸ್
ನಿಸರ್ಗದ ಸಂಯಮದ ಕಟ್ಟೆಯೊಡೆದಾಗ
ನೆರೆಯುಕ್ಕುತಿದೆ ನಗರದೊಳಗೆ ಯಾರು ಕಾರಣ?
ಧರೆ ಜರಿಯುತಿದೆ ಅಡಿಗಡಿಗೆ, ಏನು ಕಾರಣ? |
ಕಾಡು ಕಣ್ಮರೆಯಾಗಿ ಕಟ್ಟಡ ನಿಂತಿರುವಾಗ
ಗುಡ್ಡ ಕಡಿದು ರಸ್ತೆ ಹಾದು ಹೋಗಿರುವಾಗ ||
ನಿಸರ್ಗವಾದರೂ ಎಲ್ಲಿಯವರೆಗೆ ತಡೆದೀತು
ಒಳಗೇ ಅದುಮಿಟ್ಟುಕೊಂಡ ಒತ್ತಡವ |
ಸ್ಪೋಟವಾದರೇನೆ ಸಮಾಧಾನ ಅದಕ್ಕೂ
ಹೊರಗೆಡವಲೆಬೇಕಲ್ಲ ಕಡು ಮೌನವ ||
ಸಾಮಾನ್ಯ ಜ್ಞಾನದ ಸುಳಿವೇ ಇಲ್ಲದ ಕಾಮಗಾರಿ,
ಅವೈಜ್ಞಾನಿಕ ಸೇತುವೆಯ ವಿನ್ಯಾಸದ ರೂವಾರಿ |
ಹೀಗಿದ್ದರೂ ವ್ಯವಸ್ಥೆಯ ಒಳ ಹೊರಗು
ಕೇಳುವರಿಲ್ಲವೇ ಯಾರೂ ನಿಸರ್ಗದ ಕೂಗು ||
ನಿಸರ್ಗದ ಒಡಲಿನಲ್ಲಿ ನಾವಿರಬೇಕೆಂದರೆ
ಕಿವಿಗೊಡಲೇಬೇಕು ಅದರ ಕರೆಗೆ |
ಇಲ್ಲ! ಆಗದು ಎಂದಾದರೆ ಚಿಂತೆಯಿಲ್ಲ,
ನಿಸರ್ಗ ಸೆಳೆಯುವುದು ಎಲ್ಲವನ್ನೂ ತನ್ನೊಳಗೆ ||
-ಅಜಯ್ ಅಂಗಡಿ
ಆ ಪುಸ್ತಕ
ಅಲ್ಲಿ
ಸುಟ್ಟು ಕರಕಲಾಗಿ
ತುಕುಡ ತುಕುಡವಾಗಿ
ಬಿದ್ದ ಹೆಣಗಳ
ರಕ್ತ ಮಾಂಸಗಳ
ನಡುವೆ
ಬಲು ಸುರಕ್ಷತೆಯಿಂದ
ತಲೆಯೆತ್ತಿ ನಿಂತ
‘ಆ’ ಪುಸ್ತಕದ ಅದಮ್ಯ ಶಕ್ತಿಗಿಂತ
ಇಲ್ಲಿ
ಬೆಂಕಿ ಬಿದ್ದರೆ
ಪುಸ್ತಕವೂ
ಮಸ್ತಕವೂ
ಸಮಸ್ತವೂ
ಸರ್ವ ನಾಶವೆಂಬ
ಸತ್ಯ ಅರಿತು
ಪ್ರಾಣ ಪಣಕ್ಕಿಟ್ಟು
ಪುಸ್ತಕ ರಕ್ಷಿಸಿದ
ಪುಟ್ಟಿಯ
ಧೈರ್ಯ,
ಶಕ್ತಿ ಅಪೂರ್ವ ಅಂತಿಮ ಅದಮ್ಯ!
–ಲಿಂಗರಾಜು ಕೆ ಮಧುಗಿರಿ
ಅವ್ವ
ಪರಿಚಿತನೋ ಅಪರಿಚಿತನೋ
ಕಟ್ಟುವ ಕರಿಮಣಿಗೆ ಕೊರಳಾಗಿ
ತನ್ನದಲ್ಲದ,ತನ್ನವರೂ ಇರದ ಮನೆಗೆ
ಹೆಜ್ಜೆಯನಿಟ್ಟು ಬಂದಾಕಿಗೆ…..
ಹುಡುಗ ಅಡಕಿ ಚೂರು ತಿನ್ನೋದಿಲ್ಲ
ಅನ್ನೋ ಮಾತಿನ ಮೇಲೆ ಬರವಸೆ ಹೊತ್ತು
ಹೆಂಡತಿಯಾಗಿ,ಸೊಸೆಯಾಗಿ
ನಡಿಯಲು ಬಂದಾಕೆಗೆ…..
ತುಂಬಿದ ಚರಿಗಿ ಎತ್ತಿ ಕೊಡಲಾರದವಳು
ಸಂಸಾರದ ನೊಗ ಹೊತ್ತು,
ತಲೆ ಮೇಲೆ ಭಾರ ಹೊತ್ತು,
ಬಿಸಿಲು ಮಳೆಗೆ ಮಾಗಿದಾಕಿಗೆ ..
ತನ್ನ ಕೈಯಲ್ಲಿಲ್ಲದ ಬಸಿರಿಗೆ
ಕೊಂಕು ಮಾತುಗಳ ಸಹಿಸಿ
ಕಂಡದೇವರಿಗೆ ಹರಕೆ ಹೊತ್ತು,
ಉಪವಾಸ ಮಾಡಿ ನಾಲ್ಕು
ಮಕ್ಕಳ ಹೆತ್ತಾಕೆಗೆ…
ಉಟ್ಟ ಸೀರೆಗೆ ತೇಪೆ ಹಚ್ಚಿ
ಹಸಿದ ಹೊಟ್ಟೆಗೂ ತಣ್ಣೀರ ಕುಡಿದು
ದುಡಿದ ದುಡ್ಡಲ್ಲಿ ಚೌಕಾಸಿ ಮಾಡಿ ಅಂಗಿ ಚಡ್ಡಿ,
ಲಂಗಾ ಕುಪ್ಪಸ ಕೊಂಡು ತಂದು
ಮಕ್ಕಳಿಗೆ ಹಾಕಿ ಕುಷಿಯ ಕಂಡಾಕೆಗೆ.,,,
ನನ್ನಂಗ ಮಕ್ಕಳಾಗಬಾರದೆಂದು
ತಾನು ಕಲಿಯದಿದ್ದರೂ ಮಕ್ಕಳಿಗೆ ಕಲಿಸಿ
ಅವರಪಾಡಿಗೆ ಅವರು ಚಂದಿರ್ಲಿ
ಅಷ್ಟ ಸಾಕು ನನಗೆ ಎಂದು
ಎದೆ ಉಬ್ಬಿಸಿ ಹೇಳಿದಾಕೆಗೆ…
ಸಾಲ ಶೂಲ ಮಾಡಿ ಎದೆಯುದ್ದ ಬೆಳೆದ ಮಕ್ಕಳಿಗೆ
ಹುಡುಕಿ ಹುಡುಕಿ ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು
ತಂದು ಊರಿಗೆ ಊಟ ಹಾಕಿ ಮದುವೆ ಮಾಡಿ
ಸಾಲ ತೀರಿಸಲು ಜೀತದಾಳು ಆದಾಕಿಗೆ…
ಗಾದೆಯಂತೆ ಮಕ್ಕಳು ಮದುವೆಯಾದ ಮೇಲೆ
ತಮ್ಮ ತಮ್ಮ ಡಬ್ಬಿಗಳೊಂದಿಗೆ
ಮಾಡುವ ಕೆಲಸಗಳ ಊರುಗಳಲ್ಲಿ ಹಾಯಾಗಿದ್ದು,
ಹುಟ್ಟಿದೂರು, ಹೆತ್ತವರ ಮರೆತವರ
ಬರುವಿಕೆಗೆ ದಾರಿ ಕಾಯುವಾಕೆಗೆ….
ವರ್ಷಕ್ಕೊಮ್ಮೆ ಬರುವ ಮಕ್ಕಳು,
ಮೊಮ್ಮಕ್ಕಳ ಇಳಿಸದೇ ಕೊಂಕುಳಲ್ಲಿ
ಎತ್ತಿಕೊಂಡು ಊರು ಸುತ್ತಿ ಇವ ನನ್ನ ಮೊಮ್ಮಗ,
ಮೊಮ್ಮಗಳು ಎಂದು ಊರಿಗೆಲ್ಲ ಸುದ್ದಿ ಮಾಡಿದಾಕೆಗೆ……
ವಯಸು ಮೀರಿ,ಬೆನ್ನು ಬಾಗಿ ಇಳಿವಯಸಿನಲಿ
ಒಂಟಿಯಾಗಿ ಉಸಿರು ನಿಲ್ಲೋವರೆಗೂ ಮಕ್ಕಳ,
ಮೊಮ್ಮಕ್ಕಳ ಪ್ರೀತಿಗೆ ಹಾತೊರೆಯುವಾಕೆಗೆ…
ಸಿಟಿ ಸೇರಿದ ಮಕ್ಕಳೆಲ್ಲ ತರಹೇವಾರಿ ಮೊಬೈಲುಗಳಲ್ಲಿ
ಎಂದೋ ತೆಗೆದ ಅವ್ವನ ಫೋಟೋವನ್ನು ಸ್ಟೆಟಸ್ಸಿಗಾಕಿ
ಹ್ಯಾಪಿ ಮದರ್ಸ್ ಡೇ ಡಿಯರ್ ಅವ್ವಾ,
ಅಮ್ಮ ಅಂತ ಇನ್ನೊಬ್ಬರಿಗೆ ತೋರಿಸಲು
ಹಾಕಿದ್ದನ್ನು ನೋಡಲಾರದಕಿಗೆ…
ಇರುತನಕ ಮಕ್ಕಳ ನೆನೆದು
ಉಸಿರು ನಿಂತಾಗ ನಾಲ್ಕು ಹಿಡಿ ಮಣ್ಣು ಹಾಕಲೂ
ಬಾರದ ಮಕ್ಕಳಿಗೆ ಜನ್ಮ ನೀಡಿದಾಕೆಗೆ…..
ಕೇಳಿ ಹೇಳುವೆ
ಇಂದು ಅವ್ವಂಗೆ ಬಂದ ಸ್ಥಿತಿ ನಾಳೆ ನಮಗೂ ಪಕ್ಕಾ..,
ಯಾಕಂದ್ರೆ ನಾವೂ ಅವ್ವ,ಅಪ್ಪ ಆಗವ್ರೆ….
ನಮ್ಮ ಮಕ್ಕಳು ನಮಗೆ ಮಾಡಿದಾಗ,
ನಾವು ಮಾಡಿದ್ದ ನೆನೆದು ತಪ್ಪಾಯ್ತು
ಅಂತ ಕೊರಗುವ ಮೊದಲು
ಹೆತ್ತವರ ಅಪ್ಪಿ, ಹೊಟ್ಟೆಯಲಿ ಹುಟ್ಟಿದ್ದಕ್ಕಾದರೂ ಒಪ್ಪಿ
ಇದ್ದಾಗಲೇ ಋಣ ತೀರಿಸಿ ಬಿಡಿ….ಇರೋತನ ಅವ್ವ
ಅನ್ನುವ ಪದವನಷ್ಟೇ ಕರೆಯುತಿರಿ
ಹೋದಮೇಲೆ ಕರೆದರೂ ಬಾರದವರ
ಇದ್ದಾಗಲೇ ಅವ್ವ ಅಪ್ಪ ಅಂತ ಕರೆದು ಬಿಡಿ..
ಮಕ್ಕಳಾಗೆ ಇದ್ದುಬಿಡು ಮಕ್ಕಳಂತೆ ನೋಡಿಬಿಡಿ…
–ವೀರೇಶ್ ತೆರದಾಳ